ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ರಾಮಾಯಣದಲ್ಲಿ ಧರ್ಮಯುದ್ದವನ್ನು ನಿರೂಪಿಸುವ ಕಾಂಡವೇ ಯುದ್ಧಕಾಂಡ. ಯುದ್ಧ ಎಲ್ಲಿ? ಎಂದರೆ ಎರಡು ಪಕ್ಷಗಳಿರುವಲ್ಲಿ. ಒಳಿತು ಮತ್ತು ಕೆಡುಕುಗಳು ಎರಡು ಪಕ್ಷಗಳು. ಒಳಿತು ಕೆಡುಕುಗಳು ಸೃಷ್ಟಿ ಆದಾಗಿನಿಂದ ಇದೆ. ಸೃಷ್ಟಿಯಲ್ಲಿ ಒಳಿತು ಮತ್ತು ಕೆಡುಕು ಎರಡು ಇದೆ. ಎರಡು ಸೇರಿದಾಗ ಮಾತ್ರ ಸೃಷ್ಟಿ. ಕೇವಲ ಒಳಿತು ಮುಕ್ತಿ/ ಕೇವಲ ಕೆಡುಕು ಇರಲು ಸಾಧ್ಯವಿಲ್ಲ. ನರಕವೆಂದರೇ ತುಂಬಾ ಕೇಡು ನೋವುಗಳಿಂದ ಕೂಡಿದ ಲೋಕ. ಆದರೆ ಅದರಲ್ಲಿಯು ಒಳಿತಿನ ಅಂಶ ಸೇರಿದೆ. ನರಕ ಪಾಪವನ್ನು ಕ್ಷಯಗೊಳಿಸುತ್ತದೆ. ಅಧರ್ಮವೇ ಇಲ್ಲದಿದ್ದರೆ ರಾಮನು ಭೂಮಿಗೆ ಬರುವ ಪ್ರಮೇಯವೇ ಇಲ್ಲವಾಗಿತ್ತು. ನಮಗೆ ರಾಮಾಯಣ ಸಿಗುತ್ತಿರಲಿಲ್ಲ. ರಾವಣನೊಬ್ಬ ಇಲ್ಲದಿದ್ದರೆ ರಾಮನಾಗಲಿ, ರಾಮಾಯಣವಾಗಲಿ, ರಾಮತಾರಕ ಮಂತ್ರವಾಗಲಿ ಸಿಗಲು ಸಾಧ್ಯವಿರಲಿಲ್ಲ.

ಧರ್ಮ ಮತ್ತು ಅಧರ್ಮ ಸೃಷ್ಟಿಯ 2 ಭಾಗ. ಸೃಷ್ಟಿ ಆದಾಗಿನಿಂದ ಧರ್ಮ ಮತ್ತು ಅಧರ್ಮಗಳ ನಡುವೆ ಯುದ್ಧ ನಡೆಯುತ್ತಾ ಬಂದಿದೆ. ಕೆಲವೊಮ್ಮೆ ಪ್ರಕಟವಾಗಿ, ಕೆಲವೊಮ್ಮೆ ಗೌಪ್ಯವಾಗಿ, ಕೆಲವೊಮ್ಮೆ ಯುದ್ಧ ಸಿದ್ಧತೆ, ಕೆಲವೊಮ್ಮೆ ಯುದ್ಧವೇ ನಡೆದಿದೆ. ರಾಮಾಯಣದ ಯುದ್ಧಕಾಂಡ ತುಂಬಾ ಸ್ವಾರಸ್ಯಕರವಾಗಿದೆ. ಯುದ್ಧ ಕಾಂಡವು ಆರಂಭವಾಗುವುದು ಅದ್ವೈತದಲ್ಲಿ! ಯುದ್ಧಕಾಂಡವು ಆಲಿಂಗನದಲ್ಲಿ ಆರಂಭವಾಗಿ, ಸಾಮರಸ್ಯದಲ್ಲಿ ಮುಕ್ತಾಯವಾಗುತ್ತದೆ. ಸಮೃದ್ಧ, ಸತ್ಯನಿಷ್ಠ ಸಮಾಜದ ರಚನೆಯಲ್ಲಿ ಯುದ್ಧ ಕಾಂಡವು ಪರ್ಯಾವಸನವಾಗುತ್ತದೆ. ಯುದ್ಧ ಕಾಂಡದ ಉದ್ದಕ್ಕೂ ಇರುವುದು ಅದ್ವೈತ ಮತ್ತು ಸಾಮರಸ್ಯವೇ. ಹನುಮಂತನು ದಕ್ಷಿಣ ದಿಕ್ಕಿಗೆ ಅನ್ವೇಷಣೆಗಾಗಿ ಹೋಗಿರುವಂತಹ ಎಲ್ಲ ಕಪಿಗಳನ್ನು ಒಳಗೂಡಿ ರಾಮನಿದ್ದಲ್ಲಿಗೆ ಬಂದು ಸೀತೆಯ ಸುದ್ದಿಯನ್ನು ನೀಡಿದನು. ಹನುಮಂತನು ರಾಮನಿಗೆ ಸೀತೆಯ ಶುದ್ದಿಯ ಸುದ್ದಿಯನ್ನು ನೀಡಿ, ಚೂಡಾಮಣಿಯನ್ನು ಕೊಟ್ಟು, ಪೂರ್ತಿ ಸುಂದರ ಕಾಂಡವನ್ನು ವಿವರಿಸಿದನು.

ಹನುಮಂತನ ಮಾತನ್ನು ಸಾಧ್ಯವಾದಷ್ಟು ಗಮನವಿಟ್ಟು ರಾಮನು ಕೇಳಿದನು. ಬಳಿಕ ರಾಮನು ಪ್ರೀತಿಪೂರ್ಣನಾದನು. ರಾಮನಲ್ಲಿ ಸೀತೆಯ ಕುರಿತು ಪ್ರೇಮ ಮತ್ತು ಹನುಮನ ಕುರಿತು ಪ್ರೇಮ ಎರಡೂ ಸೇರಿತ್ತು. ಪ್ರೇಮ ತುಂಬಿದ ರಾಮನು “ಹನುಮಂತನು ಏನು ಮಾಡಿದನೋ ಅದನ್ನು ಈ ಲೋಕದಲ್ಲಿ ಬೇರೆ ಯಾರು ಮಾಡಲು ಸಾಧ್ಯವಿಲ್ಲ” ಎಂದು ಹೇಳಿದನು. ‘ಹನುಮಂತನು ಮಾಡಿದ ಕೃತಿಯು ಸಾಮಾನ್ಯರ ಮತಿಗೆ ನಿಲುಕುವಂತದ್ದಲ್ಲ. ಸಮುದ್ರವನ್ನು ಲಂಘಿಸುವುದು ಸಾಮಾನ್ಯ ಜನರ ಮತಿಗೆ ಮೀರಿರುವಂತದ್ದು ಎಂದು ರಾಮನು ಹೇಳಿದನು. ಗರುಡವು ಸಮುದ್ರವನ್ನು ಹಾರಿ ದಾಟಬಹುದು, ವಾಯು ಬೀಸಿ ದಾಟಬಹುದು, ಆದರೆ ಲಂಘಿಸಲು ಹನುಮಂತನನ್ನು ಬಿಟ್ಟು ಬೇರೆ ಯಾರಿಂದಲೂ ಸಾಧ್ಯವಿಲ್ಲ, ಗರುಡನಿಗೆ ಸಮಾನ ಹನುಮಂತ’ ಎಂದು ರಾಮನು ಹನುಮಂತನನ್ನು ಪ್ರಶಂಸೆ ಮಾಡಿದನು. ಸಮುದ್ರವನ್ನು ಲಂಘಿಸಿದ್ದು ಎಷ್ಟು ದೊಡ್ಡ ಸಾಧನೆಯೋ ಲಂಕೆಯನ್ನು ಪ್ರವೇಶಿಸಿ, ಕಾರ್ಯ ಸಾಧಿಸಿ ಹೊರಬಂದಿದ್ದು ಹೆಚ್ಚಿನ ಸಾಧನೆ. ದೇವತೆಗಳಿಗೆ, ಗಂಧರ್ವರಿಗೆ ಲಂಕೆ ಅಪ್ರದಶ್ಯವಾಗಿತ್ತು. ಮತ್ತು ಯಾರಿಂದಲೂ ಲಂಕೆಯನ್ನು ತುಡುಕಲು ಸಾಧ್ಯವಿರಲಿಲ್ಲ. ದೇವತೆಗಳು ಗಗನದಲ್ಲೇ ಸಂಚಾರ ಮಾಡಿ ಲಂಕೆಗೆ ಹೋಗಬಹುದು ಆದರೆ ಹೋಗುವುದಿಲ್ಲ, ಹೋದರೆ ಉಳಿಗಾಲವಿಲ್ಲ. ಹೀಗೆ ದೇವ, ದಾನವ, ಯಕ್ಷ, ಗಂಧರ್ವರಿಗೆ ಮೀರಿರುವಂತಹ ರಾವಣನಿಂದ ಸುರಕ್ಷಿತವಾಗಿರುವಂತಹ ಲಂಕೆಯನ್ನು ಯಾವ ವೀರನು ಪ್ರವೇಶ ಮಾಡಲು ಸಾಧ್ಯವಿಲ್ಲ. ಶತ್ರುಗಳಿಂದ ತಡೆಯಲ್ಪಡದೇ ಯಾವ ವೀರನು ಲಂಕೆಯನ್ನು ಪ್ರವೇಶ ಮಾಡಿಯಾನು ..? ಒಂದು ವೇಳೆ ಪ್ರವೇಶ ಮಾಡಿದರೂ ಹೊರಗೆ ಹೇಗೆ ಬಂದಾನು.? ತನ್ನ ಬಾಹುಬಲವನ್ನು ಆಶ್ರಯಿಸಿ ಲಂಕೆಯಿಂದ ಹೊರಬರುವ ಸಾಮರ್ಥ್ಯ ಯಾರಿಗಿದೆ? ಶವವಾಗಿ ಹೊರಗೆ ಬರಬಹುದು; ಆದರೆ ಉಸಿರಿಟ್ಟುಕೊಂಡು ಮರಳಿ ಬರುವ ಸಾಮರ್ಥ್ಯ ಪ್ರಾಣಶಕ್ತಿಯಾದ ಹನುಮಂತನಿಗೆ ಮಾತ್ರ ಇದೆ ಎಂದು ರಾಮನು ಹೇಳಿದನು.

ರಾಮನ ಭಾಷೆಯಲ್ಲಿ ಲಂಕೆಯ ಒಳಗೆ ಪ್ರವೇಶಿಸುವುದು ದುಸ್ಸಾಧ್ಯ. ಪ್ರವೇಶದ ಬಳಿಕ ಜೀವಂತವಾಗಿ ಹೊರಗೆ ಬರುವುದು ಹನುಮಂತನನ್ನು ಬಿಟ್ಟು ಬೇರೆಯವರಿಗೆ ಅಸಾಧ್ಯ, ಬೇರೆ ಕಪಿ ವೀರ ಲಂಕೆಗೆ ತಲುಪಿದರೂ, ಲಂಕಾ ನಗರವನ್ನು ಪ್ರವೇಶ ಮಾಡಿ ಬದುಕಿ ಹೊರಗೆ ಬರುವಂತದ್ದು ಅಸಾಧ್ಯ , ಹನುಮಂತನಿಗೆ ಮಾತ್ರ ಇದು ಸುಲಭ ಸಾಧ್ಯ. ಯಾರು ಹನುಮಂತನಿಗೆ ಸಮನಲ್ಲವೋ ಅಂತವನು ರಾಕ್ಷಸರ ಮಧ್ಯೆ ಕಾರ್ಯಸಾಧನೆ ಮಾಡಲು ಸಾಧ್ಯವಿಲ್ಲ ಎಂದು ರಾಮನು ಹೇಳಿದನು. ಹನುಮಂತನು ಸೇವಕನೊಬ್ಬನ ಕಾರ್ಯವನ್ನು ಮಾಡಿದನು. ರಾಮನು ತನ್ನ ಹೆಸರನ್ನು ಹೇಳಿಕೊಳ್ಳಲಿಲ್ಲ, ತನ್ನ ದಾಸನು ಕಾರ್ಯವನ್ನು ಮಾಡಿದ ಎಂದೂ ಹೇಳಲಿಲ್ಲ. “ಸುಗ್ರೀವನ ಕಾರ್ಯವನ್ನು ಸೇವಕ ಶ್ರೇಷ್ಠನಾದ ಹನುಮನು ಸಾಧಿಸಿದನು” ಎಂದು ಹೇಳಿದ. ಇದು ಹನುಮಂತನ ಬಲಕ್ಕೆ ಸದೃಶ. ಈ ಕಾರ್ಯ ಸಿದ್ದಿಯು ಹನುಮಂತನ ಬಲಕ್ಕೆ , ವಿಕ್ರಮಕ್ಕೆ ಹೊಂದುವಂತದ್ದು ಹೊರತು ಇನ್ನೊಬ್ಬರು ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ರಾಮ ಹೇಳಿದ.

ನಂತರ ರಾಮನು ಸೇವಕನಾದವನು ಹೇಗಿರಬೇಕು ಎಂದು ಹೇಳಿದನು. “ಯಾವ ಸೇವಕನು ತನ್ನ ಒಡೆಯನಿಂದ ದುಷ್ಕರವಾದ ಕಾರ್ಯವೊಂದರಲ್ಲಿ ನಿಯೋಜಿಸಲ್ಪಟ್ಟು, ಆ ಕಾರ್ಯವನ್ನು ಸ್ವಾಮಿಯ ಮತ್ತು ಕಾರ್ಯದ ಮೇಲಿನ ಅನುರಾಗದಿಂದ ಪೂರ್ಣಗೊಳಿಸುವನೋ, ಅಷ್ಟೇ ಅಲ್ಲದೆ ಹೆಚ್ಚಿನ ಕಾರ್ಯವನ್ನು ಸಾಧಿಸುತ್ತಾನೋ ಆ ಸೇವಕನು ಪುರುಷೋತ್ತಮ” ಎಂದು ಮರ್ಯಾದಾ ಪುರುಷೋತ್ತಮನಾದ ರಾಮನು ಹೇಳಿದನು. ಅದೆಂತಹ ದುಷ್ಕರವೇ ಇದ್ದರೂ ಗೊಣಗದೇ ಅನುರಾಗದಿಂದ ಕಾರ್ಯವನ್ನು ಮಾಡುವವನು ಶ್ರೇಷ್ಠ ಸೇವಕನೆನಿಸಿಕೊಳ್ಳುತ್ತಾನೆ. ಸೀತಾನ್ವೇಷಣೆ ಮಾತ್ರ ಹನುಮಂತನ ಕಾರ್ಯವಾಗಿತ್ತು. ಆದರೆ ಹನುಮಂತನು ಲಂಕೆಯಲ್ಲಿ ಸೀತಾನ್ವೇಷಣೆ ಮಾಡಿ, ರಾಕ್ಷಸರನ್ನು ಕೊಂದು, ರಾವಣನ ಜೊತೆ ಮಾತು ಕಥೆ ಮಾಡಿ, ನಗರವನ್ನು ವೀಕ್ಷಿಸಿ, ನಂತರ ಲಂಕೆಯನ್ನೇ ಸುಟ್ಟು ಬಂದನು. ಒಡೆಯನು ಅಪ್ಪಣೆ ಮಾಡಿದ ಕಾರ್ಯವನ್ನು ಮಾಡುವವನು ದೂತ ಮಧ್ಯಮ. ಸಾಮರ್ಥ್ಯವಿದ್ದರೂ ಕೂಡ ಹೆಚ್ಚಿನದಕ್ಕೆ ಹೋಗುವುದಿಲ್ಲ. ಸಾಮರ್ಥ್ಯವಿದ್ದರೂ ಒಡೆಯನು ಅಪ್ಪಣೆ ಮಾಡಿದ ಕಾರ್ಯವನ್ನು ಯಾರು ಪೂರ್ತಿ ಮಾಡುವುದಿಲ್ಲವೋ ಅಂತವನು ಅಧಮ ಎಂದು ರಾಮನು ಹೇಳಿದನು. ಹಾಗಾಗಿ ನಾವು ಯಾರನ್ನು ಒಡೆಯ ಎಂದು ಒಪ್ಪಿಕೊಳ್ಳುತ್ತೇವೋ ಅವರು ಕೊಟ್ಟ ಕಾರ್ಯವನ್ನು ಪೂರ್ತಿ ಮಾಡಬೇಕು. ಹನುಮಂತನು ಅಪ್ಪಣೆ ಮಾಡಿದ್ದಕ್ಕಿಂತ ಹೆಚ್ಚು ಕಾರ್ಯ ಮಾಡಿ ‘ಉತ್ತಮ’ ಎನಿಸಿಕೊಂಡನು. ಹನುಮಂತನು ತನ್ನ ಆತ್ಮವನ್ನು ಹಗುರ ಮಾಡಿಕೊಳ್ಳಲಿಲ್ಲ.

ರಾಮನು ಸುಗ್ರೀವನನ್ನೇ ಎತ್ತಿ ಹೇಳಿದ್ದರಿಂದ ಅವನಿಗೂ ಸಂತೋಷವಾಯಿತು. ನಾನು , ಲಕ್ಷ್ಮಣ, ನನ್ನ ರಘುವಂಶ, ನನ್ನ ಸೀತೆ ಎಲ್ಲರಿಗೂ ಹನುಮನೇ ರಕ್ಷಕ ಎಂದು ರಾಮನು ಹೇಳಿದನು. ಜಗದ ರಕ್ಷಕನು ಹನುಮಂತನಿಗೆ ತಮ್ಮೆಲ್ಲರ ರಕ್ಷಕ ಎಂದು ಪ್ರಶಂಸೆ ಮಾಡಿದನು. ಹನುಮಂತನಿಂದಾಗಿ ನಾವೆಲ್ಲ ಉಳಿದುಕೊಂಡೆವು, ಹನುಮನು ಸೀತೆಯ ಸುದ್ದಿಯನ್ನು ತರದೆ ಇದ್ದಿದ್ದರೆ ನಾನು ಉಳಿಯುತ್ತಿರಲಿಲ್ಲ, ಲಕ್ಷ್ಮಣ , ಸೀತೆಯೂ ಉಳಿಯುತ್ತಿರಲಿಲ್ಲ, ರಘುವಂಶವೇ ಉಳಿಯುತ್ತಿರಲಿಲ್ಲ ಎಂದು ರಾಮನು ಹೇಳಿದನು. ಮೊದಲು ಹನುಮಂತನು ಲಂಕೆಯಲ್ಲಿ ಸೀತೆಯು ಕಾಣದಿದ್ದಾಗ ಇದೇ ಮಾತನ್ನು ಹೇಳಿದ್ದನು. ಯಾಕೆಂದ್ರೆ, ಸ್ವಾಮಿ ಸುಗ್ರೀವ ಎನ್ನುವ ಭಾವದಲ್ಲಿ ರಾಮನಿದ್ದಾನೆ. ಇನ್ನು ನಾನು, ನನ್ನ ರಘುವಂಶ, ನನ್ನ ಲಕ್ಷ್ಮಣ, ನನ್ನ ಸೀತೆ, ನಮ್ಮೆಲ್ಲರಿಗೂ ಈ ಹನುಮನೇ ರಕ್ಷಕ.

ಹನುಮನಿಗೆ ರಾಮ ಕೊಟ್ಟ ಪ್ರಶಸ್ತಿ : ಜಗದ್ರಕ್ಷಕನಿಗೆ ಹನುಮಂತ ರಕ್ಷಕ. ಸೀತೆಗೆ, ಲಕ್ಷ್ಮಣನಿಗೆ, ನನ್ನ ವಂಶಕ್ಕೇ ಹನುಮಂತನೇ ರಕ್ಷಕ. ಹನುಮನಿಂದಾಗಿ ನಾವೆಲ್ಲ ಉಳಿದುಕೊಂಡೆವು. ಹನುಮನು ಸೀತೆಯ ಸುದ್ದಿಯನ್ನು ತರದೇ ಇದ್ದಿದ್ದರೆ ನಾನೂ ಉಳೀತಿರಲಿಲ್ಲ, ಸೀತೆಯೂ ಉಳೀತಿರಲಿಲ್ಲ, ಲಕ್ಷ್ಮಣನೂ ಉಳೀತಿರಲಿಲ್ಲ, ರಘುವಂಶವೇ ಉಳೀತಿರಲಿಲ್ಲ. ಆಂಜನೇಯ ಸೀತೆ ಲಂಕೆಯಲ್ಲಿ ಕಾಣದಿದ್ದಾಗ ಏನು ಸಂಶಯ ಪಟ್ಟುಕೊಂಡಿದ್ದನೋ, ಅದು ಸತ್ಯ! ರಾಮನೇ ಈ ಮಾತನ್ನು ಹೇಳ್ತಾ ಇದ್ದಾನೆ. ಧರ್ಮದಿಂದ ನಮ್ಮನ್ನು ಪರಿ-ರಕ್ಷಿಸಿದನು ಹನುಮ ಎಂದು ರಾಮ ಹೇಳಿದ್ರೆ, ಹನುಮನಿಗೆ ಇನ್ನೇನು ಬೇಕು?

ರಾಮನ ಮುಖ ಬಾಡಿತಂತೆ. ದೀನನಾದನಂತೆ ರಾಮ ಇದ್ದಕ್ಕಿದ್ದಂತೆ. ಯಾಕಂದ್ರೆ, ಇಷ್ಟು ದೊಡ್ಡ ವಾರ್ತೆಯನ್ನು ನನಗೆ ತಂದೊಗಿದವನು, ನಾನೇನು ಕೊಡಲು ಹನುಮನಿಗೆ? ರಾಮನು ಆಲೋಚನೆ ಮಾಡ್ತಾನೆ, ತಪಸ್ವಿ ನಾನು! ವನವಾಸಿ ನಾನು! ಸಿಂಹಾಸನವೋ, ಕೋಶವೋ, ರಾಜ್ಯವೋ ಈಗ ನನ್ನ ಬಳಿಯಿಲ್ಲ. ಕೊಡಲಿಕ್ಕೆ ಏನಿದೆ?
ಆಯ್ತು, ಒಂದು ವಸ್ತು ಅತಲೇ ಅಂದುಕೊಳ್ಳಿ, ಅಯೋಧ್ಯೆಯ ಚಕ್ರವರ್ತಿಯಾಗಿ ರಾಮನಿದ್ದರೂ ಕೂಡ ‘ಈ ಕಾರ್ಯ’ಕ್ಕೆ ಸರಿಯಾಗಿ ಏನನ್ನು ಕೊಡಲಿ? ಈ ಕಾರ್ಯಕ್ಕೆ ಅವನಿಗೆ ಏನು ಕೊಟ್ಟರೂ ಕಡಿಮೆ. ಸರ್ವರತ್ನಗಳನ್ನು ಕೊಟ್ಟರೂ ಕೂಡ, ಹನುಮನೇನು ಮಾಡಿದನೋ, ಅದಕ್ಕೆ ಸಮಾನವಾ? ಹನುಮನು ಸೀತೆಯನ್ನು ಕೊಟ್ಟ ರಾಮನಿಗೆ. ರಾಮ ಸೀತೆಗೆ ಸಮಾನವಾದುದನ್ನು ಕೊಡಬೇಕು. ಏನು ಕೊಡಲಿಕ್ಕೆ ಸಾಧ್ಯ?
ಹಾಗಾಗಿ, ದೈನ್ಯ ಬಂತು ರಾಮನಿಗೆ, ಸಪ್ಪೆಯಾಯಿತು ರಾಮನ ಮುಖ.

ಕೊನೆಗೆ ಕ್ಷಣಮಾತ್ರದಲ್ಲಿ ರಾಮ ಪರಿಹಾರ ಕಂಡೊಕೊಳ್ತಾನೆ. ಸೀತೆಗೆ ಸಮಾನಾಗಿರುವ ನನ್ನನ್ನೇ ಕೊಡ್ತೇನೆ, ನನ್ನ ಸರ್ವಸ್ವವನ್ನೂ ಕೊಡ್ತೇನೆ. ಹೇಗೆ? ಆಲಿಂಗನ! ಆಲಿಂಗನವೆನ್ನುವುದು ರಾಮನ ದೃಷ್ಟಿಯಿಂದ ‘ಎಲ್ಲ ಕೊಟ್ಟೆ’ ಎನ್ನುವುದರ ಅಭಿವ್ಯಕ್ತಿ, ಸರ್ವಸ್ವ ದಾನ. ಈ ಸನ್ನಿವೇಶದಲ್ಲಿ ನಾನು ನನ್ನ ಸರ್ವಸ್ವವನ್ನೂ ಇಟ್ಟು ಆಲಿಂಗನವನ್ನು ಹನುಮನಿಗೆ ಕೊಟ್ಟೆ ಎನ್ನುವುದಾಗಿ ಹೇಳಿ ಹನುಮನನ್ನು ಬಾಚಿ ತಬ್ಬಿದ. ರಾಮನ ಅಂಗ-ಅಂಗಗಳು ಹರ್ಷಗೊಂಡಿದ್ದವಂತೆ.
ಕೃತಕಾರ್ಯನಾಗಿ ಬಂದ ಹನುಮನನ್ನು ಆಲಿಂಗಿಸಿಕೊಳ್ತಾನೆ. ಇದು ಹನುಮಂತನ ಬದುಕಿನ ಪರಾಕಾಷ್ಠೆ, ಧನ್ಯ ಕ್ಷಣ. ಆತನ ಬದುಕಿನ ಅಮೃತಬಿಂದು ಈ ಕ್ಷಣ! ಇದಕ್ಕಿಂತ ಹೆಚ್ಚಿನದ್ದು ಇನ್ನೇನು ಇರಲಿಕ್ಕೂ ಸಾಧ್ಯ ಇಲ್ಲ. ದೇವರು ಜೀವರಿಗೆ ಕೊಡಬಹುದಾದ ಸರ್ವೋಚ್ಚ ಕೊಡುಗೆ ಇದು, ತನ್ನನ್ನೇ ಕೊಟ್ಟಿದ್ದು!
ಹನುಮಂತನಿಗೆ ಒಂದು ಬಗೆಯ ಸಾತ್ವಿಕ ದೇಹಾಭಿಮಾನ ಬಂತಂತೆ! ಯಾಕಂದ್ರೆ, ಪರಮಪ್ರೇಮದಿಂದ ರಾಮ ತಬ್ಬಿದ ದೇಹ. ಪ್ರೀತಿ ಬಂದಿದೆ ದೇಹದ ಮೇಲೆ, ಅಲ್ಲೇ ಮೋಕ್ಷ ಇದೆ ಅವನಿಗೆ! ಅಂಥಾದ್ದೊಂದು ಆಲಿಂಗನ! ಇದು ಸಾಮೀಪ್ಯದ ಪರಾಕಾಷ್ಠೆ. ಅಂಥಾ ಸಂದರ್ಭ ಇದು. ರಾಮ ತನಗೆ ಕೊಟ್ಟ ಆಶೀರ್ವಾದದಿಂದ ಮನಸ್ಸು ತುಂಬಿ ಕರಗಿ ಮುತ್ತಿನಂತೆ ಎರಡು ಕಂಬನಿಯ ಬಿಂದುಗಳು ಇಳಿದವು. ಇದೊಂದು ಘಟ್ಟ.

ಮುಂದೆ, ರಾಮ‌ ಗಂಭೀರನಾಗ್ತಾನೆ. ಸುಗ್ರೀವ ಕೇಳ್ತಾ ಇದ್ದಾನೆ, ಎಲ್ಲರೂ ಕೇಳ್ತಾ ಇದ್ದಾರೆ, ಗಮನಿಸ್ತಾ ಇದ್ದಾರೆ. “ಹನುಮ ತನ್ನ ಕಾರ್ಯವನ್ನೇನೋ ಜೀಲಾಜಾಲವಾಗಿ ಮಾಡಿ ಮುಗಿಸಿಬಿಟ್ಟ, ಸೀತೆಯನ್ನು ಹುಡುಕಿ ಬಂದೇಬಿಟ್ಟ. ಆದರೆ, ಮುಂದೆ ನಮ್ಮ ಕಾರ್ಯ ಅಷ್ಟು ಸುಲಭ ಅಲ್ಲವಲ್ಲ! ಲಂಕೆಯನ್ನು ತಲುಪುವುದು ಹೇಗೆ? ಸಾಗರವನ್ನು ಎಣಿಸಿದರೆ ಚಿಂತೆಯೇ! ರಾಮನಿಗೆ ತನ್ನ ಚಿಂತೆಯಿಲ್ಲ. ರಾಮನೆಂದರೆ ಆತ್ಮವಿಶ್ವಾಸದ ಪ್ರತಿಮೂರ್ತಿಯದು; ತನ್ನ ಬಗ್ಗೆ, ನಾನು ಹೇಗೆ ದಾಟ್ತೇನೆ ಸಮುದ್ರವನ್ನು ಅಂತ ತೋಚನೆ ಮಾಡೋದಿಲ್ಲ. ಕಪಿಗಳೆಲ್ಲ ಬರೋದು ಹೇಗೆ? ಇದಕ್ಕೇನು ಉತ್ತರ? ಎಂಬುದಾಗಿ ರಾಮ ಚಿಂತಿತನಾಗಿ ಮೌನವನ್ನಾಂತಿರ್ತಾನೆ. ಸುಗ್ರೀವ ಧೈರ್ಯ ತುಂಬಿದನಂತೆ.

‘ಯಾಕೆ ಪ್ರಭು ನೀನು ಸುಮ್ನೆ ಚಿಂತೆ ಮಾಡ್ತೀಯೆ? ಯಾರೋ ಸಾಮಾನ್ಯರು ಚಿಂತಿಸಿದ ಹಾಗೆ ನೀನು ಚಿಂತೆ ಮಾಡ್ಬೇಕಾ? ಬಿಡು ಚಿಂತೆಯನ್ನು. ಸಂತಾಪಕ್ಕೆ ಕಾರಣವೇ ಇಲ್ಲ. ಯಾಕೆಂದರೆ ಸುದ್ದಿ ಸಿಕ್ಕಿದೆ! ಎಲ್ಲಿ ಸೀತೆ ಇದ್ದಾಳೆ? ಶತ್ರುಗಳ ನೆಲೆ ಯಾವುದು? ಎಲ್ಲ ಗೊತ್ತಾಗಿದೆ. ಮತ್ತೆ ಯಾಕೆ ಯೋಚನೆ? ನೀನು ಮತಿವಂತ, ನೀನು ಶಾಸ್ತ್ರಜ್ಞ, ನೀನು ಪ್ರಾಜ್ಞ, ನೀನು ಪಂಡಿತ, ನಿನ್ನಂಥವನು ಚಿಂತೆ ಮಾಡಬಾರದು, ಬಿಟ್ಟುಬಿಡು. ಸಮುದ್ರವನ್ನು ಹಾರಿ, ಲಂಕೆಯನ್ನು ಏರೋಣ. ಸಮುದ್ರವನ್ನು ಲಂಘಿಸಿ, ಲಂಕೆಯನ್ನೇರಿ, ರಾವಣನನ್ನು ಕೊಂದುಬಿಡೋಣ. ನೀನು ನಿರುತ್ಸಾಹಗೊಂಡರೆ, ದೈನ್ಯಗೊಂಡರೆ, ಶೋಕಗೊಂಡರೆ, ನಮಗೆಲ್ಲ ಬೇಸರಾಗ್ತದೆ. ಶೋಕವು‌ ಕಾರ್ಯನಾಶನ, ಹರ್ಷವು ಕಾರ್ಯಸಾಧನ. ನೋಡು ರಾಮ, ಕಣ್ಮುಂದೆ ವಾನರ ವೀರರು ತಲೆಬಾಗಿ ನಿಂತಿದ್ದಾರೆ ನಿನ್ನ ಅಪ್ಪಣೆಯನ್ನು ಕಾದು! ಈ ‘ಹರಿಯೂತಪರು'(ವಾನರ ನಾಯಕರು) ನಿನ್ನ ಸಂತೋಷಕ್ಕಾಗಿ, ನಿನ್ನ ಕಾರ್ಯಸಾಧನೆಗಾಗಿ ಬೆಂಕಿಯನ್ನು ಹೊಗ್ಗಲೂ ಸಿದ್ಧರಿದ್ದಾರೆ. ಯಾಕೆ ನೀನು ಯೋಚನೆ ಮಾಡ್ತೀಯೆ? ಇವರ ಹರ್ಷ ನೋಡು, ಈ ಸಂತೋಷವು ಕಾರ್ಯಸಾಧನೆಯ ಸೂಚಕ’.
ಉಲ್ಲಾಸವು ಕಾರ್ಯಸಾಧನೆಯ ಸೂಚಕ ಎಂದು ಶಕುನಶಾಸ್ತ್ರವೂ ಹೇಳುತ್ತದೆ. ಹಾಗಾಗಿ ಪರಾಕ್ರಮವನ್ನಾಶ್ರಯಿಸಿ, ರಿಪುವನ್ನು ಸಂಹರಿಸಿ, ಸೀತೆಯನ್ನು ಕರೆತರಬಲ್ಲೆ ಎಂಬ ಧೈರ್ಯವಿದೆ. ಇಷ್ಟು ಸುಗ್ರೀವ ಹೇಳಿದ್ದು ಹೌದು. ಆದರೆ ಅವನಿಗೂ ಹೇಗೆ ಎಂದು ಗೊತ್ತಿಲ್ಲ.

ರಾಮನು ಚಿಂತಾಕ್ರಾಂತನಾಗಿರುವುದರಿಂದ ಏನು ಮಾತನಾಡಬೇಕು ಅದನ್ನು ಹೇಳುತ್ತಿದ್ದಾನೆ. ‘ಸಮುದ್ರಕ್ಕೆ ಸೇತುವೆಯನ್ನು ಕಟ್ಟಬಹುದು. ಹಾಗೆ ನಾವು ಲಂಕೆಯನ್ನು ಸೇರೋಣ’. ಅವನಿಗೂ ಎಲ್ಲವೂ ಸ್ಪಷ್ಟವಿಲ್ಲ. ಆದರೆ ಸಂದರ್ಭಕ್ಕೆ ತಕ್ಕಂತೆ ಧೈರ್ಯದ ಮಾತುಗಳನ್ನಾಡುತ್ತಿದ್ದಾನೆ ಸುಗ್ರೀವ. ಆಮೇಲೆ ಆ ಗೊಂದಲದ ಮಧ್ಯೆ ಹೇಳುತ್ತಾನೆ. ‘ನಾವೇನಾದರೂ ಸಮುದ್ರವನ್ನು ದಾಟಿದೆವೋ, ತ್ರಿಕೂಟ ಪರ್ವತದ ಮೇಲಿರುವ ಲಂಕೆಯನ್ನು ಕಂಡೆವೋ, ರಾವಣನು ಸತ್ತ’. ಇದು ರಾಮನಿಗೂ ಗೊತ್ತು. ಸಮುದ್ರವನ್ನು ದಾಟಿದ ಮೇಲೆ ಏನೆಂಬುದು ಎಲ್ಲರಿಗೂ ಗೊತ್ತು.ಪಾಪ ಅವನಿಗೂ ವಿಷಯ ಸರಳವಿಲ್ಲ. ಹಾಗಾಗಿ ಆಡಬೇಕಾದ ಮಾತುಗಳನ್ನಾಡುತ್ತಿದ್ದಾನೆ. ‘ಆದರೆ ಘೋರವಾಗಿರುವ ಸಮುದ್ರಕ್ಕೆ ಸೇತುವೆಯನ್ನು ಕಟ್ಟದೇ ದೇವತೆಗಳೂ ಕೂಡಾ ಲಂಕೆಯನ್ನು ಸೇರಲು ಸಾಧ್ಯವಿಲ್ಲ. ಸೇತುವೆಯನ್ನು ಲಂಕೆಯ ಹತ್ತಿರದವರೆಗೆ ಕಟ್ಟಿ,ನನ್ನ ಸೈನ್ಯವು ಅತ್ತ ದಾಟಿದರೆ, ಗೆದ್ದೆವು ಎಂಬುದಾಗಿ ಭಾವಿಸು’. ಲಂಕೆಯನ್ನು ತಲುಪಿದ ಮೇಲೂ ಗೆಲ್ಲುವುದು ಸುಲಭವಿಲ್ಲ. ಆದರೆ ಸುಗ್ರೀವನಿಗೆ ವಿಶ್ವಾಸವಿದೆ.

‘ಶೋಕಪಡಬೇಡ, ಅದು ಕಾರ್ಯವನ್ನು ಹಾಳುಮಾಡುತ್ತದೆ. ನಿನ್ನಂತಹ ಬುದ್ಧಿವಂತ, ಸರ್ವಶಾಸ್ತ್ರಕೋವಿದ ಯಾರು? ನನ್ನಂತಹ ಸಚಿವರು ಬೇರೆ ಯಾರಿದ್ದಾರೆ ನಿನಗೆ? ನಾವೆಲ್ಲಾ ಸೇರಿ ಶತ್ರುವನ್ನು ಗೆಲ್ಲೋಣ. ಪ್ರಭು, ನಿನ್ನೆದುರು ನಿಲ್ಲುವವರು ಯಾರು? ಧನುಸ್ಸೆತ್ತಿ ನೀನು ಯುದ್ಧಕ್ಕೆ ಬಂದರೆ ನಿನಗೆ ಅಭಿಮುಖವಾಗಿ ನಿಲ್ಲುವ ವೀರನನ್ನು ನಾಕಾಣೆ. ಮತ್ತು ವಾನರರ ಮೇಲೆ ಬಿಟ್ಟ ಕಾರ್ಯವು ಹಾಳಾಗುವ ಪ್ರಶ್ನೆಯೇ ಇಲ್ಲ. ಸಮುದ್ರವನ್ನು ಹಾರಿ ಸೀತೆಯನ್ನು ಹುಡುಕಿಕೊಂಡು ಬಂದನಲ್ಲ ಹನುಮಂತ! ಹಾಗಾಗಿ, ವಾನರರಿಗೆ ಕೊಟ್ಟ ಹೊಣೆಗಾರಿಕೆ ವಿಫಲವಾಗುವುದಿಲ್ಲ. ಹೇಗಾದರೂ ಸಾಗರವನ್ನು ದಾಟಿ ನೀನು ಸೀತೆಯನ್ನು ಕಾಣುತ್ತೀಯೆ.ಹಾಗಾಗಿ ಶೋಕವನ್ನು ಬಿಟ್ಟು ಕ್ರೋಧವನ್ನು ಆಶ್ರಯಿಸು. ಸೂಕ್ಷ್ಮಬುದ್ಧಿಯಿಂದ ಸಮುದ್ರವನ್ನು ದಾಟುವುದರ ಬಗ್ಗೆ ವಿಚಾರಮಾಡೋಣ.ದಾಟಿದ ಕೂಡಲೇ ನನ್ನ ವಾನರರು ಬಂಡೆಗಳ, ಮರಗಳ ಮಳೆಗರೆದು ಲಂಕೆಯನ್ನು ಧ್ವಂಸ ಮಾಡುತ್ತಾರೆ. ಹೇಗಾದರೂ ಸಮುದ್ರವನ್ನು ದಾಟಿದರಾಯಿತು’ ಎಂದು ಹೇಳಿ ಕಾರಣಗಳು,ತರ್ಕವನ್ನೆಲ್ಲಾ ಬಿಟ್ಟು ನಿಮಿತ್ತಕ್ಕೆ ಹೋದ.

‘ನಿಮಿತ್ತಗಳನ್ನು ನೋಡು. ಎಲ್ಲಾ ಶುಭಶಕುನಗಳು. ನಾವು ಖಂಡಿತ ಗೆಲ್ಲುತ್ತೇವೆ. ನನ್ನ ಮನಸ್ಸು ಕೂಡಾ ಹರ್ಷವನ್ನು ತಾಳುತ್ತಿದೆ. ನಾನು ಹೆಚ್ಚೇನು ಹೇಳುವುದಿಲ್ಲ. ನೀನು ವಿಜಯಿ’ ಎಂದಾಗ ಸುಗ್ರೀವನ ಮಾತನ್ನು ರಾಮನು ಸ್ವೀಕರಿಸಿದ. ಹನುಮಂತನಿಗೆ ರಾಮನು ಹೀಗೆಂದನು. ‘ಹೌದದು, ಸಮುದ್ರವನ್ನು ಲಂಘಿಸುವುದರಲ್ಲಿ ನಾನು ಸಮರ್ಥ. ತಪಸ್ಸಿನ ಮೂಲಕವಾಗಲೀ, ಸೇತುವೆಯನ್ನು ಕಟ್ಟುವುದರ ಮೂಲಕವಾಗಲೀ, ಕೊನೆಯದಾಗಿ ಸಮುದ್ರವನ್ನು ಒಣಗಿಸುವುದರ ಮೂಲಕವಾಗಲಿ ನಾನು ಸಾಗರವನ್ನು ಲಂಘಿಸಬಲ್ಲೆ’. ಇದು ಸುಗ್ರೀವನ ಸಲಹೆಯಿಂದ ಬಂದಿದ್ದಲ್ಲ, ರಾಮನ ವಿಶ್ವಾಸ. ಆ ವಿಶ್ವಾಸವನ್ನು ಜಾಗರೂಕಗೊಳಿಸಿದನು ಸುಗ್ರೀವ.ಈ ಮೂರು ದಾರಿಗಳು, ತಪಸ್ಸಿನಿಂದ ವರ ಪಡೆದು, ಸೇತುವೆಯನ್ನು ಕಟ್ಟಿ, ಸಮುದ್ರವನ್ನು ಒಣಗಿಸಿ ಆ ದಾರಿಯಲ್ಲಿ ಸಮುದ್ರವನ್ನು ದಾಟಿಹೋಗುವಂಥದ್ದು.ಇಲ್ಲಿಯವರೆಗೆ ತನಗೆ ವ್ಯಾಪ್ತಿಯಿದೆ ಎನ್ನುವುದನ್ನು ರಾಮನು ಪ್ರಕಟಪಡಿಸುತ್ತಾನೆ. ‘

ಅದಿರಲಿ. ಹನುಮಂತ, ಲಂಕೆಯಲ್ಲಿ ಏನು ಕಂಡೆ? ಅಲ್ಲಿ ಕೋಟೆ,ಬಾಗಿಲು ಹೇಗಿದೆ? ರಾಕ್ಷಸರದ್ದು ಸೈನ್ಯ ಹೇಗಿದೆ? ಪ್ರವೇಶ,ನಿರ್ಗಮ ಹೇಗೆ? ಯುದ್ಧವನ್ನು ಗೆಲ್ಲುವ ದೃಷ್ಟಿಯಿಂದ ಲಂಕೆಯ ಸೂಕ್ಷ್ಮಗಳನ್ನು ಹೇಳು ನನಗೆ’. ಇದಕ್ಕಾಗಿಯೇ ಹನುಮಂತ, ಬಾಲ ಸುಟ್ಟರೆ ಸುಡಲಿ, ಹಗಲಿನಲ್ಲಿ ಲಂಕೆಯನ್ನು ನೋಡುತ್ತೇನೆ ಎಂದುಕೊಂಡಿದ್ದ. ಅದನ್ನೇ ಕೇಳುತ್ತಾನೆ ರಾಮ. ‘ಲಂಕೆಯಲ್ಲಿ ದುರ್ಗಗಳೆಷ್ಟು? ಇವೆಲ್ಲವನ್ನೂ ನನ್ನ ಕಣ್ಣಿಗೆ ಕಟ್ಟುವಂತೆ ಹೇಳು. ರಾವಣನ ಸೈನ್ಯವೆಷ್ಟಿದೆ? ದ್ವಾರದುರ್ಗವನ್ನು ಹೇಗೆ ನಿರ್ಮಾಣ ಮಾಡಲಾಗಿದೆ? ರಕ್ಷಣಾವಿಧಾನವೇನು? ರಾಕ್ಷಸರ ಮನೆಗಳು ಹೇಗಿವೆ? ರಾವಣ,ಕುಂಭಕರ್ಣರ ಮನೆಗಳು ಎಲ್ಲಿವೆ? ನೀನು ಸುಖವಾಗಿ ಲಂಕೆಯನ್ನು ನೋಡಿದ್ದೀಯೆ ತಾನೇ? ಎಲ್ಲಾ ಬಿಡಿಸಿ ಹೇಳು. ಏಕೆಂದರೆ ನೀನು ಕುಶಲ’ ಎಂಬಲ್ಲಿಗೆ ರಾಮನು ಕಾರ್ಯಕ್ಕೆ ಇಳಿದಾಯಿತು. ಸಮುದ್ರವನ್ನು ಮನಸ್ಸಿನ ಮೂಲೆಯಲ್ಲಿಟ್ಟುಕೊಂಡು, ವರದಿ ಕೇಳುತ್ತಿದ್ದಾನೆ. ಆಗ ಮಾತುಬಲ್ಲವರಲ್ಲಿ ಅಗ್ರಗಣ್ಯನಾದ ಹನುಮಂತನು ರಾಮನ ಕುರಿತು ಹೀಗೆಂದನು.

‘ಪ್ರಭು, ಕೇಳು. ಎಲ್ಲವನ್ನೂ ಹೇಳುತ್ತೇನೆ. ಲಂಕೆಯು ಕೋಟೆಗಳಿಂದ ಹೇಗೆ ರಕ್ಷಿತವಾಗಿದೆ ಮತ್ತು ಸೈನ್ಯದ ಮೂಲಕ ಹೇಗೆ ರಕ್ಷಿತವಾಗಿದೆ ಎಲ್ಲವನ್ನೂ ಹೇಳುತ್ತೇನೆ. ರಾಕ್ಷಸರು ಎಷ್ಟು? ಅವರು ರಾವಣನಲ್ಲಿ ಎಷ್ಟು ಪ್ರೀತಿಯಿಂದಿದ್ದಾರೆ? ಲಂಕೆಯ ಸಮೃದ್ಧಿಯೆಷ್ಟು, ಸಮುದ್ರವೆಷ್ಟು ಭಯಂಕರ, ರಾವಣನ ಸೈನ್ಯದ ವಿಭಾಗ, ವಾಹನಗಳು(ಆನೆ,ಕುದುರೆ,ರಥಗಳು) ಎಲ್ಲಾ ಹೇಳುತ್ತೇನೆ’ ಎಂದು, ‘ಲಂಕೆಯು ಹರ್ಷಪೂರ್ಣವಾಗಿರುವ ನಗರಿ. ಬೇಕಾಗಿದ್ದೆಲ್ಲಾ ಇದೆ. ಮದಿಸಿದ ಗಜಗಳಿಂದ ಕೂಡಿದೆ. ಅಷ್ಟು ದೊಡ್ಡ ಲಂಕೆಯನ್ನು ಮಹಾರಥಗಳು ತುಂಬಿದ್ದಾವೆ. ರಾಕ್ಷಸಗಣಗಳಿಂದ ವ್ಯಾಪ್ತವಾಗಿದೆ. ಸಾಮಾನ್ಯ ಶತ್ರುಗಳು ಲಂಕೆಯನ್ನು ಪ್ರವೇಶ ಮಾಡಿ, ಯುದ್ಧ ಮಾಡಲು ಸಾಧ್ಯವಿಲ್ಲ. ಲಂಕೆಗೆ ಭದ್ರ ಕೋಟೆ, ನಾಲ್ಕು ಮಹಾದ್ವಾರಗಳು. ಎರಡು ಕದಗಳು ವಿಶಾಲವಾಗಿಯೂ, ಭದ್ರವಾಗಿಯೂ ಇದ್ದಾವೆ. ಅಗುಳಿಗಳು ಕಬ್ಬಿಣದವು, ಮುರಿಯಲು ಸಾಧ್ಯವಿಲ್ಲ. ವಿಶಾಲವಾದ ನಾಲ್ಕು ಮಹಾದ್ವಾರಗಳಲ್ಲಿ ಯಂತ್ರಗಳಿವೆ. ಅವು ಬಾಣಗಳ,ಬಂಡೆಗಳ ಮಳೆಗರೆಯುತ್ತಾವೆ. ಅವು ಪ್ರತಿಸೈನ್ಯದ ಕಥೆಯನ್ನು ಅಲ್ಲೇ ಮುಗಿಸುತ್ತವೆ’. ಅದೆಲ್ಲಾ ವಿಶ್ವಕರ್ಮನ ವಿಧಾನ.

‘ದ್ವಾರಗಳಲ್ಲಿ ಕಬ್ಬಿಣದ, ಸಜ್ಜಾಗಿರುವ ನೂರಾರು ಶತಗ್ನಿಗಳು(ಸಣ್ಣ ಕ್ಷಿಪಣಿಯಂತೆ. ನೂರಾರು ಜನರನ್ನು ಒಮ್ಮೆಗೆ ಕೊಲ್ಲಬಲ್ಲ ಆಯುಧ) ಚಿಮ್ಮಿ ಬರ್ತದೆ. ಶತಗ್ನಿ ಅಂದ್ರೆ ಅಲ್ಲಿ ಮುಳ್ಳುಗಳು ಇರ್ತವೆ. ದೊಡ್ಡ ಗಧೆಗಳು, ಅದರಲ್ಲಿ ಕಬ್ಬಿಣದ ಮುಳ್ಳುಗಳು ಇರ್ತವೆ. ಮತ್ತು ಏರಲಿಕ್ಕೇ ಸಾಧ್ಯವಿಲ್ಲದಂತಹ ಬಂಗಾರದ ಕೊಟೆ. ಅದಕ್ಕೆ ವಜ್ರಗಳು, ಮುತ್ತುಗಳ ಅಲಂಕಾರ. ಇವರ ಕಥೆ ಅಂದ್ರೆ, ಬಂಗಾರ ಮುತ್ತು ರತ್ನ ಎಲ್ಲ ಇಷ್ಟು ಹೆಚ್ಚಾಗಿದೆ ಅಂದ್ರೆ ಕೋಟೆಗೆ ಅದನ್ನೇ ಹಾಕಿದ್ದಾರೆ. ಯಾರಾದರೂ ಕದಿಯಬೇಕು ಅಂದ್ರೂ ಸಾಧ್ಯ ಇಲ್ಲ. ಸುವರ್ಣಮಯ ಆಗಿರತಕ್ಕಂತಹ ಮಹಾ ಪ್ರಾಕರ. ಕೋಟೆಯೇ ಬಂಗಾರ ನವರತ್ನಮಯ. ಕೋಟೆಯ ಸುತ್ತ ಕಂದಕಗಳು. ಯಾವ ಕಡೆಯಿಂದ ಲಂಕೆಯನ್ನು ಹೊಕ್ಕಬೇಕಾದರೂ ಕಂದಕವನ್ನು ದಾಟಿಯೇ ಹೋಗಬೇಕು.

ಕಂದಕಗಳು ಹೇಗಿವೆ ಅಂದ್ರೆ ತಣ್ಣನೆಯ ನೀರು, ಚರ್ಮವನ್ನು ಜಡಗೊಳಿಸತಕ್ಕಂತಹ ನೀರು, ಆ ನೀರಿಗೆ ತಳ ಸಿಗುವುದಿಲ್ಲವಂತೆ. ಆ ನೀರಲ್ಲಿ ಮೊಸಳೆಗಳು. ಯಾರಾದರೂ ಬಿದ್ದರೇ ಮುಳುಗಿ ಸಾಯ್ತಾನೆ ಅಥವಾ ಮೊಸಳೆಯ ಬಾಯಲ್ಲಿ ಬಿದ್ದು ಸಾಯ್ತಾನೆ. ಹಾಗೆ ನಾಲ್ಕು ಬಾಗಿಲಿನ ಎದುರು ಕಂದಕ ಇದೆ. ನಾಲ್ಕೂ ದ್ವಾರದಲ್ಲಿ ಕಂದಕ ಮತ್ತು ಕೋಟೆಯ ಬಾಗಿಲಿನ ನಡುವೆ ಸೇತುವೆ ಇದೆ ಒಳಗೆ ಹೋಗಲಿಕ್ಕೆ. ಆ ಸೇತುವೆಯ ಮೆಲೆ ನಾನಾ ತರಹದ ಯಂತ್ರಗಳು ಇವೆ. ಕಾವಲುಗಾರರ ಮನೆಗಳ ಸಾಲಿವೆ ಅಲ್ಲಿ. ಸ್ವಾರಸ್ಯ ಅಂದ್ರೆ, ಶತ್ರುಗಳ ಸೈನ್ಯ ಬಂದರೆ ಆ ಸೇತುವೆಯನ್ನು ಎತ್ತಿ ಬಿಡ್ತಾರೆ. ಆ ಸೇತುವೆ ಬೇಕಾದಾಗ ಕೆಳಗೆ ಇಡ್ತಾರೆ ಬೇಡಾದಾಗ ಎತ್ತಿ ಬಿಡ್ತಾರೆ. ಅವರ ನಿಯಂತ್ರಣದಲ್ಲಿ ಇವೆ. ಒಂದು ಮುಖ್ಯ ಸೇತುವೆ ಭದ್ರವಾಗಿದೆ, ಬಲವಾಗಿದೆ, ವಿಶಾಲವಾಗಿದೆ, ಸ್ವರ್ಣ ಸ್ತಂಭಗಳಿವೆ, ಅಲ್ಲಲ್ಲಿ ಅಟ್ಟಣಿಗಳು ಇದ್ದಾವೆ. ರಾವಣನಿಗೆ ಇದರ ಬಗ್ಗೆ ಗೊತ್ತಿದೆ. ಶತ್ರುವನ್ನು ಹೇಗೆ ನಿಯಂತ್ರಣ ಮಾಡಬೇಕು, ವಿನ್ಯಾಸ ಹೇಗಿರಬೇಕು ಗೊತ್ತಿದೆ. ಅವನಿಗೆ ಸತತ ಯುದ್ಧೋತ್ಸಾಹ ಮತ್ತು ಜಾಗರೂಕತೆ ಇದೆ. ಸೈನ್ಯಗಳನ್ನು ನೋಡಿಕೊಳ್ಳೋದು, ಗಮನಿಸೋದು, ಅದರ ಬಗ್ಗೆ ನಿರುತ್ಸಾಹ ಇಲ್ಲ. ಸೈನ್ಯದ ಉತ್ಸುವಾರಿಯಲ್ಲಿ ಎಲ್ಲಿಯೂ ಎಚ್ಚರ ತಪ್ಪುವುದಿಲ್ಲ. ದೇವತೆಗಳೂ ಲಂಕೆಯನ್ನು ಪ್ರವೇಶ ಮಾಡಲಿಕ್ಕೆ ಸಾಧ್ಯ ಇಲ್ಲ.

ಪರ್ವತವನ್ನು ನಾಲ್ಕೂ ಕಡೆಯಿಂದ ಕಡಿದು ನುಣುಪು ಮಾಡಿದ್ದಾರೆ. ನಾಲ್ಕು ಬಾಗೆಯ ಕೋಟೆಗಳು. ಲಂಕೆ ಹೇಗಿದೆ ಅಂದ್ರೆ, ಬಂಗಾರದ ಕೋಟೆ ಅದರ ಸುತ್ತಲೂ ಪರ್ವತ. ಪರ್ವತದ ಸುತ್ತಲೂ ಕಾಡಿದೆ, ನಮಗೆ ಅಪರಿಚಿತ, ರಾಕ್ಷಸರಿಗೆ ಪರಿಚಿತ. ನದಿಗಳು ಸುತ್ತಿವೆ ಆಮೇಲೆ ಸಮುದ್ರ ಇದೆ. ಪಕ್ಷಿಗಳು ಹೋಗೋದು ಕೂಡ ಕಷ್ಟ ಇದೆ. ಸಮುದ್ರದ ಆಚೆಯಿಂದ ನೌಕಾ ಮಾರ್ಗವೂ ಕಷ್ಟ. ನೌಕೆಯಿಂದ ಹೊರಟರೆ ರಾಕ್ಷಸರು ದಡದಲ್ಲಿ ಇರ್ತಾರೆ. ಇವರನ್ನು ಹೊಡೆಯಬಹುದು. ಮಾಹಿತಿ ಕೊಡುವವರೂ ಯಾರೂ ಇಲ್ಲ. ಸೇತುವೆ ಕಟ್ಟುವ ಮುಂಚೇನೇ ನೌಕಾ ಮಾರ್ಗಕ್ಕೆ ತೊಂದರೆ ಇದೆ.

ಲಂಕೆ ಬಹಳ ದೂರ ಇದೆ. ಪೂರ್ವ ದ್ವಾರದಲ್ಲಿ ಹತ್ತು ಸಾವಿರ ರಾಕ್ಷಸರಿದ್ದಾರೆ. ಅವರೆಲ್ಲ ಶೂಲ ಮತ್ತು ಖಡ್ಗದಿಂದ ಯುದ್ದ ಮಾಡತಕ್ಕಂತವರು. ದಕ್ಷಿಣದ್ವಾರದಲ್ಲಿ ಒಂದು ಲಕ್ಷ ಸೈನಿಕರಿದ್ದಾರೆ. ಅದಕ್ಕಿಂತ ಪಶ್ಚಿಮದ್ವಾರದಲ್ಲಿ ೧೦ ಲಕ್ಷ ಸೈನಿಕರಿದ್ದಾರೆ. ಅವರೆಲ್ಲ ಕತ್ತಿ ಗುರಾಣಿ ಹಿಡಿದು ಯುದ್ದ ಮಾಡತಕ್ಕಂತವರು. ಆಮೇಲೆ ಉತ್ತರ ದ್ವಾರ ಯಾವುದರಿಂದ ರಾಮ ಹೋಗುವಂತಹದ್ದು, ಅಲ್ಲಿ ಲಂಕೆಯ ಕೋಟಿ ಕೋಟ್ಯಾಂತರ ಸೈನ್ಯ ಇದೆ. ದೊಡ್ದ ಸೈನ್ಯ ಅಲ್ಲಿ ಇದೆ. ಉತ್ತರ ದ್ವಾರ ಅಂದ್ರೆ, ಭಾರತದ ಕಡೆಯಿಂದ ಶತ್ರು ಬರಬಹುದು ಎಂಬ ನಿರೀಕ್ಷೆ ಇದೆ. ಇದಲ್ಲದೇ ಲಂಕೆಯ ಮಧ್ಯದಲ್ಲಿಯೂ ಕೋಟ್ಯಾಂತರ ರಾಕ್ಷಸರು ಇದ್ದಾರೆ. ಇಷ್ಟೆಲ್ಲ ವಿಸ್ತಾರವಾಗಿ ಹೇಳಿದ ಹನುಮಂತ ಕೊನೆಯಲ್ಲಿ ಹೇಳುವುದು ಏನಂದ್ರೆ ಹೆಚ್ಚು ಯೋಚನೆ ಮಾಡುವುದು ಬೇಡ, ಆ ಸೇತುವೆಗಳನ್ನ ನಾನು ಮುರಿದು ಹಾಕಿದ್ದೇನೆ!
ಸುಮ್ಮನೆ ಬಂದಿಲ್ಲ ಹನುಮಂತ. ಎಲ್ಲ ವೀಕ್ಷಣೆ ಮಾಡಿಯೇ ಏನೇನು ಎಲ್ಲೆಲ್ಲಿದೆ ಅಂತ ನೋಡಿ, ಆ ಸೇತುವೆಗಳನ್ನ ಪೂರ್ಣ ಧ್ವಂಸ ಮಾಡಿ ಬಂದಿದ್ದಾನೆ.

ಇಷ್ಟು ಬೇಗ ಆ ಸೇತುವೆಗಳನ್ನು ಪುನಃ ನಿರ್ಮಾಣ ಮಾಡಲಿಕ್ಕೆ ಬರುವುದಿಲ್ಲ. ಕಂದಕಗಳನ್ನು ಹೆಚ್ಚು ಕಡಿಮೆ ಮುಚ್ಚಿಬಿಟ್ಟಿದ್ದೇನೆ. ಯಂತ್ರಗಳನ್ನು ನಾಶಮಾಡಿದ್ದೇನೆ. ಆಮೇಲೆ ಕೆಲವು ಕಡೆ ಕೋಟೆಯನ್ನು ಮುರಿದು ಹಾಕಿಬಿಟ್ಟಿದ್ದೇನೆ. ಸೈನ್ಯದ ಒಂದು ಭಾಗವನ್ನು ಕೊಂದೇ ಬಿಟ್ಟಿದ್ದಾನೆ ಎಂದ‌ ಹನುಮಂತ. ಭಾರೀ ಸೈನ್ಯ ಮಾಡುವಷ್ಟು ಕೆಲಸವನ್ನು ಇವನೊಬ್ಬನೇ ಮಾಡಿ ಬಂದು ರಾಮನಿಗೆ ಸಹಾಯ ಮಾಡಿದ್ದಲ್ಲದೇ ವಿವರವನ್ನು ತಿಳಿದುಕೊಂಡು ಬಂದಿದ್ದಾನೆ ಬರಬೇಕಾದರೆ. ಕಣ್ಣಲ್ಲಿ ಕಟ್ಟಿದ ಹಾಗೆ ಹೇಳ್ತಾ ಇದ್ದಾನೆ. ಆಮೇಲೆ ಹೇಳಿದ, ‘ಏನಾದ್ರೂ ಉಪಾಯವನ್ನು ಮಾಡಿ ಸಮುದ್ರ ದಾಟೋಣ. ಲಂಕೆ ನಷ್ಟವಾಯಿತು ಅಂತಲೇ ಭಾವಿಸಬಹುದು’. ಅಂಗದ, ದ್ವಿವಿದ, ಜಾಂಬವಂತ, ಪನಸ, ನಲ ಸೇನಾಪತಿ ನೀಲ. ಮತ್ತುಳಿದವರು ಯಾಕೆ? ನಾವಿಷ್ಟೇ ಜನ ಹೋದರೂ ಕೂಡ ಲಂಕೆಯನ್ನು ನಾವು ಕಿತ್ತು ತರಬಲ್ಲೆವು. ಪರ್ವತಗಳಿಂದ, ಅರಣ್ಯಗಳಿಂದ, ಕಂದಕಗಳಿಂದ, ಮಹಾದ್ವಾರಗಳಿಂದ, ಕೋಟೆಗಳಿಂದ, ರಾಕ್ಷಸಭವನಗಳಿಂದ ಕೂಡಿರತಕ್ಕಂತಹ ಲಂಕೆಯನ್ನೆ ಕಿತ್ತೆತ್ತಿ ತರಬಲ್ಲೆವು ನಾವು. ಅಪ್ಪಣೆ ಮಾಡು ಪ್ರಭೂ. ಇಡೀ ವಾನರಸೈನ್ಯ ಯುದ್ಧಕ್ಕಾಗಿ ಪ್ರಸ್ಥಾನ ಮಾಡಲಿ ಲಂಕೆಯ ಕಡೆಗೆ. ಅಪ್ಪಣೆ ಮಾಡು. ಒಂದು ಒಳ್ಳೆಯ ಮುಹೂರ್ತ. ಯೋಗ್ಯವಾದ ಮುಹೂರ್ತದಲ್ಲಿ ಹೊರಡುವ ಅಪ್ಪಣೆಯನ್ನು ನೀನು ಕೊಡು ಎಂಬುದಾಗಿ ಹನುಮಂತ ಹೇಳಿದಾಗ ರಾಮನಿಗೆ ಸಂತೋಷವಾಯಿತು.

ರಾಮನ ಮನಸ್ಸು ಮತ್ತು ವಿಶ್ವಾಸ ಉಬ್ಬಿಬಂತು. ಹನುಮಂತನಿಗೆ ರಾಮ ಹೇಳಿದ್ನಂತೆ. ಯಾವ ಲಂಕೆಯನ್ನು ನೀನು ನನಗೆ ತೋರಿಸಿ ಕೊಡ್ತಾ ಇದೀಯೋ , ಯಾವ ಲಂಕೆಯು ಘೋರಾಕಾರವಾದ ರಾವಣನಿಗೆ ಸೇರಿರುವಂಥದ್ದೋ ಆ ಲಂಕೆಯನ್ನು ನಾನು ಧ್ವಂಸಗೊಳಿಸುವೆ. ಇದು ಸತ್ಯ. ನಿಮ್ಮೆಲ್ಲರ ಮುಂದೆ ಇದು ರಾಮನ ವಾಕ್ಯ. ಭೀಮರಾಕ್ಷಸನ ಲಂಕೆಯನ್ನು ನಾನು ಧ್ವಂಸಗೊಳಿಸುವೆ ಎಂದು, ಸುಗ್ರೀವನಿಗೆ ಅಪ್ಪಣೆ ಕೊಟ್ಟ.
“ಈಗಲೇ ಹೊರಡೋಣ ಸುಗ್ರೀವ. ಸೂರ್ಯನು ನಡುನೆತ್ತಿಯ ಮೇಲೆ ಬಂದಾಯಿತು. ಇದು ಅಭಿಜಿನ್ ಮುಹೂರ್ತ. ಇದು ವಿಜಯಪ್ರದವಾದ ಮುಹೂರ್ತ. ಈ ಮುಹೂರ್ತದಲ್ಲಿ ಹೊರಟರೆ ಯುದ್ಧದಲ್ಲಿ ವಿಜಯ ನಿಶ್ಚಿತ. ಹಾಗಾಗಿ ವಿಜಯಪ್ರದವಾದ ಈ ಮುಹೂರ್ತದಲ್ಲಿ ಸೇನಾಸಮೇತನಾಗಿ ಹೊರಡುವೆ. ಆ ನನ್ನ ಶತ್ರು ಸೀತೆಯನ್ನು ಎಲ್ಲಿಗೆ ಒಯ್ಯುವನು ಅಂತ ನೋಡ್ತೇನಿ. ನಾನು ಬೆನ್ನಟ್ಟಿ ಬರಲಾಗಿ ಅವನು ಎಲ್ಲಿಗೇ ಹೋಗಲಿ, ನೋಡ್ತೇನೆ ನಾನು. ಸೀತೆ ನನ್ನ ಅಭಿಯಾನವನ್ನ ತಿಳಿದು ಜೀವನದಲ್ಲಿ ಮತ್ತೆ ಆಶೆಯನ್ನು ತಾಳ್ತಾಳೆ. ನಾನು ಹೊರಟೆ, ಜೈತ್ರಯಾತ್ರೆ ಆರಂಭವಾಯಿತು ನನ್ನದು ಎನ್ನುವುದು ಸೀತೆಯ ಕಿವಿಗೆ ಬಿದ್ದಾಗ ಜೀವಿತದ ಆಶೆಯನ್ನು ಕಳೆದುಕೊಂಡಿದ್ದವಳು ಮತ್ತೆ ಜೀವಿತದ ಆಶೆಯನ್ನ ತಾಳ್ತಾಳೆ. ನಾಳೆ ಹಸ್ತ ನಕ್ಷತ್ರ. ಇಂದು ಉತ್ತರಾ ನಕ್ಷತ್ರ. ಉತ್ತರಾ ನಕ್ಷತ್ರ ಸಾಧಕದಾರಿಯಾಗ್ತದೆ. ಹಾಗಾಗಿ ಈ ಮುಹೂರ್ತ ಪ್ರಶಸ್ತವಾಗಿರುವಂಥದ್ದು ಹೊರಡೋಣ ನಾವು ಎನ್ನುತ್ತಿರುವಂತೆಯೇ ಮತ್ತೆ ನಿಮಿತ್ತಗಳುಂಟಾದವು. ಶುಭ ನಿಮಿತ್ತಗಳು ಏರ್ಪಟ್ಟವು. ಆಗ ರಾಮ ಹೇಳ್ತಾನೆ. ನೋಡಿ ಶಕುನಗಳನ್ನು. ನೋಡಿ ಶುಭನಿಮಿತ್ತಗಳನ್ನು. ರಾವಣನನ್ನು ಕೊಂದು ನಾನು ಸೀತೆಯನ್ನು ಮರಳಿ ತರ್ತೇನೆ ಎನ್ನುವಾಗ ಶ್ರೀರಾಮನ ಬಲಗಣ್ಣಿನ ಮೇಲ್ಭಾಗ ಮತ್ತೆ ಅದುರಿತಂತೆ. ರಾಮನ ಉದ್ದೇಶಲು ಪೂರ್ತಿಯಾಗುವುದನ್ನು ಅದು ಸೂಚಿಸಿತು.

ಆಗ ಲಕ್ಷ್ಮಣಪೂಜಿತನಾದ ರಾಮನು ಅಪ್ಪಣೆ ಕೊಡ್ತಾನೆ. ಸೇನಾಪತಿ ನೀಲನು ಮುಂದೆ ಸಾಗಲಿ. ಯಾಕೆ ಅಂದ್ರೆ ಮಾರ್ಗವನ್ನು ನೋಡ್ಬೇಕು. ಅಲ್ಲಿ ಆಪತ್ತೇನಿದೆ? ಸಂಪತ್ತೇನಿದೆ? ಅನುಕೂಲವೇನಿದೆ? ಪ್ರತಿಕೂಲವೇನಿದೆ? ಎಂದು ನೋಡುವುದು ಬಹಳ ಮುಖ್ಯವಾಗ್ತದೆ. ಹಾಗಾಗಿ ಸೇನಾಪತಿ ನೀಲನು ಲಕ್ಷ ಕಪಿಗಳೊಡನೆ ಮುಂದಾಗಿ ಸಾಗಲಿ ಎಂಬುದಾಗಿ ಅಪ್ಪಣೆ ಮಾಡಿ, ನೀಲನಿಗೆ ಹೇಳ್ತಾನೆ; ಹೇ ನೀಲ! ಯಾವ ದಾರಿಯಲ್ಲಿ ಫಲಮೂಲಗಳು ಬಹಳವೋ, ಯಾವ ದಾರಿಯಲ್ಲಿ ಶೀತಲವಾದ ಕಾನನ ಜಲ ಧಾರಾಳವೋ, ಯಾವ ದಾರಿಯಲ್ಲಿ ಜೇನಿಗೆ ಕೊರತೆಯಿಲ್ಲವೋ ಆ ದಾರಿಯಲ್ಲಿ ಮುಂದಾಗೋಣ. ಸೇನೆಯನ್ನು ಆ ದಾರಿಯಲ್ಲಿ ಕೊಂಡೊಯ್ಯಿ. ಜಾಗೃತೆಮಾಡು. ದುರಾತ್ಮರು ರಾಕ್ಷಸರು ದಾರಿಯಲ್ಲಿ ಗೆಡ್ಡೆಗೆಣಸುಗಳಿಗೆ ವಿಷವೂಡಿಟ್ಟಾರು. ನೀರಿಗೆ ವಿಷ ಬೆರೆಸಿಯಾರು. ನೀರು, ಗೆಡ್ಡೆ-ಗೆಣಸುಗಳು, ಹಣ್ಣು-ಹಂಪಲುಗಳು ವಿಷವಲ್ಲ ಎಂಬುದನ್ನು ಮೊದಲು ಖಾತರಿ ಪಡಿಸಿಕೊಳ್ಳಬೇಕು. ದುರಾತ್ಮರು, ರಾಕ್ಷಸರು ಇಂತಹ ದಾರಿಯನ್ನು ಆಶ್ರಯಿಸಾಯಾರು. ಎಚ್ಚರದಿಂದಿರು. ನಿನ್ನೊಡನೆ ಮುಂದೆ ಹೋಗುವಂತಹ ಎತ್ತರವನ್ನೇರಿ ವಾನರರು ಬಗ್ಗಿ ನೋಡಲಿ. ಆಳಕಂದಕಗಳಲ್ಲಿ, ಗಿರಿದುರ್ಗಗಳಲ್ಲಿ ಅಡಗಿರುವ ರಾಕ್ಷಸ ಸೈನ್ಯ ಇದ್ದಕಿದ್ದಂತೆ ಬಂದು ಆಕ್ರಮಣ ಮಾಡಬಹುದು. ಹಾಗಾಗಿ ಶತ್ರುಗಳ ಗುಪ್ತ ಸೈನ್ಯವನ್ನು ನಿನ್ನ ವಾನರ ಭಟರು ಸೂಕ್ಷ್ಮಮತಿಗಳಾಗಿ ಗ್ರಹಿಸಬೇಕು ಎಂದು ಹೇಳಿ, ನೀಲನಿಗೆ ಹೇಳಿದ್ನಂತೆ. ಸಾಮಾನ್ಯ ಸೇನೆ ಕಿಷ್ಕಿಂಧೆಯಲ್ಲೇ ಇರಲಿ. ವಾನರ ಸೇನೆಯಲ್ಲಿ ಯಾವುದು ಅಗ್ರಮಾನ್ಯವೋ, ಯಾರು ಸಮರ್ಥರೋ, ಯಾರು ಸಾಮಾನ್ಯರಲ್ಲವೋ ಅಂಥವರು ಮಾತ್ರ ಯುದ್ಧಕ್ಕೆ ಬರಲಿ. ಸ್ವಲ್ಪ ಕಡಿಮೆ ಶಕ್ತಿ, ಸಾಮಾನ್ಯ ಶಕ್ತಿ ಎನ್ನುವರು ಕಿಷ್ಕಿಂಧೆ ಕಾಯಲಿ. ಏಕೆಂದರೆ ಅಸಾಮಾನ್ಯವಾದ ಯುದ್ಧಕ್ಕೆ ಅಸಾಮಾನ್ಯವಾದ ಸೈನಿಕರೇ ಬೇಕಾಗ್ತಾರೆ. ಸಾಮಾನ್ಯರಿಂದ ಮಾಡಲು ಸಾಧ್ಯವಾಗುವಂತಹ ಯುದ್ಧ ಅಲ್ಲ. ಹಾಗಾಗಿ ಸಾಮಾನ್ಯ ಸೈನಿಕರು ಕಿಷ್ಕಿಂಧೆಯಲ್ಲೇ ಇರಲಿ ಎಂದು ಹೇಳಿ, ಮುಂದೆ ಬರಲಿರುವಂಥದ್ದು ಘೋರವಾದ ಯುದ್ಧ. ವಿಕ್ರಮದಿಂದ ನಾವು ಯುದ್ಧ ಮಾಡಬೇಕಾಗಿದೆ. ಹಾಗಾಗಿ ಕಪಿಸಿಂಹರು, ಸಮುದ್ರ ಸದೃಶರಾಗಿರತಕ್ಕಂತಹ ಅಗ್ರ ವಾನರ ಸೇನೆಯನ್ನು ಮುಂದೆ ಸೆಳೆದು ಕೊಂಡೊಯ್ಯಲಿ. ಅವರು ನೇತೃತ್ವ ವಹಿಸಲಿ ಎಂಬುದಾಗಿ ಹೇಳಿ ಒಂದು ಚಿಕ್ಕ ವ್ಯವಸ್ಥೆಯನ್ನು ಕೂಡಾ ಹೇಳ್ತಾನೆ.

ಗಜ, ಗವಯ ಗವಾಕ್ಷ, ಸೇನೆಯ ಮುಂಭಾಗದಲ್ಲಿ, ವಾನರ ಶ್ರೇಷ್ಠ ಋಷಭ, ಗಂಧಮಾದನ ಸೇನೆಯ ವಾಮಪಾರ್ಶದಲ್ಲಿ ರಕ್ಷಣೆ ಮಾಡಲಿ. ನಾನು ಮಧ್ಯ ಭಾಗದಲ್ಲಿರ್ತೇನೆ. ಹನುಮಂತನನ್ನೇರಿ ನಾನು ಸೇನೆಯ ಮಧ್ಯಭಾಗದಲ್ಲಿ ಪ್ರಯಾಣ ಮಾಡ್ತೇನೆ. ಇಡೀ ಸೈನ್ಯವನ್ನು ಹರ್ಷಗೊಳಿಸ್ತಾ ಮಧ್ಯದಲ್ಲಿ ನಾನಿರ್ತೇನೆ, ನನ್ನ ಪಕ್ಕದಲ್ಲಿ ಲಕ್ಷ್ಮಣ ಅಂಗದನ ಮೇಲೇರಿ. ಸೇನೆಯ ಮಧ್ಯಭಾಗವನ್ನು ಜಾಂಬವಂತ, ಸುಷೇಣ, ವೇಗದರ್ಶಿ ಈ ಮೂವರು ರಕ್ಷಣೆ ಮಾಡಲಿ. ಹೀಗೆ ನಾವೆಲ್ಲ ಮುಂದಾಗಿ ಹೊರಡೋಣ ಎಂಬುದಾಗಿ ರಾಮ ಅಪ್ಪಣೆ ಮಾಡಿದಾಗ ಅದೇ ಪ್ರಕಾರವಾಗಿ ಸುಗ್ರೀವನು ಎಲ್ಲ ವಾನರರಿಗೆ ಅಪ್ಪಣೆ ಮಾಡ್ತಾನೆ. ರಾಮನ ಸೂಚನೆಯ ಪ್ರಕಾರ ಮುಂದೆ ಗಜ, ಗವಯ, ಗವಾಕ್ಷ. ಈ ಕಡೆಗೆ ಋಷಭ ಆ ಕಡೆಗೆ ಗಂಧಮಾದನ, ಮಧ್ಯದಲ್ಲಿ ರಾಮ-ಲಕ್ಷ್ಮಣರು, ಹಿಂದೆ ಜಾಂಬವಂತ. ಇಷ್ಟು ಅಪ್ಪಣೆ ಆಗಿದ್ದೇ ಆಗಿದ್ದು ಪರ್ವತಾಗ್ರಗಳಿಂದ ನೆಗೆದರಂತೆ ವಾನರ ಶ್ರೇಷ್ಟರು. ಯುದ್ಧಕ್ಕೆ ಜೈತ್ರಯಾತ್ರೆಯ ಆರಂಭವೇ ಆಯಿತು. ವಾನರ ಗಣಗಳು ಎದ್ದು ಹಾರಿದ್ದೇ. ಬೆಟ್ಟದ ಮೇಲಿನಿಂದ, ಬೆಟ್ಟದ ತಗ್ಗಿನಿಂದ ಹಾರಿದರು. ಹೀಗೆ ಮಹಾಪ್ರಯಾಣ ಪ್ರಾರಂಭವಾಯಿತು. ವಾನರರಾಜ ಸುಗ್ರೀವನಿಂದಲೂ, ಲಕ್ಷ್ಮಣನಿಂದಲೂ ಪೂಜಿತನಾಗಿರತಕ್ಕಂತಹ ರಾಮನು ಹನುಮನನ್ನೇರಿ ಸೇನಾಸಮೇತನಾಗಿ ಲಂಕೆಯ ಕಡೆಗೆ ಪ್ರಯಾಣವನ್ನು ಬೆಳೆಸಿದನು.

ಎಷ್ಟೋ ಕೋಟಿ ಕಪಿವೀರರಿಂದ ಕೂಡಿರತಕ್ಕಂತಹ ರಾಮನ ಸೇನೆಯು ದಕ್ಷಿಣ ದಿಕ್ಕನ್ನು ಮುಚ್ಚಿ ಬರ್ತಾ ಇದ್ರೆ, ರಾಮನು ಮುಂದಾಗಿ ಲಂಕೆಯ ಕಡೆಗೆ ಜೈತ್ರಯಾತ್ರೆಯನ್ನು ಕೈಗೊಂಡನು.

ಯುದ್ಧಕಾಂಡದಲ್ಲಿ ಮುಂದೇನಾಯಿತು ಎನ್ನುವುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments Box