ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಆಯಸ್ಸೇಲ್ಲವು ಸ್ವರ್ಣಮಯವಲ್ಲ. ಮನುಷ್ಯನಾದರೂ, ಪ್ರಾಣಿ–ಪಕ್ಷಿಗಳಾದರೂ, ಮರ-ಗಿಡಗಳದರೂ ಆಯಸ್ಸು ಸ್ವರ್ಣಮಯವಲ್ಲ. ಆಯಸ್ಸಿನಲ್ಲಿ ಎಲ್ಲೋ ಒಂದು ಸ್ವರ್ಣ ಕ್ಷಣ ಬರುವುದು. ಆ ಕ್ಷಣವೇ ಆಯಸ್ಸಿನ ಸಾರ. ಮನುಷ್ಯನ ಆಯಸ್ಸು ತುಂಬಾ ಸಣ್ಣದೇನೂ ಅಲ್ಲ. ಆದರೆ ಮಣ್ಣಿನ ಆಯಸ್ಸು ತುಂಬಾ ದೊಡ್ಡದು. ಪಂಚವಟಿಯು ಪಂಚವಟಿಯಾಗಿ ಇದ್ದಿದ್ದೂ ಕಲ್ಪನೆಗೆ ಮೀರಿದ ಕಾಲದವರೆಗೆ. ಯಾವಾಗ ಶ್ರೀರಾಮನು ಸೀತಾ, ಸೌಮಿತ್ರಿಯರೊಡಗೂಡಿ ಬಂದು ಪಾದಾರ್ಪಣ ಮಾಡಿದನೋ ಆಗ ಪಂಚವಟಿಗೆ ಕೋಟ್ಯಾನುಕೋಟಿ ಆಯಸ್ಸಿನಲ್ಲಿ ಸ್ವರ್ಣ ಘಳಿಗೆಯು ಬಂತು. ಆವರೆಗೆ ಇದ್ದಿದ್ದು ಕೇವಲ ವ್ಯಾಲ(ಸರ್ಪ), ಮೃಗಗಳು ಮಾತ್ರ. ಪಂಚವಟಿಯನ್ನು ಪ್ರವೇಶಿಸಿದ ರಾಮನು ಯಾವ ಸ್ಥಳವನ್ನು ನಾವು ಲಕ್ಷವಾಗಿಟ್ಟುಕೊಂಡು ಹೊರಟಿದ್ದೆವೋ ಅಲ್ಲಿಗೆ ಬಂದು ತಲುಪಿದೆವು ಎಂದು ಲಕ್ಷ್ಮಣನಿಗೆ ಹೇಳಿದನು. ಹೂಬಿಟ್ಟ ಮರ–ಗಿಡಗಳಿಂದ ಕೂಡಿರುವ ಪಂಚವಟಿಯ ಸೊಬಗನ್ನು ನೋಡು, ಎಲ್ಲಡೆಗೆ ದೃಷ್ಟಿಯನ್ನು ಹಾಯಿಸು ಎಂದು ಕಾನನ ನಿಪುಣನಾದ ಲಕ್ಷ್ಮಣನಿಗೆ ರಾಮನು ಹೇಳಿದನು. ಎಲ್ಲಿ ಆಶ್ರಮವನ್ನು ಕಟ್ಟಬಹುದು ..? ಎಲ್ಲಿ ವಾಸ್ತು ಪ್ರಕಾರ ಯೋಗ್ಯ?…ಎಂದು ನೋಡಲು ಹೇಳಿದನು. ಎಲ್ಲಿ ವೈದೇಹಿ ಸಂತೋಷಪಡುವಳೋ, ಎಲ್ಲಿ ನೀನು ಸಂತೋಷ ಪಡುವೆಯೋ, ಎಲ್ಲಿ ನಾನು ಸಂತೋಷ ಪಡುವೆನೋ ಅಂತಹ ಸ್ಥಳವನ್ನು ಆಶ್ರಮ ಕಟ್ಟಲು ಹುಡುಕು ಎಂದು ರಾಮನು ಲಕ್ಷ್ಮಣನಿಗೆ ಹೇಳಿದನು.

ಆನಂದವೇ ಜೀವನದ ಸಾರ ―ಶ್ರೀಸೂಕ್ತಿ.

ತನ್ನ ಮಾತುಗಳನ್ನು ಮುಂದುವರೆಸಿದ ರಾಮನು ಎಲ್ಲಿ ವನವೂ ರಮಣೀಯವೋ, ಎಲ್ಲಿ ಹೂವು, ಧರ್ಭೆ, ನೀರು ಸಿಗುವುದೋ ಅಂತಹ ಸ್ಥಳವನ್ನು ಆರಿಸು ಎಂದು ಹೇಳಿದನು. ರಾಮನ ಮಾತುಗಳನ್ನು ಆಲಿಸಿದ ಲಕ್ಷ್ಮಣನು ಕೈಮುಗಿದು ನಿಂತು, ಅನಂತ ಕಾಲದವರೆಗೂ ನಾನು ದಾಸ , ನೀನೇ ಪ್ರಭು ; ನಿರ್ಣಯಗಳನ್ನು ತೆಗೆದುಕೊಳ್ಳುವುದು ನಿನ್ನ ಕೆಲಸ, ಅದನ್ನು ಜಾರಿಗೊಳಿಸುವುದು ನನ್ನ ಕೆಲಸ ಎಂದು ಲಕ್ಷ್ಮಣನು ಹೇಳಿದನು. ಮುಂದೆ ರಾಮನು ರಾಜನಾದ ಮೇಲೆ ಲಕ್ಷ್ಮಣನನ್ನು ಕರೆದು ಯುವರಾಜನಾಗು ಎಂದಾಗ ಲಕ್ಷ್ಮಣ ಒಪ್ಪಲಿಲ್ಲ.

ಲಕ್ಷ್ಮಣನ ಭಾವಪೂರ್ಣವಾದ ಮಾತನ್ನು ಕೇಳಿ ರಾಮನಿಗೆ ಸಂತೋಷವಾಯಿತು. ವಾಸಮಾಡಲು ಬೇಕಾದ ಸರ್ವಗುಣಗಳಿಂದ ಕೂಡಿದ ಸ್ಥಳವನ್ನು ರಾಮನು ಆರಿಸಿದನು. ನಂತರ ರಾಮನು ಆ ಸ್ಥಳದಲ್ಲಿಯೇ ನಿಂತು, ಲಕ್ಷ್ಮಣನ ಕೈಹಿಡಿದುಕೊಂಡು ಈ ಸ್ಥಳದಲ್ಲಿ ಸಮಧರ್ಮವಿದೆ ಎಂದು ಹೇಳಿದನು.

ಸಂಪತ್ತು ಕಡಿಮೆಯಾದರೂ ತೊಂದರೆ. ಹೆಚ್ಚಾದರೂ ತೊಂದರೆ

ನಾವು ಯೋಚಿಸಿದಂತಹ ಆಶ್ರಮವನ್ನು ಅದೇ ಸ್ಥಳದಲ್ಲಿ ಕಟ್ಟಲು ರಾಮನು ಲಕ್ಷ್ಮಣನಿಗೆ ಹೇಳಿದನು. ಅಲ್ಲಿಯೇ ಅನತಿ ದೂರದಲ್ಲಿ ಪದ್ಮಿನಿ (ಪದ್ಮಗಳು ಇರುವ ಕೊಳ) ಇತ್ತು. ಪರಿಮಳ ಭರಿತವಾದ ಒಂದೊಂದು ಪದ್ಮವು ಬಾಲಸೂರ್ಯನನ್ನು ನೆನಪಿಸುವಂತೆ ಇತ್ತು. ಸಮೀಪದಲ್ಲಿಯೇ ಜಿಂಕೆಗಳ ಗುಂಪು ನೀರನ್ನು ಕುಡಿಯುತ್ತಿರುವ ರಮಣೀಯ ಗೋದಾವರಿ ನದಿ ಶೋಭಿಸುತ್ತಾ ಇತ್ತು. ಹಾಗೆಯೇ ನವಿಲುಗಳ ಕೇಕೆಯ ಧ್ವನಿ ಪರ್ವತಗಳಿಂದ ಕೇಳಿ ಬರುತ್ತಿತ್ತು. ಪರ್ವತಗಳು ಆನೆಯ ಹಾಗೆ ಇದ್ದವು. ಪರ್ವತಗಳ ನಡುನಡುವೆ ಬೆಳ್ಳಿ, ತಾಮ್ರ, ಚಿನ್ನದ ಧಾತುಗಳು ಕೂಡಿರುವಂತೆ ಕಾಣುತ್ತಿತ್ತು. ಹತ್ತಿ, ತಾಳೆ, ಹೊಂಗೆ, ಖರ್ಜೂರ, ಹಲಸು, ಹೊನ್ನೆ, ಮಾವು ಮುಂತಾದ ಮರಗಳು, ಹೂವಿನ ಬಳ್ಳಿಗಳು ಶೋಭಿಸುತ್ತಾ ಇದ್ದವು. ಇಂತಹ ರಮಣೀಯ ಪರಿಸರದಲ್ಲಿ ಪಕ್ಷಿರಾಜ ಜಟಾಯುವಿನ ಜೊತೆ ವಾಸಮಾಡೋಣ ಎಂದು ಹೇಳಿದನು. ಜಟಾಯುವಿನ ಜಾತಿ ಪಕ್ಷಿಯಾಗಿದ್ದರೂ, ರಾಮನಂತಹ ರಾಮನಿಗೆ ಎಲ್ಲ ಒಂದೇ. ರಾಮನು ಜಟಾಯುವನ್ನು ಪರಿವಾರದ ಸದಸ್ಯನನ್ನಾಗಿ ಮಾಡಿಕೊಂಡ.

ಲಕ್ಷ್ಮಣನು ಒಬ್ಬನೇ ಯಾರ ಸಹಕಾರವನ್ನು ಪಡೆಯದೇ ಆಶ್ರಮವನ್ನು ನಿರ್ಮಿಸುತ್ತಾನೆ. ಆಶ್ರಮವು ಚಿಕ್ಕ ಗುಡಿಸಲು ಅಲ್ಲ. ವಿಶಾಲವಾದ ಪರ್ಣಶಾಲೆಯಾಗಿತ್ತು.

ವಿದ್ಯಾಭ್ಯಾಸ ಸರಿಯಾಗಿದ್ದರೆ ಸರ್ವಕಾಲದಲ್ಲೂ ಅದು ಉಪಯೋಗಕ್ಕೆ ಬರುತ್ತದೆ ―ಶ್ರೀಸೂಕ್ತಿ.

ಸ್ವಯಂ ಕೆಲಸ ಗೊತ್ತಿರುವವನು ಮಾತ್ರ ಮಾಡಿಸಲು ಸಾಧ್ಯ ―ಶ್ರೀಸೂಕ್ತಿ.

ಪ್ರೇಕ್ಷಣೀಯವಾದ ನಿವಾಸವನ್ನು ರಾಮನಿಗಾಗಿ ಕಟ್ಟಿದ ಬಳಿಕ ಲಕ್ಷ್ಮಣನು ಗೋದಾವರಿ ನದಿಗೆ ಹೋಗಿ, ಸ್ನಾನ ಮಾಡಿ ಪದ್ಮ ಮತ್ತು ಫಲಗಳನ್ನು ತಂದನು.

ವಿಷಯ ಜ್ಞಾನವೇ ಕರ್ಮದ ಅರ್ಹತೆ ― ಶ್ರೀಸೂಕ್ತಿ

ಲಕ್ಷ್ಮಣನು ಪುಷ್ಪ ಬಲಿಯನ್ನು ಮತ್ತು ವಾಸ್ತುಶಾಂತಿಯನ್ನು ಮಾಡಿ ಆಶ್ರಮವನ್ನು ರಾಮನಿಗೆ ತೋರಿಸಿದನು. ಆಶ್ರಮವನ್ನು ಸೀತೆಯೊಡಗೂಡಿ ಬಂದು ನೋಡಿದ ರಾಮನಿಗೆ ಅತ್ಯಂತ ಸಂತೋಷಯಿತು. ರಾಮನು ಲಕ್ಷ್ಮಣನಿಗೆ “ಅತ್ಯಂತ ದೊಡ್ಡ ಕಾರ್ಯವನ್ನು ಮಾಡಿದೆ” ಎಂದು ಹೇಳುತ್ತಾ, ಬಹುಮಾನವಾಗಿ ಆಲಿಂಗನವನ್ನು ಕೊಡುತ್ತಾನೆ. ಲಕ್ಷ್ಮಣನು ಯಾವುದೇ ಸಲಹೆ ಪಡೆಯದೇ ಸುಂದರವಾಗಿ ಆಶ್ರಮ ನಿರ್ಮಿಸಿದ್ದನು.

ಪೂರ್ಣ ಮನಸ್ಸಿನ ಸೇವೆಯಿಂದ ಧರ್ಮ ಸಂಪಾದನೆಯಾಗುತ್ತದೆ ―ಶ್ರೀಸೂಕ್ತಿ.

ಧರ್ಮಜ್ಞನಾದ ಲಕ್ಷ್ಮಣನ ಕುರಿತು ರಾಮನು ನನ್ನ ತಂದೆಯವರು ತೀರಿಕೊಂಡಿಲ್ಲ, ನಿನ್ನ ರೂಪದಲ್ಲಿ ಇದ್ದಾರೆ ಎಂದು ಹೇಳಿದನು. ಹೀಗೆ ಲಕ್ಷ್ಮೀ ವರ್ಧನನಾದ ಲಕ್ಷ್ಮಣನಿಗೆ ರಾಮನು ತಂದೆಯ ಸ್ಥಾನವನ್ನು ಕೊಡುತ್ತಾನೆ. ಸ್ವರ್ಗದಲ್ಲಿ ದೇವತೆಗಳು ಕಂಗೊಳಿಸುವ ಹಾಗೆ ಪಂಚವಟಿಯಲ್ಲಿ ಅನೇಕ ಕಾಲ ರಾಮನು ಶೋಭಿಸಿದ. ಪಂಚವಟಿಯು ಸ್ವರ್ಗವಾದರೇ, ರಾಮ ದೇವತೆಯಾಗಿದ್ದ. ಕಾಲ ಕಳೆದು ಹೇಮಂತ ಋತು ಬಂತು.

ಮನುಷ್ಯನಿಗೆ ಯಾವುದು ಕಷ್ಟವೋ ಅದುವೇ ಇಷ್ಟ
ಗೋದಾವರಿ ನದಿಗೆ ಸ್ನಾನಕ್ಕಾಗಿ ರಾಮನು ಗೋದಾವರಿ ನದಿಗೆ ಹೋದನು. ಸೀತೆಯ ಜೊತೆಯಲ್ಲಿ ಲಕ್ಷ್ಮಣನು ಹಿಂದಿನಿಂದ ಹೋಗುತ್ತಿದ್ದ. ಲಕ್ಷ್ಮಣನು ರಾಮನಿಗೆ ನಿನಗೆ ಇಷ್ಟವಾದ, ಸಾಧನೆಗೆ ಪ್ರಶಸ್ತವಾದ ಕಾಲ ಬಂತು ಎಂದು ಹೇಳಿದನು.
“ಹೇಮಂತಕಾಲವು ಸಂವತ್ಸರಗಳಿಗೆ ಅಲಂಕಾರ”.
ಈ ಕಾಲದಲ್ಲಿ ಜನರೆಲ್ಲ ಒರಟಾಗಿರುತ್ತಾರೆ. ಎಲ್ಲೆಡೆ ಹಸಿರು ಕಂಗೊಳಿಸುತ್ತದೆ. ನೀರು ದೂರ, ಬೆಂಕಿ ಹತ್ತಿರ ಎನ್ನುವ ಕಾಲ.
ಹೊಸಧಾನ್ಯಗಳನ್ನು ಪೂಜೆ ಮಾಡಿ ದೇವರಿಗೆ ಮತ್ತು ಪಿತೃಗಳಿಗೆ ಸಮರ್ಪಿಸಿ ಜನರು ತಮ್ಮ ಪಾಪಗಳನ್ನು ತೊಳೆದುಕೊಳ್ಳುವ ಕಾಲ. ಚಳಿಗಾಲದಲ್ಲಿ ಹಾಲು ದಪ್ಪ ಮತ್ತು ಜಾಸ್ತಿ ಸಿಗುತ್ತದೆ. ರಾಜರುಗಳೆಲ್ಲ ಯುದ್ಧಕ್ಕೆ ಹೊರಡುವ ಸಮಯ. ಸೂರ್ಯನು ದಕ್ಷಿಣ ದಿಶೆಯನ್ನು ಹೊಂದುವ ಕಾಲ.
ಹಗಲು ಸಂಚಾರ ಹಿತವಾಗಿರುವ ಕಾಲ. ಸೂರ್ಯನು ಮೃದುವಾಗಿರುವ ಸಮಯ. ಹಿಮದ ಕಾರಣಕ್ಕೆ ರಾತ್ರಿಗಳು ತಂಪಾಗಿಯೂ, ದೀರ್ಘವಾಗಿಯೂ ಇರುವ ಕಾಲ. ಹಿಮ ಮುಸುಕಿದ ಚಂದ್ರನು ಕನ್ನಡಿಯ ಮೇಲೆ ಉಸಿರಾಡಿದಾಗ ಕನ್ನಡಿ ಕಾಣುವಂತೆ ಕಾಣುವ ಕಾಲ. ಬಿಸಿಲನ ಜಳಕ್ಕೆ ಸೀತೆ ಕಂದಿದಂತೆ ಬೆಳೆದಿಂಗಳು ಕಂದಿದೆ. ಬತ್ತವು ಖರ್ಜೂರದ ಹೂವನ್ನು ನೆನಪಿಸುತ್ತಾ ಇದೆ. ಸೂರ್ಯ ಕಿರಣಗಳು ಮಂಜು ಮತ್ತು ಇಬ್ಬನಿಗಳಿಂದ ಕೂಡಿ ಸೂರ್ಯ ಚಂದ್ರನ ಹಾಗೆ ಕಾಣುತ್ತಿದ್ದಾನೆ. ಬಿಸಿಲಿಗೆ ಕೆಂಪು–ಬಿಳಿ ಬೆಳಕಿನ ಕಾಂತಿಯಿತ್ತು. ಎಳೆಬಿಸಿಲು ಹುಲ್ಲುಹಾಸಿಗೆ ತುಂಬಾ ಶೋಭೆಯನ್ನು ಕೊಟ್ಟಿದೆ. ಜಲಚರ ಪಕ್ಷಿಗಳು ದಂಡೆಯ ಮೇಲೆ ಕುಳಿತು ನೀರನ್ನು ನೋಡುತ್ತಿದ್ದವು.
ಹೇಗೆ ಹೇಡಿಯಾದವನು ಯುದ್ಧ ಭೂಮಿಗೆ ಇಳಿಯಲು ಹೆದರುವ ಹಾಗೆ, ಪಕ್ಷಿಗಳು ನೀರಿಗೆ ಇಳಿಯಲು ಹೆದರುತ್ತಿದ್ದವು.
ಮಂಜು ಮತ್ತು ಇಬ್ಬನಿ ಎರಡು ಸೇರಿದ ಕಾಡು ಹೊದ್ದು ಮಲಗಿದ ಹಾಗೆ ಕಾಣುತ್ತಿತ್ತು. ಕುಡಿಯಲು ಯೋಗ್ಯವಾಗಿರುವ ಬೆಟ್ಟದ ಮೇಲಿನ ನೀರು ವಿಷವಾಗಿತ್ತು.
“ಯಾವ ನೀರಿಗೆ ಸೂರ್ಯಕಿರಣಗಳು ಹೆಚ್ಚು,ಬಿಳುತ್ತದೆಯೋ ಆ ನೀರು ತುಂಬಾ ಆರೋಗ್ಯಕರ”. ಪದ್ಮಗಳಿಗೆಲ್ಲ ವಯಸ್ಸಾಗಿತ್ತು (ಶೋಭಿಸುತ್ತಾ ಇರಲಿಲ್ಲ). ಪ್ರಕೃತಿಯನ್ನು ವರ್ಣಿಸಿದ ಲಕ್ಷ್ಮಣನು, ಭರತನ ಬಗ್ಗೆ ಸಹಜ ಭಾವ ತುಂಬಿದ ಮಾತುಗಳನ್ನು ರಾಮನಲ್ಲಿ ಆಡಲು ಆರಂಭಿಸಿದನು. ಪುರುಷ ಸಿಂಹನಾದ ಭರತ ರಾಜ್ಯದಲ್ಲಿ ರಾಜ್ಯವಾಳದೇ ತಪಸ್ಸು ಮಾಡುತ್ತಿದ್ದಾನೆ ಎಂದು ರಾಮನಿಗೆ ಹೇಳಿದನು. ಭರತನು ರಾಜಭೋಗವೇ ಮೊದಲಾದ ಎಲ್ಲವನ್ನು ಬಿಟ್ಟು ನೆಲದಲ್ಲಿಯೇ ಮಲುಗುತ್ತಾನೆ. ಈಗ ಭರತನು ಸಹ ಸರಯೂ ನದಿಗೆ ಸ್ನಾನಕ್ಕೆ ಹೊರಟಿರಬಹುದು ಎಂದು ಲಕ್ಷ್ಮಣನು ರಾಮನಿಗೆ ಹೇಳಿದನು.
ಶ್ಯಾಮಲವರ್ಣವುಳ್ಳವನು, ವೀರನು, ಧರ್ಮಜ್ಞ, ಸತ್ಯವಾದಿ, ಮಾತು ಪ್ರಿಯ, ಮಧುರ ಮಾನವನಾದ ಭರತನು, ಅಣ್ಣಾ ನಿನ್ನನ್ನೇ ಆಶ್ರಯಿಸಿದ್ದಾನೆ ಎಂದು ರಾಮನಿಗೆ ಹೇಳಿದನು.

ಲಕ್ಷ್ಮಣನಿಗೆ ಕೈಕೇಯಿಯು ನೆನಪಾದಾಗ ಅವಳಿಗೆ ಯಾಕೆ ದುರ್ಬುದ್ಧಿ ಬಂತು …? ಎಂದು ಕೇಳಿದನು. ಇಲ್ಲದೆ ಇರುವುದನ್ನು ಹೇಳಿದರೆ ‘ಅಪವಾದ’. ಇದ್ದಿದ್ದನ್ನು ಹೇಳಿದರೆ ‘ಪರಿವಾದ’. ತಾಯಿಯ ಬಗ್ಗೆ ಲಕ್ಷ್ಮಣನ ಪರಿವಾದವನ್ನು ರಾಮನು ಸಹಿಸಲಿಲ್ಲ. ಕಿರಿಯ ತಾಯಿಯನ್ನು ತೆಗಳಬೇಡ, ಅದರ ಬದಲು ಭರತನ ಬಗ್ಗೆ ಮಾತಾಡು ಎಂದು ರಾಮನು ಹೇಳಿದನು. ವನವಾಸದ ಕುರಿತಾದ ನನ್ನ ನಿಶ್ಚಯ ದೃಢ. ಆದರೂ ಭರತನ ನೆನಪಾದರೆ ಈಗಲೇ ಅಯೋಧ್ಯೆಗೆ ಹೋಗಿಬಿಡಬೇಕು ಎಂದು ಅನ್ನಿಸುತ್ತದೆ ಎಂದು ರಾಮನು ಲಕ್ಷ್ಮಣನಿಗೆ ಹೇಳಿದನು.

ರಾಮನು ಸ್ನಾನವನ್ನು ಮಾಡಿ, ದೇವತೆಗಳಿಗೂ ಪಿತೃಗಳಿಗೂ ತರ್ಪಣವನ್ನು ಕೊಟ್ಟನು. “ಸ್ನಾನ ಮಾಡಿ ಮೇಲೆದ್ದು ಬರುವ ರಾಮನು ಪರಶಿವ ಉಮೆ ಮತ್ತು ನಂದಿಯೊಡನೆ ಬರುವಂತೆ ಕಂಡನು”.

★ ಪರ್ಣಶಾಲೆ : ಕುಳಿತು ಮಾತನಾಡುವ ಸ್ಥಳ.

ನಿತ್ಯಾನುಷ್ಟಾನದ ನಂತರ ರಾಮನು ಪರ್ಣಶಾಲೆಯಲ್ಲಿ ಬಂದು ಕುಳಿತು ಋಷಿಗಳೊಡನೆ ಸಂವಾದ ಮಾಡಿದನು. ಸೀತಾ―ರಾಮರು ಚಿತ್ತಾ ನಕ್ಷತ್ರ ಮತ್ತು ಚಂದ್ರನಂತೆ ಶೋಭಿಸುತ್ತಿದ್ದರು.

ರಾಮನು ಮಾತುಕತೆಯಲ್ಲಿ ಮಗ್ನನಾಗಿದ್ದಾಗ ಆ ಸ್ಥಳಕ್ಕೆ ರಾಕ್ಷಸಿಯೊಬ್ಬಳು ಬಂದಳು. ಅವಳ ಹೆಸರು ಶೂರ್ಪಣಕಿ.
ಶೂರ್ಪಣಕಾ ಎಂದರೆ ಮೊರದಂತೆ ಉಗುರುವುಳ್ಳವಳು. ಶೂರ್ಪಣಕಿಗೆ ರಾಮನು ದೇವತೆಯಂತೆ ಕಂಡನು. ಸಿಂಹದಂತೆ ವಿಶಾಲವಾದ ವಕ್ಷಸ್ಥಲ, ನೀಳವಾದ ತುಂಬಿದ ತೋಳುಗಳು, ಕಮಲದ ದಳದಂತೆ ಇರುವ ಕಣ್ಣುಗಳು, ದೀರ್ಘ ಬಾಹು, ಬೆಳಗುವ ಮುಖ ಮಂಡಲ, ಅತೀವ ಪ್ರಿಯ ದರ್ಶನ, ಮದಿಸಿದ ಗಜದ ನಡಿಗೆ, ಕೋಮಲನನಾದ ರಾಮನನ್ನು ನೋಡಿದಳು.
ಮನ್ಮಥನಂತೆ ಶೋಭಿಸುತ್ತಿರುವ ರಾಮನನ್ನು ಕಂಡು ರಾಕ್ಷಸಿಯು ಕಾಮಮೋಹಿತಳಾದಳು. ರಾಮನು ಸುಂದರ ಮುಖದವನಾಗಿದ್ದರೆ, ಶೂರ್ಪಣಕಿ ದುರ್ಮುಖಿಯಾಗಿದ್ದಳು.

ರಾಮನೆಂದರೆ ಪ್ರೇಮ ತುಂಬಿದ ಸತ್ವಮೂರ್ತಿ ―ಶ್ರೀಸೂಕ್ತಿ.

ರಾಮನು ತರುಣನಾದರೆ ಶೂರ್ಪಣಕಿ ಧಾರುಣಿಯಾಗಿದ್ದಳು. ರಾಮನ ಮಾತುಗಳು ಸರಳ/ನೇರವಾಗಿದ್ದರೆ ಶೂರ್ಪಣಕಿಯದ್ದು ಕಠೋರವಾದ ಮಾತು. ರಾಮನ ದರ್ಶನ ಪ್ರಿಯವಾದರೆ ಶೂರ್ಪಣಕಿಯ ದರ್ಶನ ಅಪ್ರಿಯವಾದದ್ದು.
ಶೂರ್ಪಣಕಿಯು ವಕ್ರವಾಗಿ ಮಾತನ್ನು ಆರಂಭಿಸಿದಳು. ಜಟೆ -ತಪಸ್ಸು, ಪತ್ನಿ, ಬಿಲ್ಲು -ಬಾಣಗಳು ಹೀಗೆಲ್ಲಾ ಆಗಿ ಇಲ್ಲಿ ಹೇಗೆ ಬಂದೆ ….? ಇಲ್ಲಿ ಬರಲು ಕಾರಣವೇನು…..?? ಎಂದು ರಾಮನನ್ನು ಪ್ರಶ್ನಿಸಿದಳು. ರಾಮನು ನಡೆದ ಎಲ್ಲ ಘಟನೆಯನ್ನು ವಿವರಿಸುತ್ತಾ, ಧರ್ಮಕ್ಕಾಗಿ ಕಾಡಿಗೆ ಬಂದೆ ಎಂದನು. ರಾಮನು ಶೂರ್ಪಣಕಿಗೆ ನೀನು ಯಾರು…? ಯಾರ ಮಗಳು…?? ಯಾರ ಮಡದಿ….??? ಎಂದು ಪ್ರಶ್ನಿಸಿದನು.
ರಾಮನು ಶೂರ್ಪಣಕಿಗೆ ಇಲ್ಲಿ ಬರಲು ಕಾರಣವೇನು …? ಎಂದು ಕೇಳಿದಾಗ ತನ್ನ ಪರಿಚಯವನ್ನು ಹೇಳಿದಳು.
ಅವಳು ಕಾಮರೂಪಿಣಿ (ಬೇಕಾದಾಗ ಬೇಕಾದ ರೂಪವನ್ನು ಧಾರಣೆ ಮಾಡುವುದು), ಸರ್ವ ಭಯಂಕರಳು ಆಗಿದ್ದಳು. ತನ್ನ ಅಣ್ಣಂದಿರು ರಾವಣ, ಕುಂಭಕರ್ಣ ಎನ್ನುವ ರಾಕ್ಷಸರನ್ನೆಲ್ಲ ವರ್ಣಿಸಿ, ಇನ್ನೊಬ್ಬ ಅಣ್ಣನಾದ ವಿಭೀಷಣ ಮಾತ್ರ ರಾಕ್ಷಸ ಕುಲದಲ್ಲಿ ಜನಿಸಿದರೂ, ರಾಕ್ಷಸರ ಹಾಗೆ ಇಲ್ಲ ಎಂದು ಹೇಳಿದಳು. ಸಹೋದರರಾದ ಖರ ದೂಷಣರ ಪರಿಚಯವನ್ನು ಮಾಡಿಕೊಡುತ್ತಾ, ಈಗ ಅವರನ್ನೆಲ್ಲ ಬಿಟ್ಟು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದಳು. ಭಾವದಿಂದ ನಿನ್ನನ್ನು ಪತಿ ಎಂಬುದಾಗಿ ಸ್ವೀಕರಿಸಿದೆ, ಮನಬಂದಂತೆ ಸಂಚಾರ ಮಾಡುವ ಶಕ್ತಿ ಇದೆ, ಸೀತೆ ವಿರೂಪಳು ಆದ್ದರಿಂದ ನನಗೆ ಬಹುಕಾಲ ಪತಿಯಾಗಿರು ಎಂದು ರಾಮನಿಗೆ ಹೇಳಿದಳು.
ವಿರೂಪಳಾದ ನಿನ್ನ ಹೆಂಡತಿಯನ್ನು ತಮ್ಮನೊಡನೆ ತಿಂದುಬಿಡುತ್ತೇನೆ ಎಂದು ರಾಮನಿಗೆ ಶೂರ್ಪನಕಿ ಹೇಳಿದಳು.

ಮುಂದೇನಾಯಿತು ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ ……( ಶೂರ್ಪಣಕಾ ರಾಮ ಸಂವಾದ )

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments