ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಹೊರಗಣ್ಣಿಗೆ , ಬರಿಗಣ್ಣಿಗೆ ಚಂದವಾಗಿ ಕಂಡಿದ್ದೆಲ್ಲಾ ಒಳಗಿನಿಂದ ಚಂದವಾಗಿ ಇರಬೇಕು ಅಂತಿಲ್ಲ. ಅಗ್ನಿಪರ್ವತ ಎಲ್ಲಾ ಪರ್ವತಗಳ ಹಾಗೆ ಬಹುಸುಂದರವಾಗಿ ಕಾಣಬಹುದು. ಆದರೆ ಸ್ಫೋಟಿಸಿದರೆ ಲಾವರಸ , ಅಗ್ನಿದ್ರವ. ಸಮುದ್ರ ಎಷ್ಟು ಚಂದ ಕಾಣುತ್ತದೆ ಆದರೆ ಒಳಹೊಕ್ಕರೆ ಮೊಸಳೆ , ತಿಮಿಂಗಿಲ , ಮನುಷ್ಯರನ್ನು ಇಲ್ಲಗೊಳಿಸುವ ದೊಡ್ಡ ದೊಡ್ಡ ಜಲಚರಗಳು ಇರಬಹುದು. ಮಾಯಾಮೃಗ ತುಂಬಾ ಚಂದವೇ ಕಂಡಿದ್ದು ಆದರೆ ಒಳಗಿದದ್ದು ಮಹಾರಾಕ್ಷಸ. ಹಾಗಾಗಿ ಬರಿಗಣ್ಣಿಗೆ , ಹೊರಗಣ್ಣಿಗೆ ಚಂದವಾಗಿ ಕಂಡಮಾತ್ರಕ್ಕೆ ಇದು ಚಂದ , ವೈಭವ ಎಂಬ ತೀರ್ಮಾನಕ್ಕೆ ಬರಬಾರದು.

ಅಯೋಧ್ಯೆಯಲ್ಲಿ ರಾಮನನ್ನು ತನ್ನ ಮನೆಯಿಂದ ತನ್ನ ತಂದೆಯ ರಾಜಭವನಕ್ಕೆ ಕರೆತರಲು ಎಂತಹ ಭವ್ಯ ಮೆರವಣಿಗೆ. ಆನೆ , ಸೇನೆ , ಜನಸ್ತೋಮ, ಮಂಗಳವಾದ್ಯ ಮತ್ತು ಭವ್ಯ ಅಲಂಕಾರವನ್ನು ಪೌರರು ಮಾಡಿದ್ದಾರೆ. ಯಾವಕಡೆ ನೋಡಿದರೂ ಭವ್ಯತೆಯೇ. ರಾಜಭವನದ ಸಮೀಪಕ್ಕೆ ರಾಮ ಬಂದಿದ್ದಾನೆ, ಅಲ್ಲಿ ಉನ್ನತೋನ್ನತವಾದ ರಾಜಭವನಗಳು. ವಾಲ್ಮೀಕಿಗಳು “ಮೇಘ ಸಂಘ” ಎಂದು ವರ್ಣಿಸಿದ್ದಾರೆ. ಒಂದೊಂದು ಭವನವೂ ರತ್ನಜಾಲದಿಂದ ಅಲಂಕೃತಗೊಂಡಿದೆ. ಅಯೋಧ್ಯೆಯನ್ನು ಬರಿಗಣ್ಣಿನಿಂದ , ಹೊರಗಣ್ಣಿನಿಂದ ನೋಡಿದರೆ ಎಷ್ಟು ಚಂದ , ವೈಭವ. ಇನ್ನೇನು ಮಹಾಶುಭವಾಗಲಿಕ್ಕಿದೆಯೋ ಎನ್ನುವಂತಹ ವಾತಾವರಣ. ಆದರೆ ಮುಂದೆ ಸ್ಫೋಟಗೊಳಲಿಕ್ಕಿರುವ ಮಹಾಗ್ನಿ ಒಳಗೆ ಕೊತ ಕೊತ ಕುದಿಯುತ್ತಿದೆ. ಯಾವುದು ಕೊಂಚಹೊತ್ತಿನಲ್ಲಿ ಅಯೋಧ್ಯೆಯ ಎಲ್ಲವನ್ನೂ ಶೋಕಸಾಗರದಲ್ಲಿ ಮುಳುಗಿಸುತ್ತದೆಯೋ , ಎಲ್ಲರೂ ಕಣ್ಣೀರಿಡುತ್ತಾರೋ ಅಂತಹ ಸ್ಥಿತಿಯನ್ನು ಅಯೋಧ್ಯೆಗೆ ಮತ್ತು ಸಜ್ಜನರಿಗೆ ತಂದಿಡುವಂತಹ ಅಗ್ನಿಕೇಂದ್ರಕ್ಕೆ ರಾಮ ಪ್ರಯಾಣ ಮಾಡುತ್ತಿದ್ದಾನೆ. ಈ ಭೂಮಂಡಲದಲ್ಲಿಯೇ ಉತ್ತಮೋತ್ತಮ ಗೃಹದಲ್ಲಿ ಒಂದು ಎನ್ನುವಂತಹ ಮಹೇಂದ್ರಭವನದಂತಿರುವ ರಾಜಭವನಕ್ಕೆ ಪ್ರವೇಶಿಸುತ್ತಾನೆ. ತನ್ನ ಚೆಲುವಿನಸಿರಿಯಿಂದ ಪ್ರಜ್ವಲಿಸುವ, ಕಂಗೊಳಿಸುವ ರಾಮ ರಾಜಭವನವನ್ನು ಪ್ರವೇಶಿಸಿದರೆ ರಾಜಭವನ ರಾಮನ ಮುಂದೆ ಮಂಕಾಯಿತು. ರಾಜನನ್ನು ಕಾಣುವ ಸಮಯದಲ್ಲಿ ಕೆಲವು ಪ್ರಕಾರಗಳನ್ನು ದಾಟಬೇಕು ಹಾಗೆಯೇ ಶ್ರೀರಾಮನು ಮೂರು ಪ್ರಾಕಾರಗಳನ್ನು ರಥದಮೇಲೆ ಕುಳಿತೇ ದಾಟಿದ, ಮತ್ತೆರಡು ಪ್ರಕಾರಗಳನ್ನು ಕಾಲ್ನಡಿಗೆಯಲ್ಲಿ . ಹೀಗೆ ಎಲ್ಲಾ ಕಕ್ಷೆಗಳನ್ನು ಪೂರೈಸಿದ ಬಳಿಕ ಅಂತಃಪುರಕ್ಕೆ ಬಂದನು. ಸಮುದ್ರ ಚಂದ್ರನನ್ನು ಸೇರುವಂತೆ ಹೊರಗೆ ಸಾವಿರ ಸಾವಿರ ಜನಸ್ತೋಮ ಕಾಯುತ್ತಿತ್ತು. ಇತ್ತ ಶ್ರೀರಾಮ ತಂದೆಯ ಬಳಿಗೆ ಹೋಗುತ್ತಾನೆ. ಇನ್ನೂ ಮಾತು ಶುರುವಾಗಿಲ್ಲ, ದಶರಥ ಏನನ್ನೂ ಹೇಳಲಿಲ್ಲ , ರಾಮ ಏನನ್ನೂ ಕೇಳಲಿಲ್ಲ ಆಗಲೇ ವಾತಾವರಣ ಬೇರೆಯಾಯಿತು. ಆಸನದಲ್ಲಿ ಕುಳಿತಿದ್ದ ದಶರಥನನ್ನು ರಾಮ ನೋಡಿದ. ದಶರಥ ಹೇಗಿದ್ದನೆಂದರೆ ವಿಷಾದದ ಮೂರ್ತಿ ಎಂಬಂತೆ, ಕೈಕೇಯಿ ಪಕ್ಕದಲ್ಲಿದ್ದರೂ ಉಲ್ಲಾಸವಿಲ್ಲ , ಮುಖವು ಬಾಡಿಯೇ ಹೋಗಿತ್ತು. ಇದನ್ನೆಲ್ಲಾ ಗಮನಿಸಿದ ರಾಮ ಆದರೆ ಏನೂ ಮಾತನಾಡಲಿಲ್ಲ. ತಂದೆ , ತಾಯಿಗೆ ನಮಸ್ಕರಿಸಿದ. ಈಗ ದೊರೆ ಮಾತನಾಡಬೇಕು , ಕರೆಸಿದ ಕಾರ್ಯವನ್ನು ರಾಮನಿಗೆ ಹೇಳಬೇಕು. ಶಬ್ದಗಳೇ ಸಿಗಲಿಲ್ಲ ಆದರೂ ಒಂದು ಬಾರಿ ಪ್ರಯತ್ನಿಸಿದ “ರಾಮಾ..” ಎಂದು ಪ್ರಾರಂಭಿಸಿದ ಅಷ್ಟೇ. ಮಾತು ನಿಂತೇ ಹೋಯಿತು , ಬಂದಿದ್ದು ಕಣ್ಣೇರು. ಇದುವರೆಗೆ ರಾಮ ನೋಡದ ರೂಪ ದಶರಥನದ್ದು. ಕಣ್ಣು , ಕಿವಿ ಸರಿಯಾಗಿ ಕೆಲಸಮಾಡುತ್ತಿರಲಿಲ್ಲ , ನಿಟ್ಟುಸಿರು ಬಿಡುತ್ತಿದ್ದಾನೆ. ಸಮುದ್ರಕ್ಕೆ ಸುನಾಮಿ ಬಂದಂತೆ , ಸೂರ್ಯನಿಗೆ ಗ್ರಹಣ ಬಂದಂತೆ ದಶರಥನ ಮುಖಭಾವ. ತಂದೆಯನ್ನು ಕಲ್ಪನೆಗೂ ಮೀರಿದ ಸ್ಥಿತಿಯನ್ನು ನೋಡಿ ರಾಮನ ಅಂತರಂಗದಲ್ಲಿ ತಳಮಳ ಉಂಟಾಯಿತು. ತನ್ನನ್ನು ನೋಡಿದಕೂಡಲೇ ಮಾತನಾಡುತ್ತಿದ್ದ ತಂದೆ ಮೌನದಿಂದಿದ್ದಾರೆ. ರಾಮನೆಂಬುದು ದಶರಥನಿಗೆ ದಿವೌಷಧ. ಇಂತಹ ದಶರಥನನ್ನು ನೋಡಿ ರಾಮನಿಗೆ ದೈನ್ಯ, ಶೋಕ ಉಂಟಾಯಿತು. ತಂದೆಯನ್ನು ಕೇಳುವ ಸ್ಥಿತಿಯಲ್ಲಿ ರಾಮ ಇರಲಿಲ್ಲ. ಚಿಕ್ಕತಾಯಿ ಕೈಕೇಯಿಗೆ ನಮಸ್ಕರಿಸಿ ಕೇಳಿದ , ತಿಳಿಯದೇ ನನ್ನಿಂದ ಏನಾದರೂ ತಪ್ಪಾಯಿತೇ? ಅದಕ್ಕೆ ಕೋಪಬಂದಿದೆಯೇ? ನನ್ನ ಪರವಾಗಿ ನೀನು ತಂದೆಯನ್ನು ಸಮಾಧಾನಪಡಿಸು. ಆರೋಗ್ಯಕ್ಕೆ , ಮನಸ್ಸಿಗೇನಾದರೂ ತೊಂದರೆಯೇ? ಅಥವಾ ಭರತನಿಗೆ , ಮಹಾಬಲಶಾಲಿಯಾದ ಶತ್ರುಘ್ನನಿಗೆ ತೊಂದರೆಯೇ? ಅಥವಾ ಅಮ್ಮಂದಿರಿಗೆನಾದರೂ ತೊಂದರೆಯೇ? ಸದಾ ಸುಖವು ದುರ್ಲಭ.

ನನ್ನ ತಂದೆಗೆ ಸಂತೋಷವನ್ನುಂಟುಮಾಡದೆ, ಅವರಿಗೆ ಬೇಸರ ಮಾಡಿ ಒಂದು ನಿಮಿಷವೂ ನಾನು ಬದುಕಲಾರೆ. ಎಲ್ಲಿಂದ ನಾವು ಹುಟ್ಟಿ ಬಂದೇವೋ ಅಲ್ಲಿಯ ಇಚ್ಛೆಯನ್ನು ನಡೆಸಬೇಕು. ತಂದೆ , ತಾಯಿ , ಗುರು ಇವರೆಲ್ಲಾ ಕಣ್ಣಿಗೆ ಕಾಣುವ ದೇವರು; ಇವರಿಗೆ ನಡೆದುಕೊಳ್ಳಬೇಕು ಎಂದು ಚಿನ್ನದಂತ ಮಾತುಗಳನ್ನು ನುಡಿದ. ಅಥವಾ ನನ್ನ ತಂದೆಗೆ ನೀನೇನಾದರೂ ಹೇಳಿಬಿಟ್ಟೆಯಾ? ಅಭಿಮಾನದಿಂದಗಲಿ , ಕೋಪದಿಂದಾಗಲಿ ನೀನೇನಾದರೂ ಹೇಳಿದೆಯಾ? ದಯಮಾಡಿ ಇದ್ದದ್ದನ್ನು ಇದ್ದಂತೆಯೇ ಹೇಳು ಎಂದ.

ಆಗ ಕೈಕೇಯಿ ಹೇಳಿದಳು ರಾಜನಿಗೆ ಕೋಪಬಂದಿಲ್ಲ , ಅವನಿಗೇನು ಕಷ್ಟ ಇಲ್ಲ. ಮನಸ್ಸಿನಲ್ಲಿ ಏನೋ ಇದೆ ಆದರೆ ಹೇಳುವುದಕ್ಕೆ ನಿನ್ನ ಭಯ ಅಡ್ಡಿ. ಏಕೆಂದರೆ ನೀನು ಪ್ರಿಯನಾದವನು ನಿನಗೆ ಅಪ್ರಿಯವನ್ನಾಡಲು ನಿನ್ನ ತಂದೆಗೆ ಮಾತೇ ಬರುತ್ತಿಲ್ಲ. ಅದೇನೇ ಆಗಲಿ ನನಗೆ ದೊರೆ ಕೊಟ್ಟ ಮಾತನ್ನು ನೀನು ನಡೆಸಬೇಕು. ಅದೇನೆಂದರೆ ನಾನು ಕೇಳಿದ ವರವನ್ನು ಈಡೇರಿಸುವುದಾಗಿ ಮಾತು ಕೊಟ್ಟಿದ್ದಾಗಿದೆ. ಧರ್ಮಮೂರ್ತಿಯಾದ ದೊರೆ ಮಾತಿಗೆ ತಪ್ಪಬಾರದು. ಧರ್ಮಕ್ಕೆ ಸತ್ಯವೇ ಮೂಲ. ಸತ್ಯವಿಲ್ಲದೇ ಧರ್ಮವೆಲ್ಲಿ? ಹಾಗಾಗಿ ರಾಜನು ನಿನ್ನಮೇಲಿನ ಮೋಹದಿಂದ ಸತ್ಯವನ್ನು ಬಿಡಬಾರದು. ಕೋಪದಿಂದ ಮಾತುತಪ್ಪಬಾರದು, ಅದೂ ನಿನಗಾಗಿ ಆದರೆ ಎಷ್ಟು ಸರಿ? ದೊರೆ ಹೇಳಿದ್ದು ಶುಭವಾಗಲಿ , ಅಶುಭವಾಗಲಿ ನೀನು ನಡೆಸಿಕೊಡುತ್ತೀಯ ಎಂದಾದರೆ ಹೇಳುತ್ತೇನೆ. ಆಗಬಹುದಾ?

ರಾಮ ಹೇಳಿದ “ಅಯ್ಯೋ ಧಿಕ್ಕಾರ” ಇಂತಹ ಮಾತನ್ನು ಹೇಳಬೇಡ. ನನ್ನ ದೊರೆ ನನಗೆ ಬೆಂಕಿಯಲ್ಲಿ ಬೀಳು ಎಂದರೆ ಬೀಳುತ್ತೇನೆ, ವಿಷಕುಡಿ ಎಂದರೆ ಕುಡಿಯುತ್ತೇನೆ , ಸಮುದ್ರದಲ್ಲಿ ಮುಳುಗು ಎಂದರೆ ಮುಳುಗುತ್ತೇನೆ. ನನಗೆ ಗುರು , ತಂದೆ , ರಾಜ , ಹಿತೈಷಿ ಆತ. ಅವನು ಹೇಳಿದಂತೆ ಮಾಡದೇ ಇರುತ್ತೇನಾ… ಹೇಳು ಏನದು? ನಾನು ನಡೆಸಿಕೊಡುತ್ತೇನೆ. ಇದು ನನ್ನ ಪ್ರತಿಜ್ಞೆ. ರಾಮನಿಗೆ ಎರಡು ಮಾತು ಗೊತ್ತಿಲ್ಲ, ರಾಮ ಯಾವ ಕಾರಣಕ್ಕೂ ಕೊಟ್ಟಮಾತನ್ನು ತಪ್ಪಲಾರ.

ಆಗ ಕೈಕೇಯಿ ವರ ಕೇಳಿದ ಕಥೆಯನ್ನು ರಾಮನಿಗೆ ಹೇಳಿ, ಅದೇನೆಂದರೆ ನಿನ್ನ ತಂದೆ ಸತ್ಯಪ್ರತಿಜ್ಞನಾಗಿರಬೇಕು ಎಂದಾದರೆ ಭರತನಿಗೆ ರಾಜ್ಯಾಭಿಷೇಕವಾಗಬೇಕು ಹಾಗೂ ನೀನು ಜಟಾಮಂಡಲಧರನಾಗಿ , ಹದಿನಾಲ್ಕುವರ್ಷ ಯಾವುದೇ ಊರನ್ನೂ ಪ್ರವೇಶಮಾಡದೆ ವನವಾಸಕ್ಕೆ ತೆರಳಬೇಕು. ಕೋಸಲಪುರದ ಈ ಮೇಧಿನಿಯನ್ನು ಭರತನು ಆಳಬೇಕು. ಇದನ್ನು ನಿನ್ನ ಬಳಿ ಹೇಳಲಾಗದೆ ದೊರೆ ಕಷ್ಟಪಡುತ್ತಿದ್ದಾನೆ. ನೀನು ದೊರೆಯನ್ನು ಸತ್ಯದಪಥದಲ್ಲಿ ನಡೆಯುವಂತೆ ಮಾಡಬೇಕು , ರಾಜನನ್ನು ನರಕದಿಂದ ದಾಟಿಸಬೇಕು.

ಹೀಗೆ ಹೇಳಿದಾಗ ರಾಮನಬಳಿ ಶೋಕವು ಸುಳಿಯಲೇ ಇಲ್ಲ.ಆತ ವ್ಯಥೆಯನ್ನೂ ತಾಳಲಿಲ್ಲ.

ಕ್ರಿಯೆ ನಮ್ಮಕೈಯಲ್ಲಿಲ್ಲ , ಆದರೆ ಪ್ರತಿಕ್ರಿಯೆ ನಮ್ಮಕೈಯಲ್ಲೇ ಇರುತ್ತದೆ. ~ #ಶ್ರೀಸೂಕ್ತಿ

ಸಾವನ್ನು ಹೋಲುವ ಮಾತನ್ನು ಕೇಳಿಯೂ ವ್ಯಥೆಪಡಲಿಲ್ಲ. ಸಹಜವಾಗಿ ಕೈಕೇಯಿಗೆ ಹಾಗೆಯೇ ಆಗಲಿ ಎಂದು ಹೇಳಿದ. ಕಿರೀಟವನ್ನು ತೆಗೆದಿಟ್ಟು, ನಾರುಮಡಿಯಲ್ಲಿ ಇಂದೇ ಹೊರಡುತ್ತೇನೆ ಎಂದ.

ರಾಮ ಕೈಕೇಯಿಗೆ ಹೇಳಿದ , ಅದಿರಲಿ ಇದಕ್ಕಾಗಿ ದೊರೆ ಏಕೆ ಸಂತೋಷದಿಂದ ಇರಬಾರದು? ಅವರೇ ನನಗೆ ಹೇಳಬಹುದಿತ್ತಲ್ಲಾ? ಇರಲಿ ನೀನು ಬೇಸರಗೊಳಬೇಡ. ನಿನ್ನ ಮಾತಿನಂತೆಯೇ ಈಗಲೇ ಕಾಡಿಗೆ ಹೊರಡುತ್ತೇನೆ. ನೀನು ಸಂತೋಷದಿಂದಿರು. ನನಗೆ ನೋವೇನೆಂದರೆ ಭರತನು ದೊರೆಯಾಗುವ ಸಂಭ್ರಮದ ವಾರ್ತೆಯನ್ನು ತಂದೆಯವರೇ ಹೇಳಬಹುದಿತ್ತಲ್ಲಾ . ಯಾವುದೇ ಪ್ರೇರಣೆ ಇಲ್ಲದೆ ನನ್ನ ಪ್ರಾಣದಿಂದಾರಂಭಿಸಿ ಏನನ್ನೂ ಬೇಕಾದರೂ ಭರತನಿಗೆ ಕೊಡುತ್ತೇನೆ. ನೀನು ತಂದೆಯನ್ನು ಸಮಾಧಾನ ಮಾಡು. ದೂತರು ವೇಗವಾಗಿ ಓಡುವ ಕುದುರೆಯನ್ನು ಆಶ್ರಯಿಸಿ ಹೋಗಿ ಭರಥನನ್ನು ಕರೆತರಲಿ ,ಆತನಿಗೆ ರಾಜ್ಯಾಭಿಷೇಕವಾಗಲಿ. ಇನ್ನು ವಿಳಂಬ ಮಾಡದೆ ನಿಮ್ಮ ಮಾತನ್ನು ಪಾಲಿಸುತ್ತೇನೆ.

ಆಗ ಕೈಕೇಯಿ ತುಂಬಾ ಸಂತೋಷದಿಂದ ನೀನು ಹೇಳಿದ್ದು ಸರಿ. ವಿಳಂಬ ಮಾಡುವುದು ಸರಿಯಲ್ಲ. ನೀನು ಈ ಕೂಡಲೇ ಹೊರಡು. ನೀನು ಹೋಗುವವರೆಗೂ ಅವರು ಹೀಗೇ ಇರುತ್ತಾರೆ. ನೀನು ಶೀಘ್ರವಾಗಿ ಹೋಗಿ ಕಾಡನ್ನು ಸೇರುವವರೆಗೂ ದೊರೆ ಸ್ನಾನ , ಊಟ ಮಾಡುವುದಿಲ್ಲ.

ಆಗ ರಾಮ ಹೇಳಿದ ದೇವಿ ಯಾರೋ ಅಂದುಕೊಂಡಂತೆ ನಾನು ಅರ್ಥಪರನಲ್ಲ, ಧರ್ಮವೊಂದನ್ನೇ ಆಶ್ರಯಿಸುವುದರಲ್ಲಿ ಋಷಿಗಳು ಒಂದೇ ನಾನೂ ಒಂದೇ. ತಂದೆಯ ಮಾತನ್ನು ನಡೆಸುವಂತದ್ದು , ಸೇವೆಮಾಡುವಂತದ್ದು ಇದಕ್ಕಿಂತ ದೊಡ್ಡ ಧರ್ಮಾಚರಣೆ ಬೇರೆಯಿಲ್ಲ. ನಾನು ಮಾಡಬೇಕಾಗಿರುವುದು ಇಷ್ಟೇ; ಹೆತ್ತತಾಯಿಗೆ ಹಾಗೂ ಸೀತೆಯನ್ನು ಒಪ್ಪಿಸಬೇಕು. ಈ ಎರಡು ಕಾರ್ಯವನ್ನು ಮಾಡಿ ಹೊರಡುತ್ತೇನೆ. ಭರತ ರಾಜ್ಯವನ್ನಾಳಲಿ. ಆದರೆ ತಂದೆಯನ್ನು ಚನ್ನಾಗಿನೋಡಿಕೊಳ್ಳಲಿ. ಅದು ಸನಾತನ ಧರ್ಮ. ಆಗ ದಶರಥ ದೊಡ್ಡ ಸ್ವರದಲ್ಲಿ ರೋದಿಸುತ್ತಾನೆ. ಆದರೆ ರಾಮ ಇಬ್ಬರಿಗೂ ನಮಸ್ಕರಿಸಿ ಹೊರಟ. ತಂದೆತಾಯಿಗೆ ಪ್ರದಕ್ಷಿಣೆಗೈದು ಹೊರಬಂದ ರಾಮನ ಹಿಂದೆ ಲಕ್ಷ್ಮಣನೂ ಬಂದ . ಅವನ ಮನಸ್ಸಿನಲ್ಲಿ ಪ್ರಳಯಾಗ್ನಿ ಹಾಗೂ ಕಣ್ಣಲ್ಲಿ ನೀರು ಹಾಗೆಯೇ ರಾಮನನ್ನು ಹಿಂಬಾಲಿಸಿದ. ಹೊರಗೆ ಅಭಿಷೇಕದ ಎಲ್ಲಾ ಪರಿಕರಗಳು , ಮಂಗಳದ್ರವ್ಯಗಳಿವೆ. ಅವುಗಳ ಕಡೆಗೆ ಅವನ ದೃಷ್ಟಿಕೂಡಾ ಸುಳಿಯಲಿಲ್ಲ. ಇದು ರಾಮ. ಚಕ್ರವರ್ತಿ ಪದವಿ ತಪ್ಪಿದೆ, ಅಂತಹ ದೊಡ್ಡ ಅನ್ಯಾಯವಾಗಿದೆ ಆದರೆ ರಾಮನ ಮಹಾಶೋಭೆ ಕುಗ್ಗಲಿಲ್ಲ. ರಾಜ್ಯನಾಶಕ್ಕೂ ಕೂಡ ರಾಮನನ್ನು ವಿಚಲಿತಗೊಳಿಸಲಾಗಲಿಲ್ಲ. ” ರಾಜ್ಯನಾಶದಂತಹ ಘೋರ ಕತ್ತಲು ಕವಿದರೂ ಚಂದ್ರನಂತೆ ರಾಮ ಕಂಗೊಳಿಸುತ್ತಲೇ ಇದ್ದ. ವನವಾಸ ನಿಶ್ಚಯಮಾಡಿದ್ದಾನೆ , ರಾಜ್ಯವನ್ನು ತ್ಯಾಗಮಾಡಿದ್ದಾನೆ. ಆದರೆ ಮುಖದಲ್ಲಿ ಮಾತ್ರ ಸ್ವಲ್ಪವೂ ವ್ಯತ್ಯಾಸವಿಲ್ಲ ಏಕೆಂದರೆ ಮನಸ್ಸಿನಲ್ಲಿ ವ್ಯತ್ಯಾಸವಿಲ್ಲ. ಮುಖವೇ ಮನಸ್ಸಿಗೆ ಹಿಡಿದ ಕೈಗನ್ನಡಿ. ಎಲ್ಲಾ ಲೋಕವನ್ನೂ ದಾಟಿನಿಂತವನು, ಎಲ್ಲಾ ಕ್ಲೇಶವನ್ನೂ ಮೀರಿನಿಂತವನು , ಹದಿನಾಲ್ಕು ಲೋಕವನ್ನೇ ದಾಟಿನಿಂತ ಆತನಿಗೆ ಮನಸ್ಸಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ.

ಅಂತಃಪುರದಿಂದ ಹೊರಬಂದ ರಾಮನಿಗೆ ಛತ್ರ , ಚಾಮರ ಸೇವೆಗೈಯಲು ಮುಂದಾದಾಗ ಬೇಡ ಎಂದ. ರಾಜಲಾಂಛನಗಳೆಲ್ಲವನ್ನೂ ಅಲ್ಲಿಯೇ ತಿರಸ್ಕರಿಸಿದ. ಬಳಗದವರನ್ನೆಲ್ಲಾ ಬಿಳ್ಕೊಟ್ಟನು, ತಾನು ವಿಚಲಿತಗೊಂಡರೆ ಅಯೋಧ್ಯೇಯ ಸಜ್ಜನರೆಲ್ಲಾ ದುಃಖಿಸುತ್ತಾರೆಂದು ತನ್ನನ್ನು, ತನ್ನ ಇಂದ್ರಿಯವನ್ನು , ಮನಸನ್ನು ನಿಗ್ರಹಿಸಿ , ಎಲ್ಲರನ್ನೂ ಮಧುರವಾಗಿ ಮಾತನಾಡಿಸುತ್ತಾ ತನ್ನ ತಾಯಿಯ ಮನೆಯತ್ತ ಹೊರಟ. ಅನಿವಾರ್ಯವಾಗಿ ಲಕ್ಷ್ಮಣನೂ ದುಃಖ ಅನುಭವಿಸಿದ. ತನ್ನೆಲ್ಲಾ ದುಃಖವನ್ನು ತನ್ನೊಳಗೆ ಧಾರಣೆ ಮಾಡಿಕೊಂಡ. ಅಣ್ಣನನ್ನು ಹಿಂಬಾಲಿಸಿದ. ರಾಮ ಏನಾದರೂ ವಿಚಾಲಿತನಾದರೆ ಅವನ ನಂಬಿದವರ ಹೃದಯ ಚೂರಾಗುತ್ತದೆ , ಸತ್ತೇ ಹೋಗಬಹುದು. ರಾಮ ಹೊರಟಿದ್ದನ್ನು ನೋಡಿ ಅಂತಃಪುರದ ತಾಯಂದಿರು , ಸ್ತ್ರೀಯರಿಂದ ದೊಡ್ಡ ಆರ್ತನಾದ ಕೇಳಿಬಂತು. ರಾಮ ದೂರ ಹೊರಟು ಹೋಗುತ್ತಾನೆ ಎಂಬುದನ್ನು ಕೇಳಿ ದುಃಖವಾಯಿತು. ಕೌಸಲ್ಯೆಯೊಡನೆ ಹೇಗೆ ನಡೆದುಕೊಳ್ಳುತ್ತಿದ್ದನೋ ನಮ್ಮೊಡನೆಯೂ ಹಾಗೆ ಇದ್ದ. ನಮಗೆ ಗತಿಯಾಗಿದ್ದವನು ಹೊರಟುಹೋಗುತ್ತಾನೆ. ಅಂತಹ ರಾಮನನ್ನು ಕಾಡಿಗಟ್ಟುವ ದೊರೆಗೆ ಬುದ್ದಿ ಇಲ್ಲ ಎಂದು ರೋದಿಸಿದರು. ತನ್ನ ಅಂತಃಪುರದ ಸ್ತ್ರೀಯರ ಆರ್ತನಾದ ಕೇಳಿದಾಗ ತಾನು ಕುಳಿತಿದ್ದ ಆಸನದಿಂದಲೇ ಸೊರಟಿದನಂತೆ ದಶರಥ.

ಅತ್ತ ರಾಮ ಕೌಸಲ್ಯೆಯ ಬಳಿ ಹೋಗುತ್ತಿದ್ದಾನೆ. ಅಂತಃಪುರದ ವೃದ್ಧ ಹಾಗೂ ಅನೇಕರನ್ನ ದಾಟಿ , ದ್ವಿತೀಯ ಕಕ್ಷೆಯಲ್ಲಿದ್ದ ಬ್ರಾಹ್ಮಣರು , ವೇದಸಂಪನ್ನರನ್ನೂ ದಾಟಿ , ತೃತೀಯ ಕಕ್ಷೆಗೆ ತಲುಪಿದ ರಾಮನನ್ನು ವೃದ್ಧೆಯರು ಮತ್ತು ಬಾಲೆಯರು ನೋಡಿದರು. ರಾಮನನ್ನು ಕಂಡ ಬಾಲೆಯರು ಪ್ರಿಯವಾರ್ತೆಯನ್ನು ಕೌಸಲ್ಯೆಗೆ ತಿಳಿಸಲು ಒಳಗೆ ಧಾವಿಸಿದರು. ತನ್ನ ಮಗನ ಸಲುವಾಗಿ ಆಕೆ ಇಡೀ ರಾತ್ರಿ ವ್ರತ ಮಾಡಿ, ತನ್ನ ಮಗನ ಹಿತಕ್ಕಾಗಿ ಬೆಳಿಗ್ಗೆ ಎದ್ದು ವಿಷ್ಣುಪೂಜೆಯನ್ನು ಮಾಡುತ್ತಿದ್ದಾಳೆ. ಬ್ರಾಹ್ಮಣೋತ್ತಮರನ್ನು ಕರೆದು ಹವನವನ್ನು ಮಾಡಿಸುತ್ತಿದ್ದಾಳೆ. ಅಲ್ಲಿ ಮಂಗಳದ್ರವ್ಯಗಳು. ಮೊಸರು , ಅಕ್ಷತೆ, ಹವಿಸ್ಸು, ಸಿಹಿತಿಂಡಿಗಳು, ಇವೆಲ್ಲಾ ತನಗಾಗಿ ಎಂದು ರಾಮನಿಗೆ ಗೊತ್ತು. ತಾಯಿ ಕೌಸಲ್ಯೇ ಬಿಳಿಮಡಿಯನ್ನು ಧರಿಸಿ ಪೂಜೆಗಯ್ಯುತ್ತಿದ್ದಾಳೆ. ತನ್ನ ಮಗನನ್ನು ಕಂಡು ಎದ್ದು ಓಡಿಬರುವ ಆಶ್ವಿನಿಯಂತೆ
ಬಂದು ಮಗನನ್ನು ಬಾಚಿ ತಬ್ಬಿ , ನೆತ್ತಿಯನ್ನು ಆಘ್ರಾಣಿಸಿ ಆಶೀರ್ವದಿಸಿದಳು. ಹಿರಿಯರಾದ ಧರ್ಮರ್ಶಿಗಳು , ವೃದ್ಧರು ,ರಾಜರುಗಳ ಧರ್ಮ , ಆಯಸ್ಸು , ಅವರ ಕೀರ್ತಿ ನಿನಗೆ ಬರಲಿ ಎಂದು ಸಹಜವಾಗಿ ಹೇಳಿದಳು. ಆದರೆ ಈ ಹೊತ್ತಿಗೆ ಇಂತಹ ಮಾತುಗಳಿಗೆ ಬರುವ ಧ್ವನಿಯಾವುದು? ಇಕ್ಷ್ವಾಕು ಕುಲದಲ್ಲಿ ವೃದ್ಧರಾದವರು ವನವಾಸವನ್ನು ಕೈಗೊಳ್ಳುತ್ತಾರೆ. ಅದನ್ನು ಯುವಕನಾಗಿಯೇ ರಾಮ ಮಾಡಿದ. ನಿನ್ನ ತಂದೆ ಆಡಿದ ಮಾತಿಗೆ ತಪ್ಪದೆ ಸತ್ಯದ ಮಾತಿಗೆ ನೆಲೆನಿಲ್ಲುವುದನ್ನು ನೋಡು ಎಂದಳು. ಇಂದು ನಿನಗೆ ಪಟ್ಟಾಭಿಷೇಕವಲ್ಲವೇ? ಒಳ್ಳೆಯದಾಗಲಿ ಎಂದು ಸಹಜವಾಗಿ ಆಶೀರ್ವದಿಸಿದ್ದು ರಾಮನು ಈಗಿರುವ ಸಂದರ್ಭಕ್ಕೆ ಆಶೀರ್ವದಿಸಿದಂತಾಯಿತು. ಆಸನಕೊಟ್ಟು ಕುಳಿತುಕೋ , ಭೋಜನ ಸ್ವೀಕರಿಸು ಎಂದಳು. ಈ ಸಮಯದಲ್ಲಿ ರಾಮನು ತನ್ನ ತಾಯಿಗೆ ಏನನ್ನು ಹೇಳಿದನು? ವಿಷಯವನ್ನು ಕೇಳಿ ಮುಂದೆ ಏನಾಗಬಹುದು? ಆಕೆ ಸಹಿಸಿಕೊಳ್ಳಲಾರಳು ಹೀಗಿದ್ದಾಗ ಅವಳಿಗೆ ರಾಮ ಏನು ಹೇಳಬೇಕು? ಕುಳಿತುಕೊಳ್ಳಲೂ ಸಾಧ್ಯವಿಲ್ಲ , ಊಟಮಾಡಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಿಯಾನು ರಾಮ?

ಜಗತ್ತಿಗೇ ದೊಡ್ಡ ತಾಯಿ , ಜಗತ್ತಿಗೇ ದೊಡ್ಡ ಮಗ. ಆಕೆಯ ಮಾತೃತ್ವ ಧನ್ಯದಲ್ಲಿ ಧನ್ಯ. ದೇವಗರ್ಭವನ್ನು ಹೊತ್ತು ಪುರುಷೋತ್ತಮನನ್ನೇ ಕೆತ್ತಿರುವ ತಾಯಿ ಈ ವಿಕಟ ವಿಷಯವನ್ನು ಹೀಗೆ ಸ್ವೀಕರಿಸಿದಳು? ಆ ಸಮಯದಲ್ಲಿ ರಾಮ ಏನನ್ನು ಹೇಳಿದನು ? ಹೇಗೆ ಕೌಸಲ್ಯೆ, ಲಕ್ಷ್ಮಣನ ಹಾಗೂ ಸುಮಿತ್ರೆಯ ಮನವೊಲಿಸಿದನು ಎಂಬುದನ್ನು ನಾಳೆ ತಿಳಿಯೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments