ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ತನಗೆ ಯಾವ ನಿಯಮವೂ ಇಲ್ಲ. ಬೇರೆಯವರನ್ನು ಪ್ರಶ್ನಿಸುವುದು ಬಿಡುವುದಿಲ್ಲ. ರಾಕ್ಷಸರಲ್ಲಿ ಈ ಸ್ವಭಾವ ತುಂಬ ಕಂಡು ಬರ್ತದೆ. ವಿರಾಧ ಪ್ರಶ್ನಿಸ್ತಾನೆ ರಾಮನನ್ನು. ತಪಸ್ವೀ ವೇಷದಲ್ಲಿದ್ದೀಯೆ, ಹೆಣ್ಣೇಕೆ ಪಕ್ಕದಲ್ಲಿ? ಅಂತ.‌

ಮುಂದಿನ ಘಳಿಗೆಯಲ್ಲಿ ಮಾಡೋದೇನು? ಆಕೆಯನ್ನು ಎತ್ತಿಕೊಂಡು ಹೋಗುವ ಪ್ರಯತ್ನ! ಅಂದ್ರೆ, ತಾನೇನು ಮಾಡ್ತೇನೆ ಅಂತ ಯಾರೂ ಕೇಳಬಾರದು, ಏನು ಬೇಕಾದರೂ ಮಾಡಬಹುದು ತಾನು. ಆದರೆ ಬೇರೆಯವರೆಲ್ಲ ನಿಯಮದಲ್ಲಿರಬೇಕು. ಯಾರು ಸಜ್ಜನರು ಅಂತ ಅನ್ನಿಸಿಕೊಂಡಿರುತ್ತಾರೋ ಅವರನ್ನು ಇವರು ಪ್ರಶ್ನೆ ಮಾಡುತ್ತಿರುತ್ತಾರೆ. ಸರಿ ಇರುವುದನ್ನೂ ಪ್ರಶ್ನೆ ಮಾಡ್ತಾ ಇರ್ತಾರೆ. ಆದರೆ ಅವರು ಮಾತ್ರ ಯಾವ ನೀತಿ ನಿಯಮವೂ ಇಲ್ಲದೆ ಜೀವನ ಮಾಡುತ್ತಿರುತ್ತಾರೆ. ಇದು ರಾಕ್ಷಸರ ಗುಣ. ಮತ್ತು ಈ ಗುಣ ಇರುವವರು ಸ್ವಲ್ಪ ರಾಕ್ಷಸತ್ವವನ್ನು ಹೊಂದಿದವರು ಅಂತಲೇ ಅರ್ಥ. ಹಾಗೇ ಶೂರ್ಪಣಖಿಯೂ ಕೂಡ. ರಾಮನ ಕುರಿತು ಬಹಳ ಪ್ರೇಮಾಂಕುರವಾಗಿದೆ ಅಂತ ಲೆಕ್ಕ. ಆದರೆ ಬಾಯಲ್ಲಿ ಬರುವ ಮಾತು ಅದೇ, ಏನು ಜಟೆ ಇದೆ, ತಾಪಸ ರೂಪ ಇದೆ. ಆದರೆ ಈ ಹೆಣ್ಣು ಯಾಕೆ ಮತ್ತು ಈ ಬಿಲ್ಲು ಬಾಣ ಯಾಕೆ ಎನ್ನುವುದಾಗಿ ಪ್ರಾರಂಭ ಮಾಡುತ್ತಾಳೆ. ಅದು ತಪಸ್ವಿಗಳೆಲ್ಲ ಗೃಹಸ್ಥ ಧರ್ಮ ವರ್ಜ್ಯ ಅಂತ ಏನೂ ಹೇಳ್ತಾ ಇಲ್ಲ. ಗೃಹಸ್ಥನಾಗಿದ್ದುಕೊಂಡು ತಪಸ್ವಿಯಾಗಿರಬಹುದು. ಈಗ ವಸಿಷ್ಠರು-ಅರುಂಧತಿ, ಅಗಸ್ತ್ಯ ಲೋಪಾಮುದ್ರೆಯರಲಿಲ್ವ, ಯಾಜ್ಞವಲ್ಕ್ಯ-ಕಾತ್ಯಾಯನಿಯರಿರಲಿಲ್ವ? ತಪಸ್ವಿಗಳು ಸಪತ್ನೀಕರಾಗಿ ಇರಬಾರದು ಅಂತ ಎಲ್ಲೂ ನಿಯಮವಿಲ್ಲ. ಭ್ರಮೆ ಅಷ್ಟೇ ಅದೊಂದು. ಆದರೆ ಇಲ್ಲದ ತಪ್ಪನ್ನು ಪರರ ಮೇಲೆ‌ ಆರೋಪಿಸುವಾಗ ತನ್ನ ಮೇಲೆ ತಾನು ಯೋಚನೆ ಮಾಡೋದಿಲ್ಲ.

ಮಾತು ಮುಂದುವರಿಸ್ತಾ ಆಕೆ, ತಾನು ನಿನ್ನ ಜೊತೆ ಇರ್ತೇನೆ, ನಿನ್ನ ಹೆಂಡತಿಯಾಗ್ತೇನೆ ಎನ್ನುವಾಗ ತನಗೆ ಮದುವೆಯಾಗಿದೆ, ಗಂಡ ತೀರಿಕೊಂಡಿದ್ದಾನೆ , ವಯಸ್ಸಾಗಿದೆ ಅಂತ ನೆನಪಾಗೋದಿಲ್ಲ ಶೂರ್ಪಣಖಿಗೆ. ಆದರೆ ಈ ವಿಷಯ ಏನು ಅಂತ ತಿಳ್ಕೊಳ್ಳುವುದಕ್ಕಿಂತ ಮುಂಚೆ ಆಕ್ಷೇಪ ಪ್ರಾರಂಭ. ಇದು ಈ ಪರಿಯ ಜನರ ಸ್ವಭಾವ.

ಆಕೆಯ ಪ್ರಸ್ತಾಪ ಏನು? ಭಾವದಿಂದ ನಿನ್ನನ್ನು ಪತಿಯಾಗಿ ಸ್ವೀಕರಿಸಿದ್ದೇನೆ. ಆಗಲಿ, ಈ ವಿವಾಹ ಅಂದ್ರೆ ಏನು? ಕೂಡುವಿಕೆ, ‘ಲಗ್ನ’ ಅಂತ. ಎರಡು ಚೇತನಗಳು, ಎರಡು ಕುಲಗಳು ಕೂಡಬೇಕು. ತುದಿ ಕೂಡಿದಾಗ ಬುಡವೂ ಕೂಡಿಕೊಂಡಂತೆ ಆಯಿತು. ಇಲ್ಲಿ ಯಾವುದು ಕೂಡಿಕೊಂಡಿದೆ?
ಈತ ಕ್ಷತ್ರಿಯೋತ್ತಮ, ಆಕೆ ರಾಕ್ಷಸಿ;
ಶೀಲ? ಈತ ಆರ್ತತ್ರಾಣ, ಶರಣಾಗತ ರಕ್ಷಣ ಎನ್ನುವಂಥವನು. ಆಕೆಗೆ ಜೀವಗಳನ್ನು ಮುರಿದು ತಿನ್ನುವುದೇ ಸ್ವಭಾವ. ಶರಣಾಗತರನ್ನು ಕಾಪಾಡ್ಲಿಕ್ಕೆ ಇವನು ಇರುವವನು‌!
ಅವನು ತುಂಬಾ ಶುಚಿ, ಇವಳು ಅಶುಚಿಯೇ ಅನವರತ.
ಹೀಗೆ, ಒಂದು ಸ್ವರೂಪ ಇದೆ ರಾಮನದು. ಆ ಸ್ವರೂಪದ ಜೊತೆ ಹೊಂದಾಣಿಕೆ ಆಗಬೇಕಿದು. ಆ ಸ್ವರೂಪ-ಈ ಸ್ವರೂಪ ಒಟ್ಟಿಗೆ ಇರಲಿಕ್ಕೆ ಸಾಧ್ಯವೇ ಇಲ್ಲದಂತದ್ದು.
ರೂಪ, ಸ್ವರೂಪ, ಸ್ವಭಾವ, ಭಾವ ತುಂಬಾ ಭಿನ್ನವಾದದ್ದು. ಕಡೇ ಪಕ್ಷ ವಯಸ್ಸು! ಇವಳು ಮುದುಕಿ. ಅವನು ನವತರುಣ. ಹೇಗಪ್ಪಾ? ಅಷ್ಟಾದರೂ ಸಾಮಾನ್ಯ ಜ್ಞಾನ ಬೇಡವಾ‌? ಆ ಬಯಕೆಗೊಂದು ಪ್ರಮಾಣ ಯಾವುದೂ ಇಲ್ಲ. ರಾಕ್ಷಸ ವಿವಾಹಕ್ಕೆ ಸಲ್ಲುವಂಥದ್ದು ಇದು. ಅಡ್ಡ ಬರುವವರನ್ನು ದೊಣ್ಣೆಯಿಂದ ಹಿಡೆದು, ಖಡ್ಗದಿಂದ ಭೇದಿಸಿ, ಬಾಗಿಲು, ಕೋಟೆಗಳನ್ನು ಒಡೆದು – ಅಂದ್ರೆ ಕನ್ಯೆಯ ಮನೆಯನ್ನು ಸ್ಮಶಾನವನ್ನಾಗಿ ಮಾಡಿ, ಆ ಕನ್ಯೆಯ ಗೃಹದಲ್ಲಿ, ಬಂಧುಗಳು, ಆಪ್ತರ ಶವಗಳನ್ನು ಹರಡಿ, ಮನೆಯನ್ನು ಮುರಿದು, ಆಕೆಯ ಇಚ್ಛೆಗೆ ವಿರುದ್ಧವಾಗಿ, ಆಕ್ರಂದಿಸುವವಳನ್ನು ಬಲಾತ್ಕಾರವಾಗಿ ಅವಳನ್ನು ಎತ್ತಿಕೊಂಡು ಬರುವಂಥದ್ದು. ಇದೆಲ್ಲ ಕಾನೂನಲ್ಲ. ಕಾನೂನು ಭಂಗವೇ ಜೀವನವಾದರೆ, ಅವರ ಕಾನೂನು ಹೀಗಿರ್ತದೆ ಅಂತ. ಇದು ರಾಕ್ಷಸ ವಿವಾಹ. ಇದನ್ನು ಶಾಸ್ತ್ರ ಒಪ್ಪಿಲ್ಲ. ಅದೇ ತರಹ ಇದೆ ಇವಳ ಪ್ರಸ್ತಾಪ. ಈ ನಿನ್ನ ಹೆಂಡತಿ, ತಮ್ಮನನ್ನು ತಿಂದುಬಿಡ್ತೇನೆ. ಆಮೇಲೆ ನಾವು ವಿವಾಹವಾಗೋಣ ಅಂತ. ಎಷ್ಟು ಸರಳವಾಗಿ ಹೇಳುತ್ತಾಳದನ್ನು. ಒಡಹುಟ್ಟಿದ ತಮ್ಮ, ಕೈಹಿಡಿದ ಹೆಂಡತಿ, ಈವರೆಗೆ ಬದುಕಿ ಬಾಳಿದವರು ಒಟ್ಟಿಗೆ. ಇವಳಿಗೆ ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ. ಅದ್ಯಾವುದೂ ಸಂಬಂಧ ಇಲ್ಲ‌. ಅಷ್ಟು ವಿಕೃತವಾಗಿದೆ.
ಶೂರ್ಪಣಖಿಯ ಪ್ರಸ್ತಾಪಕ್ಕೆ ರಾಮನೇನು ಉತ್ತರ ಹೇಳ್ಬೇಕು?
ಕಾಮಪಾಶದಿಂದ ಬಂಧಿಯಾಗಿದ್ದಾಳೆ ಇವಳು ಎನ್ನುವುದು ಅರ್ಥವಾಯಿತು ರಾಮನಿಗೆ‌. ರಾಮ ನಕ್ಕನಂತೆ ಒಂದು ಸರ್ತಿ. ಆಮೇಲೆ, ಸ್ವಚ್ಛ ಮನೋಜ್ಞವಾದ ಮಾತಿನಿಂದ ಶೂರ್ಪಣಖಿಯನ್ನು ಕುರಿತು ಹೇಳಿದನಂತೆ. ‘ನನಗೆ ಮದುವೆಯಾಗಿದೆ. ಈ ನನ್ನ ಪತ್ನಿ ನನಗೆ ಬಹಳ ಪ್ರೀತಿಯವಳು. ನಿನ್ನಂಥಾ ನಾರಿಯರಿಗೆ ಸವತಿಯರಿರುವುದು ಸರಿಯಲ್ಲ. ಹಾಗಾಗಿ ಈ ನನ್ನ ತಮ್ಮ; ಶೀಲವಂತ, ನೋಡಲು ಚೆಂದದ ರೂಪವುಳ್ಳವನು, ಕಳೆ ಉಳ್ಳವನು, ಬಹಳ ವೀರನೂ ಹೌದು. ನೀನೂ ಪರಾಕ್ರಮಶಾಲಿನಿ‌. ಅವನೂ ಹೆಣ್ಣು ಹುಡುಕುತ್ತಿದ್ದಾನೆ! ಸರಿಯಾಯಿತು.
ಶೂರ್ಪಣಖಿಯ ಮುಂದೆ ಹಾಸ್ಯಪ್ರಜ್ಞೆ ಬಂದಿತು ರಾಮನಿಗೆ!! ಈ ನಿನ್ನ ರೂಪಕ್ಕೆ ಅನುರೂಪನಾದ ಪತಿ ಎಂದರೆ ಇವನೇ ಸರಿ. ಇವನನ್ನು ಸೇವಿಸು ನೀನು..’ ಎನ್ನುತ್ತಿದ್ದಂತೆಯೇ ಇವಳು ರಾಮನನ್ನು ಬಿಟ್ಟು ಸೀದಾ ಲಕ್ಷ್ಮಣನ ಹತ್ತಿರ ಹೋದಳು. ಇದು ಅಸಲೀ ಪ್ರೀತಿಯಲ್ಲ. ಅಸಲೀ ಪ್ರೀತಿ ಅವಿನಾಶಿ. ಅದು ಕ್ಷಣಿಕವಲ್ಲ.
ವಿವಾಹಕ್ಕೆ ಸ್ಥಿರ ಮನಸ್ಸು ಬೇಕು. ವಿವಾಹ ಜೀವನದ ನಂತರವೂ ಮುಂದುವರೀತಕ್ಕಂಥದ್ದು. ಅಂಥದ್ದು ಆ ಬಾಂಧವ್ಯ. ಇದು ಏನಿಲ್ಲ!

ಶೂರ್ಪಣಖಿ ಹೋಗಿ ರಾಮ ಹೇಳಿದ್ದನ್ನೇ ಹೇಳಿದಳಂತೆ ಲಕ್ಷ್ಮಣನ ಬಳಿ.
ಲಕ್ಷ್ಮಣ ರಾಮನ ಸಾಲ ತೀರಿಸಬೇಕಾಗಿತ್ತು! ಅದನ್ನೇ ಪುನಃ ಪ್ರಯೋಗಿಸುತ್ತಾನಂತೆ ಲಕ್ಷ್ಮಣ. ಒಂದು ಬಾರಿ ಜೋರಾಗಿ ನಕ್ಕು ಯುಕ್ತವಾಗಿ ಹೇಳಿದನಂತೆ, ‘ನಾನು ಸ್ವಾಮಿಯಲ್ಲ, ದಾಸ ನೋಡು ನಾನು. ದಾಸನ ಪತ್ನಿ ದಾಸಿಯಾಗುತ್ತಾಳೆ. ನೀನು ರಾಣಿಯಾಗುವುದು ಸರಿ ಹೊರತು ದಾಸಿಯಾಗುವುದಲ್ಲ. ಹೀಗೇ ಇರೋದು ನಾನು‌. ಅದರ ಬದಲು, ಅಣ್ಣ ರಾಜನಾಗಬೇಕಾದವನು. ಸಮೃದ್ಧಿ ಅವನಿಗಿದೆ. ನೀನು ಸಂತುಷ್ಟಳಾಗಿರಬಹುದು. ಅಣ್ಣನ ಸಣ್ಣ ಹೆಂಡತಿಯಾಗು. ಮತ್ತು, ಅವನ ಹೆಂಡತಿ ನೋಡು ಕೆಟ್ಟವಳು, ನಿರೂಪ, ಅಸತೋದರಿ, ಕರಾಳಿ, ಮುದುಕಿ ಬೇರೆ. ಅವಳನ್ನು ಬಿಟ್ಟು ಅಣ್ಣ ನಿನ್ನ ಜೊತೆ ಬರುವುದು ಖಂಡಿತ. ಅದೂ ರಾಕ್ಷಸಿಯನ್ನು ಬಿಟ್ಟು ಮನುಷ್ಯರಲ್ಲಿ ಯಾರು ಮನಸ್ಸಿಟ್ಟುಕೊಳ್ಳುತ್ತಾರೆ!? ಅಂತ ಅವಳದೇ ಮಾತುಗಳಲ್ಲಿ ಹೇಳಿದ.

ಅದು ತಮಾಷೆಯೆಂದು ಶೂರ್ಪಣಖಿಗೆ ಅರ್ಥವೇ ಆಗಲಿಲ್ಲ ಅಂತ ವಾಲ್ಮೀಕಿಗಳು ಹೇಳ್ತಾರೆ‌. ಅದು ಸತ್ಯವೆಂದೇ ತಿಳಿದು ರಾಮನ ಬಳಿ ಹೋಗಿ, ‘ಈ ವಿರೂಪಿಣಿ, ಅಸತಿ, ಕರಾಳಿ, ಸೀದು ಹೋದ ಹೊಟ್ಟೆಯುಳ್ಳವಳು, ಮುದುಕಿ.. ಇವಳ ಮೋಹದ ಬಲೆಯಲ್ಲಿ ಬಿದ್ದು ಈ ರೂಪವಂತೆ ನನ್ನನ್ನು ಅವಗಣನೆ ಮಾಡುವೆಯಾ? ನನ್ನ ರೂಪ, ಕುಲ, ಮಧುರ ಭಾವ ಯಾವುದನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲವಾ ನೀನು? ಇವಳು ತಾನೇ ವಿಘ್ನ; ತಿಂದು ಬಿಡುತ್ತೇನೆ ಇವಳನ್ನು. ಆಮೇಲೆ ನನಗಾರೂ ಪ್ರತಿಸ್ಪರ್ಧಿಗಳಿಲ್ಲ. ನಿನ್ನ ಜೊತೆಗೆ ವಿಹರಿಸುತ್ತೇನೆ ಎಂಬುದಾಗಿ ಹೇಳಿ ಸೀತೆಯ ಮೇಲೆ ಏರಿ ಹೋದಳು. ಇಬ್ಬರೂ ಎದುರು ಬದುರಾಗಿದ್ದಾರೆ. ಬೆದರಿದ ಜಿಂಕೆಮರಿಯ ಕಣ್ಣುಗಳಂತೆ ಸೀತೆಯ ಕಣ್ಣುಗಳಿದ್ದವು. ಇನ್ನೊಂದು ಕ್ಷಣವಾದರೆ ಮುಗಿಸಿಯೇ ಬಿಡುತ್ತಾಳೆ. ಶೂರ್ಪಣಖಿಯ ಕ್ರೌರ್ಯಭಾವ ಸ್ಪಷ್ಟವಾಗಿ ಗೋಚರಿಸುತ್ತದೆ.
ರಾಮ ಗಮನಿಸುತ್ತಾನೆ. ಮೃತ್ಯುಪಾಶದಂತೆ ಸೀತೆಯ ಮೇಲೆ ಬೀಳ್ತಾ ಇದ್ದಾಳೆ. ಕುಪಿತನಾದನು ರಾಮ. ಆಕೆಯನ್ನು ತಡೆದು ಲಕ್ಷ್ಮಣನಿಗೆ ಸೂಚನೆ ಕೊಡುತ್ತಾನೆ.
ಇಂಥಾ ಕ್ರೂರರು, ಅನಾರ್ಯರು ವಿನೋದಕ್ಕೆ ಅರ್ಹರಲ್ಲ. ಸೀತೆ ಬದುಕಿದ್ದೇ ದೊಡ್ಡದು. ಮದ, ನೀತಿಮೀರಿದ ಅಮಲುಳ್ಳ ಈ ಶಿಕ್ಷಾರ್ಥವಾಗಿ ರಾಕ್ಷಸಿಯನ್ನು ವಿರೂಪಗೊಳಿಸು. ಸ್ತ್ರೀ ಆದ್ದರಿಂದ ಕೊಲ್ಲುವುದು ಬೇಡವೆಂಬುದು ರಾಮನ ನಿರ್ಣಯ.
ಲಕ್ಷ್ಮಣ ಆಕೆಯ ಕಿವಿ ಮೂಗುಗಳನ್ನು ಕತ್ತರಿಸಿದ. ಶೂರ್ಪಣಖಿ ವಿಕೃತಗೊಂಡಳು. ಆ ಮಹಾಘೋರಳಾದ ರಾಕ್ಷಸಿ ಮತ್ತೂ ಘೋರವಾಗಿ ನಾನಾ ಪ್ರಕಾರದ ಶಬ್ದಗಳನ್ನು ಮಾಡುತ್ತಾ ಖರನಿರುವಲ್ಲಿಗೆ ಓಡಿದಳು.

ರಾವಣನ ಸೈನ್ಯದ ತುಕಡಿಯ ನಾಯಕ ಖರ. ಅವನಿದ್ದ ಜಾಗಕ್ಕೆ ‘ಜನಸ್ಥಾನ’ ಅಂತ ಹೆಸರು. ರಾಮನು ಪ್ರಿಯದರ್ಶನನಾದರೆ ಖರನು ಉಗ್ರದರ್ಶನ! ಇರೋದೇ ಹಾಗೆ. ಆ ಖರನ ಮುಂದೆ ಹೋಗಿ ಧೊಪ್ಪನೆ ಬಿದ್ದಳು. ಬಿದ್ದು ಕಥೆಯನ್ನೆಲ್ಲ ಹೇಳಿದಳು. ಭಯವೂ ಆಗಿತ್ತು‌. ಸಿಟ್ಟು ಬಂತು ಖರನಿಗೆ‌. ಶೂರ್ಪಣಖಿಯನ್ನು ಕೇಳ್ತಾನೆ, ‘ಏಳು, ಮೊದಲು ಹೇಳು? ಆಗಿದ್ದೇನು? ಯಾರು ಮಾಡಿದ್ದು? ಮಲಗಿರುವ ಕೃಷ್ಣಸರ್ಪವನ್ನು ಬೆರಳ ತುದಿಯಿಂದ ತಿವಿದು ತೊಂದರೆ ಕೊಟ್ಟವನು ಯಾರು? ನೀನೇನು ಕಡಿಮೆಯಾ? ಬಲ, ವಿಕ್ರಮ ಸಂಪನ್ನೆ ನೀನು. ಮನ ಬಂದಂತೆ ಸಂಚರಿಸಬಲ್ಲವಳು, ಅಂತಕನಂತವಳು. ನಿನ್ನನ್ನು ಈ ಪರಿಸ್ಥಿತಿಗೆ ತಂದವನಾರು? ಸಾಮನ್ಯನಲ್ಲ. ದೇವತೆಯಾ? ಗಂಧರ್ವನಾ? ಋಷಿಯಾ?.. ನನ್ನ ತಂಟೆಗೆ ಬರಲು ಯಾರಿಗೂ ಸಾಧ್ಯವಿಲ್ಲ. ಈ ಘೋರ ಬಾಣಗಳಿಂದ ಅವನ ಪ್ರಾಣವನ್ನು ಸ್ವೀಕರಿಸುತ್ತೇನೆ. ಯಾರ ರಕ್ತಪಾನವನ್ನು ಮಾಡುವ ಯೋಗ ಭೂಮಿಗಿದೆ? ಹೆದರಿ ಹೋದ ನೀನು ಸುಧಾರಿಸಿಕೊಂಡು ಹೇಳು’ ಎಂದಾಗ,
ಅಳುತ್ತಾ ಹೇಳಿದಳಂತೆ, ‘ಇಬ್ಬರು ತರುಣರು, ಸ್ಫುರದ್ರೂಪಿಗಳು, ಮಹಾಬಲವುಳ್ಳವರು. ಕಮಲದಂತೆ ಕಣ್ಣುಳ್ಳವರು. ಆದರೆ ನಾರುಡಿಯನ್ನುಟ್ಟು ಕೃಷ್ಣಾಜಿನದಲ್ಲಿ, ಮುನಿವೇಷದಲ್ಲಿದ್ದಾರೆ. ಅವರು ದಶರಥನ ಮಕ್ಕಳಾದ ರಾಮ-ಲಕ್ಷ್ಮಣರಂತೆ. ಎಷ್ಡು ಚೆಂದ! ದೇವತೆಗಳೋ ಮನುಷ್ಯರೋ ನನಗೆ ಅನುಮಾನವಿದೆ‌. ಅವರಿಬ್ಬರ ಮಧ್ಯದಲ್ಲಿ ಒಬ್ಬಳು ತರುಣಿ, ರೂಪಸಂಪನ್ನಳಾದ ಸರ್ವಾಭರಣಭೂಷಿತಳಾಗಿರುವ ನಾರಿ‌. ಆ ನಾರಿಯ ಸಲುವಾಗಿ ಇಬ್ಬರೂ ಸೇರಿ ನನ್ನನ್ನು ಈ ಪರಿಸ್ಥಿತಿಗೆ ತಂದರು. ಆ ಶೀಲವಂತಳಲ್ಲದ ಹೆಣ್ಣಿನ ರಕ್ತವನ್ನು ನಾನು ಕುಡಿಯಬೇಕು. ಈ ಇಬ್ಬರ ನೊರೆಯಿಂದ ಕೂಡಿದ ರಕ್ತವನ್ನು ನಾನು ಕುಡಿಯಬೇಕು. ಇದು ನನ್ನ ಮೊದಲಬೇ ಅಪೇಕ್ಷೆ. ಇದನ್ನು ನಡೆಸಿಕೊಡಬೇಕು ನೀನು’ ಎಂದಾಗ ಹಿಂದೆ ಮುಂದೆ ನೋಡದೆ ಖರ ಹದಿನಾಲ್ಕು ಘೋರ ರಾಕ್ಷಸರನ್ನು ಕರೆದು ಆ ರೀತಿಯಾಗಿಯೆ ಆದೇಶಿಸುತ್ತಾನೆ.

ಹದಿನಾಲ್ಕು ರಾಕ್ಷಸರು ಕರಿಮೋಡಗಳಂತೆ ಸಾಲಾಗಿ ಅತ್ತ ಧಾವಿಸಿದರು. ಶೂರ್ಪಣಖಿ ರಾಮ, ಲಕ್ಷ್ಮಣ, ಸೀತೆಯರಿರುವ ಜಾಗವನ್ನು ಅವರಿಗೆ ತೋರಿಸುತ್ತಾಳೆ. ಅವರನ್ನು ರಾಮ ನೋಡುತ್ತಾನೆ. ಅವನ ಶೋಭೆ, ಕಳೆ, ಒಂದಿಷ್ಟೂ ಕುಂದಲಿಲ್ಲ. ಲಕ್ಷ್ಮಣನ ಕುರಿತು ರಾಮ ಹೇಳ್ತಾನೆ, ನೀನು ಸೀತೆಯ ಜೊತೆಗಿರು. ಇವರನ್ನು ನಾನು ವಧಿಸ್ತೇನೆ ಎಂಬುದಾಗಿ ರಾಮ ಹೇಳಿದಾಗ ಲಕ್ಷ್ಮಣ ಅಂಗೀಕರಿಸುತ್ತಾನೆ. ರಾಮ ತನ್ನ ಮಹಾಧನುಸ್ಸನ್ನು ಹೆದೆಯೇರಿಸಿ ಕಟ್ಟಿದ. ರಾಕ್ಷಸರನ್ನು ಕುರಿತು ಮೊದಲು ತನ್ನ ಪರಿಚಯವನ್ನು ಹೇಳಿ, ವನವಾಸದ ನಿಯಮ ಪಾಲನೆ ನಮ್ಮ‌ ಧರ್ಮ. ಯಾಕೆ ನಮ್ಮ ತಂಟೆಗೆ ಬರುತ್ತೀರಿ? ಎಂದು ಕೇಳುತ್ತಾನೆ. ಆಗ ಅವರ ಪೌರುಷ ಜಾಸ್ತಿಯಾಯಿತು! ಯುದ್ಧ ಬೇಕೇ ಬೇಕೆಂದಾದರೆ ನಿಮ್ಮನ್ನು ಸಂಹರಿಸುವ ಸಾಮರ್ಥ್ಯ ನನಗಿದೆ. ಪ್ರಾಣದ ಮೇಲೆ ಇಷ್ಟವಿದ್ದರೆ ಹಿಂದೆ ಹೋಗಿ ಎಂದ ರಾಮ. ರಾಕ್ಷಸರೆಂದರೆ ದರ್ಪವೇ. ತಮ್ಮ ಕೈಯ್ಯಲ್ಲಿರುಚ ಖಡ್ಗ ಝಳಪಿದಿ ಕ್ರೋಧದಿಂದ ಹೇಳಿದರು,’ಖರನಿಗೆ ಕೋಪ ಬರಿಸಿ ನಾವು ಬದುಕುವುದುಂಟೇ? ನೀನು ಒಬ್ಬನಿರುವುದು. ನಾವು 14 ಜನ. ನಾವೂ ಯುದ್ಧ ಪರಿಣಿತರು ಎಂದು ಪೊಗರಿನ ಮಾತುಗಳನ್ನಾಡಿ ತಮ್ಮ ಕತ್ತಿಗಳನ್ನೆತ್ತಿ ರಾಮನ ಮೇಲೇರಿ ಹೋಗಿ ವಿವಿಧ ಆಯುಧಗಳನ್ನು ಪ್ರಯೋಗಿಸುತ್ತಾರೆ. ಅದೇ ಸಮಯದಲ್ಲಿ ರಾಮ ಹದಿನಾಲ್ಕು ಬಾಣಗಳನ್ನು ಪ್ರಯೋಗಿಸ್ತಾನೆ. ಹದಿನಾಲ್ಕು ಪಾಲು ಮೀರಿದ ವೇಗವದು. 14 ಬಾಣಗಳು 14 ಆಯುಧಗಳನ್ನು ತುಂಡರಿಸಿದವು. ರಾಮ ಮತ್ತೆ ಎಸೆದ 14 ಬಾಣಗಳು ಹದಿನಾಲ್ಕೂ ರಾಕ್ಷಸರ ಹೃದಯವನ್ನು ಭೇದಿಸಿ ಹೊರಬಂದವು. ಧೊಪ್ಪನೆ ಬಿದ್ದ 14 ಮಂದಿಯೂ ಪ್ರಾಣಗಳನ್ನು ಕಳೆದುಕೊಂಡರು.

ಶೂರ್ಪಣಖಿಗೆ ಸಿಟ್ಟಿನ ಜೊತೆಗೆ ದೊಡ್ಡ ರೀತಿಯ ಭಯವುಂಟಾಗಿ ಬೊಬ್ಬೆ ಹಾಕಿ ಓಡಿದಳು ಖರನ ಬಳಿಗೆ‌. ಖರನು ಹೇಳಿದನಂತೆ, ‘ನನ್ನ ರಾಕ್ಷಸರಿಂದ ಕೆಲಸ ಆಗಿರಬೇಕಲ್ಲ? ನೀನೇಕೆ ಅಳುತ್ತಿದ್ದೀಯೆ? ನೆಲದಲ್ಲಿ ಹೊರಳಾಡುತ್ತಿದ್ದೀಯೆ? ನಾನಿಲ್ವಾ? ಹಾಗಿರುವಾಗ ನಿನಗೇನಾಯಿತೀಗ? ಏಳು ಏಳು.. ಗಾಬರಿ ಬೇಡ’. ಆಗ ಶೂರ್ಪಣಖಿ ಕಣ್ಣೊರಿಸಿಕೊಂಡು ಖರನಿಗೆ ಹೇಳಿದಳಂತೆ ಎಷ್ಟು ಹೊತ್ತೂ ಬೇಕಾಗಲಿಲ್ಲ ರಾಮನಿಗೆ ಅವರನ್ನು‌ ಕೊಲ್ಲಲಿಕ್ಕೆ. ಎರಡೇ ಪ್ರಯೋಗಗಳು. ಜೀವಮಾನದಲ್ಲಿ ಆಗದ ಭಯ ನನಗಾಯಿತು ಅದನ್ನು ಕಂಡು. ಹಾಗಾಗಿ ರಕ್ಷಣೆ ಬೇಕು‌ ನನಗೆ. ಹಾಗಾಗಿ ಬಂದೆ‌. ಕಾಪಾಡೋ ಕಾಪಾಡು ನನ್ನನ್ನು ಅಂತ ಕೂಗಿಕೊಂಡಳಂತೆ. ನನಗಾಗಿ ಬಂದ ರಾಕ್ಷಸರೆಲ್ಲ ಸತ್ತೇ ಹೋದರು. ನನ್ನ ಮೇಲೆ ನಿನಗೆ ಪ್ರೀತಿ ಇದ್ದರೆ ಆ ರಾಕ್ಷಸ ಕಂಟಕರನ್ನು ಸಂಹರಿಸು. ಇಲ್ಲದಿದ್ದರೆ ನಿನ್ನ ಮುಂದೆಯೇ ಪ್ರಾಣ ಬಿಡುತ್ತೇನೆ. ನನಗೆ ಅರ್ಥವಾಯಿತು‌. ನೀನು ರಾಮನೆದುರು ನಿಲ್ಲಲೂ ಶಕ್ತನಲ್ಲ. ಶೂರ ಅಂತ ಹೇಳಿಕೊಳ್ಳಲು ಮಾತ್ರ. ನೀನು ಹೇಡಿ, ದುರ್ಬಲ. ಆ ಇಬ್ಬರು ಮನುಷ್ಯರನ್ನು ಕೊಲ್ಲಲಾಗದೇ ನಿನಗೆ?’
ಕೆದಕಿ ಎತ್ತಿಕಟ್ಟುವ ಪ್ರಯತ್ನ ಇದು!
‘ಕುಲಗೇಡಿ! ಹೋಗು ರಾಮನನ್ನು ಸಂಹಾರ ಮಾಡು. ತೊಲಗು ಜನಸ್ಥಾನದಿಂದ ಈ ಕೂಡಲೇ. ನೀನು ಓಡಿ ಹೋಗುವುದೇ ಒಳ್ಳೆಯದು. ಹೇಗಿದ್ದಾನೆ ರಾಮ, ಗೊತ್ತಾ ನಿನಗೆ? ನಿನ್ನಿಂದಾಗೋದಿಲ್ಲ ಈ ಕೆಲಸ ಎಂಬುದಾಗಿ ಖರನನ್ನು ಜರಿದು ಎರಡೂ ಕೈಗಳಿಂದ ತನ್ನ ಹೊಟ್ಟೆಯನ್ನು ಬಡಿದುಕೊಂಡು ಜೋರಾಗಿ ಅತ್ತಳು ಎಂಬಲ್ಲಿವರೆಗೆ ಇಂದಿನ ಕಥಾ ಪ್ರಸ್ತುತಿ.

ಮುಂದೇನಾಯಿತು? ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನೋಡೋಣವೇ..!
ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments