ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ ರಾಮಾಯಣದ ಸಾರಾಂಶ:

ವಿಧಿಯು ತಾನು ಮಾಡಬೇಕೆಂದುಕೊಂಡಿರುವುದನ್ನು ಮಾಡಿಯೇ ಮಾಡುತ್ತದೆ.

ಕೌಶಿಕ ಹುಟ್ಟಿದ್ದು ರಾಜನ ಮಗನಾಗಿ, ಬೆಳೆದಿದ್ದು ಕ್ಷತ್ರಿಯ ವಿದ್ಯೆಗಳ ವಿದ್ಯಾರ್ಥಿಯಾಗಿ;

ಕಲ್ಪನೆ ಕೂಡ ಇಲ್ಲ ತಾನೊಬ್ಬ ತಪಸ್ವಿ ಆಗ್ತೇನೆ, ತಾನೊಬ್ಬ ಬ್ರಹ್ಮರ್ಷಿಯಾಗ್ತೇನೆ, ಗಾಯತ್ರಿಯನ್ನ ಪ್ರಪಂಚಕ್ಕೆ ಕೊಡ್ತೇನೆ ಅಂತ.

ಮತ್ತೆ, ಬಹುಕಾಲ ಬದುಕಿ ಬಾಳಿದ್ದು ರಾಜಾಧಿರಾಜನಾಗಿ. ಎಲ್ಲಿಯ ರಾಜಾಧಿರಾಜ? ಎಲ್ಲಿಯ ಬ್ರಹ್ಮರ್ಷಿ?

ಏಕೆ ಈ ಬದಲಾವಣೆ ಬಂತೆಂದರೆ, ವಿಧಿ!! ದೈವವು ಬಯಸಿತ್ತು!

ನೋಡಿ ಶತಾನಂದರ ಬಾಯಲ್ಲಿ ರಾಮ ಕೇಳಿದಂತೆ ನಾವು ಕೇಳೋಣ ವಿಶ್ವಾಮಿತ್ರರ ಕಥನವನ್ನ:

ಒಂದು ಕಾಲದಲ್ಲಿ ಬಹುಕಾಲ ಧರ್ಮಾತ್ಮನಾದ, ಪ್ರಜಾಪಾಲಕನಾದ ರಾಜನಾಗಿದ್ದರು ಈ ವಿಶ್ವಾಮಿತ್ರರು.

ಕೌಶಿಕ ಅಂದರೆ ಕುಶ ವಂಶಜ್ಞ. ಬಹುಕಾಲ ರಾಜ್ಯವಾಳಿದ ಬಳಿಕ ವಿಧಿ ಸೆಳೆದಂತೆ  ಕೌಶಿಕನಿಗೆ ಲೋಕಪರ್ಯಟನೆಯ ಮನಸ್ಸಾಯಿತು. ಸೇನಾ ಸಮೇತನಾಗಿ ಜಗದ್ಪರ್ಯಟನೆ ಮಾಡ ಹೊರಟ ವಿಶ್ವಾಮಿತ್ರ ಹೋಗಿ ತಲುಪಿದ್ದು ವಸಿಷ್ಠಾಶ್ರಮಕ್ಕೆ.

ಸಾಧಕರು, ಸಿದ್ಧರು ಎಲ್ಲ ವಾಸ ಮಾಡುತ್ತಿದ್ದ ಮತ್ತೊಂದು ಬ್ರಹ್ಮಲೋಕದಂತಿದ್ದ ವಸಿಷ್ಠಾಶ್ರಮವನ್ನ ವಿಶ್ವಾಮಿತ್ರ ಪ್ರವೇಶಿಸುತ್ತಾನೆ. ವಸಿಷ್ಠರು ಪ್ರೀತಿಯಿಂದ ಉಪಚಾರ, ಸ್ವಾಗತ ಮಾಡಿದರು. ಆಶ್ರಮೋಚಿತವಾದ ಸತ್ಕಾರವನ್ನ ಮಾಡಿದರು.

ಕುಶಲಪ್ರಶ್ನೆಯಾಯಿತು. ಬಹುಕಾಲ ಪ್ರೀತಿ ಸಂಭಾಷಣೆ ಮಾಡುತ್ತಾರೆ.

ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ‌ ರಾಜನಿಗೆ, ರಾಜನ ಪರಿವಾರಕ್ಕೆ ರಾಜಾತಿಥ್ಯವನ್ನು ಮಾಡುವ‌ ಬಯಕೆ ವ್ಯಕ್ತಪಡಿಸಿದರು ವಸಿಷ್ಠರು.ಆತಿಥ್ಯ ಸ್ವೀಕರಿಸಲೇಬೇಕೆಂಬ ವಸಿಷ್ಠರ ಒತ್ತಾಯಕ್ಕೆ ಮಣಿದು ತಮ್ಮ ಸೇನೆಯನ್ನು ಕರೆದರು ವಿಶ್ವಾಮಿತ್ರರು. ವಸಿಷ್ಠರು ಶಬಲೆಯನ್ನು ಕರೆದು ಇವರೆಲ್ಲರಿಗೆ ಪ್ರಿಯವಾದ ಆಹಾರ ಸಿದ್ಧಪಡಿಸೆಂದರು. ಕ್ಷಣಮಾತ್ರದಲ್ಲಿ ಕಂಡರಿಯದ, ಉಂಡರಿಯದ ಭೋಜನವನ್ನು ಸಂಕಲ್ಪಮಾತ್ರದಿಂದ ಶಬಲೆ ಸಿದ್ಧಪಡಿಸಿದಳು.

ಸತ್ಕಾರದಿಂದ ಸಂತುಷ್ಟರಾದ  ರಾಜಾ ವಿಶ್ವಾಮಿತ್ರನಿಗೆ ಹೇಗಾದರೂ ಮಾಡಿ ಶಬಲೆಯನ್ನು ಪಡೆಯಬೇಕೆಂಬ ಮನಸ್ಸಾಯಿತು. ಒಂದು ಲಕ್ಷ ಗೋವುಗಳ ನೀಡುವೆ ಶಬಲೆಯನ್ನು ಕೊಡಿ ಎಂದ. ಲಕ್ಷವಲ್ಲ ಕೋಟಿಕೊಟ್ಟರೂ ಕೊಡಲಾರೆ ಎಂದರು ವಸಿಷ್ಠರು.  ಆನೆ,ಅಶ್ವಗಳುಳ್ಳ ರಜತ ರಥಗಳು ಹೀಗೆ  ಕೊಡುವೆನೆಂದರೂ ನನ್ನ ಧರ್ಮ, ಕರ್ಮ, ವಿದ್ಯೆ, ತಪಸ್ಸು, ಪ್ರಾಣ, ನನ್ನ ಸರ್ವಸ್ವ ಆಕೆ ಅವಳನ್ನು ಕೊಡಲಾರೆನೆಂದಾಗ ವಿಶ್ವಾಮಿತ್ರನಿಗೆ ಕ್ಷತ್ರಿಯತ್ವದ ನೆನಪಾಗಿ ರಾಜಭಟರ ಮೂಲಕ ಸೆಳೆದ ಶಬಲೆಯನ್ನು.

ರೋಧಿಸಿದಳಾಕೆ, ಧರ್ಮವನ್ನೆ ಬಿಟ್ಟವರಲ್ಲ ವಸಿಷ್ಠರು! ಧರ್ಮಧೇನುವನ್ನು ಹೇಗೆ ಬಿಟ್ಟರೆಂದು? ಒಮ್ಮೆ ಮೈಕೊಡವಿ ವಸಿಷ್ಠರ ಬಳಿಸಾರಿ ಯಾಕೆ ಬಿಟ್ಟುಕೊಟ್ಟಿರಿ ನನ್ನ ಎಂದು ಪ್ರಶ್ನಿಸಿದಳು.

ನನ್ನ ಇಷ್ಟವಲ್ಲ, ಕಷ್ಟವದು. ಬಡ ಬ್ರಾಹ್ಮಣ ನಾನು,  ಅಪಾರ ಸೇನಾಬಲ ಹೊಂದಿದ ಕ್ಷತ್ರಿಯನಾತ ನಾನೇನ ಮಾಡಲಿ ಎಂದಾಗ ಬಾಹುಬಲವಲ್ಲ ಬ್ರಹ್ಮಬಲವೇ ಬಲ.

ಒಮ್ಮೆ ನನಗೆ ಬ್ರಹ್ಮಬಲ ನೀಡಿ ಸೊಕ್ಕಡಗಿಸುವೆನೆಂದಳು. ವಸಿಷ್ಠರು ಅಪ್ಪಣೆಯಿತ್ತರು. ಒಂದೇ ಒಂದು ಹುಂಬಾರವದಿಂದ ಹುಟ್ಟಿದ ಪಪ್ಲವರೆಂಬ ಹೆಸರಿನ ವೀರಭಟರು ವಿಶ್ವಾಮಿತ್ರರ ಸೇನೆಯನ್ನು ಆಕ್ರಮಿಸಿದರು. ಆಗ ವಿಶ್ವಾಮಿತ್ರ ಪ್ರಯೋಗಿಸಿದ ದಿವ್ಯಾಸ್ತ್ರದಿಂದ ಪಪ್ಲವರು ವಿಚಲಿತರಾದರು, ಮತ್ತೆ ಹುಂಬಾರವದಿಂದ ಶಕರು, ಯವನರು, ಕಾಂಭೋಜರಾದಿಯಾಗಿ ವಿಶ್ವಾಮಿತ್ರರ ಸೇನೆಯನ್ನಾಕ್ರಮಿಸಿ ಸರ್ವಸಂಹಾರ ಮಾಡಿದರು. ಇದರಿಂದ ಕೋಪಗೊಂಡು ವಸಿಷ್ಠರ ಮೇಲೆ ಸೇಡುತೀರಿಸಿಕೊಳ್ಳಲು ಬಂದ ವಿಶ್ವಾಮಿತ್ರರ ಮಕ್ಕಳನ್ನು ಕೇವಲ ವಸಿಷ್ಠರ ಹುಂಕಾರ ಸುಟ್ಟುಹಾಕಿತು.

ಈ ಘಟನೆಗಳಿಂದ ರೆಕ್ಕೆ ಪುಕ್ಕ ಕತ್ತರಿಸಿದ ಹಕ್ಕಿಯಂತೆ ದೀನನಾದರೂ ಕ್ಷಾತ್ರತ್ವ ಇನ್ನೂ ಉಳಿದಿತ್ತು. ಉಳಿದ ಮಕ್ಕಳ ಪೈಕಿ ಒಬ್ಬನನ್ನು ಕರೆದು ರಾಜ್ಯಭಾರ ಮಾಡೆಂದು ಅಪ್ಪಣೆಯಿತ್ತು ಶಿವನನ್ನು ಕುರಿತು ತಪಸ್ಸಿಗೆ ಕುಳಿತ ವಿಶ್ವಾಮಿತ್ರ. ಪ್ರತ್ಯಕ್ಷನಾದ ಶಿವ ವರ ಕೇಳೆಂದಾಗ  ನನ್ನ ತಪಸ್ಸಿನಿಂದ ನೀನು ಸಂತುಷ್ಟನಾಗಿದ್ದರೆ ಅಂಗೋಪಾಂಗ ಉಪನಿಷತ್ತುಗಳನ್ನೊಳಗೊಂಡ ಧನುರ್ವೇದ ಹಾಗೂ ಬ್ರಹ್ಮಾಂಡದಲ್ಲಿರುವ ಸಕಲ ದಿವ್ಯಾಸ್ತ್ರಗಳೂ ನನ್ನಲ್ಲಿ ಸ್ಫುರಿಸಲಿ ಎಂದಾಗ ಅಸ್ತು ಎಂದು ವರ ಕೊಟ್ಟುಬಿಟ್ಟ ಶಿವ.

ಮತ್ತೆ ಬಂತು ದರ್ಪ, ನೇರವಾಗಿ ವಸಿಷ್ಠಾಶ್ರಮದ ಮೇಲೆ ದಾಳಿ ಮಾಡಿದ. ಎಲ್ಲ ಅಸ್ತ್ರಗಳ ಪ್ರಯೋಗದಿಂದ ವಸಿಷ್ಠಾಶ್ರಮ ಹೊತ್ತಿ ಉರಿಯಿತು. ವಸಿಷ್ಠರು  ಎಲ್ಲ ಅಸ್ತ್ರಗಳನ್ನು ಬ್ರಹ್ಮದಂಡದಿಂದ ನುಂಗಿ ಜೀರ್ಣ ಮಾಡಿಕೊಳ್ಳುತ್ತಾರೆ..

ಬಾಹುಬಲ ಬಲವಲ್ಲ, ಬ್ರಹ್ಮಬಲವೇ ಬಲವೆಂದು ಅರಿತ ವಿಶ್ವಾಮಿತ್ರನು ಬ್ರಹರ್ಷಿಯಾಗಬೇಕೆಂಬ ಉದ್ದೇಶದಿಂದ ಮತ್ತೆ ತಪಸ್ಸಿಗೆ ತೆರಳುತ್ತಾನೆ…

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments