ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಕರೆ. ಎರಡಕ್ಷರದ ಪದ. ಎಷ್ಟು ದೊಡ್ಡ ಅರ್ಥ ಅಡಗಿದೆ. ಕರೆ ಎಂದರೇನು?
ಒಂದು ಜೀವದಲ್ಲಿ ಮತ್ತೊಂದು ಜೀವದ ಬಗ್ಗೆ ಅದು ಬಳಿ ಬರಬೇಕು ಎಂಬ ಅಪೇಕ್ಷೆ ಹುಟ್ಟಿದಾಗ, ಹತ್ತಿರವಾಗುವಾಗ ಆ ಜೀವ ಇತ್ತ ತಿರುಗಬೇಕು, ದೃಷ್ಠಿ ಒಂದಾಗಬೇಕು, ಮನಸ್ಸು ಒಂದಾಗಬೇಕು, ಭಾವ ಸಂವಹನವಾಗಬೇಕು ಎಂದಾದಾಗ ಜೀವವೊಂದು ಧ್ವನಿ ಮಾಡುತ್ತದೆ ಅದು ಕರೆ.
ಈ ಕರೆ ಸರಿಯಾದರೆ ಅದು ಅದ್ವೈತದಲ್ಲಿ ಪರ್ಯವಸಾನವಾಗುತ್ತದೆ.

ಕೆಡುಕಿಗೂ ಕರೆ ಬರಬಹುದು. ಕೆಲವೊಮ್ಮೆ ನಿರ್ಭಾವವಾಗಿ ಕಾರ್ಯಕ್ಕೆ,
ಕೆಲವೊಮ್ಮೆ ಪ್ರೀತಿಯಿಂದ ಬರಬಹುದು, ಬಳಿ ಬಂದ ಜೀವಕ್ಕೆ ಶ್ರೇಯಸ್ಸನ್ನುಂಟು ಮಾಡುವಂತೆ. ಇದು ನಿಜವಾದ ಕರೆ.

ದಶರಥ ರಾಮನನ್ನ ಕರೆಯುತ್ತಿದ್ದಾನೆ ಸುಮಂತ್ರನ ಮೂಲಕ. ಇದೇನು ಮೊದಲ ಬಾರಿಯಲ್ಲ. ಆದರೆ ಈ ಕರೆ ಏಕೆಂದರೆ ನಾನು ನೀನಾಗು ಎಂಬ ಕರೆ. ಚಕ್ರವರ್ತಿ ಪದವಿಯನ್ನು ಕೊಡಲು ಕರೆದಿದ್ದಾನೆ. ಹಾಗೆನ್ನುವಾಗ ದಶರಥನ ಮುಖ ಬೆಳಗಿದೆ.

ಯಾರ ಬುದ್ಧಿಯು ಧರ್ಮದಲ್ಲಿ ನೆಲೆನಿಂತಿದೆಯೋ ಅವನು ಕೃತಾತ್ಮ. #ಶ್ರೀಸೂಕ್ತಿ

ಸುಮಂತ್ರ ರಾಜಭವನಕ್ಕೆ ರಾಮನನ್ನು ಕರೆತಂದಿದ್ದಾನೆ. ಅನೇಕ ದೊರೆಗಳು ಸಚಿವರು ವಿದ್ವಾಂಸರು ಆಸೀನರಾಗಿದ್ದಾರೆ.
ಆರ್ಯರು, ಮ್ಲೇಚ್ಛರೂ ಕೂಡಾ ಆಸೀನರಾಗಿದ್ದಾರೆ.
ರಾಜಭವನದ ಬಾಗಿಲಿಗೆ ರಾಮ ಬಂದ.
ಗಂಧರ್ವರ ದೊರೆಯಂತೆ, ಭುಜಬಲ ಪರಾಕ್ರಮ ಉಳ್ಳವನು, ಆಜಾನುಬಾಹು, ಮಹಾಸಾಮರ್ಥ್ಯ ಉಳ್ಳವನು, ಮದಗಜಗಮನ, ಚಂದ್ರಕಾಂತಿಯುಳ್ಳವನು, ಅತೀವ ಪ್ರಿಯದರ್ಶನ, ದೃಷ್ಟಿಯನ್ನು ತನ್ನೆಡೆಗೆ ಸೆಳೆದಿಟ್ಟುಕೊಳ್ಳುವ ರೂಪ.
ಬಿರುಬೇಸಿಗೆಯಲ್ಲಿ ಬರುವ ತಂಪಾದ ಮಳೆಯಂತೆ ಪ್ರಿಯವಾದವನು, ನೋಡಿದಷ್ಟೂ ತೃಪ್ತಿಯಾಗಲಿಲ್ಲ ದಶರಥನಿಗೆ. ಎಂದಿಗಿಂತ ಇಂದು ಅತೀ ಸುಂದರವಾಗಿ ಕಾಣುತ್ತಿದ್ದಾನೆ. ರಾಮ ಮುಂದಾಗಿ ಕೈಮುಗಿದು ತಂದೆಯೆಡೆಗೆ ಸಾಗುತ್ತಿದ್ದಾನೆ. ಹಿಂದಿನಿಂದ ಸುಮಂತ್ರ. ಕೈಲಾಸ ಶೃಂಗದಂತಿತ್ತು ರಾಜಭವನ. ಉಪ್ಪರಿಗೆಯನ್ನು ಅಧಿರೋಹಿಸಿ ತಂದೆಗೆ ಕೈಮುಗಿದ, ತಡೆಯಲಾಗಲಿಲ್ಲ ದಶರಥನಿಗೆ, ಹಾಗೆಯೇ ಮುಗಿದ ಕೈಹಿಡಿದು ತಬ್ಬಿಕೊಳ್ಳುತ್ತಾನೆ. ಆಸನವನ್ನು ನೀಡಿದಾಗ ಮೇರುವಿನ ಬಳಿ ಸೂರ್ಯಉದಯಿಸಿದಾಗ ಆ ಪ್ರಭೆಯಿಂದ ಶೋಭಿಸುವ ಮೇರುವಿನಂತೆ ಆ ಆಸನ ರಾಮನ ಪ್ರಭೆಯಿಂದ ಶೋಭಿಸಿತು.

ಸ್ಥಾನದಿಂದ ವ್ಯಕ್ತಿಗೆ ಶೋಭೆಯಲ್ಲ, ವ್ಯಕ್ತಿಯಿಂದ ಸ್ಥಾನಕ್ಕೆ ಶೋಭೆ ಬರಬೇಕು. #ಶ್ರೀಸೂಕ್ತಿ

ಮೊದಲೇ ಗಗನದಂತೆ ಶೋಭಿಸುತ್ತಿದ್ದ ಸಭೆಗೆ ರಾಮ ಬಂದಾಗ ಶರತ್ಕಾಲದ ಚಂದ್ರಬಂದಂತಾಯಿತು. ಆತ್ಮವೈ ಪುತ್ರನಾಮಾಸಿ ಎಂಬಂತೆ ತನ್ನನ್ನೇ ಕಂಡ ದಶರಥ ರಾಮನಲ್ಲಿ. ಬಳಿಕ ಮುಗುಳ್ನಕ್ಕು ಹೇಳಿದನಂತೆ, ಸೂರ್ಯವಂಶಕ್ಕೆ ತಕ್ಕ ಸೊಸೆ, ನನ್ನ ಹಿರಿಯ ರಾಣಿ ಕೌಸಲ್ಯೆ ಅವಳಲ್ಲಿ ಜನಿಸಿದ ವಂಶಕ್ಕೆ ತಕ್ಕ ಹಿರಿಯ ಮಗ ನೀನು. ನಿನ್ನ ಗುಣ ನಡತೆಗಳಿಂದ ಪ್ರಜೆಗಳನ್ನು ರಂಜಿಸಿದೆ. ಹಾಗಾಗಿ ನಿನಗೆ ಯೌವರಾಜ್ಯವನ್ನು ಕೊಡುತ್ತೇನೆ ಎಂದಾಗ ಕರ್ತವ್ಯ ಪ್ರಜ್ಞೆಯ ಹೊರತು ಯಾವುದೇ ಬದಲಾವಣೆಯಿಲ್ಲ ರಾಮನ ಭಾವದಲ್ಲಿ. ಉಪದೇಶಿಸುತ್ತಾನೆ ದಶರಥ; ನಾನು ಏನು ಹೇಳಬೇಕಿತ್ತೋ ಈಗಾಗಲೇ ನೀನು ಹಾಗಿದ್ದೀಯೆ. ಆದರೂ ಕರ್ತವ್ಯ ಎಂದು ಹೇಳುತ್ತಿದ್ದೇನೆ. ವಿನಯವಂತ ನೀನು.
ದೊರೆತನ ಬಂದಾಗ ಬೀಗಬಾರದು, ಬಾಗಬೇಕು. ದೊರೆತನಕ್ಕೆ ಅಲಂಕಾರ ವಿನಯ. ಹಾಗಾಗಿ ಯಾವಾಗಲೂ ವಿನಯದಿಂದಿರು. ಅಪರಿಮಿತ ಅಧಿಕಾರ ಸಂಯಮ ತಪ್ಪುವಂತೆ ಮಾಡುತ್ತದೆ.
ಹಾಗೆ ಮಾಡಬೇಡ. ಪರೋಕ್ಷ ಹಾಗೂ ಪ್ರತ್ಯಕ್ಷ ವೃತ್ತಿ ಎರಡನ್ನೂ ಅನುಸರಿಸು.
ಮಂತ್ರಿಗಳಿಂದ ಆರಂಭಿಸಿ ಸಮಸ್ತ ಪ್ರಜೆಗಳನ್ನು ಸಂತೋಷವಾಗಿಡುವ ಹೊಣೆ ನಿನ್ನಮೇಲಿದೆ. ಗೋಸಂಪತ್ತು ರಕ್ಷಿಸು, ಗೋವುಗಳ ಸಂಖ್ಯೆ ಹೆಚ್ಚುವಂತೆ ಮಾಡು. ಗೋವುಗಳು ಹೆಚ್ಚಿದಂತೆ ಸಂಪತ್ತು ಹೆಚ್ಚುತ್ತದೆ. ಗೋಸಂಪತ್ತಿಲ್ಲದ ರಾಜ್ಯ ಭೂಮಿಗೆ ಭಾರ. ಆಯುಧಗಳನ್ನು ಹೆಚ್ಚಿಸು.
ಕೋಷ್ಠಾಗಾರದಲ್ಲಿ ಧಾನ್ಯಗಳು ಹೆಚ್ಚುವಂತೆ ನೋಡಿಕೊ. ಇದೆಲ್ಲವನ್ನೂ ಇಟ್ಟುಕೊಂಡು ಮಾಡುವುದು ರಾಜ್ಯಭಾರ. ಏತನ್ಮಧ್ಯೆ ಕೌಸಲ್ಯೆಯ ಗುಪ್ತಚರರು ಅವಳ ಬಳಿ ಧಾವಿಸಿ ವಿಷಯ ತಿಳಿಸಿದರು. ಅಪರಿಮಿತ ಸಂತೋಷವಾಗಿ ಈ ಪ್ರಿಯವಾರ್ತೆಯನ್ನು ಅರುಹಿದವರಿಗೆ ಉತ್ತಮೋತ್ತಮವಾದ ಗೋವು, ಬಂಗಾರ ರತ್ನಗಳನ್ನು ನೀಡಿದಳಾಕೆ. ಏತನ್ಮಧ್ಯೆ ರಾಮ ರಾಜನಿಗೆ ವಂದಿಸಿ ಮನೆಗೆ ಮರಳುವಾಗ ಎಲ್ಲರೂ ಗೌರವಿಸುತ್ತಾರೆ.ಈ ಸುವಾರ್ತೆಯನ್ನು ಕೇಳಿದ ಉಳಿದವರೂ ಮನೆಗೆ ತೆರಳಿ ದೇವರನ್ನು ಅರ್ಚಿಸುತ್ತಾರೆ.

ಪಟ್ಟಾಭಿಷೇಕವನ್ನು ತಪ್ಪಿಸಲು ಅವಕಾಶವಿರಬಾರದು ಎಂಬ ಉದ್ದೇಶದಿಂದ ಮತ್ತೊಂದು ಸಮಾಲೋಚನಾ ಸಭೆ ಕರೆದು ನಾಳೆಯೇ ಪಟ್ಟಾಭಿಷೇಕ ಎಂದು ನಿಶ್ಚಯಿಸುತ್ತಾನೆ ದಶರಥ.
ದಶರಥನ ಆಜ್ಞೆಯಂತೆ ರಾಮನನ್ನು ಮತ್ತೆ ಕರೆತರಲು ಬಂದ ಸುಮಂತ್ರನನ್ನು ಬಳಿಕರೆದ ರಾಮ ಶಂಕೆಯಿಂದ ಮತ್ತೇನಾಯಿತು ಎಂದಾಗ ರಾಜಾಜ್ಞೆ ಎಂದ ಸುಮಂತ್ರ.
ಮತ್ತೆ ಬಂದ ರಾಮನನ್ನು ಬಳಿಕರೆದು ಕುಳ್ಳಿರಿಸಿ , ವೃದ್ಧನಾದೆ, ಜೀವನದಲ್ಲಿ ಅನುಭವಿಸದ ಭೋಗವಿಲ್ಲ. ನಿನ್ನಂತಹ ಪುತ್ರನಿದ್ದ ಮೇಲೆ ಕೊರತೆಯಿನ್ನೇನಿದೆ? ದೇವ, ಪಿತೃ, ವಿಪ್ರ ಋಣ ಯಾವುದೂ ಇಲ್ಲ. ನಿನ್ನನ್ನು ದೊರೆಯಾಗಿಸುವುದರ ಹೊರತು ಬೇರೆ ಕರ್ತವ್ಯವಿಲ್ಲ. ದೊರೆಯನ್ನು ಸೇರಿ ಸಮಸ್ತರ ಅಪೇಕ್ಷೆ ನಿನಗೆ ರಾಜ್ಯಾಭಿಷೇಕ.
ಇತ್ತೀಚಿನ ದಿನಗಳಲ್ಲಿ ನನಗೆ ದಾರುಣ ಸ್ವಪ್ನ ಬೀಳುತ್ತಿದೆ. ದಿವಿ, ಅಂತರಿಕ್ಷ, ಭುವಿಗಳಲ್ಲಿ ನಿಮಿತ್ತಗಳು ಆಗುತ್ತಿವೆ. ಇದರ ತಾತ್ಪರ್ಯ ರಾಜನಿಗೆ ಮೃತ್ಯು ಬರುತ್ತದೆ ಇಲ್ಲವೇ ಅದಕ್ಕೆ ಕಡಿಮೆಯಿಲ್ಲದ ಆಪತ್ತು ಬರುತ್ತದೆ. ಹಾಗಾಗಿ ನನಗೆ ಬುದ್ಧಿಭ್ರಮಣೆಯಾಗುವ ಮೊದಲು ನಿನಗೆ ರಾಜ್ಯ ಕೊಡಬೇಕು. ಚಂದ್ರ ಇಂದು ನಿನ್ನ ನಕ್ಷತ್ರವಾದ ಪುನರ್ವಸು ಸೇರಿದ್ದಾನೆ, ನಾಳೆ ಪುಷ್ಯ ನಕ್ಷತ್ರಕ್ಕೆ ಬರುವುದರಿಂದ ನಾಳೆಯೇ ಪಟ್ಟಾಭಿಷೇಕ. ಇಂದು ನಿನಗೆ ಕರ್ತವ್ಯವಿದೆ. ಈಗಿನಿಂದಲೇ ನೀನು ಹಾಗೂ ಸೀತೆ ಇಬ್ಬರೂ ಉಪವಾಸ ಮಾಡಬೇಕು ಮತ್ತು ದರ್ಭದ ಹಾಸಿನಲ್ಲಿ ಮಲಗಬೇಕು. ನಿನಗೆ ಯಾರು ಪರಮಾಪ್ತರೋ ಅವರೆಲ್ಲ ನಿನ್ನ ರಕ್ಷಣೆಗಿರಲಿ ಎಂದು ಹೇಳಿ, ಮಾವನ ಮನೆಗೆ ಹೋದ ಭರತ ಮರಳುವ ಮೊದಲು ನಿನಗೆ ರಾಜ್ಯಾಭಿಷೇಕವಾಗಬೇಕು ಇದು ದೊರೆಯಾಗಿ ನನ್ನ ಮಾತು. ಭರತ ನಿನ್ನ ಸೋದರ, ಸನ್ನಡತೆ ಬಿಟ್ಟವನಲ್ಲ, ಧರ್ಮಾತ್ಮ, ನೀನೆಂದರೆ ಪರಮಪ್ರೀತಿ ಆದರೆ ಮನಸ್ಸು ಬದಲಾಗಬಹುದು ಹಾಗಾಗಿ ಮಾಡುವ ಕೆಲಸ ಮಾಡಿಯೇ ಕುಳಿತುಕೊಳ್ಳಬೇಕು ಎಂದ ದಶರಥ. ರಾಮನ ಭಾವದಲ್ಲಿ ಈಗಲೂ ಕೊಂಚವೂ ಬದಲಾವಣೆಯಿಲ್ಲ. ತಂದೆಗೆ ವಂದಿಸಿ ಮನೆಗೆ ಮರಳಿದವ ಮೊಟ್ಟಮೊದಲು ತಾಯಿಯ ಆಶೀರ್ವಾದಕ್ಕಾಗಿ ಧಾವಿಸಿದ. ಅಲ್ಲಿ ಕೌಸಲ್ಯೆ ದೇವತಾ ಉಪಾಸನೆಯಲ್ಲಿ ಮೈಮರೆತು ತನ್ನ ಮಗನ ಸಿರಿಗಾಗಿ ಬೇಡುತ್ತಿದ್ದಾಳೆ. ಸೀತೆ, ಸುಮಿತ್ರೆ, ಲಕ್ಷ್ಮಣ ಉಪಸ್ಥಿತರಿದ್ದಾರೆ. ಕೌಸಲ್ಯೆಯ ಬಳಿಸಾರಿ ಅಭಿವಂದಿಸಿ ಶುಭವಾರ್ತೆಯನ್ನು ಅರುಹುತ್ತಾನೆ ರಾಮ. ಅಮ್ಮ ತಂದೆಯ ಅಪ್ಪಣೆಯಾಗಿದೆ. ಪ್ರಜಾಪಾಲನೆಯ ಕರ್ತವ್ಯದಲ್ಲಿ ನಿಯೋಜಿಸಿದ್ದಾರೆ. ನಾಳೆಯೇ ಅಭಿಷೇಕವಂತೆ. ಹಾಗಾಗಿ ಧರ್ಮ, ಸಂಪ್ರದಾಯ, ರಾಜ್ಯ ಹಾಗೂ ಕುಲದ ಒಳಿತಿನ ದೃಷ್ಠಿಯಿಂದ ನನಗೂ ಸೀತೆಗೂ ನೀನು ಕರ್ತವ್ಯ ಮಾಡಿಸು ಎಂದು ಎಲ್ಲ ಸಂಪ್ರದಾಯ, ಕರ್ತವ್ಯಗಳ ಬಲ್ಲ ತಾಯಿ ಕೌಸಲ್ಯೆಯಲ್ಲಿ ಕೇಳಿದ.

ಕೌಸಲ್ಯೆಯ ಪ್ರತಿವಚನ ಏನು ಎಂಬುದನ್ನು ನಾಳೆಯ ಪ್ರವಚನದಲ್ಲಿ ನಿರೀಕ್ಷಿಸೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments