ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಕೊಟ್ಟದ್ದು ತನಗೆ. ಈ ಮಾತನ್ನು ಭಾರತವನ್ನು ಹೊರತುಪಡಿಸಿ ಇನ್ಯಾವ ದೇಶವೂ ಹೇಳಿಲ್ಲ. ನೀ ಕೊಟ್ಟದ್ದು ನಿನಗೆ. ಬಚ್ಚಿಟ್ಟದ್ದು ಪರರಿಗೆ.
ಒಳಿತಾಗಲಿ, ಕೆಡುಕಾಗಲಿ ಪ್ರಪಂಚಕ್ಕೆ ನಾವೇನು ಕೊಡುತ್ತೇವೋ ಅದೇ ಬಹುಗುಣವಾಗಿ, ಹಲವು ಪಾಲು ವೃದ್ಧಿ ಹೊಂದಿ ಹಿಂದಿರುಗಿ ಬರ್ತದೆ.

ರಾವಣ ವಿಶ್ವಕ್ಕೆ, ಸಮಾಜಕ್ಕೆ ಕೊಟ್ಟಿದ್ದೇನು ತನ್ನ ಜೀವನದಲ್ಲಿ ? ಭಯ. ಅದೊಂದು ಭಯಂಕರ ವ್ಯಕ್ತಿತ್ವ. ಸೀತಾಪಹರಣದ ಸಮಯದಲ್ಲಿ ನೀವು ಕೇಳಿದ್ದೀರಿ. ಗೋದಾವರಿ ನದಿ ರಾವಣನ ಕೆಂಪು ಕಣ್ಣುಗಳನ್ನು ಕಂಡು ಬೆದರಿ ಸ್ಥಿಮಿತವಾಗಿ ಹರಿಯಲಿಕ್ಕೆ ಆರಂಭ ಮಾಡಿತು. ಗಾಳಿ ಬೀಸಲಿಲ್ಲ. ಪಕ್ಷಿಗಳು ಬಚ್ಚಿಟ್ಟುಕೊಂಡವು. ಇದೆಲ್ಲ ಏನು? ಭಯ. ಕೆಲವರು ಪ್ರೀತಿಸ್ವರೂಪರು ಇನ್ನು ಕೆಲವರು ಭೀತಿ ಸ್ವರೂಪರು. ಕೆಲವರು ಪ್ರೀತಿಯಿಂದ ಕೆಲಸ ಮಾಡ್ಕೊಳ್ತಾರೆ. ಇನ್ನು ಕೆಲವರು ಭೀತಿಯ ಮೂಲಕವಾಗಿ ತಮ್ಮ ಕಾರ್ಯವನ್ನು ಸಾಧನೆ ಮಾಡ್ಕೊಳ್ತಾರೆ. ಈಗ ಆ ಭೀತಿ ತಿರುಗಿ ಬಂದಿದೆ. ರಾವಣ ಪ್ರಪಂಚಕ್ಕೇನು ಕೊಟ್ಟನೋ ಆ ಭಯವು ತಿರುಗಿ ಬಂದಿದೆ ಹನುಮಂತನ ರೂಪದಲ್ಲಿ.

ಅತ್ತ ರಾಮನು ಜೈತ್ರಯಾತ್ರೆಯನ್ನು ಕೈಗೊಂಡು ಸೇನಾಸಮೇತನಾಗಿ ಬಂದು ದಕ್ಷಿಣ ಸಾಗರವನ್ನೊತ್ತಿ ನಿಂತಿದ್ದಾನೆ. ರಾವಣನಿಗೂ ರಾಮನಿಗೂ ನಡುವೆ ಸಾಗರ ಮಾತ್ರ ಇರುವಂಥದ್ದು ಈಗ. ಇತ್ತ ರಾವಣನು ರಾಕ್ಷಸರ ಸಭೆಯನ್ನು ಕರೆದಿದ್ದಾನೆ. ಹನುಮನು ಲಂಕೆಯನ್ನು ಸುಟ್ಟುರುಹಿ ಹೋದ ಮೇಲೆ ತುರ್ತು ಕಾರ್ಯಗಳನ್ನು ಮೊದಲು ಮಾಡಿ ರಾವಣನು ರಾಕ್ಷಸ ನಾಯಕರ ಸಭೆಯನ್ನು ಸೇರ್ಸಿದಾನೆ. ಆ ಸಂದರ್ಭದಲ್ಲಿ ರಾವಣನ ಮನಸ್ಥಿತಿ ಏನಿತ್ತು? ಸಭೆಯನ್ನೇಕೆ ಕರೆದಿದ್ದ? ಎಂದರೆ ಲಂಕೆಯಲ್ಲಿ ಹನುಮಂತ ಮಾಡಿದ ಕಾರ್ಯದ ಹಿನ್ನೆಲೆಯಲ್ಲಿ. ರಾವಣನ ದೃಷ್ಟಿಯಲ್ಲಿ ಹನುಮಂತ ಮಾಡಿದ ಕಾರ್ಯ ಘೋರ, ಭಯಾವಹ ಎನ್ನಿಸಿದೆ. ಲಜ್ಜೆಯಿಂದ ರಾವಣನು ಸಭೆಯಲ್ಲಿ ತಲೆ ತಗ್ಗಿಸಿ ಕುಳಿತಿದ್ದಾನಂತೆ. ಇವನಿಗೆಂಥ ಲಜ್ಜೆ ಅಂದ್ರೆ ರಾವಣನ ಪ್ರಕಾರ ಸೀತೆಯ ಇರುವು ಹೊರ ಜಗತ್ತಿಗೆ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ಗೊತ್ತಾಗಿದೆ. ಸಮುದ್ರವನ್ನ ಯಾರೂ ದಾಟಿ ಬರಲಿಕ್ಕೆ ಸಾಧ್ಯವಿಲ್ಲ. ಹನುಮಂತ ದಾಟಿ ಬಂದಿದಾನೆ. ನೂರು ಯೋಜನ ಹಾರಿ, ನೂರು ಯೋಜನದ ಕಾಡು ದಾಟಿ, ನೂರು ಯೋಜನದ ಪರ್ವತವನ್ನು ಹತ್ತಿ, ಕೋಟೆಯನ್ನು ದಾಟಿ, ರಾಕ್ಷಸರ ಕೂಟದಲ್ಲಿ ಯಾರ ಕಣ್ಣಿಗೂ ಬೀಳದೆ ರಾವಣನ ಮನೆಯನ್ನು ಹೊಕ್ಕು ಅಂತಃಪುರವನ್ನು ಸೇರಿ ಸೀತೆಯನ್ನು ಕಂಡು ಸಂಭಾಷಣೆ ಮಾಡ್ತಾನೆ ಹನುಮಂತ ಅಂದ್ರೆ ಸೆಕ್ಯೂರಿಟಿಗೆ ಏನರ್ಥ ಇದೆ? ಅಂತಹ ದುರ್ಭೇದ್ಯವಾಗಿರತಕ್ಕಂತಹ ರಾವಣನ ಹೆಮ್ಮೆಯ ಸ್ವಾಭಿಮಾನವನ್ನು ಮುರಿಯಲಾಗಿದೆ. ಇದಿಷ್ಟು ಗೊತ್ತಾಗಿ ಮಾಡಿದ್ದಾದರೆ ಗೊತ್ತಾಗದೇ ಮಾಡಿದ್ದೆಷ್ಟು? ವನಭಂಗವನ್ನ ಮಾಡಿದ್ದು, ರಾಕ್ಷಸರ ಕುಲದೇವರ ನೆಲೆಯನ್ನು ಧ್ವಂಸ ಮಾಡಿರತಕ್ಕಂಥದ್ದು, ಅನೇಕ ಪ್ರಮುಖ ರಾಕ್ಷಸರನ್ನು ಸಂಹಾರ ಮಾಡಿದ್ದು, ಸೇನೆಸೇನೆಗಳನ್ನು ಒಬ್ಬನೇ ಎದುರಿಸಿದ್ದು, ಕೊಟ್ಟಕೊನೆಯಲ್ಲಿ ಬಾಲಕ್ಕೆ ಬೆಂಕಿಹಚ್ಚಿ ಅಪಮಾನ ಮಾಡ್ಬೇಕು ಅಂತ ರಾವಣ ಮಾಡಿದ್ರೆ, ಬಾಲಕ್ಕೆ ಬೆಂಕಿಹಚ್ಚಿ ಮೆರವಣಿಗೆ ಮಾಡಿದ್ರೆ ಅದೇ ಬಾಲದ ಬೆಂಕಿಯಲ್ಲಿ ಲಂಕೆಯನ್ನೇ ಸುಟ್ಟುರುಹಿದ್ದು. ಹಾಗಾಗಿ ಈ ಮೂರು ಶಬ್ದಗಳು ಬಳಕೆಯಾಗಿವೆ. ರಾವಣನ ಪಾಲಿಗೆ ಹನುಮ ಮಾಡಿದ ಕರ್ಮ ಘೋರ, ಭಯಾವಹ.
ಈವರೆಗೆ ಇದ್ದಿದ್ದು ಹೇಗೆ? ಇಡೀ ಪ್ರಪಂಚದ ಪಾಲಿಗೆ ರಾವಣನು ಘೋರ, ಭಯಾವಹ. ಅದೇ ಹೆಮ್ಮೆ ಅವನಿಗೆ. ನಮ್ಮನ್ನು ನೋಡಿ ನಮ್ಮ ಸುತ್ತಲಿನ ಜೀವಗಳು ಪ್ರೀತಿ ಪಡಬೇಕು ಹೊರತು ಭೀತಿ ಪಡಬಾರದು. ಭೀತಿ ಪಡಬೇಕಾದ್ರೆ ನಾವು ಕೇಡಾಗಿರಬೇಕು. ಹಾಗಾಗಿ ಮೊಟ್ಟಮೊದಲ ಬಾರಿಗೆ ಬಹುಶಃ, ತನ್ನ ಸೈನಿಕರ, ಸೇನಾನಾಯಕರ, ಪುರಪ್ರಮುಖರ ಮುಂದೆ ಹತ್ತೂ ತಲೆಯನ್ನು ತಗ್ಗಿಸಿ ಕುಳಿತುಕೊಂಡಿದಾನೆ ರಾವಣ ಸಭೆಯಲ್ಲಿ.

ರಾಕ್ಷಸರನ್ನು ಕುರಿತು ರಾವಣನು ಮಂದ ಸ್ವರದಲ್ಲಿ ಸಂಬೋಧಿಸ್ತಾನೆ; ಯಾವ ಲಂಕಾಪುರಿಯನ್ನು ಎದುರಿಸಲಿಕ್ಕೆ ಸಾಧ್ಯವಿಲ್ಲ, ಪ್ರವೇಶಿಸಲಿಕ್ಕೆ ಸಾಧ್ಯವಿಲ್ಲ ಎನ್ನುವಂತಹ ಲಂಕಾನಗರಿ ಅಪಮಾನಿತವಾಗಿದೆ. ಲಂಕಾಪುರಿಯನ್ನು ತುಡುಕಲಾಗಿದೆ. ಲಂಕಾಪುರಿಯು ಶತ್ರುಗಳಿಂದ ಪ್ರವೇಶಿಸಲ್ಪಟ್ಟಿದೆ. ಯಾರಿಂದ? ಒಂದು ಮಂಗ! ಒಂದು ಮಂಗ ಇಷ್ಟೆಲ್ಲ ಕೆಲಸ ಮಾಡ್ತಲ್ಲ! ಎಲ್ಲಕ್ಕಿಂತ ಹೆಚ್ಚಾಗಿ ಸೀತೆಯನ್ನು ಕಂಡು ಹೋದನಲ್ಲ ಹನುಮಂತ! ನಮ್ಮ ಕುಲದೇವರ ಸ್ಥಾನವು ಧ್ವಂಸಗೊಂಡಿದೆ. ಪ್ರಬಲ ರಾಕ್ಷಸರು ಹತರಾಗಿದ್ದಾರೆ. ಲಂಕಾಪುರಿಯು ಆಕುಲವಾಗಿದೆ. ಎಲ್ಲವೂ ಒಬ್ಬನಿಂದ. ಹಾಗಾಗಿ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದ ರಾವಣ ರಾಕ್ಷಸರನ್ನ ಕೇಳ್ತಾ ಇದ್ದಾನೆ; ನಾನೇನು ಮಾಡಲಿ? ಎಂದೂ ಬಾರದ ಪ್ರಶ್ನೆ ರಾವಣನಿಗೆ ಬಂದ್ಬಿಟ್ಟಿದೆ. ಏನು ಮಾಡಲಿ? ಯಾಕೆಂದರೆ ಬಂದವನೊಬ್ಬ. ಈಗ ಬರ್ತಾ ಇರೋವ್ರು ಕೋಟಿ ಕೋಟಿ ಕಪಿಗಳು. ಸಾಲದ್ದಕ್ಕೆ ಈ ಕಪಿಯ ಪ್ರಭು ಬರ್ತಿದಾನೆ. ಈ ಕಪಿಯು ಯಾರನ್ನು ಸರ್ವೋಚ್ಛ ನಾಯಕನಾಗಿ ಆರಾಧನೆ ಮಾಡ್ತಾನೋ, ತನಗಿಂತ ಸಹಸ್ರ ಗುಣ ಮೇಲು ಅಂತ ಹೇಳ್ತಾನೋ ಅಂತಹವನು ಬರ್ತಿದಾನೆ. ನಾನೀಗ ಏನು ಮಾಡಿದರೆ ಸರಿ? ಏನು ಮಾಡೋದು ಸೂಕ್ತ ಈಗ? ಹಾಗಾಗಿ ನೀವೆಲ್ಲರೂ ಸೇರಿ ನನಗೆ ಸಲಹೆ ಕೊಡಿ. ಏನನ್ನು ಮಾಡಿದರೆ ನಾನು ಸರಿಯಾದ್ದನ್ನು ಮಾಡಿದಂತೆ ಆಯಿತು? ಎಂಬುದನ್ನು ನೀವೆಲ್ಲರೂ ನನಗೆ ಸಲಹೆ ಕೊಡಬೇಕು.

ಇಷ್ಟಾದ ಮೇಲೆ ಮಂತ್ರಾಲೋಚನೆಯ ಕುರಿತು ಕೆಲವು ಮಾತುಗಳನ್ನು ರಾವಣ ಹೇಳ್ತಾನೆ. ಮಂತ್ರ ಶಬ್ದಕ್ಕೆ ಎರಡು ಅರ್ಥ ಇದೆ. ಒಂದು ದೇವರ ಅಕ್ಷರ ಸ್ವರೂಪ. ಅದನ್ನ ಅನುಸಂಧಾನ ಮಾಡ್ತಾ ಮಾಡ್ತಾ ನಾವು ದೇವರಲ್ಲಿಗೆ ಹೋಗಿ ತಲುಪ್ತೇವೆ. ಮಂತ್ರ ಎಂಬುದಕ್ಕೆ ಇನ್ನೊಂದು ಅರ್ಥ ಮಂತ್ರಾಲೋಚನೆ. ಆಪ್ತಸಮಾಲೋಚನೆ. ಶಬ್ದಕ್ಕೆ ಅರ್ಥ ಇಷ್ಟೆ: ಮನನದಿಂದ ಯಾವುದು ನಮ್ಮನ್ನ ಕಾಪಾಡ್ತದೋ ಅದು ಮಂತ್ರ. ವಿಜಯವು ಮಂತ್ರಮೂಲ. ಯಾವುದೇ ಮಹಾಯುದ್ಧವನ್ನು ಗೆಲ್ಬೇಕು ಅಂತಾದ್ರೆ ಮಂತ್ರವೇ ಮೂಲ ಅದಕ್ಕೆ. ಈ ಮಂತ್ರಾಲೋಚನೆಗಳು ಚೆನ್ನಾಗಿ ಸರಿಯಾಗಿ ನಡೆದಿರಬೇಕು. ಹೀಗೆ ಆರ್ಯರು ಹೇಳ್ತಾರಂತೆ. ರಾವಣ ಹೇಳ್ತಿರುವಂಥದ್ದು. ಹೀಗೆ ರಾಮನ ಕುರಿತು ನಾವೆಲ್ಲ ಸೇರಿ ಮಂತ್ರಾಲೋಚನೆ ಮಾಡ್ಬೇಕು ಅನ್ನಿಸ್ತಿದೆ. ಅದು ನನಗೆ ಇಷ್ಟ. ಆಮೇಲೆ ಮಂತ್ರದ ಬಗ್ಗೆ ಒಂದು ಭಾಷಣ ಕೊಡ್ತಾನೆ. ಏನು ಮಂತ್ರಾಲೋಚನೆ ಅಂದ್ರೆ?

ಮೂರು ಬಗೆಯ ಪುರುಷರಿರ್ತಾರೆ. ಉತ್ತಮ ಪುರುಷರು, ಮಧ್ಯಮ ಪುರುಷರು ಮತ್ತು ಅಧಮ ಪುರುಷರು. ಸಮಾನ ಮನಸ್ಸುಳ್ಳ ಮಿತ್ರರ ಜೊತೆಯಲ್ಲಿ, ಮಂತ್ರಿಗಳ ಜೊತೆಯಲ್ಲಿ ಸರಿಯಾಗಿ ಸಮಾಲೋಚನೆ ಮಾಡಿ, ಬಳಿಕ ತಾನು ಮಾಡಬೇಕಾದ ಪ್ರಯತ್ನವನ್ನು ಮಾಡಿ ದೇವರ ಆಶೀರ್ವಾದಕ್ಕೂ ಪ್ರಯತ್ನ ಮಾಡ್ತಾನೆ. ಇವನು ಪುರುಷೋತ್ತಮ. ಇದನ್ನ
ರಾವಣ ಈಗ ಭಾಷಣ ಮಾಡ್ತಾ ಇದಾನೆ. ಸೀತಾಪಹರಣ ಮಾಡ್ಬೇಕಿದ್ರೆ ಆಪ್ತರ ಜೊತೆ ಸಮಾಲೋಚನೆ ಮಾಡಿದ್ನ? ಇಲ್ಲ. ಕದಿಯೋ ಪ್ರಯತ್ನ ಮಾಡಿದ. ದೈವಾನುಗ್ರಹಕ್ಕೆ ಪ್ರಯತ್ನ ಮಾಡಿದ್ನ? ಇಲ್ಲ. ಯಾರದ್ದೋ ಹೆಂಡತಿನ ಕದ್ಕೊಂಡು ಬರ್ತೇನೆ ಆಶೀರ್ವಾದ ಮಾಡು ಅಂದ್ರೆ ಯಾವ ದೇವರು ಆಶೀರ್ವಾದ ಮಾಡ್ತಾನಪ?
ಮಧ್ಯಮನು ಯಾರು ಅಂದ್ರೆ ಒಬ್ಬನೇ ಆಲೋಚನೆ ಮಾಡಿ, ತೀರ್ಮಾನ ಮಾಡ್ತಾನೆ, ಪ್ರಯತ್ನವನ್ನೂ ಮಾಡ್ತಾನೆ, ದೈವಾನುಗ್ರಹವನ್ನೂ ಅಪೇಕ್ಷಿಸ್ತಾನೆ. ಮತ್ತೆಲ್ಲ ಇದೆ ಆದರೆ ಸಲಹೆ ಅಂಶ ಇಲ್ಲ. ಸಲಹೆ ಬೇಕು. ಯಾಕಂದ್ರೆ ಒಂದೇ ಬುದ್ಧಿಗೆ ಎಲ್ಲವೂ ತೋರೋದಿಲ್ಲ. ಹಲವು ಬುದ್ಧಿ ಸೇರಿದಾಗ್ಲೇ ಅರ್ಥವಾಗುವಂಥದ್ದು. ಅಧಮ ಯಾರು ಅಂದ್ರೆ ಸರಿಯಾಗಿ ತೀರ್ಮಾನವನ್ನೂ ಮಾಡ್ಕೊಂಡಿಲ್ಲ ಅವ್ನು, ಧರ್ಮ ಅಥವಾ ದೈವದ ಆಶ್ರಯವನ್ನೂ ಕೂಡ ಹೊಂದಿಲ್ಲ, ಸರಿಯಾದ ಪ್ರಯತ್ನವನ್ನೂ ಮಾಡೋದಿಲ್ಲ.

ಮಂತ್ರಾಲೋಚನೆಯಲ್ಲೂ ಮೂರು ವಿಧಗಳಂತೆ ರಾವಣನ ಪ್ರಕಾರ. ಉತ್ತಮ ಮಂತ್ರಾಲೋಚನೆ ಅಂದ್ರೆ ಸಮಾಲೋಚನೆಯಲ್ಲಿ ಭಾಗಿಯಾದ ಎಲ್ಲರ ಮನಸ್ಸೂ ಒಂದೇ. ಮಧ್ಯಮ ಯಾವುದು ಅಂದ್ರೆ ಬೇರೆ ಬೇರೆ ಅಭಿಪ್ರಾಯ ಬರ್ತದೆ ಆದರೆ ಕೊನೆಯಲ್ಲಿ ಒಂದೇ ಅಭಿಪ್ರಾಯ ಬರ್ತದೆ. ಅಧಮ ಯಾವುದು ಅಂದ್ರೆ ತೀರ್ಮಾನಕ್ಕೇ ಬರೋದಿಲ್ಲ. ಹಾಗಾಗಿ ಈಗ ನಾವು ಉತ್ತಮ ಮಂತ್ರವನ್ನ ಮಾಡೋಣ. ಒಂದೇ ಮನಸ್ಸಿನಲ್ಲಿ ನಾವೆಲ್ಲರೂ ಕೂತು ಒಂದೇ ತೀರ್ಮಾನವನ್ನು ಮಾಡೋಣ. ಮಂತ್ರಾಲೋಚನೆಗೆ ತೊಡಗಿ ಎಂಬುದಾಗಿ ಒಂದು ಭಾಷಣವನ್ನ ಮಾಡಿ ಆಮೇಲೆ ಮತ್ತೆ ವಿಷಯಕ್ಕೆ ಬಂದ. ರಾಮ ಬಂದಾಯಿತು. ಸಾವಿರ ಸಾವಿರ ವಾನರರೊಡಗೂಡಿ ರಾಮ ಬಂದು ಮುತ್ತಿಯಾಯಿತು ಲಂಕೆಯನ್ನು. ಇನ್ನು ಹೆಚ್ಚು ತಡ ಇಲ್ಲ. ರಾಮನು ಬಂದು ಲಂಕೆಯನ್ನು ಮುತ್ತುತ್ತಾನೆ. ಸಮುದ್ರವನ್ನು ದಾಟಿ ಬರಬೇಕಲ್ಲ ಎನ್ನುವ ಶಂಕೆ ಕೆಲವರಲ್ಲಿ ಕಾಡಿರಬೇಕು ಅದಕ್ಕೂ ಉತ್ತರ ಕೊಡ್ತಾನೆ ರಾವಣ. ಆರಾಮವಾಗಿ, ಸುಖವಾಗಿ ಸಮುದ್ರವನ್ನು ದಾಟಿ ಬರ್ತಾನೆ ರಾಮ. ಬೇಕಾದ ಉಪಾಯವನ್ನು ಮಾಡ್ತಾನೆ ಅವನು. ಅವನ ಜೊತೆಗೆ ಅವನ ತಮ್ಮನೂ ಬರ್ತಾನೆ, ಅವನ ಸೈನ್ಯವೂ ಬರ್ತದೆ. ಏನ್ಮಾಡ್ತಾನೋ..? ಸಮುದ್ರವನ್ನೇ ಒಣಗಿಸಿ ಧೂಳಿನ ಮೇಲೆ ನಡೆದುಕೊಂಡು ಬರಬಹುದು ರಾಮ. ಅಥವಾ ಅವನ ಪರಾಕ್ರಮಕ್ಕೆ ಅವನು ಮತ್ತೇನಾದರೂ ಮಾಡಬಹುದು. ಇದರ ಒಟ್ಟೂ ತಾತ್ಪರ್ಯಲಲ ಅಂದ್ರೆ ರಾವಣನಿಗೆ ತನ್ನ ಮೇಲೆ ವಿಶ್ವಾಸ ಕಡಿಮೆಯಾಗಿದೆ. ರಾಮನ ಮೇಲೆ ವಿಶ್ವಾಸ ಜಾಸ್ತಿಯಾಗಿದೆ. ರಾವಣನ ಆತ್ಮವಿಶ್ವಾಸ ಕುಸಿದಿದೆ. ಹನುಮಂತನ ಕೊಡುಗೆ ಅದು.
ರಾಮನು ಸುಖವಾಗಿ ಸಮುದ್ರವನ್ನು ದಾಟಿ ಬರ್ತಾನೆ. ಏನು ಮಾಡೋದು? ಯೋಚನೆ ಮಾಡಿ. ನಾವೀಗ ವಾನರರ ವೈರವನ್ನು ಕಟ್ಟಿಕೊಂಡಿದ್ದೇವೆ. ಸೀತೆಯನ್ನು ಇಟ್ಟುಕೊಳ್ಳುವ, ದಕ್ಕಿಸಿಕೊಳ್ಳುವ ಈ ಕಾರ್ಯ ವಾನರರ ವಿರೋಧವನ್ನು ಹೊಂದಿದೆ. ಈವರೆಗೆ ವಾನರರು ಲೆಕ್ಕವಿಲ್ಲ ರಾವಣನಿಗೆ. ಈಗ ಮಾತ್ರ ಸ್ವಲ್ಪ ಚಿಂತೆಯಾಗಿದೆ ಅವನಿಗೆ ವಾನರರ ವೈರ.
ಹಾಗಾಗಿ, ಲಂಕಾನಗರಕ್ಕೆ‌ ಹಿತವಾವುದು? ನನ್ನ ಸೈನ್ಯಕ್ಕೆ ಹಿತವಾವುದು? ನನಗೆ ಹಿತವಾವುದು? ಎಲ್ಲರೂ ಸೇರಿ ಸಮಾಲೋಚನೆ ಮಾಡೋಣ ಎಂಬುದಾಗಿ ಹೇಳಿ ಸಮಾಲೋಚನೆಗೆ ಕರೆಕೊಟ್ಟ ರಾವಣ.

ಈ ಸಮಾಲೋಚನೆ ಮಾಡ್ತಾನೆ ಎನ್ನುವುದೇ ಅವನೊಳಗಿನ ಅಳುಕನ್ನು ತೋರಿಸುವಂಥದ್ದು. ಬಹಳ ಸಮಾಲೋಚನೆಗಳನ್ನು ಮಾಡಿದ್ದ ರಾವಣ. ಅವನು ಈವರೆಗೆ ಏನೆಲ್ಲ ಮಾಡಿದ್ದಾನೋ, ಯಾವ ಸಮಾಲೋಚನೆಯಲ್ಲಿಯೂ ಒಪ್ಪುವಂತಹ ವಿಷಯವಲ್ಲ ಅದು. ಆಗ ಅಲ್ಲಿ ಸೇರಿದ ರಾಕ್ಷಸ ನಾಯಕರು ಏನು ಹೇಳಿದರು? ಅಂದ್ರೆ, ಎಲ್ಲ ಹೌದಪ್ಪಗಳೇ ಇರೋದಲ್ಲಿ. ಇಲ್ಲ ಅಂದ್ರೆ ನಾಳೆಯಿಂದ ಅವನೇ ಇಲ್ಲ. ಹಾಗಾಗಿ, ಎಲ್ಲಾ ರಾಕ್ಷಸರು ಎದ್ದು ನಿಂತು ಸೊಂಟ ಬಗ್ಗಿ ರಾವಣನಿಗೆ ಕೈಮುಗಿದು ಹೇಳಿದರಂತೆ, ‘ಈ ಕೆಲವರು, ದೊರೆಯನ್ನು ಭಯ ಪಡಿಸುವಂತವರು ಇರ್ತಾರೆ. ಅವರಿಗೆ ಶತ್ರುಪಕ್ಷದ ದೌರ್ಬಲ್ಯದ ಪರಿಜ್ಞಾನವೂ ಇಲ್ಲ, ತಮ್ಮ ಪಕ್ಷದ ಬಲದ ಪರಿಜ್ಞಾನವೂ ಇಲ್ಲ. ಅವರೆಲ್ಲ ಅಬುದ್ಧರು, ಅವರು ಏನು ಬೇಕಾದರೂ ಹೇಳಲಿ. ನಮಗೇನೂ ಭಯವಿಲ್ಲ. ನಮ್ಮ ಸೈನ್ಯ ವಿಶಾಲವಾಗಿರತಕ್ಕಂತದ್ದು‌. ವಿಶೇಷ ಆಯುಧಗಳಿರತಕ್ಕಂತಾ ಮಹಾಸೈನ್ಯ ನಮ್ಮದು. ನೀನು ಯಾಕೆ ಚಿಂತೆ ಮಾಡ್ಬೇಕು? ಎಂದೂ ಕಾಣದ ವಿಷಾದದ, ಭಯದ, ಲಜ್ಜೆಯ ರೂಪ ಅತ್ಯಾಶ್ಚರ್ಯಕರ ನಿನ್ನದು, ಯಾಕೆ ಚಿಂತೆ ಮಾಡ್ಬೇಕು? ಇಂಥಾ ದೊಡ್ಡ ಸೈನ್ಯ ನಮ್ಮದಿದೆ. ಇಂಥಾ ಆಯುಧಗಳೆಲ್ಲ ಇದ್ದಾವೆ ನಮ್ಮಲ್ಲಿ.

ಮತ್ತೆ, ನೀನಾದರೂ ಕಡಿಮೆಯವನಾ? ಒಂದು ಕಾಲದಲ್ಲಿ ಭೋಗವತಿ ನಗರಿಯನ್ನು ಹೊಕ್ಕು ನಾಗರನ್ನು ಗೆದ್ದವನು ನೀನು. ಅದಿರಲಿ, ಯಕ್ಷಲೋಕದ ಸರ್ವೇಶ್ವರ ನಿನ್ನ ದೊಡ್ಡಣ್ಣ ವಯಿಶ್ರವಣ(ಕುಬೇರ)ನೊಟ್ಟಿಗೆ ದೊಡ್ಡ ಯುದ್ಧವನ್ನು ಮಾಡಿ, ಅಸಂಖ್ಯಾತ ಯಕ್ಷರನ್ನು ಮರ್ಧಿಸಿ ನಿನ್ನ ಅಣ್ಣನನ್ನು ಸೋಲಿಸಿದವನು ನೀನು.
ಅವನಾದರೋ‌ ಎಂಥವನು? ಈಶ್ವರನ ಮಿತ್ರ. ಅವನು ನಿನ್ನಿಂದ ಸೋಲಿಸಲ್ಪಟ್ಟ. ಪ್ರವಾಹದಂತೆ ಬಂದ ಯಕ್ಷರನ್ನು ನೀನು ಕ್ಷೋಭೆಗೊಳಿಸಿ ಅವರೊಡನೆ ಸಮರ ಸಾರಿ, ಯಕ್ಷರುಗಳನ್ನು ಭಂಗಗೊಳಿಸಿ ಪುಷ್ಪಕ ವಿಮಾನವನ್ನು ಇಲ್ಲಿಗೆ ತಂದವನು. ಯಾಕೆ‌ ಚಿಂತೆ ಮಾಡ್ಬೇಕು? ಮತ್ತೇನೋ‌ ಬೇಡ, ಮಂಡೋದರಿಯನ್ನು ನೋಡಿದರೆ ಸಾಕು ನಿನ್ನ ಪರಾಕ್ರಮ‌ ಏನು ಅಂತ ಗೊತ್ತಾಗ್ತದೆ. ಮಂಡೋದರಿಯ ತಂದೆ ರಾಕ್ಷಸ ಶಿಲ್ಪಿ ಮಯ ಪ್ರೀತಿಯಿಂದ ಕೊಟ್ಟಿದ್ದಲ್ಲ; ನಿನ್ನ ಭೀತಿಯಿಂದ ಕೊಟ್ಟಿದ್ದು ಮಂಡೋದರಿಯನ್ನು.

ರಾವಣ ಬೇರೆ ಬೇರೆ ಊರಿಗೆ ಹೋಗಿ‌ ಸ್ತ್ರೀಯರನ್ನು ಅಪಹರಿಸಿ ತರ್ತಾ ಇರ್ತಾನೆ. ತಂದೆ, ಗಂಡ, ಮಕ್ಕಳನ್ನೆಲ್ಲ‌ ಕೊಂದು, ಆ ಹೆಣ್ಮಕ್ಕಳನ್ನೆಲ್ಲ‌ ವಿಮಾನದಲ್ಲಿ ತುಂಬಿ ತರ್ತಾ ಇರ್ತಾನೆ. ಲಂಕೆಗೆ ಬರುವ ಹೊತ್ತಿಗೆ ವಿಭೀಷಣ ಜರಿದನಂತೆ ರಾವಣನನ್ನು. ಕೆಟ್ಟ ಕೆಲಸ ಮಾಡ್ತಾ ಇದ್ದೀಯೆ ಪ್ರಪಂಚದಲ್ಲಿ, ನೋಡು ಅದರ ಫಲ ಬಂತು‌ ಇಲ್ಲಿ.‌ ನಿನ್ನ ತಂಗಿ ಕುಂಬೀನಕಿಯನ್ನು ಮಧುವೆಂಬ ದಾನವನು ಕದ್ದುಕೊಂಡು ಹೋಗಿದ್ದಾನೆ. ಆ ಸಮಯದಲ್ಲಿ ಮಧುವೆಂಬ ದಾನವನನ್ನು ನೀನು ವಶಪಡಿಸಿದವನು. ಆಮೇಲೆ ಬಲಿಷ್ಠ ದಾನವರ ಜೊತೆಗೆ ಒಂದು ವರ್ಷ ಯುದ್ಧ ಮಾಡಿ ನೀನು ಸೋತಿಲ್ಲ. ಅವರಿಂದ‌ ನಿನಗೆ ನೂರು ಮಾಯೆಗಳು ಲಭಿಸಿದವು. ಅದು ನಿನ್ನ ಕೀರ್ತಿ. ದೇವಲೋಕವನ್ನು ಆಕ್ರಮಿಸಿ ನೀನು ಲೋಕಪಾಲರನ್ನು ಗೆದ್ದವನು. ಯಮಲೋಕವನ್ನೂ ಗೆದ್ದವನು‌ ನೀನು, ಸೋತವನಲ್ಲ. ಭೂಲೋಕದಲ್ಲಿ ಎಷ್ಟೆಲ್ಲಾ ಚಕ್ರವರ್ತಿಗಳಿದ್ದರು! ಎಲ್ಲಾ ವೀರರು. ರಾಮ ಅವರ ಮುಂದೆ ಏನು? ಎಂತೆಂಥಾ ವೀರ ಚಕ್ರವರ್ತಿಗಳನ್ನೆಲ್ಲ ಕೊಂದವನಲ್ಲವಾ ನೀನು? ರಾಮನೇನು?‌

ನಿನ್ನ‌ ಮಗ ಇಂದ್ರಜಿತು; ಅವನೆಂತಹ ಪರಾಕ್ರಮಿ! ನೀನು ಏಕೆ ಶ್ರಮ ಪಡಬೇಕು? ನಿನ್ನ ಮಗನನ್ನು ಕಳುಹಿಸು. ಅವನೊಬ್ಬನೇ ಎಲ್ಲ ಕೆಲಸವನ್ನೂ ಮಾಡಿಕೊಂಡು ಬರ್ತಾನೆ. ಒಂದು ಕಾಲದಲ್ಲಿ‌ ಮಾಹೇಶ್ವರ ಯಜ್ಞವನ್ನು‌ ಮಾಡಿ ಪರಮ ದುರ್ಲಭವಾದ ವರವನ್ನು ಪಡೆದವನು ಇಂದ್ರಜಿತು. ಅವನೋ ದೇವಸೈನ್ಯವನ್ನೇ ಸೋಲಿಸಿ ಇಂದ್ರನನ್ನು ಎಳೆದು ತಂದು ಸೆರೆಮನೆಯಲ್ಲಿ ಬಂಧಿಸಿದವನು. ಆಮೇಲೆ ಬ್ರಹ್ಮ ಬಂದು ಬಿಡಿಸಿಕೊಂಡು ಹೋಗಬೇಕಾಯ್ತು. ಅಂಥವನಿದ್ದಾನೆ! ಅವನನ್ನು ಕಳುಹಿಸಿ ಕೊಟ್ಟರೆ ರಾಮ ಲಕ್ಷ್ಮಣ ವಾನರಸೇನೆ ಎಲ್ಲ ಇಲ್ಲ. ಹಾಗಾಗಿ ಯಾರೋ ಸಣ್ಣ ಸಣ್ಣ ಜನರು ಲಂಕೆ ಮುತ್ತಲಿಕ್ಕೆ‌ ಬಂದರು ಅಂತ ಯಾಕೆ ಭಯ ಪಡಬೇಕು?’
ರಾಜನಾದವನು ಒಳ್ಳೆಯ ಸಲಹೆಯನ್ನು ಕೊಡುವವರನ್ನು ಇಟ್ಟುಕೊಳ್ಳಬೇಕು. ಆಪತ್ತನ್ನು ತಿಳಿಸಿ ಹೇಳುವಂಥವರು ಒಟ್ಟಿಗಿರಬೇಕು.ಇಂಥವರು
ಸಚಿವರಾಗಿದ್ದರೆ ರಾಜನಿಗೆ ಬರಬಾರದ ಗತಿ ಬರುತ್ತದೆ.
‘ನೀನು ಮನಸ್ಸಲ್ಲಿಟ್ಟುಕೊಳ್ಳುವುದೇ ಬೇಡ ಏನೂ. ನೀನು ಗೆಲ್ತೀಯೆ, ಯುದ್ಧದಲ್ಲಿ ರಾಮಸಹಿತವಾಗಿ ಶತ್ರುಗಳ ಸಂಹಾರವಾಗ್ತದೆ’ ಅಂತ ಎಲ್ಲ‌ ರಾಕ್ಷಸರೂ ಒಟ್ಟಿಗೇ ವದರಿದರು!

ಇದಾದ ಮೇಲೆ ಒಬ್ಬೊಬ್ಬರೇ ಎದ್ದು ನಿಂತು ಶುರು ಮಾಡ್ತಾರೆ. ಮೊದಲು ಲಂಕೆಯ ಸೇನಾಪತಿ ಪ್ರಹಸ್ತ ಎದ್ದು ನಿಂತು, ‘ ದೇವ ದಾನವ ಗಂಧರ್ವರು, ಪಿಶಾಚರು, ಪನ್ನಗರು, ಉರಗರು ಯಾರೂ ನಿನ್ನನ್ನು ಎದುರಿಸಿ ಗೆಲ್ಲಲಿಕ್ಕೆ ಸಾಧ್ಯವಿಲ್ಲ. ಆ ಎರಡು ಮನುಷ್ಯರು ಏನು ಮಾಡಲಿಕ್ಕೆ ಸಾಧ್ಯ? ಹನುಮಂತ ಇಷ್ಟೆಲ್ಲ ಮಾಡಿದ ಅಂದ್ರೆ, ಅದು ಮೋಸ ಆಯ್ತು. ಗೊತ್ತೇ ಆಗಿಲ್ಲ‌ ನಮಗೆ. ನಾವು ವಿಶ್ವಾಸದಲ್ಲಿ ಇದ್ದೆವು ಏನೂ ತೊಂದರೆ ಇಲ್ಲಾಂತ.
ನಮ್ಮನ್ನು ವಂಚಿಸಿ ಹನುಮಂತ ಇಷ್ಟೆಲ್ಲ ಮಾಡಿದ್ದು’.
ನಿಜವಾಗಿ ಹನುಮಂತ ಇದೆಲ್ಲ ಅವರ ಕಣ್ನುಂದೆಯೇ ಮಾಡಿದ್ದು, ಅವನ ಪ್ರತಿಜ್ಞೆಯೂ ಕೂಡ ಅಂತದ್ದೇ. ಭ್ರಮೆಗೊಳಿಸ್ತಾ ಇದ್ದಾನೆ ಪ್ರಹಸ್ತ, ‘ನಮಗೆ ಕಲ್ಪನೆ ಇರಲಿಲ್ಲ ಆ ವಾನರ ಹೀಗೆಲ್ಲ ಮಾಡಬಹುದು ಅಂತ, ಗೊತ್ತಾಗ್ಲೇ ಇಲ್ಲ. ನನಗೇನಾದರೂ ಕಲ್ಪನೆ ಇದ್ದಿದ್ದರೆ ಆ ಹನುಮಂತನನ್ನು ಜೀವಸಹಿತ ಬಿಡ್ತಿರಲಿಲ್ಲ‌ ನಾನು.
ಆದರೆ ಗೊತ್ತೇ ಆಗಲಿಲ್ಲ’ ಎಂದು ತನಗೂ ಮೋಸ ಮಾಡ್ಕೊಂಡು ರಾವಣನಿಗೂ ಮೋಸ ಮಾಡ್ತಾ ಇದ್ದಾನೆ. ‘ಅಪ್ಪಣೆ ಕೊಡು ದೊರೆಯೇ, ಭೂಮಂಡಲದಲ್ಲಿ ವಾನರರ ತಳಿಯೇ ಇಲ್ಲದಂತೆ ಮಾಡ್ತೇನೆ.ಈ ವಾನರಕೋಟಿಯಿಂದ ಲಂಕೆಗೆ ನಾನು ರಕ್ಷಣೆಯನ್ನು ಕೊಡ್ತೇನೆ. ನಿನಗೆ ಯಾವ ದುಃಖವೂ ಬರಲಿಕ್ಕಿಲ್ಲ ನೀನು ಮಾಡಿದ ತಪ್ಪಿನಿಂದ’.
ಭಯಂಕರ ಕ್ರುದ್ಧನಾಗಿ ದುರ್ಮುಖ ಏನಂದ? ‘ನಾವಿದನ್ನು ಸಹಿಸಬಾರದು. ನಮಗೆಲ್ಲ ಇದು ಅಪಮಾನ. ಒಂದು ವಾನರ ಬಂದು ಶ್ರೀಮಾನ್ ರಾವಣೇಂದ್ರನ ಅಂತಃಪುರವನ್ನು ಪ್ರವೇಶ ಮಾಡುವುದು ಅಂದರೇನು? ಈ ಘಳಿಗೆಯಲ್ಲಿ ನಾನೊಬ್ಬನೇ ಹೊರಟೆ, ಎಲ್ಲಾ ವಾನರರನ್ನೂ‌ ನಾನೊಬ್ಬನೇ ಸಂಹಾರ ಮಾಡಿಬಿಡ್ತೇನೆ. ಅವರು ಬೇಕಾದರೆ ಸಮುದ್ರತಲದಲ್ಲಿ ಅಡಗಲಿ, ಆಕಾಶದಲ್ಲಿ ಹಾರಿ ಮೋಡಗಳ‌ ಆಚೆಗೆ ಎಲ್ಲಿಯಾದರೂ ಹೋಗಿ ಹುದುಗಲಿ. ಒಂದೇ ಒಂದು ವಾನರನೂ ಉಳಿಯದಂತೆ ಎಲ್ಲರನ್ನೂ ಸಂಹಾರ ಮಾಡಿ ಬರ್ತೇನೆ’ ಎಂದನಂತೆ.

ವಜ್ರದ್ರಂಷ್ಟ್ರ ನಿತ್ಕೊಂಡ. ಅವನೂ ಭಯಂಕರ ಕ್ರುದ್ಧನಾಗಿ ತನ್ನ ಪರಿಘಾಯುಧವನ್ನು ಎತ್ತಿ ತಿರುಗಿಸಿದನಂತೆ. ಮಾಂಸ ಮತ್ತು ರಕ್ತಗಳಿಂದ ಮೆತ್ತಲ್ಪಟ್ಟಿತ್ತು ಆ ಪರಿಘಾಯುಧ. ‘ಹನುಮಂತನ ವಿಷಯ ಯಾಕೆ? ನಾನು ರಾಮನನ್ನೇ ನೋಡಿಕೊಳ್ತೇನೆ. ಅವನ ಜೊತೆ ಸುಗ್ರೀವ ಬರಲಿ, ಲಕ್ಷ್ಮಣ ಬರಲಿ, ಲೆಕ್ಕ‌ ಇಲ್ಲ. ಹನುಮಂತನನ್ನು ನೀವು ಯಾರಾದ್ರೂ ನೋಡ್ಕೊಳಿ ಬೇಕಾದ್ರೆ. ಈ ಒಂದೇ ಪರಿಘದಿಂದ ಎಲ್ಲಾ ವಾನರರನ್ನೂ ರಾಮ ಲಕ್ಷ್ಮಣರನ್ನೂ ಎಲ್ಲರನ್ನೂ ಸಂಹಾರ ಮಾಡಿಬಿಡ್ತೇನೆ’ ಎಂದು ಹೇಳಿದವನು ಆಮೇಲೆ ದಾಟಿ ಸ್ವಲ್ಪ ಬದಲಾಯಿಸಿ ರಾವಣನಿಗೆ ಹೇಳಿದನಂತೆ, ‘ಅದಿರಲಿ, ಇನ್ನೊಂದು ಸಲಹೆ ಇದೆ ನನ್ನದು. ಶತ್ರುಗಳನ್ನು ಉಪಾಯದಿಂದ, ವಂಚನೆಯಿಂದ ಗೆಲ್ಲಬೇಕಂತೆ. ನಾವು ಒಂದು ಕೆಲಸ ಮಾಡೋಣ. ನಾವೆಲ್ಲರೂ ಬೇಕಾದ ರೂಪವನ್ನು ತಾಳ್ತಕ್ಕಂತ ಶಕ್ತಿ ನಮಗೆಲ್ಲ ಇದೆ. ನಾವೆಲ್ಲ ಮನುಷ್ಯ ರೂಪವನ್ನು ತಾಳಿ ರಾಮನ ಬಳಿಗೆ ಹೋಗೋಣ, ಅಯೋಧ್ಯೆಯಿಂದ ಅರಸ ಕಳುಹಿಸಿ ಬಂದಿದ್ದೇವೆ ಅಂತ ಹೇಳೋಣ’.
ನಮ್ಮನ್ನು ಬಿಟ್ಟು ಪ್ರಪಂಚವೆಲ್ಲ ಮೂರ್ಖ ಅಂತ ಇವರು ಭಾವಿಸಿರ್ತಾರೆ!
‘ಹಾಗೇ ಮನುಷ್ಯ ರೂಪವನ್ನು ತಾಳಿ ನಿನ್ನ ತಮ್ಮ ಭರತನಿಂದ ಕಳುಹಲ್ಪಟ್ಟವರು ನಾವು, ಅಯೋಧ್ಯೆಯಲ್ಲಿ ಅಗತ್ಯವಾಗಿ ಮಾಡಬೇಕಾದ ಕಾರ್ಯವಿದೆಯಂತೆ ನಿನಗೆ, ಕೂಡಲೇ ಹೊರಡು’ ಅಂತ ಹೇಳೋದು. ಆಗ ಸಹಜವಾಗಿ ರಾಮ ಲಕ್ಷ್ಮಣರಿಬ್ಬರೂ ಕೂಡ ಅಯೋಧ್ಯೆಯ ಕಡೆ ಹೋಗ್ತಾರೆ. ಆಗ ಆಕಾಶದಲ್ಲಿ ಗುಂಪು ಗುಂಪಾಗಿ ನಿತ್ತು ಕಪಿಗಳನ್ನೆಲ್ಲ ಮುಗಿಸಿಬಿಡೋಣ ಅಂತ. ಹೀಗೆ ಮಾಡಿದರೆ ಸ್ವಲ್ಪ ಹೊತ್ತಲ್ಲಿ ಮುಗಿದು ಹೋಗ್ತದೆ ವಾನರ ಸೈನ್ಯ. ಆಮೇಲೆ‌ ಇಬ್ಬರೇ ಇರ್ತಾರೆ ಅವರು. ಹೀಗೆ ಕೂಟನೀತಿಯಿಂದ ವಾನರ ಸೇನೆಯನ್ನು ನಾಶ ಮಾಡಬಹುದು ಎಂದು ಅದ್ಭುತ ಸಲಹೆಯನ್ನು ಕೊಟ್ಟ ವಜ್ರದಂಷ್ಟ್ರ.

ಮೋಸವೇ ರಾಕ್ಷಸತ್ವ, ಅದಿಲ್ಲದೇ ರಾಕ್ಷಸತ್ವ ಇಲ್ಲ. ಅಲ್ಲಿ ನೀತಿ ಇಲ್ಲ, ಧರ್ಮ ಇಲ್ಲ, ಅಲ್ಲಿ ನೇರ ವ್ಯವಹಾರ ಇಲ್ಲ. ಅಲ್ಲಿರೋದು ಕಪಟ ವಂಚನೆ, ಸುಳ್ಳು. ಹಾಗಾಗಿ ಸುಳ್ಳಿನಿಂದ ಗೆಲ್ಲೋಣ. ಕುಂಭಕರ್ಣನ ಮಗ ನಿಕುಂಬ ಪರಮಕ್ರುದ್ಧನಾಗಿ ಎದ್ದು ನಿಂತನಂತೆ. “ಅಷ್ಟೂ ರಾಕ್ಷಸರು ಒಟ್ಟಿಗೆ ಇಲ್ಲೇ ಇರಿ. ನಾನು ಹೋಗಿ ಎಲ್ಲ ಕೆಲಸ ಮಾಡಿ ಬರ್ತೇನೆ. ರಾಮ, ಲಕ್ಷ್ಮಣ, ಸುಗ್ರೀವ, ಹನುಮಂತ ಎಲ್ಲರಿಗೆ ನಾನೊಬ್ಬನೇ ಸಾಕು. ವಜ್ರ ಹನು ಎಂಬ ಇನ್ನೊಂದು ರಾಕ್ಷಸ, ಪರ್ವತಾಕಾರ, ಅವನು ನಿಂತುಕೊಂಡು ನಾಲಿಗೆಯಿಂದ ತನ್ನ ಮುಖವನ್ನು ನೆಕ್ಕಿಕೊಂಡನಂತೆ. ಉದ್ದ ನಾಲಿಗೆ ಇತ್ತು ಅಂತ ಕಾಣ್ತದೆ. ಹಾಗಾಗಿ ನೆಕ್ಕಿಕೊಂಡ. ನೆಕ್ಕಿ ಹೇಳಿದ, “ನನಗೆ ಅವರೆಲ್ಲರೂ ಒಂದು ಊಟ. ನಾನೊಬ್ಬನೇ ವಾನರ ಕೋಟಿಯನ್ನು ತಿಂದುಬಿಡ್ತೇನೆ”. ಕೋಟ್ಯಾಂತರ ಕಪಿಗಳಿದ್ದಾರೆ, ನೀವೆಲ್ಲ ನಿಶ್ಚಿಂತರಾಗಿ ನಿಮ್ಮ ನಿಮ್ಮ ಕೆಲಸ ಮಾಡ್ತಾ ಇರಿ. ಯಾರೂ ಬರಬೇಡಿ. ವಿಹರಿಸುವುದಾದರೆ ವಿಹರಿಸಿರಿ, ಮದ್ಯಪಾನ ಮಾಡುವುದಾದರೆ ಮಾಡಿ. ನಾನೊಬ್ಬನೇ ಎಲ್ಲ ಕೆಲಸವನ್ನು ಮಾಡ್ತೇನೆ.

ಹೀಗೆ ಇಷ್ಟು ಆಗ್ತಾ ಇದ್ದಂತೆ ಎಲ್ಲರೂ ಎದ್ದು ನಿಂತರಂತೆ. ನಿಕುಂಭ, ರಭಸ, ಸೂರ್ಯಶತ್ರು, ಸುಪ್ತಘ್ನ – ಅಂದ್ರೆ ಮಲಗಿ ನಿದ್ದೆ ಮಾಡುವವರನ್ನು ಹೋಗಿ ಕೊಲ್ತಿದ್ದನಂತೆ. ಎತ್ಯಘ್ನ, ಮಹಾಪಾರ್ಶ್ವ, ಮಹೋಧರ, ಅಗ್ನಿಕೇತು, ರಶ್ಮಿಕೇತು, ಇಂದ್ರಜಿತ್, ಪ್ರಹಸ್ತ, ವಿರೂಪಾಕ್ಷ, ವಜ್ರದಂಷ್ಟ್ರ, ಧೂಮ್ರಾಕ್ಷ, ಅತಿಕಾಯ, ದುರ್ಮುಖ, ಎಲ್ಲರೂ ನಿಂತುಕೊಂಡರು. ಎಲ್ಲರೂ ಎದ್ದು ನಿಂತು ತಮ್ಮ ತಮ್ಮ ಆಯುಧಗಳನ್ನು ಝಳಪಿಸಿದರಂತೆ. ಎಲ್ಲ ಸೇರಿ ಹೇಳಿದರಂತೆ ನಾನು ರಾಮನನ್ನು ಸಂಹಾರ ಮಾಡ್ತೇನೆ, ಒಬ್ಬ ಹೇಳಿದ ನಾನು ಸುಗ್ರೀವನನ್ನು ಸಂಹಾರ ಮಾಡ್ತೇನೆ, ಇನ್ನೊಬ್ಬ ಹೇಳಿದ ಅಂಗದನನ್ನು ಸಂಹಾರ ಮಾಡ್ತೇನೆ, .ನಾನು ಲಕ್ಷ್ಮಣನನ್ನು ಸಂಹಾರ ಮಾಡ್ತೇನೆ, ಆ ದೀನ ಹನುಮಂತನನ್ನು ಸಂಹಾರ ಮಾಡ್ತೇನೆ. ದೊಡ್ಡ ಗಲಾಟೆ ಸಭೆ ಕ್ಷೋಭೆ. ಯಾರು ಏನು ಹೇಳ್ತಾರಂತ ತಿಳಿಯದ ಸ್ಥಿತಿ. ಅಯೋಮಯ. ಇಂತಹ ವಾತಾವರಣದಲ್ಲಿ ವಿಭೀಷಣ ಎದ್ದು ನಿಂತ.

ವಯಸ್ಸಿನಲ್ಲಿ ರಾವಣನ ಕಿರಿಯ ಸಹೋದರ, ಆದರೆ ಮತಿಯಲ್ಲಿ ರಾವಣನಕ್ಕಿಂತ ಎಷ್ಟೋ ದೊಡ್ಡ ಮತಿ, ವಿವೇಕಿ. ಅವನು ಎದ್ದು ನಿಂದು ತನ್ನ ಗಂಭೀರ ಕಂಠದಿಂದ, ಎಲ್ಲರನೂ ಕೂರಿಸಿದ. ಸಭೆಗೆ ಕೈ ಮುಗಿದು, ತನ್ನ ಮಾತನ್ನು ಆಡ್ತಾನೆ, ” ಸಾಮ ದಾನ ಭೇದ ದಂಡ ನಾಲ್ಕು ಉಪಾಯಗಳು. ರಾಜನಿಗಾಗಲೀ ಪ್ರಜೆಗಳಿಗಾಗಲೀ ನಾಲ್ಕು ಉಪಾಯಗಳು. ಸಾಮ ಅಂದ್ರೆ ಪ್ರೀತಿ ಮಾತು, ದಾನ ಅಂದ್ರೆ ವಸ್ತುವನ್ನು ಕೊಟ್ಟು ಮಾಡಿಸುವಂತಹದ್ದು, ಭೇದ ಬೆದರಿಸಿ ಕೆಲಸ ಮಾಡಿಕೊಳ್ಳತಕ್ಕಂತಹದು, ದಂಡ ಅಂದ್ರೆ ದಂಡಿಸಿ ಕೆಲಸ ಮಾಡಿಸುವಂತಹದ್ದು. ರಾಜನು ಈ ಉಪಾಯಗಳಿಂದ ಕಾರ್ಯ ಸಾಧನೆ ಮಾಡಿಸಿಕೊಳ್ಳುವಂತಹದ್ದು. ಕೊನೆಯದಾಗಿ ದಂಡಿಸಿ ಅಂದ್ರೆ ಯುದ್ಧದ ಮುಖಾಂತರ ಕಾರ್ಯ ಸಾಧನೆ ಮಾಡುವಂತಹದ್ದು. ವಿಭೀಷಣ ಹೇಳಿದ ಪ್ರಕಾರ ಮೊದಲ ಮೂರರಿಂದ ಕಾರ್ಯ ಆಗದಿದ್ದರೇ ಮಾತ್ರವೇ ನಾಲ್ಕನೇಯದ್ದಕ್ಕೆ ಹೋಗಬೇಕು. ಮೊದಲು ಆ ಮೂರು ಉಪಾಯಗಳನ್ನು ಉಪಯೋಗಿಸಿ ಕಾರ್ಯವಾಗದಿದ್ದರೇ ಮಾತ್ರ ಯುದ್ಧಕ್ಕೆ ಹೋಗಬೇಕು ಮೊದಲೇ ಹೊಗಬಾರದು.

ಕಾಮಂತಕ ನೀತಿ ಅಂತ ಇದೆ. ಅವನು ನೀತಿಜ್ಞ. ಚಾಣಕ್ಯನಿಗಿಂತ ಹಿಂದೆ. ಅವರು ಹೇಳ್ತಾರೆ, “ದಂಡ ಪ್ರಯೋಗವನ್ನು ಮಾಡಬೇಕಾದರೇ ಈ ಮೂರು ಉಪಾಯಗಳು ವಿಫಲ ಅಂತ ಆಗಬೇಕು ಆಗ ಮಾತ್ರವೇ ನಾಲ್ಕನೆಯದನ್ನು ಪ್ರಯೋಗ ಮಾಡಬೇಕು. ” ನಾವೀಗ ಮೊದಲನೆಯ ಮೂರು ಉಪಾಯಗಳನ್ನು ಮಾಡಿದ್ದೇವಾ? ಇದ್ಯಾವುದೂ ಇಲ್ಲದೇ ಇದ್ದಕ್ಕಿದ್ದಂತೆ ಯುದ್ಧ ಮಾಡುವುದು ಸರಿ ಅಲ್ಲ. ಇನ್ನು ನೀವು ಎಲ್ಲ ಸೇರಿ ಹೇಳ್ತಾ ಇದ್ದೀರಲ್ಲ, ತಿಂದು ಬಿಡ್ತೇವೆ, ಕೊಂದು ಬಿಡ್ತೇವೆ ಅಂತ, ಅದೆಲ್ಲ ಸಾಧ್ಯ ಇಲ್ಲ. ಇದೆಲ್ಲ ಯಾರಿಗೆ ಸಾಧ್ಯ? ಎಚ್ಚರ ತಪ್ಪಿದವರಿಗೆ. ಇದೆಲ್ಲ ರಾಮನಂತೆ ಜಾಗರೂಕರಾಗಿ ಇದ್ದವರಿಗಲ್ಲ. ಮಾತ್ರ ಅಲ್ಲ ದೈವ ಮುನಿದಿದೆ ಅಂದ್ರೆ, ದೈವ ನಮ್ಮ ಮೇಲೆ ಮುನಿದಿದೆ ರಾಮನ ಮೇಲಲ್ಲ. ಯಾಕೆಂದ್ರೆ ರಾಮ ಧರ್ಮ ಮಾರ್ಗ ಬಿಟ್ಟಿಲ್ಲ. ಸೈನ್ಯದ ಮಧ್ಯದಲ್ಲಿ ಸುರಕ್ಷಿತನಾಗಿದ್ದಾನೆ. ಕ್ರೋಧ ಅವನ ಕೈಯಲ್ಲಿದೆ. ಅಂತವರನ್ನು ನೀವು ಎದುರಿಸಿ ಗೆಲ್ತೀರಾ? ಶತ್ರುಗಳ ಅವಗಣನೆ ಸಲ್ಲ. underestimate ಮಾಡಬಾರದು.

ಶತಯೋಜನ ಸಮುದ್ರವನ್ನು ಯಾರಾದರೂ ಹಾರಿ ಬರಬಹುದು ಎನ್ನುವ ನಿರೀಕ್ಷೆ ಇತ್ತಾ ನಿಮಗೆ? ಊಹೆ ಕೂಡ ಮಾಡೋಕೆ ಸಾಧ್ಯ ಇಲ್ಲ ಹಾಗೆ ಹನುಮಂತ ಹಾರಿ ಬಂದಿದ್ದ. ಶತ್ರುಗಳ ಬಲ ನಮ್ಮ ಕಲ್ಪನೆಗೆ ಮೀರಿದ್ದಾಗಿರಬಹುದು. ಅವರ ಪರಾಕ್ರಮ ನಮ್ಮ ಊಹೆಗೆ ನಿಲುಕದ್ದಾಗಿರಬಹುದು. ನಾವೇ ಎಲ್ಲ ತೀರ್ಮಾನಕ್ಕೆ ಬರಬಾರದು. ಇದು ಎರಡನೇ ಅಂಶ. ಮೂರನೇ ಅಂಶ – ರಾವಣನಿಗೆ ರಾಮನಿಂದ ಏನು ತೊಂದರೆ ಆಗಿದೆ? ಏನು ಅಪಚಾರವಾಗಿದೆ? ಯಾಕೆ ರಾವಣನು ರಾಮನ ಪತ್ನಿಯನ್ನು ಅಪಹಾರ ಮಾಡಬೇಕಿತ್ತು.” ರಾವಣನ ಸಭೆಯಲ್ಲಿ, ಅವನ ಆಸ್ಥಾನದಲ್ಲಿ ರಾವಣನನ್ನೇ ಪ್ರಶ್ನೆ ಮಾಡ್ತಾ ಇದ್ದಾನೆ ವಿಭೀಷಣ. ಮತ್ತೆ ಹೇಳ್ತಾನೆ, “ಎಷ್ಟು ಸರಿ? ರಾಮನ ಪತ್ನಿ ಸೀತೆಯನ್ನು ಅಪಹರಿಸಿ ತರಬೇಕಾದರೇ ರಾಮನಿಂದ ಲಂಕೆಗಾಗಲೀ ರಾವಣನಿಗಾಗಲೀ ಆದ ಅಪಚಾರ ಏನು? ಇನ್ನು ಖರ ದೂಷಣರ ಸಂಹಾರ ಆಗಿದೆ, ಹದಿನಾಲ್ಕು ಸಾವಿರ ರಾಕ್ಷಸರನ್ನು ಸದೆ ಬಡಿದಿದ್ದಾರೆ ಅಂದ್ರೆ ರಾಮನ ತಪ್ಪೇನು? ಅವರು ಹೋಗಿ ರಾಮನ ಮೇಲೆ ಬಿದ್ದರು, ಯುದ್ಧ ಮಾಡಬೇಕಲ್ಲ! ಆತ್ಮರಕ್ಷಣೆಗೋಸ್ಕರವಾಗಿ! ಶರೀರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಖರ ಇರುವಲ್ಲಿಗೆ ರಾಮ ಹೋಗಿ ಯುದ್ಧ ಮಾಡಿದ್ದಲ್ಲ. ರಾಮನ ಆಶ್ರಮಕ್ಕೆ ಖರನು ಹೋಗಿ ದಾಳಿ ಮಾಡಿದ್ದು. ಅನಿವಾರ್ಯವಾಗಿ ರಾಮನು ಯುದ್ಧ ಮಾಡಿದ್ದಾನೆ, ಅಲ್ಲಿ ರಾಮನ ತಪ್ಪೇನು? ಒಂದು ಹುಳು ಕೂಡ ಅದನ್ನು ಕೊಲ್ಲಲಿಕ್ಕೆ ಮುಂದಾದರೇ ಬದುಕುವ ಪ್ರಯತ್ನ ಮಾಡ್ತದೆ ಅದು. ಇದು ಪಾಪ. ಪರ ಸತಿಯನ್ನು ಅಪಹರಿಸುವುದು ಪಾಪ, ಕೀರ್ತಿಗೆ ಕಲಂಕ ಇದು. ನಮ್ಮ ಕುಲದ, ನಮ್ಮ ನಗರದ, ನಮ್ಮ ದೇಶದ ಕೀರ್ತಿಗೆ ಕಲಂಕ ಇದು. ಇದು ಆಯಸ್ಸಿಗೂ ಒಳ್ಳೆಯದಲ್ಲ. ಸಂಪತ್ತು ಹಾಳಾಗುವುದಕ್ಕೆ, ದಾರಿದ್ರ್ಯ ಬರೋದಕ್ಕೆ ಮುಖ್ಯ ಕಾರಣ, ಪರಸ್ತ್ರೀ ಹರಣ ಎನ್ನುವಂತಹದ್ದು ಅಥವಾ ಪೀಡಿಸುವುದು.” ತರ್ಕಯುಕ್ತವಾಗಿ, ಯುಕ್ತಿಯುಕ್ತವಾಗಿ ಹೇಳಿಬಿಟ್ಟಿದ್ದಾನೆ ವಿಭೀಷಣ. ಯಾವ ಬಲದಲ್ಲಿ ಅಂದ್ರೆ ಬಾಹುಬಲ ಅಲ್ಲ, ಧರ್ಮ ಬಲ ಮತ್ತು ಭಾವ ಬಲ. ಯಾವ ಧೈರ್ಯ ಅಂದ್ರೆ ಅವನು ಸರಿ ಇದ್ದಾನೆ. ಆ ತಪ್ಪಿನಿಂದ ಈ ಯುದ್ಧ ಬಂದಿರುವಂತಹದ್ದು. ಲಂಕೆಗೆ ಯಾವ ಭಯವು, ಆಪತ್ತು ಇಂದು ಇದೆಯೋ ಅದಕ್ಕೆ ಮೂಲ ಕಾರಣ ಸೀತೆಯನ್ನು ತಂದಿರೋದು. ಸೀತೆಯನ್ನು ಬಿಟ್ಟು ಕೊಡಿ, ಸುಮ್ಮನೆ ಯುದ್ಧ ಯಾಕೆ ಮಾಡಬೇಕು? ದೊರೆ ಮಾಡಿದ ಒಂದು ಪಾತಕಕ್ಕೋಸ್ಕರವಾಗಿ ಯುದ್ಧ ಮಾಡಬೇಕಾ? ರಾಮನಲ್ಲಿ ಧರ್ಮ ಇದೆ, ಸಾಮರ್ಥ್ಯ ಇದೆ. ಅವನಿಗೆ ಸೇರಿದ ಅವನ ಪತ್ನಿಯನ್ನು ಅವನಿಗೆ ಕೊಟ್ಟುಬಿಡೋಣ. ರಾಮನು ಲಂಕೆಯನ್ನು ತನ್ನ ಬಾಣಗಳಿಂದ ಸೀಳಿ ಹಾಕುವ ಮುನ್ನ, ಆನೆಗಳಿಂದ ಕುದುರೆಗಳಿಂದ ಕೂಡಿದ ಲಂಕೆ, ಬಂಗಾರದಿಂದ ಕೂಡಿದ ಲಂಕೆಯನ್ನು ಸೀಳಿ ಹಾಕುವ ಮುನ್ನ, ಅವನ ಪತ್ನಿಯನ್ನು ಅವನಿಗೆ ಕೊಟ್ಟುಬಿಡೋಣ. ಈಗಲೂ ಈ ಕೆಲಸ ಮಾಡದಿದ್ದರೇ ಲಂಕೆಯು ಸರ್ವನಾಶ ವಾದೀತು, ರಾಕ್ಷಸರು ಎಲ್ಲರೂ ಸತ್ತು ಹೋದಾರು. ಸರ್ವ ರಾಕ್ಷಸ ಸಂಹಾರ, ಲಂಕಾವಿನಾಶ ನನ್ನ ಕಣ್ಮುಂದಿದೆ.
ಇಷ್ಟು ಹೇಳಿ ಕೈಮುಗಿದು ಹೇಳೀದನಂತೆ, “ಅಣ್ಣ ಕೈ ಮುಗೀತೆನೆ. ನೀನು ದೊಡ್ಡವನು ನಾನು ಸಣ್ಣವನು. ನಿನಗೆ ಹೇಳುವ ಯೋಗ್ಯತೆ ನನಗಿದೆ ಅಂತ ಅಲ್ಲ. ಇಷ್ಟೊಂದು ಆಪತ್ತು ಬಂದಿದೆ ಲಂಕೆಗೆ ಹಾಗಾಗಿ ಹೇಳದೇ ಇರಲಿಕ್ಕೆ ಸಾಧ್ಯ ಇಲ್ಲ. ಬಂಧುತ್ವ ಇರುವ ಕಾರಣ ಈ ಮಾತನ್ನು ಹೇಳ್ತೇನೆ. ಇದು ಹಿತ, ಇದು ಸತ್ಯ. ಕೊಟ್ಟು ಬಿಡು ಸೀತೆಯನ್ನು. ಮಧ್ಯಾಹ್ನದ ಸೂರ್ಯಕಿರಣವನ್ನು ಹೋಲುವಂತಹ ಬಾಣಗಳು ಬಂದು ನಿನ್ನ ಎದೆಗೆ ಬೀಳುವ ಮೊದಲು ಕೊಟ್ಟು ಬಿಡು ಸೀತೆಯನ್ನು. ಬಿಡು ಕೋಪವನ್ನು. ಈ ಕೋಪ ಧರ್ಮನಾಶನ, ಸುಖನಾಶನ. ಧರ್ಮವು ಆನಂದವನ್ನು ಸುಖವನ್ನು ಉಂಟು ಮಾಡುತ್ತೆ. ಧರ್ಮವನ್ನು ಆಶ್ರಯಿಸಿದರೆ ಕೀರ್ತಿ ಇದೆ. ಅಣ್ಣ ಪ್ರಸನ್ನ ನಾಗು, ನಮ್ಮ ಬಂಧು ಬಾಂಧವರೊಟ್ಟಿಗೆ, ಮಕ್ಕಳ ಜೊತೆಗೆ ಬದುಕೋಣ.” ವಿಭೀಷಣ ವಾದ ಸರಣಿ ಇಷ್ಟು ಚೆನ್ನಾಗಿತ್ತು ಅಂದ್ರೆ ಯಾರಿಗೂ ಪ್ರತ್ಯುತ್ತರ ಕೊಡಲಿಕ್ಕಾಗಲಿಲ್ಲ ಆ ಸಭೆಯಲ್ಲಿ.

ರಾವಣನಿಗೆ ಚಿಂತೆ ಆಗಿದೆ, ಇದೇ ನಿರ್ಣಯವಾಗಬಹುದು ಅಂತ. ಏನು ಮಾಡುವುದು ಅಂದ್ರೆ ಸಭೆ ವಿಸರ್ಜನೆ ಮಾಡುವುದು. ಸಭೆ ಬರಖಾಸ್ತ. ಯಾವುದೇ ನಿರ್ಣಯವನ್ನು ಮಾಡದೇ ವಿಸರ್ಜನೆ ಆಯ್ತು. ಎಲ್ಲರೂ ನಿಮ್ಮ ನಿಮ್ಮ ಮನೆಗೆ ಹೋಗಿ ಅಂತ ಎದ್ದು ಹೋಗಿಬಿಟ್ಟನಂತೆ ರಾವಣ ಅಲ್ಲಿಂದ. ವಿಭೀಷಣ ಹೇಳಿದ್ದರಲ್ಲಿ ಏನು ಸುಳ್ಳಿದೆ? ರಾವಣನ ಚಪಲ ಮಾತ್ರ. ಅವನ ಪತ್ನಿಯರಿಗೂ ಕೇಡು. ಮಂಡೋದರಿಯೇ ವಿರೋಧ ಮಾಡಿದ್ದಾಳೆ ಮೊದಲು. ಇಂತಹ ಕೆಲಸ ಮಾಡಿ ಯುದ್ಧ ತಂದು ಹಾಕಿದ್ದು ಯಾಕೆ? ವಿಭೀಷಣನನ್ನು ಮೆಚ್ಚಬೇಕು ನಾವು. ರಾವಣನ ಆಸ್ಥಾನದಲ್ಲಿ ರಾವಣನ ಮುಖಕ್ಕೆ ಕಣ್ಣಿಟ್ಟು ಅವನ ತಪ್ಪನ್ನು ಹೇಳಿದ್ದಾನೆ. ಪ್ರತ್ಯುತ್ತರ ಕೊಡಲಿಕ್ಕೆ ರಾವಣನಿಗೆ ಸಾಧ್ಯ ಆಗಲಿಲ್ಲ. ಸಭೆಗೂ ಸಾಧ್ಯವಾಗಲಿಲ್ಲ. ಸಭೆ ಬರಖಾಸ್ತ. ಆದರೆ ವಿಭೀಷಣ ಬಿಡಲಿಲ್ಲ. ಸಭೆಯನ್ನು ವಿಸರ್ಜಿಸಿ ರಾವಣನು ವಿಶ್ರಾಂತಿಗೆ ತೆರಳಿದ.
ಬೆಳಗಾಗುತ್ತಿದ್ದಂತೆ ವಿಭೀಷಣನು ರಾವಣನ ಮನೆಗೆ ಹೋದನು. ಅನಿವಾರ್ಯ ಸಂದರ್ಭವನ್ನು ಹೊರತು ಪಡಿಸಿ ಅರ್ಧರಾತ್ರಿಯಲ್ಲಿ ಹೋಗಬಾರದು ಎಂದು ಬೆಳಗಾಗುವುದನ್ನೇ ವಿಭೀಷಣ ಕಾಯುತ್ತಿದ್ದನು. ವಿಭೀಷಣನಿಗೆ ಧರ್ಮ ಯಾವುದು ಎಂಬುದರ ಬಗ್ಗೆ ಸ್ಪಷ್ಟ ನಿಶ್ಚಯ ಇತ್ತು. ಯಾವುದು ಲಂಕೆಗೆ ಶ್ರೇಯಸ್ಸು , ಯಾವುದು ಲಂಕೆಗೆ ಲಕ್ಷ್ಮೀ ಎಂಬ ಬಗ್ಗೆ ಸುಸ್ಪಷ್ಟ ನಿರ್ಣಯವುಳ್ಳ ವಿಭೀಷಣನು ಬೆಳಗಿನ ಜಾವ ಅಣ್ಣನ ಮನೆಗೆ ತೆರಳಿದನು. ರಾವಣನ ಮನೆಯು ಗಿರಿ–ಶಿಖರಗಳ ಸಮೂಹ, ಪರ್ವತಗಳ ಮಾಲೆಯಿದ್ದಂತೆ ಇತ್ತು. ರಾವಣನ ಮನೆಯೆಂದರೇ ಒಂದು ಮನೆಯಲ್ಲ, ಭವನಗಳ ಸಮುಚ್ಚಯವಾಗಿತ್ತು. ನೂರಾರು ಭವನಗಳು ಸೇರಿ ದೊಡ್ಡ ಪರ್ವತದ ಹಾಗೆ ಕಾಣುತ್ತಿತ್ತು. ಪರ್ವತಗಳ ಮಾಲೆಯಲ್ಲಿ ಶಿಖರದಂತೆ ಇದ್ದ ರಾವಣನ ಮನೆಯಲ್ಲಿ ದೊಡ್ಡ ದೊಡ್ಡ ಕೊಠಡಿಗಳು ಸರಿಯಾಗಿ ವಿಭಾಗಿಸಲ್ಪಟ್ಟಿದ್ದವು. ರಾಕ್ಷಸ ಚಕ್ರವರ್ತಿಯ ಮನೆಯಾಗಿದ್ದರಿಂದ ಅಲ್ಲಿ ಯಾವ ಕಡೆ ತಿರುಗಿ ನೋಡಿದರೂ ದೊಡ್ಡ ಮನುಷ್ಯರೇ ಕಾಣುತ್ತಿದ್ದರು. ರಾವಣನ ಮನೆಯಲ್ಲಿ ಅನೇಕ ಮಹಾಮಾತ್ಯರು ಇದ್ದರು.
ಮಹಾಮಾತ್ಯ: ಮಂತ್ರಿ, ಬುದ್ಧಿಯುಳ್ಳವ.

ರಾವಣನ ಆಪ್ತರು, ಪರ್ಯಾಪ್ತರು ಮನೆಯನ್ನು ರಕ್ಷಣೆ ಮಾಡುತ್ತಿದ್ದರು. ಬೇಕಾದಷ್ಟು ಮದಗಜಗಳು ಇದ್ದವು. ಅವುಗಳ ಉಸಿರಿನಿಂದ ಗಾಳಿಯೇ ಅಸ್ತವ್ಯಸ್ಥವಾಗುತ್ತಿತ್ತು. ಶಂಖನಾದವು ಮನೆಯನ್ನು ಆವರಿಸಿತ್ತು. ಮನೆಯಲ್ಲಿ ನಾರಿಯರು, ಸುಂದರಿಯರು ಅನೇಕರಿದ್ದರು. ಮನೆಯಲ್ಲಿ ಎಲ್ಲ ಕಡೆಯಿಂದ ಮಾತು ಕೇಳಿ ಬರುತ್ತಿತ್ತು. ರಾಜ ಮಾರ್ಗಗಳಲ್ಲಿ ಅಲ್ಲಲ್ಲಿ ಜನ ಮಾತನಾಡುತ್ತಾ ಇದ್ದರು. ಬಂಗಾರದ ಬಾಗಿಲಿನ ಮನೆಯಾಗಿತ್ತು. ವ್ಯಕ್ತಿಗಳು ಶರೀರಕ್ಕೆ ಆಭರಣವನ್ನು ಧರಿಸಿದ ಹಾಗೆ ಮನೆಗೆ ಆಭರಣಗಳು ಇದ್ದವು. ಗಂಧರ್ವರ, ಮರುತ್ತರ ಅಥವಾ ಭೋಗವತಿಯ ಮನೆ ಇದ್ದಂತೆ ಇರುವ ಮನೆಯನ್ನು ವಿಭೀಷಣನು ಪ್ರವೇಶ ಮಾಡಿದಾಗ ಮೊಡದೊಳಗೆ ಹೋಗುವ ರವಿಯಂತೆ ಕಂಡನು. ವಿಭೀಷಣನಿಗೆ ಸಹಜವಾಗಿಯೇ ಪ್ರಕರವಾದ ತೇಜಸ್ಸು ಇತ್ತು. ರಾವಣನ ಮನೆಯಲ್ಲಿ ವೇದಜ್ಞರಾದ ಬ್ರಾಹ್ಮಣ ರಾಕ್ಷಸರು ವೇದಘೋಷವನ್ನು ಮಾಡುತ್ತಿದ್ದರು. ಕೆಲವರು ರಾವಣನ ವಿಜಯಕ್ಕಾಗಿ ವೇದಘೋಷವನ್ನು ಮಾಡುತ್ತಿದ್ದರು. ಮೊಸರಿನ ಪಾತ್ರೆಗಳು, ಅಕ್ಷತೆಯ ಪಾತ್ರೆಗಳು, ಹೂವಿನ ಬಟ್ಟಲು, ಎಲ್ಲವೂ ಇದ್ದವು. ಇದೆಲ್ಲದರ ಮಧ್ಯದಲ್ಲಿ ವಿಭೀಷಣನು ಸಾಗಿ ಬರುತ್ತಿದ್ದಾಗ ರಾಕ್ಷಸರೆಲ್ಲರೂ ವಿಭೀಷಣನನ್ನು ಗೌರವಿಸಿದರು. ಇದರಿಂದ ಸತ್ಯಕ್ಕೆ ಇರುವ ಬೆಲೆಯನ್ನು ತಿಳಿಯಬಹುದು.

ವಿಭೀಷಣನು ಲಂಕೆಯಲ್ಲಿ ಯಾವಾಗಲೂ ಭಿನ್ನಮತಿಯೇ ಆಗಿದ್ದನು. ಯಾವಾಗ ರಾವಣನು ತಪ್ಪು ಮಾಡಲು ಆರಂಭ ಮಾಡಿದನೋ ಆಗಿನಿಂದಲೇ ರಾವಣನಿಗೆ ಅವನು ಮಾಡುತ್ತಿರುವ ತಪ್ಪನ್ನು ವಿಭೀಷಣನು ಹೇಳುತ್ತಾ ಬಂದಿದ್ದನು. ರಾವಣನ ತಪ್ಪನ್ನು ಎತ್ತಿ ಎತ್ತಿ ಹೇಳುತ್ತಿದ್ದರೂ ವಿಭೀಷಣನಿಗೆ ಗೌರವವಿತ್ತು. ರಾಕ್ಷಸರೆಲ್ಲರೂ ವಿಭೀಷಣನನ್ನು ಪೂಜಿಸುತ್ತಾ ರಾವಣನ ಮನೆಯೊಳಗೆ ಬೀಳ್ಕೊಟ್ಟರು. ವಿಭೀಷಣನು ಸಭೆಯ ಮಧ್ಯದಲ್ಲಿ ಅಣ್ಣನಾದ ರಾವಣನನ್ನು ವಿರೋಧಿಸಿದ್ದನು. ಆದರೂ ರಾವಣನ ಮನೆಯಲ್ಲಿ ಎಲ್ಲರೂ ಪೂಜಾ ದೃಷ್ಟಿಯಿಂದ ವಿಭೀಷಣನನ್ನು ನೋಡಿದರು. ವಿಭೀಷಣನು ಮುಂದುವರಿದು ಅಣ್ಣನ ಮನೆಯನ್ನು ಪ್ರವೇಶ ಮಾಡಿ ಅಲ್ಲಿ ಉಚ್ಛಾಸನದಲ್ಲಿ ಮೇಲೆ ಕುಳಿತಿರುವ ತನ್ನ ಅಣ್ಣನಾದ ಮತ್ತು ಕುಬೇರನ ತಮ್ಮನಾದ ರಾವಣನನ್ನು ವಂದಿಸಿದನು. ಬಳಿಕ ವಿಭೀಷಣನು ರಾಜನನ್ನು ಕಾಣುವ ಆಚಾರಗಳನ್ನು ಪಾಲಿಸಿ ನಂತರ ರಾವಣನ ದೃಷ್ಟಿ ಮತ್ತು ತನ್ನ ದೃಷ್ಟಿ ಸೇರುವ ಆಸನದಲ್ಲಿ ಕುಳಿತುಕೊಂಡನು. ಆ ಸಮಯದಲ್ಲಿ ಮಂತ್ರಿಗಳನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಅಲ್ಲಿ ವಿಭೀಷಣನು ರಾವಣನಿಗೆ ಅತ್ಯಂತ ಹಿತವಾಗಿರುವ ಮಾತುಗಳನ್ನು ಆಡಿದನು. ವಿಭೀಷಣನು ರಾವಣನನ್ನು ಅಪಮಾನಿಸಲಿಲ್ಲ. ರಾವಣನಿಗೆ ಗೌರವ ಕೊಟ್ಟು, ಪೂರ್ತಿ ಸಾಮದ ಮೂಲಕವೇ ಮಾತುಗಳನ್ನು ಆಡಿದನು. ಹೇಗಾದರೂ ಮಾಡಿ ರಾವಣನ ಮನವೊಲಿಸಿ ಯುದ್ಧವನ್ನು ತಪ್ಪಿಸಿ, ರಾವಣನನ್ನು ಮತ್ತು ಲಂಕೆಯನ್ನು ಉಳಿಸಿಬೇಕು ಎಂದು ವಿಭೀಷಣನು ಪ್ರಯತ್ನಿಸುತ್ತಿದ್ದನು. ರಾವಣನಿಗೆ ತಮ್ಮನಾಗಿ ತನ್ನ ಕರ್ತವ್ಯವನ್ನು ವಿಭೀಷಣನು ಮಾಡಿದನು.

ವಿಭೀಷಣನು ಇನ್ನು ರಾವಣನನ್ನು ಸಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ರಾವಣನು ಸರಿಯಾದರೆ ವಿಭೀಷಣನ ಜೊತೆಯಲ್ಲಿ , ಸರಿ ಆಗದೇ ಇದ್ದರೆ ವಿಭೀಷಣನು ರಾವಣನು ಕಳೆದುಕೊಳ್ಳುವ ಸ್ಥಿತಿ ಇತ್ತು. ಎಲ್ಲಿಯವರೆಗೆ ವಿಭೀಷಣ ಇದ್ದನೋ ಅಲ್ಲಿಯವರೆಗೆ ಲಂಕೆಯು ಉಳಿದಿದೆ. ವಿಭೀಷಣನೆಂದರೇ ಧರ್ಮ. ವಿಭೀಷಣನು ಹೋದರೆ ಲಂಕೆ ಉಳಿಯಲು ಸಾಧ್ಯವಿಲ್ಲ. ವಿಭೀಷಣನು ರಾವಣನಿಗೆ ಅಣ್ಣಾ, ನೀನು ತಪ್ಪು ಮಾಡಿದೆ, ಅನ್ಯಾಯ ಮಾಡಿದೆ ಎಂದು ಹೇಳಲಿಲ್ಲ. ವಿಭೀಷಣನು ಹೇಗೆ ಮಾತನಾಡಿದರೆ ರಾವಣನ ಹೃದಯಕ್ಕೆ ತಟ್ಟಬಹುದೋ ಅಂಥದ್ದನ್ನು ಮಾತನಾಡಿದನು.
ವಿಭೀಷಣನು ನೇರವಾಗಿ ವಿಷಯವನ್ನು ಆರಂಭಿಸಿದನು. ಅಣ್ಣಾ, ಯಾವ ದಿನ ಸೀತೆ ಲಂಕೆಗೆ ಬಂದಳೋ ಆ ದಿನದಿಂದ ಲಂಕೆಯಲ್ಲಿ ನಿತ್ಯ ಅಪಶಕುನಗಳಾಗುತ್ತಿವೆ ಎಂದು ಹೇಳಿದನು. ಬ್ರಾಹ್ಮಣ ರಾಕ್ಷಸರು ಮೊದಲು ಯಜ್ಞ ಮಾಡಿದರೆ ಯಜ್ಞೇಶ್ವರ ಬಂದು ಆಹುತಿಗಳನ್ನು ಸ್ವೀಕಾರ ಮಾಡುತ್ತಿದ್ದನು. ಆದರೆ ಸೀತೆ ಬಂದ ದಿನದಿಂದ ಇಲ್ಲಿಯವರೆಗೆ ಲಂಕೆಯ ಯಾವುದೇ ಯಜ್ಞ ಕುಂಡದಲ್ಲಿ ಅಗ್ನಿ ಸರಿಯಾಗಿ ಉರಿದಿಲ್ಲ, ಕಿಡಿ ಹಾರುವುದು, ಹೊಗೆಯೇ ತುಂಬುವುದು, ಪವಿತ್ರವಾದ ಹವಿಸ್ಸನ್ನು ಸಮರ್ಪಿಸುವ ಸಂದರ್ಭದಲ್ಲೂ ಅಗ್ನಿ ಪ್ರಜ್ವಲಿಸಲಿಲ್ಲ ಎಂದು ರಾವಣನಿಗೆ ಹೇಳಿದನು. ಅಗ್ನಿಯು ಶುಭವಾಗಬೇಕಾದರೆ ಅನೇಕ ಲಕ್ಷಣಗಳಿವೆ. ಅಗ್ನಿಯಲ್ಲಿ ಕೆಂಡ ಇರಬಾರದು, ಹೊಗೆ ಇರಬಾರದು. ಅಗ್ನಿ ಮತ್ತು ವೇದಾಧ್ಯಯನದ ಸ್ಥಾನಗಳಲ್ಲಿ ಸರಿಸ್ರಪಗಳು ಕಾಣಿಸಿಕೊಳ್ಳುತ್ತಿದ್ದವು. ಆಹುತಿಗೆ ಎಂದು ಇಟ್ಟುಕೊಂಡ ದ್ರವ್ಯಗಳನ್ನು ಇರುವೆಗಳು ಬಂದು ಮುತ್ತಿಕೊಳ್ಳುತ್ತಿದ್ದವು. ಇದೆಲ್ಲದರ ಅರ್ಥ ನಮ್ಮ ಹವಿಸ್ಸು ಎಲ್ಲಿಗೂ ಹೋಗುತ್ತಿಲ್ಲ, ಯಜ್ಞಕ್ಕೆ ಮತ್ತು ವೇದಾಧ್ಯಯನಕ್ಕೆ ಎಲ್ಲ ಗ್ರಹಣ ಬಡಿದಿದೆ, ಹಸುಗಳ ಹಾಲು ಬತ್ತಿ ಹೋಗಿದೆ ಎಂದು ರಾವಣನಿಗೆ ವಿಭೀಷಣನು ಹೇಳಿದನು. ಲಂಕೆಯಲ್ಲಿ ಯಾವ ಹಸುಗಳು ಹಾಲನ್ನು ಕೊಡುತ್ತಿರಲಿಲ್ಲ. ಯುದ್ಧ ಮಾಡಬೇಕಾದರೆ ವೀರ ಆನೆಗಳಿಗೆ ಮದ ಇರಬೇಕು. ಲಂಕೆಯ ಆನೆಗಳ ಮದವೇ ಇಳಿದುಹೋಗಿತ್ತು. ಕುದುರೆಗಳು ದೈನ್ಯತೆಯಿಂದ ಹುಲ್ಲನ್ನು ಮುಟ್ಟುತ್ತಿರಲಿಲ್ಲ. ಒಂಟೆಗಳು, ಕತ್ತೆಗಳು, ಹೆಸರಗತ್ತೆಗಳು ರೋಮಗಳನ್ನು ನೆಟ್ಟಗೆ ಮಾಡಿ ಭಯದಿಂದ ಕಣ್ಣೀರಿಡುತ್ತಿದ್ದವು. ಎಷ್ಟು ಚಿಕಿತ್ಸೆ ಮಾಡಿದರೂ ಸಹಜತೆಗೆ ಬರುತ್ತಿರಲಿಲ್ಲ. ಕಾಗೆಗಳು ಯಾವಾಗಲೂ ಬಂದು ಕೂಗುತ್ತಿದ್ದವು. ಕಾಗೆಗಳೆಂದರೆ ಪಿತೃಗಳ ಪ್ರತಿನಿಧಿಗಳು. ಅಂತಹ ಕಾಗೆಗಳು ಗುಂಪು ಗುಂಪಾಗಿ ಏಳು–ಎಂಟು ಮಹಡಿಗಳ ಭವನದ ಮೇಲೆ ಬಂದು ಕೂಗುತ್ತಿದ್ದವು. ಸಾಮೂಹಿಕವಾಗಿ ಹದ್ದುಗಳು ಬಂದು ಕೆಲುವೊಮ್ಮೆ ಅಡಗಿ ಕುಳಿತಿರುತ್ತಿದ್ದವು, ಕೆಲುವೊಮ್ಮೆ ಅಪ್ರದಕ್ಷಿಣಕಾರವಾಗಿ ಸುತ್ತುತ್ತಿದ್ದವು. ನರಿಗಳು ಎರಡು ಸಂಧ್ಯಾಕಾಲದಲ್ಲಿ ಅಮಂಗಲಕರವಾಗಿ ಉಳಿಡುತ್ತಿದ್ದವು. ಮಾಂಸಹಾರಿ ಪ್ರಾಣಿಗಳಾದ ನಾಯಿಗಳು ಲಂಕಾ ನಗರದ ಬಾಗಿಲಿನಲ್ಲಿ ಮುಂದೆ ಮಾಂಸದ ಹಬ್ಬವಿದೆ ಎನ್ನುವ ಸೂಚನೆಯಂತೆ ಗುಂಪು ಗುಂಪಾಗಿ ಬಂದು ನಿಲ್ಲುತ್ತಿದ್ದವು. ಆವುಗಳಿಂದ ಅಮಂಗಲಕರವಾದ ಕೂಗು ಕೇಳಿ ಬರುತ್ತಿತ್ತು. ಲಂಕೆಯಲ್ಲಿ ಸಾವಿರ ಸಾವಿರ ಶವಗಳು ಹರಡುವ, ಲಂಕೆಯ ಸಾಮೂಹಿಕ ಸಂಹಾರ ನಡೆಯಲಿದೆ ಎನ್ನುವುದಕ್ಕೆ ಇದೆಲ್ಲ ಸೂಚನೆಗಳಾಗಿದ್ದವು. ಈ ಸೂಚನೆಗಳೆಲ್ಲವು ಸೀತೆ ಬಂದಾಗಿನಿಂದ ಆರಂಭವಾಗಿದೆ ಎಂದು ವಿಭೀಷಣನು ರಾವಣನಿಗೆ ವಿವರಿಸಿದನು. ಸೀತೆ ಎಂದರೆ ಲಕ್ಷ್ಮೀ. ಲಕ್ಷ್ಮೀಯನ್ನು ಕದ್ದು ತಂದರೆ ಅಮಂಗಲಕಾರಕವಾಗುತ್ತದೆ.
ಲಕ್ಷ್ಮೀಯು ಬರುವ ಹಾಗೆ ಬಂದರೆ ಮಂಗಲಕಾರಕ. ಇಲ್ಲವಾದರೆ ಅಮಂಗಲಕಾರಕ. –ಶ್ರೀಸೂಕ್ತಿ.

ಸಂದರ್ಭ ಇಷ್ಟು ಕ್ಲಿಷ್ಟವಾಗಿದ್ದರಿಂದ ನಾವು ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ರಾಮನಿಗೆ ಸೀತೆಯನ್ನು ಕೊಟ್ಟಿಬಿಡೋಣ ಎಂದು ವಿಭೀಷಣನು ರಾವಣನಿಗೆ ಹೇಳಿದನು. ಅಣ್ಣಾ, ನಾನಿದನ್ನು ಅಜ್ಞಾನದಿಂದ ಹೇಳುತ್ತಾ ಇಲ್ಲ ಅಥವಾ ಆಶೆಯಿಂದಲೂ ಹೇಳುತ್ತಾ ಇಲ್ಲ, ನನ್ನನ್ನು ತಪ್ಪು ತಿಳಿಯಬೇಡ, ಇದು ಕೇವಲ ನನ್ನ ಭಾವನೆ ಅಲ್ಲ. ಇಲ್ಲಿರುವ ಎಲ್ಲರಿಗೂ ಗೊತ್ತು, ನಿನ್ನ ಮನೆಯ ಒಳಗೆ ಮತ್ತು ಹೊರಗೆ ಇರುವ ಎಲ್ಲ ರಾಕ್ಷಸ –ರಾಕ್ಷಸಿಯರಿಗೆ ಇದರ ಕಲ್ಪನೆ ಇದೆ, ಆದರೆ ಯಾರೂ ಇದನ್ನು ಮಾತನಾಡುತ್ತಿಲ್ಲ, ನಾನು ಮಾತನಾಡುತ್ತಿದ್ದೇನೆ ಎಂದು ವಿಭೀಷಣನು ರಾವಣನಿಗೆ ಹೇಳಿದನು. ನಿನ್ನ ಮಂತ್ರಿಗಳಿಗೆ, ಆಪ್ತರಿಗೆಲ್ಲರಿಗೂ ತಿಳಿದಿದ್ದರೂ ಯಾರು ಹೇಳುತ್ತಿಲ್ಲ, ಅವರಿಗೆಲ್ಲ ಭಯವಿದೆ, ಸಂಬಳ ಸಿಗದೆ ಇರಬಹುದು, ಹೇಳಿದರೆ ಏನು ಮಾಡಬಹುದೋ ಏನೋ ಎಂದು ಯಾರೂ ಹೇಳಲಿಲ್ಲ. ಆದರೆ ನನಗೆ ಭಯ ಮತ್ತು ಆಮಿಷ ಎರಡೂ ಇಲ್ಲ, ನಾನು ಏನನ್ನು ನೋಡಿದೆನೋ, ನನ್ನ ಮನಸ್ಸಿನಲ್ಲಿ ಎನಿದೆಯೋ ಅದನ್ನೆಲ್ಲ ನಿನಗೆ ಹೇಳುತ್ತೇನೆ ಎಂದು ರಾವಣನಿಗೆ ವಿಭೀಷಣನು ಹೇಳಿದನು. ನ್ಯಾಯವಾಗಿ ವಿಚಾರ ಮಾಡು ಎಂದು ಮಂತ್ರಿಗಳ ಮಧ್ಯದಲ್ಲಿ ಸೋದರನು ಸೋದರನಿಗೆ ಹೇಳಿದನು. ವಿಭೀಷಣನು ಹೇಳಿದ್ದು ಎಲ್ಲವೂ ಸತ್ಯವಾಗಿತ್ತು. ವಿಭೀಷಣನು ತನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಪಟ್ಟು ರಾವಣನನ್ನು ಸರಿ ಮಾಡಲು ಸಾಧ್ಯವಾಗದೇ ಇದ್ದಾಗ ಅಧರ್ಮವನ್ನು ಬಿಟ್ಟು ಧರ್ಮದ ಜೊತೆಗೆ ಸೇರಿಕೊಳ್ಳುವ ತೀರ್ಮಾನ ಮಾಡಿದನು. ವಿಭೀಷಣನ ಮಾತು ಹಿತವು, ಮೃದುವು, ಮೂರು ಕಾಲಕ್ಕೂ ಸತ್ಯವೂ ಆಗಿದ್ದವು. ಆದರೆ ಇಂತಹ ಮಾತುಗಳನ್ನು ಕೇಳಿದ ರಾವಣನಿಗೆ ಜ್ವರ ಬಂದಂತೆ ಆಯಿತು ಎಂದು ವಾಲ್ಮೀಕಿ ರಾಮಾಯಣವು ವರ್ಣಿಸಿದೆ.

ಸಂಸ್ಕೃತದಲ್ಲಿ ಜ್ವರ ಶಬ್ದಕ್ಕೆ ಭಯ ಎಂದು ಅರ್ಥವಿದೆ. ರಾವಣನು ಸೀತೆಯನ್ನು ಧಕ್ಕಿಸಿಕೊಳ್ಳಬೇಕು ಎನ್ನುವ ಅಧರ್ಮದ ಮನಸ್ಸಿನಿಂದ ಹೊರಬರಲು ಸಿದ್ಧನಿರಲಿಲ್ಲ. ರಾವಣನು ಒಳಗಿನಿಂದ ಎದೆ ನಡುಗುತ್ತಿದ್ದರೂ ವಿಭೀಷಣನ ಮುಂದೆ ನನಗೇನು ಭಯವಿಲ್ಲ ಎಂದು ಹೇಳಿದನು. ರಾಮನಿಗೆ ಸೀತೆಯು ಸಿಗುವುದಿಲ್ಲ, ದೇವತೆಗಳೇ ಬರಲಿ, ಇಂದ್ರನೇ ಬರಲಿ, ಅವರೆಲ್ಲರನ್ನು ಸೇರಿ ರಾಮ ಬಂದರೂ ನನ್ನ ಮುಂದೆ ನಿಲ್ಲಲೂ ಸಾಧ್ಯವಿಲ್ಲ ಎಂದು ಹೇಳಿ ರಾವಣನು ವಿಭೀಷಣನನ್ನು ಹೋಗಿ ಬಾ ಎಂದು ಕಳುಹಿಸಿಕೊಟ್ಟನು. ಆದರೆ ವಿಭೀಷಣ ಮಾತ್ರ ಅಷ್ಟಕ್ಕೇ ಬಿಡದೆ ಮತ್ತೆ ತನ್ನ ಪ್ರಯತ್ನವನ್ನು ಮಾಡಿದನು. ಸೀತೆಯನ್ನು ಲಂಕೆಗೆ ರಾವಣನು ತಂದ ದಿನವೇ ವಿಭೀಷಣನು ಇದು ಲಂಕೆಯ ಮುಕ್ತಾಯ ಎಂದು ಹೇಳಿದ್ದನ್ನು ಮಂಡೋದರಿ ಕೇಳಿಸಿಕೊಂಡಿದ್ದಳು. ಮುಂದೆ ರಾವಣನ ಶವದ ಮುಂದೆ ನಿಂತು ಮಂಡೋದರಿ ಮೈದುನ ದೀರ್ಘವಾದ ನಿಟ್ಟುಸಿರಿಟ್ಟು ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ವಿಭೀಷಣನು ತನ್ನ ಪ್ರಯತ್ನವನ್ನು ಮುಂದುವರೆಸಿದಾಗ ಸಭಾಯುದ್ಧದಂತೆ ನಡೆಯಿತು. ಇದು ನ್ಯಾಯವಾದಿ ವಿಭೀಷಣನ ಚರಿತ್ರೆ.

ಮುಂದೇನಾಯಿತು ….? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments Box