ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ದೊಡ್ಡ ಸಂಕಟವಾದಾಗ ಅಥವಾ ದೊಡ್ಡ ಸಂತೋಷವಾದಾಗ ನಮಗೆ ಯಾರ ನೆನಪಾಗುತ್ತದೆಯೋ, ಅವನೇ ನಿಜವಾದ ಬಂಧು.

ಸೀತಾಕಲ್ಯಾಣದ ಶುಭ ಸಂದರ್ಭ, ಜನಕನಿಗೆ ತನ್ನ ಸಹೋದರನ ನೆನಪಾಯಿತು. ಅವನು ಸಾಂಕಾಷ್ಯ ನಗರಿಯನ್ನಾಳುತ್ತಿದ್ದ ಕುಶಧ್ವಜ. ಆತನನ್ನು ಕರೆತರಲು ಶತಾನಂದರಿಗೆ ಜನಕನು ಸೂಚನೆಯಿತ್ತನು, ಕುಶಧ್ವಜನ ಆಗಮನವಾಯಿತು.

ಮಂತ್ರಿ ‘ಸುಧಾಮನ’ನ ಮೂಲಕ ದಶರಥನಿಗೆ ಕರೆಯಿತ್ತು ಕರೆಸಿಕೊಳ್ಳುವ ಜನಕ. ದಶರಥ ಅಷ್ಟಮಂತ್ರಿ, ಅಷ್ಟಗುರುಗಳೊಡನೆ ಆಗಮಿಸಿದನು. ಎಲ್ಲರೂ (ಎರಡೂ ಕಡೆಯವರು) ಸೇರಿಕೊಂಡರು.

ಈಗ ಸಂದರ್ಭ: ಕುಲವನ್ನು ಕೀರ್ತನೆ ಮಾಡಬೇಕು. ಏಕೆ? ವಿವಾಹವೆಂದರೆ ಕೇವಲ ಎರಡು ಜೀವಿಗಳ ಸೇರುವಿಕೆಯಲ್ಲ, ಎರಡು ಕುಲಗಳು ಸೇರುತ್ತವೆ ಅಲ್ಲಿ. ಸೂರ್ಯವಂಶ ಮತ್ತು ನಿಮಿವಂಶದ ಎರಡು ಕುಡಿಗಳಾದ ಶ್ರೀರಾಮ ಮತ್ತು ಸೀತೆ ಸೇರುವಾಗ ಎರಡು ವಂಶಗಳೇ ಸೇರುತ್ತವೆ.

ಕನ್ಯಾಪಿತ ಮತ್ತು ವರನ ಪಿತ ಕುಲಗಳ ಬಗ್ಗೆ ಹೇಳಬೇಕು. ದಶರಥ ಆರಂಭಿಸುತ್ತಾನೆ, ‘ ನಮ್ಮ ಕುಲಕ್ಕೆ ದೇವರಿದ್ದಂತೆ ವಸಿಷ್ಠರು. ಯಾವುದೇ ಕಾರ್ಯಕ್ಕೆ ನಮ್ಮ ಪರವಾಗಿ ಮಾತನಾಡುವವರು ವಸಿಷ್ಠರು. ವಿಶ್ವಾಮಿತ್ರರ ಅನುಮೋದನೆಯಲ್ಲಿ ನನ್ನ ಕುಲಕ್ರಮವನ್ನು ವಸಿಷ್ಠರು ವಿವರಿಸುತ್ತಾರೆ’..
ದಶರಥನು ಸುಮ್ಮನಾದ ಬಳಿಕ ವಸಿಷ್ಠರು ವಿವರಿಸುತ್ತಾರೆ..
ಮಾತನಾಡುತ್ತಿರುವವರು ಸುಮ್ಮನಾದ ಮೇಲೆ ಇನ್ನೊಬ್ಬರು ಮಾತನಾಡುವುದು ಶಿಷ್ಟಾಚಾರ ~ #ಶ್ರೀಸೂಕ್ತಿ

ಸೃಷ್ಟಿಕರ್ತನಾದ ಬ್ರಹ್ಮನಿಂದ ಆರಂಭ! ಆತನೆಲ್ಲಿಂದ ಹುಟ್ಟಿಬಂದನೆಂಬುದು‌ ನಿಗೂಢ, ಅವ್ಯಕ್ತ. ಆತ ಶಾಶ್ವತ, ನಿತ್ಯ, ಸಾವಿಲ್ಲದವನು. ಬ್ರಹ್ಮನ ಮಗ ಮರೀಚಿ, ಆತನ ಮಗ ಕಶ್ಯಪ, ಅವನ ಮಗ ಸೂರ್ಯ, ಸೂರ್ಯನ ಮಗನೇ ವೈವಸ್ವತ ಮನು, ಆತನ ಹಿರಿಯ ಮಗ ಇಕ್ಷ್ವಾಕು. ಅಯೋಧ್ಯೆಗೆ ಮೊಟ್ಟಮೊದಲ ರಾಜ ಇಕ್ಷ್ವಾಕು. ಮುಂದೆ ೩೦ ಹೆಸರಾಂತ ರಾಜರವರೆಗೆ ವಂಶವು ಬೆಳೆದು ನಾಭಾಗನು ರಾಜ್ಯವಾಳುತ್ತಿದ್ದ. ಆತನ ಮಗನೇ ಅಜ, ಅಜನ ಮಗ ದಶರಥ, ದಶರಥನ ಮಕ್ಕಳೇ ರಾಮ-ಲಕ್ಷ್ಮಣರು. ಆದಿ ಬ್ರಹ್ಮನಿಂದ ಆರಂಭಿಸಿ ಇಲ್ಲಿಯವರೆಗೆ ವೀರರೂ, ಪರಾಕ್ರಮಿಗಳೂ, ಸತ್ಯವಾದಿಗಳಾಗಿ ಸೂರ್ಯವಂಶದ ಕೀರ್ತಿಪತಾಕೆಯನ್ನು ಏರಿಸಿದ್ದಾರೆ. ಇಕ್ಷ್ವಾಕು ವಂಶಜರಾದ ಈ ಈರ್ವರು ಮಕ್ಕಳಿಗೆ ನಿಮ್ಮೀರ್ವರು ಮಕ್ಕಳನ್ನು ವರಿಸುವುದಾಗಿ ನಿಶ್ಚಯಿಸಿದ್ದೇವೆ. ಎಂದರು ವಸಿಷ್ಠರು.

ಈಗ ಜನಕನ ಸರಧಿ. ಕೈಮುಗಿದ ಜನಕನು ತನ್ನ ವಂಶವನ್ನ ತಾನೇ ವಿವರಿಸಲಾರಂಭಿಸಿದ‌.
ಜೀವರಾಶಿಗಳಲ್ಲಿಯೇ ಶ್ರೇಷ್ಠನೆನಿಸಿದ ಧರ್ಮಾತ್ಮನಾದ ತ್ರಿಲೋಕ‌ ವಿಖ್ಯಾತ ‘ನಿಮಿ’ಯಿಂದ
ತನ್ನ ವಂಶದ ಆರಂಭ. ಆತನ ಮಗನೇ ಮಿಥಿ, ಮಿಥಿಯಿಂದ ಮಿಥಿಲೆಯಾಯಿತು! ಮಿಥಿಯ ಮಗ ಜನಕ! ಪ್ರಥಮ ಜನಕ ಅವನು, ಮುಂದೆ 18 ವಿವಿಧ ನಾಮದ ಜನಕರು ಆಗಿಹೋದ ಬಳಿಕ ಬಂದವನು ಹೃಸ್ವರೋಮ ಜನಕ. ಆತನಿಗೆ ಇಬ್ಬರು ಮಕ್ಕಳು. ಅವರಲ್ಲಿ ಸೀರಧ್ವಜ ಜನಕನಾದ ನಾನು ದೊಡ್ಡವನು. ನನ್ನ ತಮ್ಮನೇ ವೀರನಾದ ಕುಶಧ್ವಜ ಜನಕ. ತಂದೆ ಸ್ವರ್ಗವನ್ನು ಸೇರಿದ ಬಳಿಕ ಧರ್ಮದಿಂದ ರಾಜ್ಯಭಾರ ಮಾಡಿದ ನಾನು ಕುಶಧ್ವಜನನ್ನು ಪ್ರೀತಿಯಿಂದ ನೋಡಿದೆ ಎಂದನು.
ಸಾಹೋದರ್ಯ ರಾಮಾಯಣದ ಅದ್ಭುತ ತತ್ತ್ವಗಳಲ್ಲಿ ಒಂದು ~ #ಶ್ರೀಸೂಕ್ತಿ

ಸುಧನ್ವನೆಂಬ ಪರಾಕ್ರಮಿ ರಾಜನು ಯುದ್ಧಕ್ಕೆ ಬಂದು‌ ಸೋತು ಸಂಹರಿಸಲ್ಪಟ್ಟಾಗ ಸಾಂಕಾಷ್ಯ ನಗರವು ಅನಾಥವಾಗಿ, ತನ್ನ ತಮ್ಮನನ್ನು ಅಲ್ಲಿಗೆ ಪಟ್ಟಕಟ್ಟಿದೆನೆಂದು ವಿವರಿಸುತ್ತಾ, ನಾವಿಬ್ಬರೂ ಸೇರಿ ಇಬ್ಬರು ಮಕ್ಕಳಾದ ಸೀತೆ, ಊರ್ಮಿಳೆಯರನ್ನು ರಾಮ ಲಕ್ಷ್ಮಣ ರಿಗೆ ಪರಮಪ್ರೇಮದಿಂದ ಕೊಡುತ್ತೇವೆ ಎಂದು ತಾನಾಗಿ ಹೇಳಿದ ಜನಕ.

ವಾಗ್ದಾನವಾಯಿತು, ಇನ್ನುಳಿದಿದ್ದು ಕಾರ್ಯ ಮಾತ್ರ. ಕೂಡಲೇ ಮಕ್ಕಳ ಶ್ರೋಯೋಭಿವೃದ್ಧಿಗಾಗಿ ಗೋದಾನ ಮಾಡಲಾಯಿತು. ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ವಿವಾಹವೆಂದು ನಿಶ್ಚಯಿಸಲಾಯಿತು.

ಮುಂದೆ ವಸಿಷ್ಠರ ಅಭಿಮತದಲ್ಲಿ‌ ವಿಶ್ವಾಮಿತ್ರರು ಹೊಸ ಪ್ರಸ್ತಾಪವೊಂದನ್ನು ಮುಂದಿಡುತ್ತಾರೆ. ಈ ಬಂಧವನ್ನು ಇನ್ನಷ್ಟು ದೃಢತಮ ಮಾಡಿದರೆ ಪ್ರಪಂಚಕ್ಕೇ ಒಳ್ಳೆಯದು. ನಿನ್ನ ತಮ್ಮನಿಗೆ ಎರಡು ಮಕ್ಕಳಿದ್ದಾರಲ್ಲ, ಒಬ್ಬಳು ಭರತನಿಗೆ, ಮತ್ತೊಬ್ಬಳನ್ನು ಶತ್ರುಘ್ನನಿಗೆ ನಾವು ವರಿಸುತ್ತೇವೆ! ನಾಲ್ಕು ಮಕ್ಕಳಿಗೂ ವಿವಾಹ ಮಾಡಿಬಿಡೋಣ, ಸಂಬಂಧವಿನ್ನೂ ದೃಢ!

ಜನಕ ಕೈಮುಗಿದ. ನನ್ನ ಕುಲವೇ ಧನ್ಯವೆಂದ!!
ಋಷಿಮುನಿಗಳು ಹೇಳುವಾಗ ದಿವ್ಯಪ್ರೇರಣೆಯಿಂದಲೇ ಹೇಳುತ್ತಾರೆ.
ಒಂದೇ ದಿನ ೪ ಮಕ್ಕಳಿಗೂ ವಿವಾಹ ನೆರವೇರಿಸುವುದು ನಿಶ್ಚಯವಾಯಿತು.
ಜನಕ ವಸಿಷ್ಠ-ವಿಶ್ವಾಮಿತ್ರರಿಗೆ ಶರಣು ಶರಣಾರ್ಥಿಗಳನ್ನು ಅರ್ಪಿಸಿದ. ಇನ್ನು ಮುಂದೆ ಅಯೋಧ್ಯೆಯೂ ಮಿಥಿಲೆಯೂ ಬೇರೆಯಲ್ಲವೆಂದೂ ಜನಕನು ನುಡಿಯುತ್ತಾನೆ.

ದಶರಥನು ಆನಂದಪೂರ್ವಕವಾಗಿ ಮುಂದುವರೆಯುತ್ತಾನೆ. ಮರುದಿನ ಒಂದೊಂದು ಮಗನಿಗೆ ಒಂದೊಂದು ಲಕ್ಷದಂತೆ ಸ್ವರ್ಣಾಲಂಕೃತ ಸವತ್ಸ ಗೋದಾನ ಮಾಡಿದ. ತುಂಬ ಸಂಪತ್ತನ್ನು ಬ್ರಾಹ್ಮಣರಿಗೆ ದಾನ ಮಾಡಿದ. ನಾಲ್ವರು ದಿಕ್ಪಾಲಕರನ್ನು ಒಡಗೂಡಿದ ಪ್ರಜಾಪತಿ ಬ್ರಹ್ಮನಂತೆ ಶೋಭಿಸಿದ.

ವಿಜಯವನ್ನು ತಂದುಕೊಡುವ ಮುಹೂರ್ತ ಬಂತು. ಜನಕನು ಲೋಕರಾಮನಾದ ರಾಮನ ವೈವಾಹಿಕ ಕ್ರಿಯೆಯನ್ನು ಶತಾನಂದರು, ವಿಶ್ವಾಮಿತ್ರರ ಜೊತೆಗೆ ನೀವೇ ನಡೆಸಿಕೊಡಬೇಕೆಂದು ವಸಿಷ್ಠರನ್ನು ಜನಕನು ಬಿನ್ನವಿಸಲು, ವಸಿಷ್ಠರು ಮಂತ್ರಪೂರ್ವಕವಾಗಿ ಹವನ ನೆರವೇರಿಸಿ ಬಳಿಕ ಒಳ್ಳೆಯ ರೀತಿಯಲ್ಲಿ ವಿವಾಹ ನಡೆಸಿಕೊಟ್ಟರು.

ಧಾರೆ ಎರೆದು ಕೊಡುವಾಗ ಜನಕ ಹೇಳಿದ್ದು,
‘ನನ್ನ ಮಗಳು ಇನ್ನುಮುಂದೆ ನಿನ್ನ ಸಹಧರ್ಮಚಾರಿಣಿ ಆಗುತ್ತಾಳೆ. ಸ್ವೀಕರಿಸು ಈಕೆಯನ್ನು, ಪಾಣಿಗ್ರಹಣ ಮಾಡು. ಈಕೆ ಇನ್ನುಮುಂದೆ ಪತಿವ್ರತೆಯಾಗುತ್ತಾಳೆ, ನಿನ್ನನ್ನೇ ಹಿಂಬಾಲಿಸುತ್ತಾಳೆ.’
ಪತ್ನಿಯ ಸಾಧನೆ ಪತಿಯ ಹೊಣೆಗಾರಿಕೆ. ಪತ್ನಿಯ ಜೀವನ ಜವಾಬ್ದಾರಿಯನ್ನ ಪರಿಯು ತೆಗೆದುಕೊಳ್ಳಬೇಕು, ಆಕೆಯ ಆಧ್ಯಾತ್ಮಿಕ ಹೊಣೆಗಾರಿಕೆಯನು ಕೂಡ.. ~ #ಶ್ರೀಸೂಕ್ತಿ

ಜನಕ ಧಾರೆ ಎರೆದು ಕೊಟ್ಟ. ದೇವಲೋಕದಿಂದ ‘ಸಾಧು ಸಾಧು’ ಜೋರಾಗಿ ಕೇಳಿತು. ಈ ವಿವಾಹದಿಂದ ವಿಶ್ವಕಲ್ಯಾಣವಾಗಲಿಕ್ಕಿದೆ ಎಂದು ದೇವತೆಗಳು ಸಂತುಷ್ಟರಾದರು. ದೇವದುಂದುಭಿ ಮೊಳಗಿತು, ದೊಡ್ಡ ಪುಷ್ಪವೃಷ್ಟಿಯಾಯಿತು. ಬಹುದೊಡ್ಡ ಗೋಷ್ಠಿ ಗಗನದಲ್ಲಿ!!

ಹೀಗೆ ಸೀತಾರಾಮ ಕಲ್ಯಾಣ, ಊರ್ಮಿಳಾ-ಲಕ್ಷ್ಮಣ ಕಲ್ಯಾಣ, ಮಾಂಡವಿ-ಭರತ ಕಲ್ಯಾಣ, ಶೃತಕೀರ್ತಿ-ಶತ್ರುಘ್ನ ಕಲ್ಯಾಣ ಸುಸೂತ್ರವಾಗಿ ನೆರವೇರಿತು.
ವಾಕ್ಯಗಳಿಂದ ಇಂದು ಸಂಪನ್ನಗೊಂಡಿದೆ.

ನಾಳೆ ಮೊದಲಿಗೆ ಸೀತಾರಾಮಕಲ್ಯಾಣವನ್ನು‌ ಕಣ್ಣಲ್ಲಿ‌ ಕಟ್ಟಿಕೊಳ್ಳಲು ಬನ್ನಿ. ನಮ್ಮ-ನಿಮ್ಮ ಹೃದಯ ಸಿಂಹಾಸನದಲ್ಲಿ ಸೀತಾರಾಮರು ನೆಲೆನಿಂತು ಪ್ರಪಂಚಕ್ಕೆಲ್ಲ ಒಳಿತನ್ನುಂಟುಮಾಡಲಿ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments