“ಈ ಶ್ಲೋಕವನ್ನು ಕೇಳದವರು ಯಾರು?

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೇವಮಾಹ್ನಿಕಮ್ ||”

ಗುರು ವಿಶ್ವಾಮಿತ್ರರು, ಪ್ರಭು ~ ಮಗು ಶ್ರೀರಾಮನನ್ನು ಉತ್ಥಾನಗೊಳಿಸಲು ಮಾಡಿದ ಸುಪ್ರಭಾತವಿದು. ಜೀವಮಾನದಲ್ಲಿ ಮೊದಲ ಬಾರಿಗೆ ಎಲೆಯ ಹಾಸಿಗೆಯಲ್ಲಿ ಮಲಗಿರುವ ರಾಮನನ್ನು ಬೆಳಗಿನ ಜಾವ ಎಬ್ಬಿಸ್ತಾರೆ ವಿಶ್ವಾಮಿತ್ರರು..

ಶ್ಲೋಕದ ಸರಳಾರ್ಥ ಹೀಗೆ:
ಹೇ ರಾಮ, ಕೌಸಲ್ಯೆಯ ತಾಯ್ತನವನ್ನು ಸಾರ್ಥಿಕಗೊಳಿಸಿದ ಮಗ; ತ್ರಿಸಂಧ್ಯೆಗಳಲ್ಲಿ ಮೊದಲ ಸಂಧ್ಯೆಯು ಏರ್ಪಡ್ತಾ ಇದೆ. ಬೆಳಗಾಗ್ತಾ ಇದೆ. ಎದ್ದೇಳು, ನರವ್ಯಾಘ್ರನೇ, ಎದ್ದೇಳು, ದೇವ ಸಂಬಂಧಿಯಾದ ಆಹ್ನಿಕವು ನಿನಗೀಗ ಕರ್ತವ್ಯವಾಗಿದೆ‌.
ಹಾಗಾಗಿ ‘ಏಳು ರಾಮ’ ಎನ್ನುವುದು ಸರಳಾರ್ಥ.
ರಾಮನ ಜೀವನದಲ್ಲಿ ಕೂಡ ರಾತ್ರಿ ಕಳೆದು ಬೆಳಗಾಗ್ತಾ ಇದೆ, ಅಂದರೆ ‘ಬಾಲ್ಯ’ ಅಂತ, ಈ ಬೆಳಕು ‘ಬಾಲ್ಯ’!

‘ಪೂರ್ವಾ ಸಂಧ್ಯಾ ಪ್ರವರ್ತತೇ’ ~ ರಾಮನ ಬಾಲ್ಯದ ಅನುಸಂಧಾನ ಇದೆ ಅಲ್ಲಿ! ಜ್ಞಾನ ಹೆಚ್ಚಾಗ್ತಾ ಹೋಗುವಂತ ಸಮಯ ಅದು.
ವಿದ್ಯಾಕಾಲವದು. ಅರಿವನ್ನು ದಿನೇ ದಿನೇ ಕ್ಷಣ ಕ್ಷಣ ವೃದ್ಧಿಸಿಕೊಂಡು ಹೋಗಬೇಕು‌ ನಾವು ಮಧ್ಯಾಹ್ನ (ಯೌವ್ವನ) ಬರೋವರೆಗೆ.

ನರಶಾರ್ದೂಲ ಶಬ್ದ ರಾಮನನ್ನು ಬಿಟ್ಟು ಮತ್ಯಾರಿಗೆ ಹೋಲುವಂಥದ್ದು! ಈ ವ್ಯಾಘ್ರ (ಶಾರ್ದೂಲ) ಶಬ್ದ ಶ್ರೇಷ್ಠ ಅರ್ಥದಲ್ಲಿದೆ.
ಶ್ರೇಷ್ಠತ್ವ ರಾಮನಿಗೆ ತುಂಬಾ ಸಹಜವಾಗಿ ಇರತಕ್ಕಂತದ್ದು. ರಾಮನ ರಾಮತ್ವ ಜಾಗೃತವಾಗಬೇಕು, ಅದೇ ವಿಷಯ! ನಿನಗೆ ದೇವಸಂಬಂಧೀ ಕರ್ತವ್ಯವಿದೆ. ಹಾಗಾಗಿ ಏಳು..

ವಿಶ್ವವಿದ್ಯಾಪೀಠಕ್ಕೆ ಇದು ಧ್ಯೇಯಶ್ಲೋಕ ಆಗಬಲ್ಲಂತದ್ದು.. ಇವತ್ತಿನ ಕಾಲಕ್ಕೆ!

ವಿಶ್ವವಿದ್ಯಾಪೀಠದ ಮೂಲೋದ್ದೇಶ : ‘ಕೌಸಲ್ಯಾ ಸುಪ್ರಜಾಃ’ – ಇಂತವರು (ಸುಪ್ರಜೆಗಳು) ಸಿದ್ಧರಾಗಬೇಕು! ತಾಯಿಗೆ ಮಗ ಮಾತ್ರವಲ್ಲ, ದೇಶಕ್ಕೂ ಮಗನೇ. ಅವನು ದೇಶದ ಸತ್ಪ್ರಜೆಯಾಗಬೇಕು. ಆ ಅಮ್ಮನಿಗೆ ಪ್ರಸವ ವೇದನೆ ಸಾರ್ಥಕ ಅಂತನಿಸಬೇಕು. ಅಂತಹ, ರಾಮನಂತಹ ಮಕ್ಕಳನ್ನು ನಾವು ಬೆಳೆಸಬೇಕಾಗ್ತದೆ ವಿಶ್ವವಿದ್ಯಾಪೀಠದಲ್ಲಿ. ದೇಶಕ್ಕೆ ಈಗ ರಾತ್ರಿ ಕಳೆದು ಬೆಳಗಾಗುವ ಕಾಲ ಬಂದಿದೆ. ಭಾರತ ಬೆಳಕಾಗುವ ಕಾಲ ಬಂದಿದೆ. ಈ ಸಮಯದಲ್ಲಿ ಒಂದೊಂದು ಮಗುವೂ ಭಾರತನಾಗಬೇಕು, ಭಾರತ ಬಾಂದಳದಲ್ಲಿ ಭಾಸ್ಕರನಾಗಿ ಉದಯಿಸಬೇಕು ಅಂದರೆ ಅಷ್ಟು ಬೆಳಕನ್ನ, ವಿದ್ಯೆಯನ್ನು, ಜ್ಞಾನವನ್ನು ಪಡೆಯಬೇಕು. ಪ್ರತಿಯೊಬ್ಬನೂ ನರವ್ಯಾಘ್ರನೇ.
ಹಾಗಾಗಿ,
ವಿಶ್ವವಿದ್ಯಾಪೀಠ ಮಾಡಬೇಕಾದ ಕಾರ್ಯವೇನೆಂದರೆ, ನರನೊಳಗಿನ ಸಿಂಹತ್ವವನ್ನ ಜಾಗೃತಗೊಳಿಸಬೇಕು, ಅವನನ್ನು ಎಬ್ಬಿಸಬೇಕು, ಸುಪ್ತವಾಗಿರುವ ಅವನೊಳಗಿನ ಜ್ಞಾನವನ್ನು ಜಾಗೃತಗೊಳಿಸಬೇಕು‌ ಮತ್ತು ಕರ್ತವ್ಯಕ್ಕೆ ತೊಡಗಿಸಬೇಕು!
ಇದು #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ದ ಮೂಲೋದ್ದೇಶ.

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments