ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

‘ಸಾಂತ್ವನ’ಕ್ಕೆ ಕಟ್ಟಲಾರದಷ್ಟು ಬೆಲೆಯಿದೆ. ಮುಂದೆ ದಾರಿಕಾಣದ ಹೊತ್ತು ಬಂದಿರುವಾಗ, ಧರ್ಮಸಂಕಟದಲ್ಲಿ ಮನಸ್ಸು ತಲ್ಲಣಿಸುತ್ತಿರುವಾಗ, ಯಾಕೆ ಬದುಕಬೇಕು? ಸಾವು ಈಗಲೇ ಬರಬಾರದಾ ಎಂದು ಮನಸ್ಸು ಸಾವಿಗಾಗಿ ಹಪಹಪಿಸುತ್ತಿರುವಾಗ ಹೆಗಲ ಮೇಲೊಂದು ಕೈ, ಸಮಾಧಾನದ ಎರಡು ಮಾತುಗಳು : ಅವುಗಳು ಕಟ್ಟಲಾರದ ಬೆಲೆಯನ್ನು ಹೊಂದಿರುತ್ತವೆ. ಜೀವ & ಜೀವನವನ್ನೇ ಉಳಿಸುತ್ತವೆ.

ಕೌಸಲ್ಯೆಯದ್ದು ‘ನಾನಿನ್ನು ಬದುಕಿರಲಾರೆ’ ಎಂಬ ಸ್ಥಿತಿ. ‘ಬೆಳಕು’ ಅಂತಿದ್ದ ಒಬ್ಬನೇ ಒಬ್ಬ ಮಗ ದೂರವಾದಾಗ, ಬದುಕಿನಲ್ಲಿ ಬೇರೇನೂ ಇಲ್ಲದಾದಾಗ, ಇದ್ದ ಆ ದೊರೆ ಗ್ರಹಣ ತಾಳಿದಾಗ ‘ನಾರೀ-ರತ್ನ’ ಕೌಸಲ್ಯೆ ಹಲುಬುತ್ತಿದ್ದಾಳೆ. ಅವಳನ್ನು ಯಾವಾಗಲೂ ಧರ್ಮದಲ್ಲೇ ನೆಲೆಸಿದ(ಧರ್ಮೇಸ್ಥಿತಾ) ವಳಾದ ಸುಮಿತ್ರೆ ಧರ್ಮಯುಕ್ತವಾದ ಮಾತುಗಳನ್ನು ಹೇಳಿ ಕೌಸಲ್ಯೆಯನ್ನು ಸಂತೈಸುತ್ತಾಳೆ.

ಆಕೆ ಕೌಸಲ್ಯೆಯ ಕುರಿತು ಹೇಳಿದ್ದೇನು? ಮಗನ ಬಗ್ಗೆ ದುಃಖಿಸ್ತಾಯಿದ್ದೀಯೇ, ಏನಾಗಿದೆ ಅಂತ ದುಃಖಿಸ್ತೀಯೇ? ರಾಜ್ಯವನ್ನು ಕಳೆದುಕೊಂಡ ಎನ್ನುವಂಥದ್ದು ನಿನ್ನ ಕಣ್ಣಿಗೆ ಕಾಣ್ತಾ ಇರುವಂಥದ್ದು‌. ಧರ್ಮವನ್ನು ಪಡಕೊಂಡ ಅಂತ ಯಾಕೆ ನಿನಗೆ ಕಾಣ್ತಾ ಇಲ್ಲ? ಪಡಕ್ಕೊಂಡಿದ್ದು ತುಂಬಾ ದೊಡ್ಡದು. ಪಡೆದುಕೊಂಡ ಧರ್ಮ, ಕೀರ್ತಿ, ಸಾರ್ಥಕತೆ ಎಷ್ಟು ದೊಡ್ಡದು!

ಆರ್ಯೇ, ರಾಜ್ಯವನ್ನು ತೊರೆದು ನಿನ್ನ ಮಗ ಕಾಡಿಗೆ ಹೊರಟಾಗ ಮಾಡಿದ್ದು ಸತ್ಯದ ರಕ್ಷಣೆ. ಕುಲದಲ್ಲಿ ಸತ್ಯವು ಉಳಿಯಿತು ಅವನ ತ್ಯಾಗದಿಂದಾಗಿ. ಈ ವರೆಗೆ ಜಗತ್ತಿನಲ್ಲಿ ಶಿಷ್ಟರು ಅಂತ ಯಾರು ಆಗಿ ಹೋಗಿದ್ದಾರೋ, ಅವರೆಲ್ಲರೋ ಎಲ್ಲಕ್ಕಿಂತ ಚೆನ್ನಾಗಿ ಯಾವುದನ್ನು ಆಚರಿಸಿದರೋ, ಯಾವುದಕ್ಕೆ ತಮ್ಮ ಜೀವವನ್ನೇ ಧಾರೆಯಾಗಿ ಎರೆದರೋ ಅಂತದರಲ್ಲಿ ನಾವು ಯಾಕೆ ಮಹಾಪುರುಷರನ್ನ ನೆನಪಿಸಿಕೊಳ್ಳುತ್ತೇವೆ ಅಂದರೆ, ಧರ್ಮಕ್ಕಾಗಿ. ಅವರು ಧರ್ಮವನ್ನು ಬಿಟ್ಟವರಲ್ಲ. ದುಡ್ಡಿನಿಂದ, ಆಕೃತಿ, ಸಂಖ್ಯಾಬಲದಿಂದ ದೊಡ್ಡವರಾಗುವುದಿಲ್ಲ, ಮಹಾಪುರುಷರಾಗುವುದು ಧರ್ಮದಲ್ಲಿ ನೆಲೆನಿಂತಾಗ ಮಾತ್ರ.

ಸತ್ತ ಬಳಿಕವೂ ಯಾವುದು ಒಳಿತು ಮಾಡುತ್ತಿರುವುದೋ, ಆ ಧರ್ಮದಲ್ಲಿ ಸ್ಥಿತರಾದವರಲ್ಲಿ ಶ್ರೇಷ್ಠನೆನಿಸಿಕೊಂಡ ರಾಮ.
ಯಾರು ಸರ್ವಮಾನ್ಯನೋ, ಅವನಿಗಾಗಿ ಶೋಕಿಸಬೇಡ. ಅವನ ಅಷ್ಟು ದೊಡ್ಡ ತ್ಯಾಗಕ್ಕೆ ಅಳು ಖಂಡಿತಾ ಸಲ್ಲ. ನಮ್ಮವರಿಗೆ ಶ್ರೇಯಸ್ಸಾದಾಗ ಅಳುವುದೇತಕೆ?
ಈಗ ಅವನು ಸಂಪಾದಿಸಿದ ಧರ್ಮ ವಂಶಕ್ಕಲ್ಲ, ದೇಶಕ್ಕೆ ಸಾಕು. ಸೀತೆಯಂತಹ ಲಕ್ಷ್ಮಿ, ಲಕ್ಷ್ಮಣನಂತಹ ವೀರಲಕ್ಷ್ಮಿ ಅವನ ಜೊತೆಗಿರುವಾಗ ಅವನು ಒಬ್ಬಂಟಿಯಲ್ಲ.

ರಾಮನ ಕೀರ್ತಿಪತಾಕೆ ಜಗತ್ತಿನೆಲ್ಲೆಡೆ ಹರಡುವಾಗ, ಜನರ ಮನಸ್ಸು, ಬಾಯಿಯಲ್ಲಿ ರಾಮನೇ ತುಂಬಿರುವಾಗ ನಿನಗೆ ರಾಮನೇ ಸಿಕ್ಕಂತಾಗಲಿಲ್ಲವೇ? ರಾಮ ಕಳೆದು ಹೋಗಿಲ್ಲ, ಕಣ್ತೆರೆದು ನೋಡು; ಮೊದಲಿಗಿಂತ ನೂರು-ಸಾವಿರ ಮಡಿಯಾಗಿ ರಾಮ ಸಿಕ್ಕಿದ್ದಾನೆ.

ಅಂತವನಿಗೆ ಕಾಡೂ ಕ್ಲೇಶವುಂಟುಮಾಡದು. ಸೂರ್ಯನಿಗೂ ಬೆಳಕವನು. ಸೂರ್ಯನ ವಂಶವ ಬೆಳಗಿದವ ರಾಮ. ನಿರ್ಮಲ ರಾಮನನ್ನು ಕಂಡಾಗ ಸೂರ್ಯಕಿರಣಗಳು ಸೌಮ್ಯ, ಕೋಮಲವಾಗುವವು. ಸತತವೂ ಮಂಗಲಕರ ಗಾಳಿ ಬೀಸುವುದು. ರಾತ್ರಿಯಾದಾಗ ಚಂದ್ರನು ಆತನನ್ನು ಕಿರಣಗಳಿಂದ ತಬ್ಬುತ್ತಾನೆ. ಘನಪರಾಕ್ರಮಿ ರಾಮನನ್ನು ರಾಕ್ಷಸರು ಮುಟ್ಟಲಾಗುವುದೇ? ತನ್ನದೇ ಬಾಹುಬಲವನ್ನು ಆಶ್ರಯಿಸಿದವನು ನಿಶ್ಚಿಂತೆಯಿಂದ ಇರುತ್ತಾನೆ. ಅಂಥವನು ನಿಶ್ಚಯ ಮಾಡಿ ಎದ್ದರೆ ಏಕಾಂಗಿಯಾಗಿ ಸಮಗ್ರ ಭೂಮಂಡಲವನ್ನು ಒಂದಂಕೆಯಲ್ಲಿ ಆಳಬಲ್ಲ.

ರಾಮನಲ್ಲಿ ಯಾವ ಶೌರ್ಯ, ಮಂಗಲಸತ್ವವನ್ನು ಕಂಡೆನೋ, ಅದರ ಪ್ರಕಾರ ಹೇಳುವುದಾದರೆ ವನವಾಸ ಮುಗಿದು ಮರಳಿ ರಾಮ ರಾಜ್ಯವಾಳುತ್ತಾನೆ. ಸೂರ್ಯನಿಗೇ ಸೂರ್ಯ, ದೇವತೆಗಳಿಗೂ ದೇವತೆಯವನು, ಅಸ್ತಿತ್ವವುಳ್ಳ ಸಕಲ ಜೀವಿ-ವಸ್ತುಗಳಲ್ಲಿ ಉತ್ಕೃಷ್ಟನಾದವನು ರಾಮ. ಆತನೇ ‘ಸಾಮ್ರಾಟ್’. ತಾನೇ ತಾನಾಗಿ ಬ್ರಹ್ಮಾಂಡಕ್ಕೆ ದೊರೆಯವನು.
3 ರಾಣಿಯರ ಜೊತೆಗೆ ಆತನಿಗೆ ಪಟ್ಟಾಭಿಷೇಕವಾಗುವುದು : ವೈದೇಹಿ, ಪೃಥಿವೀ ಮತ್ತು ಲಕ್ಷ್ಮಿ.

ಸೋಲರಿಯದ ದೇವನವನು. ಪುನರಾಗತ ರಾಮನನ್ನು ಕಂಡು ಸಂಭ್ರಮಿಸುವೆ ನೀನು. ಪಟ್ಟಾಭಿಷಿಕ್ತನಾಗುವ ರಾಮನನ್ನು ನೋಡಿ ನೀನು ಆನಂದದ ಕಂಬನಿ ಸುರಿಸುವೆ‌. ನಿನ್ನ ಪಾದಗಳನ್ನೊತ್ತಿ ಹಿಡಿದು ನಮಸ್ಕರಿಸುವನಾತ.

ಈಗ ನೀನೆಲ್ಲರಿಗೂ ಸಮಾಧಾನ ಮಾಡು. ಹೆಮ್ಮೆ ಪಡು! ಸತ್ಪಥದಲ್ಲಿ ನಡೆಯುವವರಲ್ಲಿ ಶ್ರೇಷ್ಠ ಅವನು. ಅಳಬೇಡ ನೀನು..’ ಎಂದಾಗ ಕೌಸಲ್ಯೆಯ ಶೋಕವೆಲ್ಲವೂ ನಿಜವಾಗಿ ಕರಗಿ ಹೋಯಿತಂತೆ ಸುಮಿತ್ರೆಯ ಒಳ್ಳೆಯ ಮಾತುಗಳಿಂದ.
ಜೀವನದಲ್ಲಿ ದುಃಖ ಬಂದಾಗ ನಮಗೆ ಸಾಂತ್ವನ ನೀಡುವವರು ಬೇಕಾಗುತ್ತಾರೆ ~ #ಶ್ರೀಸೂಕ್ತಿ.

ಮಹಾಜ್ಞಾನಿಯಾದ ಕೌಸಲ್ಯೆ ಬದುಕಿದಳು, ಸುಮಿತ್ರೆಯಂತಹ ಧರ್ಮಿಷ್ಠೆಯ ಮಾತುಗಳಿಂದ.

ರತ್ನವು ಕೈಯ್ಯಲ್ಲಿದ್ದರೆ ಸಾಲದು, ಬೆಲೆ ಗೊತ್ತಿರಬೇಕು ~ #ಶ್ರೀಸೂಕ್ತಿ.
ಬೇಕು ಸುಮಿತ್ರೆಯಂಥಾ ಮಿತ್ರರು, ಹಿತೈಷಿಗಳು.

ಅತ್ತ, ರಾಮನನ್ನು ಪ್ರಜೆಗಳು ಹಿಂಬಾಲಿಸ್ತಾ ಇದ್ದಾರೆ! ಒತ್ತಾಯಪೂರ್ವಕವಾಗಿ ನಿಲ್ಲಿಸಲಾರದ ರಾಮನ ಅತೀ ಹತ್ತಿರದ ಬಳಗ ಮಾತ್ರ ಹಿಂದಿರುಗಿದ್ದಾರೆ. ಉಳಿದವರು ವಾಯುವೇಗದಲ್ಲಿ ಓಡುವ ರಥದ ಹಿಂದೆ ತಾವೂ ಅಯೋಧ್ಯೆಗೇ ಚಂದ್ರನಾದ ರಾಮಚಂದ್ರನನ್ನು ಹಿಂಬಾಲಿಸುತ್ತಾರೆ. ಆದರೆ ಜನ್ಮ ಕೊಟ್ಟ ತಂದೆಯ ನಾಲಿಗೆಯನ್ನುಳಿಸುವ ಸಲುವಾಗಿ ಕಾಡಿಗೇ ನಡೆದ ರಾಮ.

ಪ್ರಜೆಗಳನ್ನು ತಡೆಯುವ ಸಲುವಾಗಿ ಅವರೆಡೆಗೆ ಹಿಂದಿರುಗಿ, ಎಲ್ಲ ಪ್ರಜೆಗಳ ಮೇಲೆ ಸ್ನೇಹ, ಪರಮಪ್ರೇಮದ ದೃಷ್ಟಿ ಹರಿಸಿದ, ಕಣ್ಣಿನಿಂದಲೇ ಎಲ್ಲರನ್ನೂ ಸವಿಯುವವನಂತೆ ಮಾತನಾಡಿದ: “ಎಷ್ಟು ದೊಡ್ಡ ಪ್ರೀತಿಯನ್ನು, ಬಹುವಾಗಿ ಮಾನಿಸುವಂಥದ್ದನ್ನು ನನ್ನ ಬಗ್ಗೆ ಇಟ್ಟಿದ್ದೀರಿ? ನನ್ನ ಪ್ರೀತಿಗಾಗಿ ಏನನ್ನೂ ಮಾಡುವ ನೀವು, ನನ್ನ ಮೇಲಿನ ಪ್ರೀತಿಯನ್ನು ಭರತನಲ್ಲಿಡಿ. ಅವನದಕ್ಕೆ ಅರ್ಹ; ಅವನ ನಡವಳಿಕೆ ಕಲ್ಯಾಣ! ನಿಮ್ಮ ಪ್ರಿಯ-ಹಿತಗಳನ್ನಾತ ಸಾಧಿಸಿಕೊಡುತ್ತಾನೆ. ನಾನು ಹೇಳ್ತೇನೆ.

ಹಿತವಾದದ್ದು ಪ್ರಿಯವಾದರೆ ಜೀವನ ಸುಖ ~ #ಶ್ರೀಸೂಕ್ತಿ

ರಾಮನಷ್ಟು ದೊಡ್ಡ ಮನಸ್ಸು ಯಾರಿಗೂ ಇರಲಾರದು ~ #ಶ್ರೀಸೂಕ್ತಿ

‘ಜ್ಞಾನವೃದ್ಧಃ ವಯೋಬಾಲಃ’
~ ಜ್ಞಾನ ಉಳ್ಳವನು, ಮೃದು ಸ್ವಭಾವ ಭರತನದು. ಕಠೋರನಲ್ಲ, ವೀರಗುಣವಂತ. ನಿಮಗೆ ಸರಿಯಾದ ದೊರೆಯಾಗುತ್ತಾನೆ. ಭಯಗಳಿಂದ ಕಾಪಾಡುತ್ತಾನೆ, ಧರ್ಮರಾಜನಾಗುತ್ತಾನೆ ರಾಜಗುಣಗಳಿಂದ ಕೂಡಿದ ನನ್ನ ತಮ್ಮ. ದೊರೆಯ ಅಪ್ಪಣೆಯನ್ನು ಪ್ರಜೆಗಳು ನೀವೆಲ್ಲ, ನಾನು ಹೇಳಿದ ಮೇಲಂತೂ ಪಾಲಿಸಲೇಬೇಕಲ್ಲ! ಈವರೆಗೆ ನಿಮ್ಮನ್ನು ಕಾಪಾಡಿದ ದೊರೆ ದಶರಥನಿಗೆ, ನನ್ನ ವಿರಹದಲ್ಲಿ ವಿಪತ್ತಾಗದಂತೆ ನೋಡಿಕೊಳ್ಳುವಿರಲ್ಲಾ..?! ಎಂದು ಕೇಳಿದ. ಗುಣಗಳಿಂದ ಕಟ್ಟಿ ಸೆಳೆದನು ರಾಮ ತನ್ನ ಪ್ರಜೆಗಳನ್ನು. ಕಣ್ಣೀರಿನ ಜೊತೆಗೆ ರಾಮನತ್ತ ಪ್ರಜೆಗಳು ಆಕರ್ಷಿತರಾದರು‌.

ಏತನ್ಮಧ್ಯೆ, ದೂರದಿಂದ ಜ್ಞಾನವೃದ್ಧರು, ವಯೋವೃದ್ಧರು, ಅಲೌಕಿಕ ಬಲ ವೃದ್ಧರು ಆಗಿದ್ದ ಮುಪ್ಪಿನ ಬ್ರಾಹ್ಮಣೋತ್ತಮರು ಕುದುರೆಗಳನ್ನು ಕರೆದರು. ಕುದುರೆಗಳ ಕಿವಿ ಅತೀ ಸೂಕ್ಷ್ಮ.
ವಿಪ್ರೋತ್ತಮರು, ‘ಕುದುರೆಗಳೇ, ಹಿಂದಿರುಗಿ. ಧರ್ಮದಿಂದ ಶುದ್ಧಾತ್ಮ, ನಿಯಮಪಾಲಕ, ವ್ರತಪಾಲನೆ ಮಾಡುವವ ಅವನನ್ನು ನೀವು ಕರೆತರಬೇಕೇ ಹೊರತು, ಕರೆದೊಯ್ಯಬಾರದು’ ಎಂದು ಹೇಳುತ್ತಾ ಧಾವಿಸಿ ಬರುತ್ತಿದ್ದಾರೆ.

ಅದು ತಲುಪಿದ್ದು ರಾಮನಿಗೆ. ಆ ಆರ್ತಪ್ರಲಾಪ ಕಂಡಾಗ ಲಗುಬಗೆಯಲ್ಲಿ ರಾಮ ರಥದಿಂದ ಕೆಳಗಿಳಿದ. ಮೆಲ್ಲಮೆಲ್ಲನೆ ನಡೆಯುತ್ತಾ ಅವರನ್ನು ಸಂಧಿಸಿದ. ಅವರು, ‘ಬ್ರಾಹ್ಮಣ್ಯವೆಲ್ಲವೂ ಬ್ರಹ್ಮಕುಲಕ್ಕೆ ರಕ್ಷಣೆಯಾದ ನಿನ್ನನ್ನು ಹಿಂಬಾಲಿಸುತ್ತಿದೆ. ಸದಾಕಾಲವೂ ವೇದಮಂತ್ರಸಾರಿಣಿಯಾದ ನಮ್ಮ ಬುದ್ಧಿಯು ವನವಾಸಸಾರಿಣಿಯಾಯಿತು. ವೇದಗಳೆಲ್ಲವೂ ನಮ್ಮ ಹೃದಯದಲ್ಲೇ ಇವೆ.
ಸತ್ಪುರುಷರ ಪಾಲಿಗೆ ಅವಿನಾಶಿಯಾದ ಸಂಪತ್ತು ವಿದ್ಯೆ. ನಮ್ಮ ಪತ್ನಿಯರು ಸ್ವಗೃಹದಲ್ಲಿ ಕ್ಷೇಮವಾಗಿರುತ್ತಾರೆ. ಸ್ತ್ರೀಯಾದವಳಿಗೆ ಚಾರಿತ್ರ್ಯವೇ ರಕ್ಷಣೆ. ಬೇಡಿಕೊಳ್ಳುತ್ತೇವೆ, ಹಿಂದಿರುಗು.
ಸ್ಥಾವರ – ಜಂಗಮಕ್ಕೂ ಭಕ್ತಿ ನಿನ್ನಲ್ಲಿ, ಅವರ ಭಕ್ತಿಗೆ ಕರಗು.

ಒತ್ತಡ ಹೇಗಿತ್ತೆಂದರೆ, ರಾಮನುಳಿದು ಮತ್ಯಾರೇ ಆಗಿದ್ದರೂ ವನವಾಸಕ್ಕೆ ಹೋಗುತ್ತಿರಲಿಲ್ಲ.

ರಾಮನ ದಿಕ್ಕಿಗೆ ವಾಲಿದ ಮರಗಳು, ಅದೇ ದಿಕ್ಕಿನಲ್ಲಿ ಬೀಸುತ್ತಿದ್ದ ಗಾಳಿಯನ್ನು, ಚಲನೆಯಿಲ್ಲದೆ ಕುಳಿತಿರುವ ಪಕ್ಷಿಗಳನ್ನು ತೋರಿಸುತ್ತಾ,’ ಅವುಗಳಿಗೇನು ಗತಿ? ನೀನು ಇಲ್ಲಿಯೇ ಇರಬೇಕು. ಸರ್ವಾನುಕಂಪಿ ನೀನು’ ಎಂದು ಒತ್ತಾಯಿಸುತ್ತಿದ್ದಾಗಲೇ ಮುಂದಿನಿಂದಲೂ ಯಾರೋ ಬಂದು ರಾಮನನ್ನು ತಡೆದರಂತೆ. ನಿಂತನಂತೆ ರಾಮ ಅಲ್ಲಿ.

ಯಾರೋ ಬಂದು ನಿಲ್ಲಿಸಿದ್ದಾರೆ ರಾಮನನ್ನು. ನೀವು ಕಲ್ಪಿಸಲೂ ಸಾಧ್ಯವಿಲ್ಲದವರೊಬ್ಬರು. ಅದಾರೆಂದು ತಿಳಿಯುವುದು ಶ್ರೀಸಂಸ್ಥಾನದವರು ಅನುಗ್ರಹಿಸುವ ನಾಳಿನ ಪ್ರವಚನದಲ್ಲಿ…

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments