ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಅರಣ್ಯಕಾಂಡದ ಪ್ರಾರಂಭ

ಅಯೋಧ್ಯೆಯೆಂದರೆ ಪರಮ ಶುಭ. ಹಾಗೆಂದ ಮಾತ್ರಕ್ಕೆ ಅಲ್ಲಿ ಅಶುಭವೇ ಇರಲಿಲ್ಲವೆಂದಲ್ಲ. ಭರತ, ಶತ್ರುಘ್ನರು ಇದ್ದ ಹಾಗೇ ವಸಿಷ್ಠ, ವಾಮದೇವರು ಇದ್ದ ಹಾಗೇ ಮಂಥರೆ, ಕೈಕೇಯಿ ಅಲ್ಲಿ ಇರಲಿಲ್ಲವೇ? ಅರಣ್ಯವೂ ಹಾಗೇ. ಅರಣ್ಯವೆಂದರೇ ಶುಭ. ತೋಟವೆಂದರೆ ಹಸಿರೇ ಹೌದಾದರೂ ಕೃತಕತೆ‌. ಅರಣ್ಯವೆಂದರೆ ಸಹಜತೆ. ತೋಟದಲ್ಲಿ ಯಾರು ಭೂಮಿಯನ್ನು ಹದಗೊಳಿಸಿದವರು? ಯಾರು ಉತ್ತವರು? ಯಾರು ಬಿತ್ತವರು? ಯಾರು ಸಾರವನ್ನು, ನೀರನ್ನು ಇತ್ತವರು? ತೋಟದಲ್ಲಿ ಪ್ರತೀ ವರ್ಷ ಔಷಧ ಪ್ರಯೋಗ ವ್ಯಾಪಕವಾಗಿ ಮಾಡುವಂಥದ್ದು ನಾವು. ಮಳೆ ಬಂತೆಂದರೆ ತೋಟಕ್ಕೆ ಕೊಳೆರೋಗ ಬರಬಾರದೆಂಬ ಕಾರಣಕ್ಕೆ ಎಷ್ಟೆಲ್ಲ ಔಷಧವನ್ನು ಸಿಂಪಡಿಸ್ತೇವೆ ನಾವು‌. ಅರಣ್ಯದಲ್ಲಿ ಮಾಡುವವರು ಯಾರು ಅದನ್ನೆಲ್ಲ? ಹಾಗಿದ್ದರೆ ಹೇಗೆ ಚೆನ್ನಾಗಿರ್ತವೆ ಅಂದ್ರೆ ಸಹಜತೆ!! ಅರಣ್ಯವೆಂದರೇ ಶುಭ, ಅರಣ್ಯವೆಂದರೆ ಪ್ರಕೃತಿ. ಅಲ್ಲಿ ಪರಮಶುಭರಾದ ಅನೇಕಾನೇಕ ದಿವ್ಯಚೇತನರು ವಾಸಿಸುತ್ತಿದ್ದರು. ಅಂದಿನ ಕಾಲದಲ್ಲಿ ಋಷಿಗಳು ತಪಸ್ಸಿಗಾಗಿ ಅರಣ್ಯವನ್ನೇ ಆಶ್ರಯಿಸ್ತಾ ಇದ್ದಿದ್ದು. ಹಾಗೆಂದ ಮಾತ್ರಕ್ಕೆ ಅರಣ್ಯದಲ್ಲಿ ಅಶುಭ ಇರಲಿಲ್ಲ ಅಂತೇನೂ ಅಲ್ಲ.
ಇಂದಿನಿಂದ ಅರಣ್ಯಕಾಂಡದ ಪ್ರಾರಂಭ. ನೀವು ಶುಭವನ್ನೂ ಕಾಣ್ತೀರಿ, ಅಶುಭವನ್ನು ಕಾಣ್ತೀರಿ, ಶುಭಾಶುಭಗಳನ್ನು ಮೀರಿ ನಿಂತ ರಾಮನನ್ನೂ ಕಾಣ್ತೀರಿ. ಎಲ್ಲವನ್ನೂ ಶುಭಗೊಳಿಸುವುದನ್ನೂ ರಾಮನಿಗೇ ಗ್ರಹಣ ಬರುವ ಸಂದರ್ಭವನ್ನೂ ಕಾಣ್ತೀರಿ. ರಾಮನು ಗ್ರಹಣದಿಂದ ಹೊರಬಂದು ಸೂರ್ಯನಾಗಿ ಕಂಗೊಳಿಸುವುದನ್ನು ಮುಂದೆ ಕಾಣ್ತೀರಿ.

ಅಯೋಧ್ಯಾಕಾಂಡವು ಶ್ರೀರಾಮನೆಂಬ ಅಯೋಧ್ಯೆಯು ಸೂರ್ಯನು ಮೇಘಮಹಾಮಂಡಲವನ್ನು ಪ್ರವೇಶಿಸಿದ ಹಾಗೇ ಅರಣ್ಯವನ್ನು ಪ್ರವೇಶಿಸುವಲ್ಲಿ ನಿಂತಿತ್ತು. ದಂಡಕಾರಣ್ಯವೆಂಬ ಆದಿ-ಅಂತ್ಯಗಳೆ ಇಲ್ಲದ ಮಹಾರಣ್ಯವನ್ನು ‘ಆತ್ಮವಾನ್’ ರಾಮ ಪ್ರವೇಶಿಸ್ತಾನೆ. ಆ ಮಹಾಸಂಯಮಿಯಾದ ರಾಮನು ಅಲ್ಲಿ ತಾಪಸಾಶ್ರಮ ಮಂಡಲವನ್ನು ಕಂಡ.
ದರ್ಭೆಗಳಿಂದ ಮತ್ತು ನಾರುಡಿಗಳಿಂದ ವ್ಯಾಪ್ತವಾಗಿದೆ ಆ ಆಶ್ರಮ ಮಂಡಲ. ಧನಕನಕಗಳ ದೊಡ್ಡ ಆಶ್ರಯ ಸ್ಥಾನವದಲ್ಲ. ಆದರೆ ಬ್ರಾಹ್ಮೀ ಲಕ್ಷ್ಮೀ ಅಲ್ಲಿ ನೆಲೆಸಿತ್ತು. ಪರಮಾತ್ಮ ಶೋಭೆ, ಚೈತನ್ಯ ಆವರಿಸಿತ್ತು ಆ ಮಂಡಲವನ್ನು. ಮಾತ್ರವಲ್ಲ ವೇದಸಿರಿ!! ಎತ್ತ ನೋಡಿದರತ್ತ ವೇದಮೂರ್ತಿಗಳು ಆವರಿಸಿದ್ದರು ಆ ಆಶ್ರಮ ಮಂಡಲದ ಸುತ್ತಲೂ. ಕಣ್ಣುಕೋರೈಸುವ ಬ್ರಹ್ಮತೇಜಸ್ಸು ಆ ಋಷಿಮಂಡಲದ್ದು.
ವೈರಿ ಯಾರೂ ಇಲ್ಲ‌. ಸಮಸ್ತ ಜೀವರಾಶಿಗಳಿಗೆ ಅದು ಶರಣಾಗತಿಯ ಸ್ಥಾನ. ಆವರಣವನ್ನು ಶುದ್ಧವಾಗಿ ಗೋಮಯದಿಂದ ಸಾರಿಸಲಾಗಿತ್ತು. ಗೋಮಯದಿಂದ ಸಾರಿಸಿದ ಅಂಗಳವು ಕಲ್ಲಿಗಿಂತಲೂ ಶುಭ!
ಅನೇಕಾನೇಕ ಶಾಂತ ಮೃಗಗಳು, ಪಕ್ಷಿ ಸಂಘಗಳು, ಅಪ್ಸರೆಯರು ಪೂಜಿಸಿ ನೃತ್ಯ ಸೇವೆಗೈಯ್ಯುತ್ತಿದ್ದರು, ದೊಡ್ಡ ದೊಡ್ಡ ಅಗ್ನಿಭವನಗಳು, ಬೇರೆ ಬೇರೆ ಬಗೆಯ ಯಜ್ಞಪಾತ್ರಗಳು ಎಲ್ಲ ಕಾಣುತ್ತಿದ್ದವು. ಅಜಿನಗಳು(ಮೃಗಚರ್ಮಗಳು) ~ ಸತ್ತೂ ಸೇವೆ ಮಾಡುವ ಧನ್ಯತೆ ಆ ಮೃಗಗಳಿಗೆ! ಅಂತಹ ಅಜಿನಗಳು, ದರ್ಭೆ, ಸಮಿತ್ತುಗಳಿಂದ ಶೋಭಿಸ್ತಾ ಇದೆ. ಜಲಪೂರ್ಣವಾದ ಕಲಶಗಳು, ಕಂದ-ಮೂಲ ಫಲಗಳು. ಹಾಗೆಯೇ ನಾಡಿನಲ್ಲಿ ಕಾಣ ಸಿಗದ, ಕಾಡಿನಲ್ಲಿ ಮಾತ್ರವೇ ಕಾಣಸಿಗುವಂತಹ ವೃಕ್ಷಗಳು, ರುಚಿ ರುಚಿಯಾದ ಹಣ್ಣುಗಳನ್ನು ಕೊಡುವಂಥಾ ವೃಕ್ಷಗಳಿಂದ ಕೂಡಿತ್ತು. ಬಲಿ(ಪೂಜೆ), ಹವನ, ಭೂತಯಜ್ಞ.. ಮನುಜರಿಗೆ, ದೇವತೆಗಳಿಗೆ, ಗಂಧರ್ವ ಕಿನ್ನರರಿಗೆ, ಪಿಶಾಚಿಗಳು, ಪ್ರೇತಗಳು, ವೃಕ್ಷಗಳು ಮತ್ತು ಯಾರಿಗೆಲ್ಲ ಅನ್ನ ಬೇಕೋ ಅವರಿಗೆಲ್ಲ ಸಲ್ಲಲಿ ಅಂತ ಕೊಡುವಂಥದ್ದು. ಇರುವೆಗಳು, ಕೀಟ ಬಂಧಗಳು, ಹಸಿದ ಕರ್ಮಬಂಧನಗಳಿಂದ ಒಳಪಟ್ಟವರು, ಯಾರಿಗೆ ತಂದೆ-ತಾಯಿ-ಮನೆಯಿಲ್ಲ.. ಯಾರಿಗೆ ವಿದ್ಯೆಯಿಲ್ಲ, ಸಿದ್ಧಿಯಿಲ್ಲ, ಯಾರಿಗೆ ಅನ್ನವಿಲ್ಲ.. ಅವರಿಗೆಲ್ಲ ಸಲ್ಲಲಿ.. ಪ್ರಪಂಚದಲ್ಲಿ ಹಸಿದು ಸಾಯುವವರಿಗೆ ಇಲ್ಲಿ ಕೊಟ್ಟ ಅನ್ನ ಅವರಿಗೆ ಸಲ್ಲಲಿ ಅಂತ. ಸಮಸ್ತ ಭೂತಗಳಿಗೂ ಸಲ್ಲಲಿ ಅಂತ. ನಾನು ಬೇರೆಯಲ್ಲ. ಹಾಗಾಗಿ ಪ್ರಪಂಚವೆಲ್ಲವೂ ವಿಷ್ಣುಸ್ವರೂಪ. ನಾನು ಅಭೇದ. ಎಲ್ಲಕ್ಕೂ ಸಲ್ಲಲಿ. ಹಾಗಾಗಿ ಭೂಮಿಯಲ್ಲಿ ನಾವು ಅನ್ನವನ್ನು ಇಡತಕ್ಕಂತದ್ದು. ಅದು ಎಲ್ಲರಿಗೂ ಸಲ್ಲಬೇಕದು ಅಂತ. ಎತ್ತ ನೋಡಿದರತ್ತ ವೇದಘೋಷ. ಹಾಗೇ ವನಸುಮಗಳು, ಪದ್ಮಗಳಿರತಕ್ಕಂತ ಕೊಳ, ಇಂಥದ್ದು.

ಮತ್ತೆ ಅಲ್ಲಿದ್ದವರು ಮೂಲಫಲಗಳನ್ನೇ ತಿಂದುಕೊಂಡು ಇದ್ದವರು‌. ಇದೇ ಅವರ ಆಹಾರ‌. ಮೃಷ್ಟಾನ್ನವಿಲ್ಲ! ಅವರಿಗೆ ಅವರ ಮೇಲೆ ‌ನಿಯಂತ್ರಣವಿದೆ. ನಾರುಡೆ & ಕೃಷ್ಣಾಜಿನ ಧಾರಣೆ ಮಾಡಿದ ಹಳೆಯ ಹಳೇ ಋಷಿಗಳು ಸೂರ್ಯಾಗ್ನಿ ಸದೃಶರಾಗಿದ್ದರು. ಬಹಳ ಪವಿತ್ರ ಚೇತನಗಳು ಅವರೆಲ್ಲರೂ ಕೂಡ. ಮತ್ತೆ ಆಹಾರ ನಿಯಮವಿದೆ. ತಪಸ್ಸು! ಅಂತಹ ಪರಮರ್ಷಿಗಳಿಂದ ಶೋಭಿತವಾದ ಆಶ್ರಮ ಮಂಡಲ ಬ್ರಹ್ಮಲೋಕದಂತೆ ಇತ್ತು! ಬ್ರಹ್ಮಜ್ಞಾನಿಗಳಾದ ಮಹಾಮಹಿಮರಾದ ಬ್ರಾಹ್ಮಣೋತ್ತಮರಿಂದ ಶೋಭಿಸುತ್ತಿತ್ತು ಆ ಆಶ್ರಮಮಂಡಲ.
ಅದನ್ನು ರಾಮನು ಕಂಡನು. ಎಷ್ಟು ಶುಭವಿದೆ ನೋಡಿ! ನಗರಕ್ಕಿಂತಲೂ ಸಹಸ್ರಮಡಿ ಮಿಗಿಲಾದ ಶುಭ ಅರಣ್ಯದಲ್ಲಿ‌. ಅದನ್ನು ನೆನಪು ಮಾಡಿದರೇ ಪವಿತ್ರರಾಗ್ತೇವೆ. ಕಿವಿಯಿಂದ ಕೇಳುವುದೇ ಶುಭ. ಅದನ್ನು ನೋಡಿದರೆ, ಅವರ ಜೊತೆಗೆ ಒಡನಾಡಿದರೆ, ಅವರ ಆಶೀರ್ವಾದ ಪಡೆದುಕೊಂಡರೆ? ಕೇಳುವುದೇನಿದೆ? ಹೇಳಿ! ಇಂಥದ್ದನ್ನು ರಾಮನು ಕಂಡನು.

ಆಗ, ಹೆದೆಯೇರಿದ ತನ್ನ ಧನುಸ್ಸನ್ನು ಹೆದೆಬಿಡಿಸಿ ಹಿತವಾಗಿಸಿದ ರಾಮ. ಆಶ್ರಮಕ್ಕೆ ಗೌರವವದು. ಸುರಕ್ಷಿತ ಜಾಗವದು! ಆಶ್ರಮಕ್ಕೆ ರಾಮ ಸಮೀಪಿಸುತ್ತಿದ್ದಂತೆ ಋಷಿಗಳಿಗೆ ಅಂತಃಕರಣದಿಂದಲೇ ಗೊತ್ತಾಯಿತು. ವಿಶ್ವಂಬರ ಚೇತನ ಇತ್ತ ಕಡೆ ಬರುತ್ತಿರುವುದನ್ನು ದಿವ್ಯಜ್ಞಾನದಿಂದಲೇ ತಿಳಿದರು. ಸುಪ್ರೀತರಾಗಿ ರಾಮ, ಸೀತೆ, ಲಕ್ಷ್ಮಣರನ್ನು ಇದಿರುಗೊಳ್ಳಲು ಬರುತ್ತಾರೆ. ಆಗ ರಾಮನು ಉದಯಿಸುವ ಚಂದ್ರನಂತೆ ಋಚಿಗಳ ಕಣ್ಣಿಗೆ ಕಂಡುಬಂದ. ಮಂಗಲಪ್ರಯೋಗವನ್ನು ಮಾಡ್ತಾರೆ‌. ರಾಮನನ್ನು ಸ್ವೀಕರಿಸುತ್ತಾರೆ. ಅಸಾಮಾನ್ಯ! ಅಪ್ರಾಕೃತ! ಇವನು ಈ ಲೋಕದವನಲ್ಲ, ಅಲ್ಲಿಯವನು! ಸದ್ಯ ನಿರಾಭರಣ ಸುಂದರ! ರಾಮನಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ. ಲೋಕೈಕವೀರ ಅತ್ಯಂತ ಸುಕುಮಾರ. ಅಷ್ಟೆಲ್ಲ ವಸ್ತ್ರ ಆಭರಣಗಳನ್ನು ತೊಟ್ಟುಕೊಂಡಿಲ್ಲ. ಮಾಡಿದ್ದಷ್ಟನ್ನೂ ಒಪ್ಪ ಓರಣವಾಗಿ ಮಾಡಿದ್ದ.

ಅತಿಯಾದ ಅಲಂಕಾರದ ಹಿಂದೆ ಹೋಗುವುದು ಸರಿಯಲ್ಲ. ಇದ್ದಷ್ಟು ವ್ಯವಸ್ಥಿತವಾಗಿರಬೇಕು

ಸ್ವಚ್ಛವಾಗಿ ತೊಳೆದ ಬಟ್ಟೆ, ಸರಿಯಾಗಿ ಶಿಸ್ತಾಗಿರಬೇಕು. ಆ ವೇಷ ತುಂಬಾ ಚೆನ್ನಾಗಿತ್ತಂತೆ. ವಿಸ್ಮಿತರಾಗಿ ನೋಡ್ತಾರೆ ವನವಾಸಿಗಳು. ವೈದೇಹಿ, ಲಕ್ಷ್ಮಣರನ್ನೂ ಕೂಡ ಋಷಿಗಳು ತೆರೆದ ಕಣ್ಣು ಮುಚ್ಚದೇ ನೋಡಿದರು ಆಶ್ಚರ್ಯಕರವಾಗಿ, ಹಿಂದೆಂದೂ ನೋಡಿರದ ಆಕೃತಿಗಳನ್ನು ಕಂಡು. ಕಾಡಿನಲ್ಲಿ ವಾಸಿಸುವ ಎಲ್ಲರೂ ಬೆಕ್ಕಸ ಬೆರಗಾಗಿ ಏನಿದು‌ ಮಂಗಲದ ಮಂಗಲ, ಸುಂದರದ ಸುಂದರ ಎಂಬುದಾಗಿ ಅಚ್ಚರಿಯಿಂದ ನೋಡ್ತಾ ಇದ್ದಾರೆ. ಬಳಿಕ ರಾಮನನ್ನು ಪರ್ಣಶಾಲೆಯಲ್ಲಿ ಕುಳ್ಳಿರಿಸಿದರು. ಅರ್ಘ್ಯ, ಪಾದ್ಯ ಮೊದಲಾದವುಗಳಿಂದ ವಿಧಿವತ್ತಾಗಿ ಸತ್ಕರಿಸ್ತಾರೆ. ಮೂಲ, ಫಲ, ಪುಷ್ಪಗಳನ್ನು ಸಮರ್ಪಿಸಿ ಕೊನೆಯಲ್ಲಿ ತಮ್ಮ ಆಶ್ರಮವನ್ನೇ ಸಮರ್ಪಿಸುತ್ತಾರೆ. ಕೈಮುಗಿದು ರಾಮನಿಗೆ ಹೇಳ್ತಾರೆ, ‘ಧರ್ಮಪಾಲ ನೀನು,ಜನರಿಗೆಲ್ಲ ಆಶ್ರಯ, ರಕ್ಷಕ ನೀನು. ಹೇ ಮಹಾಕೀರ್ತಿಯೇ, ಪೂಜನೀಯ, ಗೌರವಾರ್ಹ, ಮಾನ್ಯ, ದಂಡಧರನಾದ ರಾಜ ನೀನು, ಗುರು ನೀನು. ನಿಜವಾಗಿ ಕ್ಷತ್ರಿಯ; ಆದರೆ ಸರ್ವಶ್ರೇಷ್ಠ ಎನ್ನುವ ಭಾವ! ಪರಮಾತ್ಮನ ಅವತಾರವೇ ಎಂಬುದನ್ನು ಕಂಡುಕೊಂಡಿದ್ದಾರೆ ಅವರು. ಯಾವುದೇ ರಾಜನಾದರೂ ಇಂದ್ರನ ನಾಲ್ಕನೇ ಒಂದಂಶ‌ ಆಗಿರುತ್ತಾನೆ. ನೀನು ವನಸ್ಥನಾಗಿರು, ಭವನಸ್ಥನಾಗಿರು – ನೀನೇ ನಮ್ಮ ರಕ್ಷಕ, ರಾಜ. ತನ್ನ ಗರ್ಭವನ್ನು ತಾಯಿಯು ರಕ್ಷಿಸುವಂತೆ ನಮ್ಮನ್ನು ಪ್ರಭು ನೀನು ರಕ್ಷಿಸಬೇಕು ಎಂದು ರಾಮನನ್ನು ಪೂಜಿಸುತ್ತಾರೆ. ಶುಭದ ಭಾಗವಿದು. ಮರುದಿನ ಸೂರ್ಯೋದಯಕ್ಕೆ ಋಷಿಗಳಿಗೆಲ್ಲ ಹೋಗಿ ಬರುತ್ತೇನೆಂದು ತಿಳಿಸಿ ಕಾಡು ಪ್ರವೇಶಿಸ್ತಾನೆ.

ಆ ಕಾಡು ಬೇರೆಯೇ ಥರ ಇದೆ. ಒಂದೂ ಸೌಮ್ಯ ಮೃಗವಿಲ್ಲ. ಅಮಂಗಲಕರ ಕಾಡು. ಮರ-ಗಿಡ-ಬಳ್ಳಿ-ಪೊದೆಗಳು ಕಿತ್ತು ಬಿದ್ದಿವೆ. ನೀರಿನ ಸುಳಿವಿಲ್ಲ. ರಕ್ತವನ್ನೇ ಕುಡಿವವರು ಆ ಕಾಡಿನ ವಾಸಿಗಳು. ಪಾಪದ ಪಕ್ಷಿಗಳೂ ಹೆದರಿ ಶಬ್ದ ಮಾಡುತ್ತಿಲ್ಲ. ಜೀರುಂಡೆಗಳು ಭೈರವ ನಾದ ಮಾಡುತ್ತಿವೆ. ಇಂತಹ ವನದಲ್ಲಿ ರಾಮ ಮುಂದೆ ಹೋಗ್ತಾ ಇದ್ದಾನೆ. ಈ ಕಾಡು ಕೇಡು ಏಕಾಯಿತು?
ನಾವು ಎಂತವರಾಗಿರುತ್ತೇವೋ ನಮ್ಮ ಪರಿಸರ ಹಾಗಾಗ್ತದೆ. ನಾವೆಂಥವರೋ ಪರಿಸರದ ಮೇಲೆ ನಮ್ಮ ಪ್ರಭಾವ ಇರುತ್ತದೆ. ಘೋರ ಮೃಗಗಳಿರುವ ಕಾಡಿನಲ್ಲಿ ಮೃಗಗಳಿಗಿಂತ ಘೋರನಾದವನು ಬಂದ. ಬೆಟ್ಟವೇ ನಡೆದು ಬಂದಂತೆ. ನರಭಕ್ಷಕ, ದೊಡ್ಡ ಸ್ವರ, ಕಣ್ಣು ಉಳಿ ಬಿದ್ದಿದೆ, ದೊಡ್ಡ ಬಾಯಿ, ವಿಕಟನಾಗಿದ್ದಾನೆ. ಹೊಟ್ಟೆ ಕೆಲವು ಕಡೆ ಒಳಗೆ, ಕೆಲವು ಕಡೆ ಉಬ್ಬಿದೆ. ಭೀಭತ್ಸವಾಗಿರತಕ್ಕಂತ ರೂಪ! ಆ ದರ್ಶನವು ಮಹಾಘೋರ. ಅಲಂಕಾರ: ಹುಲಿಯ ಚರ್ಮಗಳನ್ನು ಸುತ್ತಿಕೊಂಡಿದ್ದಾನೆ. ರಕ್ತ, ಮಾಂಸಸಾರಗಳನ್ನು ಕೂಡಿದ ಹಸಿ ಹುಲಿಚರ್ಮಗಳನ್ನು ಸುತ್ತಿಕೊಂಡಿದ್ದಾನೆ. ಬಾಯ್ತೆರೆದ ಅಂತಕನಂತೆ. ಕೈಯ್ಯಲ್ಲೊಂದು ಶೂಲ! ಶೂಲಕ್ಕೆ 3 ಸಿಂಹ, 4 ಹುಲಿ, 10 ಎತ್ತುಗಳು, ತುದಿಯಲ್ಲಿ ದೊಡ್ಡ ಆನೆಯ ತಲೆ ಕುತ್ತಿದ್ದಾನೆ. ಭಯಂಕರವಾಗಿ ಬೊಬ್ಬಿರಿಯುತ್ತಾ ಬರುತ್ತಿದ್ದಾನೆ.

ರಾಮ ಲಕ್ಷ್ಮಣ ಸೀತೆಯರನ್ನು ಕಂಡು ಪರಮ ಕ್ರುದ್ಧನಾಗಿ ಧಾವಿಸ್ತಾನೆ. ಭಯಂಕರವಾಗಿ ಬೊಬ್ಬಿರಿದು ಸೀತೆಯನ್ನು ಹಿಡಿದುಕೊಂಡು ಹೋಗಿ ರಾಮ ಲಕ್ಷ್ಮಣರ ಕಡೆಗೆ ಮುಖ ಮಾಡಿ, ಯಾರು ನೀವು? ನಾರು ಬಟ್ಟೆ, ಜಟೆಯನ್ನು ಧಾರಣೆ ಮಾಡಿದ್ದೀರಿ. ಮತ್ತೆ ಈ ಸ್ತ್ರೀ ಏನು ಮಾಡುತ್ತಿದ್ದಾಳೆ ನಿಮ್ಮ ಜೊತೆ? ಮುಗಿಯಿತು ನಿಮ್ಮ ಆಯಸ್ಸು. ಬಿಲ್ಲು ಬಾಣ ಹಿಡಿದು ದಂಡಕಾರಣ್ಯಕ್ಕೆ ಏಕೆ ಬಂದಿರಿ? ನೀವಿಬ್ಬರು ತಾಪಸಿಗಳು ಅಂದಮೇಲೆ ಸ್ತ್ರೀ ಹೇಗೆ ನಿಮ್ಮ ಜೊತೆಗೆ? ನೀವಿಬ್ಬರು ಅಧರ್ಮಚಾರಿಗಳು. ಮುನಿಗಳಿಗೆ ಕೆಟ್ಟ ಹೆಸರು ತರುತ್ತೀರಿ. ನಾನು ವಿರಾದನೆಂಬ ರಾಕ್ಷಸ, ನಿತ್ಯವೂ ಋಷಿಮಾಂಸ ಭಕ್ಷಣೆ ಮಾಡುತ್ತೇನೆ. ಈ ನಾರಿ, ಸುಂದರಿಯಾದ ಕಾರಣ ನನ್ನ ಹೆಂಡತಿಯಾಗುತ್ತಾಳೆ. ನಿಮ್ಮಿಬ್ಬರ ರಕ್ತವನ್ನು ಕುಡಿಯುತ್ತೇನೆ. ಹೇಗೆ ಸೊಕ್ಕಿನಿಂದ ಬೊಬ್ಬಿರಿದು ಮಾತನಾಡುತ್ತಿದ್ದಾಗ ಸೀತೆ ಗಡಗಡ ನಡುಗಿದಳು. ರಾಮನ ಮುಖವೂ ಕಂದಿತು. ಲಕ್ಷ್ಮಣನಿಗೆ ರಾಮ ಹೇಳ್ತಾನೆ, ‘ನೋಡು ಲಕ್ಷ್ಮಣ, ರಾಜಾಧಿರಾಜ ಜನಕನ ಮಗಳು, ನನ್ನ ಪತ್ನಿ, ಶೀಲ-ಚಾರಿತ್ರ್ಯದಿಂದ ಶೋಭಿಸುವವಳು. ಸುಖವಾಗಿ ಬೆಳೆದವಳು. ಅವಳ ಈಗಿನ ಸ್ಥಿತಿ ನೋಡು! ಕೈಕೇಯಿ ವರ ಕೇಳುವಾಗ ಏನಪೇಕ್ಷೆ ಆಕೆಯ ಮನಸ್ಸಿನಲ್ಲಿತ್ತೋ, ಅದೇ ಆಗುತ್ತಿದೆ.
ಸುಣ್ಣ ಯಾವುದು, ಹಾಲು ಯಾವುದು ಅಂತ ರಾಮನಿಗೆ ಗೊತ್ತಿಲ್ಲಾಂತ ಅಲ್ಲ, ಸುಣ್ಣವನ್ನು ಹಾಲನ್ನಾಗಿ ಮಾಡಬಲ್ಲ ಔದಾರ್ಯ, ಮನಸ್ಥಿತಿ ರಾಮನದು
ರಾಮನೇ ಹೇಳ್ತಾನೆ!

‘ರಾಜ್ಯ ಕಳೆದುಕೊಂಡದ್ದಕ್ಕಿಂತ, ತಂದೆಯ ನಿಧನಕ್ಕಿಂತ ದುಃಖವನ್ನು ಸೀತೆಯ ಪರಸ್ಪರ್ಶ ಕೊಡ್ತಾ ಇದೆ’ ಎಂದಾಗ ರಾಮನ ಕಣ್ಣಲ್ಲಿ ನೀರಿತ್ತು, ಲಕ್ಷ್ಮಣನ ಕಣ್ಣಲ್ಲಿ ಬೆಂಕಿಯಿತ್ತು.

ವಿರಾಧ ಪರಿಚಯ ಪ್ರಶ್ನೆ ಮಾಡ್ತಾನೆ. ‘ನೀವ್ಯಾರು?’ ಎಂದು ಬೊಬ್ಬಿರಿದು ಕೇಳಿದ ಪ್ರಶ್ನೆಗೆ ಕಾಡಿಗೆ ಕಾಡೇ ಮೊಳಗುತ್ತದೆ.
‘ನಾವು ಇಕ್ಷ್ವಾಕು ಕುಲದಲ್ಲಿ‌ ಹುಟ್ಟಿದ ನಡೆತೆಯುಳ್ಳವರು..’ ಎಂದು ರಾಮನು ಉತ್ತರಿಸುತ್ತಾನೆ.

ಅದಕ್ಕೆ, ‘ಎಲೈ ದೊರೆಯೇ, ನಾನು ಜವ-ಶತಹೃದೆಯರ ಮಗ. ಪ್ರಪಂಚದ ಸಕಲ ರಾಕ್ಷಸರಲ್ಲಿ ಪ್ರಖ್ಯಾತ. ತಪಸ್ಸು ಮಾಡಿ ಬ್ರಹ್ಮನಿಂದ ವರ ಪಡೆದಿದ್ದೇನೆ. ಶಸ್ತ್ರಗಳಿಂದ ನನಗೆ ಸಾವಿಲ್ಲ. ನನ್ನನ್ನು ಕತ್ತರಿಸಲಾಗದು. ಬದುಕುವ ಆಸೆಯಿದ್ದರೆ ಸೀತೆಯನ್ನು ಬಿಟ್ಟು ಓಡಿ. ಹಾಗಿದ್ದರೆ ಜೀವದಾನ, ಇಲ್ಲದಿದ್ದರೆ ಆಪೋಷಣ’ ಎಂದಾಗ ರಾಮನ ಕಣ್ಣು ಕೆಂಪಾಯಿತು.
‘ಕ್ಷುಧ್ರ, ಧಿಕ್ಕಾರವಿರಲಿ ನಿನಗೆ! ಎಂಥಾ ಹೀನವಾದ ಬದುಕನ್ನು ಬದುಕುತ್ತಿದ್ದೀಯೆ? ಬಾ ಯುದ್ಧಕ್ಕೆ’ ಎನ್ನುತ್ತಾ ವಿರಾಧನ ಮೇಲೆ 7 ಬಾಣಗಳನ್ನು‌ ಪ್ರಯೋಗಿಸ್ತಾನೆ ರಾಮ. ಆ ಬಾಣಗಳು ವಿರಾಧನ ಒಳಹೊಕ್ಕು ಹೊರಬಂದು ರಕ್ತಲಿಪ್ತವಾಗಿ ಭೂಮಿಯನ್ನು ಪ್ರವೇಶಿಸಿದವು. ವಿಚಲಿತನಾದ ವಿರಾಧ. ಬೆಂಕಿಯೊಳಗಡೆ ಹೊಕ್ಕಂತೆ ಅನುಭವ. ಆಗ ಸೀತೆಯನ್ನು ಇಳಿಸಿ ಶೂಲವನ್ನು ಎತ್ತಿಕೊಂಡ. ರಾಮ-ಲಕ್ಷ್ಮಣರೆಡೆಗೆ ಭಯಂಕರ ಕ್ರೋಧದಿಂದ ಭಯಂಕರವಾದ ಶಬ್ದದೊಂದಿಗೆ ಬಾಯ್ತೆರೆದ ಅಂತಕನಂತೆ ಧಾವಿಸಿದ. ರಾಮ ಲಕ್ಷ್ಮಣರು ವಿರಾಧನೆಡೆಗೆ ಬಾಣಗಳ‌ ಮಳೆಗೆರೆದರು. ಒಂದೊಂದು ಬಾಣವೂ ಅಗ್ನಿ ಸದೃಶ, ತೇಜೋಮಯ. ಅಂತಹ ನೂರಾರು, ಸಾವಿರಾರು ಬಾಣಗಳು. ಅವನು ಎಲ್ಲ ಬಾಣಗಳನ್ನು ಒಳಗೊಂಡು ಒಂದು ಸಾರಿ ದೊಡ್ಡದಾಗಿ ನಕ್ಕನಂತೆ ಮೈಮುರಿದನಂತೆ; ಬಾಣಗಳೆಲ್ಲ ಹೊರಹೊಕ್ಕು ಬಿದ್ದವು. ಆತ ರಾಮ ಲಕ್ಷ್ಮಣರೆಡೆಗೆ ಶೂಲವನ್ನು ಬಿಟ್ಟ‌. ರಾಮ ಪ್ರಯೋಗಿಸಿದ 2 ಬಾಣಗಳಿಂದ ಶೂಲವು ಚೂರುಚೂರಾಗಿ ಬಿದ್ದಿತು. ಬಳಿಕ ರಾಮ ಲಕ್ಷ್ಮಣರು ಕೃಷ್ಣಸರ್ಪದಂತಿದ್ದ ಖಡ್ಗಗಳೊಂದಿಗೆ ವಿರಾಧನೆಡೆಗೆ ಧಾವಿಸಿದಾಗ ಇಬ್ಬರನ್ನೂ ಗಟ್ಟಿಯಾಗಿ ತಬ್ಬಿಕೊಂಡು ಹಾಗೇ ಹೊರಟನಂತೆ ತಿರುಗಾಟಕ್ಕೆ. ಆಗ ಸೀತೆ ಭುಜಗಳನ್ನು ಮೇಲೆತ್ತಿ ಕೂಗಿಕೊಂಡಳು,’ಇಗೋ ನೋಡಿ, ರಾಮ ಲಕ್ಷ್ಮಣ ನನ್ನು ಕರೆದೊಯ್ಯುತ್ತಿದ್ದಾನೆ ರಾಕ್ಷಸ. ನನ್ನನ್ನು ಈ ಕಾಡಿನಲ್ಲಿರುವ ತೋಳ, ಚಿರತೆಗಳು ತಿಂದು ಬಿಡುತ್ತವೆ. ಎಲೈ ರಾಕ್ಷಸನೇ, ನನ್ನನ್ನು ತಿನ್ನು, ಅವರಿಬ್ಬರನ್ನು ಬಿಟ್ಟುಬಿಡು’ ಎಂದು ಸ್ವರ ಕೇಳಿದಾಗ ಕೂಡಲೇ ವಿರಾಧನ ವಧೆಗಾಗಿ ವೇಗ ತಾಳಿದರು ರಾಮ ಲಕ್ಷ್ಮಣರು.
ತಮ್ಮ ಬಾಹುಬಲದಿಂದ ರಾಕ್ಷಸನ ಎರಡೂ ಕೈಗಳನ್ನು ಭಗ್ನಗೊಳಿಸುತ್ತಾರೆ. ಮುಷ್ಠಿ ಮಾಡಿ ಗುದ್ದಿದರು, ಮೊಣಕಾಲಿನಿಂದ, ಪಾದಗಳಿಂದ ಒದ್ದರು. ಒತ್ತಿ ಒತ್ತಿ ನೆಲದಲ್ಲಿ ಕುಕ್ಕಿದರು. ಭಾರೀ ಜೀವ, ಸಾಯಲಿಲ್ಲ. ಆಗ ರಾಮ ಲಕ್ಷ್ಮಣ ನನ್ನು ನೋಡಿ ಹೇಳ್ತಾನೆ, ಒಂದೇ ದಾರಿ. ದೊಡ್ಡ ಹೊಂಡವನ್ನು ತೋಡಿ ಮಣ್ಣಿನಲ್ಲಿ‌ ಹಾಕಿ ಮುಚ್ಚಬೇಕು. ಬೇರೆ ದಾರಿಯಿಲ್ಲ. ಹಾಗಾಗಿ‌ ತೋಡು ಹೊಂಡವನ್ನು ಲಕ್ಷ್ಮಣ.

ಮತ್ತೆ ತನ್ನ ಒಂದು ಕಾಲನ್ನು ಅವನ ಕೊರಳ ಮೇಲೆ ಅಲುಗಾಡದಂತೆ ಇಟ್ಟ. ರಾಮನ ಪಾದ ಕೊರಳನ್ನು ತಲುಪಿದಾಗ ವಿರಾಧನ ಒಳಗಿದ್ದ ತುಂಬುರುವಿಗೆ ಎಚ್ಚರವಾಯಿತು‌. ‘ನಾನು ತುಂಬುರು ಎಂಬ ಗಂಧರ್ವ. ಕುಬೇರನ ಶಾಪದಿಂದ ರಾಕ್ಷಸನಾದೆ. ಬಹಳ ಕಾಡಿ ಬೇಡಿದಾಗ ದಶರಥನಂದನ ರಾಮನ ಪಾದಸ್ಪರ್ಶದಿಂದ ನಿನಗೆ ಶಾಪವಿಮೋಚನೆಯಾಗಲಿದೆ ಎಂದು ಕುಬೇರನು ನುಡಿದಿದ್ದನು. ನೀನು ಇಂದ್ರನಿಗೆ ಸಮಾನ. ದಿವ್ಯಪುರುಷ ನೀನು. ಆಗ ಅಜ್ಞಾನ ಕವಿದಿತ್ತು. ಹೇ ಕೌಸಲ್ಯತನಯ, ಈಗ ನೀನಾರೆಂದು ಗೊತ್ತಾಯಿತು ನನಗೆ..’

ದೇವಗಾಯಕ! ಜೀವಪೂರ್ತಿ ಕೊರಳಲ್ಲಿ! ಚೈತನ್ಯ ಹರಿಯಿತು ನೋಡಿ!

ರಂಭೆಯ ಹಿಂದೆ ಹೋಗಿ, ಸಕಾಲದ ಕರ್ತವ್ಯ ಮಾಡದೇ ಇರುವುದರಿಂದ ಕುಬೇರ ಶಪಿಸಿದ್ದರ ಫಲವಾಗಿ ಬಿದ್ದೆ ಭೂಮಿಗೆ. ನಿನ್ನ ಕೃಪೆಯಿಂದ ಸುಧಾರಣ. ಶಾಪದಿಂದ ಮುಕ್ತನಾದೆ. ನಾನಿನ್ನು ನನ್ನ ಲೋಕಕ್ಕೆ ಹೋಗುತ್ತೇನೆ..ನನಗೊಂದು ಕರ್ತವ್ಯವಿದೆ. ಮುಂದಿನ ದಾರಿಯನ್ನು ಹೇಳಬೇಕು ನಾನು. ಈ‌ ದಾರಿಯಲ್ಲಿ ಹೋದರೆ ಅರ್ಧ ಯೋಜನ ದೂರದಲ್ಲಿ ಶರಭಂಗನೆಂಬ ಧರ್ಮಾತ್ಮನು ಸಿಗುತ್ತಾನೆ. ಹೋಗಿ ಅವನನ್ನು ಕಾಣು. ಆದರೆ ಹೋಗುವುದರ ಮುಂಚೆ ನನಗೊಂದು ಗತಿ ಕಾಣಿಸಿ ಹೋಗು ಎನ್ನುತ್ತಾ ರಾಕ್ಷಸರ ಅಂತ್ಯಕ್ರಿಯೆ ಮಾಡುವ ವಿಧಾನ ತಿಳಿಸುತ್ತಾನೆ. ಅಂತೆಯೇ ರಾಮ ಲಕ್ಷ್ಮಣರು ಅವನನ್ನು ಸಮಾಧಿ ಮಾಡ್ತಾರೆ. ಅದು ಅವನ ಬಯಕೆಯಾಗಿತ್ತು. ಅವನಿಗೂ ಒಂದು ಯೋಗ! ಇದು ವಿರಾಧವಧ.

ಮಹಾತ್ಮರು ನಿಗ್ರಹ ಮಾಡಿದರೂ ಅನುಗ್ರಹವಾಗಿರುತ್ತದೆ. ಸಂಹಾರ ಮಾಡಿದ್ದು ಅವನಿಗೆ ದೊಡ್ಡ ಆಶೀರ್ವಾದ

ತುಂಬುರು ಎಂಬ ಗಂಧರ್ವನಿಗೆ ಎಂತಹ ಸ್ಥಿತಿ ಬಂದಿತ್ತು ನೋಡಿ? ಅವನ ತಪ್ಪು, ಕಾಮನೆಯ ಹಿಂದೆ ಹೋಗಿ ಸ್ವಾಮಿಯನ್ನು ಮರೆತು ಸೇವೆಯನ್ನು ಮರೆತಿದ್ದು. ಪರಿಣಾಮ, ರಾಕ್ಷಸನಾದ. ಕಾಮದಿಂದ ಕೆಟ್ಟವನನ್ನು ರಾಮ ಉದ್ಧರಿಸಿದ. ಕಾಮದಿಂದ ಪಥನ, ರಾಮನಿಂದ ಉತ್ಥಾನ ಮತ್ತೆ. ಇದು ವಿರಾಧವಧ.

ಮುಂದಿನದು ಮುಂದಿನ ಪ್ರವಚನದಲ್ಲಿ ನೋಡೋಣ. ಮೋಕ್ಷಪ್ರದಾನ ಮುಂದುವರಿಯುವುದು! ಅರಣ್ಯಕಾಂಡದಲ್ಲಿ ತುಂಬ ರೋಚಕತೆಯಿದೆ. ಅದೂ ಶುಭವೇ ಹೊರತು ಅಶುಭವಲ್ಲ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments