ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಯಾವ ತಪ್ಪು ಮಾಡದಿದ್ದರೂ, ಪ್ರಪಂಚವೆಲ್ಲವೂ ಪಾತಕಿಯಂತೆ ನೋಡುತ್ತಿದೆ. ಇದು ಭರತನ ಸ್ಥಿತಿ.

ಭರತನು ನೀರು ತುಂಬಿದ ಕಣ್ಣಿಂದ ದೀನಳಾದ ತಾಯಿಯನ್ನು ಕಂಡನು. “ನಾನು ರಾಜ್ಯವನ್ನು ಬಯಸಲಿಲ್ಲ, ತಾಯಿಯೊಂದಿಗೆ ಸಮಾಲೋಚನೆ ಮಾಡಲಿಲ್ಲ. ರಾಮಾಭಿಷೇಕದ ವಿಷಯವೇ ತಿಳಿದಿಲ್ಲ. ನಾನು ಇರಲೇ ಇಲ್ಲ. ನಾನು ಕೇಕೆಯದಲ್ಲಿದ್ದೆ.” ಎಂದು ಎಲ್ಲರ ಎದುರೇ ಕೂಗಿದ ಶಬ್ಧ ಕೌಸಲ್ಯೆಗೆ ಕೇಳಿಸಿದ ತಕ್ಷಣ ಆಕೆ ಸುಮಿತ್ರೆಯ ಬಳಿ,”ಕ್ರೂರಕಾರ್ಯಳಾದ ಕೈಕೆಯಿಯ ಮಗ ಬಂದಿದ್ದಾನೆ. ನನಗೆ ದೀರ್ಘದರ್ಶಿಯಾದ ಆತನನ್ನು ನೋಡಬೇಕು.”ಎಂದು ಹೇಳುತ್ತಿರಲು, ಭರತ ಶತ್ರುಘ್ನನ ಜೊತೆ ಕೌಸಲ್ಯೆಯನ್ನು ನೋಡುವ ಸಲುವಾಗಿ ಬಂದರು. ಕೌಸಲ್ಯೆಯಾದರೋ ಭರತನಿಗೆ ಅತೀವ ದುಃಖದಿಂದ,” ರಾಜ್ಯಾಕಾಂಕ್ಷಿಯಾದ ನಿನಗೆ ನಿಷ್ಕಂಟಕವಾಗಿ ರಾಜ್ಯ ದೊರಕಿತು. ಕೈಕೇಯಿಯ ಅಕಾರ್ಯದ ಫಲವಾಗಿ ನಿನಗೆ ರಾಜ್ಯ ಸಿಕ್ಕಿತು. ಸಿಕ್ಕಲಿ. ಆದರೆ ನಿನ್ನಮ್ಮ ನನ್ನ ಮಗನನ್ನು ಕಾಡಿಗೆ ಅಟ್ಟಿದ್ದು ಏಕೆ? ನಾನು ನನ್ನ ಮಗನಿರುವಲ್ಲಿರಲು ಇಚ್ಛಿಸುತ್ತೇನೆ.” ಎಂದು ಹೇಳಿದಾಗ, ಭರತನಿಗೆ ಹುಣ್ಣಿಗೆ ಸೂಜಿ ಚುಚ್ಚಿದ ಹಾಗೆ ತುಂಬಾ ನೋವಾಯ್ತು.

ಕಾಲಿಗೆ ಬಿದ್ದ ಭರತ ಪರಿಪರಿಯಾಗಿ ರೋಧಿಸಿ ಕೌಸಲ್ಯೆಯ ಕುರಿತು,”ಆರ್ಯೇ! ಏನು ಅರಿಯದ ನನ್ನನ್ನು ಯಾಕಮ್ಮಾ ನಿಂದಿಸುತ್ತ ಇದ್ದೀಯೆ? ಸ್ಥಿರವಾದ ಪ್ರೀತಿಯನ್ನು ರಾಮನಲ್ಲಿ ಇಟ್ಟಿದ್ದೇನೆ. ಇದೋ ನನ್ನ ಶಪಥವನ್ನು ಕೇಳು: ರಾಮನು ಕಾಡಿಗೆ ಹೋಗುವುದು ಸಮ್ಮತವು ಆಗಿದ್ದಲ್ಲಿ, ಬುದ್ಧಿಯೇ ಕೆಡಲಿ, ಪಾಪಿಗಳ ದಾಸನಾಗಲಿ, ಮಲಗಿದ್ದ ಗೋವಿಗೆ ಕಾಲಿಂದ ತುಳಿದ ಪಾಪ ಬರಲಿ.

ಗೋವೆಂದರೆ ಸರ್ವದೇವತೆಗಳ ಸನ್ನಿಧಿ- #ಶ್ರೀಸೂಕ್ತಿ.

ಉಪಯೋಗವಿಲ್ಲದ ಕೆಲಸವನ್ನು ಮಾಡಿಸಿ ಸೇವಕನನ್ನು ಹೊರಗಟ್ಟಿದ ಶಾಪ ಬರಲಿ, ದೊರೆಗೆ ಮಾಡಿದ ದ್ರೋಹದ ಪಾಪ ಬರಲಿ, ದೊರೆ ಮಾಡಿದ ಮೋಸದ ಪಾಪ ಬರಲಿ, ಮಹಾಯುದ್ಧದಲ್ಲಿ ಯುದ್ಧ ಧರ್ಮವನ್ನು ಪಾಲನೆ ಮಾಡದ ಪಾಪ ಬರಲಿ, ಶಾಸ್ತ್ರಗಳನ್ನು ಮರೆತ ಪಾಪ ಬರಲಿ, ರಾಜ್ಯವನ್ನಾಳುವ ರಾಜ ಸೂರ್ಯ ತೇಜಸ್ಸಿಗೆ ಸಮಾನನಾದ ನಮ್ಮಣ್ಣ ರಾಮನನ್ನು ಕಾಣದೇ ಹೋಗುವ ಹಾಗೆ ಆಗಲಿ, ಗುರುಗಳನ್ನು ಅವಮಾನಿಸಿದ ಪಾಪ ಬರಲಿ, ಮಿತ್ರನಿಗೆ ಮಾಡಿದ ದ್ರೋಹ, ಗುಟ್ಟನ್ನು ರಟ್ಟು ಮಾಡಿದ ಪಾಪ ಬರಲಿ, ಉತ್ತರಕ್ರಿಯೆ ಸಂಸ್ಕಾರ ಸಿಗದೇ ಹೋಗಲಿ, ಸ್ತ್ರೀ ಹತ್ಯೆ ಶಿಶು ಹತ್ಯೆಯ ದೋಷ ಬರಲಿ, ಇದಕ್ಕಿಂತ ವಿಚಿತ್ರವಾಗಿ ಹೇಳಿಕೊಳ್ಳುತ್ತಾನೆ, ನಾರುಡಿ ಉಟ್ಟು, ತಲೆಬುರುಡೆಯನ್ನು ಹಿಡಿದು ಹುಚ್ಚನಾಗಿ ಭಿಕ್ಷೆ ಬೇಡುವಂತಾಗಲಿ. ಸರ್ವ ಸಂಪತ್ತು ಕಾಣದಾಗಲಿ.

ಸಂಧ್ಯಾಕಾಲದಲ್ಲಿ ಮಲಗುವುದು ಮಹಾಪಾಪ- #ಶ್ರೀಸೂಕ್ತಿ

ಗುರು ಪತ್ನಿಯನ್ನು ಕೆಡಿಸಿದ ಪಾಪ ಬರಲಿ, ಅನರ್ಥ ಕೆಲಸದಲ್ಲಿ ನಿರತರಾಗಲಿ, ರೋಗಗ್ರಸ್ಥನಾಗಲಿ, ಸುಖವಿಲ್ಲದೆ ಆಗಲಿ, ದೀನರನ್ನು ಹೊರಗಟ್ಟುವ ಪಾಪ ಬರಲಿ, ಮೋಸವೇ ಆತನ ಕೆಲಸವಾಗಲಿ” ಎಂದು ಪ್ರತಿಜ್ಞೆ ಮಾಡುತ್ತಿದ್ದ ಭರತನು ಬಿದ್ದುಬಿಟ್ಟನು.

ಇದನ್ನು ಕಂಡ ಕೌಸಲ್ಯೆ ಭರತನಿಗೆ, “ನಿನ್ನ ಶಪಥಗಳು ಪ್ರಾಣ ನಿಲ್ಲಿಸುವಂತೆ ಇದೆ, ಆದರೂ ಸಂತೋಷ; ಏಕೆಂದರೆ ಲಕ್ಷ್ಮಣನಂತೆ ಭರತನೂ ಧರ್ಮವನ್ನು ಬಿಡಲಿಲ್ಲ’ ಎಂದು ತನ್ನ ಮಡಿಲಿಗೆ ಎಳೆದು ತಬ್ಬಿಕೊಂಡು ಅತ್ತಳಂತೆ ಕೌಸಲ್ಯೆ. ಇಡೀ ರಾತ್ರಿ ಕಳೆಯಿತು.

ಬೆಳಗಾಯಿತು. ವಸಿಷ್ಠರು ಭರತನನ್ನು ಕರೆದು, ಮುಂದೆ ಮಾಡುವ ಕರ್ತವ್ಯವನ್ನು ಮಾಡಬೇಕೆಂದು ಎಚ್ಚರಿಸಿದರು. ಭರತನು ಎಲ್ಲಾ ಕಾರ್ಯಗಳನ್ನು ಮಾಡುತ್ತಾನೆ. ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟ ತಂದೆಯ ಶವ, ಮುಖವು ಮಾತ್ರ ಪೀತ ಬಣ್ಣಕ್ಕೆ ತಿರುಗಿದ್ದು ಬಿಟ್ಟರೆ ಮಲಗಿದ್ದಂತೆ ಕಾಣುತ್ತಿತ್ತು. ತನ್ನ ತಂದೆಯ ಬಳಿ ಭರತನು “ನಮ್ಮೆಲ್ಲರನ್ನು ಬಿಟ್ಟು ಯಾಕೆ ಹೋದೆ? ರಾಮನಿಲ್ಲದ ಅಯೋಧ್ಯೆ ಹೇಗೆ? ಎಂದೆಲ್ಲಾ ಪರಿತಪಿಸುತ್ತಿದ್ದಾಗ, ವಸಿಷ್ಠರು ಮತ್ತೊಮ್ಮೆ ಕರ್ತವ್ಯವನ್ನು ಎಚ್ಚರಿಸುತ್ತಾರೆ.

ಪಲ್ಲಕ್ಕಿಯಲ್ಲಿ ದಶರಥನನ್ನು ಮಲಗಿಸಿ ಮುಂದೆಯಿಂದ ಚಿನ್ನವನ್ನು ಚೆಲ್ಲಿ, ವಸ್ತ್ರಗಳನ್ನು ಚೆಲ್ಲಿ, ಸುಗಂಧಕಾಷ್ಟಗಳಿಂದ ಸುತ್ತುವರಿದ ಚಿತೆಯಲ್ಲಿ ದಶರಥನನ್ನಿಟ್ಟು ಭರತ ಅಗ್ನಿಸ್ಪರ್ಶವನ್ನು ಮಾಡುತ್ತಾನೆ. ಅಯೋಧ್ಯೆಯ ಎಲ್ಲರೂ ರೋಧಿಸಿದರು. ಸರಯೂ ನದಿಯಲ್ಲಿ ಎಲ್ಲರೂ ತರ್ಪಣವನ್ನು ನೀಡಿದರು. 10 ದಿನದ ಅಶೌಚವನ್ನು ಆಚರಿಸಿ, ಶ್ರಾದ್ಧ ಕರ್ಮಗಳು, ಹಾಗೂ ಎಲ್ಲಾ ಕರ್ಮಗಳನ್ನು ಮಾಡಿ ರತ್ನ, ಗೋವು, ಗೃಹಗಳೂ ಇತ್ಯಾದಿಗಳನ್ನು ದಾನವನ್ನು ಮಾಡಿದ ಭರತ. ಹದಿಮೂರನೇ ದಿನ ದಹನವಾದಲ್ಲಿಗೆ ಬಂದಿದ್ದಾನೆ ಭರತ. ಬೂದಿಯನ್ನು ನೋಡುತ್ತಾ,” ಎಂಥಾ ಕೆಲಸವನ್ನು ಮಾಡಿದಿರಿ ತಂದೆ? ರಾಮನಿಗೆ ನನ್ನನ್ನು ಒಪ್ಪಿಸಿದೆ. ಅಂಥವನನ್ನು ಕಾಡಿಗೆ ಕಳುಹಿಸಿಬಿಟ್ಟಿದ್ದೀರಿ. ಕೌಸಲ್ಯೆಗೆ ಇನ್ನಾರು?” ಎಂದೆಲ್ಲಾ ಕೇಳುತ್ತಾನೆ. ಕೆಂಪಾದ ಮೂಳೆಗಳು, ಕೆಂಪು ಬೂದಿಯನ್ನು ನೋಡಿ ದುಃಖಿಸಿದನು ಭರತ. ಶತ್ರುಘ್ನನು ಕೂಡ ಅತ್ಯಂತ ದುಃಖಿಸುತ್ತಾನೆ.” ಬಾಲನಾದ ಭರತನನ್ನು ಬಿಟ್ಟು ಎಲ್ಲಿಗೆ ಹೋದೆ? ಭೂಮಿ ಸೀಳಬಾರದೆ? ನಾನು ಅಗ್ನಿಪ್ರವೇಶ ಮಾಡುತ್ತೇನೆ. ಎಂದು ದುಃಖದಿಂದ ನುಡಿದನು ಶತ್ರುಘ್ನ.

ಆಗ ವಸಿಷ್ಠರು ಹಸಿವು- ಬಾಯಾರಿಕೆಗಳು, ಶೋಕ-ಮೋಹಗಳು ಹಾಗೂ ಮುಪ್ಪು-ಮರಣಗಳು ಎಲ್ಲರಿಗೂ ಇರುವಂಥದ್ದು ನಿನ್ನ ಕರ್ತವ್ಯವನ್ನು ನೀನು ಮಾಡು ಎಂದು ಸಮಾಧಾನಿಸುತ್ತಾರೆ. ದಶರಥನ ಅಂತ್ಯಕ್ರಿಯೆಯು ಸಂಪೂರ್ಣವಾಯಿತು.

ಲಕ್ಷ್ಮಣನ ಸ್ವಭಾವದ ಶತ್ರುಘ್ನನು,”ತನ್ನ ರಕ್ಷಣೆ ತಾನೇ ಮಾಡಲಿಲ್ಲವಲ್ಲ ನಮ್ಮಣ್ಣ ರಾಮ, ಈ ಸಮಯದಲ್ಲಿ ಲಕ್ಷ್ಮಣ ಎಂಬವನು ಏನು ಮಾಡುತ್ತಿದ್ದ? ರಾಮನನ್ನು ಈ ಕಷ್ಟದಿಂದ ಏಕೆ ಪಾರು ಮಾಡಲಿಲ್ಲ? ತಂದೆಯನ್ನು ಜೈಲಿಗೆ ಕಳುಹಿಸಿಯಾದರೂ ರಾಮನನ್ನು ತಡೆಯಬೇಕಿತ್ತು.” ಎಂದು ರೋಷದಿಂದ ಹೇಳಿದನು.

ಈ ಮಾತನ್ನು ಹೇಳುತ್ತಿರಲು ಪೂರ್ವದ್ವಾರದಲ್ಲಿ ಸರ್ವಾಭರಣಭೂಷಿತಳಾದ ಕುಬ್ಜೆಯು ಸಾಕ್ಷಾತ್ಕಾರಗೊಂಡಳು. ಮೈ ತುಂಬಾ ಚಿನ್ನವನ್ನುಟ್ಟು, ಶ್ರೀಗಂಧದ ಲೇಪನವನ್ನು ಧರಿಸಿಕೊಂಡು, ರಾಜ ವಸ್ತ್ರವನ್ನುಟ್ಟುಕೊಂಡು, ವಿವಿಧವಾದ ಆಭರಣಗಳನ್ನು ವಿವಿಧವಾಗಿ ಅಲಂಕರಿಸಿಕೊಂಡು ಪ್ರಕಟಗೊಂಡಳು. “ಮೈತುಂಬಾ ಹಗ್ಗ ಸುತ್ತಿಕೊಂಡ ಹೆಣ್ಣು ಕೋತಿಯಂತೆ ಕಂಡಳು” ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ.

ದ್ವಾರಪಾಲಕರು ಸಿಟ್ಟಿನಿಂದ ಆಕೆಯನ್ನು ಹಿಡಿದುಕೊಂಡು,” ರಾಮ ಕಾಡಿಗೆ ಹೋಗಲು ಯಾರು ಕಾರಣರೋ, ತಂದೆಯ ನಿಧನಕ್ಕೂ ಈಕೆಯೇ ಕಾರಣಳು.” ಇವಳನ್ನು ಕರೆದುಕೊಂಡು ಬಂದಾಗ ಶತ್ರುಘ್ನನು,”ತನ್ನ ಸೋದರರಿಗೆ, ತಂದೆಗೆ ಎಷ್ಟು ನೋವಾಗಿದೆ?” ಎಂದು ಯೋಚಿಸುತ್ತಾ, ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡನು. ಆಗ ಆಕೆಯು ವಿಕಾರವಾಗಿ ಕೂಗಿಕೊಂಡಳು. ಆಕೆಯ ಸಖಿಯರು ಭಯದಿಂದ ಪಲಾಯನ ಮಾಡುತ್ತಿರಲು, ಸಖಿಯರು ತಮ್ಮೊಂದಿಗೆ,”ಕೌಸಲ್ಯೆಯನ್ನು ಆಶ್ರಯಿಸೋಣ, ಇನ್ನು ನಮಗೆ ಅವಳೇ ಗತಿ” ಎಂದು ಮಾತನಾಡಿಕೊಂಡರು.

ನೆಲದಲ್ಲಿ ಮಂಥರೆಯನ್ನು ಎಳೆದುಕೊಂಡು ಹೋಗುತ್ತಿದ್ದಾನೆ ಶತ್ರುಘ್ನ. ಆಭರಣಗಳು ಸುತ್ತಮುತ್ತ ಚೆಲ್ಲಾಡಿದವು. ಕೈಕೇಯಿಯು ಆಕೆಯ ರಕ್ಷಣೆಗೆ ಬಂದಳು. ಶತ್ರುಘ್ನನು ಕೈಕೇಯಿಯನ್ನು ಸಿಟ್ಟಿನಿಂದ ಗದರಿದನು. ಕೈಕೇಯಿಯು ಭಯದಿಂದ ಭರತನನ್ನು ಆಶ್ರಯಿಸಿದಳು. ಆಗ ಭರತ ಶತ್ರುಘ್ನನಿಗೆ, “ಬಿಟ್ಟುಬಿಡು. ಹೆಣ್ಣು ಜಾತಿಯದು. ಸ್ತ್ರೀ ಹತ್ಯೆಯ ಪಾಪ ಬಂದಿತು. ಕೊಲ್ಲುವುದಾಗಿದ್ದರೆ ಕೈಕೇಯಿಯನ್ನು ಕೊಲ್ಲುತ್ತಿದ್ದೆ. ಅವರನ್ನು ಕೊಂದರೆ ನಮ್ಮಣ್ಣ ನಮ್ಮನ್ನು ಸ್ವೀಕರಿಸುವುದಿಲ್ಲ.” ಎಂದು ಹೇಳಿದಾಗ ಸ್ವಲ್ಪ ಶಾಂತನಾದನು ಶತ್ರುಘ್ನನು.

ಪ್ರೀತಿಯಿಂದ ಬರುವ ಭೀತಿ ಪ್ರಶಸ್ತವಾದ ಭೀತಿ ಹಿಂಸೆಯಿಂದ ಬರುವ ಭೀತಿ, ಭೀತಿ ಅಲ್ಲ- #ಶ್ರೀಸೂಕ್ತಿ.

ಮಂಥರೆ ಕೈಕೆಯ ಕಾಲಿಗೆ ಬಿದ್ದು ಪರಿತಪಿಸುತ್ತಿದ್ದರೆ ಕೈಕೇಯಿಯು ಮೆಲ್ಲನೆ ಸಮಾಧಾನಿಸಿದಳು. ಮಂಥರೆಯಾದರೂ ಬಲೆಗೆ ಬಿದ್ದ ಪಕ್ಷಿಯಂತೆ ಪಿಳಿಪಿಳಿ ಕಣ್ಣಿನಿಂದ ನೋಡುತ್ತಿದ್ದಳು.

ಮುಂದಿನ ಪ್ರವಚನದಲ್ಲಿ ಭರತನ ಪರೀಕ್ಷೆಯ ಬಗ್ಗೆ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments