ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಮೂರು ಮಂಗಗಳ ಕುರಿತು ನೀವೆಲ್ಲಾ ಕೇಳಿದೀರಿ. ಕಣ್ಣು ಕಟ್ಟಿದ ಮಂಗ ಒಂದು, ಕಿವಿ ಮುಚ್ಚಿದ ಮಂಗವೊಂದು, ಬಾಯಿ ಕಟ್ಟಿದ ಮಂಗವೊಂದು. ಏನದರ ಅರ್ಥ? ಕೆಟ್ಟದ್ದನ್ನು ನೋಡಬೇಡ, ಕೇಳಬೇಡ, ಮಾತನಾಡಬೇಡ. ಆದರೆ ಮನುಷ್ಯ ಎಲ್ಲಿವರೆಗೆ ಬಂದಿದಾನೆ ಅಂದ್ರೆ ಒಳ್ಳೆಯದನ್ನ ಕೇಳ್ಬೇಡ, ನೋಡ್ಬೇಡ, ಮಾತನಾಡಲೇಬೇಡ ಎನ್ನುವಲ್ಲಿವರೆಗೆ. ಖಳರು ಹಾಗಿರ್ತಾರೆ. ಅವರಿಗೆ ಒಳಿತನ್ನ ನೋಡಲಿಕ್ಕೆ, ಕೇಳಲಿಕ್ಕೆ, ಮಾತಾಡಲಿಕ್ಕೆ ಸಾಧ್ಯವೇ ಆಗೋದಿಲ್ಲ. ಒಳಿತು ಅ’ಸಹ್ಯ’. ಸಹಿಸಲಿಕ್ಕೆ ಸಾಧ್ಯವಿರೋದು ಸಹ್ಯ. ಸಾಧ್ಯವಾಗದೇ ಇದ್ದರೆ ಅಸಹ್ಯ. ನಿಮಗೆ ಮತ್ತೊಮ್ಮೆ ಆ ಉದಾಹರಣೆ ನೆನಪಿಸೋದು. ಪರಮಹಂಸರು ಹೇಳಿದ್ದು. ಮೀನು ಮಾರೋ ಹೆಣ್ಣು ಮಗಳೊಬ್ಬಳಿಗೆ ನಿದ್ದೆನೆ ಬರ್ಲಿಲ್ಲ ರಾತ್ರಿ ತಲೆನೋವು ಬಂದ್ಬಿಡ್ತು. ಯಾಕೆ ಅಂದ್ರೆ ಆಕೆ ಮಲಗಿದ್ದು ಆಕೆಯ ಸ್ನೇಹಿತೆ ಹೂವು ಮಾರುವವಳ ಅಂಗಡಿಯಲ್ಲಿ. ಮಾರದೇ ಉಳಿದ ಹೂವುಗಳು ತುಂಬಾ ಇದ್ವು ಅಂಗಡಿಯಲ್ಲಿ. ಹೂವಿನ ಪರಿಮಳ ಅಂಗಡಿಯಲ್ಲಿ ಇತ್ತು. ಹೂವಿನ ದುರ್ಗಂಧಕ್ಕೆ ಹೂವು ಕೊಳೆತು ಹೋಗಿರ್ಲಿಲ್ಲ ಆದರೆ ಮೀನು ಮಾರೋವ್ಳಿಗೆ ಅದು ದುರ್ಗಂಧ. ನಿದ್ದೆನೇ ಬರ್ಲಿಲ್ಲ ತಲೆನೋವು ಬಂದು ತೊಂದರೆ ಆಯ್ತು. ಕೊನೆಗೆ ನಿದ್ದೆ ಬಂದಿದ್ದು ಯಾವಾಗ ಅಂದ್ರೆ ಮುಖಕ್ಕೆ ಮೀನು ಬುಟ್ಟಿ ಕವುಚಿಕೊಂಡಾಗ. ಒಳ್ಳೆ ನಿದ್ದೆ ಬಂತಂತೆ. ಏನಿದು ಅಂದ್ರೆ ಆ ಪರಿಮಳ ಕೂಡ ತಗೊಳೋಕಾಗಲ್ಲ ಅಂತ. ದುರ್ಗಂಧದ ಅಭ್ಯಾಸ ಆಗ್ಬಿಟ್ರೆ ಅದೇ ಸುಗಂಧವಾಗಿ ಮಾರ್ಪಡ್ತದೆ. ಹಾಗೆ ನಿರಂತರ ನಾವು ಕೆಡುಕಿನ ಜೊತೆಗಿದ್ರೆ ಒಳ್ಳೆಯದನ್ನ ನೋಡೋಕ್ಕೆ ಸಾಧ್ಯವಾಗೋದಿಲ್ಲ ಹಾಗಾಗಿಬಿಡ್ತದೆ.

ವಿಭೀಷಣನನ್ನ ಅದು ಹೇಗೆ ಸಹಿಸಿದ್ನೋ ರಾವಣ ಅಷ್ಟುಕಾಲ. ಬಹಳ ಕಷ್ಟ ಆಗ್ತಿತ್ತು ರಾವಣನಿಗೆ. ಅವನನ್ನ ನೋಡಿದ ಕೂಡಲೆ ಕಷ್ಟ ಆಗೋದು. ಅವನ ಮಾತು ಕೇಳೋದಕ್ಕೆ ಕಷ್ಟ. ಹೊರಗೆ ನೂಕಿದ್ಮೇಲೆ ಸ್ವಲ್ಪ ಸಮಾಧಾನ. ಯಾಕೆ ಈ ಪ್ರಸ್ತಾಪ ಅಂದ್ರೆ ಇಂಥಾ ರಾವಣನು ಅಪೇಕ್ಷೆ ಪಟ್ಟು ಒಳಿತಿನ ರಾಶಿಯನ್ನು ನೋಡುವಂತೆ ಆಗಿಬಿಡ್ತು. ಪ್ರಪಂಚಕ್ಕೆ ದೇವರ ಅವತಾರವಾದಾಗ ಹೇಗಿರ್ತದೆ ಸಂದರ್ಭ ಅಂದ್ರೆ ನೋಡಲಾರದವರಿಗೂ ನೋಡಿಸಿಬಿಡ್ತಾನೆ ತನ್ನನ್ನ ತಾನು. ಯಾರಿಗದು ಅಭ್ಯಾಸವೇ ಇಲ್ಲ, ನೋಡೋದಿಕ್ಕೆ ಕಷ್ಟ. ಎಲ್ಲರಿಗೂ ಅದು ಲಭ್ಯವಿರ್ತದೆ ಅಂತ.
ಒಳಿತು ಬಂದಿದೆ. ಒಳಿತಿನ ತುರೀಯಾವಸ್ಥೆ ರಾಮನೆಂಬುದು. ಜೊತೆಯಲ್ಲಿ ಒಳಿತುಗಳು ಕೋಟ್ಯಂತರ. ಕಪಿಗಳ ರೂಪದಲ್ಲಿ. ದೇವತೆಗಳ ಅವತಾರಗಳು. ಅಯೋಧ್ಯೆಗೆ ರಾವಣ ಬಂದು ದರ್ಶನ ತಗೊಳ್ತಿದ್ನೋ ಇಲ್ವೋ ಗೊತ್ತಿಲ್ಲ. ಲಂಕೆಗೇ ಬಂತು. ಅವನಿಗೂ, ಅವನ ಕಡೆಯವರೆಲ್ಲರಿಗೂ ದರ್ಶನ ಕೊಡ್ತಾಯಿದೆ. ನೋಡಲೇಬೇಕಾದ ಸಂದರ್ಭ. ರಾವಣನಿಗೂ, ಲಂಕಾವಾಸಿಗಳಿಗೂ. ಈಗ ಸದ್ಯದ ಪರಿಸ್ಥಿತಿ ಅದಲ್ಲ, ಸ್ವಲ್ಪ ಮುಂದೆ ಹೋಗಿ ಅಪೇಕ್ಷೆ ಪಟ್ಟು ನೋಡ್ತಾಯಿದ್ದಾನೆ. ಹೇ ಶುಕ ಇಲ್ಲಿ ಬಾ, ಸಾರಣ ಇಲ್ಲಿ ಬಾ. ತೋರಿಸು ನನಗೆ. ರಾಮನ ಕಡೆಯ ಯೋಧರ ಪರಿಚಯ ಮಾಡ್ಸು, ದರ್ಶನ ಮಾಡ್ಸು ಅಂತ ತಾನೇ ಕೇಳ್ಕೊಂಡು, ತನ್ನ ಜನರನ್ನ ಕಳಿಸಿಕೊಟ್ಟು ಅಲ್ಲಿಗೆ ಅವರಿಂದ ಪರಿಚಯ ತಗೊಳ್ತಾಯಿದ್ದಾನೆ ರಾವಣ. ಅವನ ಇಪ್ಪತ್ತೂ ಕಣ್ಣುಗಳಿಗೆ ಒಳಿತಿನ ವಿಶ್ವರೂಪದ ದರ್ಶನವಾಗ್ತಾಯಿದೆ. ಒಳಿತಿನ ಸಿಂಹ ಗರ್ಜನೆ ಕೇಳ್ತಾಯಿದೆ.

ಸಾರಣ ಪ್ರಾರಂಭ ಮಾಡ್ತಾನೆ ಪರಿಚಯ ಮಾಡೋದಕ್ಕೆ. ನಿನ್ನೆ ಹೇಳಿದ ಹಾಗೆ ಹಲವು ತಾಳೆಯ ಮರಗಳಷ್ಟು ಎತ್ತರದ ಸೂರಿನ ಮೇಲೇರಿ ಅಲ್ಲಿಂದ ರಾಮಸೇನೆಯನ್ನು ವೀಕ್ಷಣೆ ಮಾಡ್ತಿದಾನೆ ರಾವಣ. ಓ ಅಲ್ಲಿ ನೋಡು. ಒಂದು ಬೃಹದಾಕಾರದ ಕಪಿ. ಲಂಕೆಯ ಕಡೆಗೆ ಮುಖ ಮಾಡಿಕೊಂಡು ಭಯಂಕರವಾದ ಘರ್ಜನೆ ಮಾಡ್ತಾಯಿದೆ. ಅದು ಸಾಮಾನ್ಯ ಕಪಿಯಲ್ಲ. ಅವನ ಕೈಕೆಳಗೆ ಒಂದು ಲಕ್ಷ ಯೂಥಪತಿಗಳಿದ್ದಾರೆ. ಯೂಥ ಅಂದ್ರೆ ಗುಂಪು. ಗುಂಪಿನ ನಾಯಕರು ಅವರು. ಕೋಟೆಯಿಂದ, ಬಾಗಿಲಿನಿಂದ, ವನಕಾನನಗಳಿಂದ ಕೂಡಿರತಕ್ಕಂತಹ ಲಂಕೆಯೇ ಯಾರ ಘರ್ಜನೆಯಿಂದ ನಡುಗ್ತಾ ಇದೆಯೋ ಅದು ನೀಲ. ವಾನರ ಸೇನಾಪತಿ. ಸರ್ವವಾನರೇಂದ್ರನಾದ ಸುಗ್ರೀವನ ಬಲಾಗ್ರದಲ್ಲಿ ಸೇನೆಯ ಮುಂಭಾಗದಲ್ಲಿ ನಿಂತಿರತಕ್ಕಂತ ನೀಲನೆಂಬ ಯೂಥಪತಿ ಅವನು. ಅಗ್ನಿಯ ಮಗ. ಅಲ್ಲೆ ಆ ಕಡೆಯಲ್ಲಿ ಒಬ್ಬ ಮಹಾವಾನರ ಲಂಕೆಯ ಕಡೆಗೆ ಬರ್ತಾಯಿದಾನೆ. ಗಗನದಿಂದ ಬಂದು ನೆಲಕ್ಕಿಳಿತಾ ಇದಾನೆ ಅವ್ನು. ನಾಲ್ಕೂ ಕಾಲು ಊರ್ತಾನೆ ಅವನು. ಲಂಕೆಯ ಕಡೆಗೆ ತಿರುಗಿ ದೊಡ್ಡದಾಗಿ ತನ್ನ ಬಾಯ್ತೆರಿತಾ ಇದಾನೆ. ಬೆಟ್ಟವೇ ನಡೆದುಕೊಂಡು ಬರುವ ಹಾಗಿದೆ ಆಕಾರ. ಪದ್ಮಕೇಸರವರ್ಣ ಅವನು. ಮತ್ತೆಮತ್ತೆ ಬಾಲವನ್ನೆತ್ತಿ ನೆಲಕ್ಕೆ ಬಡಿತಾ ಇದಾನೆ. ಬಾಲ ಬಡಿದ ಶಬ್ದಕ್ಕೆ ಹತ್ತು ದಿಕ್ಕುಗಳು ಪ್ರತಿಧ್ವನಿಗೊಳ್ತಾಯಿವೆ. ಯಾರವನು? ವಾನರರಾಜ ಸುಗ್ರೀವನಿಗೆ ಪರಮಪ್ರಿಯ. ಸುಗ್ರೀವನಿಂದ ಯೌವರಾಜ್ಯದಲ್ಲಿ ಅಭಿಷೇಕಿಸಲ್ಪಟ್ಟಿರುವಂತಹ ಯುವರಾಜ ಅಂಗದ. ನಿನ್ನನ್ನು ಯುದ್ಧಕ್ಕೆ ಕರೀತಾ ಇದ್ದಾನೆ. ರಾವಣನಿಗೆ ಸಾರಣನು ಹೇಳೋದು. ವಾಲಿಗೆ ತಕ್ಕ ಮಗ. ಸುಗ್ರೀವನಿಗೆ ಸದಾ ಪ್ರಿಯ. ರಾಮನಿಗಾಗಿ ತನ್ನ ಪರಾಕ್ರಮವನ್ನು ಮಿಸಲಿಟ್ಟವನು. ಇಂದ್ರನಿಗಾಗಿ ವರುಣನ ಹೋರಾಡುವ ಹಾಗೆ ರಾಮನಿಗಾಗಿ ಹೋರಾಡುವಂಥವನು. ಹನುಮಂತ ಬಂದು ಸೀತೆಯನ್ನು ಕಂಡನಲ್ಲ, ನಿನ್ನ ಜೊತೆಗೆ ಸಂವಾದ ಮಾಡಿದ್ನಲ್ಲ, ಲಂಕೆಯನ್ನು ಸುಟ್ಟನಲ್ಲ, ಆ ಹನುಮಂತ ಬರುವ ಹಿಂದಿನ ತಲೆ ಇವನದ್ದು. ಇವನೇ ದಕ್ಷಿಣ ದಿಕ್ಕಿನ ಕಡೆಗೆ ಅನ್ವೇಷಣೆಗೆ ಬಂದಿರತಕ್ಕಂತಹ ವಾನರ ನಾಯಕ. ವಾನರಯೋಧರ ಅನೇಕಾನೇಕ ಯೂಥಗಳನ್ನ ಮುನ್ನಡೆಸ್ತಾ ಇದಾನೆ. ಸಮಸ್ತ ವಾನರರಿಗೆ ಯುವರಾಜ ಇವನು. ಸ್ವಂತ ಸೇನೆಯೊಂದಿದೆ. ಅದರಿಂದ ಕೂಡಿರತಕ್ಕಂತಹ ದುರ್ಜಯನಾದ ಅಂಗದನಿವನು.

ಅಂಗದನ ಹಿಂದೆ ದೊಡ್ಡ ಸೈನ್ಯವನ್ನ ಕೂಡಿಕೊಂಡಿದಾನೆ. ಯಾರವನು?ಅದೇ ಕೇಳ್ತಿದ್ಯಲ್ಲ, ಸೇತುವೆ ಹೇಗೆ ಮಾಡಿದ್ರು? ವಿಧಾನ ಯಾವುದು? ಇವನನ್ನೇ ಕೇಳೋದು ಒಳ್ಳೇದು. ಸೇತುವೆಗೆ ಕಾರಣನಾದ ವಿಶ್ವಕರ್ಮನ ಮಗನಾಗಿರುವಂತಹ ನಲ ಇವನು. ಅವನ ಹಿಂದೆ ಮೈಸೆಟೆಸಿ ಭಯಂಕರವಾಗಿ ಘರ್ಜನೆ ಮಾಡ್ತಾ ಇರತಕ್ಕಂತಹ ವಾನರ ಸೈನ್ಯವನ್ನು ನೋಡು. ಇವರು ಯುದ್ಧದಲ್ಲಿ ಸಹಿಸಲಸಾಧ್ಯವಾಗಿರತಕ್ಕಂತವರು. ಘೋರರು, ಪರಮ ಕೋಪಿಷ್ಠರು. ಕೋಪಕ್ಕೆ ತಕ್ಕ ಪರಾಕ್ರಮವೂ ಇದೆ. ಅಂತಹ ಕೋಟ್ಯಂತರ ಕಪಿಗಳು ಅವನನ್ನ ಹಿಂಬಾಲಿಸ್ತಾ ಇದ್ದಾರೆ. ಅವರೆಲ್ಲ ಚಂದನವನ ವಾಸಿಗಳು. ಈ ನಲನಿಗೆ ತನ್ನ ಸೇನೆಯನ್ನು ಕೂಡಿಕೊಂಡು ಲಂಕೆಗೆ ಹೋಗಿ ತಾನೊಬ್ಬನೇ ಯುದ್ಧ ಮಾಡಬೇಕೆಂಬ ಆಸೆಯಿದೆ. ಅತ್ತ ಕಡೆ ಅವನು ಶ್ವೇತ. ಬೆಳ್ಳಿಯ ಬಣ್ಣದವನು. ಭೀಮಪರಾಕ್ರಮಿ. ಬಹಳ ಬುದ್ಧಿವಂತ. ಜಗದ್ವಿಖ್ಯಾತ. ಸ್ವರ್ಗಕ್ಕೂ ಗೊತ್ತು ಪಾತಾಳಕ್ಕೂ ಗೊತ್ತು ಅವನ್ಯಾರು ಎನ್ನುವಂಥದ್ದು. ಅವನನ್ನ ಚಪಲ ಅಂತ ಕರೀತಾನೆ ಸಾರಣ. ಯುದ್ಧಚಪಲ. ಅವಸರವಸರವಾಗಿ ಸುಗ್ರೀವನ ಬಳಿ ಬರ್ತಾ ಇದಾನೆ. ಅವನ ಕಿವಿಯಲ್ಲಿ ಏನೋ ಹೇಳ್ತಿದಾನೆ. ಮತ್ತೆ ತ್ವರೆಯಿಂದ ಹೋಗ್ತಿದಾನೆ.ತನ್ನ ಸೇನೆಯನ್ನು ವಿಭಾಗ ಮಾಡ್ತಾ ಇದ್ದಾನೆ, ಹರ್ಷೋಲ್ಲಾಪವನ್ನು ಉಂಟು ಮಾಡ್ತಾ ಇದ್ದಾನೆ. ಅವನನ್ನು ಸುಗ್ರೀವ ಸಂತೈಸ್ತಾ ಇದ್ದಾನೆ. ತಡಿ, ತಡಿ; ಅಷ್ಟು ಅವಸರ ಮಾಡಬೇಡ. ನಾನು ಹಾಗೆ ಒಪ್ಪಿಗೆ ಕೊಡುವ ಹಾಗೂ ಇಲ್ಲ. ರಾಮನನ್ನು ಕೇಳ್ಕೊಂಡು ಮಾಡಬೇಕು ಏನಿದ್ದರೂ ಇಲ್ಲಿ. ನೀನೆಷ್ಟೇ ನನ್ನನ್ನು ಒತ್ತಾಯ ಮಾಡಿದ್ರೂ ಇದಕ್ಕೆ ನಾನು ಒಪ್ಪುವ ಹಾಗಿಲ್ಲ. ಸ್ವಲ್ಪ ಸಮಾಧಾನ ಮಾಡ್ತಾನೆ ಸುಗ್ರೀವ. ಅಷ್ಟು ಯುದ್ಧಚಪಲ ಅವನಿಗೆ!

ಗೋಮತಿ ನದಿ ತೀರದಲ್ಲಿ ವಾಸವಾಗಿರುವವನು ಮುಂದಿನವನು. ರಮಣೀಯ ಸಂಕೋಚನವೆಂಬ ಮಹಾಪರ್ವತವಿದೆ ಅಲ್ಲಿ. ಅಲ್ಲಿ ವಾಸ ಮಾಡ್ತಾ ಇದ್ದಾನೆ. ಯಾರವನು? ಕುಮುದನೆಂಬ ಯೂತಪ. ಹೆಚ್ಚು ಸುಗ್ರೀವನ ಜೊತೆಗಿರ್ತಾನೆ. ಅತ್ತ ಕಡೆಯ ಮತ್ತೊಬ್ಬ ವಾನರನಿಗೆ ಚಂಡ ಎಂಬುದಾಗಿ ಹೆಸರು. ಬೆಂಕಿಯೇ ಅವನು. ಅವನ ಹಿಂದೆ ಲಕ್ಷಾಂತರ ಕಪಿಗಳು. ಹರ್ಷೋಲ್ಲಾಸದಿಂದ ಆ ಕಪಿಗಳನ್ನು ಮುನ್ನಡೆಸ್ತಾ ಇದ್ದಾನೆ ಅವನು. ಅವನ ಬಾಲ‌ ಬಹಳ ವಿಶೇಷವಂತೆ. ಬಾಲದ ಕೂದಲುಗಳೇ ಹಲವು ಯಾಮಗಳಷ್ಟು ಉದ್ದವಾಗಿದ್ದವು. ಬಣ್ಣಗಳಂತೆ ಕೂದಲು! ಆ ಬಾಲದ ಕೂದಲನ್ನು ಬಿಚ್ಚಿ ಹರಡ್ತಾನೆ ಮಧ್ಯ ಮಧ್ಯದಲ್ಲಿ ಅವನು. ಮತ್ತು, ಕೆಲವೊಮ್ಮೆ ಬಾಲವನ್ನ ಮೇಲಕ್ಕೆತ್ತುತ್ತಾನೆ, ಕೆಲವೊಮ್ಮೆ ನೆಲದ ಮೇಲೆ ಎಳದುಕೊಂಡು ಹೋಗ್ತಾನೆ. ಎತ್ತಿದರೆ ಸೂರ್ಯಕಿರಣದಂತೆ ಕಾಣ್ತಾ ಇದೆಯಂತೆ. ಅವನಿಗೆ ದೈನ್ಯವೆಂಬುವುದೇ ಗೊತ್ತಿಲ್ಲವಂತೆ, ಅವನಿಗೆ ಯುದ್ಧದ ಆಸೆ.
ಬಳಿಕ, ಸಿಂಹದಂತವನು, ಕಪಿಲ ವರ್ಣದವನು. ಮುಖದಲ್ಲೇ ಕೂದಲುಗಳಿವೆ ಅವನಿಗೆ. ಇಡೀ ಮೈಯನ್ನು ಬಗ್ಗಿಸಿಕೊಂಡು ಲಂಕೆಯನ್ನು ನೋಡ್ತಾ ಇದ್ದಾನೆ ಅವನು. ಅವನ ಕಣ್ಣಿಂದ ಬೆಂಕಿ ಬರ್ತಾ ಇರುವ ಹಾಗಿದೆ, ಲಂಕೆಯನ್ನು ಸುಡ್ತಾನೋ ಎಂಬಂತೆ. ಅವನ ಹೆಸರು ರಂಭ! ಇವನು ವಿಂಧ್ಯ, ಕೃಷ್ಣಗಿರಿ, ಸಹ್ಯ ಮತ್ತು ಸುದರ್ಶನ – ನಾಲ್ಕು ಪರ್ವತಗಳಲ್ಲಿ ವಾಸ ಮಾಡ್ತಾನಂತೆ. ಇವನ ಹಿಂದೆ 1 ಕೋಟಿ 30 ಲಕ್ಷದ ಕಪಿಸೇನೆಯಿದೆ. ಅಷ್ಟು ಕಪಿಗಳ ಒಡೆಯ ಅವನು. ಅವರೆಲ್ಲ ಚಂಡರು, ಚಂಡ ಪರಾಕ್ರಮರು. ಎಲ್ಲ ಸೇರಿ ಲಂಕೆಯನ್ನು ಮರ್ದಿಸಬೇಕು, ಧ್ವಂಸ ಮಾಡಬೇಕು ಎನ್ನುವುದಾಗಿ ಮೇಲೆದ್ದು ಬರ್ತಾ ಇದ್ದಾರೆ.

ಅನತಿ ದೂರದಲ್ಲಿ ಶರಭ. ಅವನು ತನ್ನ ಕಿವಿಯನ್ನು ನಿಮಿರ್ತಾ ಇದ್ದಾನೆ. ಮತ್ತೆ ಮತ್ತೆ ಬಾಯಿ ತೆರೀತಾ ಇದ್ದಾನಂತೆ. ಇವನಿಗೆ ಮೃತ್ಯುವಿನ ಭಯವಿಲ್ಲ, ಜೀವವನ್ನು ತೆತ್ತಾನು ಯುದ್ಧಭೂಮಿಯಿಂದ ಹಿಂದಿರುಗುವವನಲ್ಲ. ರೋಷದಿಂದ ಕಂಪಿಸ್ತಾ ಇದ್ದಾನಂತೆ ಅವನು. ಅಡ್ಡಡ್ಡಲಾಗಿ ನೋಡ್ತಾ ಇದ್ದಾನೆ. ಮಧ್ಯ ಮಧ್ಯೆ ತನ್ನ ಬಾಲದ ಕಡೆಗೆ ನೋಡ್ತಾ ಇದ್ದಾನೆ, ಘರ್ಜಿಸ್ತಾ ಇದ್ದಾನೆ. ಅವನ ವೇಗವೂ ಭಯಂಕರ, ಭಯವೇ ಇಲ್ಲ. ಅವನ ಕಪಿಗಳಿಗೆ ‘ವಿಹಾರರು’ ಎಂಬ ಹೆಸರು. 1,40,000 ವಾನರರು ಅವನೊಟ್ಟಿಗಿದ್ದಾರೆ. ಅವನೊಬ್ಬ ಮಹಾ ಕಪಿನಾಯಕ.
ಬಳಿಕ ಪನಸ. ಪನಸ ಅಂದರೆ ಹಲಸು. ಆದರೆ ಯುದ್ಧಕ್ಕೆ ಬಂದರೆ ಅವನು ಹಲಸಿನ ಮುಳ್ಳು. ದೊಡ್ಡ ಮೋಡದಂತೆ ಇದ್ದಾನೆ. ವಾನರ ವೀರರ ಮಧ್ಯದಲ್ಲಿ ಎತ್ತರಕ್ಕೆ ಕಾಣ್ತಾ ಇದ್ದಾನೆ ಅವನು. ದೇವತೆಗಳ ಮಧ್ಯೆ ಇಂದ್ರನು ಮೆರೆಯುವಂತೆ ಮೆರೀತಾ ಇದ್ದಾನೆ. ಅವನು ಘರ್ಜಿಸಿದರೆ ನೂರಾರು ಭೇರಿಗಳನ್ನು ಬಾರಿಸಿದಂತೆ. ಅವನ ಪೈಕಿಯವರೂ ಹಾಗೇ. ಇವನು ಅವರಿಗೆಲ್ಲ ನಾಯಕ. ‘ಪಾರಿಯಾತ್ರ’ ಎಂಬ ಪರ್ವತದಲ್ಲಿ ವಾಸ ಮಾಡ್ತಾನೆ. ಯುದ್ಧದಲ್ಲಿ ಅವನನ್ನು ಸಹಿಸಲಿಕ್ಕೆ ಸಾಧ್ಯ ಇಲ್ಲ. ಇವನನ್ನು ಐವತ್ತು ಲಕ್ಷ ಕಪಿಗಳು ಸೇವೆ ಮಾಡ್ತಾರೆ. ತನ್ನ ಅನೇಕ ತುಕಡಿಗಳನ್ನು‌ ವಿಂಗಡಿಸಿ ಇಟ್ಟುಕೊಂಡಿದ್ದಾನೆ ತನ್ನ ಸುತ್ತಮುತ್ತ.

ಬಳಿಕ ವಿನತ. ಪೂರ್ವ ದಿಕ್ಕಿಗೆ ಹೋಗಿದ್ದನವನು ಸೀತೆಯನ್ನು ಹುಡುಕ್ಕೊಂಡು. ಅವನ ಸೈನ್ಯ ಪ್ರವಾಹವಾಗಿ ಬರ್ತಾ ಇದೆ ಅವನ ಹಿಂದೆ. ಆ ಸೇನೆಗೆ ಇವನು ಅಲಂಕಾರವಾಗಿದ್ದಾನೆ. ಸಮುದ್ರತೀರದಲ್ಲಿ ಸೂರ್ಯ ಹೊಳೆಯುವ ಹಾಗೆ ತನ್ನ ಸೇನೆಯ ಪರಿಸರದಲ್ಲಿ ವಿನತನು ಶೋಭಿಸ್ತಾ ಇದ್ದಾನೆ, ದರ್ಧುರ ಪರ್ವತದಂತೆ ಕಾಣ್ತಾ ಇದ್ದಾನೆ, ಅವನು ‘ಪರ್ಣಾಸ’ ಎಂಬ ನದಿಯ ನೀರನ್ನು ಕುಡೀತಾ ಇರ್ತಾನೆ. 60 ಲಕ್ಷ ಕಪಿಗಳು ಇವನ ಅನುಚರರು. ಬಳಿಕ ಕ್ರೋಧನ, ಅವನದ್ದೂ ಹಾಗೇ. ದೊಡ್ಡ ಸೇನೆಯಿದೆ, ವಿಕ್ರಮರು, ಬಲಶಾಲಿಗಳು ಅವರು. ತನ್ನ ಸೇನೆಯನ್ನು ವಿಂಗಡಿಸಿಕೊಂಡಿದ್ದಾನೆ. ಅವನು ಕೂಡ ನಿನ್ನನ್ನು ಯುದ್ಧಕ್ಕೆ ಕರೀತಾ ಇದ್ದಾನೆ.
ಆಮೇಲೆ, ಗೈರಿಕಧಾತುವಿನಂತೆ ಕೆಂಪು ಬಣ್ಣದ ಕಪಿ. ಚೆಂದ ಇದ್ದಾನೆ ನೋಡುವುದಕ್ಕೆ. ಅವನಿಗೆ ಉಳಿದ ಕಪಿಗಳ‌ಬಗ್ಗೆ ತಾತ್ಸಾರ ಯಾವಾಗಲೂ. ಯಾವಾಗಲೂ ಬೇರೆ ಕಪಿಗಳನ್ನು ಅವಮಾನ ಮಾಡ್ತಾನೆ. ಅವನ ಹೆಸರು ಗವಯ. ಬಲವರ್ತಿಗಳಾದ ಇತರ ಕಪಿವೀರರನ್ನೂ ‘ಹೋಗಿ ನೀವು, ಯಾವುದಕ್ಕೂ ಪ್ರಯೋಜನವಿಲ್ಲ’ ಎನ್ನುವಂಥವನು. 70 ಲಕ್ಷ ಕಪಿಗಳ‌ ಒಡೆಯ ಅವನು. ಅವನಿಗೆ ತನ್ನದೇ ಸೇನೆ ಸಾಕಿತ್ತು ಅನ್ನುವ ಭಾವನೆ ಇದೆ. ತನ್ನ ಅನುಚರರೊಡಗೂಡಿ ತಾನೇ ಮುಂದೆ ಹೋಗಿ ಲಂಕೆಯನ್ನು ಧ್ವಂಸ ಮಾಡುವಂಥಾ ಆಸೆಯಿದೆ. ಅವನ ಕಪಿಗಳೂ ಕೂಡ ಹಾಗೇ; ಬಲಶಾಲಿಗಳು, ಬೇಕಾದ ರೂಪವನ್ನು ಧಾರಣೆ ಮಾಡಬಲ್ಲವರು, ಯುದ್ಧದಲ್ಲಿ ಸಹಿಸಲಸಾಧ್ಯರು. ಅಂತಹ ಕಪಿನಾಯಕರುಗಳ ಸೇನೆ ಅವನ ಬಳಿ ಇದೆ!

ಇನ್ನು, ಈ ಕಪಿಗಳೆಲ್ಲ ಕೂಡ, ಇವರುಗಳಿಗೆ ಜೀವದ ಆಸೆಯಿಲ್ಲ. ರಾಮನಿಗಾಗಿ ಜೀವ ಕೊಡಲಿಕ್ಕೆ ಸಿದ್ಧರಾಗಿದ್ದಾರೆ‌ ಅಂತ ಕಪಿಗಳಿವರು. ಅವರ ಪೈಕಿಯಲ್ಲಿ ಇವನು ಕೂಡ ಹಾಗೆಯೇ. ಇವನು ಆ ರಂಭನ ಜಾತಿಯವನೇ. ಅವನ ಬಾಲದ ರೋಮಗಳು ತುಂಬ ನುಣುಪು, ಅನೇಕ ಮಾರುದ್ದದ ರೋಮಗಳು ಬಾಲಕ್ಕೆ. ಬಾಲ ಮಾತ್ರ ನೋಡಲಿಕ್ಕೆ ಚೆಂದ. ಹೊರತು, ಅವನ ಕರ್ಮ ಹಾಗಲ್ಲ. ಅವನು ಏನಾದರೂ ಮಾಡಹೊರಟರೆ ಪುಡಿಪುಡಿ ಮಾಡಬಲ್ಲವನು. ಅವನ ಹೆಸರು ಹರ. ಅವನು ಒಬ್ಬ ಯೂತಪತಿ. ಅವನ ಹಿಂದೆ ಲಕ್ಷೋಪಲಕ್ಷ ಕಪಿಗಳು ವೃಕ್ಷಗಳನ್ನು ಎತ್ತಿಕೊಂಡು ಬರುತ್ತಿದ್ದಾರೆ, ಲಂಕೆಯನ್ನು ಏರುತ್ತಿದ್ದಾರೆ. ಹರನೆಂಬ ವಾನರ ಶ್ರೇಷ್ಠನು ಕೋಟಿಕೋಟಿ ಕಪಿಗಳ ಜೊತೆಗೆ ಲಂಕೆಗೆ ಬರುತ್ತಿದ್ದಾನೆ. ಅದರಾಕಡೆಗೆ ಒಂದಷ್ಟು ದೂರ ಬರೀ ಕಪ್ಪು ಕಾಣಿಸುತ್ತಿದೆ. ಕಾರ್ಮೋಡಗಳ ಹಾಗೆ. ಇವರೆಲ್ಲಾ ಸುಗ್ರೀವನ ಕಿಂಕರರು ಆದರೆ ಕಪಿಗಳಲ್ಲ.ನೋಡಲು ಇದ್ದಿಲಿನಂತಿದ್ದಾರೆ. ಯುದ್ಧದಲ್ಲಿ ಸತ್ಯಪರಾಕ್ರಮರು. ಲೆಕ್ಕಹಾಕಿ ಮುಗಿಯದಷ್ಟು ಸಂಖ್ಯೆಯಲ್ಲಿದ್ದಾರೆ.ಸಮುದ್ರತೀರದ ಮರಳಿನ ಸಂಖ್ಯೆಯಂತೆ. ಅಂತಹ ಕರಡಿಗಳು ಪರ್ವತ,ಪ್ರಪಾತಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅತ್ಯಂತ ದಾರುಣರಾದ ಅವರೆಲ್ಲಾ ನಿನ್ನೆಡೆಗೇ ಬರುತ್ತಿದ್ದಾರೆ. ಇವರ ನಡುವೆ ಒಂದು ದೊಡ್ಡ ಗಾತ್ರದ ಕರಡಿ. ಕಣ್ಣು ಭಯಂಕರ, ನೋಡಿದರೆ ಚಳಿಜ್ವರ ಬರುವಂತೆ. ಪರ್ಜನ್ಯನು ಮೋಡಗಳಿಂದ ಕೂಡಿ ಶೋಭಿಸುವಂತೆ,ಕರಡಿಗಳ ಮಧ್ಯೆ ದೊಡ್ಡ ಕರಡಿ. ಅವನ ಪರ್ವತವು ರುಕ್ಷವಂತ. ಅಲ್ಲಿ ಮತ್ತೆ ಬೇರೆ ಯಾರೂ ಇಲ್ಲ. ಅಲ್ಲಿ ವಾಸ ಮಾಡುತ್ತಾನೆ. ನರ್ಮದೆಯ ನೀರನ್ನು ಕುಡಿಯುತ್ತಾನೆ. ಅವನು ಧೂಮ್ರ. ಅವನೇ ಎಲ್ಲಾ ಕರಡಿಗಳಿಗೆ ಅಧಿಪತಿ’. ಕಪಿ-ಕರಡಿಗಳಿಗೆಲ್ಲಾ ಅಧಿಪತಿ ಸುಗ್ರೀವ. ಅವನ ಕೆಳಗೆ ಕರಡಿಗಳಿಗೆಲ್ಲಾ ಅಧಿಪತಿ ಧೂಮ್ರ. ಜಾಂಬವಂತ ಯುವರಾಜ.ಜಾಂಬವಂತನಿಗೇ ವಯಸ್ಸಾಗಿದೆ, ಧೂಮ್ರ ಅವನ ಅಣ್ಣ. ಅವನು ಇನ್ನೂ ಪರಾಕ್ರಮಿಯೇ. ಮುಂದೆ ಜಾಂಬವಂತನ ವರ್ಣನೆ.

ಇವನ ಸಣ್ಣ ತಮ್ಮ, ಪರ್ವತಾಕಾರ. ನೋಡುವುದಕ್ಕೆ ಧೂಮ್ರನಂತೆಯೇ ಇದ್ದಾನೆ. ಆದರೆ ಪರಾಕ್ರಮ ಇವನದ್ದೇ ಹೆಚ್ಚು. ಅವನು ಜಾಂಬವಂತ. ಅವನು ಕಪಿವೀರರ ನಾಯಕರುಗಳ ನಾಯಕರ ಗುಂಪಿನ ನಾಯಕ (ಮಹಾಯೂತಪಯೂತಪ). ಕರಡಿ-ಕಪಿಗಳೆಲ್ಲರೂ ಒಪ್ಪುತ್ತಾರೆ. ಅವನು ಪರಾಕ್ರಮಿ, ಆದರೆ ತನ್ನ ಹಿರಿಯರಿಗೆ ಬೆಲೆಕೊಡುತ್ತಾನೆ. ತುಂಬಾ ಅನುಭವಸ್ಥ ಅವನು. ತುಂಬಾ ಸಮಾಧಾನಿ. ಯುದ್ಧದಲ್ಲಿ ಆ ಸಮಾಧಾನ ಇರುವುದಿಲ್ಲ. ಒಂದು ಪೆಟ್ಟಿಗೆ ಹತ್ತು ಪೆಟ್ಟು ಕೊಡುತ್ತಾನೆ. ಇವನ ಅನುಚರರು ಭಯಂಕರ. ಪರ್ವತದ ತುಟ್ಟತುದಿಯನ್ನು ಏರಿ ದೊಡ್ಡ ಬಂಡೆಗಳನ್ನು ಅಲ್ಲಿಂದಲೇ ಎಸೆಯುತ್ತಾರೆ. ಅವನ ಅನುಚರರು ಯಾರೂ ಕೂಡಾ ಸಾವನ್ನು ಲೆಕ್ಕಿಸುವುದಿಲ್ಲ. ರಾಕ್ಷಸರಿಗೆ ಕಡಿಮೆಯಿಲ್ಲ ಅವರು.ಅಗ್ನಿಯ ತೇಜಸ್ಸು ಅವರಿಗೆ. ಇಂತಹ ಅನೇಕ ಸೇನೆಗೆ ಜಾಂಬವಂತ ನಾಯಕ. ದಂಭ ಎಂಬ ಕಪಿನಾಯಕ ಇನ್ನೇನು ಎದ್ದು ಹಾರುವಂತಿದ್ದಾನೆ. ಅವನ ಸುತ್ತ ವಾನರರು ಕುಳಿತು ನೋಡುತ್ತಿದ್ದಾರೆ. ಯೂತಪಯೂತಪ ಇವನು. ಅವನು ಇಂದ್ರನ ಸೇವೆ ಮಾಡುತ್ತಿರುತ್ತಾನೆ. ಮುಂದೆ ಸನ್ನಾದನ ಎಂಬುವವನು. ಅವನ ಅಳತೆ ಏನೆಂದರೆ ಒಂದು ಯೋಜನ ದೂರದ ಪರ್ವತ ತಾಗುತ್ತದೆ ಇವನಿಗೆ. ಚೌಕದಂತಿದ್ದಾನೆ. ನಾಲ್ಕು ಕಾಲುಳ್ಳವರಲ್ಲಿ ಇವನಿಗಿಂತ ದೊಡ್ಡ ಆಕಾರದವರಿಲ್ಲ.ವಾನರರಿಗೆಲ್ಲ ಪಿತಾಮಹ ಇವನು. ಹಿಂದೆ ಇಂದ್ರನಿಗೂ ಇವನಿಗೂ ಯುದ್ಧವಾಗಿತ್ತು.ಇವನು ಸೋಲಲಿಲ್ಲ. ಅಗ್ನಿಯ ಮಗ. ಹಿಂದೆ ದೇವಾಸುರ ಯುದ್ಧದಲ್ಲಿ ದೇವತೆಗಳಿಗೆ ಸಹಾಯ ಮಾಡಿದವನು. ಬಳಿಕ ಕ್ರಥನ. ಇವನಿರುವುದು ವಿಶೇಷವಾದ ಪರ್ವತದಲ್ಲಿ. ಅದು ಕುಬೇರನಿಗೆ ತುಂಬಾ ಪ್ರಿಯ. ಅಲ್ಲಿ ಕಿನ್ನರರು ವಾಸಿಸುತ್ತಾರೆ. ಹಿಮಾಲಯದ ಪರಿಸರದ ಪರ್ವತ ಅದು. ಬಲವಂತ ಅವನು. ತನ್ನನ್ನು ತಾನು ಹೊಗಳಿಕೊಳ್ಳುವುದಿಲ್ಲ. ಕೋಟಿ ಕಪಿಗಳ ನಾಯಕನಿವನು. ತಾನೇ ಸಾಕು ಎಂಬ ಭಾವನೆ. ಯಾಕೆ ಸುಗ್ರೀವ ಇವರನ್ನೆಲ್ಲಾ ಕರೆಸಿದ್ದು,ನನಗೆ ಹೇಳಿದ್ದರೆ ಸಾಕಿತ್ತು ಎನ್ನುವಂತೆ’.

‘ಮುಂದೆ ಪ್ರಮಾತಿ. ಅವನಿಗೆ ಆನೆಗಳನ್ನು ಕಂಡರೆ ಆಗುವುದಿಲ್ಲ. ಅವರಿಗೆ ಹಳೆಯ ವೈರ. ಶಂಭಸಾಧನನೆಂಬ ರಾಕ್ಷಸ ಮುನಿಗಳು ಮತ್ತು ವಾನರರನ್ನು ಆನೆಯ ವೇಷ ಧರಿಸಿ ಪೀಡಿಸುತ್ತಿದ್ದ.ಅವನು ಗೋಕರ್ಣದಲ್ಲಿ ವಾಸಿಸುತ್ತಿದ್ದ. ಅಲ್ಲಿ ಋಷಿಗಳನ್ನುಪೀಡಿಸುತ್ತಿದ್ದ. ಇವನ ಸಂಹಾರಕ್ಕೆ ದೇವತೆಗಳು ಮೇರುಪರ್ವತದಲ್ಲಿದ್ದ ಕೇಸರಿಗೆ ಸೂಚನೆ ಕೊಟ್ಟರು. ಅವನು ತನ್ನ ಪತ್ನಿ ಅಂಜನಿಯೊಡನೆ ಗೋಕರ್ಣಕ್ಕೆ ಹೋಗಿ ಶಂಭಸಾಧನನನ್ನು ಕೊಂದು ಅಲ್ಲೇ ವಾಸಿಸಿದ. ಆಂಜನೇಯ ಅಲ್ಲೇ ಹುಟ್ಟಿದ್ದು. ಆ ಗಜರೂಪಿ ಶಂಭಸಾಧನ ವಾನರ ಮತ್ತು ವಾರಣಗಳ ವೈರಕ್ಕೆ ಮೂಲ ಕಾರಣ. ಹಾಗಾಗಿ ಪ್ರಮಾತಿಗೆ ಆನೆಗಳನ್ನು ಕಂಡರೆ ಹಳೆಯ ವೈರದ ನೆನಪಾಗುತ್ತದೆ. ಗುಹೆಯೊಳಗಿನಿಂದಲೇ ಘರ್ಜಿಸುತ್ತಾ ಹೊರಬರುತ್ತಾನೆ. ವನಗಜಗಳನ್ನು ಬೆಟ್ಟಕ್ಕೆ ಎಸೆಯುತ್ತಾನೆ. ಮರಗಳನ್ನು ಕಿತ್ತು ಅದರಿಂದ ಆನೆಗಳನ್ನು ಬಡಿಯುತ್ತಾನೆ. ಇವನು ಕಪಿಸೇನೆಯ ಮುಖ್ಯಸ್ಥ. ಗಂಗಾತೀರದಲ್ಲಿ ವಾಸಿಸುತ್ತಾನೆ. ಇವನಿಗೆ ಕೋಟ್ಯಂತರ ಕಪಿಗಳ ಸಹಕಾರವಿದೆ. ಮೋಡದಂತಿದ್ದಾನೆ. ಅದರ ಬಳಿಕ ಕಾಣುತ್ತಿರುವುದು ಗೋಲಾಂಗೂಲರ ಸಮುದಾಯ. ಅವುಗಳ ಬಾಲ ಗೋವಿನಂತಿದೆ. ಆ ಸೇನೆ ಯುದ್ಧಕ್ಕೆ ಎದ್ದು ನಿಂತಿದೆ. ಧೂಳೆದ್ದಿದೆ ಅಲ್ಲಿ. ಬಿಳಿಯ ಮುಖ ಅವರದ್ದು. ಅವರು ಭಯಂಕರ’. ಮುಂದೆ ಇವರ ಪ್ರಸ್ತಾಪ ಬರುತ್ತದೆ.
ಕೋಟಿ ಕೋಟ್ಯಾಂತರ ಗೋಲಾಂಗುರರು ಗವಾಕ್ಷನನ್ನು ಹೆದರಿಸುತ್ತಿದ್ದಾರೆ. ಗೋಲಾಂಗುರರ ಅಧಿಪತಿ ಅವನು. ಇವರೆಲ್ಲ ಲಂಕೆಯನ್ನು ಧ್ವಂಸಮಾಡಲಿಕ್ಕೆ ಮುಂದುವರಿದರು. ಎಲ್ಲಿ ಇಡೀ ವರ್ಷವೂ ಹೂವು ಹಣ್ಣು ಇರ್ತದೋ, ಎಲ್ಲಿ ದುಂಬಿಗಳೂ ಯಾವಾಗಲೂ ಇರ್ತವೆ ವರ್ಷದಲ್ಲಿ, ಎಲ್ಲಿ ಸೂರ್ಯನು ನಿತ್ಯ ಬಂಗಾರದ ಪರ್ವತದ ಪ್ರದಕ್ಷಿಣೆ ಬರುತ್ತಾನೋ, ಎಲ್ಲಿ ಮೃಗ ಪಕ್ಷಿಗಳೂ ಎಲ್ಲವೂ ಬಂಗಾರದ ಬಣ್ಣದಾಗಿವೆಯೋ, ಎಲ್ಲಿ ವೃಕ್ಷಗಳು ಹಣ್ಣುಗಳನ್ನು ಕೊಡುವುದು ಒಂದೇ ಅಲ್ಲ, ಬೇಕಾದ ಫಲಗಳನ್ನು ಕೊಡ್ತವೆಯೋ ಅಂತಹ ಬಂಗಾರದ ಪರ್ವತ ಯಾವುದೆಂದರೇ ಮೇರು ಪರ್ವತ. ಮೇರು ಪರ್ವತದಲ್ಲಿ ರಮಿಸತಕ್ಕಂತಹ ಈ ಕಪಿ ನಾಯಕ, ಕೇಸರಿ ಅಂದ್ರೆ ಹನುಮಂತನ ತಂದೆ. ವಾನರ ಮುಖ್ಯನಿಗೆ ಇವನು ಮುಖ್ಯ ಅಂತಹ ಕೇಸರಿಯು ಅಲ್ಲಿ ಕಂಡು ಬರ್ತಾ ಇದ್ದಾನೆ. ಈ ಮೇರು ಪರ್ವತದ ಸುತ್ತ ಅರವತ್ತು ಸಾವಿರ ಬೇರೆ ಬೇರೆ ಪರ್ವತಗಳು ಇದ್ದವಂತೆ. ಎಲ್ಲ ಸ್ವರ್ಣ ಬಣ್ಣದ ಪರ್ವತಗಳು ಅವುಗಳ ಮಧ್ಯೆ ಮೇರು. ರಾಕ್ಷಸರಲ್ಲಿ ನೀನು ಇದ್ದಂತೆ ಅಂತ ಹೇಳಿ ರಾವಣನಿಗೆ ಸ್ವಲ್ಪ ಬೆಣ್ಣೆ ಹಚ್ಚುತ್ತಾನೆ. ಅಲ್ಲಿ ಭಯಂಕರರಾದ ಕಪಿಗಳಿದ್ದಾವೆ. ಕೇಸರಿ ಕಡೆಯವರಲ್ಲ, ಬೇರೆ ಗುಂಪು.

ಕೆಲವರು ಬಿಳಿ ಬಣ್ಣದವರು, ಕೆಲವರ ಮುಖ ಕೆಂಪು, ಕೆಲವರು ಜೇನು ಬಣ್ಣದವರು ಎಲ್ಲರೂ ಇದ್ದಾರೆ. ಎಲ್ಲರೂ ಹರಿತವಾದ ಉಗುರಿನವರು, ಹಲ್ಲಿನವರು, ನಾಲ್ಕು ಹಲ್ಲಿನ ಸಿಂಹದಂತವರು, ಹೆಬ್ಬುಲಿಯಂತವರು, ಬೆಂಕಿಯಂತವರು, ಘಟಸರ್ಪದಂತವರು, ಉದ್ದ ಬಾಲದವರು, ಮದಿಸಿದ ಆನೆಯಂತವರು, ಮಹಾ ಪರ್ವತವನ್ನು ಹೋಲುವಂತವರು, ದೊಡ್ಡ ದೊಡ್ಡ ಮೋಡಗಳಂತೆ ಗುಡುಗುವಂತವರು, ಅವರ ಕಣ್ಣು ಪಿಂಗಲ ಮತ್ತು ಕೆಂಪು ಬಣ್ಣದ್ದು, ಅವರ ನಡೆ ನುಡಿ ಎಲ್ಲ ಭಯಂಕರ. ಇವರೆಲ್ಲರಿಗೆ ಶತಬಲಿ ನಾಯಕ. ನಿತ್ಯವೂ ಸೂರ್ಯನ ಸೇವೆ ಮಾಡ್ತಾನೆ. ಸೂರ್ಯೋಪಾಸಕ ಅವನು. ಶೂರ, ಬಲವಂತ, ವಿಕ್ರಮ, ತನ್ನ ಬಲದ ಮೇಲೆ ನಂಬಿಕೆ ಇವನಿಗೆ ಮತ್ತು ಇವನಿಗೂ ತನ್ನ ಬಲದಿಂದಲೇ ಲಂಕೆಯನ್ನು ಧ್ವಂಸಮಾಡಬೇಕು ಎಂಬ ಆಸೆ. ಇವನಿಗೆ ರಾಮನಿಗಾಗಿ ಪ್ರಾಣ ಕೊಡಬೇಕೆಂಬ ತುಂಬಾ ಮನಸ್ಸಿದೆ. ನೋಡು ಐವರು ಕಪಿ ನಾಯಕರುಗಳು ಒಟ್ಟಾಗಿದ್ದಾರೆ ಅಲ್ಲಿ. ಗಜ, ಗವಾಕ್ಷ, ಗವಯ, ನಲ ಮತ್ತು ನೀಲ. ಕಮ್ಮಿ ಅಂದ್ರೂ ಒಬ್ಬೊಬ್ಬರು ಹತ್ತು ಕೋಟಿಯಷ್ಟು ಇದ್ದಾರೆ. ಹತ್ತು ಕೋಟಿ ಹೇಳಿದ್ದು ದುಡ್ದಿಗಲ್ಲ, ಕಪಿ ಸೈನ್ಯ. ಇನ್ನು ವಿಂದ್ಯ ಪರ್ವತದಲ್ಲಿ ವಾಸಿಸುತ್ತಿದ್ದ ಕಪಿಗಳು. ಇವರಂತೂ ಲೆಕ್ಕಕ್ಕೇ ಮೀರಿರತಕ್ಕಂತವರು, ಅಸಂಖ್ಯರು. ಮಹಾಪ್ರಭಾವವುಳ್ಳವರು. ಇವರು ಇಡೀ ಭೂಮಿಯಲ್ಲಿರುವ ಪರ್ವತಗಳನ್ನು ಪುಡಿ ಪುಡಿ ಮಾಡಬಲ್ಲಂತ ಶಕ್ತಿ ಉಳ್ಳವರು. ಘೋರ ವಾನರರು. ನೀರ್ನಳ್ಳಿಯವರು ಇದನ್ನೇಲ್ಲ ಒಂದೇ ಚಿತ್ರದಲ್ಲಿ ನೋಡಬಹುದು. ಸಾರಣ ತನ್ನ ಮುಗಿಸಿದ್ದೇ ಶುಕ ಮಾತನಾಡಲಿಕ್ಕೆ ಪ್ರಾರಂಭ ಮಾಡ್ತಾನೆ. ದೊಡ್ಡ ಗುಂಪು ಕಪಿಗಳದ್ದು, ಅವರೆಲ್ಲ ಕಿಷ್ಕಿಂದಾ ನಿಲಯರು. ಸಾರಣ ಹೇಳಿದ್ದು ದೊಡ್ಡ ಪರ್ವತ, ಕಾಡು ಅಂದ್ರೆ ಬೇರೆ ಬೇರೆ ಪ್ರದೇಶದವರು. ಇವರಕ್ಕಿಂತ ದೊಡ್ಡ ಗುಂಪು ಅದು ಕಿಷ್ಕಿಂದೆಯವರದ್ದು. ಮದಿಸಿದ ಆನೆಗಳಂತೆ, ಹಿಮಾಲಯದ ಸಾಲುವೃಕ್ಷಗಳಂತೆ ಇದ್ದರೆ, ಯುದ್ಧದಲ್ಲಿ ಅಸಾಧ್ಯರು, ಕಾಮರೂಪಿಗಳು, ಯುದ್ಧದಲ್ಲಿ ದೇವತರಂತೆ. ದೇವಾಂಶ ಸಂಭೂತರು. ಅವರದ್ದು ಕೋಟಿ, ಸಹಸ್ರ, ನವ, ಪಂಚ, ಸಪ್ತ, ಶಂಕಸಹಸ್ರ, ಬಿಂದಶತ, ಅಂತೆಲ್ಲ ಸಂಖ್ಯೆಗಳನ್ನು ಹೇಳ್ತಾನೆ. ಅರ್ಥ ಏನೂಂದ್ರೆ ಅಷ್ಟು ದೊಡ್ಡ ಲೆಕ್ಕರರು. ರಾವಣನಿಗೆ ಇದನ್ನೇಲ್ಲ ಕೇಳಿ ಅನುಕೂಲ ಆಗುವುದಕ್ಕಿಂತ ತೊಂದರೆ ಆಗ್ತಾ ಇದೆ. ಲೆಕ್ಕಕ್ಕಿಂತ ಹೆಚ್ಚಾಗಿ ಭಯ ಹುಟ್ಟಿಸತಕ್ಕಂತಹದ್ದು. ಇವರೆಲ್ಲ ಸುಗ್ರೀವನ ಖಾಸಗೀ ಸೈನ್ಯ. ಮೊದಲು ವಾಲಿಯದ್ದಾಗಿತ್ತು, ಈಗ ಸುಗ್ರೀವನದ್ದು. ಇವರೆಲ್ಲ ದೇವರು, ಗಂಧರ್ವರು ಮತ್ತು ರಾಮನ ಸಹಾಯಕ್ಕಾಗಿ ಹುಟ್ಟಿರುವಂತವರು. ಜೋಡಿ ವಾನರ ವೀರರು, ಅವಳಿ, ಭೀಕರ ಆಕಾರ, ಅಶ್ವೀನಿ ದೇವತೆಯ ಮಕ್ಕಳಾದ ಮೈಂದ ಮತ್ತು ದ್ವಿವಿಧ. ದೇವತೆಗಳನ್ನು ಸೋಲಿಸಿ ಅಮೃತವನ್ನು ಕುಡಿದವರು. ಅವರ ಬಗ್ಗೆ ಶುಕ ಒಂದೇ ಮಾತನ್ನು ಹೇಳ್ತಾನೆ, “ಯುದ್ಧದಲ್ಲಿ ಅವರಿಗೆ ಸಮಾನರು ಯಾರೂ ಇಲ್ಲ, ಅವರಿಗೆ ತಾವೇ ಲಂಕೆಯನ್ನು ಧ್ವಂಸಮಾಡುವ ಮನಸ್ಸಿದೆ.” ಮದಬಂದ ಆನೆಯಂತೆ ಇರುವವನು, ತನ್ನ ಬಲದಿಂದ ಸಮುದ್ರವನ್ನೇ ಕ್ಷೋಭೆಗೊಳಿಸುವವನು, ಇವನು ಲಂಕೆಗೆ ಬಂದವನು, ವೈದೇಹಿಯನ್ನು ಕಂಡವನು, ನಿನ್ನನ್ನು ಕಂಡವನು, ಬೇಕಾದ ರೂಪತಾಳುವವ, ಎಲ್ಲರಿಗಿಂತ ಶ್ರೇಷ್ಠ ಇವನು, ಕೇಸರಿಯ ಹಿರಿಯ ಪುತ್ರನಾದ ಹನುಮಂತ. ಇವನ ಚಲನೆಯನ್ನು ಅಥವಾ ಗತಿಯನ್ನು ತಡೆಯಲಿಕ್ಕೇ ಸಾಧ್ಯ ಇಲ್ಲ.

ಇವನು ಚಿಕ್ಕ ಶಿಶುವಾಗಿದ್ದಾಗ ಉದಯಿಸಿದ ಸೂರ್ಯನನ್ನು ಕಂಡು ಹಣ್ಣು ಎಂಬುದಾಗಿ ತಿಳಿದು ೩೦೦೦ ಯೋಜನ ಹಾರಿದವನು. ಯಾವುದು ದೇವತೆಗಳಿಗೆ, ದೇವರ್ಷಿಗಳಿಗೆ ಸಾಧ್ಯ ಇಲ್ಲವೋ ಆ ಸೂರ್ಯನ ಕಡೆಗೆ ಹಾರಿದವನು. ವಜ್ರಾಯುಧದ ಪ್ರಹಾರ ಮುಖದ ಮೆಲೆ ಆದಾಗ ೩೦೦೦ ಸಾವಿರ ಯೋಜನದ ಮೇಲಿಂದ ಉದಯ ಪರ್ವತದ ಮೇಲೆ ಬಿದ್ದವನು. ವಜ್ರಾಯುಧಕ್ಕೆ ಗೌರವ ಸೂಚನೆಯೋ ಎಂಬಂತೆ ಬಿದ್ದಾಗ ಎಡ ದವಡೆ ಚೂರು ಮುರಿಯಿತಂತೆ, ಅಷ್ಟೇ. ಅದಕ್ಕೆ ಅವನಿಗೆ ಹನುಮಾನ ಎಂಬ ಹೆಸರು. ಪ್ರಶಸ್ತವಾದ ಹನು ಉಳ್ಳವನು. ಅಂದ್ರೆ ದವಡೆಯ ಭಾಗಕ್ಕೆ ಹನು ಅಂತ ಹೆಸರು. ಇವನ ಬಗ್ಗೆ ಏನು ಹೇಳುವುದು? ಸಾಧ್ಯವೇ ಇಲ್ಲ. ಬೇರೆ ಕಪಿಗಳಿಂದ ಕೇಳಿದ್ದು, ಇವನ ರೂಪ, ಇವನ ಬಲ ಯಾರಿಂದಲೂ ಅಳೆಯಲಿಕ್ಕೇ ಸಾಧ್ಯ ಇಲ್ಲ. ವಿರೂಪಿಸಲಿಕ್ಕೂ ಸಾಧ್ಯ ಇಲ್ಲ. ಬಾಕಿ ಎಲ್ಲ ತಾನು ಮತ್ತು ತನ್ನ ಸೈನ್ಯದ ಜೊತೆಗೆ ಹೋಗಿ ಲಂಕೆಯನ್ನು ಧ್ವಂಸ ಮಾಡಬೇಕು ಅನ್ನೋದಿತ್ತು. ಆದರೆ ಹನುಮಂತ ಮಾತ್ರ ಇವನು ಒಬ್ಬನೇ ಸೈನ್ಯ. ಒಬ್ಬನೇ ಲಂಕೆಯನ್ನು ಧ್ವಂಸ ಮಾಡಬೇಕು ಎನ್ನುವ ಆಸೆ ಹೊತ್ತವನು. ರಾಮನಿಗಾಗಿ ಸುಮ್ಮನಿದ್ದಾನೆ ಹೊರತುಇಲ್ಲಾಂದ್ರೆ ಮಾಡುವ ಆಸೆ ಉಳ್ಳವನು. ಹನುಮಂತ ಬಂದ ಮೇಲೆ ಲಂಕೆಯಲ್ಲಿ ಆಗಿದ್ದು ಅನಾಹುತ. ಇನ್ನು ಮುಂದೆ ಆಗೋದು ಕೂಡ ಅದೇ.

ಹಾಗಾಗಿ ‘ಧೂಮಕೇತು’ ಅಂತ ಸಂಬೋಧನೆ ಮಾಡ್ತಾ ಇದ್ದಾನೆ ಶುಕ ಅವನನ್ನು. ಅವನು ಹಚ್ಚಿದ ಬೆಂಕಿ ಇನ್ನೂ ಆರಿಲ್ಲ ಪೂರ್ತಿ. ಅವನನ್ನು ಮರೆತುಹೋಯ್ತಾ ನಿಂಗೆ? ಅಷ್ಟು ಬೇಗ ಮರೆಯಲು ಸಾಧ್ಯವಾ ಅವನನ್ನು? ಎಂಬುದಾಗಿ, ಪಾಪ ರಾವಣನನ್ನು ಚುಚ್ಚಿದ!
ಹನುಮಂತನ ಬಳಿಕ ಯಾರಿರ್ತಾನೆ? ಅವನ ಪಕ್ಕದಲ್ಲಿ ಶೂರನಾದವನು, ಶ್ಯಾಮಲ ವರ್ಣದವನು, ಕಮಲದ ಕಣ್ಣವನು. ಇವನು ಇಕ್ಷ್ವಾಕು ವಂಶೀಯರ ಪೈಕಿಯಲ್ಲಿ ಅತಿರಥ. ವಿಶ್ವವಿಖ್ಯಾತ ಪೌರುಷ, ಜಗತ್ತಿಗೆಲ್ಲಾ ಇವನ ಪೌರುಷ ಗೊತ್ತು, ನಿನಗೊಬ್ಬನಿಗೇ ಗೊತ್ತಿಲ್ಲ ಎನ್ನುವ ಹಾಗೆ. ಯಾವನನ್ನು ಧರ್ಮವು ಬಿಟ್ಟು ಹೋಗಿವುದಿಲ್ಲವೋ, ಯಾರು ಧರ್ಮವನ್ನು ಬಿಟ್ಟು ಹೋಗುವುದಿಲ್ಲವೋ, ಯಾರು ಬ್ರಹ್ಮಾಸ್ತ್ರವನ್ನು ಬಲ್ಲನೋ, ಯಾರು ಎಲ್ಲ ವೇದಗಳನ್ನು ಬಲ್ಲನೋ, ಮಾತ್ರವಲ್ಲ ವೇದವನ್ನು ಬಲ್ಲವರ ಪೈಕಿಯಲ್ಲಿ ಅಗ್ರಶ್ರೇಷ್ಠನು. ರಾಮನು ಕೋಪಗೊಂಡರೆ ಗಗನವನ್ನೇ ಸೀಳಿಯಾನು, ಪರ್ವತಗಳನ್ನೇ ಇಬ್ಭಾಗ ಮಾಡಿಯಾನು. ರಾಮನ ಕ್ರೋಧವು ಮೃತ್ಯುವು. ಯಾವನ ಪರಾಕ್ರಮವು ಇಂದ್ರನಂತೆ ಇದೆಯೋ, ಯಾವನ ಪತ್ನಿಯನ್ನು ಜನಸ್ಥಾನದಿಂದ ನೀನು ಕದ್ದುಗೊಂಡು ಬಂದೆಯೋ, ಅವನೇ ಇವನು, ರಾಮ. ನಿನ್ನ ಕಡೆಗೇ ಬರ್ತಾ ಇದ್ದಾನೆ, ನಿನ್ನೊಡನೆ ಹೋರಾಡುವ ಸಲುವಾಗಿ, ನಿನ್ನನ್ನು ಮರ್ದಿಸುವ ಸಲುವಾಗಿ, ಯುದ್ಧದಲ್ಲಿ ನಿನ್ನನ್ನು ಧ್ವಂಸಗೊಳಿಸುವ ಸಲುವಾಗಿ ಮುಂದೆತ್ತಿ ಬರುವ ರಾಮನವನು.

ರಾಮನ ಬಲಪಾರ್ಶ್ವದಲ್ಲಿ ಬಂಗಾರದ ಬಣ್ಣದವನು. ವಿಶಾಲವಾದ ವಕ್ಷಸ್ಥಳ, ಕೆಂಪು ಕಣ್ಣು, ಕಪ್ಪಾದ ಗುಂಗುರು ಕೂದಲು ಅವನು ಲಕ್ಷ್ಮಣ. ರಾಮನ ತಮ್ಮ; ರಾಮನ ಪ್ರಾಣ ಅಂದರೆ ತಪ್ಪಿಲ್ಲ. ಅವನು ಮಂತ್ರಾಲೋಚನೆಯಲ್ಲಿಯೂ ಕುಶಲ, ಯುದ್ಧದಲ್ಲಿಯೂ ಕುಶಲ, ಸರ್ವಶಾಸ್ತ್ರಗಳನ್ನೂ ಬಲ್ಲವನು. ಅಣ್ಣನಿಗೆ ಸಣ್ಣ ತೊಂದರೆಯಾದರೂ ಸಹಿಸುವವನಲ್ಲ. ಅವನನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ವಿಜಯೀ ಅವನು. ಹಾಗೇ ಪರಾಕ್ರಮಿ, ಬುದ್ಧಿವಂತ, ಬಲಶಾಲಿ, ರಾಮನ ಬಲಗೈ. ಹೊರಗೆ ಸಂಚರಿಸುವ ರಾಮನ ಪ್ರಾಣ ಅವನು! ಇವನಿಗೆ ರಾಮನ ಕಾರ್ಯಕ್ಕೋಸ್ಕರವಾಗಿ ತನ್ನ ಪ್ರಾಣವನ್ನು ಕೊಡುವುದು ಇವನ ಅತ್ಯಂತ ಪ್ರಿಯವಾದ ಸಂಗತಿ. ಲಕ್ಷ್ಮಣನಿಗೂ ಆಸೆಯಿದೆ, ಸರ್ವ ರಾಕ್ಷ ಸಂಹಾರದ್ದು.
ಅವನ ಪಕ್ಕದಲ್ಲಿ, ರಾಮನ ಎಡಭಾಗದಲ್ಲಿ ನಿಂತವನು‌ ನಿನಗೆ ಚೆನ್ನಾಗಿ ಗೊತ್ತಿರುವವನು. ಸುತ್ತ ರಾಕ್ಷಸರ ಚಿಕ್ಕ‌ ಗುಂಪಿದೆ. ನಾಲ್ವರು ರಾಕ್ಷಸರು ಸುತ್ತುವರಿದಿದ್ದಾರೆ‌. ಇವನು ರಾಜಾ ವಿಭೀಷಣ! ಶ್ರೀಮಾನ್ ರಾಜಾಧಿರಾಜ(ರಾಮ)ನಿಂದ ಲಂಕಾಧಿಪತಿಯಾಗಿ ಪಟ್ಟಾಭಿಷೇಕಗೊಂಡವನು.. ಎಂದು ರಾವಣನ ಮುಂದೆ ಅವನ ಗುಪ್ತಚರ ಶುಕನು ಹೇಳ್ತಾ ಇರುವಂಥದ್ದು! ಈ‌ ವಿಭೀಷಣನು ನಿನ್ನೊಡನೆ ಯುದ್ಧ ಮಾಡುವ ಸಲುವಾಗಿ ಕುಪಿತನಾಗಿ ಬರ್ತಾ ಇದ್ದಾನೆ.
ಅವನ ಪಕ್ಕದಲ್ಲಿ ಮಹಾಪರ್ವತದಂತೆ ಶೋಭಿಸ್ತಕ್ಕಂಥಾ, ಸರ್ವ ವಾನರಾಧಿಪತಿಯಾಗಿ ಶೋಭಿಸ್ತಕ್ಕಂತಹಾ ಅಪರಾಜುತನಾದ ಸುಗ್ರೀವ. ತೇಜಸ್ಸು, ಯಶಸ್ಸು, ಬುದ್ಧಿ, ಜ್ಞಾನ ಮತ್ತು ವಂಶೋನ್ನತಿ ಇವುಗಳ ದೃಷ್ಟಿಯಿಂದ ಎಲ್ಲ ಕಪಿಗಳನ್ನೂ ಮೀರಿ ಬೆಳಗುವವನು. ಕಿಷ್ಕಿಂಧೆಯೆಂಬ ಗುಹಾರಾಜ್ಯ ಅವನ ರಾಜಧಾನಿ. ಅದರೊಳಗೆ ಕಾಡು, ಪರ್ವತ, ಬೆಟ್ಟ ಎಲ್ಲಾ ಇದೆ. ಅಂತಹ ಕಿಷ್ಕಿಂಧಾ ಗುಹೆಯನ್ನು ತನ್ನ ಕೇಂದ್ರವಾಗಿಸಿಕೊಂ ರಾಜ್ಯಭಾರ ಮಾಡ್ತಕ್ಕಂಥಾ ಸುಗ್ರೀವ, ಅವನ ಕೊರಳಲ್ಲಿ ನೂರು ಸ್ವರ್ಣ ಕಮಲಗಳಿರುವ ಕಾಂಚನ ಮಾಲೆ. ಆ ಕಾಂಚನ ಮಾಲೆಯಲ್ಲಿ ಲಕ್ಷ್ಮಿಯ ಪ್ರತಿಷ್ಠೆಯಿದೆ. ಮನುಷ್ಯರೇನು? ದೇವತೆಗಳೂ ಬಯಸ್ತಾರೆ ಆ ಕಾಂಚನ ಮಾಲೆಯ ಸಲುವಾಗಿ. ಈ ಕಾಂಚನ ಮಾಲೆ ಸುಗ್ರೀವನಿಗೆ ರಾಮನ ಸಲುವಾಗಿ ಬಂದಿದ್ದು. ಪುನರ್ಜನ್ಮವನ್ನು ರಾಮನಿಂದ ಪಡೆದವನು ಸುಗ್ರೀವ. ಹಾಗಾಗಿ ರಾಮನಿಗಾಗಿ ಪ್ರಾಣ ಕೊಡಲಿಕ್ಕೆ ಅವನು ಸಿದ್ಧನಿದ್ದಾನೆ.

ನೂರು ಲಕ್ಷಗಳು ಒಂದು ಕೋಟಿ, ಒಂದು ಲಕ್ಷ ಕೋಟಿಗಳಿಗೆ ಒಂದು ಶಂಖ, ಒಂದು ಲಕ್ಷ ಶಂಖಗಳಿಗೆ ಒಂದು ಮಹಾ ಶಂಖ. ಒಂದು ಲಕ್ಷ ಮಹಾಶಸಂಖಗಳಿಗೆ ಒಂದು ವೃಂದ, ಒಂದು ಲಕ್ಷ ವೃಂದಗಳಿಗೆ ಒಂದು ಮಹಾವೃಂದ, ಒಂದು ಲಕ್ಷ ಮಹಾವೃಂದಗಳಿಗೆ ಒಂದು ಪದ್ಮ, ಒಂದು ಲಕ್ಷ ಮಹಾಪದ್ಮಗಳಿಗೆ ಒಂದು ಖರ್ವ ಮತ್ತು ಒಂದು ಲಕ್ಷ ಮಹಾಖರ್ವಗಳಿಗೆ ಒಂದು ಸಮುದ್ರ. ಒಂದು ಲಕ್ಷ ಸಮುದ್ರಗಳಿಗೆ ಒಂದು ಓಘ, ಒಂದು ಲಕ್ಷ ಓಘಗಳಿಗೆ ಒಂದು ಮಹೌಘ!! ಇದೆಲ್ಲ ಪ್ರಸ್ತಾಪ ಮಾಡ್ತಾರೆ ಶುಕ ಸಾರಣರು. ಇದೆಲ್ಲ ಬೇಕಾಗ್ತದೆ ಕಪಿಸೈನ್ಯವನ್ನು ಎಣಿಸುವುದಕ್ಕೆ ಅಂತ! ಇವರೆಲ್ಲರಿಂದ ಕೂಡಿರ್ತಕ್ಕಂಥಾ ಸುಗ್ರೀವನು ಸಚಿವರ ಸಮೇತ, ವಿಭೀಷಣನೊಡಗೂಡಿ ನಿನ್ನ ಮೇಲ ಯುದ್ಧಕ್ಕಾಗಿ ಮುಂದೊತ್ತಿ ಬರ್ತಾ ಇದ್ದಾನೆ ಮಹಾಬಲವೃತನಾಗಿ, ಮಹಾ ಪರಾಕ್ರಮನಾಗಿ. ನೋಡು ಸೇನೆಯನ್ನು. ಇನ್ನು ಸೋಲಾಗದಿರಲು ಏನು ಪ್ರಯತ್ನ ಮಾಡಬಹುದೋ ಮಾಡು ಎಂಬುದಾಗಿ ನಿಲ್ಲಿಸಿದ್ರೆ, ಅಲ್ಲಿಗೆ ತುರಿಕೆ ಬರು ಉರಿಸಣಿಕೆಯನ್ನು ಇಡೀ ಮೈಗೆ ಹಚ್ಚಿದ ಅನುಭವ ಆಯಿತು ರಾವಣನಿಗೆ!

ಏನು ಪ್ರತಿಕ್ರಿಯಿಸಿದ ರಾವಣ? ಎನ್ನುವುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನೋಡೋಣ..

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments