ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಮಹಾಯುದ್ಧವಾಗಲಿ, ಮಹಾಯಜ್ಞವಾಗಲಿ, ಮಹೋತ್ಸವವಾಗಲಿ, ಮಹಾ ಘಟನೆಯಾಗಲೀ ನಡೆಯುವ ಮುನ್ನ ಬಲು ಶಾಂತವಾದ ವಾತಾವರಣವಿರುತ್ತದೆ. ಕೆಲವೊಮ್ಮೆ ಮಹಾಸಮಾಧಾನ, ಮಹಾಮೌನ, ಮಹಾನಿಶ್ಶಬ್ಧವಿರುವ ಸಾಧ್ಯತೆ!
ಲೋಕಾಂತದ ಹಿಂದೆ ಏಕಾಂತ, ಏಕಾಂತದ ಹಿಂದೆ ಲೋಕಾಂತ ~ ಇದು ಹೀಗೆ ವ್ಯವಸ್ಥೆ.
ಮೌನದ ಹಿಂದೆ ಮಾತು, ಮಾತಿನ ಹಿಂದೆ ಮೌನ.
ಮೌನದ ಮುಂದೆ ಮಾತು, ಮಾತಿನ ಮುಂದೆ ಮೌನ.
ಮಾತು~ಮೌನ ವಿರುದ್ಧ ಪದಗಳಲ್ಲ, ಸಂವಾದಿಗಳು ಅವು. ಮಾತು ಎದ್ದು ಬರುವುದು ಮೌನದಿಂದಲೇ, ಮಾತು ಹೋಗಿ ಪರ್ಯಾವಸಾನವಾಗುವುದು ಮೌನದಲ್ಲಿಯೇ. ಅಂಥದ್ದೊಂದು ಸಹಜ ವಾತಾವರಣ ಚಿತ್ರಕೂಟದ ನೆತ್ತಿಯ ಮೇಲಿದೆ.

ಪ್ರಭು ಶ್ರೀರಾಮ ತನ್ನ ಪತ್ನಿ ಸೀತೆಯೊಡನೆ ಬಹಳ ಸಮಾಧಾನವಾಗಿ ಒಂದು ವಿಹಾರವನ್ನು ಮಾಡಿ, ಸೀತೆಗೆ ಚಿತ್ರಕೂಟ ಗಿರಿ ಮತ್ತು ಮಂದಾಕಿನೀ ನದಿಗಳ ಚೆಲುವನ್ನು ತೋರಿಸಿ, ಮತ್ತು ಅಯೋಧ್ಯೆಗಿಂತ ವನವೇ ಒಳ್ಳೆಯದು ಎಂದು ಮನಗಾಣಿಸಿ, ಇಬ್ಬರು ಒಟ್ಟಿಗೆ ಕುಳಿತುಕೊಂಡು ಸಂತೋಷದ ವಾರ್ತಾಲಾಪ ಮಾಡ್ತಿದ್ದಾರೆ. ಆ ಹೊತ್ತಿಗೆ ಮುಗಿಲು ಮುಟ್ಟುವ ಸದ್ದು, ಧೂಳು ಇವೆರಡೂ ರಾಮನ ಅವಗಾಹನೆಗೆ ಬಂದವು. ಅದು ಭರತನದು.

ತೇಜಸ್ವಿಯಾದ ಲಕ್ಷ್ಮಣನನ್ನು ಬಳಿ ಕರೆದು ರಾಮ ಹೇಳ್ತಾನೆ, ‘ನೋಡು ಲಕ್ಷ್ಮಣ, ಏನದು ಸದ್ದು? ಭಯಂಕರವಾದ ಗುಡುಗಿನಂತೆ ಗಂಭೀರ ತುಮುಲ ಶಬ್ದ! ಗಜ ಯೂತಗಳು, ಮಹಿಷ ಯೂತಗಳು, ಮೃಗ ಯೂತಗಳು ದಿಕ್ಕುದಿಕ್ಕಿಗೆ ಓಡಿ ಹೋಗ್ತಿದ್ದಾವೆ. ಜೊತೆಗೆ ಸಿಂಹಗಳೂ ಕೂಡ. ಬಹುಷಃ ಯಾರೋ ದೊರೆಯಿರಬೇಕು ಅಥವಾ ‘ರಾಜನೇ ಹೆಚ್ಚು ಕಮ್ಮಿ..’ ಅಂಥವನು. ಯಾರೋ ಈ ಕಾಡಿಗೆ ಮೃಗಬೇಟೆಗಾಗಿ ಬಂದಿರಬಹುದು, ಅದಿಲ್ಲದಿದ್ದರೆ ಯಾವುದೋ ಅತಿ ಭಯಂಕರವಾದ ಮೃಗ ಬಂದಿರಬೇಕು. ಗಮನಿಸು. ಚಿತ್ರಕೂಟ ಎಷ್ಟೆತ್ತರ, ಎಷ್ಟು ದುರ್ಗಮವಾಗಿದೆಯೆಂದರೆ ಚಿತ್ರಕೂಟಕ್ಕೆ ಬರುವುದು ಪಕ್ಷಿಗಳಿಗೂ ಅಷ್ಟು ಸುಲಭವಲ್ಲ. ಏನಿದು ಎಂಬುದನ್ನು ಬಹುಬೇಗ ತಿಳಿದು ಹೇಳು’ ಅಂತ ಹೇಳ್ತಾನೆ ರಾಮ. ಲಕ್ಷ್ಮಣನು ಸಾಲವೃಕ್ಷವನ್ನು ಆರೋಹಿಸಿ ಎಲ್ಲ ದಿಕ್ಕುಗಳನ್ನೂ ನೋಡ್ತಾನೆ. ಪೂರ್ವ, ಪಶ್ಚಿಮ, ದಕ್ಷಿಣದಲ್ಲಿ ಏನಿಲ್ಲ. ಉತ್ತರ ದಿಕ್ಕಿಗೆ ತಿರುಗಿದಾಗ ಮಹಾಸೇನೆಯೊಂದು ಇತ್ತ ಕಡೆಗೆ ಬರ್ತಾ ಇರುದು ಲಕ್ಷ್ಮಣನಿಗೆ ಕಾಣಿಸಿತು. ಚತುರಂಗ ಬಲವೊಂದು ಇತ್ತ ಕಡೆಗೇ ಬರುತ್ತಿದೆ.

ಕೂಡಲೇ ರಾಮನಿಗೆ ಲಕ್ಷ್ಮಣ ಹೇಳಿದನಂತೆ, ‘ಸೇನೆ ಬರ್ತಾ ಇದೆ. ಹಾಗಾಗಿ ಕೂಡಲೇ ಪರ್ಣಕುಡಿಯೊಳಗಿನ ಅಗ್ನಿಯನ್ನು ಆರಿಸು ಅಣ್ಣಾ. ಸೀತೆ ಗುಹೆಯನ್ನು ಸೇರಲಿ; ಗುಪ್ತಳಾಗಲಿ. ಧನುಸ್ಸಿಗೆ ಹೆದೆಯೇರಿಸು, ಬಾಣವನ್ನು ತೆಗೆದುಕೋ, ಕವಚ ಧಾರಣೆ ಮಾಡು, ಯುದ್ಧ ಸನ್ನದ್ಧನಾಗು’. ಹೀಗನ್ನುವುದು ಲಕ್ಷ್ಮಣನ ಸ್ವಭಾವ.
‘ಆಯಿತು, ಮೊದಲು ಸೇನೆ ಯಾರದೆಂದು ಹೇಳು!’ ಇದು ರಾಮನ ಸ್ವಭಾವ.

ಲಕ್ಷ್ಮಣ ಸೇನೆಯ ಕಡೆ ನೋಡಿ ಕ್ರೋಧಾಗ್ನಿಯಾಗಿ, ‘ಅವನಿಗೆ ಸಿಗಲಾರದ್ದು, ಆದರೂ ಸಿಕ್ಕಿದ್ದು.. ಆದರೂ ತನ್ನ ರಾಜ್ಯಕ್ಕೆ ಯಾರಿಂದಲೂ ತೊಡಕು ಬರಬಾರದು ಎನ್ನುವ ಕಾರಣಕ್ಕೆ ಪಟ್ಟಾಭಿಷೇಕ ಮಾಡಿಕೊಂಡು ನಮ್ಮಿಬ್ಬರನ್ನು ಕೊಲ್ಲಲು ಪುನಃ ಇಲ್ಲಿಗೆ ಬರುತ್ತಿದ್ದಾನೆ ಕೈಕೇಯಿಯ ಮಗನಾದ ಭರತ. ಆತನ ಕೋವಿಧಾರ ಧ್ವಜವು ಗೋಚರಿಸುತ್ತಿದೆ ನೋಡಣ್ಣಾ.. ನಮ್ಮದೇ ಯೋಧರು ಆನೆಗಳನ್ನೇರಿ ಕುದುರೆಗಳನ್ನೇರಿ ಭರತನ ಕಡೆಯವರಾಗಿ ಶೀಘ್ರವಾಗಿ ಬರುತ್ತಿದ್ದಾರೆ. ಹಾಗಾಗಿ ತಡ ಮಾಡುವುದು ಬೇಡಣ್ಣಾ.. ನಾವಿಬ್ಬರು ಧನುಸ್ಸನ್ನು ಹಿಡಿದು ಸುರಕ್ಷಿತವಾದ ಸ್ಥಳವನ್ನು ಆಶ್ರಯಿಸೋಣ ಅಥವಾ ಇಲ್ಲಿಯೇ ನಿಂತುಕೊಳ್ಳೋಣ. ಬರಲಿ ಅವನು. ನನಗೂ ಭರತನನ್ನು ನೋಡಬೇಕಾಗಿದೆ. ನಮ್ಮ ಇಷ್ಟೂ ಸಂಕಟಕ್ಕೆ ಮೂಲಕಾರಣ ಅವನು‌. ಇವನಿಗಾಗಿಯೇ, ಇವನಿಂದಾಗಿಯೇ. ಶಾಶ್ವತವಾದ ರಾಜ್ಯದಿಂದ ನೀನು ಇವನಿಗಾಗಿ ಚ್ಯುತನಾಗಿರತಕ್ಕಂತದ್ದು, ಹಾಗಾಗಿ ಆ ಶತ್ರು ತಾನಾಗಿ ಬಂದನೀಗ’ ಎನ್ನುತ್ತಾನೆ.

ತನ್ನ ಸಹೋದರನನ್ನು ‘ಅರಿ’ ಎಂದು ಭಾವಿಸಿದ್ದಾನೆ ಭರತ‌. ವಧೆಗೆ ಯೋಗ್ಯನಾದವನು ಅಂತ!
ಭರತನ ವಧೆಯಲ್ಲಿ ದೋಷವಿಲ್ಲವಂತೆ. ಯಾರು ನಮಗೆ ಪೂರ್ವಾಪಕಾರಿಯೋ, ಕ್ಷತ್ರಿಯ ಧರ್ಮದ ಅನುಸಾರವಾಗಿ ಅವನನ್ನು ಕೊಲ್ಲಬಹುದು, ಅಧರ್ಮವಾಗುವುದಿಲ್ಲ. ಹಾಗಾಗಿ ‘ಅಣ್ಣ/ತಮ್ಮ’ ಅಂತಿಲ್ಲ. ‘ನಿನ್ನನ್ನು ಹೊರಹಾಕಿದನಲ್ಲವಾ ಅಯೋಧ್ಯೆಯಿಂದ! ಇವನನ್ನು ನಾನು ಸಂಹಾರ ಮಾಡಿದ ಮೇಲೆ ಇಡೀ ಭೂಮಂಡಲಕ್ಕೆ ನೀನೇ ದೊರೆ. ಆ ರಾಜ್ಯಕಾಮುಕಳಾದ ಕೈಕೇಯಿ ಇಂದು ತನ್ನ ಮಗನು ಹತನಾಗಿ ಯುದ್ಧ ಭೂಮಿಯಲ್ಲಿ ವರಗಿದ್ದನ್ನು ನೋಡಲಿ ಅವಳು. ಆಗಾದರೂ ಬುದ್ಧಿ ಬರಲಿ ಅವಳಿಗೆ’. ಇದೆಲ್ಲ ಕ್ಷತ್ರಿಯೋಚಿತ ಮಾತುಗಳು. ತೀರ್ಮಾನಕ್ಕೆ ಬಂದುಬಿಟ್ಟಿದ್ದಾನವನು.

ವಿಮರ್ಶಿಸಿ ಹೆಜ್ಜೆ ಮುಂದಿಡುವುದು ತುಂಬ ಮುಖ್ಯ ಜೀವನದಲ್ಲಿ. ದುಡುಕಿ ನಿರ್ಣಯ ಮಾಡಬಾರದು.
ಯಾವ ಕರ್ಮನ್ನಾದರೂ ಅವಸರಿಸಿ ಮಾಡಬೇಡ.
ಅವಿವೇಕವೆಂಬುದು ಪರಮಾಪತ್ತುಗಳ ನೆಲೆ.
ಸಂಪತ್ತುಗಳು ಗುಣವನ್ನು ಅರಸುತ್ತವೆ
ಹಾಗಾಗಿ ರಾಮನ ಶೈಲಿಯೇ ಬೇರೆ. ಲಕ್ಷ್ಮಣ ಸಹಜವಾಗಿಯೇ ಮೃದು ಸ್ವಭಾವದವನು; ಸೌಜನ್ಯದ ಮನುಷ್ಯ. ಆದರೆ ತನ್ನಣ್ಣನಿಗೆ ಸಣ್ಣ ತೊಂದರೆಯಾದರೂ ಲಕ್ಷ್ಮಣ ರುದ್ರಾವತಾರಿ‌. ಅದು ಅವನ ರಾಮಪ್ರೇಮ!!

ಪರಿಪರಿಯಾಗಿ ಲಕ್ಷ್ಮಣನನ್ನು ಸಾಂತ್ವನ ಮಾಡುತ್ತಾ ಕೆಲವು ಮಹಾವಿವೇಕದ ಮಾತುಗಳನ್ನು ರಾಮನು ಹೇಳ್ತಾನೆ. ಮೊದಲ ಮಾತು,”ಏನಪ್ಪಾ, ಧನುಸ್ಸು, ಕತ್ತಿ, ಗುರಾಣಿ ಹಿಡ್ಕೊಂಡು ಏನ್ಮಾಡ್ತೀಯೇ? ಇದೆಲ್ಲ ಅಲ್ಪಪ್ರಜ್ಞರು, ಮೂರ್ಖರು ನಮ್ಮ ಮೇಲೇರಿ ಬಂದರೆ ಬಳಸಬೇಕಾಗಿರತಕ್ಕಂತದ್ದು; ಮಹಾಪ್ರಾಜ್ಞರ ಮೇಲಲ್ಲ.
ಭರತ ಯಾರು? ಮಹಾಪ್ರಾಜ್ಞ. ಈ ವಿದ್ಯೆಗಳು ಅವನಿಗೂ ಗೊತ್ತಿದೆ. ಮಹಾಧನುರ್ಧಾರಿಯವನು. ನೀನು ಕಲಿತಿರುವಲ್ಲಿಯೇ ಅವನೂ ಕಲಿತಿದ್ದಾನೆ. ನಿನಗೇನು ಗೊತ್ತೋ ಅವನಿಗೂ ಅದೇ ಗೊತ್ತು. ತತ್ವಶಃ ನೋಡಿದರೂ ಕೂಡ, ಒಂದೇ ಚೈತನ್ಯದಿಂದ ಬಂದವರು ತಾನೇ ಅವರು!
ಹಾಗಾಗಿ, ತಂದೆಗೆ ಮಾತು ಕೊಟ್ಟು, ಈಗ ಭರತನನ್ನು ಕೊಂದು ಬರುವ ರಾಜ್ಯವಿದೆಯಲ್ಲ, ಆ ಅಪವಾದದಿಂದ ಕೂಡಿದ ರಾಜ್ಯವನ್ನು ತೆಗೆದುಕೊಂಡು ನಾನೇನು ಮಾಡಲಿ? ಬಿಡು, ನನಗೆ ಬೇಡ ಅಂತಹ ರಾಜ್ಯ‌. ಧರ್ಮ ಮಾರ್ಗದಲ್ಲಿ ಬರಲಿ, ಬೇರೆ ಮಾರ್ಗದಲ್ಲಿ ಅಲ್ಲ. ತಂದೆಯನ್ನು ಸುಳ್ಳು ಮಾಡಿ, ತಮ್ಮನನ್ನು ಹತ ಮಾಡಿ ಬರುವ ರಾಜ್ಯವೇನು?
ನೋಡು ಲಕ್ಷ್ಮಣ, ನನಗೆ ಧರ್ಮ-ಅರ್ಥ-ಕಾಮಗಳು ಬೇಕು. ನಿಮಗಾಗಿ ಬೇಕು. ಇದು ನನ್ನ ಪ್ರತಿಜ್ಞೆ.
ಒಂದು, ನಿಮ್ಮಲ್ಲಿ ಒಬ್ಬನನ್ನು ಕೊಂದು ನನಗೇಕೆ ಬೇಕದು? ಸಹೋದರ ಸುಖಕ್ಕಾಗಿ ನನಗೆ ರಾಜ್ಯ ಬೇಕು. ನನ್ನ ಕೋದಂಡದ ಮೇಲಾಣೆ.
ನಾನೇನು ಶಕ್ಯನಲ್ಲದೇ ಅಲ್ಲ. ಮನಸ್ಸು ಮಾಡಿದರೆ ಒಂಟಿಯಾಗಿ ಕಾಲ್ನಡಿಗೆಯಲ್ಲಿ ಹೋಗಿ ಯಾವ ರಾಜ್ಯವನ್ನಾದರೂ ಗೆದ್ದೇನು‌, ಇಡೀ ಭೂಮಂಡಲವನ್ನು ವಶ ಮಾಡಿಯೇನು‌. ಆದರೆ ನನಗದು ಬೇಡ.
ಲಕ್ಷ್ಮಣ, ನಿನ್ನನ್ನು, ಭರತ ಶತ್ರುಘ್ನರನ್ನು ಬಿಟ್ಟು, ನೀವು ಮೂವರಿಗೆ ಇಲ್ಲದ ಸುಖ ಯಾವುದಾದರೂ ಇದ್ದರೆ, ಆ ಸುಖವನ್ನು ಬೆಂಕಿ ಭಸ್ಮ ಮಾಡಲಿ. ನನಗೆ ಆ ಸುಖವೇ ಬೇಡ’ ಎನ್ನುತ್ತಾನೆ.

ಬಳಿಕ, ‘ಭರತ ಯಾಕೆ ಬಂದ ಅನ್ನೋದನ್ನ ನನ್ನ ವಿವೇಚನೆಯಿಂದ ಹೇಳ್ತೇನೆ ಕೇಳು, ಭ್ರಾತೃವತ್ಸಲ ಭರತ ತನ್ನ ಮಾವನ ಮನೆಯಿಂದ ಅಯೋಧ್ಯೆಗೆ ಬಂದಿರ್ತಾನೆ. ಅವನು ನನ್ನ ಪ್ರಾಣಕ್ಕಿಂತ ಮಿಗಿಲು. ಬಂದ ಮೇಲೆ‌ ನಾನು, ನೀನು, ಸೀತೆ ವನವಾಸಕ್ಕೆ ಬಂದಿದ್ದು ತಿಳಿದು ಅವನ ಹೃದಯವನ್ನು ಸ್ನೇಹವೂ ಇಂದ್ರಿಯಗಳನ್ನು ಶೋಕವೂ ಆವರಿಸಿರ್ತವೆ. ನೊಂದಿರುತ್ತಾನೆ. ಅವನು ನನ್ನನ್ನು ಕಾಣಲಿಕ್ಕೆ ಬಂದಿದ್ದಾನೆ. ಬೇರೆ ರೀತಿಯಲ್ಲ. ಖಂಡಿತವಾಗಿಯೂ ಕೈಕೇಯಿಗೆ ಕೇಡು ಮಾತುಗಳನ್ನಾಡಿರುತ್ತಾನೆ..’
ರಾಮನ ಕರಾರುವಕ್ಕಾದ ಲೆಕ್ಕಾಚಾರ ಗಮನಿಸಿ!!

ತಂದೆಯ ಮನವೊಲಿಸಿ ನನಗೆ ರಾಜ್ಯ ಕೊಡಲು ಬರುತ್ತಿರುವುದು ಭರತ, ತಿಳಿದುಕೋ. ನೀನು ಹೇಳಿದಂತಲ್ಲ. ಅವನು ಈಗ ನಮ್ಮನ್ನು ಕಾಣಲು ಬರುತ್ತಿರುವುದು ಸಕಾಲಿಕವದು. ಅಸಹಜವಲ್ಲ. ಮನಸ್ಸಿನಲ್ಲಿಯೂ ಕೂಡ ನಮ್ಮ ವಿಷಯದಲ್ಲಿ ಅವನು ಕೇಡೆಣಿಸಲಾರ ಎಂಬುದಾಗಿ ಸರಿಯಾದ ಮಾತುಗಳನ್ನು ರಾಮ ಹೇಳ್ತಾನೆ ಭರತನ ಕುರಿತು. ರಾಮ ಒಬ್ಬನೇ ನಂಬಿದ್ದು ಭರತನನ್ನು.

ಈಗ ಲಕ್ಷ್ಮಣನನ್ನು ತಿದ್ದುವ ಕೆಲಸ ಮಾಡ್ತಾನೆ ರಾಮ. ‘ಆಯಿತು, ನಿನಗೆ ಭರತ ಮಾಡಿದ ಅಪ್ರಿಯವಾದರೂ ಏನು? ಯಾಕೆ‌ ನಿನಗಿಂಥಾ ಭಯ? ಯಾಕೆ ಭರತನ ಕುರಿತು ಶಂಕೆ? ಭರತನ ಕುರಿತು ನಿಷ್ಠುರವಾದ, ಅಪ್ರಿಯವಾದ ಮಾತನ್ನು ಇನ್ನು ಮುಂದೆ ಹೇಳಬೇಡ. ಹೇಳಿದರೆ ನೀನು ನನ್ನನ್ನೇ ಅಂದಂತಾಯಿತು. ಲಕ್ಷ್ಮಣ, ಮಕ್ಕಳು ತಂದೆಯನ್ನು ಕೊಲ್ಲುವುದು, ಸೋದರ ಸೋದರನನ್ನು ಕೊಲ್ಲುವುದು ಎಂಥಾ ಆಪತ್ತಿದ್ದರೂ ಸರಿಯಾ? ತಂದೆ, ಅಣ್ಣ, ತಮ್ಮ ಎಂದರೆ ನಮ್ಮ ಪ್ರಾಣವೇ ಅಲ್ಲವೇ? ಅವರನ್ನು ಕೊಲ್ಲುವಂಥದ್ದು ಎಲ್ಲಿಯಾದರುಂಟೇ? ರಾಜ್ಯಕ್ಕಾಗಿ ನೀನು ಈ ರೀತಿ ಹೇಳುವೆಯಾದರೆ ಭರತನ ಬಳಿ ನಿನಗೇ ರಾಜ್ಯವನ್ನು ನೀಡಲು ಹೇಳುವೆ. ಅವನೂ ಇದಕ್ಕೆ ಒಪ್ಪುತ್ತಾನೆ’ ಎಂದಾಗ ಲಕ್ಷ್ಮಣ ಲಜ್ಜೆಯಿಂದ ತನ್ನೊಳಗೆ ತಾನೇ ಅಡಗಿದ.

ರಾಮ, ಸೀತೆ, ಲಕ್ಷ್ಮಣ , ಭರತರು ಕರ್ಮದ ಫಲವೇನು ಎಂದು ಅವರ ಬದುಕಿನಲ್ಲಿ ತೋರಿಸಿದ್ದಾರೆ. ನಿಶ್ಚಿತವಾಗಿ ಭರತನಲ್ಲಿ ಯಾವ ದೋಷ, ಕಳಂಕವೂ ಇರಲಿಲ್ಲ‌. ಲಕ್ಷ್ಮಣ ಅವನ ಕುರಿತು ಶಂಕೆ ಮಾಡಿದ. ಪರಿಣಾಮ ಲಕ್ಷ್ಮಣನನ್ನು ಸೀತೆ ಶಂಕಿಸಿದಳು ಮುಂದೆ. ಪರಿಣಾಮ ಜಗತ್ತೆಲ್ಲ ಸೀತೆಯ ಕುರಿತು ಶಂಕೆ ಮಾಡಿತು. ಇದು ಅವರ ವ್ಯಕ್ತಿತ್ವವಲ್ಲ‌. ಸೀತೆ – ಸಾಕ್ಷಾತ್ ಲಕ್ಷ್ಮೀದೇವಿ. ಅವಳಂಥಾ ಪೂಜ್ಯತೆ ಇನ್ನೆಲ್ಲಿದೆ? ನಮ್ಮೆಲ್ಲರ ತಾಯಿ ಅವಳು. ಆದರೆ, ಆ ವಿಕಟ ಸಂದರ್ಭ ಅಂಥದ್ದು‌.
ಯಾವುದೇ ಭಾಗವತಾಪಚಾರ ತಿರುಗಿ ಬರ್ತದೆ. ಬರುವಾಗ ಮಾತ್ರ ನೂರು ಮಡಿಯಾಗಿ ಬರುತ್ತದೆ‌

ದೊಡ್ಡವರ ವಿಷಯದಲ್ಲಿ ಮಾಡುವ ಸಣ್ಣ ತಪ್ಪಿಗೂ ದೊಡ್ಡ ಫಲವಿದೆ
ಶುಭಕ್ಕೂ ಹಾಗೇ.

ರಾಮನ ಅಪ್ಪಣೆಯಂತೆ ಲಕ್ಷ್ಮಣ ಮರದಿಂದ ಕೆಳಗಿಳಿಯುತ್ತಾನೆ. ಆ ಕಡೆಗೆ, ಭರತ ಚಿತ್ರಕೂಟ ತಲುಪಿ, ಪರ್ವತದ ಸುತ್ತಲೂ ತನ್ನ ಸೇನೆಯನ್ನು ನಿಲ್ಲಿಸಿದ್ದಾನೆ. ದರ್ಪದ ಸುಳಿವೇ ಇಲ್ಲದೆ ವಿನಯಭಾವದಿಂದ ಕಾಲ್ನಡಿಗೆಯಲ್ಲಿ ಹೊರಟ. ತನ್ನ ತಂದೆಯನ್ನು ಅನುಸರಿಸಿದ ಅಣ್ಣನನ್ನು ಭರತ ಅನುಸರಿಸುತ್ತಾನೆ‌. ಶತ್ರುಘ್ನನ ಬಳಿ‌, ಗುಹನ ಅನುಚರರು, ನಮ್ಮ ಜನಗಳನ್ನು ಕೂಡಿಕೊಂಡು ಕಾಡನ್ನು ಹುಡುಕೆಂದು ಹೇಳಿ ಅಮಾತ್ಯರು, ಪೌರರು, ಗುರುಗಳೊಡನೆ ರಾಮ ಸಿಗುವವರೆಗೆ ಕಾಡನ್ನು ಹುಡುಕ ಹೊರಟ ಭರತ. ಎಲ್ಲಿಯವರೆಗೆ ರಾಮ ಲಕ್ಷ್ಮಣರ, ಮಹಾಭಾಗಳಾದ ಸೀತೆಯ ದರ್ಶನವಾಗುವುದಿಲ್ಲವೋ ಅಲ್ಲಿಯವರೆಗೆ ನನಗೆ ಶಾಂತಿಯಿಲ್ಲ. ಧನ್ಯ ಲಕ್ಷ್ಮಣ, ಧನ್ಯೆ ಸೀತೆ‌. ಚಿತ್ರಕೂಟ ಧನ್ಯ ಎನ್ನುತ್ತಾ ಮುಂದುವರೀತಾನೆ ಭರತ. ಅಲ್ಲೊಂದು ಸಾಲವೃಕ್ಷದ ಬಳಿ‌ ಬಂದಾಗ ಧೂಮರೇಖೆ ಕಂಡಿದೆ ಭರತನಿಗೆ. ಬಹು ಸಮಾಧಾನವಾಯಿತು‌. ಪುಣ್ಯಜನಸೇವಿತ ರಾಮಾಶ್ರಮದ ಕಡೆಗೆ ತ್ವರಿತವಾಗಿ ಪಯಣಿಸಿದ ಭರತ. ಒಂದು ಬಗೆಯ ವ್ಯಾಕುಲತೆ ಭರತನನ್ನು ಆವರಿಸಿದೆ. ಉತ್ಸುಕನಾಗಿ ಶತ್ರುಘ್ನನಿಗೆ ವನವನ್ನೆಲ್ಲಾ ತೋರಿಸ್ತಾ ರಾಮನನ್ನು ಕಾಣಲು ಮುಂದೆ ಹೋಗ್ತಾ ಇದ್ದಾನೆ. ಗುರು ವಸಿಷ್ಠರಿಗೆ, ‘ಅಮ್ಮಂದಿರನ್ನು ನೀವು ಕರೆದುಕೊಂಡು ಬನ್ನಿ’ ಹೇಳಿ‌ ಮುಂದುವರೆದ. ಅವರ ಹಿಂದೆ ಸುಮಂತ್ರ. ರಾಮನ ನೋಡುವ ತೃಷೆ ಸುಮಂತ್ರನಲ್ಲಿ!

ಭರತ ನಡೆದು ಹೋಗುತ್ತಲೇ ಅಣ್ಣನ ಪರ್ಣಕುಟಿಯನ್ನು ಕಂಡ. ತಾಪಸಾಲಯದ ಪರಿಸರದಲ್ಲಿ ಸೌದೆರಾಶಿ, ಹೂಗಳ ಸಂಗ್ರಹ. ದಾರಿಯಲ್ಲಿ, ಮರದ ಮೇಲೆ (ದಾರಿಗಾಗಿ) ದರ್ಭೆ, ನಾರುಬಟ್ಟೆಯ ಚೂರುಗಳಿಂದ ಗುರುತುಗಳನ್ನು ಮಾಡಲಾಗಿತ್ತು. ಹಾಗೆಯೇ ಬೆರಣಿಗಳ ರಾಶಿ, ಚಳಿಯ ನಿವಾರಣೆಗೋಸ್ಕರ. ಭರತ, “ಭಾರದ್ವಾಜರು ಹೇಳಿದ ಸ್ಥಳಕ್ಕೆ ಬಂದಿದ್ದೇವೆ” ಎಂದ. ರಾಮನ ಚಿಹ್ನೆ, ದಾರಿ! ಭರತನಿಗೆ ಪರಮಾನಂದ. ಧೂಮ ಕಾಣಿಸಿತು. ಇಲ್ಲಿಯೇ ನಾನು ನಮ್ಮಣ್ಣನನ್ನು ಕಾಣ್ತೇನೆ. ಬಹುಷಃ ಮಹರ್ಷಿಯಂತೆ ಕಾಣುತ್ತಿರಬಹುದು ನಮ್ಮಣ್ಣ ಎಂದಾಗ ದೂರದಿಂದ ರಾಮನನ್ನು ಕಂಡ.
ನೆಲದ ಮೇಲೆ ಕುಳಿತಿದ್ದಾನೆ, ವೀರಾಸನದಲ್ಲಿ.
“ಜನೇಂದ್ರ, ನಿರ್ಜನದಲ್ಲಿ. ನನ್ನಿಂದಾಗಿ! ಧಿಕ್ಕಾರ ನನ್ನ ಜನ್ಮಕ್ಕೆ. ಹೇಗೂ ನಾನು ಲೋಕದ ಕಣ್ಣಿಗೆ ಪಾಪಿ. ನನಗೆ ಬೇರೇನು ಗತಿಯಿದೆ? ಹೋಗಿ ರಾಮನ ಪಾದಕ್ಕೆ ಬಿದ್ದುಬಿಡ್ತೇನೆ..” ಎಂಬುದಾಗಿ ವಿಲಪಿಸ್ತಾ ಮತ್ತೂ ಹತ್ತಿರ ಬಂದು ಅಣ್ಣನ ಪರ್ಣಶಾಲೆಯನ್ನು ಚೆನ್ನಾಗಿ ನೋಡಿದನಂತೆ. ಸಿಂಹದ ಗುಹೆಯಂತೆ ಗೋಚರಿಸಿತು‌. ಅದೆಲ್ಲವನ್ನೂ ಕಂಡ ಭರತ ಕೊಟ್ಟಕೊನೆಗೆ ತನ್ನ ಗುರುವನ್ನು ಕಂಡ. ರಾಮ ಭರತನಿಗೆ ಗುರುವೂ ಹೌದು. ಜಟಾಧಾರಿಯಾಗಿದ್ದಾನೆ. ಭರತನಿಗೆ ಆ ದರ್ಶನ ಹೊಸತು. ರಾಮನ ಸುತ್ತ ಒಂದು ಪ್ರಭಾವಳಿ. ತನ್ನ ಧರ್ಮ, ತಪಸ್ಸಿನಿಂದನು ಅರ್ಜಿಸಿದ ತೇಜಸ್ಸು.

ವೀರಾಸನದಲ್ಲಿ ಕುಳಿತುಕೊಂಡಿದ್ದಾನೆ ರಾಮ ನೆಲಕ್ಕಿಳಿದ ಸೃಷ್ಡಿಕರ್ತನಂತೆ. ರಾಮನನ್ನು ಕಂಡಾಗ ದುಃಖ ಉಮ್ಮಳಿಸಿತು ಭರತನಿಗೆ ಮಿತಿಮೀರಿ. ಕಣ್ಗತ್ತಲು, ಮೈಮರೆವು ಆವರಿಸಿತು. ರಾಮನ ಕಡೆಗೆ ಧಾವಿಸಿದನಂತೆ ಭರತ. ಆಗಲೂ ರಾಮನ ವರ್ಣನೆ ಮಾಡ್ತಾನೆ. ಆ ಶೋಕವನ್ನು ಧಾರಣೆ ಮಾಡಲು ಆಗ್ತಾ ಇಲ್ಲ. ಆದರೂ ಕಷ್ಟಪಟ್ಟು ಈ ಮಾತುಗಳನ್ನು ಹೇಳ್ತಾ ಮುಂದುವರೆದು ಹೋಗ್ತಾನೆ ಭರತ.
“ಯಾವ ರಾಮನ ಸುತ್ತ ಗುರುಗಳು, ಮಂತ್ರಿಗಳು, ಸಾಮಂತ ರಾಜರು ಕುಳಿತುಕೊಳ್ಳಬೇಕಾಗಿತ್ತೋ ಆ ರಾಮನ ಸುತ್ತ ವನ್ಯಮೃಗಗಳು ಇಂದು. ಚರ್ಮಧಾರಿಯಾಗಿ ಜಟಾಭಾರವನ್ನು ಧಾರಣೆ ಮಾಡಿದ್ದಾನೆ. ಚಕ್ರವರ್ತಿಯಾಗಿ ಧರ್ಮಸಂಚಯ ಮಾಡಬೇಕಿತ್ತು, ಶರೀರ ಕ್ಲೇಶದಿಂದ ಧರ್ಮಸಂಚಯ ಮಾಡುತ್ತಿದ್ದಾನೆ‌. ನಮ್ಮಣ್ಣನಿಗೆ ಎಂತಹ ಸ್ಥಿತಿ! ಉತ್ತಮೋತ್ತಮ ಚಂದನ ಪೂಸುತ್ತಿದ್ದರು ಅವನ ಮೈಗೆ; ಧೂಳು, ಮಣ್ಣು ಈಗ ಆ ಸ್ಥಳದಲ್ಲಿ! ನನ್ನಿಂದಾಗಿ!! ರಾಮನಿಗೆ ಈ ಕಷ್ಟ ಬಂದರೆ, ಅದು ಈ ಭರತನಿಂದಾಗಿ. ಸುಡಲಿ ಬಾಳು ನನ್ನದು! ಈ ಪಾಪಿಯ, ಲೋಕನಿಂದ್ಯನ‌ ಬಾಳು ಸುಡಲಿ!!

ಮುಖವೆಲ್ಲ‌ ಬೆವರಿಳಿದು ರಾಮನ ಕಡೆಗೆ ಓಡೋಡಿ, ಧಾವಿಸಿ ಧಾವಿಸಿ ಅವನನ್ನು ಸೇರಬೇಕು ಅಂತ ಹೋದ ಭರತ ಅವನನ್ನು ಸೇರದೆಯೇ ನಡುವೆ ಬಿದ್ದುಬಿಟ್ಟ. ಕಣ್ಣುಕತ್ತಲೆ ಬಂದಿದೆ ಮೊದಲೇ. ಒಂದು ಕಡೆ ಆನಂದದ ತುತ್ತತುದಿ. ಇನ್ನೊಂದು ಕಡೆ ತನ್ನ ಬಗೆಯೇ ಜಿಗುಪ್ಸೆ‌. ಬಿದ್ದಾಗಲೂ ಕಣ್ಣೀರ ಬರ್ತಾನೇ ಇದೆ. ಅಲ್ಲಿಂದಲೇ ಮಾತಾಡಲು ಪ್ರಯಿತ್ನಿಸ್ತಾನೆ‌. ತುಂಬ ಮಾತಾಡ್ಲಿಕ್ಕಿದೆ ಭರತನಿಗೆ. ತುಂಬ ಘಟನೆಗಳಾಗಿವೆ. ತುಂಬ ಕಾಲವೇ ಆಗಿದೆ ರಾಮನನ್ನು ನೋಡದೆ. ಆದರೆ ” ಅಣ್ಣಾsss” ಎನ್ನುವ ಕೂಗಿನ ಹೊರತು ಬೇರಾವ ಸ್ವರವೂ ಬರಲಿಲ್ಲ.

ಮಾತಿಗೆ ಮೀರಿದ ಭಾವ ಮಾತನ್ನು ಮೂಕವಾಗಿಸುತ್ತದೆ

ರಾಮನು ಎಷ್ಟೆತ್ತರದ ಸತ್ಯ ಎಂದರೆ ಅಲ್ಲಿ ಮಾತು ಮೂಕವಾಗುತ್ತದೆ

ಕಣ್ಣೀರು, ಕೊರಳು ಬಿಗಿದಿದ್ದು: ಎರಡೂ ಸೇರಿ ಮಾತನಾಡಲಿಕ್ಕೆ ಸಾಧ್ಯವಾಗಲಿಲ್ಲ ಭರತನಿಗೆ. ಮೌನವಾಗಿಬಿಟ್ಟ ಭರತ.
ಮುಂದೆ!!? ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ‌ ನೋಡೋಣ!

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments