ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

“ಏನೂ ಆಗಬಹುದು, ರಾತ್ರಿ ಹಗಲಾಗಬಹುದು, ಹಗಲು ರಾತ್ರಿಯಾಗಬಹುದು; ಹಾಗೆಯೇ ನಿತ್ಯ ನಮ್ಮ ಕರೆದುಕೊಂಡು ಹೋಗುವ ರಥ ಕಾಡಿಗೂ ಕರೆದೊಯ್ಯಬಹುದು”… ಪ್ರಕೃತ ರಥವು ಸಿದ್ಧವಾದ ಸಮಯದಲಿ ಈ ಮಾತು ಸುಮಂತ್ರನ ಮನಸಿಗೆ ಬಂದವು.
ನಂತರ 14 ವರುಷ ವನವಾಸ ನಡೆಸಲು ಹೊರಟು ನಿಂತಿಹ ರಾಮನ ಬಳಿ ‘ಏರು ರಥವನ್ನು’ ಎಂದು ಹೇಳಿದಾಗ
ಮೊದಲನೆಯದಾಗಿ ಸೀತೆಯು ಸಂತಸದಿಂದ ನಗುಮೊಗದಲಿ ರಥವನ್ನೇರುವಳು. ಜೊತೆಗೆ ಸೀತೆಗೆ ದಶರಥನು ನೀಡಿದ ಆಭರಣ ಹಾಗೂ ಎಣಿಕೆಮಾಡಿದಂತೆ ನೀಡಿಹ ವಸ್ತ್ರಗಳು, ಶಸ್ತ್ರಾಸ್ತ್ರಗಳ ಪೆಟ್ಟಿಗೆಯನ್ನು ಕೂಡ ರಥದಲ್ಲಿರಿಸಲಾಯಿತು. ಅನಂತರ ರಾಮ ಮತ್ತು ಲಕ್ಷ್ಮಣ ರಥವನ್ನು ಹತ್ತುವರು.

ರಾಮ-ಲಕ್ಷ್ಮಣರು ರಥವೇರಿದಾಗ ವಾಯುವೇಗದಂಥ ಕುದುರೆಗಳಗನು ಸುಮಂತ್ರನು ಮುನ್ನಡೆಸಿದ.
ಆಗ ಅಯೋಧ್ಯೆಯಿಡೀ ಮೂರ್ಛಿತವಾದಂತೆ ಅಂದರೆ ಚೈತನ್ಯವನ್ನು ಕಳಕೊಂಡಿತು. ಕೇವಲ ಅಯೋಧ್ಯೆ ಮಾತ್ರವಲ್ಲ; ಸೇನೆಗೆ ಕೂಡ ಕ್ಲಿಷ್ಟ ಸ್ಥಿತಿ, ಜನರು ಕೂಡ ಕುಂದಿ ಹೋದರು.
ಇತ್ತ ರಾಜ್ಯದ ಸೇನೆಯ ಮಹಾಗಜಗಳು ಕ್ರೋಧಗೊಂಡವು, ಎಲ್ಲೆಲ್ಲೂ ಕುದುರೆಗಳು ವಿಚಲಿತಗೊಂಡವು, ಸಂಪೂರ್ಣ ಅಯೋಧ್ಯೆಗೆ ಅಯೋಧ್ಯೆಯೇ ಅತ್ತಿತ್ತು.

ಮರಳುಗಾಡಿನಲಿ ನೀರು ಕಂಡಾಗ ನೀರಿನ ಬಳಿ ಓಡುವ ಜನರಂತೆ… ಪ್ರಜೆಗಳೆಲ್ಲರೂ ರಾಮರಥ ಮುಂದೋಡಿದಂತೆ ರಥದ ಹಿಂದೆ ಓಡಿದರು. ಮುಪ್ಪಿನ ಮುದುಕರಿಂದ ಹಿಡಿದು ಮಕ್ಕಳವರೆಗೆ, ಇಡೀ ನಗರಕ್ಕೆ ನಗರವೇ ರಾಮನ ಕಡೆಗೆ ಧಾವಿಸಿತು.
ಅನೇಕರು ರಥಕ್ಕೆ ಜೋತು ಬಿದ್ದಿದ್ದರು, ಸಾವಿರ ಸಾವಿರ ಕಣ್ಣುಗಳಿಗೆ ಲಕ್ಷ್ಯ ಒಂದೇ,ಜನರ ಕಣ್ಣುಗಳಲ್ಲಿ ನೀರು ತುಂಬಿತ್ತು. ಜನರು ಆಗ ವೇಗವಾಗಿ ಸಾಗುತಿಹ ರಾಮ ರಥಕ್ಕೆ ಸ್ವಲ್ಪ ಕಡಿವಾಣ ಹಾಕೆಂದು ಸುಮಂತ್ರನಿಗೆ ಮನವಿಯನು ಮಾಡುವರು.

ಇನ್ನೂ ಕೆಲವರು “ಕೌಸಲ್ಯೆಯ ಹೃದಯ ಕಬ್ಬಿಣದ್ದೇ ಇರಬೇಕು” ಎಂದು ಕೌಸಲ್ಯೆಯ ಬಗ್ಗೆ ಮಾತನಾಡಿಕೊಂಡರು.
ಹಾಗೆಯೇ ಸೀತೆ;ಧರ್ಮವನ್ನು ಬಿಟ್ಟಿಲ್ಲ, ಸೂರ್ಯ ಪ್ರಭೆಯು ಮೇರುವನು ಹೇಗೆ ಬಿಡುವುದಿಲ್ಲವೋ ಅದೇ ರೀತಿ ಸೀತೆ ನೆರಳಿನಂತೆ ರಾಮನನ್ನು ಅನುಸರಿಸಿದ್ದಾಳೆ; ಮತ್ತೆ ಇತ್ತ ಲಕ್ಷ್ಮಣ… ಆತ ಅಹೋ ಲಕ್ಷ್ಮಣ ದೇವತೆಯಂಥ ಅಣ್ಣನ ಸೇವೆಯನ್ನು ಬಿಟ್ಟಿಲ್ಲ, ಅಣ್ಣನ ಸೇವೆಯೆಂದರೆ ಆತನಿಗೆ ಸಿದ್ಧಿಯದು ಎಂದೆಲ್ಲಾ ಹೇಳುತ್ತಾ ಜನ ಅತ್ತುಕೊಂಡರು.

ಇತ್ತ ರಾಜ ದಶರಥ ರಾಮನನ್ನು ನೋಡುವುದಕ್ಕೆ ಪತ್ನಿಯರೊಡಗೂಡಿ ಅರಮನೆಯಿಂದ ಹೊರಗೆ ಬರುವನು. ಈ ದೃಶ್ಯವು ವನದ ಗಜವನ್ನು ಕಟ್ಟಿ ಹಾಕಿದಂತೆ ತೋರುತ್ತಿತ್ತು ರಾಜನ ಸ್ಥಿತಿ ಎಂದು ಮಹಾಕಾವ್ಯದಲ್ಲಿ ಉಲ್ಲೇಖಿಸಿದ್ದಾರೆ.
ಅರಮನೆಯ ಹೊರಗೆ ನಿಂತು ರಾಮನನ್ನು ನೋಡುತ್ತಿರುವುದನ್ನು ಗಮನಿಸಿದ ರಾಮನು ಸುಮಂತ್ರನಿಗೆ ಓಡಿಸು ರಥವನು ಎಂದು ಪ್ರಚೋದಿಸುವನು.
ಆಗ ಕೌಸಲ್ಯೆಯು ಗೋಷ್ಠದಲ್ಲಿ ಕಟ್ಟಿದ ಕರುವನು ನೋಡಿದ ತಾಯಿ ಹಸುವಿನಂತೆ ಓಡುತ್ತಿರುವ ರಥದತ್ತ ಓಡೋಡಿ ಬರುವಳು,ಜೊತೆಗೆ ರಾಮ-ಸೀತೆ ಮತ್ತು ಲಕ್ಷ್ಮಣರಿಗಾಗಿ ಕಣ್ಣೀರು ಹಾಕುತ್ತಾ ರಥದ ಹಿಂದೆ ಓಡುವಳು.
ರಥದ ಹಿಂದೆ ಕೌಸಲ್ಯೆಯು ಓಡೋಡಿ ಬರುವುದನು ರಾಮನು ಮತ್ತೆ ಮತ್ತೆ ತಿರುಗಿ ನೋಡುವನು ಮತ್ತು ಅವಳ ಹಿಂದಿನಿಂದ ಧೂಳಿನಲಿ ದೊರೆಯು ಸಹ ಓಡೋಡಿ ಬರುವನು.
ಇತ್ತ ಸುಮಂತ್ರನಿಗೆ ಓಡಿಸು ರಥವನು ಎಂದು ರಾಮನ ಆಜ್ಞೆ, ಒಂದೆಡೆ ರಥ ನಿಲ್ಲಿಸು ಎಂದು ರಾಜನ ಅಪ್ಪಣೆ, ರಥಕ್ಕೆ ಕಡಿವಾಣ ಹಾಕು ಎಂಬ ಪ್ರಜೆಗಳ ಮನವಿ ಮತ್ತೊಂದೆಡೆ ಈ ಮೂರು ರೀತಿಯ ಮಾತುಗಳಲ್ಲಿ ಸುಮಂತ್ರನ ಮನವು ಎರಡು ಚಕ್ರಗಳ ಮಧ್ಯೆ ಸಿಕ್ಕಿದಂತಾಯಿತು.

ಆಗ ರಾಮನು ಸುಮಂತ್ರನಿಗೆ ಪರಿಸ್ಥಿತಿಯನು ಅರ್ಥಮಾಡಿಕೊ, ಇಲ್ಲಿಂದ ಆದಷ್ಟು ಬೇಗನೆ ಕ್ರಮಿಸಿದಷ್ಟು ಒಳ್ಳೆಯದು… ರಥವನು ಓಡಿಸು ಎಂದು ಹೇಳಿದನು.
ಹೀಗೆ ರಥವನ್ನು ಶೀಘ್ರವಾಗಿ ಮುನ್ನಡೆಸುವಾಗ ಜನರು ರಥದ ಹಿಂದೆಯೇ ಧಾವಿಸುತ್ತಿದ್ದರು ಮತ್ತು ಅವರ ಕಾಲುಗಳ ಗತಿಯು ನಿಂತಿದ್ದರೂ ಮನಸು ನಿಂತಿರಲಿಲ್ಲ,ಹಾಗೂ ಕಣ್ಣೀರು ಹಾಕಿತ್ತು.
ಮನೆಯಿಂದ ಯಾರನ್ನಾದರು ಬೀಳ್ಕೊಡುವಾಗ ತುಸು ದೂರ ಅವರೊಂದಿಗೆ ಸಾಗುವುದು ಪದ್ದತಿ. ಆದರೆ ಇಲ್ಲಿ ದೊರೆಯು ರಾಮನ ರಥದ ಹಿಂದೆ ಓಡುವುದ ನೋಡಿ…ರಾಮನು ಬೇಗ ಬರಬೇಕೆಂದಾದರೆ, ನೀನು ಬಹುದೂರ ಸಾಗಬಾರದು ಎಂದು ಅಮಾತ್ಯರು ಹೇಳಿದ ಮಾತನು ಕೇಳಿ ಬೆವೆತಿದ್ದ ದೊರೆಯು ಆಗ ಅಲ್ಲೇ ನಿಂತ.

ಆದರೆ ಇತ್ತ ಅರಮನೆಯಲಿ ರಾಮ-ಮಾತೆಯರ ರೋಧನ ಕೇಳುತ್ತಿತ್ತಲ್ಲದೇ, ಈ ನಿಜವಾದ ಅನಾಥರಿಗೆ ಯಾರು ಗತಿ, ಎಲ್ಲಿ ಹೋದ?? ನಮ್ಮ ರಾಮ!! ಅವನಿಗೆ ಕೌಸಲ್ಯೆಯಲ್ಲಿದ್ದ ಪ್ರೀತಿಯೇ ನಮ್ಮಲ್ಲಿ, ಈ ರಾಜ ಎಂತಹ ಕೆಲಸ ಮಾಡಿದ ಎಂದು ಹೇಳಿ ಅಳುತ್ತಿದ್ದರು. ಇದನ್ನು ಕೇಳಿ ರಾಜನಿಗೆ ದುಃಖವಾಯಿತು.

ಅಯೋಧ್ಯೆಯಲ್ಲಿ ಆಗ ಪರಿಸ್ಥಿತಿ ಹೇಗಿತ್ತೆಂದರೆ: ಅಗ್ನಿ ಹೋತ್ರಗಳು ನಿಂತವು, ಗೃಹಸ್ಥರು ಯಾರು ಅಡಿಗೆಯನು ಮಾಡಲಿಲ್ಲ, ಯಾರೂ ಯಾವ ಕಾರ್ಯವನ್ನೂ ಮಾಡಲಿಲ್ಲ, ಸೂರ್ಯನೇ ಮಂಕಾಗಿ ಹೋಗಿದ್ದ.
ಸೇನೆಯ ಆನೆಗಳು ಬಾಯಲ್ಲಿದ್ದ ಹುಲ್ಲನ್ನು ಬಿಟ್ಟವು, ಹಸುಗಳು ಕರುಗಳಿಗೆ ಹಾಲುಣಿಸಲಿಲ್ಲ.

ಅತ್ತ ಗಗನಾಂಕಣದಲ್ಲಿಯೂ ವಿಕಟಾವಸ್ಥೆ, ಚಂದ್ರನು ಕ್ರೂರಾವಸ್ಥೆಯನು ತಾಳಲ್ಪಟ್ಟ ಗ್ರಹಗಳಿಂದ ಮುತ್ತಲ್ಪಟ್ಟಿದ್ದ, ಕೋಸಲದ ನಕ್ಷತ್ರವಾದ ವಿಶಾಖವನ್ನು ಏನೋ ಹೊಗೆ ಆವರಿಸಿದಂತಿತ್ತು, ಎಂದು ಜಗತೀಪತಿ ರಾಮನ ಕುರಿತಾಗಿ ಶೋಕಿಸುವರು. ಇತ್ತ ಪ್ರಕೃತಿಯು ಶೋಕಿಸಿತು. ಸೂರ್ಯನ ಪ್ರಭೆ ಕುಂದಿತು, ಪ್ರಕೃತಿ ವ್ಯಾಕುಲವಾಯಿತು. ಹೀಗೆ ಎಲ್ಲರೂ ಎಲ್ಲವನು ಬಿಟ್ಟರು.

ಸಂಪೂರ್ಣ ಅಯೋಧ್ಯೆಯೇ ಅಕ್ರಂದಿಸಿತು,ರಾಮ ರಹಿತನಾದ ರಾಜ್ಯವು ಭಯದೊಳು ನಡುಗಿತು.
ರಾಮ ಸಾಗಿದ ಬಳಿಕ ರಥದಿಂದ ಎದ್ದ ಧೂಳನ್ನು ದಶರಥನು ಕಣ್ಣು ಮುಚ್ಚದೇ ನೋಡಿದ. ಯಾವಾಗ ಧೂಳು ಆಡಗಿತೋ ಅಲ್ಲೇ ರಸ್ತೆಯಲಿ ಕುಸಿದ.
ಕುಸಿದು ಬಿದ್ದ ದೊರೆಯನು ಎತ್ತಲು ಕೌಸಲ್ಯೆ ಮತ್ತು ಕೈಕೇಯಿಯು ಬಂದಾಗ ಕೈಕೇಯಿಯಲ್ಲಿ ಮುಟ್ಟದಿರು ನನ್ನನ್ನು, ನಾನು ನಿನ್ನನು ನೋಡಲು ಬಯಸಲಾರೆ, ನೀನು ನನ್ನ ಪತ್ನಿ ಅಲ್ಲ, ನೀನು ಧರ್ಮವನ್ನು ಬಿಟ್ಟಿರುವೆ ಆದ್ದರಿಂದ ನಾನು ನಿನ್ನನು ಬಿಟ್ಟೆ ಎಂದು ಹೇಳಿದನು.

ನಂತರ ನರಾಧಿಪತಿಯಾದ ದಶರಥನನು ಕೌಸಲ್ಯೆಯು ಮೇಲೆಬ್ಬಿಸಿ ಅರಮನೆಯತ್ತ ಕರೆದೊಯ್ಯುವಳು. ಆಗ ದಶರಥನು ರಾಮನನ್ನು, ಸೀತೆಯ ಸ್ಥಿತಿಯನ್ನು ನೆನಪು ಮಾಡಿಕೊಳ್ಳುವನು. ನಿನ್ನೆ ರಾತ್ರಿ ಹಂಸತೂಲಿಕಾ ತಲ್ಪದಲಿ ಮಲಗಿದ್ದ ರಾಮನಿಗೆ ಇಂದು ರಾತ್ರಿ ಯಾವುದೊ ಮರದಡಿ ಆಶ್ರಯ, ತಲೆಯಡಿಗೆ ಮೆತ್ತನೆಯ ದಿಂಬಿಲ್ಲ,ಬದಲಾಗಿ ಮರದ ತುಂಡು ಅಥವಾ ಬಂಡೆಕಲ್ಲು,
ಇತ್ತ ಸೀತೆ ರಾಜಕುವರಿ, ಹೂವಿನ ಮೇಲೆ ನಡೆಯುತ್ತಿದ್ದವಳು ;ಒಂದು ದಿನವೂ ಮುಳ್ಳಲಿ ನಡೆದವಳಲ್ಲ ಎಂದು ಅವರ ಸ್ಥಿತಿಯನು ನೆನಪಿಸಿಕೊಳ್ಳುತ್ತಾನೆ.

ಕೈಕೇಯಿ ನಿನಗೆ ರಾಜ್ಯ ತಾನೇ ಬೇಕಾದದ್ದು, ವಿಧವೆಯಾಗಿ ರಾಜ್ಯವನಾಳೆಂದು ಶಪಿಸುವನು. ಲೋಕನಾಥನಾದ ರಾಮನು ಅನಾಥನಂತೆ ಕಾಡಿನೊಳು ಒಬ್ಬನೇ ಸಂಚರಿಸಬೇಕು ಎಂದೆಲ್ಲಾ ದಶರಥನು ರಾಮನನ್ನು ನೆನೆಯುವನು.
ಅರಮನೆಯತ್ತ ಬಂದ ದಶರಥನಿಗೆ ಮನೆ, ರಾಜ್ಯ ಎಲ್ಲವೂ ಶೂನ್ಯವಾಗಿ ತೋರಿದವು,ಗದ್ಗದಿತನಾಗಿ ಮಾತು ವಿರಳವಾಗಿದೆ. ಶೋಕಿಸುವನು. ಅರಮನೆಯನು ಹೊಕ್ಕ ದಶರಥನು ನನ್ನನ್ನು ರಾಮ-ಮಾತೆಯ ಮನೆಗೊಯ್ಯಿರಿ, ಹೀಗೆ ಆ ದಿನ ರಾತ್ರಿಯು ದಶರಥನಿಗೆ ಕಾಲರಾತ್ರಿಯಾಯಿತು. ಏನೊಂದೂ ಕಾಣಿಸುತ್ತಿಲ್ಲ ನನ್ನ ಕೈಯನ್ನು ಹಿಡಿದಿಕೊ ಎಂದು ಕೌಸಲ್ಯೆಯ ಬಳಿ ಹೇಳುವನು.

ಆಗ ಕೌಸಲ್ಯೆಯು ರಾಮನನ್ನು ಕಾಡಿಗೆ ಅಟ್ಟುವುದು ಎಂದರೆ ರಾಕ್ಷಸರ ಪಾಲಾಗು ಎಂದಂತೆಯೇ, ಯಜ್ಞದಲಿ ನೀಡಿದ ಹವಿಸ್ಸು ರಾಕ್ಷಸರಿಗೆ ನೀಡಿದಂತಾಯಿತು. ನಾನು ಹಿಂದಿನ ಜನ್ಮದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸುವಿನ ಕೆಚ್ಚಲನು ಕಡಿದಿರಬೇಕು ಎಂದೆಲ್ಲಾ ಹೇಳಿ ನೊಂದುಕೊಳ್ಳುವಳು… ಆದರೆ ಇದಾವುದರ ಕಲ್ಪನೆಗಳ ಕೂಡ ಕೈಕೇಯಿಗಿರುವುದಿಲ್ಲ.
ಪುನಃ ರಾಮ ಮತ್ತು ಲಕ್ಷ್ಮಣರು ಸೀತೆಯೊಡಗೂಡಿ ರಾಜ ಮಾರ್ಗದಲಿ ನಡೆದುಕೊಂಡು ಎಂದು ಬರುವರೋ…. ಎಂದು ನೆನೆಯುತ್ತಾ… ಬದುಕಿನಲಿ ಆಸೆಯ ಕಳೆದುಕೊಂಡವಳಂತೆ ಕೌಸಲ್ಯೆಯು ಕಲ್ಪನೆಯನು ಮಾಡುವಳು.

ಮುಂದಿನ ಕಥಾಭಾಗವನ್ನು ಶ್ರೀಸಂಸ್ಥಾನದವರ ನಾಳೆಯ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments