ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಶ್ರೀಮದ್ವಾಲ್ಮೀಕಿ ರಾಮಾಯಣದ ಯುದ್ಧಕಾಂಡದ ನೂರನೆಯ ಸರ್ಗ. ರಾಮ-ರಾವಣರ ಅಂತಿಮ ಯುದ್ಧ ಮೊದಲಾಗುವುದು ಇಲ್ಲಿ. ಅವತಾರಕಾರ್ಯದ ಒಂದು ಪ್ರಮುಖ ಘಟ್ಟ. ದುಷ್ಟ ಶಿಕ್ಷಣ ; ಶಿಷ್ಟ ರಕ್ಷಣ ; ಧರ್ಮ ಸ್ಥಾಪನ. ಆ ದುಷ್ಟ ಶಿಕ್ಷಣದ ಅತ್ಯಂತ ಪ್ರಮುಖ ಘಟ್ಟ ಇದು. ಒಳಿತು-ಕೆಡುಕುಗಳು ಇದಿರಿದುರಾಗಿದಾವೆ. ಒಳಿತಿನಲ್ಲಿ ಒಳಿತು ರಾಮ. ಕೆಡುಕಿನಲ್ಲಿ ಕೆಡುಕು ರಾವಣ. ಇಂತಹ ರಾಮ-ರಾವಣರು ಇದಿರಾದರು. ರಾವಣನ ಕಡೆಯ ಎಲ್ಲ ನಾಯಕರೂ ಅಂತ್ಯವನ್ನು ಕಂಡಿದಾರೆ. ಇದೀಗ ವಿಜಯ ಅಥವಾ ಮರಣ ಸನ್ನಿವೇಶಕ್ಕೆ ಬಂದು ನಿಂತಿದಾನೆ ರಾವಣ. ಹಾಗಾಗಿ ಈಗ ಅವನೇ ಯುದ್ಧಕ್ಕೆ ಬಂದಿದಾನೆ. ತಾಮಸಾಸ್ತ್ರದಿಂದ ತನ್ನ ಹಾಗೂ ರಾಮನ ಮಧ್ಯೆ ಇದ್ದ ವಾನರರನ್ನ ನಿವಾರಿಸಿ ರಾಮನನ್ನು ಪ್ರಕಟಪಡಿಸಿಕೊಂಡಿದ್ದಾನೆ ರಾವಣ. ಲಕ್ಷ್ಮಣನನ್ನು ದಾಟಿ ರಾಮನ ಎದುರು ಬಂದು, ರಾಮನ ಮೇಲೆ ಬಾಣಗಳ ಮಳೆಗರಿತಾನೆ. ಗೊಂಚಲು ಗೊಂಚಲಾಗಿ ಬರುವ ಬಾಣಗಳನ್ನು ಕಂಡ ರಾಮನು ತಾನೂ ತನ್ನ ಬಾಣಗಳನ್ನು ಕೈಗೆ ತೆಗೆದುಕೊಳ್ತಾನೆ. ಭಲ್ಲಗಳಿಂದ( ಒಂದು ರೀತಿಯ ಬಾಣ) ರಾವಣನ ಬಾಣಗಳನ್ನು ಕತ್ತರಿಸಿ ಒಗೆದನು ರಾಮ. ಘೋರ ಯುದ್ಧವು ಪ್ರಾರಂಭವಾಯಿತು. ಪರಸ್ಪರರು ಒಬ್ಬರ ಮೇಲೊಬ್ಬರು ಬಾಣಗಳ ಮಳೆಗರಿತಾ ಇದಾರೆ. ತಮ್ಮ ಎಡಕ್ಕೂ ಬಲಕ್ಕೂ ಸುತ್ತುತ್ತಾ ಚಿತ್ರವಿಚಿತ್ರವಾದ ಮಂಡಲಗಳನ್ನ ರಚನೆ ಮಾಡ್ತಾ ಇದಾರೆ. ರಾಮನೂ ಕೂಡ ರೌದ್ರಸ್ವರೂಪವನ್ನು ತಾಳಿದಾನೆ. ರಾವಣನು ಅಂತಕನಂತೆ ಇದ್ದರೆ ರಾಮನು ಅಂತಕಾಂತಕನಂತೆ ಇದ್ದ ಎಂದು ವಾಲ್ಮೀಕಿಗಳು ವರ್ಣಿಸ್ತಾರೆ. ಅವರು ಯಾವ ಕಡೆಗೆ ಹೋಗ್ತಾ ಇದ್ರೋ ಆ ಕಡೆಗೆ ಬಾಣಗಳ ಅಲೆಗಳು ಎದ್ದು ಬರ್ತಾ ಇದ್ದವು.

ಏತನ್ಮಧ್ಯೆ ರಾಮನ ಹಣೆಯಲ್ಲಿ ಬಾಣಗಳ ಮಾಲೆಯೊಂದನ್ನು ರಾವಣ ನೆಡ್ತಾನೆ. ರಾಮ ವಿಚಲಿತನಾಗಲಿಲ್ಲ. ರೌದ್ರಾಸ್ತ್ರವನ್ನು ಪ್ರಯೊಗಿಸುವ ಉದ್ದೇಶದಿಂದ ರಾಮನು ರೌದ್ರ ಮಂತ್ರವನ್ನು ಜಪಿಸ್ತಾ ಬಾಣಗಳನ್ನು ಪ್ರಯೋಗ ಮಾಡ್ತಾ ಇದಾನೆ ರಾವಣನ ಮೇಲೆ. ರಾವಣನ ಕವಚಕ್ಕೆ ತಾಗಿ ಬೀಳ್ತಾ ಇದ್ವಂತೆ. ಒಳಗೇ ಹೋಗಲಿಲ್ಲ. ಅದನ್ನು ಗಮನಿಸಿದ ರಾಮನು ಎಲ್ಲಿ ಕವಚ ಇಲ್ಲ ಅಂತ ನೋಡಿದಾಗ ಹಣೆಯಲ್ಲಿ ಇರಲಿಲ್ಲ. ಒಂದು ಬಾಣವನ್ನು ರಾವಣನ ಹಣೆಯಲ್ಲಿ ನೆಡ್ತಾನೆ. ಮತ್ತನೇಕ ಬಾಣಗಳು ರಾಮನಿಂದ ಹೊರಟವು. ರಾವಣನ ಶರೀರವನ್ನು ಭೇಧಿಸಿ ಹೊರಬಂದವು. ರಾಮನ ಅಸ್ತ್ರವನ್ನು ನಿವಾರಿಸಿ ರಾವಣನು ಆಸುರವೆಂಬ ಮಹಾಸ್ತ್ರವನ್ನು ಪ್ರಯೋಗ ಮಾಡ್ತಾನೆ. ಆ ಅಸ್ತ್ರದಿಂದ ಅನೇಕಾನೇಕ ಶರಗಳು ಹೊರಟವು. ಬೇರೆ ಬೇರೆ ಪ್ರಾಣಿ-ಪಕ್ಷಿಗಳ ಮುಖ ಬಾಣಗಳು ಆ ಒಂದು ಅಸ್ತ್ರದಿಂದ ನೂರಾರು ಸಾವಿರಾರು ಸಂಖ್ಯೆಯಲ್ಲಿ ಹೊರಬಂದವು. ಅದನ್ನು ಕಂಡ ರಾಮನು ಆಸುರಾಸ್ತ್ರಕ್ಕೆ ಪ್ರತಿಯಾಗಿ ಆಗ್ನೇಯಾಸ್ತ್ರವನ್ನು ಪ್ರಯೋಗ ಮಾಡ್ತಾನೆ. ಆ ಆಗ್ನೇಯಾಸ್ತ್ರದಿಂದ ಕೆಲವಾರು ಬಾಣಗಳು ಹೊರಬಂದವು. ಕೆಲವು ಬಾಣಗಳು ಬೆಂಕಿಯನ್ನು ಉಗುಳ್ತಾ ಇದ್ದವು, ಕೆಲವು ಬಾಣಗಳಿಗೆ ಸೂರ್ಯನ ಮುಖ ಇತ್ತು, ಚಂದ್ರನ ಮುಖ ಇತ್ತು, ಅರ್ಧ ಚಂದ್ರನ ಮುಖ ಇತ್ತು, ಧೂಮಕೇತು, ಗ್ರಹ-ನಕ್ಷತ್ರಳು ಮುಖ ಇತ್ತು, ಮಿಂಚಿನಂತಹ ಮುಖ ಇತ್ತು. ಹೀಗೆ ಆಗ್ನೇಯಾಸ್ತ್ರದಿಂದ ಹೊರಬಂದ ತೇಜಸ್ಸಿನ ಬಾಣಗಳು ರಾವಣನ ಪ್ರಾಣಿ-ಪಕ್ಷಿಮುಖದ ಎಲ್ಲಾ ಬಾಣಗಳನ್ನು ಧ್ವಂಸ ಮಾಡಿದವು. ಇದನ್ನು ನೋಡಿದ ಕಪಿಗಳು ಹರ್ಷೋದ್ಗಾರ ಮಾಡಿದವು. ರಾವಣನು ಇನ್ನೊಂದು ಮಾಯಾಸ್ತ್ರವನ್ನು ಪ್ರಯೋಗ ಮಾಡ್ತಾನೆ. ಆ ಅಸ್ತ್ರದಿಂದ ಶೂಲಗಳು ಹೊರಬಂದವು, ಮುದ್ಗರಗಳು, ಕೂಟ-ಪಾಶಗಳು, ನಾನಾ ಪ್ರಕಾರದ ಆಯುಧಗಳು ಹೊರಗೆ ಬಂದವು. ಅದನ್ನು ರಾಮನು ಗಾಂಧರ್ವಾಸ್ತ್ರದಿಂದ ನಿವಾರಿಸಿದನು. ರಾವಣನು ಸೌರಾಸ್ತ್ರವನ್ನು ಪ್ರಯೋಗ ಮಾಡ್ತಾನೆ. ನಾನಾ ಪ್ರಕಾರದ ಚಕ್ರಗಳು ಹೊರಬಂದವಂತೆ. ಸಾಮಾನ್ಯವಾಗಿ ಅಸ್ತ್ರವನ್ನು ಬಾಣದಿಂದ ಎದುರಿಸಲು ಆಗುವುದಿಲ್ಲ. ಆದರೆ ರಾಮನು ಈ ಸೌರಾಸ್ತ್ರವನ್ನು ತನ್ನ ಬಾಣಗಳಿಂದಲೇ ಪರಿಹಾರ ಮಾಡ್ತಾನೆ. ರಾವಣನು ಹತ್ತು ಬಾಣಗಳನ್ನು ರಾಮನ ಶರೀರದಲ್ಲಿ ನೆಡ್ತಾನೆ. ರಾಮನು ವಿಚಲಿತನಾಗಲಿಲ್ಲ. ಆಗ ಅನೇಕಾನೇಕ ಬಾಣಗಳಿಂದ ರಾಮನನ್ನು ನಖಶಿಖಾಂತ ಗಾಯಗೊಳಿಸ್ತಾನೆ ರಾವಣ.

ಲಕ್ಷ್ಮಣ ನೋಡ್ತಾ ಇದ್ದ. ಕ್ರುದ್ಧನಾದ. ಏಳು ಬಾಣಗಳನ್ನು ಕೈಗೆತ್ತಿಕೊಂಡ. ರಾವಣನ ರಥದ ಧ್ವಜವನ್ನು ಕತ್ತರಿಸಿ ಕೆಡಗಿದ. ಯುದ್ಧದಲ್ಲಿ ಧ್ವಜಭಂಗವೆನ್ನುವುದು ಹಿನ್ನಡೆ. ರಾವಣನ ಧ್ವಜ ಮನುಷ್ಯರ ತಲೆಬುರುಡೆ. ಬಳಿಕ ಇನ್ನೊಂದು ಬಾಣದಿಂದ ಸಾರಥಿಯ ತಲೆಯನ್ನು ಅರಿದನು. ಮತ್ತೂ ಕೆಲವು ಬಾಣಗಳನ್ನು ಪ್ರಯೋಗ ಮಾಡಿ ರಾವಣನ ಧನುಸ್ಸನ್ನು ತುಂಡು ಮಾಡ್ತಾನೆ. ಆನೆಯ ಸೊಂಡಿಲಿನಷ್ಟು ದಪ್ಪದ ಧನುಸ್ಸನ್ನು ಲಕ್ಷ್ಮಣನು ಐದು ಬಾಣಗಳಿಂದ ತುಂಡರಿಸಿದ. ವಿಭೀಷಣನು ಮುಂದೆ ಬಂದು ತನ್ನ ಗದೆಯಿಂದ ರಾವಣನ ಕುದುರೆಗಳನ್ನು ಸಂಹಾರ ಮಾಡ್ತಾನೆ. ಬಹಳ ಸಿಟ್ಟು ಬಂತು ರಾವಣನಿಗೆ. ಆ ಭಗ್ನ ರಥದಿಂದ ಕೆಳಗೆ ಧುಮುಕಿದನು ರಾವಣ. ತಮ್ಮನ ಮೇಲೆ ಭಯಂಕರ ಕ್ರೋಧ ಬಂತಂತೆ ರಾವಣನಿಗೆ. ವಿಭೀಷಣನನ್ನು ಸಂಹಾರ ಮಾಡಬೇಕು ಎಂಬ ಮನೋಭಾವದಲ್ಲಿ ಶಕ್ತ್ಯಾಯುಧವನ್ನು ಕೈಗೆತ್ತಿಕೊಂಡ ರಾವಣ. ಅದನ್ನು ವಿಭೀಷಣನೆಡೆಗೆ ಪ್ರಯೋಗ ಮಾಡಿದ. ಲಕ್ಷ್ಮಣ ಮುನ್ನುಗ್ಗಿ ಬಂದ. ಆ ಶಕ್ತ್ಯಾಯುಧ ವಿಭೀಷಣನನ್ನು ತಲುಪುವ ಮೊದಲೇ ಆ ಬಾಣವನ್ನು ಮೂರು ತುಂಡುಗಳಾಗಿ ಮಾಡಿಬಿಡ್ತಾನೆ ಲಕ್ಷ್ಮಣ. ಆಗ ಅದಕ್ಕಿಂತ ಪ್ರಬಲವಾದ ಇನ್ನೊಂದು ಶಕ್ತ್ಯಾಯುಧವನ್ನು ಕೈಗೆತ್ತಿಕೊಂಡ. ಅದನ್ನು ವಿಭೀಷಣನ ಮೇಲೆ ಪ್ರಯೋಗ ಮಾಡೋದಕ್ಕೆ ಹೊರಟಿದಾನೆ ರಾವಣ. ಲಕ್ಷ್ಮಣ ಗಮನಿಸ್ತಾನೆ. ಪ್ರಾಣಸಂಶಯದಲ್ಲಿ ವಿಭೀಷಣ. ಆಗ ಮತ್ತೆ ವಿಭೀಷಣನ ರಕ್ಷಣೆಗೆ ಧಾವಿಸಿ ಬಂದನು ಲಕ್ಷ್ಮಣ. ಬಹಳ ತ್ವರೆ ಮಾಡ್ತಾನೆ ಲಕ್ಷ್ಮಣ. ರಾವಣನು ಅದನ್ನು ಪ್ರಯೋಗ ಮಾಡುವ ಮೊದಲೇ ಲಕ್ಷ್ಮಣನು ಎಡೆಬಿಡದೇ ಬಾಣಗಳ ಮಳೆ ಸುರಿಸಿದ. ವಿಚಲಿತನಾಗ್ತಾನೆ ರಾವಣ. ವಿಕ್ರಮ ನಷ್ಟವಾಯಿತು. ಆಗ ರಾವಣ ಲಕ್ಷ್ಮಣನ ಕಡೆ ತಿರುಗಿ ನಿಲ್ತಾನೆ. ಹೇಳಿದನಂತೆ; ಮೆಚ್ಚಬೇಕು ನಿನ್ನ ಪರಾಕ್ರಮವನ್ನು, ಬಲವನ್ನು, ಸಾಮರ್ಥ್ಯವನ್ನು. ಇಂತಹ ರಾವಣನನ್ನೇ ಕಾರಗೆಡಿಸಿ ಕೈಲಿದ್ದ ಆಯುಧವನ್ನು ಪ್ರಯೋಗ ಮಾಡದಂತೆ ಮಾಡಿದೆಯಲ್ಲ. ವಿಭೀಷಣನನ್ನು ನೀನು ರಕ್ಷಿಸಿದ್ದು ಹೌದು. ಆದರೆ ಇದನ್ನು ನಿನ್ನ ಮೇಲೆಯೇ ಪ್ರಯೋಗ ಮಾಡ್ತೇನೆ ನಾನೀಗ. ನೀನು ಅವನನ್ನು ಉಳಿಸಿದ ಕಾರಣದಿಂದ ನಿನ್ನ ಪ್ರಾಣಕ್ಕೆ ಎರವಾಗುವಂತೆ ಮಾಡ್ತೇನೆ ಎಂದು ಹೇಳಿ, ರಕ್ತದ ಗುರುತುಳ್ಳ ಆ ಶಕ್ತ್ಯಾಯುಧವನ್ನು ಹೃದಯಕ್ಕೆ ಗುರಿಯಿಟ್ಟು ನಿನ್ನ ಹೃದಯವನ್ನು ತಿವಿದು ರಕ್ತಾಂಕಿತವಾಗಿ ಬರ್ತದೆ ನೋಡು ಎಂದು ಹೇಳಿ, ಎಂಟು ಘಂಟೆಗಳನ್ನು ಕಟ್ಟಿದ, ತಾನಾಗಿ ಮಹಾನಾದವನ್ನು ಉಂಟುಮಾಡುತ್ತಿದ್ದಂತಹ ಆ ಶಕ್ತ್ಯಾಯುಧವನ್ನು (ಶತ್ರುಘಾತಿನಿ ಎಂದು ಕರೆದಿದ್ದಾರೆ. ಶತ್ರುಗಳನ್ನು ಸಂಹಾರ ಮಾಡದೇ ಬಿಡುವುದಿಲ್ಲ ಅದು. ಅಮೋಘ) ಅದನ್ನು ಲಕ್ಷ್ಮಣನ ಕಡೆಗೆ ಬೀಸಿ ಎಸೆದ. ಉರಿಕಾರಿತು ಮತ್ತೊಮ್ಮೆ. ಪ್ರಜ್ವಲಿಸಿತು. ಎಸೆದ ಬಳಿಕ ಮತ್ತೊಮ್ಮೆ ಸಿಂಹನಾದವನ್ನ ಮಾಡ್ತಾನೆ. ಆಯ್ತು ಕೆಲಸ ಎನ್ನುವ ಭಾವದಲ್ಲಿ.

ರಾಮ ಕಂಡ. ಲಕ್ಷ್ಮಣನ ಕಡೆಗೆ ಶಕ್ತ್ಯಾಯುಧ ಬರ್ತಾ ಇದೆ. ಆಗ ರಾಮ ಎರಡು ಶಬ್ದವನ್ನು ಉದ್ಗರಿಸ್ತಾನೆ. ‘ಲಕ್ಷ್ಮಣನಿಗೆ ಒಳಿತಾಗಲಿ’ ಎನ್ನುವುದು ಒಂದು. ‘ವ್ಯರ್ಥವಾಗು ನೀನು’ ಎಂಬುದಾಗಿ ಶಕ್ತ್ಯಾಯುಧವನ್ನು ಉದ್ದೇಶಿಸಿ ಹೇಳ್ತಾನೆ. ಆ ಶಕ್ತ್ಯಾಯುಧವು ಮುನ್ನುಗ್ಗಿ ಬಂದು ಲಕ್ಷ್ಮಣನ ಎದೆಯನ್ನು ಪ್ರವೇಶಿಸಿತು. ಲಕ್ಷ್ಮಣನ ಮುಖದಲ್ಲಿ ಭಯದ ಸುಳಿವೇ ಇರಲಿಲ್ಲವಂತೆ. ಅದು ಆಳದವರೆಗೆ ಇರಿದಿದೆ ಲಕ್ಷ್ಮಣನನ್ನು. ಕುಸಿದು ಧರೆಗೊರಗಿದ ಲಕ್ಷ್ಮಣ. ಅದನ್ನು ಕಂಡು ವಿಷಣ್ಣನಾದನು ರಾಮ. ಕೆಲಹೊತ್ತು ರಾಮ ದುಃಖಿತನಾದ. ಮರುಕ್ಷಣವೇ ಮಹಾಕ್ರೋಧಕ್ಕೆ ಒಳಗಾದ ರಾಮ. ತನ್ನ ಸರ್ವಶಕ್ತಿಯಿಂದ ಯುದ್ಧಕ್ಕೆ ಮುಂದಾಗ್ತಾನೆ ರಾಮ. ಆದರೆ ಒಂದು ಕಣ್ಣು ನಡುನಡುವೆ ಲಕ್ಷ್ಮಣನ ಕಡೆಗೆ. ರಾಮ ಯುದ್ಧ ಮುಂದುವರೆಸ್ತಾನೆ, ವಾನರರು ಲಕ್ಷ್ಮಣನ ಎದೆಗೆ ನೆಟ್ಟ ಆ ಶಕ್ತ್ಯಾಯುಧವನ್ನು ಕೀಳಲು ಯತ್ನಿಸಿದ್ರು, ಆಗ್ಲಿಲ್ಲ. ಏತನಧ್ಯೆ ಅವರ ಮೇಲೆ ಬಾಣಗಳನ್ನ ಎಸೀತಾ ಇದ್ದಾನೆ ರಾವಣ. ಕಪಿನಾಯಕರು ಗಮನಿಸಿದ್ರು, ಲಕ್ಷ್ಮಣನನ್ನು ಭೂಮಿಗೆ ನೆಟ್ಟಿದೆ ಆ ಶಕ್ತ್ಯಾಯುಧ! ರಾಮನು ಧಾವಿಸಿ ಬಂದು ತನ್ನ ಬರಿಗೈಯಿಂದಲೇ ಆ ಶಕ್ತಿಯನ್ನು ಕಿತ್ತು ಮುರಿದನಂತೆ! ಲಕ್ಷ್ಮಣನ ಪ್ರಾಣವನ್ನು ತೆಗೆದು ರಾವಣನ ಬಳಿ ಹೋಗಬೇಕಾಗಿದ್ದ ಆ ಆಯುಧವು ರಾಮನ ಶಾಪದ ಪರಿಣಾಮವಾಗಿ ಕೆಲಸ ಮಾಡದೇ ಹೋಯಿತು. ಲಕ್ಷ್ಮಣನ ಪ್ರಾಣವೂ ಹಿಡಿದು ನಿಂತಿದೆ, ಲಕ್ಷ್ಮಣನನ್ನು ಬಿಟ್ಟು ರಾವಣನನ್ನು ಸೇರ್ಲಿಕ್ಕೂ ಸಾಧ್ಯವಾಗ್ತಾ ಇಲ್ಲ. ಅದು ರಾಮನ ವಾಕ್ ಶಕ್ತಿ. ರಾಮನು ಲಕ್ಷ್ಮಣನ ದೇಹದಿಂದ ಶಕ್ತ್ಯಾಯುಧವನ್ನು ಕೀಳಲು ಪ್ರಯತ್ನ ಪಡುತ್ತಿರುವಾಗಲೇ ಅವನ ದೇಹದ ಪ್ರತಿಯೊಂದು ಅಂಗದ ಮೇಲೆ ರಾವಣ ಬಾಣಪ್ರಯೋಗ ಮಾಡಿದ್ದಾನೆ. ಆದರೆ, ಆ ಬಾಣಗಳನ್ನು ಲೆಕ್ಕಿಸಲೇ ಇಲ್ಲ ರಾಮ.

ಹನುಮಂತನಿಗೂ, ಸುಗ್ರೀವನಿಗೂ ಹೇಳಿದ್ನಂತೆ ರಾಮ, ‘ಉಳಿದ ಕಪಿನಾಯಕರನ್ನು ಕೂಡಿಕೊಂಡು ಲಕ್ಷ್ಮಣನನ್ನು ಸುತ್ತುಗಟ್ಟಿ ನಿಲ್ಲಿ, ನನಗಿದು ಪರಾಕ್ರಮದ ಕಾಲ. ಎಷ್ಟೋ ಕಾಲದಿಂದ ಬಯಸಿರ್ತಕ್ಕಂತ ಕಾಲ ಬಂದಿದೆ ಈಗ. ಈ ಪಾಪಿ ನನ್ನ ಕಣ್ಣ ಮುಂದಿದ್ದಾನೆ. ಇಂಥಾ ದುರ್ಮತಿಯನ್ನು ವಧಿಸ್ತೇನೆ. ವಾನರ ನಾಯಕರೇ ಕೇಳಿ, ರಾಮನ ಮಾತು ಸುಳ್ಳಾಗಲಾರದು; ಇಂದಿನ ಈ ಯುದ್ಧದ ಬಳಿಕ ಜಗತ್ತು ಒಂದೋ ಅರಾವಣ ಆಗ್ಬೇಕು ಅಥವಾ ಅರಾಮ ಆಗ್ಬೇಕು! ಮುಂದೆ ರಾವಣ ರಾಮರಲ್ಲಿ ಯಾರಾದ್ರೂ ಒಬ್ಬರಿರ್ತಾರೆ ಪ್ರಪಂಚದಲ್ಲಿ’. ರಾಜ್ಯ ತ್ಯಾಗದಿಂದ ವೈದೇಹಿಯ ಪರಾಮರ್ಶದ, ಯುದ್ಧದವರೆಗಿನ ತನ್ನ ಬದುಕನ್ನು ನೆನಪಿಸ್ತಾನೆ ರಾಮ. ‘ಇನ್ನು ಇವನಿಗೆ ಬದುಕು ಸಲ್ಲ. ನೀವ್ಯಾರೂ ಯುದ್ಧಕ್ಕೆ ಬರ್ಬೇಡಿ, ಪರ್ವತಾಗ್ರಗಳನ್ನೇರಿ, ಕಲ್ಲಾಗಿ ಕುಳಿತು ಯುದ್ಧಕ್ಕೆ ಸಾಕ್ಷಿಗಳಾಗಿ, ನಾನೇ ಮಾಡ್ತೇನೆ ಯುದ್ಧವನ್ನು. ರಾಮನ ರಾಮತ್ವವನ್ನು ಪ್ರಪಂಚವಿಂದು ನೋಡಲಿ. ಅಂಥಾ ಕಾರ್ಯವನ್ನು ಮಾಡ್ತೇನೆ. ಭೂಮಿ, ಗಂಗೆ, ಹಿಮಾಲಯಗಳು ಇರುವವರೆಗೆ ನೆನಪಿನಲ್ಲಿಡ್ತಕ್ಕಂಥಾ ಒಂದು ಪ್ರಸಂಗವನ್ನು ನಿರ್ಮಾಣ’ ಮಾಡ್ತೇನೆ ಎಂಬುದಾಗಿ ಹೇಳಿ ಬಾಣಗಳಿಂದ ಇರಿದನು ರಾವಣನನ್ನು. ರಾವಣನೂ ಒಂದಷ್ಟು ಬಾಣಗಳನ್ನು ಪ್ರಯೋಗ ಮಾಡ್ತಾನೆ. ಇಬ್ರೂ ಪರಸ್ಪರ ಅನೇಕಾನೇಕ ಬಾಣಗಳನ್ನು ಪ್ರಯೋಗ ಮಾಡಿದ್ರು. ಅವರ ಧನುಷ್ಠೇಂಕಾರ ಪ್ರತಿಧ್ವನಿಸಿತು ಸುತ್ತಮುತ್ತ. ಆದ್ರೆ, ರಾಮನ ಶರವೃಷ್ಠಿಯನ್ನು ತಾಳಲಾರದ ರಾವಣನು ತನ್ನ ಯುದ್ಧ ಪರಿಕರಗಳನ್ನೆಲ್ಲಾ ಕಳೆದುಕೊಂಡು ಕ್ಷಣಮಾತ್ರದಲ್ಲಿ ಅವನ ಸರ್ವಸ್ವವೂ ವ್ಯರ್ಥಗೊಂಡು ಯುದ್ಧ ಭೂಮಿಯನ್ನು ಬಿಟ್ಟು ಅಳಿದುಳಿದ ಸೈನಿಕರನ್ನು ಹಿಡಿದು ಓಡಿ ಹೋದ ಲಂಕೆಗೆ. ಯುದ್ಧದಿಂದ ಓಡಿ ಹೋದರೆ ರಾಮ ಅವನನ್ನು ಕೊಲ್ಲಲಾರ, ಅದು ರಾಮನ ರಾಮತ್ವವಲ್ಲ. ಹಾಗಾಗಿ ಅವನ ಮೇಲೆ ಪುನಃ ಬಾಣ ಪ್ರಯೋಗಿಸ್ಲಿಲ್ಲ ರಾಮ.

ರಾವಣನು ಓಡಿ ಹೋದ ಮೇಲೆ ಯುದ್ಧಭೂಮಿಯಲ್ಲಿ ಉಳಿದಿದ್ದ ಕೆಲವೇ ಕೆಲವು ರಾಕ್ಷಸರಿಗೆ ಬಾಣಪ್ರಯೋಗ ಮಾಡುತ್ತಲೇ ರಾಮನು ಕಪಿವೈದ್ಯ ಸುಷೇಣನಿಗೆ ಹೇಳಿದ್ನಂತೆ, ‘ನೋಡು ಸುಷೇಣ, ನನ್ನ ತಮ್ಮ ಲಕ್ಷ್ಮಣ ಧರೆಯಲ್ಲಿ ಉರುಳಿ ಮಿಡುಕಾಡುವುದನ್ನು! ನನ್ನ ಪ್ರಾಣಕ್ಕಿಂತ ಇಷ್ಟವಾದ ಲಕ್ಷ್ಮಣನನ್ನು ಹೀಗೆ ಕಂಡು ಯುದ್ಧ ಮಾಡುವ ಶಕ್ತಿ ನನಗೆಲ್ಲಿಂದ? ನನ್ನಾತ್ಮ ಪರ್ಯಾಕುಲವಾಗಿದೆ. ಸುಷೇಣ, ಈ ಲಕ್ಷ್ಮಣ ಉಳಿಯದೇ ಹೋದ್ರೆ ನನಗೆ ಪ್ರಾಣವೂ ಬೇಡ, ಸುಖವೂ ಬೇಡ. ಇದೋ ನೋಡು, ನನ್ನ ಪರಾಕ್ರಮಕ್ಕೆ ಲಜ್ಜೆ ಆಗ್ತಾ ಇದೆ. ಕೈಯಿಂದ ಧನುಸ್ಸು ಜಾರಿ ಹೋಗ್ತಾ ಇದೆ‌. ಕಣ್ತುಂಬ ನೀರ್ತುಂಬಿ ಮುಂದೇನೂ ಜಾಣ್ತಾ ಇಲ್ಲ ನನಗೆ. ವಿಪರೀತ ಚಿಂತೆ ನನ್ನನ್ನು ಭಾದಿಸ್ತಾ ಇದೆ, ಬದುಕು ಬೇಡವಾಗ್ತಾ ಇದೆ. ಲಕ್ಷ್ಮಣನಿಲ್ಲದಿದ್ದರೆ ರಾಮನಿಲ್ಲ ಸುಷೇಣ..’ ಅವನನ್ನು ಕಂಡು ಪರಿಪರಿಯಾಗಿ ವಿಲಪಿಸಿದನು ರಾಮ. ಸೋದರ ಹೋದರೆ ಹೋದ.. ಮತ್ತೆಲ್ಲಿ? ಲಕ್ಷ್ಮಣನಂಥಾ ತಮ್ಮ ಇನ್ನೆಲ್ಲಿ? ಹೀಗೆಲ್ಲಾ ನಾನಾ ಪ್ರಕಾರವಾಗಿ ವಿಲಪಿಸ್ತಾನೆ. ಆ ಸಮಯದಲ್ಲಿ ಕಪಿವೈದ್ಯ ಸುಷೇಣ ರಾಮನಿಗೆ ಹೇಳಿದ್ನಂತೆ, ‘ಪ್ರಭೂ, ಲಕ್ಷ್ಮಣನ ದೇಹಾಂತವಾಗಿಲ್ಲ. ಮುಖವು ವಿಕೃತವಾಗಿಲ್ಲ‌, ಕಾಂತಿಹೀನವಾಗಿಲ್ಲ. ಕೈಗಳನ್ನು ನೋಡು, ಕರತಲಗಳು ತಾವರೆಯಂತೆ ಕೆಂಪಾಗಿದ್ದಾವೆ. ಕಣ್ಣುಗಳು ಪ್ರಸನ್ನವಾಗಿದ್ದಾವೆ. ಪ್ರಭೂ ಈ ರೂಪ, ಕಳೆ ಸತ್ತವರಿಗಿರೋದಿಲ್ಲ, ಅಲ್ಪಾಯುಷಿಗಳಿಗೂ ಇರೋದಿಲ್ಲ. ದೀರ್ಘಾಯುಷ್ಯದ ಲಕ್ಷಣಗಳೆಲ್ಲವೂ ಲಕ್ಷ್ಮಣನ ಮುಖದಲ್ಲಿ, ಶರೀರದಲ್ಲಿವೆ. ವ್ಯಥಿಸಬೇಡ. ಹೃದಯವು ಬಡಿದುಕೊಳ್ತಾ ಇದೆ ನೋಡು..’ ಎಂಬುದಾಗಿ ರಾಮನನ್ನು ಸಂತೈಸಿ ಹನುಮಂತನ ಕಡೆ ನೋಡಿದ. ತುಂಬ ತ್ವರೆಯಿಂದ ಕೂಡಿದವನಾಗಿ ಹನುಮಂತನ ಕುರಿತು ಹೇಳಿದ್ನಂತೆ, ‘ಹನುಮಂತಾ, ಪುನಃ ಓಷಧ ಪರ್ವತಕ್ಕೆ ಹೋಗು. ಆ ಪರ್ವತದ ದಕ್ಷಿಣ ಶಿಖರದಲ್ಲಿ ಬೇಕಾದ ಔಷಧಗಳಿದ್ದಾವೆ. ಒಳಗಿರುವ ಬಾಣ/ಆಯುಧ/ಆಯುಧದ ತುಂಡನ್ನು ಹೊರಹಾಕುವ ವಿಶಲ್ಯಕರಣಿ, ಸಾವರ್ಣಿಕರಣಿ, ಮೃತಸಂಜೀವಿನಿ, ಸಂಧಾನಕರಣಿ ಎಂಬ ನಾಲ್ಕು ದಿವ್ಯೌಷಧಗಳನ್ನು ತಾ’ ಎಂಬುದಾಗಿ ಹೇಳಿದಾಗ ಓಷಧ ಪರ್ವತಕ್ಕೆ ಹೋದ‌ ಹನುಮಂತ.

ಕುಶಲನಾದ ವೈದ್ಯನು ಬರದಿದ್ದರೆ ಓಷಧಗಳು ಅಡಗ್ತವೆ! ಅವು ತಮ್ಮನ್ನು ತಾವು ತೋರ್ಪಡಿಸುವದಿಲ್ಲ. ಹಾಗೇ ಆಯಿತು ಈಗ. ಹನುಮಂತ, ಔಷಧಿ ಯಾವುದು ಅಂತ ಗೊತ್ತಾಗದೇ, ಚಿಂತೆ ಮಾಡಿದ. ಪುನಃ ಮೊದಲು ಮಾಡಿದ್ದನ್ನೇ ಈಗ ಮಾಡುವುದು ಎಂದು ನಿಶ್ಚಯಿಸಿದ. ಏನದು? ಇಡೀ ಪರ್ವತವನ್ನೇ ಹೊತ್ತುಕೊಂಡು ಹೋದರಾಯಿತು. ಸುಶೇಣ ಹೇಗೂ ಇದ್ದಾನೆ ಸುಲಭವಾಗಿ ಹುಡುಕಬಹುದು. ಪರ್ವತದ ದಕ್ಷಿಣಶಿಖರ. ತಡವಾದರೆ ಲಕ್ಷ್ಮಣನಿಗೆ ತೊಂದರೆಯೇ ಆಗಬಹುದು. ಆ ಪರ್ವತವನ್ನು ಮೂರು ಬಾರಿ ಅಲ್ಲಾಡಿಸಿ, ಕಿತ್ತು ಎತ್ತಿ ಹೊತ್ತು ನಡೆದ. ಓಷಧಿ ಅಂದ್ರೆ ಔಷಧಕ್ಕೆ ಬೇಕಾಗುವ ಸಲಕರಣೆಗಳು, ಮೂಲಿಕೆಗಳೂ. ಓಷಧದಿಂದ ಔಷಧಿ ತಯಾರಾಗುವಂತಹದ್ದು. ಓಷಧ ಪರ್ವತವನ್ನು ತಂದು ಇಟ್ಟು “ಕ್ಷಣ” ವಿಶ್ರಮಿಸಿದನಂತೆ. ತತ್ ಕ್ಷಣ ಸುಶೇಣನಿಗೆ ಹೇಳಿದ, “ಯಾವುದು ಓಷಧ ಎಂದು ಗೊತ್ತಾಗಲಿಲ್ಲ ಹಾಗಾಗಿ ಪರ್ವತವನ್ನೇ ತಂದುಬಿಟ್ಟೆ. ಹುಡುಕಬಹುದು.” ಸುಶೇಣನಿಗೆ ಒಂದೊಂದು ಕ್ಷಣವೂ ಅತ್ಯಮೂಲ್ಯ ಆದರೂ ಹನುಮಂತನನ್ನು ಪ್ರಶಂಸಿಸಲು ಮರೆಯದೇ, ಬೇಕಾದ ಓಷಧವನ್ನು ಹುಡುಕಿದ. ಹನುಮಂತನ ಕಾರ್ಯಕ್ಕೆ, ರಾಕ್ಷಸ ಮತ್ತು ವಾನರ ಸೈನ್ಯ ಇಬ್ಬರೂ ಆಶ್ಚರ್ಯಚಕಿತರಾಗಿದ್ದರು. ಲಂಕೆಯಿಂದ ಹಿಮಾಲಯಕ್ಕೆ ಲೀಲಾಜಾಲವಾಗಿ ತಂದುಬಿಟ್ಟ ಎಂದು ಆಶ್ಚರ್ಯಚಕಿತರಾಗಿದ್ದರು. ಅಷ್ಟರಲ್ಲಿ ಸುಶೇಣ ಗಿಡಮೂಲಿಕೆಯನ್ನು ತಂದು ಅದನ್ನು ಜಜ್ಜಿ ರಸ ತೆಗೆದು ಆ ಔಷಧಿಯನ್ನು, ಲಕ್ಷ್ಮಣನಿಗೆ, ಮೂಗಿನ ಮೂಲಕವಾಗಿ ಕೊಟ್ಟ. ಆ ಔಷಧಿಯನ್ನು ಕೊಡುವ ಕ್ರಮ ಇದು. ಲಕ್ಷ್ಮಣನ ದೇಹದಿಂದ ಆಯುಧ ತುಣುಕುಗಳು ಹೊರಗೆ ಬಂದು ಲಕ್ಷ್ಮಣನ ಎದ್ದು ನಿಂತ. ಇದರಿಂದ ಹನುಮಂತನಿಗೆ ಸಂಜೀವನ ಅಂತ ಅವನನ್ನೇ ಕರೆದುಬಿಟ್ಟಿದ್ದಾರೆ. ಎಲ್ಲರೂ ಸುಶೇಣನನ್ನು ಸಾಧು ಸಾಧು ಎಂದು ಪ್ರಶಂಸಿದರು. ಮೃತ್ಯುಮುಖದಲ್ಲಿ ಇದ್ದವನನ್ನು ಹೀಗೆ ಎಬ್ಬಿಸಿಬಿಟ್ಟನಲ್ಲ ಎಂದು ಎಲ್ಲರೂ ಪ್ರಶಂಸಿದರು. ರಾಮನೂ ಲಕ್ಷ್ಮಣನನ್ನು ಬಾ ಎಂದು ಗಾಢವಾಗಿ ತಬ್ಬಿಕೊಂಡಿದ್ದಾನೆ. ಈಗಿನ ಪರಿಸ್ಥಿತಿ ಏನು ಅಂದ್ರೆ, ರಾಮನ ಮೈಯಲ್ಲಿ ಗಾಯಗಳು ರಕ್ತಗಳೂ ಇದ್ದಾವೆ, ಆದರೆ ಲಕ್ಷ್ಮಣ ಸರಿಯಾಗಿ ಇದ್ದಾನೆ.

ರಾಮ ಹೇಳಿದ,”ಅದೃಷ್ಟಾವಶಾತ್ ನೀನು ಮೃತ್ಯು ಮುಖದಿಂದ ಮರಳಿ ಬಂದೆ. ನೀನು ಇಲ್ಲದಿದ್ದರೆ, ನಾನು ಬದುಕಿ ಏನು? ಸೀತೆಯನ್ನು ಪಡೆದು ಏನು? ಮತ್ತು ಗೆಲುವಿಗೆ ಯಾವ ಅರ್ಥವೂ ಇಲ್ಲ. ಲಕ್ಷ್ಮಣನಿಗೆ ಬೇಜಾರಾಯಿತಂತೆ. ಮಾತು ಕಟ್ಟಿತು ಲಕ್ಷ್ಮಣನಿಗೆ, “ನೀನು ಹೀಗೆಲ್ಲ ಹೇಳಬಾರದು. ಪ್ರತಿಜ್ಞೆ ಮಾಡಿದ್ದೆಯಲ್ಲ ರಾವಣನನ್ನು ಸಂಹಾರ ಮಾಡುತ್ತೇನೆ ಎಂದು. ಅತ್ತ ಕಡೆ ಮಾತ್ರ ನೀನು ಗಮನ ಇಡಬೇಕು. ನನ್ನ ಜೀವ ಬರುವುದಕ್ಕಿಂತ ರಾವಣ ಜೀವ ಹೋಗುವುದು ಮುಖ್ಯ. ಈಗ ಏನು? ಯುದ್ಧದಲ್ಲಿ ಸೇನಾಪತಿಗಳು, ಸೈನಿಕರು ಸಾಯ್ತಾರೆ. ಅದರಲ್ಲಿ ಹೊಸತೇನು ವಿಶೇಷ ಏನು? ನೀನು ರಾವಣನನ್ನು ಸಂಹಾರ ಮಾಡುವುದಿಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಪ್ರತಿಜ್ಞೆ ಮಾಡಿ ಆಗಿದೆ ನೀನು. ಹಾಗಾಗಿ ರಾವಣನನ್ನು ಕೊಂದು ಏನು? ಗೆದ್ದು ಏನು? ಎಂಬ ಪ್ರಶ್ನೆಯೇ ಇಲ್ಲ. ಯಾವುದೇ ಪರಿಸ್ಥಿತಿಯಲ್ಲಿ ರಾವಣನ ವಧೆ ಆಗ ಬೇಕು. ನನ್ನ ಆಸೆ ಇಷ್ಟೇ. ಸೂರ್ಯಾಸ್ತದೊಳಗೆ ರಾವಣನ ವಧೆ ಆಗಲಿ” ಎಂದ ಲಕ್ಷ್ಮಣ. ರಾಮ ಮತ್ತು ರಾಮ ಕಾರ್ಯ ಆಗಲಿ ಮೊದಲು ಎಂಬ ಭಾವ ಲಕ್ಷ್ಮಣನದ್ದು. ಅಷ್ಟರಲ್ಲಿ ರಾವಣ ಮತ್ತೆ ಹೊಸ ರಥದೊಂದಿಗೆ ಯುದ್ಧಕ್ಕೆ ಸನ್ನದ್ಧನಾಗಿದ್ದಾನೆ. ಸೂರ್ಯನ ಕಡೆಗೆ ಧಾವಿಸುವ ರಾಹುವಂತೆ ರಾಮನ ಕಡೆಗೆ ಧಾವಿಸಿದನು, ರಾವಣ. ಯುದ್ಧನಡೀತಾ ಇದೆ. ಆಗ ಗಗನದಲ್ಲಿರುವ ದೇವತೆಯರು, ಗಂಧರ್ವರೂ, ಈ ಯುದ್ಧವು ಸಮವಲ್ಲ ಅಂತ ಹೇಳಿದರು. ರಾಮನು ಭೂಮಿಯಲ್ಲಿ ನಿಂತು ಯುದ್ಧ ಮಾಡುತ್ತಿದ್ದರೇ, ರಾಕ್ಷಸ ರಥದಲ್ಲಿ ಇದ್ದು. ಹಾಗಾಗಿ ಈ ಯುದ್ಧ ಸಮವಲ್ಲ. ರಾಮ ನಿರಂತರವಾಗಿ ಹದಿನೈದು ದಿನದಿಂದ ಯುದ್ಧ ಮಾಡ್ತಾ ಇದ್ದಾನೆ. ಆದರೆ ರಾವಣ ಈಗಷ್ಟೇ ಬಂದಿದ್ದಾನೆ ಯುದ್ಧ ಭೂಮಿಗೆ. ಅದಿರಲಿ, ಯುದ್ಧದ ವಿಧಾನದಲ್ಲಿ ಒಬ್ಬ ರಥದ ಮೇಲೆ ಮತ್ತು ಇನ್ನೊಬ್ಬ ಭೂಮಿಯಲ್ಲಿ ಯುದ್ಧ ಮಾಡ್ತಾ ಇದ್ದಾರೆ. ಇದು ಸರಿ ಅಲ್ಲ. ಎಂದು ಮಾತನಾಡಿಕೊಳ್ಳುತ್ತಿದ್ದರು.

ಇದನ್ನು ಕೇಳಿದ, ದೇವೆಂದ್ರನು ತನ್ನ ಸಾರಥಿ ಮಾತಲಿಯನ್ನು ಕರೆದು, “ನನ್ನ ರಥ, ಐಂದ್ರ ರಥವನ್ನು ಕೊಂಡು ಹೋಗಿ ರಾಮನಿಗೆ ಸಮರ್ಪಣೆ ಮಾಡು. ರಾಮನು ಯಾವ ಕಾರ್ಯವನ್ನು ಮಾಡ್ತಾ ಇದ್ದಾನೋ ಅದು ದೇವಹಿತ.” ದೇವ ಸಾರಥಿಯಾದ ಮಾತಲಿಯು ದೇವೆಂದ್ರನಿಗೆ ಕೈ ಮುಗಿದು “ಅವಶ್ಯವಾಗಿ” ಎಂದು ಹೇಳಿ, “ತೆಗೆದುಕೊಂಡು ಹೋಗ್ತೆನೆ ಮಾತ್ರವಲ್ಲ ನಾನೇ ಸಾರಥ್ಯವನ್ನು ಮಾಡ್ತೇನೆ.” ಅವನು ರಥವನ್ನು ಸಂಯೋಜಿಸಿ, ದೇವೆಂದ್ರನ ಕುದುರೆಗಳಾದ ಹಸಿರು ಬಣ್ಣದ ಕುದುರೆಗಳನ್ನು ಸುವರ್ಣ ರಥಕ್ಕೆ ಕಟ್ಟಿದ. ರಥದ ಕಟ್ಟಿದ ಕಿಂಕಿಣಿ ಘಂಟೆಗಳ ನಿನಾದ ಸುಮಧುರ. ಅದರ ಕೂಬರು, ರಥದ ಮೂಕಿ, ಅದು ವೈಢೂರ್ಯದಿಂದ ಕೂಡಿದ. ಆ ರಥಕ್ಕೆ ಕೊಳಲು ಧ್ವಜ. ಅಂತಹ ರಥವನ್ನು ಏರಿ, ರಾಮನೆಡೆಗೆ ಇಳಿದು ಬಂದನು, ಮಾತಲಿ. ಕೈಯಲ್ಲಿ ಚಾವಟಿ ಇದೆ, ಹಾಗೆಯೇ ರಾಮನಿಗೆ ಕೈ ಮುಗಿದು, ನಿವೇದನೆ ಮಾಡಿಕೊಳ್ತಾನೆ, “ಪ್ರಭು ನಿನಗಾಗಿ ದೇವತೆಗಳು ಕಳುಹಿಸಿಕೊಟ್ಟಂತಹ ರಥ ಇದು ಸ್ವೀಕರಿಸು. ಇದು ಇಂದ್ರನ ಮಹಾಧನಸ್ಸು. ಅಗ್ನಿಯನ್ನು ಹೋಲತಕ್ಕಂತಹ ಇಂದ್ರ ಕವಚ ಇದು. ಈ ಬಾಣಗಳು ಇಂದ್ರನ ಬಾಣಗಳು. ಈ ರಥವನ್ನು ಏರಿ ರಾವಣನನ್ನು ಸಂಹಾರ ಮಾಡು, ನಾನು ನಿನ್ನ ರಥದ ಸಾರಥ್ಯವನ್ನು ಮಾಡ್ತೇನೆ.” ಎಂದಾಗ ದೇವತೆಗಳ ಕೋರಿಕೆಯನ್ನು ಮನ್ನಿಸಿ ರಾಮನು ಆ ರಥವನ್ನೇರಿದನು. ರಥವೇರಿದ ರಾಮನ ಶೋಭೆಗೆ, ರಾಮ ಅಲ್ಲ, ರಥ ಅಲ್ಲ, ಇಡೀ ಲೋಕವೇ ಕಂಗೊಳಿಸಿತು. ಯುದ್ಧ ನಡೀತಾ ಇದೆ. ರಾವಣನ ಗಾಂಧರ್ವ ಅಸ್ತ್ರಕ್ಕೆ ಗಾಂಧರ್ವ ಅಸ್ತ್ರದೊಂದಿಗೆ ಉತ್ತರ ಕೊಟ್ಟಿದ್ದಾನೆ ರಾಮ. ಆ ಬಳಿಕ ರಾವಣ ಒಂದು ವಿಚಿತ್ರವಾದ ಅಸ್ತ್ರವನ್ನು ಬಿಡ್ತಾನೆ, ಆ ಅಸ್ತ್ರಗಳು, ವಾಸುಕಿಯನ್ನು ಹೋಲುವಂತಹ, ಸರ್ಪಗಳನ್ನು ಕಾರಿದೆ ಅಂದ್ರೆ ಹೊರಹಾಕಿದೆ. ರಾಮನೆಡೆಗೆ ಧಾವಿಸ್ತಾ ಇದ್ದಾವೆ ಆ ಸರ್ಪಗಳು, ರಾಮನು ಗರುಡಾಸ್ತ್ರದಿಂದ ಆ ಸರ್ಪಗಳನ್ನು ಸಂಹಾರ ಮಾಡಿದ. ಆ ಗರುಡಗಳು ಸರ್ಪಗಳನ್ನು ತಿಂದು ತೇಗಿದವು. ಸರ್ಪಗಳ ಉಗಮಸ್ಥಾನವಾದ ಬಾಣಗಳು ಹತವಾಗಿದೆ. ಕ್ರುದ್ಧನಾದ ರಾವಣ, ರಾಮನ ಮೇಲೆ ಮತ್ತು ಮಾತಲಿಯ ಮೇಲೆ ಮಳೆಗರೆದ. ಇನ್ನೊಂದು ಬಾಣದಿಂದ ಐಂದ್ರ ರಥದ ಕೇತುವನ್ನು ಅಂದ್ರೆ ಪತಾಕೆಯನ್ನು ಕತ್ತರಿಸಿದ ರಾವಣ. ದೇವೆತೆಗಳು, ಗಂಧರ್ವರೂ, ದಾನವರು, ಚಾರನರು ಗಾಬರಿಯಾದರು. ಈ ದುರಾತ್ಮನ ಕೈಮೇಲಾಯಿತು ಎಂಬ ಪ್ರಶ್ನೆ ಏಲ್ಲರ ಮನಸ್ಸಿನಲ್ಲೂ. ರಾಮ ಸ್ವಲ್ಪ ಹಿನ್ನಡೆಯಾಗಿ ಕಂಡ. ವಾನರ ನಾಯಕರು ಮತ್ತು ವಿಭೀಷಣ ಗಾಬರಿಯಾಗಿದ್ದಾರೆ. ಮಾತ್ರವಲ್ಲ ರೋಹಿಣೀ ನಕ್ಷತ್ರ! ಪ್ರಜಾಪತಿ ದೇವತೆ ಆ ನಕ್ಷತ್ರಕ್ಕೆ. ತುಂಬಾ ಶುಭವಾದ ನಕ್ಷತ್ರ, ಆ ನಕ್ಷತ್ರವನ್ನು ಕ್ರೂರ ಬುಧನು ಆಕ್ರಮಿಸಿದ್ದಾನೆ. ಒಳಿತಿಗೇ ಕೇಡನ್ನು ಉಂಟುಮಾಡತಕ್ಕಂತಹ ಸಮಯ. ಸಮುದ್ರವೂ ವಿಚಲಿತವಾಗಿ, ತಪ್ತವಾಗಿ, ಸಮುದ್ರದಿಂದ ಹೊಗೆ ಬಂತು. ಉಕ್ಕಿ ಆಕಾಶಕ್ಕೆ ನೆಗೆದಿದೆ ಸಮುದ್ರ. ಸೂರ್ಯ ಮತ್ತು ಕಿರಣಗಳು ಮಂಕಾದವು. ಕಪ್ಪು ಬಣ್ಣ ಬಂತು ಸೂರ್ಯನಿಗೆ. ಮಾತ್ರವಲ್ಲ ಕಬಂದದ ಚಿಹ್ನೆ ಕಾಣಿಸಿತು. ತಲೆಯಿಲ್ಲದ ಮುಂಡದ ಶರೀರ ಕಾಣಿಸಿತು ಸೂರ್ಯನಲ್ಲಿ. ದೂಮಕೇತು ಸೂರ್ಯನನ್ನು ಹಿಡಿದಿದೆ ಆ ಸಮಯದಲ್ಲಿ. ಸಾಲದಕ್ಕೆ ಇಕ್ಷ್ವಾಕು ವಂಶದ ನಕ್ಷತ್ರ, ಇಂದ್ರ ಮತ್ತು ಅಗ್ನಿ ದೇವತೆಗಳು ಆ ನಕ್ಷತ್ರಕ್ಕೆ ವಿಶಾಖಾ ನಕ್ಷತ್ರ – ಜೋಡಿ ನಕ್ಷತ್ರ. ಆ ನಕ್ಷತ್ರವನ್ನು ಅಂಗಾರಕನು ಆಕ್ರಮಿಸಿದ. ಸೃಷ್ಟಿ ವಿಚಲಿತಗೊಂಡಿದೆ. ರಾಮಗೆದ್ದರೇ ಸೃಷ್ಟಿಗೆ ಒಂದು ಭವಿಷ್ಯ ಉಂಟು ಇಲ್ಲದಿದ್ದರೇ ಸೃಷ್ಟಿಗೆ ಅಸ್ತಿತ್ವವೇ ಇಲ್ಲ. ಮುಂದೆ ಹೆಬ್ಬುಲಿ ಕುರಿಗಳನ್ನು ಸಾಕಿದಂತೆ ಆಗಬಹುದು. ರಾವಣ ವಿಜೃಂಭಿಸುತ್ತಿದ್ದಾನೆ ತನ್ನ ಹತ್ತು ತಲೆಗಳು ಮತ್ತು ಇಪ್ಪತ್ತು ಭುಜಗಳಿಂದ. ಎಷ್ಟು ಧಾರಾಕಾರವಾಗಿ ಬಾಣಗಳು ಬೀಳ್ತಾ ಇದ್ದಾವೆ ರಾಮನ ಮೇಲೆ ಅಂದ್ರೆ ರಾಮನಿಗೆ ಬಾಣಗಳನ್ನು ಹೂಡಲೂ ಸಾಧ್ಯವಾಗಲಿಲ್ಲ.

ಆ ಸ್ಥಿತಿ ರಾಮನಿಗೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ರಾಮನು ಕಂಗೆಡದೇ ಬದಲಿಗೆ ಕ್ರುದ್ಧನಾದ. ಹುಬ್ಬು ಗಂಟಿಕ್ಕಿದ, ಕಣ್ಣು ಕೆಂಪಾಯಿತು. ಸುಡುವನಂತೆ ನೋಡಿದ ರಾವಣನನ್ನು. ರಾಮನ ಕುಪಿತ ಮುಖವು ನೋಡಲಿಕ್ಕೇ ಸಾಧ್ಯ ಆಗಲಿಲ್ಲವಂತೆ. ಕ್ರುದ್ಧನಾದ ರಾಮನ ಮುಖವನ್ನು ಕಂಡು ದೇವತೆಗಳೂ ಹೆದರಿದವು. ಭೂಮಿಯೇ ನಡುಗಿತು, ಪರ್ವತ ಕಂಪಿಸಿದವು, ಮರಗಳು ಹಂದಾಡಿದವು, ಕ್ರೂರ ಪಕ್ಷಿಗಳು ಅಶುಭವಾದ ಧ್ವನಿಯನ್ನು ಮಾಡಿದವು. ಒಂದು ಸಲ ರಾವಣನಿಗೂ ಹೆದರಿಕೆ ಆಯಿತಂತೆ. ವಾಲ್ಮೀಕಿ ರಾಮಾಯಣದ ಪ್ರಕಾರ, ರಾವಣನು ಭಯವನ್ನು ಬಹಳ ಸಾರಿ ಅನುಭವಿಸ್ತಾನೆ. ಪ್ರಳಯದ ಹಾಗೇ ಇದೆ ಯುದ್ಧದ ಪರಿಸ್ಥಿತಿ. ಆ ವೇಳೆ ಒಂದು ಘಟನೆ ನಡೆಯಿತು. ದೇವತೆಗಳೆಲ್ಲ ರಾಮನ ಹಿಂದೆ ಬಂದು ನಿಂತರು, ಮತ್ತೊಂದು ಪಾರ್ಶ್ವದಲ್ಲಿ ಅಸುರರು ರಾವಣನ ಹಿಂದೆ ಬಂದು ನಿಂತರು. ದೇವತೆಗಳು ರಾಮ ಜಯಿಸಲಿ ರಾಮ ಜಯಿಸಲಿ ಎಂದು ಉದ್ಘೋಷಿಸಿದರು, ಅಸುರರು ರಾವಣ ಜಯಿಸಲಿ ಎಂದು ಉದ್ಘೋಷಿಸ್ತಾ ಇದ್ದಾರೆ. ಆಕಾಶದಲ್ಲೂ ಎರಡು ತಂಡ. ರಾವಣ ಈ ಕ್ರುದ್ಧ ರಾಮನನ್ನು ಜಯಿಸಲು ವಿಶೇಷವಾದ ಆಯುಧವನ್ನು ಹುಡುಕುತ್ತಾ ಇದ್ದಾನೆ. ಅವನ ಕೈಗೆ ಮಹಾಶೂಲ ಸಿಕ್ಕಿತು. ಆ ಶೂಲ, ವಜ್ರಸಾರ. ಸರ್ವ ಶತ್ರುಗಳನ್ನು ಕೊಲ್ಲುವಂತಹದ್ದು. ಬಹಳ ದೊಡ್ಡ ಶೂಲ. ಆ ಶೂಲದ ಕೂಟಗಳು ಅದೇ ಒಂದು ಪರ್ವತ ಶೃಂಗದಂತೆ ದೊಡ್ಡದಾಗಿ ಇವೆ. ನೋಡಿದರೆ ಹೆದರಿಕೆ ಆಗುವಂತೆ ಇದೆ. ಅದರ ತುದಿ ಹೊಗೆ ಉಗುಳುತ್ತಾ ಇದೆ. ಆ ಶೂಲವನ್ನು ಮಧ್ಯದಲ್ಲಿ ಇರಿಸಿಕೊಂಡ ರಾವಣ. ಆ ಶೂಲವನ್ನು ರಾವಣ ಎತ್ತುತ್ತಿದ್ದಂತೆ ಅಸುರರೆಲ್ಲರೂ ಅವನ ಬಳಿ ಬಂದು ನಿಂತರು. ಆ ಶೂಲವನ್ನು ಎತ್ತಿ, ದೊಡ್ಡ ಅಬ್ಬರವನ್ನು, ಘರ್ಜನೆಯನ್ನು ಮಾಡಿದ ರಾವಣ. ರಾವಣನ ಕೂಗು ಭೂಮಿ ಆಕಾಶದಲ್ಲಿ, ದಿಕ್ಕು ದಿಕ್ಕುಗಳಲ್ಲಿ ಪ್ರತಿಧ್ವನಿಸಿದೆ. ಎಲ್ಲರಿಗೂ ಭಯವಾಯಿತು. ಶೂಲ ಪ್ರಯೋಗದ ಮೊದಲು, ವಾಕ್ಯ ಪ್ರಯೋಗ ಮಾಡಿದ ರಾವಣ. ಮೊದಲು ಘರ್ಜಿಸಿದ ಮತ್ತೆ ನಕ್ಕ ಆಮೇಲೆ ಹೇಳಿದನಂತೆ, “ವಜ್ರಸಾರವಾದ ಈ ಶೂಲವನ್ನು ರೋಷದಿಂದ ಎತ್ತಿದ್ದೇನೆ ನಾನು, ನಿನ್ನ ಮತ್ತು ನಿನ್ನ ತಮ್ಮ ಇಬ್ಬರಿಗೂ ಸಾಕು. ಈ ಶೂಲದಿಂದ ರಾಕ್ಷಸರ ಸಂಹಾರದ ಪ್ರತಿಕಾರವನ್ನು ತೆಗೆದುಕೊಳ್ತೆನೆ ನಾನು.” ಎಂದು ಹೇಳಿ ಆ ಶೂಲವನ್ನು ರಾಮನ ಕಡೆಗೆ ಎಸೆದ.

ಶೂಲ ರಾಮನ ಕಡೆಗೆ ಬರ್ತಾ ಇದೆ, ಆಕಾಶದಲ್ಲಿ ಬೆಳೆಗುತ್ತಾ ಇದೆ. ರಾಮನು ಬಹಳ ಬಾಣಗಳನ್ನು ಬಿಡ್ತಾನೆ ಆ ಶೂಲದ ಮೇಲೆ. ಬಾಣಗಳನ್ನು ಆ ಶೂಲವು ನುಂಗಿತು, ಸುಟ್ಟಿತು. ಪ್ರಳಯ ಕಾಲದಲ್ಲಿ ಎದ್ದು ಬಂದ ಪ್ರಳಯಾಗ್ನಿಯನ್ನು ಆರಿಸಲು ಇಂದ್ರನು ಮಳೆ ಗರಿತಾನೆ. ಆದರೆ ಆ ಮಳೆಯನ್ನೂ ಆ ಶೂಲ ನುಂಗಿತು. ಬಾಣಗಳ ಪ್ರಯೋಗ ಆದಾಗ ರಾಮ ಮತ್ತೂ ಕ್ರುದ್ಧನಾದ ಅಥವಾ ಕ್ರೋಧವನ್ನು ತಂದುಕೊಂಡ. ರಾಮನಿಗೆ ಯಾವಾಗಲೂ ಕ್ರೋಧ ಬರುವುದಿಲ್ಲ. ಬಾ ಅಂತ ಕರೆಯಬೇಕಾಗುತ್ತದೆ. ಕ್ರೊಧವನ್ನು ತಂದುಕೊಂಡ ರಾಮನು ಇಂದ್ರನ ರಥದಲ್ಲಿ ಇರುವ ಶಕ್ತಾಯುಧವನ್ನು ಕೈಗೆತ್ತಿಕೊಂಡ. ಬಲಶಾಲಿ ರಾಮನು ಆ ಶಕ್ತಿಯನ್ನು ಹಿಂದಕ್ಕೆ ಮುಂದಕ್ಕೆ ಮಾಡಿದಾಗ ಧ್ವನಿ ಬಂತಂತೆ. ಅದಕ್ಕೂ ಘಂಟೆ ಇತ್ತು. ಅದನ್ನು ಪ್ರಯೋಗ ಮಾಡುವಾಗ ಉಲ್ಕೆಯಂತೆ ಪ್ರಜ್ವಲಿಸಿತು. ಶಕ್ತಿಯು ಶೂಲವನ್ನು ನುಂಗಿತು. ಆ ಶೂಲವನ್ನು ಧ್ವಂಸಮಾಡಿತು. ಶೂಲ ಚೂರು ಚೂರಾಗಿ ಬಿತ್ತು. ರಾವಣನ ಕುದುರೆಗಳನ್ನು ತನ್ನ ಬಾಣಗಳಿಂದ ಘಾಸಿಗೊಳಿಸಿದನು. ಒಂದು ಬಾಣದಿಂದ ರಾವಣನ ಹೃದಯವನ್ನು ಭೇದಿಸುತ್ತಾನೆ. ಮೂರು ಬಾಣಗಳನ್ನು ರಾವಣನ ಹಣೆಯಲ್ಲಿ ನೆಡತಾನೆ. ಅನೇಕಾನೇಕ ಬಾಣಗಳಿಂದ ಇಡೀ ಶರೀರವನ್ನು ಭೇದಿಸ್ತಾನೆ. ಖಿನ್ನನಾದ ರಾವಣ. ರಾವಣನಿಗೆ ಯುದ್ಧ ಕಷ್ಟ ಆಗ್ತಾ ಇದೆ. ಬಳಿಕ ಮತ್ತೆ ಕ್ರುದ್ಧನಾಗಿ ಪುನಃ ರಾಮನ ಮೇಲೆ ಬಾಣಗಳ ಪ್ರಯೋಗವನ್ನು ಮಾಡಿದ. ರಾಮ ವಿಚಲಿತನಾಗದೇ ಅದನ್ನೆಲ್ಲ ಸ್ವೀಕಾರ ಮಾಡಿದ. ರಾಮ ನಾಲ್ಕು ಮಾತುಗಳನ್ನು ಆಡಿದ. ಅವನ ಭಾವ ಈ ಮಾತುಗಳಿಂದ ಗೊತ್ತಾಗುತ್ತೆ.

ರಾಮ ದುಃಖದ ನಗುವನ್ನು ಬೀರಿ, “ನನ್ನ ಪತ್ನಿಯನ್ನು ಜನಸ್ಥಾನದಿಂದ ನನಗೆ ಗೊತ್ತಾಗದಂತೆ ತಂದೆ. ಏ ಅಧಮ ರಾಕ್ಷಸ! ಅವಶಳಾದ, ಅಸಾಯಕಳಾದ ಸೀತೆಯನ್ನು ಕದ್ದು ತಂದೆ ಹಾಗಾಗಿ ನೀನು ವೀರನಲ್ಲ! ಆ ಸಮಯದಲ್ಲಿ ನಾನಿರಲಿಲ್ಲ, ಅವಳ ಒಪ್ಪಿಗೆ ಇರಲಿಲ್ಲ. ನೀನು ಬಲಾತ್ಕಾರವಾಗಿ ಅವಳನ್ನು ತಂದೆ. ಮರ್ಯಾದೆಗೆಟ್ಟವನೇ… ನಮ್ಮ ಜೀವನದಲ್ಲಿರಬೇಕಾದ ಚೌಕಟ್ಟಿಗೆ ಮರ್ಯಾದೆ ಅಂತ ಹೆಸರು. ಹಾಗಾಗಿ ನಿರ್ಲಜ್ಜನೇ, ಚಾರಿತ್ರ್ಯ ಹೀನನೇ! ನೀನು ಸೊಕ್ಕಿನಿಂದ ಸೀತೆಯೆಂಬ ಮೃತ್ಯುವನ್ನಿಟ್ಟುಕೊಂಡು ಶೂರ ಅಂತ ಅಂದುಕೊಂಡಿದ್ದೀಯ. ಕುಬೇರನ ತಮ್ಮನಾ ನೀನು..!? ನಾರಿಚೌರ್ಯವನ್ನು ಮಾಡಿದ್ದೀಯ. ಅದರ ಫಲವನ್ನುಣ್ಣು ಈಗ. ನನ್ನ ಎದುರು ನೀನು ಅಂದು ಮಾಡಿದ್ದರೆ, ಯಮಲೋಕಕ್ಕೆ ಅಟ್ಟುತ್ತಿದ್ದೆ. ಈಗ ನನ್ನ ಕಣ್ಣಿಗೆ ಬಿದ್ದೆಯಲ್ಲಾ.. ನಾಯಿಗಳು ನಿನ್ನ ತಲೆಯನ್ನು ತಿನ್ನುತ್ತವೆ. ಹದ್ದುಗಳು ಕೊಕ್ಕಿನಿಂದ ಸೆಳೆದಾಡುತ್ತವೆ. ನೋಡು ನಿನ್ನ ಕರುಳನ್ನು ಕ್ರೂರವಾದ ಪಕ್ಷಿಗಳು ಸೆಳೆದಾಡುತ್ತವೆ ಎಂದು ಹೇಳಿ ರಾಮ, ರಾವಣನ ಮೇಲೆ ಬಾಣಗಳ ಮಳೆಗರೆದನು. ಮತ್ತಷ್ಟು ವೇಗದಿಂದ ಬಾಣಪ್ರಯೋಗ ಮಾಡಿದಾಗ ರಾವಣ ದೊಪ್ಪನೆ ಬಿದ್ದನು.

ನಾನೆಲ್ಲಿದ್ದೇನೆ ಎಂದು ಗೊತ್ತಾಗದ ಸ್ಥಿತಿ ರಾವಣನಿಗೆ ಬಂತು. ಶಸ್ತ್ರವನ್ನ ಪ್ರಯೋಗಿಸಲಾಗಲಿಲ್ಲ. ಬಾಣಗಳನ್ನ ಪ್ರಯೋಗಿಸಲು ಸಾಧ್ಯವಾಗಲಿಲ್ಲ. ಪ್ರತೀಕಾರವನ್ನು ಮಾಡಲು ಆಗಲೇ ಇಲ್ಲ. ಮೃತ್ಯುಕಾಲ ಸಮೀಪಿಸಿದ್ದರಿಂದ ನೆನಪಿರುವ ಅಸ್ತ್ರಗಳು ಮರೆತವು. ರಥದಲ್ಲಿ ಬಿದ್ದನು. ಸೂತ ಅದನ್ನು ನೋಡಿ ಪಲಾಯನ ಮಾಡಲು ರಥವನ್ನು ತಿರುಗಿಸಿದ. ಅವರಿಗೆ ಗೊತ್ತಾಗಿದೆ, ಪಲಾಯನ ಮಾಡುವಾಗ ರಾಮ ಬಾಣಪ್ರಯೋಗ ಮಾಡುವುದಿಲ್ಲ ಎಂದು. ಹಾಗಾಗಿ, ತನ್ನ ರಥವನ್ನು ತಿರುಗಿಸಿದ ಸಾರಥಿ. ತನ್ನ ಬಲವನ್ನು ಕಳೆದುಕೊಂಡು ರಥದಲ್ಲಿ ಬಿದ್ದ ರಾವಣ ಸ್ವಲ್ಪ ಹೊತ್ತಿಗೆ ಎಚ್ಚರವಾದ ಬಳಿಕ ಸಾರಥಿಗೆ ಬೈಯಲಾರಂಭಿಸಿದನು. “ಏನೆಂದುಕೊಂಡೆ ನನ್ನನ್ನು, ನನ್ನಲ್ಲಿ ಶಕ್ತಿ ಇಲ್ಲವಾ, ಪೌರುಷ ಇಲ್ವಾ. ಹೇಡಿ, ಶಸ್ತ್ರಗಳಿಲ್ಲ, ಮೋಸ, ಮಾಯೆ, ವಂಚನೆ ಇದೆಲ್ಲ ಮರೆತುಹೋಗಿದೆ ಎಂದು ಅಂದುಕೊಂಡೆಯಾ…! ನನ್ನನ್ನು ಅವಗಣಿಸಿ ರಥವನ್ನು ಈ ಕಡೆ ತಂದೆಯಲ್ಲಾ.. ಇದರಿಂದ ಇಷ್ಟು ಕಾಲದ ನನ್ನ ಕೀರ್ತಿ ಮಣ್ಣಾಯಿತು೧ ಎಂದು ಹೇಳಿದನು. ಮೊದಲು ಮಾಡಿದ ಕೆಲಸ ಪಲಾಯನವೇ ಆಗಿತ್ತು. ಇಂತವರಿಗೆ ಭ್ರಮೆ ಇದುವೆ. “ಪ್ರಖ್ಯಾತವೀರನಾದ ರಾಮನೆದುರು ಯುದ್ಧ ಮಾಡುವಾಗ ನನ್ನನ್ನು ಹೇಡಿ ಎಂದು ತೋರಿಸಿದೆಯಲ್ಲಾ… ನೀನು ಈ ಕೆಲಸವನ್ನು ಮಾಡಿದ್ದನ್ನು ನೋಡಿದರೆ, ನೀನು ಶತ್ರುಗಳ ಕಡೆಯಿಂದ ಲಂಚತಿಂದಿದ್ದೀಯೆ. ಹಿತೈಷಿಯಲ್ಲ ನೀನು. ಹೋಗಲಿ, ಈಗಲಾದರೂ ರಾಮನೆದುರು ರಥವನ್ನು ತೆಗೆದುಕೊಂಡು ಹೋಗಿ ನಿಲ್ಲಿಸು” ಎಂದನು ರಾವಣ. ನಿನಗೆ ಇಷ್ಟು ಕಾಲ ಅನ್ನ ನೀರನ್ನು ಕೊಟ್ಟದ್ದು ನೆನಪಿದೆ ಅಂತಾದರೆ ನನ್ನನ್ನು ಕರೆದುಕೊಂಡು ಹೋಗು ಅಲ್ಲಿಗೆ ಎಂದನು.

ನಿಜವಾಗಿ ಹಿತೈಷಿ ಸಾರಥಿ. ಬುದ್ಧಿಯಿಲ್ಲದ ರಾವಣನಿಗೆ ಹೇಳಿದನು, ” ದೊರೆಯೇ, ನಾನು ಹೆದರಿಲ್ಲ, ಲಂಚತಿಂದಿಲ್ಲ, ನಿನ್ನ ಮೇಲೆ ನನ್ನ ಪ್ರೀತಿಯೂ ಕಡಿಮೆಯಾಗಿಲ್ಲ. ನೀ ಕೊಟ್ಟ ಅನ್ನ ನೀರು ಬಟ್ಟೆಯನ್ನು ಮರೆತಿಲ್ಲ. ನಿನ್ನ ಒಳ್ಳೆಯದಕ್ಕೋಸ್ಕರ, ನಿನ್ನ ಉಳಿಸೋದಿಕ್ಕೋಸ್ಕರ ನಾನು ಮಾಡಿದ ಪ್ರಿಯ ಕಾರ್ಯ ನಿನಗೆ ಅಪ್ರಿಯವಾಗಿ ಹೋಯಿತು, ನಾನೇನು ಮಾಡಲಿ. ಸುಮ್ಮಸುಮ್ಮನೆ ನನ್ನನ್ನು ಲಘುವಾಗಿ ನಿಂದಿಸಬೇಡ. ಕಾರಣ ಹೇಳ್ತೇನೆ, ಯಾಕೆ ನಾನು ರಥವನ್ನು ತಂದೆ ಎಂದರೆ, ನಾನು ಗಮನಿಸ್ತಾ ಇದ್ದೆ. ತುಂಬ ದಣಿವಲ್ಲಿ ನೀನಿದ್ದೆ. ಮಹತ್ತಾದ ಯುದ್ಧಕರ್ಮದಲ್ಲಿ ನೀನು ಬಳಲಿದ್ದೆ. ಯುದ್ಧಹರ್ಷವೂ ಇರಲಿಲ್ಲ. ನೀನು ಬೀಳ್ತಾ ಇದ್ದೆ. ಕುದುರೆಗಳು ಬಳಲಿದ್ದವು, ಬಸವಳಿದಿದ್ದವು. ದೀನವಾಗಿದ್ದವು. ಸಾಲಾಗಿ ಅಪಶುಕನವಾಗುತ್ತಿದ್ದವು. ಸಾರಥಿಗಳು ದೇಶಕಾಲವನ್ನು ಗಮನಿಸಬೇಕು. ಹಾಗಾಗಿ ನಿನಗೆ, ಕುದುರೆಗಳಿಗೆ ವಿಶ್ರಾಂತಿ ಬೇಕಾಗಿತ್ತು, ಸ್ವೇಚ್ಛೆಯಿಂದ ಮಾಡಿದ್ದಲ್ಲ! ಒಡೆಯನ ಮೇಲಿನ ನಿಷ್ಠೆಯಿಂದ ಮಾಡಿದ್ದು. ಈಗ ಹೇಳು, ಎಲ್ಲಿಗೆ ಹೋಗಬೇಕು ಅಪ್ಪಣೆ ಮಾಡು ಎಂದನು. ಆಗ ಸಾರಥಿಯನ್ನು ಸ್ತುತಿಸಿ, ಹಸ್ತಾಭರಣವನ್ನು ಕೊಟ್ಟು ರಾವಣ ರಾಮನಿರುವಲ್ಲಿಗೆ ಕರೆದುಕೊಂಡು ಹೋಗು ಎಂದನು. ಆಗ ಸಾರಥಿಯು ರಾಮನಿರುವಲ್ಲಿಗೆ ಹೋದನು. ಕ್ಷಣಮಾತ್ರದಲ್ಲಿ ರಥವು ರಾಮನೆದುರು ಪ್ರಕಟವಾಯಿತು.

ಈ ಘಟನೆ ನಡೆಯುವಾಗ ಆ ಕಡೆಗೊಂದು ಘಟನೆ ನಡೆದಿದೆ.

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾಸ್ಥಿತಮ್
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಂ ||

ರಾಮನ ಸ್ಥಿತಿ, ಹದಿನೈದು ದಿನ ಯುದ್ಧಮಾಡಿ ಬಳಲಿದಾನೆ. ಪರಿಶ್ರಮ, ಚಿಂತನೆಯಿದೆ. ಸೋಲ್ತಾನೆ ಸಾಯೋದಿಲ್ಲ ರಾವಣ. ರಾವಣನ ರಥ ಆ ಕಡೆಯಿಂದ ಬರುತ್ತಿದೆ. ಭಗವಾನೃಷಿ ಅಗಸ್ತ್ಯರು ಸನಾತನ ಗುಹ್ಯವಾದ ಸ್ತೋತ್ರವನ್ನು ಹೇಳಿದರು. ಇದನ್ನು ಸ್ತುತಿಸಿದರೆ, ವಿಜಯ ಖಂಡಿತ. ರಾಮನ ಕಾರ್ಯದಲ್ಲಿ ಅಗಸ್ತ್ಯರ ತುಂಬ ಸಹಾಯವಿದೆ. ಎಲ್ಲ ಶತ್ರುಗಳನ್ನು ನಾಶಮಾಡಬಲ್ಲ ಆದಿತ್ಯಹೃದಯವಿದು. ಕ್ಷಯಿಸಲಾಗದ ಶುಭ ಸಿಗುವುದು ಇದರಿಂದ. ಪವಿತ್ರವಾಗಿದೆ. ಜಯವನ್ನ ತಂದುಕೊಡಬಲ್ಲದು. ಎಂದು ಹೇಳಿ ಆದಿತ್ಯಹೃದಯವನ್ನ ಉಪದೇಶ ಮಾಡ್ತಾರೆ. ಸರ್ವಮಂಗಲಮಾಂಗಲ್ಯ, ಸರ್ವಪಾಪಪ್ರಣಾಶನ, ಚಿಂತಾಶೋಕಪ್ರಶಮನ, ಆಯಸ್ಸನ್ನು ಹೆಚ್ಚುಮಾಡುತ್ತದೆ. ಆದಿತ್ಯನ ನಾನಾ ರೀತಿಯ ಸ್ತೋತ್ರವಾಗಿದೆ ಇದರಲ್ಲಿ. ಆಪತ್ತಿನಲ್ಲಿದ್ದಾಗ, ಕಷ್ಟದಲ್ಲಿದ್ದಾಗ, ಕಾಡಿನಲ್ಲಿದ್ದಾಗ ಯಾರು ಆದಿತ್ಯನನ್ನು ಸ್ತೋತ್ರ ಮಾಡ್ತಾರೋ ಅವರು ನಾಶವಾಗುವುದಿಲ್ಲ. ಈ ಸ್ತೋತ್ರವನ್ನು ಮೂರುಬಾರಿ ಮಾಡಿದರೆ, ರಾವಣನನ್ನು ಸಂಹರಿಸುತ್ತೀಯ ಎಂದು ಹೇಳಿ, ಅಗಸ್ತ್ಯರು ಸ್ವಸ್ಥಾನಕ್ಕೆ ಹೋದರು. ರಾಮನು ಅದನು ಜಪಿಸಿದನು. ಸರ್ವಯತ್ನವನ್ನು ಧಾರೆಯೆರೆದು, ಹರ್ಷದಿಂದ ಯುದ್ಧಕ್ಕೆ ಮುಂದಾಗುವಾಗ ಸೂರ್ಯನು ರಾಮನನ್ನುದ್ದೇಶಿಸಿ ಇನ್ನು ರಾವಣನ ವಧೆಯಿದೆ, ತೊರೆಮಾಡು ಎಂದನು.

ಮುಂದೇನಾಯಿತು ಎಂಬುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments