ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ವಿಷಯ ಪ್ರಿಯ ಅಲ್ಲದೇ ಇದ್ದರೂ ಮಾತನಾಡಲೇಬೇಕಾದ ಸಂದರ್ಭಗಳು ಜೀವನದಲ್ಲಿ ಬರುತ್ತವೆ. ಮಾತನಾಡಿದರೆ ನೋವಾಗುತ್ತದೆ. ಆದರೆ ಮಾತನಾಡದೆ ಬೇರೆ ದಾರಿಯೇ ಇಲ್ಲವಾಗುವುದುಂಟು. ಇದೀಗ ತಾನೇ ದಶರಥನಿಗೆ ಪ್ರಜ್ಞೆ ತಪ್ಪಿದೆ. ಗಂಗಾ ತಟದಲ್ಲಿ ರಾಮನನ್ನು ಬಿಟ್ಟು ಅಡವಿಯಿಂದ ಹಿಂದಿರುಗಿ ಬಂದ ಸುಮಂತ್ರನಿಂದ ರಾಮನ ಸಂದೇಶವನ್ನು ಕೇಳಿ, ದಶರಥನು ಇನ್ನು 14 ವರ್ಷ ರಾಮನಿಲ್ಲ ಎಂಬ ಶೋಕದಿಂದ ಎಚ್ಚರತಪ್ಪಿದವನು ಎದ್ದು ಮತ್ತೆ ಸುಮಂತ್ರನನ್ನು ಕರೆಸಿದನು.
ದಶರಥನು ರಾಮನ ವೃತ್ತಾಂತವನ್ನು ಸುಮಂತ್ರನಲ್ಲಿ ಕೇಳಿದನು. ಸುಮಂತ್ರನು ರಾಜನ ಮುಂದೆ ಕೈಮುಗಿದು ಕುಳಿತ. ಸ್ವತಂತ್ರವಾಗಿ ಸಂಚರಿಸುತ್ತಿರುವ ಕಾಡಾನೆಯು ಬಂಧನಕ್ಕೆ ಒಳಪಟ್ಟಾಗ ಹೇಗೇ ಚಡಪಡಿಸುತ್ತದೆಯೋ ಹಾಗೆ ದೊರೆಯು ಚಡಪಡಿಸುತ್ತಿದ್ದ. ಎರಡು ದಿನದಿಂದ ರಥದಲ್ಲಿ ಪ್ರಯಾಣ ಮಾಡಿ ಬಂದ ಸುಮಂತ್ರನಲ್ಲಿ ದೊರೆಯು ಧರ್ಮಮೂರ್ತಿಯಾದ, ತನ್ನ ಮಗ ರಾಮ ಕಾಡಿನಲ್ಲಿ ಯಾವ ಮರದ ಬುಡದಲ್ಲಿ ಮಲಗಿದ?.. ರಾತ್ರಿ ಏನನ್ನು ಸೇವಿಸಿದ?.. ಎಂದು ಪ್ರಶ್ನಿಸಿದನು.
ಯಾರು ರಥದ ಮೇಲೆ ಕುಳಿತು ಬರುವಾಗ ಹಿಂದೆ ಚದುರಂಗ ಸೇನೆ ಇರುತ್ತಿತ್ತೋ ಅಂತವನು ನಿರ್ಜನವಾದ ಕಾಡಿನಲ್ಲಿ ಹೇಗೆ ಇದ್ದಾನೆ ??.. ಎಂದು ಕೇಳಿದನು.
ಮಂದರ ಪರ್ವತಗಳನ್ನು ಪ್ರವೇಶಿಸುವ ಅಶ್ವಿನಿ ದೇವತೆಗಳಂತೆ ಕಾಡನ್ನು ಪ್ರವೇಶಿಸುವ ರಾಮ ― ಲಕ್ಷ್ಮಣರನ್ನು ಕಂಡವನು ನೀನು ಧನ್ಯ ಎಂದು ದಶರಥನು ಸುಮಂತ್ರನಿಗೆ ಹೇಳಿದನು. ಕಾಡು ಸೇರಿದ ಸೀತಾರಾಮರು ಏನೆಂದರು ?.. ನಾನಿನ್ನು ಬದುಕುವುದು ಅವರ ವಾರ್ತೆಕೇಳಿ ಮಾತ್ರ ಎಂದನು.

ಕಷ್ಟ ಮತ್ತು ಸುಖ ಎರಡರಲ್ಲಿಯೂ ಧರ್ಮವನ್ನೇ ಆಶ್ರಯಿಸಬೇಕು ― ಶ್ರೀಸೂಕ್ತಿ.

ಗಂಟಲು ಕಟ್ಟಿದ, ಸ್ವರ ಗದ್ಗರಿಸಿದ, ಕಣ್ಣೀರು ತುಂಬಿದ ಸುಮಂತ್ರನು ಮಹಾರಾಜನಿಗೆ ಉತ್ತರಿಸಿದನು. ಧರ್ಮಾತ್ಮನಾದ ರಾಮನು ನನಗೆ ಅಯೋಧ್ಯೆಗೆ ಮರಳಿ ದೊರೆಯ ಹಾಗೂ ಅಂತಃಪುರದ ಎಲ್ಲ ತಾಯಂದಿರಿಗೆ ವಂದಿಸಿ, ಆರೋಗ್ಯವನ್ನು ಕೇಳು ಎಂದು ಹೇಳಿದ್ದಾನೆ ಮತ್ತು ಕೌಸಲ್ಯೆಗೆ ವಿಶೇಷವಾಗಿ ವಂದನೆ ಮಾಡಿ, ಧರ್ಮವನ್ನು ಆಶ್ರಯಿಸಿಕೊಂಡು ದೊರೆ, ಕೈಕೇಯಿ ಮತ್ತು ಭರತನ ಜೊತೆಗೆ ಚೆನ್ನಾಗಿ ಇರಲು ಕೌಸಲ್ಯೆಗೆ ಹೇಳು ಎಂದು ರಾಮ ಹೇಳಿದ್ದನ್ನು ದೊರೆಯ ಮುಂದೆ ಸುಮಂತ್ರನು ಹೇಳಿದನು.

ರಾಜನಿಗೆ ರಾಜತ್ವವು ಜ್ಯೇಷ್ಠತೆಯಿಂದ ಬರುತ್ತದೆ ― ಶ್ರೀಸೂಕ್ತಿ.

ಪರಿಸ್ಥಿತಿಗೆ ಅನುಗುಣವಾಗಿ ಬದುಕಬೇಕು. ನಾವು ಇರೋದೇ ಹೀಗೆ ಎಂದು ಬದುಕಿದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ನಾವು ಸನ್ನಿವೇಶಕ್ಕೆ ತಕ್ಕಂತೆ ಕಾಲ―ದೇಶವನ್ನು ಅನುಸರಿಸಿ ಬದುಕಬೇಕು ―ಶ್ರೀಸೂಕ್ತಿ.

ಭರತನಿಗೂ ಕುಶಲವನ್ನು ಕೇಳಿ , ಎಲ್ಲ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಲು ಮತ್ತು ತಂದೆಯ ಮಾರ್ಗದರ್ಶನದಂತೆ ರಾಜ್ಯಭಾರ ಮಾಡಲು ಭರತನಿಗೆ ಹೇಳಿರುವುದನ್ನು ದೊರೆಯ ಮುಂದೆ ಹೇಳಿದನು.
ಯುವರಾಜನಾದವನು ಮಹಾರಾಜನನ್ನು ಉಪೇಕ್ಷಿಸಬಾರದು ― ರಾಜಧರ್ಮ.
“ನನ್ನ ತಾಯಿಯೂ ಇನ್ನು ಮುಂದೆ ನಿನ್ನ ತಾಯಿಯೂ ಹೌದು”. ಅವಳನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಿನ್ನದು ಎಂದು ರಾಮನು ಕಣ್ಣಿರಿಡುತ್ತಾ ತನಗೆ ಹೇಳಿದ ಮಾತನ್ನು ಸುಮಂತ್ರನು ನೆನಪಿಸಿಕೊಂಡನು.

ಭಾವನೆಗಳಿಗಿಂತ ಧರ್ಮವೇ ಶ್ರೇಷ್ಠ. ನಮ್ಮ ಯಾವ ಭಾವನೆಗಳೂ ಧರ್ಮವನ್ನು ಬಿಡಬಾರದು ―ಶ್ರೀಸೂಕ್ತಿ.

ಸರ್ಪ ಬುಸುಗುಟ್ಟುವ ಹಾಗೆ ಸಿಟ್ಟಿಗೆದ್ದ ಲಕ್ಷ್ಮಣ ಯಾವ ಕಾರಣಕ್ಕಾಗಿ ತನ್ನ ಅಣ್ಣನನ್ನು ಕಾಡಿಗೆ ಕಳುಹಿಸಲಾಯಿತು?..
ಕೈಕೆಯಿಯ ಲೋಭದ ಕಾರಣಕ್ಕೆ , ಅವಳದ್ದೇ ಲಘುಶಾಸನವನ್ನು ಆಶ್ರಯಿಸಿ ದೊರೆಯು ಇಂತಹ ತೀರ್ಮಾನ ಮಾಡುವುದು ಸರಿಯಾ?..
ಈ ಕಾರ್ಯದಿಂದಾಗಿ ದೊರೆಯಲ್ಲಿ ನನಗಿನ್ನು ಪಿತೃತ್ವದ ಭಾವ ಉಳಿದಿಲ್ಲ , ನನಗೆ ಇನ್ನು ಮುಂದೆ ಅಣ್ಣ , ತಂದೆ ಎಲ್ಲ ರಾಮನೇ ಎಂದು ತೀಕ್ಷ್ಣವಾದ ಲಕ್ಷ್ಮಣನ ಸಂದೇಶವನ್ನು ದೊರೆಗೆ ಸುಮಂತ್ರನು ಹೇಳಿದನು.

ಲಕ್ಷ್ಮಣನ ರಾಮಪ್ರೇಮ ಜಗತ್ತಿಗೆ ಮಾದರಿ ―ಶ್ರೀಸೂಕ್ತಿ.

ಮಾತನ್ನು ಮುಂದುವರೆಸಿದ ಸುಮಂತ್ರನು ನಿಶ್ಚಲತೆ, ಮೌನಗಳೇ ಸೀತೆಯ ಸಂದೇಶ ಎಂದು ದೊರೆಗೆ ಹೇಳಿದನು. ತನ್ನ ಬಾಂಧವರ ಸಂದೇಶಗಳನ್ನು ಆಲಿಸಿದ ದೊರೆಯು ದುಃಖತಪ್ತನಾಗಿ ಮತ್ತೇನಾಯಿತು ಹೇಳು ಎಂದು ಸುಮಂತ್ರನನ್ನು ಪ್ರಶ್ನಿಸಿದಾಗ , ಲಕ್ಷ್ಮಣ, ರಾಮ―ಸೀತೆಯರು ಪ್ರಯಾಗದ ಕಡೆ ಪ್ರಯಾಣ ಮುಂದುವರೆಸಿದರು ಎಂದು ಉತ್ತರಿಸಿದನು. ಸುಮಂತ್ರನು ಮರುಳುವಾಗ ರಥದ ಕುದರೆಗಳಿಗೂ ರಾಮನನ್ನು ಬಿಟ್ಟು ಬರಲಾಗದೆ, ಹೊರಡಲು ಸಿದ್ಧವಾಗದೇ ಕಣ್ಣೀರಿಟ್ಟವು. ಇಲ್ಲಿ ಅಯೋಧ್ಯೆಯ ಸಕಲ ಪ್ರಜೆಗಳಿಗೆ ಹಾಗೂ ಪ್ರಾಣಿಗಳಿಗೆ ರಾಮನ ಮೇಲಿದ್ದ ಪ್ರೀತಿಯನ್ನು ಕಾಣಬಹುದು.
ದೊಡ್ಡವರ ದೊಡ್ಡತನದ ವ್ಯಾಪ್ತಿ ಅಣುರೇಣು ತೃಣ ಕಾಷ್ಠದವರೆಗೆ ರಾಮನಿಲ್ಲದೇ ಇರುವ ಶೋಕವನ್ನು ನದಿ, ಕೊಳ, ಸರೋವರ, ಮರ―ಗಿಡ, ಪ್ರಾಣಿಗಳಲ್ಲಿಯೂ ಕಾಣಬಹುದಾಗಿತ್ತು.

ಧರ್ಮಾತ್ಮರಿಗೆ ಕಷ್ಟ ಬಂದಾಗ ಪ್ರಕೃತಿಯೂ ಸ್ಪಂದಿಸುವುದು ― ಶ್ರೀಸೂಕ್ತಿ.

ರಾಮಶೂನ್ಯವಾದ ಸುಮಂತ್ರನ ರಥವನ್ನು ಕಂಡ ಜನರು ಕಣ್ಣೀರಿಟ್ಟರೆ, ನಾರಿಯರು ಹಾಹಾಕಾರವನ್ನೇ ಮಾಡಿದರು.
ಅಯೋಧ್ಯೆಯಲ್ಲಿ ರಾಮನು ಕಾಡಿಗೆ ಹೋದ ದುಃಖವು ಎಲ್ಲರಲ್ಲಿಯೂ ಸಮಾನವಾಗಿದೆ ಎಂದು ಹೇಳುತ್ತಾ ಅಯೋಧ್ಯೆಯೇ ಕೌಸಲ್ಯೆಯಂತೆ ಕಾಣುತ್ತಿದೆ ಎಂದು ಸುಮಂತ್ರನು ಹೇಳಿದನು.
ಇದನ್ನು ಕೇಳಿದ ರಾಜಾ ದಶರಥನು ಕಣ್ಣೀರಿಡುತ್ತಾ , ಸಮಾಲೋಚನೆ ಮಾಡದೆ ಕೈಕೆಯಿಯ ಮಾತನ್ನು ಪಾಲಿಸಿದ್ದಕ್ಕೆ ಇಷ್ಟೆಲ್ಲ ಆಯಿತು ಎಂದು ಶೋಕಿಸುತ್ತಾ ತನ್ನನ್ನು ರಾಮನಲ್ಲಿಗೆ ಕರೆದೊಯ್ಯಲು ಸುಮಂತ್ರನಿಗೆ ಹೇಳಿದನು.

ಇದನ್ನೆಲ್ಲ ಕೇಳಿದ ಕೌಸಲ್ಯೆಯು ತನ್ನನ್ನು ಈ ಕ್ಷಣವೇ ರಾಮನಿರುವಲ್ಲಿಗೆ ಕರೆದುಕೊಂಡು ಹೋಗು, ರಾಮನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಶೋಕಿಸಿದಾಗ ಸಮಂತ್ರನು ರಾಮನು ಭಯ, ಶೋಕವಿಲ್ಲದೆ ಚೆನ್ನಾಗಿದ್ದಾನೆ, ಲಕ್ಷ್ಮಣನು ರಾಮನ ಪಾದಸೇವೆಯನ್ನು ಮಾಡುತ್ತಿದ್ದಾನೆ. ಸೀತೆಯು ನಿರ್ಜನವಾದ ಕಾಡಿನಲ್ಲಿಯೂ ಮನೆಯಲ್ಲಿ ಇದ್ದಂತೆ ಇದ್ದಾಳೆ. ಅವಳು ತನ್ನ ಮನಸ್ಸನ್ನು ರಾಮನಲ್ಲಿ ಇಟ್ಟಿದ್ದರಿಂದ ಯಾವ ಶೋಕವು ಬಾಧಿಸುವುದಿಲ್ಲ. ಸೀತೆಯು ಕೈಕೇಯಿಯ ಬಗ್ಗೆ ಆಡಿದ ಮಾತುಗಳನ್ನು ಬಾಯಿತಪ್ಪಿ ಬಂದರೂ ಹೇಳದೆ ಸಂತೋಷದ ವಿಚಾರಗಳನ್ನು ಮಾತ್ರ ಹೇಳಿದನು. ಸೀತೆಯು ಕಾಡಿಗೆ ಹೋಗುವಾಗ ಆಭರಣವನ್ನು ಹಾಕಿಕೊಂಡರೂ ಅದು ರಾಮನಿಗಾಗಿ, ತೆಗೆದಿಟ್ಟರೂ ರಾಮನಿಗೆ ಇಲ್ಲದ್ದು ತನಗೆ ಬೇಡ ಎನ್ನುವ ಭಾವ ಎಂದು ಸೀತೆಯ ಮನಸ್ಸನ್ನು ಸುಮಂತ್ರನು ವರ್ಣಿಸಿ , ದೊರೆಯನ್ನು ಮತ್ತು ಕೌಸಲ್ಯೆಯನ್ನು ಉಳಿಸುವ ಪ್ರಯತ್ನವನ್ನು ಮಾಡಿದನು.

ಅಸಾಮಾನ್ಯ ಘಟನೆಗಳು ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ―ಶ್ರೀಸೂಕ್ತಿ.

ಪರಿಪರಿಯಾಗಿ ಸುಮಂತ್ರನು ಸಮಾಧಾನ ಮಾಡಿದರೂ ಕೌಸಲ್ಯೆಗೆ ಸಮಾಧಾನವಾಗದೇ ದೊರೆಯ ಮೇಲೆ ಸಿಟ್ಟುಗೊಂಡಳು. ಅಳುತ್ತಲೇ ದಶರಥನಿಗೆ ಮೂರು ಲೋಕದ ಕರುಣಾಪೂರ್ಣ, ಎಲ್ಲರಿಗೂ ಪ್ರಿಯನಾದ ನೀನು ತನ್ನ ಮಕ್ಕಳನ್ನು ಸೀತೆಯ ಜೊತೆಗೆ ಹೇಗೆ ಕಾಡಿಗಟ್ಟಿದೆ?..
ಸೀತೆಯು ಕಾಡಿನಲ್ಲಿ ಇರುವುದು ಹೇಗೆ ?.. ನಾನು ಮತ್ತೆ ಕಮಲನಯನ ಮತ್ತು ಉಸಿರಿನಲ್ಲಿ ಗಂಧವನ್ನು ಹೊರಸೂಸುವ ರಾಮನನ್ನು ನೋಡುವುದು ಯಾವಾಗ ?..
ಹದಿನಾಲ್ಕು ವರ್ಷದ ನಂತರ ರಾಮ ರಾಜ್ಯಕ್ಕೆ ಮರಳಿದರೂ ಭರತನು ರಾಜ್ಯವನ್ನು ಕೊಡಲಾರ. ಕಾಡಿನಲ್ಲಿ ವ್ಯಾಘ್ರವು ಇನ್ನೊಂದು ಪ್ರಾಣಿ ಬೇಟೆಯಾಡಿದ್ದನ್ನು ಹೇಗೆ ಸೇವಿಸುದಿಲ್ಲವೋ ಹಾಗೆ ಭರತ ರಾಜ್ಯವನ್ನು ಕೊಟ್ಟರೂ ರಾಮ ತೆಗೆದುಕೊಳ್ಳಲಾರ ಎಂದು ಹೇಳುತ್ತಾ , ದೊಡ್ಡಮೀನು ಸಣ್ಣ ಮೀನನ್ನು ತಿನ್ನುವ ಹಾಗೆ ತಂದೆಯೇ ಮಗನನ್ನು ಕೊಂದಂತೆ ಆಯಿತು ಎಂದು ಶೋಕಿಸಿದಳು. ಮಗನ ಜೊತೆ ತನ್ನನ್ನು , ಕೈಕೇಯಿ ಮತ್ತು ಭರತನನ್ನು ಬಿಟ್ಟು ಎಲ್ಲರನ್ನು ಕೊಂದೆ ಎಂದು ಹೇಳಿದಳು.

ದಶರಥನಿಗೆ ದುಃಖದ ಪರಾಕಾಷ್ಠೆಯಲ್ಲಿ ಹಿಂದೆ ಶಬ್ದವೇದಿ ವಿದ್ಯೆಯಿಂದ ಮಾಡಿದ ಪಾಪ ನೆನಪಾಯಿತು.

ಮಾಡಿದ ಪಾಪವು ಬಾಧಿಸದೇ ಬಿಡದು ― ಶ್ರೀಸೂಕ್ತಿ.

ಶೋಕದಲ್ಲಿ ಮುಳುಗಿದ ದಶರಥನು ವಾತ್ಸಲ್ಯ ತುಂಬಿದ ಕೌಸಲ್ಯೆಗೆ ಕೈಮುಗಿದು ನಾನು ನಿರ್ಗುಣವಾದ ಪತಿ ಆದರೆ ನೀನು ಸತ್ಯ, ಧರ್ಮವನ್ನು ಬಲ್ಲವಳು, ನೀನು ಹೀಗೆಲ್ಲಾ ಹೇಳಬಾರದು ಎಂದು ಹೇಳಿದಾಗ ಧಾರಾಕಾರವಾಗಿ ಕೌಸಲ್ಯೆಯು ಕಣ್ಣೀರಿಟ್ಟಳು. ತನ್ನೊಳಗಿರುವ ಎಲ್ಲ ಶೋಕಗಳನ್ನು ಹೊರಹಾಕಿದ ಮೇಲೆ ದಶರಥನಿಗೆ ನೀನು ಮಾಡಿದ್ದು ತಪ್ಪಲ್ಲ, ಧರ್ಮ ಮಾರ್ಗದಲ್ಲಿ ನಡೆದೆ ಆದರೆ ರಾಮನಿಲ್ಲದ ಐದು ರಾತ್ರಿಯೂ ಐದು ವರ್ಷದಂತೆ ಕಳೆದೆ ಎಂದು ಹೇಳಿದಳು. ಆಯಾಸವಾದ ದಶರಥನು ನಿದ್ದೆ ಮಾಡಿ ಪುನಃ ಎದ್ದಾಗ ರಾಮ―ಲಕ್ಷ್ಮಣರು ಕಾಡಿಗೆ ಹೋಗಿದ್ದು ನೆನಪಾಗಿ, ಮೂರು ಜೀವಿಗಳನ್ನು ಬಲಿತೆಗೆದುಕೊಂಡ ಪಾಪ ಮತ್ತೆ ನೆನಪಾಯಿತು.

ಜೀವಿಗಳನ್ನು ಬಲಿತೆಗೆದುಕೊಂಡ ಅಘಟಿತ ಘಟನೆ ಯಾವುದು ?…. ಅದು ನಡೆದದ್ದು ಯಾವಾಗ ??..
ಅದನ್ನು ದಶರಥನು ಕೌಸಲ್ಯೆಗೆ ವಿವರಿಸಿದ್ದು ಹೇಗೆ?… ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments