ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸಾತ್ವಿಕರಿಗೆ ಸಂಕಷ್ಟ ಬಂದಾಗ ಮನಸ್ಸಿಗೆ ವ್ಯಥೆಯಾಗ್ತದೆ. ಸಂಕಷ್ಟಗಳು ತಾತ್ಕಾಲಿಕವಾಗಿರಬಹುದು. ಮುಂದೆ ಒಳ್ಳೆಯದಾಗ್ತದೆ ಅಂತ ಗೊತ್ತಿರಬಹುದು. ಫಲಿತಾಂಶ ಗೊತ್ತಿದ್ದರೂ ಕೂಡ ಒಮ್ಮೆ ವ್ಯಥೆಯಾಗುವುದು ಸುಳ್ಳಲ್ಲ. ಸುಂದರಕಾಂಡದ ಈ ಘಟ್ಟದಲ್ಲಿ ಅಂತಹ ವ್ಯಥೆ, ಸಾತ್ವಿಕ ವ್ಯಥೆ ಗೊತ್ತಾಗ್ತದೆ ನಮಗೆ. ಯಾರಿಗೆ ಬಂತು ಕಷ್ಟ ಅಂದ್ರೆ ಈರ್ವರು ರಾಮನ ಅತ್ಯಂತ ನಿಕಟವರ್ತಿಗಳು. ಒಂದು ಸೀತೆ. ಇನ್ನೊಂದು ಹನುಮಂತ. ಸತಿ ಸೀತೆ. ಸೇವಕ ಹನುಮಂತ. ಇವರೀರ್ವರಿಗೆ ಬೇರೆ ಬೇರೆ ರೀತಿಯ ಕಷ್ಟಗಳು ಒಟ್ಟಿಗೆ ಬಂದಿದಾವೆ. ಒಂದಕ್ಕೊಂದು ಸಂಬಂಧ ಪಟ್ಟಿರತಕ್ಕಂಥದ್ದು. ಹನುಮನಿಗೆ ಶರೀರಕ್ಕೆ ಕಷ್ಟ ಬಂದಿದೆ. ದೇಹದ ಭಾಗವೊಂದನ್ನು ಸುಡುವಂಥದ್ದು. ಸುಡುವಾಗಲೇ ಊರೆಲ್ಲ ಮೆರವಣಿಗೆ ಮಾಡುವಂಥದ್ದು. ಈ ಸುದ್ದಿ ತಿಳಿದರೆ ಸೀತೆಯ ಮನಸ್ಸಿಗೇನಾಗಬಹುದು? ಸೀತೆಯ ದೇಹಕ್ಕೆ ಕಷ್ಟವೇನಿಲ್ಲ. ಆದರೆ ಆಕೆಯ ಮನಸ್ಸಿಗೆ ಎಷ್ಟು ನೋವಾಗಬಹುದು ಅನ್ನೋದನ್ನ ಊಹೆ ಮಾಡಿಕೊಳ್ಳಬೇಕು.

ರಾಕ್ಷಸರು ಹನುಮಂತನನ್ನು ಮೆರವಣಿಗೆಯಲ್ಲಿ ಒಯ್ತಾ ಇದ್ದಾರೆ ಲಂಕೆಯಲ್ಲಿ. ಹನುಮಂತ ತನ್ನೊಳಗೆ ಏನಿದೆ ಅನ್ನುವುದನ್ನ ತೋರ್ಪಡಿಸ್ತಾ ಇಲ್ಲ. ಗೂಢವಾಗಿ ತನ್ನೊಳಗಿಟ್ಗೊಂಡಿದಾನೆ. ತನ್ನ ಶಕ್ತಿ ಏನು? ಮುಂದೇನು ಮಾಡಬಹುದು ಎನ್ನುವುದನ್ನು ಈಗಲೇ ವ್ಯಕ್ತಪಡಿಸ್ತಾ ಇಲ್ಲ. ಗಮನ ಬೇರೆ ಕಡೆ ಇದೆ. ಹಗಲಿನ ಬೆಳಕಿನಲ್ಲಿ ಲಂಕೆಯ ರಚನೆಯನ್ನು ಗಮನಿಸಬೇಕಾಗಿದೆ. ಹಾಗಾಗಿ ಸಂವೃತಾಕಾರನಾಗಿದಾನೆ. ಸತ್ವವಂತನಾದ ಆದರೆ ಸಂವೃತಾಕಾರನಾದ ಮಹಾಕಪಿಯನ್ನು ಆ ರಾಕ್ಷಸರು ಬಹಳ ಸಂತೋಷದಿಂದ ಮೆರವಣಿಗೆ ಮಾಡ್ತಾ ಇದಾರೆ. ರಾವಣನಿಗೆ ಜಯಜಯಕಾರ, ಹನುಮಂತನನ್ನು ಅವಮಾನಿಸುವ ಘೋಷಣೆಗಳೂ ಇದ್ದವಂತೆ. ಅವನಿಂದ ಲಂಕೆಗೇನು ತೊಂದರೆಯಾಗಿದೆ ಅನ್ನೋದನ್ನೂ ಘೋಷಣೆ ಮಾಡ್ತಿದಾರೆ. ಹೀಗೆ ಕ್ರೂರಕರ್ಮರಾದ ರಾಕ್ಷಸರು ಹನುಮಂತನ ಮೆರವಣಿಗೆಯನ್ನು ಮಾಡ್ತಾ ಇದಾರೆ. ಹಿಂದೆ ಮುಂದೆ ರಾಕ್ಷಸರು. ಭಯಂಕರವಾದ ವಾತಾವರಣ. ಆಕಡೆ ಈಕಡೆ ಅಪಹಾಸ್ಯ ಮಾಡುವವರು. ಅದರಲ್ಲಿ ಒಂದು ವಿಕೃತವಾದ ಸಂತೋಷ ಪಡತಕ್ಕಂತಹ ರಾಕ್ಷಸ ಬಾಲ, ವೃದ್ಧ ಸ್ತ್ರೀಯರು.

ಹೇಗಿತ್ತು ಹನುಮನ ಮನಸ್ಸು ಅಂತಂದ್ರೆ ಸುಖವಾಗಿ ಓಡಾಡ್ತಾ ಇದಾನೆ. ಹನುಮನ ಗಮನ ಮಾತ್ರ ಲಂಕೆಯ ಮೇಲೆ. ನೋಡ್ತಾನೆ. ಹಿಂದೆ ನೋಡಿದ್ದನ್ನೂ ಕೂಡ ನೋಡ್ತಾನೆ. ಏಳೆಂಟು ಉಪ್ಪರಿಗೆಯ ಮನೆಗಳು. ಲಂಕೆಯ ರಸ್ತೆ, ಮನೆ, ಮನೆಗಳ ಮಧ್ಯೆ ಇರುವ ಸ್ಥಳ . ರಾತ್ರಿ ನೋಡಿದ ಕೆಲವು ಪ್ರದೇಶಗಳನ್ನೂ ನೋಡ್ತಾನೆ. ರಾಮನಿಗೆ ವರದಿ ಮಾಡಲು ಬೇಕಾದ ಗಮನಿಸುವಿಕೆ. ಕೆಲವು ಗೌಪ್ಯವಾದ ಪ್ರದೇಶಗಳು ಕೂಡಾ ಅವನ ಕಣ್ಣಿಗೆ ಬಿದ್ದವು. ಜನ ತುಂಬಿದ ಬೀದಿಗಳು, ನಾಲ್ಕುರಥ ಸೇರ್ತಕ್ಕಂಥ ಪ್ರದೇಶಗಳು, ಮಹಾಮಾರ್ಗಗಳು ಇವೆಲ್ಲವನ್ನೂ ಕೂಡ ನೋಡ್ತಾನೆ ಹನುಮಂತ. ಅವರೊಂದು ಕಡೆ ಮುಖ್ಯ ಮುಖ್ಯ ಸ್ಥಳಗಳು ಬಂದ ಕೂಡಲೇ ರಾಜಮಾರ್ಗಗಳು, ನಾಲ್ಕು ರಥಬೀದಿಗಳು ಸೇರುವ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಘೋಷಣೆಗಳನ್ನ ಕೂಗ್ತಿದ್ರಂತೆ. ಸ್ತ್ರೀಯರು, ಬಾಲರು, ವೃದ್ಧರು ಕುತೂಹಲದಿಂದ ಬಂದು ನೋಡಿದರಂತೆ. ವಿಕೃತ ಕುತೂಹಲದಿಂದ.
ಲಂಕೆಯಲ್ಲಿ ಸ್ತ್ರೀ, ಬಾಲ, ವೃದ್ಧರವರೆಗೆ ಮನಸ್ಸುಗಳು ಹಾಳಾಗಿದಾವೆ….!

ಇದು ಹನುಮನ ಕಥೆಯಾದರೆ ಆಕಡೆ ಸೀತೆಗೆ ಸುದ್ದಿ ಮುಟ್ಟಿತು. ಹನುಮಂತನ ಬಾಲಕ್ಕೆ ಬೆಂಕಿ ಹತ್ತಿ ಉರಿಯುವಾಗ ವಿರೂಪಾಕ್ಷಿಯರಾದ ರಾಕ್ಷಸಿಯರು ದೇವಿ ಸೀತೆಗೆ ಆ ಅಪ್ರಿಯವಾದ ವಾರ್ತೆಯನ್ನು ಅರುಹಿದರು. ಕೆಂಪು ಮುಖದ ಕೋತಿ, ನಿನ್ನ ಜೊತೆಗೆ ಬೆಳಗಿನ ಜಾವ ಮಾತನಾಡಿತ್ತಲ್ಲ ಅದರ ಬಾಲಕ್ಕೆ ಬೆಂಕಿ ಹಚ್ಚಿ ಊರೆಲ್ಲ ಮೆರವಣಿಗೆ ಮಾಡ್ತಿದಾರೆ. ಸೀತೆಗೆ ಆ ಮಾತು ಕ್ರೂರವಾಗಿ ಪರಿಣಮಿಸಿತು. ಒಂದೇ ಮಾತಲ್ಲಿ ಅದನ್ನ ವಿವರಿಸಿದಾರೆ ವಾಲ್ಮೀಕಿಗಳು. ತನ್ನ ಅಪಹರಣವಾದಾಗ ಯಾವ ವ್ಯಥೆಯಾಗಿತ್ತೋ ಅದೇ ವ್ಯಥೆಯಾಯಿತು. ಭಯಂಕರವಾದ ವ್ಯಥೆಯನ್ನು ಅನುಭವಿಸಿದ್ದಳು ಆಕೆ. ಅದೇ ವ್ಯಥೆಯನ್ನು, ನೋವನ್ನು ಸೀತೆ ಅನುಭವಿಸ್ತಾಳೆ. ಶೋಕದಿಂದ ಸಂತಪ್ತಳಾದ ಸೀತೆ ಕೂಡಲೆ ಅಗ್ನಿಯ ಬಳಿ ಬರ್ತಾಳೆ. ಅಗ್ನಿದೇವನ ಮುಂದೆ ನಿಂತು ಆ ಮಹಾಕಪಿಯ ಮಂಗಲವನ್ನು ಹಾರೈಸ್ತಿದ್ಲು ಆಕೆ. ಹನುಮನಿಗೆ ಸ್ವಲ್ಪವೂ ನೋವಾಗಬಾರದು. ಕಷ್ಟವಾಗಬಾರದು. ಸುಡಬಾರದು ಎನ್ನುವುದು ಆಕೆಯ ಮನಸ್ಸಿನಲ್ಲಿ ಬಂದಿತ್ತು ಆ ಸಂದರ್ಭದಲ್ಲಿ. ಹಾಗಾಗಿ ಆಕೆ ಅಗ್ನಿದೇವನ ಮುಂದೆ ಹೋಗಿ ನಿಲ್ತಾಳೆ. ಶುದ್ಧವಾದ, ಏಕಾಗ್ರವಾದ ಮನಸ್ಸಿನಿಂದ ಅಗ್ನಿದೇವನನ್ನು ಉಪಾಸನೆ ಮಾಡ್ತಾಳೆ ಸೀತೆ. ಧ್ಯಾನಿಸ್ತಾಳೆ. ಒಂದು ಭಯಂಕರವಾದ ಪ್ರತಿಜ್ಞೆಯನ್ನು ಅಗ್ನಿದೇವನ ಮುಂದೆ ಮಾಡ್ತಾಳೆ. ನಾನೇನಾದರೂ ಪತಿಶುಶ್ರೂಷೆಯನ್ನು ಮಾಡಿದ್ದಿದ್ದರೆ, ನಾನೇನಾದರೂ ನನ್ನ ಜೀವನದಲ್ಲಿ ತಪಸ್ಸು ಅಂತ ಮಾಡಿದ್ದಿದ್ದರೆ, ರಾಮನಿಗೆ ನಾನು ನಿಜವಾಗಿಯೂ ಪತಿವ್ರತೆಯಾಗಿದ್ದರೆ, ಹೇ ಅಗ್ನಿದೇವ, ಹನುಮನ ಪಾಲಿಗೆ ನೀನು ಶೀತನಾಗು. ಆಕೆ ಕೇಳಿದ್ದಾದರೂ ಏನು? ಅಗ್ನಿದೇವ ತನ್ನ ಸ್ವಭಾವವನ್ನೇ ಬಿಟ್ಟುಕೊಡಬೇಕು. ತದ್ವಿರುದ್ಧ ಸ್ವಭಾವವನ್ನು ತಾಳ್ಬೇಕು.

ಪಂಚಭೂತಗಳು ಸುಲಭವಾಗಿ ತಮ್ಮ ಸ್ವಭಾವವನ್ನು ಬಿಡೋದಿಲ್ಲ. ಎಂತಹ ಸಮಯದಲ್ಲಿಯೂ ಕೂಡ ಅವುಗಳು ತಮ್ಮ ಸ್ವಭಾವವನ್ನು ಬಿಟ್ಟುಕೊಡೋದಿಲ್ಲ. ಆದರೆ ಸೀತೆ ಅಗ್ನಿದೇವನನ್ನು ಒರೆಗೆ ಹಚ್ಚಿದಳು. ಮೂರು ಸಂಗತಿಗಳು – ನಾನೇನಾದ್ರೂ ರಾಮನ ಸೇವೆಯನ್ನು ಮಾಡಿದ್ದಿದ್ದರೆ, ನಾನೇನಾದ್ರೂ ಜೀವನದಲ್ಲಿ ತಪಸ್ಸು ಮಾಡಿದ್ದಿದ್ದರೆ, ಅದಕ್ಕಿಂತ ಮುಂದುವರೆದು ನಾನು ಪತಿವ್ರತೆ ಹೌದಾದರೆ, ನನ್ನ ನಿಷ್ಠೆ ರಾಮನೊಬ್ಬನಿಗೆ ಮಾತ್ರ ಹೌದಾದರೆ ಹನುಮನ ಪಾಲಿಗೆ ತಂಪಾಗು. ಹನುಮನಿಗೆ ನನ್ನಲ್ಲಿ ಒಂದಿಷ್ಟಾದರೂ ಅನುಕಂಪ ಉಂಟಾಗಿದ್ದಿದ್ದರೆ ಅಥವಾ ಏನಾದರೂ ಭಾಗ್ಯಶೇಷ ಉಳಿದಿದ್ದರೆ ನನ್ನದು, ಹನುಮನ ಪಾಲಿಗೆ ತಂಪಾಗು’. ಅದೆಲ್ಲವನ್ನೂ ಆಕೆ ಹನುಮನಿಗಾಗಿ ಒತ್ತೆ ಇಡ್ತಾ ಇದ್ದಾಳೆ! ‘ನಾನು ನಡತೆಯುಳ್ಳವಳು, ನಾನು ಚಾರಿತ್ರ್ಯಸಂಪನ್ನೆ, ನಾನು ರಾಮನನ್ನು ಸೇರುವ ಬಯಕೆ ಉಳ್ಳವಳು ಎನ್ನುವುದು ಧರ್ಮಾತ್ಮನಾದ ಹನುಮನಿಗೆ ಗೊತ್ತಿದ್ದರೆ, ಹನುಮನ ಪಾಲಿಗೆ ತಂಪಾಗು. ಸತ್ಯವಿಕ್ರಮನಾದ ಸುಗ್ರೀವನಿಗೆ ನನ್ನನ್ನು ಈ ಕಷ್ಟದಿಂದದಿಂದ ದಾಟಿಸುವ ಯೋಗವು ಇದ್ದಿದ್ದೇ ಹೌದಾದರೆ, ಈ ಕಷ್ಟದಿಂದ ದಾಟುವ ಯೋಗ ನನಗೆ ಇದ್ದಿದ್ದೇ ಹೌದಾದರೆ ಹನುಮಂತನಿಗೆ ತಂಪಾಗು’ ಎಂದು ಅಗ್ನಿದೇವನಿಗೆ ಸೀತೆ ಪ್ರಾರ್ಥನೆ ಮಾಡ್ತಾಳೆ. ಅಗ್ನಿ ಪ್ರತಿಸ್ಪಂದಿಸಿತು. ತೀಕ್ಷ್ಣವಾದ ಅಗ್ನಿಜ್ವಾಲೆಯು ಪ್ರದಕ್ಷಿಣಾಕಾರವಾಗಿ ಸುತ್ತಿತಂತೆ ಸೀತೆಯ ಮುಂದೆ. ಏಕಾಗ್ರವಾಗಿತ್ತಂತೆ ಆ ಅಗ್ನಿ. ಅಗ್ನಿದೇವನು ‘ಆಯ್ತಮ್ಮಾ, ಹಾಗೆಯೇ ಮಾಡ್ತೇನೆ’ ಎಂದು ಸೀತೆಗೆ ಒಪ್ಪಿಗೆ ಕೊಟ್ಟಂತೆ ಆಯಿತು. ಆ ಕಪಿಗೆ ಒಳ್ಳೆಯದಾಗ್ತದೆ ಎಂಬುದನ್ನು ಅಗ್ನಿದೇವನು ಈ ರೀತಿ ಹೇಳಿದಂತೆ ಇತ್ತು. ಒಂದು ತಂಪು ಗಾಳಿ ಅನುಕೂಲವಾಗಿ ಬೀಸಿತಂತೆ. ಇದೂ ಕೂಡ ಶುಭಲಕ್ಷಣ. ಹನುಮನ ಬಾಲದ ಬೆಂಕಿಯ ಮೇಲೆ‌ ಬೀಸಿ ಬಂದ ಗಾಳಿ ಸೀತೆಯ ಮೇಲೆ ಬೀಸಿತು ತಂಪಾಗಿ. ಅಂದರೇನರ್ಥ? ಬೆಂಕಿ ಹಿಮಶೀತಲವಾಯಿತು. ಇಷ್ಟು ಲಕ್ಷಣಗಳು‌ ಸೀತೆಗಾದವು. ಅಲ್ಲೇನಾಗಿದೆ ಅವಳಿಗೆ ಕಾಣ್ತಾ ಇಲ್ಲ.

ಆ ಕಡೆಗೆ ಹನುಮಂತನಿಗೆ ಭಾರೀ ಸಮಸ್ಯೆ ಆಗಿ ಹೋಯಿತಂತೆ. ಏನಪ್ಪಾ ಅಂದ್ರೆ, ಬೆಂಕಿ ಹೊತ್ತಿ ಉರೀತಾ ಬಾಲದಲ್ಲಿ, ಆದರೆ ತಣ್ಣಗಾಗ್ತಾ ಇದೆ! ಹೊಸಾ ಅನುಭವ ಹನುಮಂತನಿಗೆ. ಮಹಾಜ್ವಾಲೆ ಕಾಣ್ತಾ ಇದೆ, ಆದರೆ ಒಂದು ಚೂರೂ ನನಗೆ ಕಷ್ಟ ಆಗ್ತಾ ಇಲ್ಲ, ಬಿಸಿ ಸುಡ್ತಾ ಇಲ್ಲ. ನನ್ನ‌ ಬಾಲದ ತುದಿಯಲ್ಲಿ ಯಾರೋ ಮಂಜುಗಡ್ಡೆಯನ್ನಿಟ್ಟರೋ ಏನೋ ಎನ್ನುವಂತೆ ಇದೆ. ಇದು ಹೇಗೆ ಅಂತ ಅವನಿಗೆ ಸಮಸ್ಯೆಯಾಗಿ ಬಿಟ್ಟಿತಂತೆ. ಅವನೇ ಆಲೋಚನೆ ಮಾಡ್ತಾನೆ, ಇದು ರಾಮ-ಸೀತೆಯರದ್ದು! ಇಲ್ಲಾಂದ್ರೆ ನಾನು ಸಾಗರವೇರಿ ಬರಬೇಕಾದ್ರೆ ಪರ್ವತ ಹೇಗೆ ಬಂತು? ಕಲ್ಪನೆ ಮಾಡಲಿಕ್ಕೆ ಸಾಧ್ಯವಾ ಎಲ್ಲಿಯಾದ್ರು? ಅದು ರಾಮನ ಪ್ರಭಾವ. ಮೈನಾಕ ಪರ್ವತಕ್ಕೆ ರಾಮ-ಸೀತೆಯರ ಕುರಿತು ಇಂಥಾ ಭಾವ ಇರಬೇಕಾದ್ರೆ ಅಗ್ನಿಗೆ ಯಾಕೆ‌ ಇರಬಾರದು? ಅವನಿಗೂ ಇರಬಹುದು. ಇದು ಸೀತೆಯ ಪಾತಿವ್ರತ್ಯ, ರಾಮನ ತೇಜಸ್ಸು. ಸ್ವಲ್ಪ ನಮ್ಮಪ್ಪನ‌ ಸ್ನೇಹವೂ ಇರಬಹುದು! ಹಾಗೆ, ತುಂಬ ಆಶ್ಚರ್ಯಗೊಂಡು ಅದನ್ನು ಆಲೋಚಿಸ್ತಾ ಇದ್ದಾನೆ‌ ಹನುಮಂತ. ನೋಡುವುದೆಲ್ಲ ನೋಡಿ ಆಗಿದೆ ಹನುಮಂತ ಅಷ್ಟು ಹೊತ್ತಿಗೆ. ನಗರದ ಮಹಾದ್ವಾರದ ಬಳಿಗೆ ಬಂದಿದ್ದಾನೆ ಈಗ. ಒಂದು ಆವೇಶ ಬಂತು ನೋಡಿ ಹನುಮಂತನಿಗೀಗ!

ಆ ಮಹಾದ್ವಾರವು ಪರ್ವತ ಶಿಖರದಂತೆ ಉನ್ನತವಾಗಿತ್ತು. ರಾಕ್ಷಸರನ್ನು ವ್ಯವಸ್ಥಿತವಾಗಿ ವಿಭಾಗಿಸಿ ಇಟ್ಟಿದ್ದರು ಅಲ್ಲಿ. ಅಂತಹ ಪುರದ್ವಾರವನ್ನು ಸೇರ್ತಿದ್ದ ಹಾಗೇ ಹಾರಿಬಿಟ್ಟನಂತೆ. ಅವನನ್ನು ಹಿಡ್ಕೊಂಡಿದ್ದ ಕೆಲವು ಜನರೂ ಆಕಾಶಕ್ಕೆ ಹೋದರು, ಆಮೇಲೆ‌ ಅವನು ಮೇಲೆಯೇ ಇದ್ದ, ರಾಕ್ಷಸರೆಲ್ಲ ಕೆಳಗೆ ಬಂದರು. ಹಾರಿದವನು ಹೋಗಿ ಆ ಹೆಬ್ಬಾಗಿಲ ಅಡ್ಡ ತಲೆಯ ಮೇಲೆ ನಿತ್ಕೊಂಡನಂತೆ. ಅದೇ ಹಳೆಯ ಜಾಗ! ನೋಡ್ಕೊಂಡ ಮೈಯನ್ನು. ಕಟ್ಟೆಲ್ಲ ಹಾಗೇ ಇದೆ ಇನ್ನೂ. ಬೆಳೆದನಂತೆ ಅವನು. ಕಟ್ಟು ಪೂರ್ತಿ ಬಿಗಿಯಾಯಿತು ಒಂದು ಸರ್ತಿ ಬೆಳೆದಾಗ. ಕೊನೆಗೆ ಚಿಕ್ಕದಾಗಿ ಬಿಟ್ಟನಂತೆ ಇದ್ದಕ್ಕಿದ್ದಂತೆ. ಸುತ್ತ ಹಗ್ಗ ಕಾಣ್ತಾ ಇದೆ, ಮಧ್ಯೆ ಒಂದು ಬಿಂದು ಹನುಮಂತ. ಮತ್ತೆ ಪರ್ವತಾಕಾರ ತಾಳಿದನಂತೆ, ಈಗ ಹಗ್ಗ ಇಲ್ಲ. ರಾಕ್ಷಸರ ಗ್ರಹಾಚಾರ! ಹಗ್ಗ ಇದ್ದರೂ ಭಯ; ಈಗ ಬಂಧನವೂ ಇಲ್ಲ. ಆ ಕಡೆ ಈ ಕಡೆ ನೋಡಿದನಂತೆ ಹನುಮ, ಆಯುಧ ಬೇಕಲ್ಲಾ ಅಂತ. ಆ ಮಹಾದ್ವಾರದ ಕಬ್ಬಿಣದ ಅಗುಳಿ ದಪ್ಪವಾಗಿ ದೊಡ್ಡದಾಗಿತ್ತು; ಅದನ್ನೇ ತೆಗೊಂಡು ಮಹಾದ್ವಾರದ ರಕ್ಷಣೆಗಾಗಿ ನಿಂತಿದ್ದ ಅಷ್ಟೂ ರಾಕ್ಷಸರನ್ನು ಸಂಪೂರ್ಣ ನಾಶ ಮಾಡಿದ.

ಆ ರಣಚಂಡ ವಿಕ್ರಮನು ಹೆಬ್ಬಾಗಿಲ ತಲೆಯ ಮೇಲಿಂದ ಲಂಕೆಯನ್ನು ನೋಡಿದ. ಹಗಲಿನ ಸೂರ್ಯದ ಕಿರಣಗಳು, ಬಾಲದ ಬೆಂಕಿಯಲ್ಲಿ ಶೋಭಿಸಿದನಂತೆ ಒಂದು ಕ್ಷಣ. ಲಂಕೆಯನ್ನೇ ನೋಡ್ತಾ ಇದ್ದಾನೆ, ಒಂದು ಮಟ್ಟಿಗೆ ತೃಪ್ತಿ ಇದೆ ಅವನಿಗೆ. ಬಂದ ಕೆಲಸ ಎಲ್ಲ ಮಾಡಿ ಮುಗೀತಲ್ಲ! ಸೀತೆಯನ್ನು ಹುಡುಕಿದ್ದೇನೆ, ಸೀತೆಯ ಬಳಿ ಮಾತನಾಡಿದ್ದೇನೆ, ಸಾಧ್ಯವಾದಷ್ಟು ಏನು ಉಪದ್ರವ ಕೊಡಬೇಕೋ ಕೊಟ್ಟಿದ್ದೇನೆ ಲಂಕೆಯ ರಕ್ಷಕರಿಗೆ. ಸಂತೋಷವಾಯಿತು, ತುಂಬ ಉತ್ಸಾಹ ಕೂಡ ಬರ್ತಾ ಇದೆ‌ ಹನುಮಂತನಿಗೆ. ಇನ್ನೇನು ಮಾಡಬಹುದು ಎಂಬ ಯೋಚನೆ ಬಂತಂತೆ ಆಗ. ಕಾರ್ಯ ಮುಗಿದು ಯಾವುದೋ ಕಾಲವಾಗಿದೆ. ಲಂಕೆಯಲ್ಲಿ ಇನ್ನೇನು ಉಳೀತು ಅಂತ ಪುನಃ ಯೋಚನೆ ಮಾಡ್ತಾನೆ. ಇನ್ನು ಮಾಡಬೇಕಾದ ಕರ್ತವ್ಯ ಏನು ಉಳಿದಿದೆ? ಈ ರಾಕ್ಷಸರಿಗೆ ಇನ್ನು ಯಾವ ಪೀಡೆಯನ್ನು ಕೊಡಬಹುದು?

ಜಗತ್ ಹಿತೈಷಿಯಾದ ಹನುಮನ ಸಾತ್ವಿಕ ಮನಸ್ಸಿಗೆ ಎಷ್ಟು ಆಕ್ರೋಶ ಬಂದಿದೆ ಎಂದರೆ ಇನ್ನೇನು ಮಾಡಬಹುದು ಇವರಿಗೆ ತಕ್ಕ ಶಾಸ್ತಿಯಾಗಲು? ಅಂತ ಆಲೋಚನೆ ಮಾಡಿದನಂತೆ. ಒಂದೊಂದೇ ಲೆಕ್ಕ ಹಾಕ್ತಾನಂತೆ : ಅಶೋಕವನ ನಾಶ ಮಾಡಿದ್ದೇನೆ, ದೊಡ್ಡ ದೊಡ್ಡ ರಾಕ್ಷಸರು ಅನೇಕರನ್ನ ಕೊಂದಿದ್ದೇನೆ, ಚೈತ್ಯ ಪ್ರಾಸಾದವನ್ನು ಸುಟ್ಟಿದ್ದೇನೆ, ರಾವಣನ ಒಂದು‌ ಭಾಗ ಸೈನ್ಯವನ್ನು ನಾಶ ಮಾಡಿದ್ದೇನೆ, ಮತ್ತೇನು ಉಳೀತು? ಅಂತ ಯೋಚನೆ ಮಾಡಿ, ಈ ಲಂಕೆಗೆ ರಕ್ಷಣೆಯಾಗಿರುವ ಕೋಟೆಯನ್ನು ನಾಶ ಮಾಡುವುದು ಮುಂದಿನ ಕೆಲಸ. ಅದಾದರೆ, ರಾಮನಿಗೆ ಮುಂದೆ ಯುದ್ಧಕ್ಕೆ ಬಂದಾಗ ಅನುಕೂಲವಾಗಬಹುದು. ಈಗ ಬಹಳ ಏನು ಕೆಲಸ ಇಲ್ಲ ನನಗೆ ಅಂತ ಅಂದುಕೊಳ್ತಾನೆ. ಗುದ್ದಲಿ ಎಲ್ಲ ತರಬೇಕಾಗಿಲ್ಲ. ಏನು? ಬೆಂಕಿಯಿದೆಲ್ಲ ಬಾಲದಲ್ಲೇ!

ಈ ನನ್ನ ಬಾಲದಲ್ಲಿ ಬೆಳಗುವ ಅಗ್ನಿದೇವನಿಗೆ ಒಂದು ಸಂತರ್ಪಣೆ ಮಾಡಬೇಕು. ಈ ಮನೆಗಳನ್ನೇ ಆಹುತಿಯಾಗಿ ಕೊಡಬೇಕು. ತಡ ಮಾಡಲಿಲ್ಲ. ಯಾರಾದರೂ ಅವನ ಜಾಗದಲ್ಲಿದ್ದರೆ ಮೊದಲು ಬಾಲದ ಬೆಂಕಿಯನ್ನು ಆರಿಸಿಕೊಳ್ಳುತ್ತಾರೆ. ಅದು ಬಿಟ್ಟು ಲಂಕೆಗೆ ಇನ್ನೇನು ಮಾಡಬಹುದು ಎಂಬ ಯೋಚನೆ. ತನ್ನ ಯೋಚನೆಯೇ ಇಲ್ಲ. ಸೀತೆಯ ಆಶೀರ್ವಾದದಿಂದ ಬೆಂಕಿ ಸುಡುತ್ತಿಲ್ಲ. ಮಿಂಚಿನಿಂದ ಕೂಡಿದ ಮೇಘದಂತೆ, ಉರಿಯುವ ಬಾಲವುಳ್ಳವನಾಗಿ ಲಂಕೆಯ ಭವನಾಗ್ರಗಳಲ್ಲಿ ಸಂಚಾರವನ್ನಾರಂಭಿಸಿದನು ಮಹಾಕಪಿ. ಮನೆಯಿಂದ ಮನೆಗೆ, ಉದ್ಯಾನದಿಂದ ಉದ್ಯಾನಕ್ಕೆ ನಿರ್ಭೀತನಾಗಿ ಸಂಚರಿಸುತ್ತಿದ್ದಾನೆ. ರಾಜಗೃಹಗಳು, ಶ್ರೀಮಂತರ ಭವನಗಳು, ದೊಡ್ಡ 7-8 ಉಪ್ಪರಿಗೆಯ ಮನೆಗಳು (ವಿಮಾನ) ಅಲ್ಲೆಲ್ಲಾ ಸಂಚಾರ ಮಾಡುತ್ತಿದ್ದಾನೆ. ಮೊಟ್ಟ-ಮೊದಲು ಪ್ರಹಸ್ತನ ಮನೆಗೆ ಹಾರಿ ಅಲ್ಲಿ ಬೆಂಕಿಯನ್ನಿಟ್ಟು, ವಾಯುವೇಗದಿಂದ ಮಹಾಪಾರ್ಶ್ವನ ಮನೆಗೆ ಹಾರಿ ಅಲ್ಲಿ ಬೆಂಕಿಯನ್ನಿಟ್ಟು ಅಲ್ಲಿಂದ ವಜ್ರದಂಷ್ಟ್ರನ ಮನೆಗೆ, ಮುಂದೆ ಶುಕ, ಸಾರಣರ ಮನೆಗೆ, ಆಮೇಲೆ ಇಂದ್ರಜಿತುವಿನ ಮನೆಗೆ, ಅಲ್ಲಿಂದ ಜಂಬುಮಾಲಿಯ ಮನೆಗೆ(ಅವನಿಲ್ಲ), ಆಮೇಲೆ ಸುಮಾಲಿ, ಸೂರ್ಯಶತ್ರು, ಹೃಸ್ವಕರ್ಣ, ದಂಷ್ಟ್ರ, ಮತ್ತ, ಯುದ್ಧೋನ್ಮತ್ತ ಮತ್ತೆಲ್ಲರ ಮನೆಗೂ ಬೆಂಕಿ ಕೊಟ್ಟ. ರಾತ್ರಿ-ಹಗಲು ಅಲ್ಲೇ ಇದ್ದಿದ್ದರಿಂದ ಅವನಿಗೆ ಪ್ರಮುಖರು ಯಾರು, ಅವರ ಮನೆಗಳು ಯಾವುವು ಎಲ್ಲಾ ಗೊತ್ತಾಗಿದೆ. ಈಗ ಅವರೇ ತೋರಿಸಿದ್ದಾರೆ ಕೂಡಾ. ಮುಂದೆ ಆಗುವುದಕ್ಕಿಂತ ಈಗಲೇ ಮುಳುವಾಗಿದೆ ಅವರಿಗಿದು. ಮುಂದೆ ಕರಾಲ ಮತ್ತು ಪಿಶಾಚ, ಶೋಣಿತಾಕ್ಷ ಮತ್ತು ಕುಂಭಕರ್ಣರ ಮನೆಗಳಿಗೆ ಬೆಂಕಿ ಕೊಟ್ಟ. ಮಕರಾಕ್ಷ ಎನ್ನುವವನು ಖರನ ಮಗ. ಅವನ ಮನೆಗೆ, ಯಜ್ಞಶತ್ರು ಮತ್ತು ಬ್ರಹ್ಮಶತ್ರು, ರಾವಣನ ಮಗನಾದ ನರಾಂತಕ, ಕುಂಭ, ನಿಕುಂಭ ಅವರ ಮನೆಗಳಿಗೆ ಬೆಂಕಿ ಕೊಟ್ಟು, ಅಂತಹ ಆವೇಶದಲ್ಲಿಯೂ ಕೂಡಾ ಆ ಮನೆಗೆ ಬೆಂಕಿ ಹೋಗಬಾರದು ಎಂದು ಒಂದು ಮನೆಯನ್ನು ಮಾತ್ರ ಜಾಗರೂಕತೆಯಿಂದ ಉಳಿಸಿದ್ದಾನೆ. ಅದು ವಿಭೀಷಣನ ಮನೆ. ತ್ರಿಜಟೆಯ ಸ್ವಪ್ನದ ಪ್ರಕಾರ ಅವನೊಬ್ಬನೇ ಉಳಿಯುವುದು ಕೊನೆಯಲ್ಲಿ. ಕ್ರಮವಾಗಿ ಆ ಎಲ್ಲಾ ಭವನಗಳನ್ನು ದಹಿಸಿದ. ಅಮೂಲ್ಯವಾದ ಭವನಗಳು, ಅದರೊಳಗೆ ಅಮೂಲ್ಯವಾದ ಸಂಪತ್ತು ಎಲ್ಲ ಸುಟ್ಟು ಬೂದಿಯಾಯಿತು.

ಇದೆಲ್ಲಾ ಮುಗಿಸಿ ಕೊಟ್ಟ ಕೊನೆಯಲ್ಲಿ ರಾವಣನ ಮನೆಗೆ ಬಂದ. ಅಲ್ಲಿ ಬಂದಾಗ ಹನುಮಂತನಿಗೆ ಬಹಳ ಕಳೆ ಬಂದಿತು. ಆ ಮನೆಯ ಮೇಲೆ ಪ್ರವೇಶ ಮಾಡಿದನು. ಆ ಮನೆ ರತ್ನವಿಭೂಷಿತವಾಗಿತ್ತು, ಲಂಕೆಗೆ ಮುಖ್ಯವಾಗಿತ್ತು. ಮೇರು, ಮಂದರ ಪರ್ವತವನ್ನು ನೆನಪು ಮಾಡುವಂತಿತ್ತು. ಅನೇಕ ಶುಭವಾದ ಸಾಮಾಗ್ರಿಗಳಿದ್ದವು. ಆ ಮನೆಗೆ ಪ್ರಜ್ವಲಿಸುವ ಬೆಂಕಿಯನ್ನಿಟ್ಟು ಹನುಮಂತನು ಒಂದು ದೊಡ್ಡ ಸಿಂಹನಾದವನ್ನು ಮಾಡಿದನು. ಇನ್ನೇನು ಬೇಕು? ರಾವಣ ಬದುಕಿ ಏನು ಇದಾದ ಮೇಲೆ? ಪ್ರಳಯಕಾಲ ಬಂದಾಗ ಸಂವರ್ತಕ ಮೇಘಗಳು ಯಾವ ರೀತಿ ಗುಡುಗುತ್ತವೆಯೋ ಆ ರೀತಿ ಗುಡುಗಿದನು ಹನುಮಂತ. ಏಕೆಂದರೆ ಕ್ರೋಧವೂ ಹಾಗೆಯೇ ಇದೆ. ಎಷ್ಟು ಅವಮಾನ ಮಾಡಿದ್ದರು? ಎಂತಹ ಹೀನ ಕಾರ್ಯ ಮಾಡಿದ್ದು ಹಿತೈಷಿಯಾಗಿ ಮಾತನಾಡಿದ್ದಕ್ಕೆ! ನಿನಗೆ ವರವಿರುವುದು ಮನುಷ್ಯ ಮತ್ತು ಮರ್ಕಟರನ್ನು ಹೊರತುಪಡಿಸಿ ಯಾರಿಂದಲೂ ಸಾವಿಲ್ಲ ಎನ್ನುವುದು. ಈಗ ಮುಂದಿರುವುದು ಸವಾಲು ಮನುಷ್ಯ ಮತ್ತು ಮರ್ಕಟರಿಂದಲೇ ಇರುವಂಥದ್ದು ಎನ್ನುವ ಸೂಕ್ಷ್ಮವನ್ನೂ ಹೇಳಿದ್ದ. ನಿಜವಾಗಿ ಒಳಿತನ್ನು ಬಯಸಿ ಮಾತನಾಡಿದ್ದ. ಇಷ್ಟಕ್ಕೇ ಕೊಲ್ಲುವುದು ಮತ್ತು ಬಾಲಕ್ಕೆ ಬೆಂಕಿಯಿಟ್ಟು ಮೆರವಣಿಗೆ ಮಾಡುವುದು. ಹಾಗಾಗಿ ಕೋಪ ಬಂದಿದೆ. ಏತನ್ಮಧ್ಯೆ ಬೆಂಕಿಯು ವ್ಯಾಪಿಸತೊಡಗಿತು, ತಾನೇ ತಾನಾಗಿ. ಅಗ್ನಿ ಮತ್ತು ವಾಯು ಮೊದಲಾದ ದೇವತೆಗಳಿಗೆ ತುಂಬಾ ಹಳೆಯ ಸಿಟ್ಟಿದೆ. ಈಗ ಮುಹೂರ್ತ ಬಂದಿದೆ, ಅವರಿಗೆ ಅವಕಾಶವೂ ಬಂದಿದೆ. ಹಾಗೆಯೇ ಹನುಮಂತನ ಭದ್ರವಾದ ರಕ್ಷಣೆಯಿದೆ. ಹಾಗಾಗಿ ವಾಯುವಿನಿಂದಾಗಿ ಅಗ್ನಿಗೆ ವೇಗ ಹೆಚ್ಚಾಯಿತು. ಭೀಕರವಾಗಿ ಬೆಳೆದ ಬೆಂಕಿಯನ್ನು ವಾಯುವು ಮನೆಯ ತುಂಬಾ ಪಸರಿಸಿದ. ಒಬ್ಬನೇ ಬೆಂಕಿ ಕೊಟ್ಟರೂ ಒಟ್ಟು ಬೆಂಕಿ ತುಂಬಾ ಪರಿಣಾಮ ಮಾಡಿದೆ. ನಾವು ದಿವ್ಯಶಕ್ತಿಗಳಿಗೆ ತೊಂದರೆ ಮಾಡಿದರೆ ಯಾವುದೋ ಒಂದು ಸಂದರ್ಭದಲ್ಲಿ ಅದು ತಿರುಗಿ ಬಂದಾಗ ನಮಗದನ್ನು ತಡೆದುಕೊಳ್ಳುವುದು ಕಷ್ಟವಾಗಬಹುದು. ಈ ರಾವಣ ಎಲ್ಲರಿಗೂ ಅವಮಾನ ಮಾಡಿದ್ದಾನೆ. ಕಷ್ಟ ಕೊಟ್ಟಿದ್ದಾನೆ. ಹಾಗಾಗಿ ಸಮಯ ಬಂದಾಗ ಇಡೀ ಪ್ರಪಂಚ ಅವನ ವಿರುದ್ಧ ಷಡ್ಯಂತರ ಮಾಡುತ್ತದೆ.

ಬೆಳ್ಳಿ-ಬಂಗಾರಗಳ, ಮುತ್ತು-ರತ್ನ, ವಜ್ರಗಳ ಆ ಲಂಕೆಯ ಭವನಗಳು ಒಂದೊಂದಾಗಿ ಉರಿದುರಿದು ಬಿದ್ದವು. ಆಧಾರವಾಗಿರುವ ಕಂಬ, ಗೋಡೆ ಎಲ್ಲಾ ಕುಸಿದು ಬಿದ್ದವು. ಹೇಗೆಂದರೆ ಸಿದ್ಧರು ತಪಸ್ಸು ಮಾಡಿ ಪುಣ್ಯಲೋಕಗಳನ್ನು ಸಂಪಾದನೆ ಮಾಡಿರುತ್ತಾರೆ. ಆ ಪುಣ್ಯ ಮುಗಿದಾಗ ಪುಣ್ಯಲೋಕಗಳು ಕ್ಷಯಿಸಿ ಬೀಳುವಂತೆ. ಹಾಹಾಕಾರವೆದ್ದಿತು ಲಂಕೆಯಲ್ಲಿ. ಮನೆಯನ್ನು ಉಳಿಸಿಕೊಳ್ಳಲು ಎಲ್ಲರೂ ಅತ್ತ-ಇತ್ತ ಓಡುತ್ತಿದ್ದಾರೆ. ಯಾವ ಉಪಯೋಗವೂ ಇಲ್ಲ. ರಾಕ್ಷಸಿಯರು ಅವರ ಮಕ್ಕಳನ್ನು ಎತ್ತಿಕೊಂಡು ‘ಇದು ಕಪಿಯಲ್ಲ ಬೆಂಕಿಯೇ ಲಂಕೆಗೆ ಬಂದಿದೆ’ ಎನ್ನುತ್ತ ಭವನಗಳಿಂದ ಕೆಳಗೆ ಹಾರುತ್ತಿದ್ದರು. ಕೆಲವು ರಾಕ್ಷಸಿಯರ ಮೈತುಂಬಾ ಬೆಂಕಿ. ಮಿಂಂಚಿನಂತೆ ಕಾಣುತ್ತಿದ್ದರು ಅವರು. ಬೆಳ್ಳಿ-ಬಂಗಾರವೆಲ್ಲಾ ಕರಗಿ ಹರಿದು ಬರುವುದನ್ನು ಹನುಮಂತ ಕಂಡನು.

ಅಗ್ನಿ ದೇವನು ಸುಟ್ಟು ಹಾಕ್ತಾ ಇದ್ದಾನೆ ಎಲ್ಲವನ್ನೂ ಕೂಡ. ಸುಟ್ಟಷ್ಟು ಅವನಿಗೆ ಸಮಾಧಾನವಿಲ್ಲ. ಅಗ್ನಿಗೇ ಉರಿ ಆಗಿದೆ. ಅಗ್ನಿಗೆ ಒಳಗೆ ಬಿಸಿ ಆಗಿದೆ. ಎಷ್ಟೋ ಕಾಲದ ಒಂದು ಉರಿಯನ್ನು, ಅದನ್ನು ಅಗ್ನಿ ದೇವನು ಹೊರ ಹಾಕ್ತಾ ಇದ್ದಾನೆ ಈ ಸಂದರ್ಭದಲ್ಲಿ. ಹಾಗೇ ಹನುಮಂತನಿಗೂ ತೃಪ್ತಿಯಾಗಲಿಲ್ಲವಂತೆ. ರಾಕ್ಷಸರು ಎಷ್ಟು ಸತ್ತರೂ ಹನುಮನಿಗೆ ಸಮಾಧಾನವೇ ಇಲ್ಲ. ಸತ್ತು ಹೋಗಲಿ ಪ್ರಪಂಚ ಕಂಟಕರು. ಪ್ರಪಂಚಕ್ಕೆ ಎಷ್ಟು ತೊಂದರೆ ಕೊಟ್ಟವರು. ಎನ್ನುವ ರೊಷ ಹನುಮಂತನನ್ನು ಆವರಿಸಿತ್ತು. ಭೂಮಿ ದೇವಿಗೂ ತೃಪ್ತಿ ಇರಲಿಲ್ಲವಂತೆ. ಆ ಭೂಮಿ ತಾಯಿಯ ಮಡಿಲಿನಲ್ಲಿ ಸಾವಿರಾರು ಶವಗಳು ಹರಡಿಕೊಂಡಿದ್ದಾವೆ. ಭೂಮಿ ದೇವಿ ಇನ್ನೂ ಬರಲಿ ಇನ್ನೂ ಬರಲಿ ಅಂತ ಕನವರಿಸ್ತಾ ಇದ್ದಾಳೆ. ಯಾಕೆಂದ್ರೆ ಆಕೆಗೆ ಅಷ್ಟು ಭಾರ ಈ ರಾಕ್ಷಸರು. ಅಷ್ಟು ಕ್ಲೇಶ, ಮೈಲಿಗೆ ಮಾಡಿದ್ದಾರೆ ಈ ಭೂಮಿಯನ್ನು. ತನ್ನ ಮಗಳಾದ ಸೀತೆಗೆ ಹಿಂಸೆ ಕೊಟ್ಟಿದ್ದಾರೆ ಮಾತ್ರವಲ್ಲ ಪುತ್ರಿಗೆ ಕ್ಲೇಶವನ್ನೂ ಕೊಟ್ಟಿದ್ದಾರೆ. ಹಾಗಾಗಿ ರಾಕ್ಷಸರು ಎಷ್ಟು ಸತ್ತರೂ ಭೂಮಿಗೂ ತೃಪ್ತಿ ಇಲ್ಲ. ಹನುಮಂತ ಕೊಂದು ಕೊಂದು ರಾಕ್ಷಸರನ್ನು ಕೆಡವಿದರೇ, ಭೂಮಿದೇವಿ ಬರಲಿ ಇನ್ನೂ ಬರಲಿ ಇನ್ನೂ ಸಾಧು ಸಾಧು ಎನ್ನುವ ಭಾವದಲ್ಲಿ ಇದ್ದಳು. ಕ್ಷಮಯಾ ಧರಿತ್ರಿಯಾದ ಭೂಮಿಯೂ ಸಂತೋಷ ಪಡುತ್ತಿದ್ದಳು. ಅಗ್ನಿ ಜ್ವಾಲೆಗಳು ಕೆಲವು ಕಡೆ ಮುತ್ತುಗದಂತೆ ಕಾಣ್ತಾ ಇದ್ವು. ಕೆಲವು ಕಡೆ ಬೂರುಗದಂತೆ ಕೆಲವು ಕಡೆ ಕುಂಕುಮದಂತೆ ಕಾಣುತ್ತಿದ್ದವು. ಅಗ್ನಿ ಜ್ವಾಲೆಗಳು ಬೇರೆ ಬೇರೆ ಬಣ್ಣದಲ್ಲಿ ಕಾಣ್ತಾ ಇದ್ವು. ಹನುಮಂತ ನೋಡ್ತಾ ಇದ್ದಾನೆ, ಹೇಗಂದ್ರೆ ತ್ರಿಪುರಾಸುರನನ್ನು ಜಯಿಸಿದ ಶಿವನಂತೆ. ತ್ರಿಪುರಾಸುರ ಸಂಹಾರ. ಮೂರು ನಗರಗಳು. ಅವು ಒಟ್ಟಿಗಾದ್ರೆ ಮಾತ್ರ ಸಂಹಾರ ಮಾಡಲಿಕ್ಕೆ ಸಾಧ್ಯ ಅಂತ ಲೆಕ್ಕ. ಆ ತ್ರಿಪುರಾಸುರ ಸಂಹಾರದ ನೆನಪು ಇಲ್ಲಿ. ಹಾಗೆ ರುದ್ರನ ಪ್ರತಿಮೂರ್ತಿ ಇರುವಂತಹ ಆಂಜನೇಯನು ಲಂಕೆಯನ್ನು ಜಯಿಸಿದನು. ಪರ್ವತದ ಮೇಲ್ಭಾಗಕ್ಕೇ ಬೆಂಕಿ ಇಟ್ಟನಂತೆ ಹನುಮಂತ. ಯಾರೂ ಹೊರಗೆ ಬರಬರಾದು. ಅಲ್ಲಿ ಯಾರಿದ್ರೂ ಸುಟ್ಟು ಹೋಗಬೇಕು. ಆ ತ್ರಿಕೂಟ ಪರ್ವತದ ಶೃಂಗಕ್ಕೇ ಬೆಂಕಿಯನ್ನು ಇಟ್ಟ ಹನುಮಂತ. ಬೆಂಕಿ ಕೂಡ ಹರಡುತ್ತಾ ಇತ್ತು. ಗಾಳಿಯ ಅತಿಯಾದ ಸಹಕಾರ ಆ ಅಗ್ನಿಗೆ. ರಾಕ್ಷಸರ ಶರೀರಗಳೇ ತುಪ್ಪ. ಕೋಟಿ ಸೂರ್ಯದ ಪ್ರಭೆ ಲಂಕೆಯಲ್ಲಿ. ಒಟ್ಟಿಗೆ ಕೋಟಿ ಸೂರ್ಯರು ಉದಯಿಸಿದರೆ ಹೇಗೆ ಆಗಬಹುದೋ ಹಾಗೆ. ಅಷ್ಟು ಬೆಳಕಿತ್ತಂತೆ ಲಂಕೆಯಲ್ಲಿ ಆ ಸಂದರ್ಭದಲ್ಲಿ. ಅಂತಹ ಜ್ವಾಲೆಯ ಮಧ್ಯದಲ್ಲೂ ಕೂಡ ಹನುಮಂತ ಕಾಣ್ತಾ ಇದ್ದನಂತೆ, ಶೋಭಿಸ್ತಾ ಇದ್ದನಂತೆ. ಅವನ ತೇಜಸ್ಸಿಗೆ ಇರಬಹುದು.

ಇಡೀ ಲಂಕೆಗೆ ಬೆಂಕಿ ಆವರಿಸಿದೆ. ಭಯಂಕರವಾದ ಶಬ್ದ ಕೂಡ ಬರುತ್ತಿದ್ದೆ, ಕಟ ಕಟ. ಬ್ರಹ್ಮಾಂಡವನ್ನೇ ಒಡೆಯುವಂತಹ ಶಬ್ದವು ಅಲ್ಲಿ ಬರ್ತಾ ಇತ್ತು. ಆಕಾಶದಲ್ಲಿ ಕಾಣ್ತಾ ಇತ್ತಂತೆ ಅಗ್ನಿ ಜ್ವಾಲೆ. ದೂರದಿಂದ ನೋಡಿದರೆ ಗಗನಕ್ಕೆ ಹಬ್ಬಿದೆ ಅಗ್ನಿ ಜ್ವಾಲೆ ಎನ್ನುವಂತೆ ಇತ್ತು. ಆದರೆ ಆ ಪ್ರಭೆ, ಅಗ್ನಿಯ ಆ ಪ್ರಭೆ ಅದು ಸೌಮ್ಯ ಅಥವಾ ಮಂಗಲಕರವಾದ ಪ್ರಭೆಯಲ್ಲ, ಕ್ರೂರವಾದ ಪ್ರಭೆಯಲ್ಲಿ ಆ ಅಗ್ನಿ ದೇವ ಕಂಗೊಳಿಸುತ್ತಾ ಇದ್ದ. ಸ್ವಲ್ಪ ಹೊತ್ತಿನಲ್ಲಿ ಹೊಗೆಯೂ ಕಾಣೋಕೆ ಶುರುವಾಯಿತು. ಮೊದಲು ಬರೇ ಬೆಂಕಿ ಹೊಗೆ ಇರಲಿಲ್ಲ. ಒಂದೊಂದು ಭಾಗ ಉರಿದು ಹೋದಮೇಲೆ, ಬೆಂಕಿ ಆರಿದ ಮೆಲೆ, ಹೊಗೆ ಶುರುವಾಯಿತು ಅಲ್ಲಿ. ಧೂಮರೇಖೆ ಇಲ್ಲ ಆಕಾಶದಲ್ಲಿ. ರಾಕ್ಷಸರೂ ಮಾತನಾಡಿಕೊಳ್ತಾ ಇದ್ದಾರೆ. ಯಾರಿವನು? ವಜ್ರಧರ, ದೇವರಾಜ ಇಂದ್ರನೆ, ಸಾಕ್ಷತ್ ಯಮನೇ, ವರುಣನೇ, ರುದ್ರನೇ, ಅಗ್ನಿಯೇ, ಸೂರ್ಯನೇ ಅಥವಾ ಕುಬೇರನೇ, ಸೋಮನೇ? ವಾನರನಂತು ಅಲ್ಲ. ಸ್ವಯಂ ಕಾಲನೇ ಅಥವಾ ಸರ್ವ ಪಿತಾಮಹನಾದ ಸರ್ವಧಾತ ಅನ್ನಿಸಿಕೊಳ್ಳುವಂತಹ ಚತುರ್ಭುಜ ಬ್ರಹ್ಮನ? ಕೋಪವೇ ಅಗ್ನಿರೂಪ ತಾಳಿ ಬಂತೇ? ರಾಕ್ಷಸ ಸಂಹಾರಕವಾಗಿರತಕ್ಕಂತಹ ಭೀಕರವಾದ ಬ್ರಹ್ಮದೇವನ ಕೋಪವೇ? ಬ್ರಹ್ಮದೇವನಿಗೆ ಸಾಮಾನ್ಯವಾಗಿ ಕೋಪ ಬರುವುದಿಲ್ಲ ಅಪರೂಪಕ್ಕೊಮ್ಮೆ ಮಾತ್ರ ಆದರೆ ಬಂದರೆ ಮಹಾ ಆಪತ್ತು, ಹಾಗಾದರೇ ಈ ತೇಜಸ್ಸು? ವೈಷ್ಣವ ತೇಜಸ್ಸು. ಶ್ರೀ ವಿಷ್ಣುವಿನ ತೇಜಸ್ಸು, ಅನಂತವಾದ, ಅವ್ಯಕ್ತವಾದ, ಅಚಿಂತ್ಯವಾದ ತೇಜಸ್ಸು. ಅನಂತವಾದ ಅಂದ್ರೆ ಆ ತೇಜಸ್ಸಿಗೆ ಅಂತ್ಯವಿಲ್ಲದ. ಅವ್ಯಕ್ತವಾದ ಅಂದ್ರೆ ಅದು ಗೊತ್ತಾಗೋದಿಲ್ಲ ಮತ್ತು ಅಚಿಂತ್ಯವಾದ ಅಂದ್ರೆ ಕಲ್ಪನೆಗೆ ಮೀರಿದ್ದು. ಅಂತಹ ಶ್ರೀ ಮಹಾವಿಷ್ಣುವಿನ ತೇಜಸ್ಸು, ಏಕೈಕ ತೇಜಸ್ಸು ಜಗತ್ತಿಗೆ ಅದು ತನ್ನ ಮಾಯೆಯ ಮೂಲಕವಾಗಿ ವಾನರರೂಪವನ್ನು ತಾಳಿ ರಾಕ್ಷಸರ ಸಂಹಾರಕ್ಕಾಗಿ ಬಂತೇ ಇಲ್ಲಿಗೆ? ಹೀಗೆಲ್ಲ ರಾಕ್ಷಸರ ಗುಂಪು ಗುಂಪು ಮಾತನಾಡಿಕೊಳ್ಳುತ್ತಿದ್ದರಂತೆ.

ಏನು ಉಳಿದಿದೆ ಲಂಕೆಯಲ್ಲಿ ಅಂತಹ ಪರಿಸ್ಥಿತಿ ಬಂದಿದೆ ಅಲ್ಲಿ. ಏನೂ ಉಳಿದಿಲ್ಲ ಅಲ್ಲಿ. ಎಷ್ಟೋ ರಾಕ್ಷಸರು, ಲಂಕೆಯ ಸೈನ್ಯಗಳು, ಸೈನ್ಯದ ಪರಿಕರಗಳು ಸುಟ್ಟುಹೋಗಿದ್ದಾವೆ ಈ ಲಂಕಾದಹನದಲ್ಲಿ. ಲಂಕೆಗೆ ಲಂಕೆಯೇ ಆಕ್ರಂದಿಸಿತು. ಕೂಗಿಕೊಂಡಿತು. ನಾನಾಪ್ರಕಾರದ ಹಾಹಾಕಾರಗಳು, ಹಾ ತಾತಾ, ಅಂದ್ರೆ ಹೇ ತಂದೆಯೇ ಎನ್ನುವ ಹಾಹಾಕಾರ ಇತ್ತು. ಮಗನೇ, ವಲ್ಲಭನೇ, ಮಿತ್ರನೇ, ಭಾಗ್ಯವೇ, ಪುಣ್ಯವೇ, ಭೋಗತುಂಬಿತ ಬದುಕೇ? ಇಲ್ವಲ್ಲ ಇನ್ನು ಮುಂದೆ. ಎಂತಹ ಬದುಕಿತ್ತು ನನ್ನದು ಅದು ಇಲ್ಲಿಯವರೆಗೆ. ಹೀಗೆಲ್ಲ ರಾಕ್ಷಸರ ಆರ್ತನಾದಗಳು ಅಲ್ಲಿ ಕೇಳಿ ಬರ್ತಾ ಇದ್ವು ಅಂತಹ ಸಂದರ್ಭದಲ್ಲಿ. ಹನುಮಂತನ ಕ್ರೋಧಕ್ಕೆ ಸಿಕ್ಕಿದ ಲಂಕೆ ಶಾಪಗ್ರಸ್ತ ವಾದಂತೆ ಆಯಿತು. ಆ ಸಂದರ್ಭದಲ್ಲಿ. ಹನುಮಂತ ಮೇಲಿಂದ ನೋಡ್ತಾನೆ ಆ ದೃಶ್ಯವನ್ನು. ಎಲ್ಲ ರಾಕ್ಷಸರು ಗಾಬರಿ ಆಗಿ ಆಕಡೆ ಈಕಡೆ ಒಡ್ತಾ ಇದ್ದಾರೆ. ಭಯಗೊಂಡಿದ್ದಾರೆ, ವಿಷಣ್ಣರಾಗಿದ್ದರೆ. ಅವರ ಶರೀರದ ಮೇಲೆಲ್ಲ ಅಗ್ನಿ ಚಿಹ್ನೆ ಇದೆ. ಎಲ್ಲೋ ಸುಟ್ಟಿದೆ, ಎಲ್ಲೋ ಮಸಿ ಆಗಿದೆ. ಕೂದಲು ಬಿಚ್ಚಿ ಹರಡಿದೆ. ಕಿರೀಟ ಬಿದ್ದಿದೆ. ಬಟ್ಟೆ ಹರಿದಿದೆ ಅಥವಾ ಬಟ್ಟೆ ಸುಟ್ಟಿದೆ. ಲಂಕೆಯಂತಹ ಲಂಕೆಗೇ ಬೆಂಕಿಯ ಚಿಹ್ನೆ ಬಿದ್ದಿದೆ. ಹೀಗೆ ವನಭಂಗ ಮಾಡಿ ರಾಕ್ಷಸರನ್ನು ಸಂಹಾರ ಮಾಡಿ, ತನ್ನ ಶೌರ್ಯವನ್ನು ಪ್ರಕಟಿಸಿ, ಕೊಟ್ಟ ಕೊನೆಯಲ್ಲಿ ಲಂಕಾ ಪುರವನ್ನು ದಹಿಸಿ ನಿಂತನು ಹನುಮಂತ. ಇಷ್ಟೆಲ್ಲ ಆದಮೇಲೆ ತ್ರಿಕೂಟಪರ್ವತದ ತುಟ್ಟ ತುದಿಯಲ್ಲಿ ಸರಿಯಾಗಿ ಕುಳಿತುಕೊಂಡನಂತೆ ಗಟ್ಟಿಯಾಗಿ ಸಿಂಹಾಸನದಲ್ಲಿ ಕುಳಿತ ಹಾಗೆ. ಆ ವಾನರಸಿಂಹವು, ಕಪಿಸಿಂಹ, ಅವನ ನಡೆಗಳೂ ವಿಚಿತ್ರ. ಪರ್ವತದ ಮೇಲೆ ನೇರ ಕುಳಿತು ನೋಡಿದ ಲಂಕೆಯನ್ನು ಲಂಕೆಯ ಕಥೆ ಪೂರ್ತೀ ಮುಗಿಯಿತೋ ಇಲ್ವೋ ಅಂತ. ಆದರೆ ಒಂದು ಲೆಕ್ಕದಲ್ಲಿ ಆ ಜೀವಗಳಿಗೆಲ್ಲ ಆಶೀರ್ವಾದವೇ ಅವು. ಹನುಮಂತನ ಕೈಯಿಂದ ಯಾರು ಬದುಕುತ್ತಾರೆ, ಯಾರು ಸಾಯ್ತಾರೆ ಇಬ್ಬರಿಗೂ ಕೂಡ ಆಶೀರ್ವಾದವೇ. ನಿಗ್ರಹವೂ ಅನುಗ್ರಹವೇ, ಅನುಗ್ರಹವು ಹೇಗೂ ಅನುಗ್ರಹವೇ. ಕೂತು ಮಾಡಿದ್ದೇನು ಅಂದ್ರೆ ಕಣ್ಣುಮುಚ್ಚಿ ರಾಮನಲ್ಲಿಗೆ ಹೋದನಂತೆ. ಇದು ಒಂದು ಕಾರ್ಯಕ್ರಮ ಪದೇ ಪದೇ ಇದೆ. ಆ ಮಹಾತ್ಮನು ತನ್ನ ಅಂತಃಕರಣದಿಂದ ರಾಮನಲ್ಲಿಗೆ ಹೋಗಿ, ರಾಮಚರಣವನ್ನು ಸೇರಿ ಕೈಮುಗಿದನು. ಅವನಿಗಾಗಿ. ಅವನಿಗೇ ಸಮರ್ಪಿತ ಎನ್ನುವ ಭಾವ. ಏತನ್ಮಧ್ಯೆ ದೇವಗಣಗಳು ಸ್ತುತಿ ಮಾಡ್ತಾ ಇದ್ದಾರೆ ಹನುಮಂತನನ್ನು. ದೇವತೆಗಳು, ಋಷಿಗಳು ಗಂಧರ್ವಗಳು ಸಿದ್ಧರು ಪರಮರ್ಷಿಗಳು ಆಕಾಶದಲ್ಲಿ ಸೇರಿ ಆ ವಾಯುಸುತನನ್ನು, ಆ ವರಿಷ್ಟನನ್ನು ಆ ಮಹಾಮತಿಯನ್ನು ಆ ಮಾರುತತುಲ್ಯ ವೇಗವನ್ನು ಆ ಮಹಾಬಲನನ್ನು, ವಾನರವೀರರ ಮುಖ್ಯನನ್ನು ದೇವತೆಗಳು ಸ್ತೋತ್ರ ಮಾಡ್ತಾರೆ. ಪರಮಾಶ್ಚರ್ಯ ಆಗಿದ್ದಾರೆ, ಹೀಗೂ ಉಂಟಾ? ಅಲ್ಲಿಯವರೆಗೆ ಲಂಕೆಗೆ ಅಂಕೆ ಇರಲಿಲ್ಲ. ಕೇಳುವವರಿಲ್ಲ, ಲಂಕೆಯಿಂದ ಜಗತ್ತಿಗೇ ಅನ್ಯಾಯವಾಗ್ತಿದೆ ಆದರೆ ಲಂಕೆಯನ್ನು ಮುಟ್ಟುವವರಿಲ್ಲ. ನೋಡುವವರಿಲ್ಲ. ಆ ಕಡೆ ತಿರುಗಿ ನೋಡಲಿಕ್ಕೂ ಧೈರ್ಯ ಇಲ್ಲ ಯಾರಿಗೂ. ಆದರೆ, ಹೀಗೆ ಲಂಕೆಯನ್ನು ಪರಾಭವಗೊಳಿಸಬಹುದಾ? ಹೀಗೆ ಧ್ವಂಸಮಾಡಬಹುದಾ ಲಂಕೆಯನ್ನು ಎನ್ನುವ ಆಶ್ಚರ್ಯ ದಿವ್ಯರಿಗೆ. ಅವರಿಗೆಲ್ಲ ಸಂತೋಷವಾಯಿತಂತೆ. ಜಗತ್ತಿನ ಎಲ್ಲ ಸಾತ್ವಿಕ ಶಕ್ತಿಗಳು. ದೇವ ಗಂಧರ್ವ, ಕಿನ್ನರ ಪರಮಾರ್ಷಿಗಳು ಅತುಲ್ಯವಾದ ಪ್ರೀತಿಯನ್ನು ಅನಿರ್ವಚನೀಯವಾದ ಸಂತೋಷವನ್ನು ಇದು ಒಳ್ಳೆಯದಾಯಿತು, ಪ್ರಪಂಚಕ್ಕೆ ಒಳ್ಳೆಯದು ಇದು ಎನ್ನುವ ಭಾವವನ್ನು ಅವರೆಲ್ಲರೂ ತಾಳಿದ್ದಾರೆ. ತೃಪ್ತರಾಗಿದ್ದಾರೆ. ಹೀಗೆ ಲಂಕಾದಹನ ಕಾಂಡವೇ ನಡೆದುಹೋಗಿದೆ ಹನುಮಂತನ ಕಡೆಯಿಂದ. ಒಂದು ತೇಜಸ್ಸು. ಈ ತೇಜಸ್ಸುಗಳೆಲ್ಲವೂ ಹಾಗೆ, ನಾವು ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಂಡ್ರೆ ಬೆಳಕು, ಇಲ್ಲದಿದ್ದರೇ ಬೆಂಕಿ. ಎರಡೂ ಇದೆ ಅಲ್ಲಿ. ಸಮುದ್ರದಲ್ಲಿ ರತ್ನಗಳೂ ಇವೆ, ತಿಮಿಂಗಿಲ, ಮೊಸಳೆಗಳು ಕ್ರೂರವಾಗಿರತಕ್ಕಂತಹ ಜಲಚರಗಳೂ ಇವೆ. ಹಾಗೇ ಈ ದಿವ್ಯಶಕ್ತಿಗಳು ಒಲಿಸಿಕೊಂಡರೆ ಬೆಳಕು, ಅವು ಮುನಿಸಿಕೊಂಡರೆ ಬೆಂಕಿ. ಲಂಕೆಗೆ ಪ್ರತ್ಯಕ್ಷ ಅನುಭವ ಇದು.

ಹನುಮಂತನ ಮೇಲೆ ಕೈಮಾಡಿ, ಅವನಿಗೆ ಅವಮಾನ ಮಾಡಲು ಹೋಗಿ, ಬಾಲಕ್ಕೆ ಬೆಂಕಿ ಹಚ್ಚಿ, ಮೆರವಣಿಗೆ ಮಾಡಿದರು. ಇದೆಲ್ಲ ಮಾಡಲಿಕ್ಕೆ ಹೋಗಿ ಪರಿಣಾಮ ಏನು ಅಂದ್ರೆ, ಇವರು ಅವನ ಬಾಲಕ್ಕೆ ಹಚ್ಚಿದ ಬೆಂಕಿಯಿಂದಲೇ ಹನುಮಂತ ಲಂಕೆಯನ್ನೇ ಸುಡುತ್ತಾನೆ. ಕರ್ಮಕ್ಕೆ ಫಲ ಬರುವುದು ಅಂದ್ರೆ ಹೀಗೆ. ಹನುಮಂತನದ್ದು ತಡವೇ ಇಲ್ಲ. ಈಗಲೇ ಫಲ. ನೀವು ಅವನ ಸೇವೆ ಮಾಡಿದ್ರೂ ಹೀಗೆ. ಅವನ ಪೂಜೆ ಮಾಡಿದ್ರೆ, ಸೇವೆ ಮಾಡಿದ್ರೆ, ಭಕ್ತಿ ಮಾಡಿದ್ರೆ ಆಗಲೆ ಫಲ. ತೆಗೆದುಕೊಂಡು ಹೋಗು. ರಾಮನಿಗೆ ಅವಮಾನ ಮಾಡಿದ್ರೆ ಅಥವಾ ಅಪಚಾರವನ್ನು ಎಸಗಿದ್ರೆ ಆ ಕ್ಷಣಕ್ಕೇ ಫಲ. ಪಾಪವಾಗಲಿ ಪುಣ್ಯವಾಗಲಿ ಅತ್ಯುತ್ಕಟವಾಗಿದ್ರೆ ಕೂಡಲೇ ಫಲ ಬರ್ತದೆ. ಸಣ್ಣ ಪುಟ್ಟ ಪಾಪಕ್ಕೆ ಪುಣ್ಯಕ್ಕೆ ನಿಧಾನಕ್ಕೆ ಫಲ ಬರ್ತದಂತೆ. ಸಣ್ಣ ಪೂಜೆ ಮಾಡಿಕೊಂಡು ಹೀಗ್ಯಾಕ್ಕಾಗಿಲ್ಲ ಇದ್ಯಾಕ್ಕಾಗಿಲ್ಲ ಅಂತ ಅಂದುಕೋತೆವೆ. ಸುಡಿ ಹನುಮಂತನ ಬಾಲವನ್ನ ಅನ್ನುವವನ ಮನೆ ಸುಟ್ಟು ಹೋಯಿತು. ಯಾರು ಅದು? ರಾವಣ. ಯಾರು ಬೆಂಕಿ ಕೊಟ್ಟಿದ್ರೋ ಅವರ ಮನೆಯೂ ಸುಟ್ಟು ಹೋಯಿತು. ಯಾರು ನೋಡಿ ಸಂತೋಷ ಪಟ್ಟಿದ್ರೋ ಅವರ ಮನೆಗಳೂ ಸುಟ್ಟವು. ಕೆಲವರು ಅವರೇ ಸುಟ್ಟು ಹೋದರು. ಕ್ಷಿಪ್ರ ಫಲ. ಮಾಡಿದ ಪಾಪಕ್ಕೆ ಫಲ. ಇದು ಆಯ್ತು.

ಪೂರ್ತಿ ಲಂಕೆ ಸುಟ್ಟಿತು ಅಂತ ಹನುಮಂತನಿಗೆ ಸಮಾಧಾನ ಆದಮೇಲೆ ಸಮುದ್ರಕ್ಕೆ ಹೋಗಿ ಬಾಲವನ್ನ ಸಮುದ್ರದಲ್ಲಿ ಅದ್ದಿದನಂತೆ. ಲಂಕೆಯಲ್ಲೇ ಬೇಕಾದಷ್ಟು ನದಿಗಳು ಸರೋವರಗಳು ಇದ್ವು ಇಲ್ಲ ಅಂತಿಲ್ಲ. ಆದರೆ ಅದು ಯಾವವೂ ಸರಿಯಾದ ಪರಿಸ್ಥಿತಿಯಲ್ಲಿ ಇಲ್ಲ. ಯಾಕೆಂದ್ರೆ ಅದೆಲ್ಲ ಕುದಿ ಕುದಿಯಾಗಿರಬಹುದು ಅಥವಾ ಆರಿ ಹೋಗಿರಬಹುದು. ಸಮಸ್ತ ಲಂಕೆಯನ್ನು ದಹನ ಮಾಡಿದ ಬಳಿಕ, ಆ ಮಹಾಬಲನು ಬಾಲದ ಬೆಂಕಿಯನ್ನು ಸಮುದ್ರದಲ್ಲಿ ಅದ್ದಿ ಅದನ್ನು ಆರಿಸಿದನು. ಬಳಿಕ ಮತ್ತೊಮ್ಮೆ ಲಂಕೆಯನ್ನು ನೋಡ್ತಾನೆ. ಉರಿದು ಹೋಗಿದೆ ಇನ್ನೂ ಉರೀತಾ ಇದೆ. ವಿಧ್ವಸ್ತವಾಗಿ ಹೋಗಿದೆ ಲಂಕೆ. ಭಯಗೊಂಡ ರಾಕ್ಷಸರು ಅಲ್ಲಲ್ಲಿ ಕಾಣ್ತಾ ಇದ್ದಾರೆ. ಇದ್ದಕ್ಕಿದ್ದಂತೆ ಏನೋ ನೆನಪಾಯಿತಂತೆ ಹನುಮಂತನಿಗೆ. ಆ ನೆನಪಾಗುತ್ತಿದ್ದಂತೆ ಬಹು ದೊಡ್ದ ಭಯ ಉಂಟಾಯಿತು ಅವನಿಗೆ. ಸಣ್ಣಪುಟ್ಟ ಭಯ ಅಲ್ಲ. ಹನುಮಂತನಿಗೂ ಭಯಕ್ಕೂ ಸಂಬಂಧವಿಲ್ಲ ಆದರೆ ಈಗ ಮಾತ್ರ ಬಹಳ ದೊಡ್ಡ ಭಯ ಉಂಟಾಯಿತು. ತನ್ನ ಮೇಲೆ ತನಗೆ ಜಿಗುಪ್ಸೆ ಆಯಿತು. ಲಂಕೆಯನ್ನು ಸುಡಲು ಹೋಗಿ ಇದು ಏನು ಮಾಡಿದೆ ನಾನು. ಎಂತಹ ಕೆಲಸ ಮಾಡಿಬಿಟ್ಟೆ ನಾನು. ಅವರೇ ಪುರುಷಶ್ರೇಷ್ಠರು, ಅವರೇ ಧನ್ಯರು! ಯಾರು? ಯಾರು ಉಕ್ಕಿಬಂದ ಕೋಪವನ್ನು ನಿಗ್ರಹಿಸಿಕೊಳ್ತಾರೋ, ಯಾರು ಕೋಪವನ್ನು ನಿಯಂತ್ರಣ ಮಾಡ್ತಾರೋ. ಸುಡುವ ಬೆಂಕಿಗೆ ನೀರೆರಚಿದ ಹಾಗೆ, ತನ್ನಲ್ಲಿ ಉಕ್ಕಿ ಬರುವ ಕೋಪವನ್ನು ತಣ್ಣಗೆ ಮಾಡ್ತಾರೋ, ಸಮಾಧಾನವಾಗಿ ಇರ್ತಾರೋ, ಅವರೇ ಧನ್ಯರು ಅವರು ಪುರುಷಶ್ರೇಷ್ಠರು. ಯಾಕೆಂದ್ರೆ ಕೋಪವು ಪಾಪವನ್ನು ಮಾಡ್ತದೆ. ಕ್ರುದ್ಧನಾದವನು ಪಾಪ ಮಾಡ್ತಾನೆ. ಕ್ರುದ್ಧನಾದವನು ಗುರುಗಳನ್ನೇ ಕೊಲ್ತಾನೆ. ಕ್ರುದ್ಧನಾದವನು ಗುರುಗಳ ಮೇಲೆ ಕೈ ಮಾಡ್ತಾನೆ. ಕ್ರುದ್ಧನಾದವನು ಸತ್ಪುರುಷರಿಗೆ ಕೆಟ್ಟ ಕೆಟ್ಟ ಮಾತುಗಳನ್ನು ಆಡ್ತಾನೆ. ಸಿಟ್ಟು ಬಂತು ಅಂದ್ರೆ ಯಾವ ಮಾತನ್ನು ಆಡಬೇಕು, ಯಾವ ಮಾತನ್ನು ಆಡಬಾರದು ವ್ಯತ್ಯಾಸವಿರುವುದಿಲ್ಲ. ಅಕಾರ್ಯವೂ ಇರುವುದಿಲ್ಲ ಅವಾಚ್ಯವೂ ಇರೋದಿಲ್ಲ. ಸರ್ಪವು ಪೊರೆ ಬಿಡುವ ಹಾಗೆ ಉಕ್ಕಿ ಬಂದ ಕ್ರೊಧವನ್ನು ಯಾರು ಬಿಡಬಲ್ಲನೋ ಅವನು ಮನುಷ್ಯ ಅಲ್ಲದೇ ನಾನಲ್ಲ. ಎಂತವನು ನಾನು? ಧಿಕ್ಕಾರ ನನಗೆ. ಹನುಮಂತ ಅಂದುಕೊಳ್ಳುತ್ತಾನೆ. ನನಗೆ ಧಿಕ್ಕಾರವಿರಲಿ. ಸುದುರ್ಬುದ್ಧಿ ನಾನು, ನಿರ್ಲಜ್ಜ ನಾನು. ನನ್ನಂತಹ ಪಾಪಿ ಯಾರು?

ಜಗತ್ತಿನಲ್ಲಿ ಎಲ್ಲಾ ಪಾಪಿಗಳಿಗಿಂತ ದೊಡ್ಡ ಪಾಪಿ ನಾನೇ. ಸ್ವಾಮಿದ್ರೋಹಿ, ಸ್ವಾಮಿ ಘಾತಕ ನಾನು. ಒಂದು ಸ್ವಲ್ಪವೂ ಆಲೋಚಿಸದೇ ಸೀತೆಗೂ ಬೆಂಕಿಕೊಟ್ಟೆನಲ್ಲಾ… ರಾವಣನ ಮನೆಗೆ ಬೆಂಕಿ ಕೊಡುವಾಗ ಪಕ್ಕದಲ್ಲೇ ಇದ್ದ ಅಶೋಕವನಕ್ಕೂ ತಾಗಿರಬಹುದೇ…? ರಾವಣನ ಮೇಲೆ ಸಿಟ್ಟು ಬಂದಿತು, ಹೋಗಿ ಬೆಂಕಿ ಕೊಟ್ಟೆ. ರಾವಣನ ಮನೆ ಮೇಲೆ ಬೆಂಕಿ ಇಡುವಾಗ ಅಲ್ಲಿಯೇ ಸೀತೆ ಇದಾಳೆ ಅಂತ ನೆನಪಾಗಬೇಕೋ ಬೇಡವೋ ನನಗೆ… ಇನ್ನೊಮ್ಮೆ ಲಂಕೆಯನ್ನು ನೋಡ್ತಾನೆ. ಇಡೀ ಲಂಕೆಗೆ ಲಂಕೆ ಸುಟ್ಟು ಹೋಗಿದೆ. ಯಾವ ಕಡೆ ನೋಡಿದರೂ ಬೆಂಕಿ, ಯಾವ ಕಡೆ ನೋಡಿದರೂ ಕೆಂಡ. ಅವಳು ಸತ್ತೇ ಹೋಗಿರಬೇಕು. ಇಷ್ಟು ದೊಡ್ಡ ಕಾರ್ಯವನ್ನು ಹಾಳುಮಾಡಿದ ಮೇಲೆ ನನ್ನಂಥವರಿಗೆ ಬದುಕುವ ಹಕ್ಕಿಲ್ಲ. ನನ್ನ ಕಾರಣದಿಂದಲಾಗಿ ಸೀತೆ ಸತ್ತೇ ಹೋಗಿದ್ದು ಹೌದು ಅಂತಾದರೆ, ನಾನು ಪ್ರಾಣ ಬಿಡುತ್ತೇನೆ. ಏನು ಮಾಡಲಿ, ಇದೇ ಲಂಕೆಯ ಬೆಂಕಿಯಲ್ಲಿ ಪ್ರಾಣ ಬಿಡಲಾ… ಅಥವಾ ಸಮುದ್ರದ ಆಳದ ಬಡಬಾಗ್ನಿಯನ್ನು ಪ್ರವೇಶ ಮಾಡಲಾ ಅಥವಾ ಸಮುದ್ರದ ಜಲಚರಗಳಾದ ತಿಮಿಂಗಲಗಳಂಥ ಕ್ರೂರ ಮೃಗಗಳಿಗೆ ಶರೀರವನ್ನು ಕೊಡಲಾ, ಬದುಕಿರುತ್ತ ಹೋಗಿ ನಾನು ಸುಗ್ರೀವನನ್ನು ನೋಡಲಾರೆ, ರಾಮ-ಲಕ್ಷ್ಮಣರನ್ನು ಕಾಣಲಾರೆ. ಯಾಕೆಂದರೆ ನಾನು ಕಾರ್ಯಸರ್ವಸ್ವಘಾತಿ. ಮಂಗತನವೇನೆಂದು ತೋರಿಸಿದ ಹಾಗಾಯಿತು ಪ್ರಪಂಚಕ್ಕೆ. ಮೂರು ಲೋಕದಲ್ಲಿ ಮರ್ಕಟ ಬುದ್ಧಿ ಕುಪ್ರಸಿದ್ಧ. ನಾನು ಅದಕ್ಕೆ ಉದಾಹರಣೆಯಾದೆನಾ ಮಂಗ ಬುದ್ಧಿಗೆ. ರಜೋ ಗುಣಕ್ಕೆ ಧಿಕ್ಕಾರ, ಯಾಕೆಂದರೆ ಕೋಪ ರಜೋಗುಣದಿಂದ ಬರುತ್ತದೆ. ಅಶೋಕ ವನವನ್ನು ಧ್ವಂಸ ಮಾಡುವಾಗ ಸೀತೆ ಇರುವ ಜಾಗವನ್ನು ಬಿಡಲಿಲ್ಲವಾ, ಹಾಗೆ ಸೀತೆಯನ್ನು ಉಳಿಸುವುದು ಕಷ್ಟವೇನೂ ಇರಲಿಲ್ಲ, ಹಾಗೇ ಉಳಿಸಬಹುದಿತ್ತು ಅಲ್ಲವಾ. ಸೀತೆಯು ಸುಟ್ಟುಹೋಗಿದ್ದು ಹೌದು ಅಂತಾದರೆ ರಾಮಲಕ್ಷ್ಮಣರು ದೇಹತ್ಯಾಗ ಮಾಡುತ್ತಾರೆ. ಸುಗ್ರೀವ ಉಳಿಯುವುದಿಲ್ಲ, ಸುಗ್ರೀವನು ಕೂಡ ಪ್ರಾಣವನ್ನು ಬಿಡುತ್ತಾನೆ. ಕಪಿ ಕೋಟಿಗಳು ಸುಗ್ರೀವನನ್ನು ಅನುಸರಿಸುತ್ತಾರೆ. ಅತ್ತ ಭರತನು ಪ್ರಾಣ ತ್ಯಾಗವನ್ನು ಮಾಡುತ್ತಾನೆ. ಶತ್ರುಘ್ನ, ಸುಮಿತ್ರಾ, ಕೈಕೇಯಿ ಪ್ರಾಣತ್ಯಾಗ ಮಾಡುತ್ತಾರೆ. ಅಯೋಧ್ಯ ಕಿಷ್ಕಿಂಧೆಯಲ್ಲಿ ಶವಗಳು ಹರಡುತ್ತವೆ. ಮೃತ್ಯುತಾಂಡವವಾಡ್ತದೆ. ಇಕ್ಷ್ವಾಕುವಂಶ ನಾಶವಾದ ಮೇಲೆ ಪ್ರಜೆಗಳು ಬದುಕಿರ್ತಾರಾ… ಭಾಗ್ಯಹೀನ ನಾನು.. ಒಂದು ದುಡುಕಿನಲ್ಲಿ ಎಲ್ಲವನ್ನು ಕಳೆದುಕೊಂಡೆನಾ… ಲೋಕಕಂಟಕನಾದೆ. ಸಂಕಟ ಮಾಲಿಕೆಗೆ ನಾನೇ ಕಾರಣನಾದೆನಲ್ಲಾ….! ಎಂದು ವ್ಯಥೆಪಟ್ಟನು ಹನುಮ.

ಆಗ ಹನುಮನನ್ನು ಸಂತೋಷಗೊಳಿಸಲಿಕ್ಕೆ ಶುಭ ನಿಮಿತ್ತಗಳು ಉಂಟಾದವು. ಆಗ ಹನುಮನಿಗೆ ಬೇರೆ ಯೋಚನೆಗಳು ಉಂಟಾದವು. ಸೀತೆಗೆ ಬೆಂಕಿ ತಾಗಿರದಿರಬಹುದು ಎಂದು. ಶುಭಶಕುನಗಳು ಯಾಕೆ ಆಗುತ್ತದೆ ಸೀತೆಗೆ ಬೆಂಕಿ ತಾಗಿರದಿರಬಹುದಲ್ಲವೇ…? ಆ ಸರ್ವಾಂಗಸುಂದರಿ ತನ್ನ ಪಾತಿವ್ರತ್ಯದಿಂದ, ತೇಜಸ್ಸಿನಿಂದ ಉಳಿದಿರಬಹುದಲ್ಲವೇ… ಇದಕ್ಕೆ ಅತಿ ವಿಚಿತ್ರವಾದ ತರ್ಕವನ್ನು ಕೊಡ್ತಾನೆ ಹನುಮಂತ. “ಅಗ್ನಿಯು ಅಗ್ನಿಯನ್ನು ಸುಡಲಾಗದು”. ಸೀತೆ ಅಂದರೆ ಅಗ್ನಿಯಂತೆ ಹನುಮಂತನ ವಿಶ್ವಾಸ. ಯಾರವಳು ರಾಮನ ಪತ್ನಿ, ಅವಳು ಜಗನ್ನಾಥ, ಧರ್ಮಾತ್ಮನ ಪತ್ನಿ. ಅವಳನ್ನು ಮುಟ್ಟುವ ಧೈರ್ಯ ಅಗ್ನಿ ಇದೆಯಾ…? ಅವಳ ಸಚ್ಚಾರಿತ್ರ್ಯ, ಪಾತಿವ್ರತ್ಯ ಅವಳನ್ನು ಸದಾ ಕಾಯುತ್ತಿರುತ್ತದೆ. ಆಮೇಲೆ ಹನುಮನಿಗೆ ತನ್ನ ಬಾಲದ ನೆನಪಾಯಿತು. ಇಷ್ಟು ಹೊತ್ತು ಕೆಲಸ ಮಾಡಿದ್ದೇನೆ, ನನ್ನ ಬಾಲ ಸುಟ್ಟಿಲ್ಲವಲ್ಲ ಎಂದು. ನನ್ನ ಬಾಲವನ್ನು ಸುಡದಿದ್ದ ಮೇಲೆ ಸೀತೆಯನ್ನು ಹೇಗೆ ಸುಟ್ಟಿತು ಅಗ್ನಿ! ಹನುಮಂತನ ಭಾವವನ್ನು ನೋಡಿ, ರಾಮನ ಪ್ರಭಾವದಿಂದ ಅಥವಾ ಸೀತೆಯ ಪುಣ್ಯದಿಂದ ಬೆಂಕಿ ನನ್ನನ್ನು ಸುಡಲಿಲ್ಲ. ತನ್ನ ಸಂಸರ್ಗಕ್ಕೆ ಬಂದದ್ದೆಲ್ಲವನ್ನೂ ಸುಡುವುದು ಅಗ್ನಿ. ಅಂತದ್ದರಲ್ಲಿ ನನ್ನ ಬಾಲವನ್ನು ಸುಡಲಿಲ್ಲವಲ್ಲ ಎಂದು ತಾನು ಕುಳಿತಲ್ಲಿಂದಲೇ ಆಲೋಚನೆ ಮಾಡಿದನು ಹನುಮಂತ. ರಾಮನ ಕಾಂತೆಗೆ ಅವಳಿಗೆ ಏನು ಆಗೋದಿಲ್ಲ, ಆಗೋದೇ ಇಲ್ಲ….

ಕೊಟ್ಟ ಕೊನೆಯದಾಗಿ ಒಂದು ಅಭಿಪ್ರಾಯಕ್ಕೆ ಬಂದನು ಹನುಮ. ತಪಸ್ಸು, ಸತ್ಯವಾಕ್ಯ, ರಾಮನಲ್ಲಿ ಅನನ್ಯತೆ ಈ ಮೂರು ಕಾರಣಗಳಿಂದ ಸೀತೆಯೇ ಅಗ್ನಿಯನ್ನು ಸುಟ್ಟಿರಬಹುದು. ಅಗ್ನಿ ಅವಳನ್ನು ಸುಡಲಾಗದು. ಅವಳೇ ಅಗ್ನಿಯನ್ನು ಸುಟ್ಟಿರಬಹುದು. ಈ ವಿಷಯ ಹನುಮಂತನಿಗೇ ಗೊತ್ತಿದ್ದ ಮೇಲೆ ರಾಮನಿಗೂ ಗೊತ್ತಿರುತ್ತೆ ಅಲ್ಲವಾ…? ಹನುಮಂತ ನೋಡಿದ್ದೆಷ್ಟು ಸೀತೆಯನ್ನು? ಒಂದು ಬೆಳಗಿನಜಾವ ಸ್ವಲ್ಪ ಹೊತ್ತು ಮಾತ್ರ. ಅಷ್ಟರಲ್ಲಿ ಹನುಮಂತನ ಅಭಿಪ್ರಾಯ ಏನು ಎಂದರೆ, ಸೀತೆಯೇ ಬೆಂಕಿಯನ್ನು ಸುಟ್ಟಾಳು… ಬೆಂಕಿ ಅವಳನ್ನು ಸುಡದು. ಅಂದರೆ ರಾಮನಿಗೆ ವಿಶ್ವಾಸ ಇರಲೇಬೇಕಲ್ಲವಾ…? ಇಷ್ಟು ಗೊತ್ತಿದ್ದರೆ ನಮಗೆ ಮುಂದೆ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.. ಅಷ್ಟು ಹೊತ್ತಿಗೆ ಚಾರಣರು ಆಕಾಶದಲ್ಲಿ ಮಾತನಾಡಿಕೊಂಡರು, ಎಂತ ಕೆಲಸ ಹನುಮಂತನದ್ದು, ಯಾರೂ ಮಾಡಲಿಕ್ಕೆ ಸಾಧ್ಯವಿಲ್ಲ. ರಾಕ್ಷಸರ ಎಲ್ಲರನ್ನು ಆಕ್ರಂದನಕ್ಕೆ ಒಳಮಾಡಿದನಲ್ಲ…!? ಇದಕ್ಕಿಂತ ದೊಡ್ಡ ಆಶ್ಚರ್ಯ, ಇಡೀ ಲಂಕೆಯ ಪ್ರಾಕಾರ, ತೋರಣ ಎಲ್ಲವೂ ಸುಟ್ಟುಹೋಗಿದೆ. ಆದರೆ ಸೀತೆಗೆ ಏನು ಆಗಲಿಲ್ಲವಲ್ಲ! ಚಾರಣರ ಮಾತು ಹನುಮಂತನಿಗೆ ಕೇಳಿದ್ದು. ಆಗ ಪೂರ್ತಿ ತಂಪಾದ, ಹೃದಯ ತಂಪಾಯ್ತು ಹನುಮಂತನಿಗೆ. ಹನುಮನ ಪಾಲಿಗೆ ಆ ಮಾತು ಅಮೃತವನ್ನು ಎರೆದಂತೆ ಇತ್ತು. ಆ ಹೊತ್ತಿನಲ್ಲಿ ಉಂಟಾದ ಸಂತೋಷಕ್ಕೆ ಪಾರವೇ ಇಲ್ಲ. ನಿಮಿತ್ತಗಳು ಹಾಗೂ ತರ್ಕಗಳು, ಋಷಿ ವಾಕ್ಯಗಳು ಇಷ್ಟರಿಂದ ಸಂತೋಷಪಟ್ಟನು ಹನುಮಂತ. ಆದರೆ ಸಂಪೂರ್ಣ ಸಮಾಧಾನವಾಗಲಿಲ್ಲವಂತೆ. ಯಾಕೆ? ಸೀತೆಗೆ ಏನೇನು ಆಗಲಿಲ್ಲ ಎಂಬುದು ಗೊತ್ತಾಗಿದೆ. ಆದರೂ ತೃಪ್ತಿ ಆಗಬೇಕೆಂದರೆ ಇನ್ನೊಂದು ಕೆಲಸ ಮಾಡಬೇಕಾಗಿದೆಯಂತೆ ಹನುಮನಿಗೆ ಲಂಕೆಯಲ್ಲಿ. ಏನದು ಎಂದು ಮುಂದಿನ ಪ್ರವಚನದಲ್ಲಿ ಕೇಳೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments