ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸತ್ಪುರುಷರಿಗೆ ಕೋಪ ಯಾವಾಗ ಬರುತ್ತದೆ, ಸತ್ಪುರುಷರಿಗೆ ಕೋಪ ಬರುವುದು ಯಾವಾಗ? ಧರ್ಮಕ್ಕೆ ಚ್ಯುತಿಯಾದಾಗ, ಧರ್ಮಕ್ಕೆ ಚ್ಯುತಿಯಾಗುವಂತಹ ಕಾರ್ಯ ನಡೆದರೆ, ಧರ್ಮಕ್ಕೆ ಚ್ಯುತಿಯಾಗುವಂತಹ ಮಾತು ಕೇಳಿ ಬಂದರೆ ಕೆಲವೊಮ್ಮೆ ಧರ್ಮದಿಂದ ಚ್ಯುತಗೊಂಡ ಮನಸ್ಸನ್ನು ಕಂಡರೆ ಸಾಕು, ಸತ್ಪುರುಷರಿಗೆ ಕೋಪ ಬರುವುದುಂಟು. ಹೀಗಾಗಿ ಜಾಬಾಲಿಗಳ ಮಾತು ಕೇಳಿದಾಗ ರಾಮನಿಗೆ ಕೋಪ ಬಂತು. ಬ್ರಾಹ್ಮಣೋತ್ತಮರಲ್ಲೊಬ್ಬರು ಜಾಬಾಲಿಗಳು!!! ನಿತ್ಯ ಕೋಪ ಬಂದರೆ ಏನು ಚೆನ್ನ..? ರಾಮ ಹಾಗಲ್ಲ. ಆದರೂ ಕೂಡ ಈ ಸನ್ನಿವೇಶದಲ್ಲಿ ಕೋಪ ಬಂತು ರಾಮನಿಗೆ, ಯಾಕೆ ಅಂದರೆ ಜಾಬಾಲಿಗಳ ಮಾತುಗಳು ನಾಸ್ತಿಕ್ಯವನ್ನು ಹೋಲುವಂತಿದ್ದವು . ತಂದೆ ಯಾರೋ ನೀನು ಯಾರೋ ಅಂದರೆ ಸಮಾಧಾನವಾಗುವುದಾದರೂ ಹೇಗೆ? ಅದೂ ರಾಮನಂಥ ರಾಮನಿಗೆ. ತನಗೇ ಏನೂ ಅಲ್ಲ, ಯಾರೂ ಅಲ್ಲ ಅಂಥವರನ್ನೂ ಆದರಿಸುವಂಥ ಪ್ರಭು, ಸಾಕ್ಷಾತ್ ಜನ್ಮ ಕೊಟ್ಟ ತಂದೆ ಅವನು ಯಾರೋ ನೀನು ಯಾರೋ ಅಂದರೆ ಹೇಗೆ ಸಮಾಧಾನದಿಂದ ಕೇಳಿಕೊಂಡಾನು..!

ಧರ್ಮಕರ್ಮಗಳು. ನಾವು ಬ್ರಾಹ್ಮಣರನ್ನು ಕರೆದು ಊಟ ಹಾಕಿದರೆ ಗತಿಸಿ ಪರಲೋಕದಲ್ಲಿರುವವರಿಗೆ ತೃಪ್ತಿಯಾಗ್ತದೆ ಅಂದರೆ, ಪ್ರಯಾಣಿಸುವವರ ಬದಲಿಗೆ ಪಕ್ಕದ ಮನೆಯವರಿಗೆ ಊಟ ಹಾಕಿದರೆ ತೃಪ್ತಿಯಾಗಬೇಕಲ್ಲ ಎನ್ನುವ ಶುಷ್ಕತರ್ಕ. ಹೊರಗಿನಿಂದ ಸಂಬಂಧ ಇಲ್ಲದಿದ್ದರೂ ಮಾನಸ ಸಂಬಂಧ ಇದೆ. ಎಲ್ಲೇ ಇರಲಿ, ಭಾವದ ಸಂಬಂಧ ಜೀವಕ್ಕೆ ಇದ್ದೇ ಇರುತ್ತದೆ. ನಾವು ಹೋಮಮಾಡಿ ದೇವತೆಗಳಿಗೆ ಸಮರ್ಪಣೆ ಮಾಡಲಿ, ಶ್ರಾದ್ಧ ಮಾಡಿ ಪಿತೃಗಳಿಗೆ ಸಮರ್ಪಣೆ ಮಾಡಲಿ ಅದು ಹೋಗಿ ಸಲ್ಲುವುದು ಅವನಿಗೆ. ಪಿತೃಸ್ವರೂಪ, ದೇವಸ್ವರೂಪ ಎರಡೂ ದೇವನೆ ಆಗಿದ್ದಾನೆ.

ನಾವು ಮಾಡಿದ ಶ್ರಾದ್ಧ ನೇರವಾಗಿ ಹೋಗಿ ತಲುಪುವುದು ಭಗವಂತನಿಗಾದರೆ, ಆ ತೃಪ್ತಿ, ಆ ತಂಪು ಆ ಜೀವಕ್ಕೆ ಸಲ್ಲುತ್ತದೆ. ಭಾವಬಂಧ ಇರುವಂಥದ್ದು ಅದು. ದೇಹವಿರುವಾಗ ದೇಹದ ಮೂಲಕ ಸ್ವೀಕಾರವಾಗಬೇಕು, ದೇಹ ಕಳೆದುಹೋದ ಮೇಲೆ ಭಾವದಿಂದ ಹೋಗುವಂಥದ್ದು. ಜೀವ ವಿಜ್ಞಾನ ಇದು. ರಾಮನಂಥಹ ರಾಮನಿಗೆ ಯಾವ ಜೀವದ ಬಗ್ಗೆಯಾದರೂ ಬೇಸರವಾದರೆ, ಅಂಥವರು ಉದ್ಧಾರವಾಗುವುದುಂಟೇ? ವಸಿಷ್ಟರು ಮಾತನಾಡುತ್ತಾರೆ. ಇಂಥದ್ದನ್ನು ಸರಿಪಡಿಸತಕ್ಕಂಥವರು ಕುಲಗುರುಗಳು ಮಾತ್ರ. ಈ ಲೋಕದ ಗತಾಗತಿಯನ್ನು ಜಾಬಾಲಿಗಳೂ ಬಲ್ಲರು. ತಾನು ಹೇಳುತ್ತಾ ಇರುವುದು ನಿಜವಲ್ಲ ಎಂದು ಅವರಿಗೂ ಗೊತ್ತಿದೆ. ಅದು ಅವರ ನಿಲುವಲ್ಲ. ನೀನು ಯಾವುದಕ್ಕೂ ಜಗ್ಗದಿದ್ದಾಗ ಬಗ್ಗದಿದ್ದಾಗ ಅವರು ಇದನ್ನು ಪ್ರಯೋಗ ಮಾಡಿದರು. ಈ ವಾಕ್ಯದ ಮಾಮೂಲಿ ಅರ್ಥ ಅರ್ಥವಲ್ಲ, ನೀನು ಅಯೋಧ್ಯೆಗೆ ಬರಬೇಕು ಎನ್ನುವುದಷ್ಟೇ ಅರ್ಥ. ಉಳಿದಯಾವ ಶಬ್ದಾರ್ಥವನ್ನು ತೆಗೆದುಕೊಳ್ಳಬೇಡ ಎಂದರು ವಸಿಷ್ಠರು.

ನಾಸ್ತಿಕ್ಯಕ್ಕೆ ನೆಲೆಯಿಲ್ಲ. ಆಸ್ತಿಕ್ಯಕ್ಕೆ ನೆಲೆಯಿದೆ. ~ಶ್ರೀಸೂಕ್ತಿ.

ವಸಿಷ್ಟರು ಭರತನ ಪರವಾಗಿ ನಿಂತು ಮಾತಾಡುತ್ತಾರೆ. “ಲೋಕನಾಥನೇ, ಲೋಕದ ಉತ್ಪತ್ತಿಯನ್ನು ನನ್ನ ಕಡೆಯಿಂದ ಕೇಳು. ಈ ಲೋಕ ಹುಟ್ಟಿದ್ದು ಹೇಗೆ. ಒಂದು ಕಾಲದಲ್ಲಿ ಸೃಷ್ಟಿ ಇರಲಿಲ್ಲ ನೀರು ಮಾತ್ರ ಇತ್ತು. ಆ ನೀರಿನಿಂದಲೇ ಪಂಚಭೂತಗಳು ಹುಟ್ಟಿಬಂದದ್ದು. ಪಂಚಭೂತದ ಮೂಲ ಸಲಿಲ, ಜಲ. ಅಲ್ಲಿ ಭಗವಂತನು ಆವಿರ್ಭವಿಸಿದ. ಸಮಸ್ತ ದೇವತೆಗಳನ್ನು ಅವನೇ ಸೃಷ್ಟಿ ಮಾಡಿದ್ದು. ಸ್ವಯಂಭೂ ಅವನು. ಅವನನ್ನು ಯಾರೂ ಹುಟ್ಟಿಸಲಿಲ್ಲ, ಅವನಿಗೆ ಯಾವ ಕುಲಗೋತ್ರವೂ ಇಲ್ಲ. ಯಾಕೆಂದರೆ ಅವನ ಹಿಂದೆ ಏನೂ ಇಲ್ಲ. ಅವನೇ ಆದಿ. ತಾನಾಗಿ ಉದಿಸಿದವನು. ಅವನು ಚತುರ್ಮುಖ ಬ್ರಹ್ಮನನ್ನು ಸೃಷ್ಟಿಮಾಡುತ್ತಾನೆ. ಅದು ವರಾಹಪುರಾಣ. ಸೃಷ್ಟಿಯ ಮೊದಲ ಬಿಂದು. ಪ್ರಥಮ ಪುರುಷ. ನಂತರ ಬ್ರಹ್ಮದೇವನ ಮೂಲಕ ಸೃಷ್ಟಿಮುಂದುವರಿಯಿತು. ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ, ಜಲದಿಂದ ಭೂಮಿ. ಆಕಾಶವು ಯಾರಿಂದ ಬಂತೋ ಅಂತಹ ಬ್ರಹ್ಮ, ಸೃಷ್ಟಿಕರ್ತ. ಸೃಷ್ಟಿಯನ್ನು ಮುಂದುವರೆಸತಕ್ಕ ಅನೇಕ ಮಕ್ಕಳು. ಅವರ ಮಕ್ಕಳ ಪೈಕಿಯಲ್ಲೊಬ್ಬ ಮರೀಚಿ. ಬ್ರಹ್ಮಮಾನಸಪುತ್ರ. ಸಂಕಲ್ಪಪೂರ್ವ ಸಂತತಿ. ಮರೀಚಿಯ ಸುತ ಕಶ್ಯಪರು. ಪಶ್ಯಕ ಎಂದರೆ ಸಾಕ್ಷೀಭೂತನಾಗಿ ನೋಡುವವನು. ಅದೇ ಕಶ್ಯಪ ಅಂತ ಆದದ್ದು.

ಕಶ್ಯಪರಿಂದ ಸೂರ್ಯ. ಕಶ್ಯಪರಿಗೆ ಅದಿತಿಯಲ್ಲಿ ಎಲ್ಲ ದೇವತೆಗಳೂ ಹುಟ್ಟಿದರು. ಸೂರ್ಯದೇವನ ಮಗ ಮನು. ವೈವಸ್ವತ ಮನು. ಕಲ್ಪನೆಗೆ ಮೀರಿದ ಕಾಲವನ್ನು ಆಳುತ್ತಾರೆ ಮನ್ವಂತರಗಳು. ಮನುವೇ ಇಡೀ ಭೂಮಂಡಲದ ವ್ಯವಸ್ಥೆಗೆ ಆದಿ. ಮೊಟ್ಟಮೊದಲ ಚಕ್ರವರ್ತಿ ಮನು. ಮನುವಿನ ಮಗ ಇಕ್ಷ್ವಾಕು. ಇಕ್ಷ್ವಾಕುವಿಗೆ ಭೂಮಂಡಲವು ಕೊಡಲ್ಪಟ್ಟಿತು. ಇಕ್ಷ್ವಾಕುಗಳಿಗೆ ಸಮಸ್ತ ಭೂಮಿಯ ಹಿಡಿತವಿದೆ. ಅಯೋಧ್ಯೆಯ ಮೊದಲ ದೊರೆ ಇಕ್ಷ್ವಾಕು. ಇಕ್ಷ್ವಾಕುವಿನ ಮಗ ಕುಕ್ಷಿ. ಕುಕ್ಷಿಯ ಮಗ ವಿಕುಕ್ಷಿ, ವಿಕುಕ್ಷಿಯ ಮಗ ಬಾಣ, ಬಾಣನ ಮಗನೇ ಅನರಣ್ಯ, ಮಹಾನುಭಾವ. ಅನರಣ್ಯನು ದೊರೆಯಾಗಿರಲಾಗಿ ಈ ಭೂಮಿಯು ಕ್ಷಾಮಡಾಮರಗಳು ಕಾಡಲಿಲ್ಲ, ಪ್ರಕೃತಿ ಸಂತುಲವಾಗಿತ್ತು. ಅಂಥವನು ಚಕ್ರವರ್ತಿಯಾದರೆ ಮಳೆ ಬರುವಾಗ ಮಳೆ ಬರುವುದು, ಎಷ್ಟೋ ಬೇಕೋ ಅಷ್ಟೇ ಮಳೆ ಬರುವದು. ಕಾಲಕಾಲಕ್ಕೆ ಮಳೆಬೆಳೆ, ಸುಭಿಕ್ಷ. ಪ್ರಕೃತಿಯ ಮೇಲೆ ಅಷ್ಟೇ ಅಲ್ಲ ಮನುಜರ ಮೇಲೂ ಪ್ರಭಾವ. ಈತನ ಕಾಲದಲ್ಲಿ ಇಡೀ ಭೂಮಿಯಲ್ಲಿ ಕಳ್ಳರೇ ಇರಲಿಲ್ಲ..! ಕಳ್ಳತನವೇ ಇರಲಿಲ್ಲ..! ರಾವಣನಿಂದ ಅನರಣ್ಯನ ಸಾವು. ಮತ್ತು ಅನರಣ್ಯನಿಂದ ರಾವಣನ ಸಾವು, ಅಂದರೆ, ಸಾವಿನ ಮೊದಲು ರಾವಣನನ್ನು ಶಪಿಸಿದ್ದಾನೆ, ‘ನನ್ನ ವಂಶದಲ್ಲಿ ಹುಟ್ಟಿಬರುವ ರಾಮನೆಂಬುವನು ನಿನ್ನೂರಿಗೆ ಬಂದು ನಿನ್ನ ಸರ್ವನಾಶವನ್ನು ಮಾಡುತ್ತಾನೆ.’ ಎಂದು ಹೇಳಿದ್ದನು. ಇಂಥಹ ಅನರಣ್ಯನ ಪುತ್ರ ಪೃಥು, ಪೃಥುವಿನ ಮಗನೇ ತ್ರಿಶಂಕು. ಸತ್ಯವ್ರತ ಈತನ ಮೊದಲ ಹೆಸರು. ತ್ರಿಶಂಕು ಶರೀರಸಹಿತ ಸ್ವರ್ಗವನ್ನು ಸೇರಿದವನು. ಅವನಿಗಾಗಿ ಬೇರೆ ಸ್ವರ್ಗ ಸೃಷ್ಟಿಮಾಡಿದರು ವಿಶ್ವಾಮಿತ್ರರು. ತ್ರಿಶಂಕುವಿನ ಮಗ ದುಂದುಮಾರ. ದುಂದುಮಾರನ ಪುತ್ರ ಯುವನಾಶ್ವ. ಯುವನಾಶ್ವನ ಮಗನೇ ಮಾಂಧಾತ. ಮಾಂಧಾತನು ಭೂಮಂಡಲಕ್ಕೇ ಅಲಂಕಾರ, ಯುಗಪುರುಷ ಅವನು. ಅವನಿಗೆ ತಾಯಿಯಿಲ್ಲ. ಇಂದ್ರನ ಕೈಬೆರಳುಗಳಿಂದ ಆತನಿಗೆ ಕ್ಷೀರಪಾನ ದೊರೆಯಿತು. ಮಾಂಧಾತನಿಗೆ ಸುಸಂದಿಯು ಪುತ್ರ. ಸುಸಂದಿಗೆ ಇಬ್ಬರು ಮಕ್ಕಳು, ಧ್ರುವಸಂಧಿ ಹಾಗೂ ಪ್ರಸೇನಜಿತ್. ಧ್ರುವಸಂಧಿ ದೊಡ್ಡವನು. ದೊಡ್ಡವರೇ ರಾಜ್ಯಭಾರವನ್ನು ಮಾಡುವಂಥದ್ದು. ಧ್ರುವಸಂಧಿಯ ಮಗ ಭರತ. ಭರತನ ಮಗ ಅಸಿತ. ಅಸಿತನಿಗೆ ಶತ್ರುಗಳು ಹುಟ್ಟಿಕೊಂಡರು. ಹೈಲಯರು & ತಾಲಜಂಗರು ಎಂಬ ಶತ್ರುಗಳು ಹುಟ್ಟಿಕೊಂಡರು. ಘೋರ ಯುದ್ಧವೇ ನಡೆಯಿತು. ದೊರೆ ಯಥಾಪ್ರಾಣ ಸೆಣೆಸಾಡುತ್ತಾನೆ. ವಿಧಿ ಅವನ ಜೊತೆ ಇರಲಿಲ್ಲ. ಅಸಿತನು ದೇಶಭ್ರಷ್ಟನಾಗುತ್ತಾನೆ. ಹಿಮಾಲಯವನ್ನು ಸೇರುತ್ತಾನೆ. ಅವನಿಗೆ ವೈರಾಗ್ಯವೇ ಬಂದುಬಿಟ್ಟಿತ್ತು. ಹಿಮಾಲಯದಲ್ಲಿ ಮುನಿಭಾವವನ್ನು ತಾಳಿ, ನಿರ್ಯಾಣವನ್ನು ಹೊಂದುತ್ತಾನೆ ಅಸಿತ. ಆಗ ಅವನ ಇಬ್ಬರು ಪತ್ನಿಯರು ಗರ್ಭಿಣಿಯಾಗಿದ್ದರು. ಸೂರ್ಯವಂಶ ಮುಂದುವರಿಯಬೇಕು. ಈರ್ವರಲ್ಲಿ ಮತ್ಸರ. ಗರ್ಭನಾಶಕ್ಕಾಗಿ ಮನೆಯ ಅಕ್ಕನಿಗೆ ವಿಷವುಣಿಸಿದಳು. ಗರ್ಭದಲ್ಲಿರುವ ಶಿಶುವಿಗೇನು ಗೊತ್ತು. ಪಾಪ, ಗರ್ಭಿಣಿ ತಾಯಿಗೆ ಗೊತ್ತಾಯಿತು. ಆಗ ಕಾಲಿಂದಿ ಚ್ಯವನ ಮಹಹರ್ಷಿಗಳ ಹತ್ತಿರ ಹೋಗಿ ಶರಣಾಗುತ್ತಾಳೆ. ತನ್ನ ಮಗನನ್ನು ಕಾಪಾಡಿ ಗುರುಗಳೇ ಎಂದಾಗ, ಚಿಂತಿಸಬೇಡ, ವಿಷವನ್ನು ಮೀರಿ ಶಿಷು ಉದಿಸುತ್ತಾನೆ. ವಿಷವನ್ನೂ ಮೀರಿ ಹುಟ್ಟುತ್ತಾನೆ. ಧರ್ಮಪುರುಷನಾಗುತ್ತಾನೆ ಸುಶೀಲನಾಗುತ್ತಾನೆ ಮಾತ್ರವಲ್ಲ ಅವನಿಂದ ಸೂರ್ಯಯವಂಶ ಬೆಳೆಯುತ್ತದೆ. ಅವನು ಈ ವಂಶಕ್ಕೇ ಶ್ರೇಷ್ಠನಾಗುತ್ತಾನೆ ಎಂದರು ಚ್ಯವನರು. ಹಾಗೆ ವಿಷದೊಡನೆ ಸಮರಸಾರಿ ಹುಟ್ಟಿಬಂದವನು ಸಗರ. ಪದ್ಮದಳಲೋಚನ. ಗರ ಎಂದರೆ ವಿಷ. ವಿಷದೊಡನೆ ಹುಟ್ಟಿದವನು ಸಗರ. ಭೂಮಿಗೆ ಗಂಗೆ ಬರಲಿಕ್ಕೆ ಕಾರಣನಾದವನು. ಭೂಮಿಯಲ್ಲಿ ಸಾಗರವನ್ನು ತೋಡಿಸಿದವನು ಸಗರ. ರಾಮಾಯಣದಾರಂಭದಲ್ಲಿ ಸಗರವಂಶದ ಕಥೆಯೆಂದು ಲವಕುಶರು ಹೇಳುತ್ತಾರೆ. ಇವರ ಮಗ ಅಸಮಂಜ. ಅಸಮಂಜನು ತನ್ನ ಪಾಪ ಕಾರ್ಯದಿಂದ ಎಲ್ಲಾ ಊರುಗಳಿಂದ ಹೊರಗಟ್ಟಲಾಯಿತು. ಅವನ ಮಗ ಅಂಶುಮಾನ್. ಅವನ ಮಗ ದಿಲೀಪ. ದಿಲೀಪನ ಮಗ ಭಗೀರಥ. ಭಗೀರಥಪ್ರಯತ್ನ. ಗಂಗೆಯನ್ನು ಭೂಮಿಗೆ ತಂದು ಇಲ್ಲಿಯ ಅನಂತಕೋಟಿ ಜೀವಕ್ಕೆ ಉಪಕಾರ ಮಾಡಿದವನು. ಭಗೀರಥನ ಮಗ ಕಾಕುತ್ಸ್ಥ. ಅವನ ಮಗ ಕಲ್ಮಾಶಪಾದ. ಅವನಿಗೆ ವಸಿಷ್ಠರ ಶಾಪಬಂದು ರಾಕ್ಷಸನಾಗುತ್ತಾನೆ. ಅವನ ಮಗ ಶಂತನು. ಶಂತನುವಿನ ಮಗ ಸುದರ್ಶನ. ಸುದರ್ಶನನ ಮಗ ಅಗ್ನಿವರ್ಣ, ಅಗ್ನಿವರ್ಣನ ಮಗ ಮದ, ಮದನ ಮಗ ಕಶ್ಯಶೃಕ. ಈತನ ಸುತ ಅಂಬರೀಶ. ಅಂಬರೀಷನ ಮಗ ಮಹುಷ ಮಹುಷನ ಮಗ ನಾಭಾಗ, ಈತನ ಮಗ ಅಜ. ಅಜ ಮತ್ತು ಸುಹೃತ ಅವರಿಬ್ಬರು. ಹಿರಿಯ ಅಜನಿಗೆ ರಾಜ್ಯಾಭಿಷೇಕ. ಅವನ ಮಗನೇ ದಶರಥ. ಭೂಮಿಯೆಲ್ಲವನ್ನೂ ಗೆದ್ದು, ಈಗ ಸ್ವರ್ಗಸ್ಥನಾಗಿ ಸ್ವರ್ಗವನ್ನಾಳುತ್ತಿರುವನು ದಶರಥ.

ಅಂತಹ ದಶರಥನ ಹಿರಿಯ ಮಗ ನೀನು. ನಿನ್ನದೇ ರಾಜ್ಯವನ್ನು ನೀನು ತೆಗೆದುಕೊ. ಹೀಗೆಲ್ಲ ಇಡೀ ವಂಶಜರನ್ನು ಪರಿಚಯಿಸಿ ವಸಿಷ್ಟರು ಹೇಳಿದರು, ” ನೋಡು ರಾಮ, ಇಕ್ಷ್ವಾಕು ವಂಶದಲ್ಲಿ ಪಟ್ಟಾಭಿಷಿಕ್ತರಾದವರೆಲ್ಲರೂ ಹಿರಿಯ ಮಕ್ಕಳು. ಈವರೆಗೂ ಕಿರಿಯವನು ರಾಜನಾದ ಒಂದೇ ಒಂದು ಉದಾಹರಣೆಯಿಲ್ಲ. ರಾಘವರ ಕುಲಧರ್ಮವನ್ನು ನೋಡು. ನಿನ್ನ ಕಾಲದಲ್ಲಿ ಇದ ವ್ಯತ್ಯಾಸವಾಗುವುದು ಬೇಡ. ನಿನ್ನವರನ್ನು ನೋಡು, ರಾಜ್ಯಸ್ವೀಕಾರ ಮಾಡು. ನೀನೇ ದೊರೆಯಾಗು. ಮುಖ್ಯರಾದ ಗುರುಗಳು ಮೂವರು. ತಂದೆ ಗುರು ತಾಯಿ. ತಂದೆ ಜನ್ಮಾಕೊಡುತ್ತಾನೆ. ಗುರು ಪ್ರಜ್ಞೆ ಕೊಟ್ಟವನು. ತಂದೆಗಿಂತ ಗುರು ದೊಡ್ಡವನು. ನಾನು ನಿನ್ನ ತಂದೆಗೂ ಗುರು. ನಿನಗೂ ಗುರು. ನನ್ನ ಮಾತು ಕೇಳು, ಆಗ ನೀನು ಸತ್ಪುರುಷರ ಮಾರ್ಗವನ್ನು ಬಿಟ್ಟಂತಾಗದು. ನೋಡು ರಾಮಾ, ಗುರುಜನರ ಮಾತನ್ನು ಹಾಗೂ ಬಹುಜನರ ಮಾತನ್ನು ಸ್ವೀಕಾರ ಮಾಡಬೇಕು. ನೀನು ಹೀಗೆ ಮಾಡಿದರೆ ಸತ್ಪುರುಷರ ದಾರಿಯನ್ನು ಬಿಟ್ಟಂತಾಗಲಿಲ್ಲ ” ಎಂದು ಮಧುರವಾಗಿ ಹೇಳಿದರು ವಸಿಷ್ಠರು.

ಆಗ ರಾಮ, “ತಾಯಿ ತಂದೆ ಮಕ್ಕಳಿಗೋಸ್ಕರ ಏನೆಲ್ಲ ಮಾಡ್ತಾರೆ. ತೀರಿಸಲು ಸಾಧ್ಯವಾ? ನಮಗೆ ಜನ್ಮಕೊಟ್ಟಿದ್ದೂ, ಇಲ್ಲಿಯವರೆಗೆ ನೆಲೆಯನ್ನು ಕೊಟ್ಟಿದ್ದು ಉಂಟಲ್ಲ. ಆ ಉಪಕಾರಕ್ಕೆ ಪ್ರತ್ಯುಪಕಾರ ಎನ್ನುವುದಿಲ್ಲ. ನಾವಿರುವುದೇ ಅವರಿಂದ. ನಮ್ಮಾ ಅಸ್ತಿತ್ವವೇ ಅವರಿಂದ. ಬಹು ದೊಡ್ಡದು. ದೇಹ ಕೊಟ್ಟವರು ಜೀವಕೊಟ್ಟವರು. ಬಳಿಕ ಮಗುವಾಗಿದ್ದಾಗ ಅವರು ಮಾಡಿದ ಸೇವೆಗಳು. ಏನಾದರೂ ಬಾಯಿಗೆ ಹಾಕಿದಾಗ ತಿನ್ನಲು ಶಕ್ತಿಯಿಲ್ಲ. ಅಷ್ಟು ಅಸಹಾಯಕ ಸ್ಥಿತಿಯಲ್ಲಿ ನಮ್ಮನ್ನು ಸಲಹಿದವಳು. ಸ್ನಾನ ಮಾಡಿಸಿದ್ದು. ನಮ್ಮ ಕಲ್ಮಷ ತೊಳೆದದ್ದು. ಬಟ್ಟೆ ಹಾಕಿದ್ದು…. ಎಷ್ಟುಪರಿ ನಮ್ಮ ಸೇವೆ ಮಾಡಿದ್ದಾರೆ. ಈ ಋಣ ತೀರಿಸುವ ಸಂದರ್ಭ ಯಾವುದಿದ್ದರೂ ಬಿಡಬಾರದು. ಒಂದವಕಾಶ ಸಿಕ್ಕಿದಾಗ ತೀರಿಸಲೇಬೇಕಲ್ಲವೆ? ದಶರಥನಿಗಿತ್ತ ಮಾತು ಸುಳ್ಳಾಗದಿರಲು ನಿಮ್ಮ ಕೃಪೆ ಬೇಕು ಗುರುಗಳೆ..!ಅದನ್ನು ಮುಗಿಸಿಬಂದು ನಿಮ್ಮ ಮಾತನ್ನು ನಡೆಸಿಕೊಡುತ್ತೇನೆ” ಎಂದನು. ಈಗ ಭರತನಿಗೆ ಸಂಪೂರ್ಣ ಕತ್ತಲೆಯಾಯಿತು. ನಾನು ಹೇಳಿದ್ದು ನಡೆಯದಿದ್ದರೆ ಅಮ್ಮಂದಿರು ಹೇಳ್ತಾರೆ, ಗುರುಗಳು ಹೇಳ್ತಾರೆ, ಯಾವುದಾದರೂ ನಡೆಯಬೇಕಲ್ಲ ಎನ್ನುವ ಕಾರಣಕ್ಕೇ ಎಲ್ಲರನ್ನೂ ಕರೆತಂದದ್ದು.

ಆಗ ಅತಿರೇಕದ ಭಾವಕ್ಕೆಭರತ ಇಳಿತಾನೆ. ರಾಮನ ಪರ್ಣಕುಟೀರದ ಬಾಗಿಲ ಮುಂದೆ ದರ್ಭೆ ಹಾಕು ಎಂದು ಸುಮಂತ್ರನಿಗೆ ಹೇಳಿದನು. ಸುಮಂತ್ರ ಒಮ್ಮೆ ರಾಮನ, ಮತ್ತೆ ಭರತನ ಮುಖ ನೋಡುತ್ತಾ ನಿಂತಾಗ, ತಾನೇ ಸ್ವತಃ ದರ್ಭೆ ತಂದು ಹಾಸಿ ಮಲಗುತ್ತಾನೆ ಭರತ. ಇದಕ್ಕೇ ಪ್ರತ್ಯುಪವೇಶನ ಎಂದು ಹೆಸರು. ಊಟ ನೀರು ಇಲ್ಲದೇ ಮುಖಕ್ಕೆ ಮಸುಕಿಹಾಕಿ ಬಾಗಿಲ ಎದುರು ಏಕಮಗ್ನನಾಗಿ ಆಮರಣಾಂತ ದರ್ಭೆಯ ಮೇಲೆ ಮಲಗುವುದು. ಆಮಾರಣಾಂತ ನಿರಶನ. ಸ್ವಾತಂತ್ರ ಸಂಗ್ರಾಮದ ಸತ್ಯಾಗ್ರಹಕ್ಕೆ ಮೂಲವಿದು. ಆದರೆ ಬ್ರಾಹ್ಮಣರು ಮಾತ್ರವೇ ಮಾಡುವ ವ್ರತವಿದು. ಅಣ್ಣನು ಒಪ್ಪುವವರೆಗೂ ನಾನು ಈ ವ್ರತವನ್ನು ಮಾಡುತ್ತೇನೆ ಎಂದ ಭರತ ಹಾಗೆ ಮಲಗಿದನು. ಎಂಥಹ ಪರಿಸ್ಥಿತಿ…! ಪ್ರಾಣಪ್ರಿಯ ಭರತ, ತನ್ನ ಮನೆಯ ಮುಂದೆ ಊಟಬಿಟ್ಟು ನೀರು ಬಿಟ್ಟು ದರ್ಭೆಹಾಸಿ ಪ್ರಾಣತ್ಯಾಗಕ್ಕೆ ಹೊರಡುವನೆಂದರೆ ಹೇಗಾಗಿರಬೇಡ ರಾಮನಿಗೆ. ರಾಮನು, “ನಾನೇನು ಮಾಡಿದ್ದೇನೆ ಅಂತ ನೀನಿದನ್ನು ಮಾಡುತ್ತೀಯೇ? ಇದಕ್ಕೆಲ್ಲಿಂದ ಬಂತು ವಿಧಿ? ಮೂಲ ಎಲ್ಲಿದೆ? ನೀನು ಮಾಡುವಂತೆ ಇಲ್ಲ. ಬ್ರಾಹ್ಮಣರಿಗೆ ಮಾತ್ರವೇ ಮಾಡಲಿಕ್ಕೆ ಇರುವಂಥ ಅವಕಾಶವಿದು. ನೀನು ಕೇಳಿದ್ದಾಗಲಿಲ್ಲ ಎಂದು ವಿಚಲಿತಗೊಂಡು ಸುಮ್ಮನೆ ಎಲ್ಲ ಇದನ್ನು ಮಾಡುವಂತಿಲ್ಲ. ನಿನಗೆ ಈ ಅವಕಾಶ ಇಲ್ಲ. ಏಳು, ರಾಜಶಾರೀದೂಲ. ಈ ದಾರುಣವ್ರತವನ್ನು ಬಿಡು ಅಯೋಧ್ಯೆಗೆ ನಡೆ.” ಎಂದಾಗ ಭರತ ಜನರಿಗೆ ಮಲಗಿದಲ್ಲಿಂದಲೇ, “ಬೆಂಬಲಕೊಡಿ. ನಿಮ್ಮನ್ನೆಲ್ಲ ಕರಕೊಂಡು ಬಂದಿದ್ದು ಯಾಕೆ? ರಾಜ್ಯಕ್ಕೆ ಬರುವಂತೆ ಅಣ್ಣನನ್ನು ಒತ್ತಾಯ ಮಾಡಿ. ಎಲ್ಲರನ್ನು ಕೇಳಿಕೊಂಡನು.” ಕೌಸಲದ ಎಲ್ಲರು ಇಷ್ಟು ಹೊತ್ತು ಭರತನ ಪರವಿದ್ದರು. ಈಗ ರಾಮನ ಪರ. ರಾಮ ಧರ್ಮಾದಲ್ಲಿದ್ದಾನೆ. ಸೂರ್ಯವಂಶದ ತಂದೆಯ ಮಾತು ಸುಳ್ಳಾಗಬಾರದು. ಪ್ರತಿಜ್ಞಾಬದ್ಧವಾಗಿರುವ ಧರ್ಮವದು. ಧರ್ಮವನ್ನು ಬಿಡು ರಾಮ ಎಂದು ಹೇಗೆ ಹೇಳುವುದು, ಸರಿಯಾಗಿ ಹೇಳುತ್ತಿದ್ದಾನೆ ರಾಮ, ನಮ್ಮಿಂದಾಗದು ಎಂದರು ಜನರು.

ಆಗ ರಾಮ, ಅವರ ಮಾತನ್ನಾದರೂ ಕೇಳು. ಧರ್ಮನೇತ್ರರಾಗಿ ಮಾತಾಡುತ್ತಾ ಇದ್ದಾರೆ ಅವರು. ಶುದ್ಧಾಚಮನ ಮಾಡು. ವಿಧಿಬಿಟ್ಟು ವ್ಯವಹಾರ ಮಾಡು. ಇನ್ನೊಂದು ಸಲ ಇದನ್ನು ಮಾಡುವುದಿಲ್ಲ ಎಂದು ನನ್ನನ್ನ ಮುಟ್ಟಿ ಶಪಥ ಮಾಡು. ಎಂದಾಗ ಭರತ ಎದ್ದು ಅಣ್ಣ ಹೇಳಿದ್ದನ್ನು ಮಾಡಿದನು. ಇಲ್ಲಿ ಸೇರಿದ ಸಮಸ್ತರು ಕೇಳಿ. ನನ್ನ ತಂದೆಯಲ್ಲಿ ರಾಜ್ಯವನ್ನು ನಾನು ಬೇಡಿಲ್ಲ. ನನ್ನಮ್ಮನ ನಿರ್ಧಾರಕ್ಕೆ ನನ್ನನುಮತಿಯಿಲ್ಲ. ನನ್ನ ನಿಲುವು ಬೇರೆ. ನನಗಾಗಿ ಹೀಗೆಲ್ಲ ಆಗ್ತದೆ ಅಂತಾದರೆ, ನಾನೇ ವನವಾಸ ಮಾಡುತ್ತೇನೆ. ಅದೇ ಅಣ್ಣನ ತಮ್ಮ ನಾನು, ಅದೇ ತಂದೆಯ ಮಗ ನಾನು. ನಾನು ಮಾಡಿದರೇನು ಅಣ್ಣ ಮಾಡಿದರೇನು. ಅಣ್ಣನ ಪರವಾಗಿ ಹದಿನಾಲ್ಕು ವರ್ಷ ನಾನೇ ವನವಾಸ ಮಾಡ್ತೇನೆ. ಎಂದು ಘೋಷಿಸಿದ ಭರತ. ರಾಮ ಭರತನ ಅಂತರಾಳದ ಮಾತನ್ನು ಕೇಳಿ ಬೆರಗಾದನು.

ಆಗ ರಾಮ ಒಂದು ಹೆಜ್ಜೆ ಕೆಳಗಿಳಿದನು. ಉಪಧಿಯನ್ನು ನಾನು ಮಾಡುವುದಿಲ್ಲ. ಉಪಧಿ ಎಂದರೆ ನನ್ನ ಪರವಾಗಿ ಬೇರೆಯವರು ಮಾಡುವುದು. ಅಪ್ಪ ಅಮ್ಮನನ್ನು ಪ್ರಶ್ನಿಸೋದಿಲ್ಲ. ಭರತನ ಮೇಲೆ ಸ್ವಲ್ಪವೂ ಪ್ರೀತಿ ಕಡಿಮೆಯಾಗುವುದಿಲ್ಲ. ಈ ಭರತ ಮಹಾಪುರುಷ. ಹದಿನಾಲ್ಕು ವರ್ಷ ವನವಾಸದ ನಂತರ ಕಾಡಿನಿಂದ ಮರಳಿ ಬಂದ ನಾನು ಭರತನೊಡಗೂಡಿ ರಾಜ್ಯವಾಳುತ್ತೇನೆ ಎಂದನು ರಾಮ. ದಶರಥನಿಗೆ ತನ್ನ ಮಗನಿಗೆ ರಾಜ್ಯವನ್ನು ಕೊಡುವ ಯೋಗವಿಲ್ಲ.,ಭರತನು ಕೊಟ್ಟ ರಾಜ್ಯವನ್ನು ರಾಮನಾಳುವುದು. ರಾಜ್ಯದ ಕಡೆ ಮೂಸಿಯೂ ನೋಡದೆ ರಾಮನಿಗೆ ಹಾಗೆ ಕೊಟ್ಟವನು. ಅಪ್ಪನ ಪ್ರತಿಜ್ಞಾಭಂಗವಾಗದಿರುವಂತೆ ಮಾಡು ಭರತ ಎಂದು ರಾಮನೇ ಭರತನನ್ನ ಕೇಳಿದನು. ಇವರಿಬ್ಬರ ಮಹಾನುಭಾವರ ಸಂಭಾಷಣೆಯನ್ನು ಕೇಳಲು ಮಹರ್ಷಿಗಳು, ದೇವತೆಗಳು, ಬ್ರಹ್ಮಾಂಡದ ಸಕಲ ಶಕ್ತಿಗಳು ಬಂದಿದ್ದರು ಸಂವಾದವೆಂದರೆ ರಾಜ್ಯ ನಿನಗೆ ಅಂತ ಒಬ್ಬ, ರಾಜ್ಯ ನಿನಗೇ ಅಂತ ಇನ್ನೊಬ್ಬ. ಹೀಗೆಲ್ಲಾದರೂ ಉಂಟೇ ಜಗದಲ್ಲಿ..! ಹೇಗಾದರೂ ಮಾಡಿ ಅಣ್ಣನಿಗೇ ರಾಜ್ಯಾಭಿಷೇಕವಾಗಬೇಕೆಂದು ಇನ್ನಿಲ್ಲದ ಪ್ರಯತ್ನ ಭರತದು. ಭರತನಿಗೇ ಸೇರಬೇಕೆಂಬ ರಾಮನ ಹಠ. ಪ್ರೀತಿಯನ್ನೂ ಬಿಡಲಿಲ್ಲ.

ಸಂಭಾಷಣೆಯನ್ನು ನೋಡಲು ಬಂದ ದೇವಾನುದೇವತೆಗಳು, ” ಧನ್ಯ ದಶರಥ. ಬದುಕಿದ್ದರೇನು, ಇಲ್ಲದಿದ್ದರೇನು. ಇಂತಹ ಮಕ್ಕಳ ಪಡೆದ ಅವನು ಧನ್ಯ..! ಧರ್ಮಜ್ಞರು ಇವರು. ಬಾಹುಪರಾಕ್ರಮಕ್ಕಿಂತ ದೊಡ್ಡದು ಧರ್ಮಪರಾಕ್ರಮ. ಹೀಗೆ ಇದು ಮುಂದುವರೆದರೆ ಕೆಲಸ ಕೆಡುತ್ತದೆ. ಭಕ್ತನು ದೇವರನ್ನು ಕೊಂಡುಕೊಳ್ಳಬಹುದು. ಭಕ್ತಪರಾಧೀನತೆ..! ಅಂತಹ ಭಕ್ತಿ ಭರತನದ್ದು. ಬ್ರಹ್ಮಾಂಡದ ದಿವ್ಯಶಕ್ತಿಗಳಿಗೆ ಆತಂಕವೇನೆಂದರೆ, ರಾಮನನ್ನ ತನ್ನ ಭಕ್ತಿಯ ಪರಾಕಾಷ್ಠೆಯಲ್ಲಿ ಅಯೋಧ್ಯೆಗೊಯ್ದಾನು! ರಾವಣನ ವಧೆಯಾಗಬೇಕು. ಪಟ್ಟಾಭಿಷೇಕವು ಯಾಕೆ ರಾಮನಿಗೆ ಸಿಗಬಾರದೆಂದರೆ ರಾವಣನ ವಧೆಯಾಗಬೇಕಿದೆ. ರಾಮ ಅಲ್ಲಿಂದ ಇಲ್ಲಿಗೆ ಬಂದದ್ದು ಭೂಮಿಯಲ್ಲಿ ರಾಜನಾಗಬೇಕೆಂದಷ್ಟೇ ಅಲ್ಲ. ರಾವಣನ ವಧೆಮಾಡವುದೇ ಮೂಲ ಉದ್ದೇಶ. ಆ ಕೆಲಸವಾಗದಂತೆ ಮಾಡಿಬಿಟ್ಟಾನು ಭರತ!! ಋಷಿಗಳು ಎಲ್ಲ ಭರತನ್ನು ಸುತ್ತುವರಿದು,” ಮಹಾಪ್ರಾಜ್ಞನೇ, ರಾಮನ ಮಾತನ್ನೊಪಿಕೊ. ತಂದೆ ಸುಳ್ಳಾಗಬೇಕಾ? ಪಾಪಿಯಾಗಬೇಕಾ? ಸ್ವರ್ಗಚ್ಯುತಿಯಾಗಿ ನರಕದಲ್ಲಿ ಬೀಳಬೇಕಾ? ಸ್ವರ್ಗವನ್ನು ಸೇರಿದ್ದಿದ್ದರೆ ಅದು ರಾಮನು ಕಾಡನ್ನು ಸೇರಿದ್ದಕ್ಕಾಗಿ. ಒಪ್ಪು ರಾಮನ ಮಾತನ್ನು ” ಎಂದರು. ಅವರೆಲ್ಲರನ್ನೂ ರಾಮ ಗೌರವಿಸಿದನು.

ಮೈಯೆಲ್ಲ ನಡುಗಿತು ಭರತನದ್ದು. ವಿಧಿ ಇದನ್ನು ಬಯಸಿದೆ. ಇದು ಹಾಗೇ ಆಗುವಂಥದ್ದು. ತಪ್ಪಿಸಲಾಗದ ವಿಷಯ. ಎಂದರಿವಿಗೆ ಬಂದಾಗ ನಖಶಿಖಾಂತ ನಡುಗಿದ. ಕಂಪಿಸುವ ಧ್ವನಿಯಿಂದ ಭರತ, “ನೋಡಣ್ಣಾ ರಾಜಧರ್ಮವನ್ನು ನೋಡು. ನನ್ನಮ್ಮನನ್ನು ನೋಡು ಎಂದು ಕೈಕೇಯಿಯನ್ನು ಎದುರಿಗೆ ತಂದು ನಿಲ್ಲಿಸಿದ. ಕೈಕೇಯಿಯೂ ಬೇಡಿದಳು. ನನ್ನ ಕೈಯಲ್ಲಿ ಸಾಧ್ಯವಿಲ್ಲ ರಾಜ್ಯಭಾರ. ಎಲ್ಲ ನನ್ನನ್ನು ಕಾಯ್ತಾ ಇಲ್ಲ ನಿನಗಾಗಿ ಎಲ್ಲ ಇದ್ದಾರೆ. ರಾಜನಾಗು ” ಎಂದು ಹೇಳುತ್ತಾ ಭರತ ರಾಮನ ಕಾಲಿಗೇ ಬಿದ್ದೇ ಬಿಟ್ಟನಂತೆ. ಅತಿಶಯವಾಗಿ ಪ್ರಾರ್ಥಿಸುತ್ತಾನೆ. ಪರಿಪರಿಯಾಗಿ ಹೇಗೆಲ್ಲ ಕೇಳಬಹುದೋ ಹಾಗೆ ಮತ್ತೆ ಕೇಳುತ್ತಾನೆ ಭರತ. ಅತಿಯಾದ ಪ್ರೀತಿಯಲ್ಲಿ ಭರತನ ಎತ್ತಿ ತನ್ನ ಮಡಿಲಲ್ಲಿ ಕೂರಿಸಿಕೊಂಡು, ಬಾಚಿ ತಬ್ಬಿಕೊಂಡು ರಾಮ, ” ಸಾಧ್ಯವಿದೆ. ರಾಜ್ಯವನ್ನು ರಕ್ಷಿಸುವ ಸಾಮರ್ಥ್ಯ ಸ್ವಾಭಾವಿಕವಾಗಿಯೇ ನಿನಗಿದೆ. ನಿನಗೆ ಸಿಕ್ಕ ವಿದ್ಯಾಭ್ಯಾಸ, ಸಂಸ್ಕಾರ ಅದು ಮತ್ತಷ್ಟು ಶಕ್ತಿಯನ್ನು ಕೊಟ್ಟಿದೆ. ಗುರಗಳು, ಅಮಾತ್ಯರು ನಿನ್ನ ಜೊತೆ ಇದ್ದಾರೆ. ಪ್ರತಿಜ್ಞಾಭಂಗ ನನ್ನಿಂದ ಸಾಧ್ಯವಿಲ್ಲ. ಹಿಮವಿಲ್ಲದ ಹಿಮಾಲಯವಿರಬಹುದು. ಆದರೆ ರಾಮ ಕೊಟ್ಟ ಮಾತನ್ನು ತಪ್ಪಲಾರ. ಕೈಕೇಯಿಯನ್ನು ಸರಿಯಾಗಿ ನೋಡಿಕೋ. ರಾಮ ಹದಿನಾಲ್ಕು ವರ್ಷವನವಾಸ ಮುಗಿಯುವವರೆಗೆ ಬಂದು ರಾಜ್ಯಭಾರ ಮಾಡಲಾರ. ಇದು ನನ್ನ ಕೊನೆಯ ಮಾತು” ಎಂದು ರಾಮನು ಹೇಳಿದಾಗ, ಭರತ “ಹಾಗಿದ್ದರೆ ನಿನ್ನದೇ ಈ ಪಾದುಕೆಗಳನ್ನೇರು. ಅಯೋಧ್ಯೆಯಲ್ಲಿ ನಿನಗೆ ಸಲ್ಲಬೇಕೀದ್ದ ಪಾದುಕೆಗಳು. ಇನ್ನು ಮುಂದೆ ಸರ್ವಲೋಕಗಳ ಯೋಗಕ್ಷೇಮ ಪಾದುಕೆಗಳ ಹೊಣೆ.” ರಾಮ ಮಾತನಾಡದೇ ಪಾದುಕೆಗಳನ್ನೇರಿದನು. ಪಾದುಕೆಗಳಲ್ಲಿ ರಾಮ ತನ್ನನ್ನೇ ಇಟ್ಟನು. ರಾಮನ ಅಂತಃಚೈತನ್ಯವನ್ನು ಕೊಟ್ಟನು. ನಾನು ಹೀಗೆ ಬರಲಾರೆ ಹೊರತು ನನ್ನ ಚೈತನ್ಯವನ್ನಿಟ್ಟೆ ಎಂಬುದು ರಾಮನ ಭಾವ. ಭರತ ವಿಫಲನಾಗಲಿಲ್ಲ. ಭರತನು ಪ್ರತಿಜ್ಞೆಯನ್ನು ಮಾಡುತ್ತಾನೆ. ಹದಿನಾಲ್ಕು ವರ್ಷಗಳ ಕಾಲ ನಾನೂ ವನವಾಸ ಮಾಡುತ್ತೇನೆ. ಜಟಾಧಾರಿಯಾಗಿರ್ತೇನೆ. ಹಣ್ಣು ಹಂಪಲು ತಿನ್ನುತೇನೆ. ನೀನು ಹೇಗೋ ನಾನೂ ಹಾಗೆ. ನೀನು ಪೀತಾಂಬರ ಉಡುವಲ್ಲಿವರೆಗೆ, ಕಿರೀಟಧಾರಣೆ ಮಾಡುವವರೆಗೆ ನಾನೂ ಜಟೆಯನ್ನು ಬಿಡುವುದಿಲ್ಲ. ಅಯೋಧ್ಯೆಯ ಹೊರಗಿರ್ತೇನೆ. ನಿನ್ನಾಗಮನವನ್ನೇ ಕಾಯುತ್ತಾ, ಪಾದುಕೆಯ ಮೇಲೆ ರಾಜ್ಯಭಾರವನ್ನು ಇಟ್ಟುಬಿಡ್ತೆನೆ. ಹದಿನಾಲ್ಕು ವರ್ಷ ಕಳೆದ ಮರುದಿನ ನೀನು ಬಾರದೇ ಹೋದರೆ ಬೆಂಕಿಗೆ ಬೀಳುತ್ತೇನೆ” ಎಂದು ಧೀರ ಭರತ ಹೇಳಿದನು.
ಹಾಗಾಗಿಯೆ ರಾಮ ರಾವಣವಧೆಯ ನಂತರ ರಾಮ ಓಡೋಡಿ ಬಂದದ್ದು ಭರತನಿಗಾಗಿ. ಹಾಗಾಗಿ ನಾವು ಇಲ್ಲಿ ಭರತನ ಪ್ರಾಮಾಣಿಕತೆಯನ್ನು ಪ್ರತಿ ಹಂತದಲ್ಲಿ ಕಾಣ್ತೇವೆ. ರಾಮ ಇದಕ್ಕೆ ಭರತನು ಹೇಳಿದ ಹಾಗೆ ಒಪ್ಪುತ್ತಾನೆ. ಭರತನನ್ನು ತಬ್ಬಿಕೊಂಡು, ” ನಿನ್ನ ತಾಯಿ ಕೈಕೇಯಿಯನ್ನು ಕಾಪಾಡು. ಆಕೆಯನ್ನು ಕುರಿತು ಸಿಟ್ಟುಗೊಳ್ಳುವಂತಿಲ್ಲ. ನನ್ನ ಮೇಲಾಣೆ. ಸೀತೆಯ ಮೇಲಾಣೆ. “ಎಂದ ರಾಮ ದೊಡ್ಡವನಲ್ಲವೇ…..? ಕಂಬನಿ ತುಂಬಿ ಭರತನನ್ನು ಬೀಳ್ಕೊಟ್ಟನು ರಾಮಾ. ಮೂರು ಪ್ರದಕ್ಷಿಣೆ ಬಂದು, ಶತ್ರುಂಜಯನೆಂಬ ಪಟ್ಟದಾನೆಯ ಮೇಲೆ ಪಾದುಕೆಗಳನ್ನು ಇಟ್ಟನು ಭರತ. ಧರ್ಮವನ್ನು ಬಿಡದ ರಾಮನು ಹಿಮಾಲಯದಂತೆ ಕಂಡನು. ಎಲ್ರನ್ನು ಬೀಳ್ಕೊಟ್ಟು ಕಂಬನಿ ಸಮೇತ ರಾಮ ಒಳನಡೆದ. ಮುಂದೆ ಪಾದುಕಾಪಟ್ಟಾಭಿಷೇಕ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments