ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ದೊಡ್ಡವರಿಗೆ ಅವರ ಕಾರ್ಯ ಸಿದ್ಧಿಯು ಉಪಕರಣಗಳನ್ನು ಅವಲಂಬಿಸಿಕೊಂಡಿರುವುದಿಲ್ಲ. ಅಂತಃ ಸತ್ವವನ್ನು ಅವಲಂಬಿಸಿಕೊಂಡಿರುತ್ತದೆ. ಅವರು ಇನ್ಯಾವ ಸಾಧನಗಳ ಮೇಲೆ ಅವಲಂಬಿತವಾಗಿರುವುದಿಲ್ಲ; ಆತ್ಮ ಶಕ್ತಿಯ ಮೇಲೆ ಅವಲಂಬಿತರಾಗಿರ್ತಾರೆ. ಈ ಮಾತುಗಳು ರಾಮನ ಕುರಿತಾಗಿಯೇ ಆಡಲ್ಪಟ್ಟಿವೆ. ಯಾಕೆಂದರೆ ಲಂಕೆಯನ್ನು ಜಯಿಸಬೇಕು. ರಾಮನ ಮುಂದಿರುವ ಕಾರ್ಯ ಯಾವುದು? ಲಂಕೆಯನ್ನು ಜಯಿಸಬೇಕಾಗಿದೆ, ಸಾಗರವನ್ನು ದಾಟಬೇಕಾಗಿದೆ. ನೌಕೆಗಳ ಸಹಾಯ ಇಲ್ಲ, ವಿಮಾನಗಳ ಸಹಾಯವೂ ಇಲ್ಲ. ಬರಿಗಾಲುಗಳ ಮೂಲಕ ಸಮುದ್ರವನ್ನು ದಾಟಬೇಕಾಗಿದೆ. ಶತ್ರು ಯಾರು ಅಂದ್ರೆ ಚತುರ್ದಶಭುವನದಲ್ಲಣನಾಗಿರತಕ್ಕಂತಹ ರಾವಣನೇ ಶತ್ರು. ರಾಕ್ಷಸಕೋಟಿ, ವಿಚಿತ್ರವಾಗಿರ್ತಕ್ಕಂತಹ ಕೋಟೆಗಳು, ದಿವ್ಯಾಸ್ತ್ರಗಳು, ಮಾಯೆಗಳು, ವರಗಳಿಂದ ಸಂಪನ್ನನಾಗಿದ್ದಾನೆ ರಾವಣ. ರಾಮನ ಸಹಾಯಕ್ಕೆ ಯಾರೆಂದರೆ ಮಂಗಗಳು. ಒಬ್ಬ ರಾಮ ಇಷ್ಟೆಲ್ಲ ಉಪಕರಣಗಳ ಕೊರತೆಯ ನಡುವೆ ಹಲವು ರಾಕ್ಷಸ ಕುಲವನ್ನು ಸಂಹಾರ ಮಾಡಿದ. ಮಹಾಪುರುಷರಿಗೆ ಉಪಕರಣಗಳಲ್ಲ; ಅಂತಃಕರಣ ಮುಖ್ಯ, ಅಂತಸ್ಸತ್ವವು ಮುಖ್ಯ. ಅದೋ ಅದರಲ್ಲಿ ಅವರ ಗೆಲುವಿರ್ತಕ್ಕಂತದ್ದು.
“ಕಥಂ ಯುದ್ಧಮ್ ಭವಿಷ್ಯತಿ?”
ದೇವರುಗಳಿಗೇ ಆತಂಕವಾಗಿದೆ, ಪರಮರ್ಷಿಗಳಿಗೇ ಆತಂಕವಾಗಿದೆ, ಗಂಧರ್ವ, ಯಕ್ಷ , ಕಿನ್ನರ, ಕಿಂಪುರುಷರಿಗೆ ಆತಂಕವಾಗಿದೆ. ಯಾಕೆಂದರೆ ಒಂದು ಪಕ್ಷದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರು, ಇನ್ನೊಂದು ಪಕ್ಷದಲ್ಲಿ ಒಬ್ಬ ರಾಮ. ರಾಕ್ಷಸರು, ಅವರಿಗೆ ನೀತಿ ನಿಯಮ ಇಲ್ಲ. ಮೋಸವೇ ಸಹಜತೆ, ಮಾಯೆಯೇ ಸ್ವಭಾವ. ರಾಮನಾದರು ಧರ್ಮವನ್ನು ಬಿಡತಕ್ಕವನಲ್ಲ. ಧರ್ಮಯುದ್ಧವನ್ನೇ ಮಾಡುವಂತವನು. ಹೀಗೆ ಯುದ್ಧ ನಡೆಯುವಂತದ್ದು. ಗೆಲುವು ಆಮೇಲೆ. ಯುದ್ಧ ಆಗುವುದು ಹೇಗೆ ? ಯುದ್ಧ ಅಂತ ಆಗಬೇಕಿದ್ದರೆ ಅದು ಸಮಬಲವಾಗಬೇಕಲ್ಲ ಹೇಗಪ್ಪಾ? ಎನ್ನುವ ಆತಂಕ ದಿವಿಜರನ್ನು ಕಾಡಿತು. ಹೀಗೆ ಸಂಖ್ಯೆ ರಾಕ್ಷಸರ ಕಡೆಗಿದೆ, ರಾಮನ ಕಡೆಗಿಲ್ಲ. ಉಪಕರಣಗಳೋ ಎಷ್ಟು ರಾಕ್ಷಸರ ಬಳಿಯಲ್ಲಿ, ಎಷ್ಟು ಆನೆಗಳು, ಎಷ್ಟು ರಥಗಳು, ಅದೆಷ್ಟು ಕುದುರೆಗಳು, ಚಿತ್ರ ವಿಚಿತ್ರವಾದ ಅಸಂಖ್ಯಾತ ಆಯುಧಗಳು ಎಲ್ಲ ಅವರಲ್ಲಿವೆ. ರಾಮನಲ್ಲಿ ಸೀಮಿತವಾಗಿರ್ತಕ್ಕಂತಹ ಆಯುಧಗಳು. ಅವನ ಧನುಸ್ಸುಗಳು, ಬಾಣಗಳು, ಖಡ್ಗ ಆಯ್ತು ಬೇರೇನೂ ಇಲ್ಲ. ಇನ್ನು ಸ್ವಕ್ಷೇತ್ರ ರಾಕ್ಷಸರಿಗೆ ಅದು. ರಾಮನಿಗೆ ಸ್ವಕ್ಷೇತ್ರ ಅಲ್ಲ. ಸದ್ಯಕ್ಕೆ ಊರು ರಾಕ್ಷಸರದ್ದು ಅದು. ರಾಮ ಅಲ್ಲಿಗೆ ಬಂದವನು. ಸದ್ಯ ಬಂದವನು, ಬಹಳ ಕಾಲವಾಗಿಲ್ಲ ಬಂದು. ಹೀಗೆ ಮೂರು ದೃಷ್ಟಿಯಿಂದ ನೋಡುವಾಗಲೂ ಎಲ್ಲ ಬಲಗಳೂ ರಾಕ್ಷಸರಿಗಿರುವಂತಹದ್ದು. ಆದರೆ ಅಂತಃಸತ್ವ ರಾಮನಿಗಿದೆ. ಹಾಗಾಗಿ ಅಸ್ತ್ರ ಶಸ್ತ್ರಗಳ ಮಳೆಗರಿತಾರೆ ರಾಕ್ಷಸರು. ಸುತ್ತೆಲ್ಲ ದಿಕ್ಕಿನಿಂದ ರಾಮನನ್ನು ಆವರಿಸಿ ಹದಿನಾಲ್ಕು ಸಾವಿರ ರಾಕ್ಷಸರು ಒಂದು ಮಾತು ಆಡದೆ ಬಂದವರು, ರಾಮನಲ್ಲಿ ಏನು, ಎತ್ತ ಅಂತಲೂ ಕೇಳದೆ ಆಯುಧಗಳ ಮಳೆಗರ್ದಿದಾರೆ. ಅವರ ಆಯುಧಗಳನ್ನು ತನ್ನ ಬಾಣಗಳ ಜಾಗದಿಂದ ತಡೆದಿದ್ದಾನೆ ರಾಮ.

ತನ್ನದೇ ರಕ್ತದಿಂದ ರಾಮನ ಶರೀರವು ಕೆಂಪಾಯಿತು. ದೇವತೆಗಳು ಗಾಬರಿಗೊಂಡರು. ರಾಮನ ಸ್ವಭಾವ ಹೇಗೆಂದರೆ ಮೊದಲ ಪ್ರಹಾರ ಆ ಕಡೆಯಿಂದ ಬರಲಿ, ನಾನು ಮೊದಲ ಪ್ರಹಾರ ಮಾಡುವವನಲ್ಲ ಎಂಬ ಅಘೋಷಿತ ವಚನವನ್ನು ರಾಮ ಅನುಸರಿಸಿದ್ದು ರಾಮಾಯಣದುದ್ದಕ್ಕೂ ಕಂಡುಬರುತ್ತದೆ. ಈಗ ಕ್ರೋಧ ಉಂಟಾಗಿದೆ ರಾಮನಲ್ಲಿ. ಕ್ರೋಧಜ್ವಾಲೆ ಇಮ್ಮಡಿಯಾಗಿದೆ. ತನ್ನ ಧನುಸ್ಸನ್ನು ಬಗ್ಗಿಸಿದನು ರಾಮ. ಹೆದೆಯನ್ನು ಆಕರ್ಣಾಂತವಾಗಿ ಸೆಳೆದು ಧನುಸ್ಸನ್ನು ಬಾಗಿಸಿದನು. ರಾಮನ ಧನುಸ್ಸು ಮಂಡಲಾಕಾರವಾಯಿತು. ಅದರಿಂದ ನೂರಾರು ಸಾವಿರಾರು ಬಾಣಗಳು ಹೊರಬಂದವು. ಕ್ಷಣ ಕ್ಷಣಕ್ಕೊಮ್ಮೆ ಮಂಡಲಾಕಾರವಾಗುತ್ತಿತ್ತು. ತಡೆಯಲಸಾಧ್ಯವಾದ, ತುಂಡರಿಸಲಸಾಧ್ಯವಾದ ಬಾಣಗಳು ಹೊರಬರುತ್ತಿದ್ದವು ರಾಮನ ಧನುಸ್ಸಿಂದ. ಯುದ್ಧದಲ್ಲಿ ಕಾಲದಂಡವನ್ನು ಹೋಲುವಂಥಹ ಬಾಣಗಳು ಅವು. ಬಾಣಗಳನ್ನು ರಾಮ ನಿರಾಯಾಸವಾಗಿ ಪ್ರಯೋಗಿಸುತ್ತಾನೆ. ರಾಮನ ಬಾಣಗಳು ಶತ್ರುಸೈನ್ಯವನ್ನು ಪ್ರವೇಶ ಮಾಡಿದವು. ರಾಕ್ಷಸರ ಪ್ರಾಣಗಳನ್ನು ತೆಗೆದುಕೊಂಡವು ರಾಮನ ಬಾಣಗಳು ಕಾಲಪಾಶದಂತೆ. ರಾಕ್ಷಸರ ರುಧಿರದಿಂದೊಳಗೊಂಡ ಬಾಣವು ಅಗ್ನಿಯಂತೆ ಗಗನದಲ್ಲಿ ಗೋಚರಿಸಿದವು. ಎಷ್ಟು ಬಾಣಗಳು ಎಂದರೆ…. ಅಸಂಖ್ಯ. ಮಂಡಲಾಕಾರದ ಧನುಸ್ಸಿನಿಂದ ಅಸಂಖ್ಯ ಉಗ್ರವಾದ ಬಾಣಗಳು ಹೊರಬಂದವು. ಆ ಬಾಣಗಳು ರಾಕ್ಷಸರ ಧನುಸ್ಸನ್ನು, ಕವಚಗಳನ್ನು ಹಾಗೂ ಶಿರಗಳನ್ನೂ ಕತ್ತರಿಸಿದವು. ರಾಕ್ಷಸರ ಆಭರಣಸಹಿತ ಬಾಹುಗಳು ಕತ್ತರಿಸಲ್ಪಟ್ಟು ಕೆಳಗೆ ಬಿದ್ದವು. ರಾಕ್ಷಸರ ತೊಡೆಗಳು ಕತ್ತರಿಸಲ್ಪಟ್ಟು ಧರೆಗುರುಳಿದವು ನೂರಾರು ಸಾವಿರಾರು ಸಂಖ್ಯೆಯಲ್ಲಿ. ಸ್ವರ್ಣಾಲಂಕೃತ ಕುದುರೆಗಳು, ಆನೆಗಳು ರಥದ ಸಹಿತವಾಗಿ ಹತವಾದವು. ಅಶ್ವಗಳೂ ಸವಾರನ ಸಹಿತ ಹತಗೊಂಡವು. ಅವೆಲ್ಲವನ್ನೂ ರಾಮನ ಬಾಣಗಳು ಕಿಕ್ಕಿದವು, ಬೇಧಿಸಿದವು. ಕೊಂದು ಯಮಲೋಕಕ್ಕಟ್ಟಿದವು.

ವಿವಿಧ ಬಗೆಯ ಬಾಣಗಳಿವೆ ರಾಮನಲ್ಲಿ. ರಾಕ್ಷಸರು ಆರ್ತನಾದ ಮಾಡಿದರು. ಆ ಸೈನ್ಯದಲ್ಲಿ ಯಾರಿಗೂ ಸುಖವಿಲ್ಲ. ಹೇಗಿತ್ತು ಪರಿಸ್ಥಿತಿ ಎಂದರೆ…, ಹೊತ್ತಿ ಉರಿಯುವ ಬೆಂಕಿಯು ಒಣಗಿದ ಕಾಡನ್ನು ಸುಡುವಂತಿತ್ತು. ರಾಮನೆಂದರೆ ಪ್ರಜ್ವಲಿಸುವ ಯಜ್ಞೇಶ್ವರ. ಆಗ ಭೀಮಬಲರಾದ ಕೆಲವು ರಾಕ್ಷಸರು ರಾಮನ ಮುಂದೆ ಹೋಗಿ ನಿಲ್ಲಲು ಧೈರ್ಯ ಮಾಡಿದರು. ರಾಮನ ಎದುರು ನಿಲ್ಲಲೂ ಧೈರ್ಯಮಾಡಬೇಕು ಆ ಸಮಯದಲ್ಲಿ. ಶೂಲಗಳನ್ನು ಖಡ್ಗಗಳನ್ನು ಗಂಡುಗೊಡಲಿಗಳನ್ನು ಹಿಡಿದು ರಾಮನೆಡೆಗೆ ಹೋಗಿ ನಿಂತು, ಅವುಗಳನ್ನು ಎಸೆದರು. ಪರಮಾಯುಧಗಳು ಅವು. ಒಂದೊಂದೂ ಶಸ್ತ್ರಗಳನ್ನೂ ತುಂಡುಮಾಡಿ ಬೀಳಿಸುತ್ತಾನೆ ರಾಮ. ಬಳಿಕ ಒಂದೊಂದೇ ಬಾಣಗಳಿಂದ ಹೊಡೆದು ಉರುಳಿಸಿದನು ರಾಮ. ಎಲ್ಲರೂ ಧೊಪ್ಪನೆ ಧರೆಗುರುಳಿದರು. ಗರುಡನ ಪಕ್ಷವಾತದಿಂದ ಮರಗಳು ಬುಡಮೇಲಾದಂತೆ. ರಾಮನೆಂಬ ಗರುಡನ ಪಕ್ಷವಾತ ಅಂದರೆ ಭುಜಗಳಿಂದ ಹೊರಬಂದ ಬಾಣಗಳಿಂದ ರಾಕ್ಷಸರೆಂಬ ಮರಗಳು ಬುಡಮೇಲಾಗಿ ಬಿದ್ದವು. ಉಳಿದವರು ಗಾಬರಿಯಾಗಿದ್ದಾರೆ. ಖರನ ಕಡೆಗೆ ಧಾವಿಸಿ, “ನೀನೇ ದಿಕ್ಕು ನಮಗೆ. ರಾಮನ ಸಂಹರಿಸಲು ಸಾಧ್ಯವಿಲ್ಲ” ಎಂಬುದಾಗಿ ಶರಣಾದರು ಖರನಲ್ಲಿ.

ಆಗ ದೂಷಣ, ಅಂದರೆ ದೋಷವನ್ನುಂಟುಮಾಡುವವನು, ಅವನು ಸೇನಾಪತಿ. ಖರ ಪ್ರಭು, ಇವ ಸೇನಾಪತಿ. ಸೈನ್ಯವನ್ನು ಕರೆದುಕೊಂಡು ಮತ್ತೆ ರಾಮನ ಕಡೆಗೆ ಧಾವಿಸಿದನು ದೂಷಣ. ಹಿಂದಿನ ಕಾಲದಲ್ಲಿ ಯಮನಿಗೂ ಶಿವನಿಗೂ ಯುದ್ಧ ನಡೆದಿತ್ತಂತೆ. ಆಗ ಯಮನು ಶಿವನೆಡೆಗೆ ಧಾವಿಸಿ ಬಂದಂತೆ, ಮೃತ್ಯುಂಜಯನೆಡೆಗೆ ಮೃತ್ಯು ಧಾವಿಸಿದ ಹಾಗೆ ರಾಮನ ಕಡೆಗೆ ದೂಷಣನು ಸೇನಾಸಮೇತನಾಗಿ ಧಾವಿಸಿದನು. ದೂಷಣನ ಆಶ್ರಯ ಅಭಯರಾದರು ರಾಕ್ಷಸರು. ಈ ಸಲ ರಾಕ್ಷಸರಲ್ಲಿ ವೃಕ್ಷಗಳು ಬಂಡೆಗಳು ಇದ್ದವು. ಆಯುಧಗಳೆಲ್ಲ ಮುಗಿದಿದ್ದವು. ರಾಮನ ಮೇಲೆ ಮತ್ತೆ ಶಸ್ತ್ರವರ್ಷ.

ರೋಮಗಳ ನಿಮಿರಿನಿಲ್ಲಿಸುವ ಯುದ್ಧ ಮತ್ತೆ ಪ್ರಾರಂಭವಾಯಿತು. ಒಬ್ಬ ರಾಮ ಮತ್ತು ಸಾವಿರ ಸಾವಿರ ರಾಕ್ಷಸರ ಮಹಾಯುದ್ಧ. ಇಷ್ಟಕ್ಕೇ ನಾಚಿಕೆಯಾಗಬೇಕು, ಯಾಕೆಂದರೆ ಒಬ್ಬನ ವಿರುದ್ಧ ಯುದ್ಧಮಾಡ್ತಿರುವಂಥದ್ದು. ಯುದ್ಧಕುಶಲರು ಅವರೆಲ್ಲ. ಮತ್ತೆ ಎಲ್ಲ ಕಡೆಯಿಂದ ಮುತ್ತಿದರು ರಾಕ್ಷಸರು. ರಾಮ ಎಲ್ಲರನ್ನು ಗಮನಿಸಿ, ಭೈರವವಾದ ಘರ್ಜನೆಯನ್ನು ಮಾಡುತ್ತಾನೆ. ಕೇಳಿದರೆ ದಿಗಿಲಾಗುವಂಥಹ ಕೇಳಿದವರ ಎದೆ ನಡುಗುವಂಥಹ ಒಂದು ಸಿಂಹನಾದವನ್ನು ರಾಮ ಮಾಡುತ್ತಾನೆ. ಬಳಿಕ ಪರಮತೇಜೋಮಯವಾದ ಗಾಂಧರ್ವಾಸ್ತ್ರವನ್ನು ಹೂಡ್ತಾನೆ. ಎಲ್ಲ ದಿಕ್ಕುಗಳಿಗೆ ರಾಮನು ಬಾಣಗಳನ್ನು ಕಳುಹಿಸಿದ. ಬಾಣಗಳು ಬಂದು ಬಂದು ಬೀಳ್ತಾ ಇದೆ ರಾಕ್ಷಸರ ಮೇಲೆ. ಬತ್ತಳಿಕೆಯಿಂದ ರಾಮ ಬಾಣಗಳನ್ನು ತೆಗೆದುಕೊಳ್ಳುವದಾಗಲೀ, ಎತ್ತಿದ ಬಾಣಗಳನ್ನು ಧನುಸ್ಸಲ್ಲಿ ಹೂಡುವುದಾಗಲೀ, ಧನುಸ್ಸನ್ನು ಎಳೆಯುವುದಾಗಲೀ ಯಾವುದು ಗೊತ್ತಾಗುತ್ತಿಲ್ಲ. ಬಾಣಗಳು ಬಂದು ಬೀಳುವುದೊಂದೇ ಗೊತ್ತು. ರಾಮನ ವೇಗವನ್ನು ನೋಡಿ. ಬಾಣಗಳಿಂದ ರಾಕ್ಷಸರ ಮೈ ಭೇಧಿಸಲ್ಪಡುವಂಥದ್ದು ಮಾತ್ರ ಕಾಣ್ತಾ ಇತ್ತು. ಬಾಣಗಳಿಂದ ಸೂರ್ಯಕಿರಣಗಳನ್ನು ಹಿಡಿದಂತೆ, ಬಾಣಗಳ ಚಪ್ಪರ ಹಾಕಿದ್ದನು ರಾಮ. ಅಷ್ಟು ಬಾಣಗಳು ಆಕಾಶದಲ್ಲಿದ್ದವು. ರಾಮನು ಧಾರಾಕಾರವಾಗಿ ಬಾಣಗಳನ್ನು ಉಗುಳುತ್ತಿರುವಂತೆ ಭಾಸವಾಯಿತು. ಪರಿಣಾಮ ಏನಾಯಿತಂದರೆ ಎಲ್ಲರೂ ಒಟ್ಟೊಟ್ಟಿಗೂ ಬೀಳ್ತಾ ಇದ್ದರು. ರಾಮನ ಬಾಣದ ಅವಧಿ ಎಷ್ಟು ಚಿಕ್ಕದು ಅಂದರೆ ರಾಕ್ಷಸರು ಒಟ್ಟೊಟ್ಟಿಗೆ ಬೀಳ್ತಾ ಇದ್ದರು. 3ತರದ ರಾಕ್ಷಸರು, ಒಂದು ಬಾಣಬಂದು ಬಿದ್ದಿದೆ ಮೈಗೆ, ಬೀಳ್ತಾ ಇದ್ದಾರೆ ಹಾಗೂ ಬಿದ್ದಿದಾರೆ. ಕಾಲಸಮಾನತೆ ಅತ್ಯಾಶ್ಚರ್ಯವಾದದ್ದು. ಬಿದ್ದ ರಾಕ್ಷಸರಿಂದ ನೆಲವು ಮುಚ್ಚಿಹೋಯಿತು. ತಲೆಗಳು ಕಿರೀಟಸಹಿತವಾಗಿ, ಬಾಹುಗಳು, ಮೊಣಕಾಲುಗಳೆಲ್ಲ ಆಭರಣ ಸಹಿತವಾಗಿ ಅಲ್ಲಲ್ಲಿ ಬಿದ್ದುಕೊಂಡಿದ್ದವು. ಕುದುರೆಗಳು, ಆನೆಗಳು, ರಥಗಳು ಅಲ್ಲಲ್ಲಿ ಬಿದ್ದಿತ್ತು. ನಾನಾ ವಿಧದ ಧ್ವಜಗಳು ಬಿದ್ದಿದ್ದವು. ಆ ಸಮರ ಭೂಮಿಯ ಭಯಂಕರವಾಗಿದ್ದವು.

ದೂಷಣ ನೋಡ್ತಾನೆ ತನ್ನ ಸೈನ್ಯವು ನಾಶವಾಗುತ್ತಿರುವಂತೆ. ಐದು ಸಾವಿರದ ಸೈನ್ಯವನ್ನು ಸಜ್ಜುಗೊಳಿಸಿದನು ದೂಷಣ. ಮತ್ತೆ ಪ್ರಾರಂಭವಾಯಿತು ಯುದ್ಧ. ಅದು ಮಳೆಯೆ. ಶಸ್ತ್ರಗಳ ಮಳೆ. ಇದಕ್ಕೆ ರಾಮನ ಬಾಣಗಳ ಮಳೆಯೇ ಉತ್ತರ. ದೊಡ್ಡ ಮಳೆಗೆ ಮಹಾನಂದಿ ತಲೆತಗ್ಗಿಸಿ ಸಹಿಸಿದಂತೆ ಸಹಿಸಿದನು ರಾಮ. ಸಿಟ್ಟುಬಂದಿತು ರಾಮನಿಗೆ. ಬಹುದೊಡ್ಡ ಕ್ರೋಧವನ್ನು ಹೊಂದಿದನು ರಾಮ. ಎಲ್ಲ ರಾಕ್ಷಸರ ಸಂಹಾರ ಸಂಕಲ್ಪಕ್ಕಾಗಿ ಕ್ರೋಧಬಂದಿತು ರಾಮನಿಗೆ. ಪ್ರಜ್ವಲಿಸುವ ಬೆಂಕಿಯಂತೆ ರಾಮ ದೂಷಣಸಹಿತ ಸೈನಿಕರ ಮೇಲೆ ಬಾಣಗಳನ್ನು ಕರೆದನು ರಾಮ. ದೂಷಣನು ಬಾಣಪ್ರಯೋಗಿಸಿದ. ಈಗ ರಾಮನ ದೃಷ್ಟಿ ದೂಷಣನ ಮೇಲೆ ಬಿದ್ದಿತು. ಕೋಪಗೊಂಡ ರಾಮನು ಕ್ಷುರವೆಂಬ ಬಾಣದಿಂದ ದೂಷಣನ ಧನುಸ್ಸನ್ನು ಕತ್ತರಿಸಿದ. ನಾಲ್ಕೂ ಬಾಣಗಳಿಂದ ದೂಷಣನ ಕುದುರೆಗಳನ್ನು, ಅರ್ಧಚಂದ್ರ ಬಾಣದಿಂದ ದೂಷಣನ ಸಾರಥಿಯ ಶಿರವನ್ನರಿದನು ರಾಮ, ಮೂರು ಬಾಣಗಳಿಂದ ದೂಷಣನ ಎದೆ ಪ್ರವೇಶಿಸಿತು ರಾಮನ ಬಾಣಗಳು. ಒಂದು ಕ್ಷಣ ಮುಂಚೆ ಎಲ್ಲವೂ ಇತ್ತು, ನಂತರ ಏನೂ ಇಲ್ಲದ್ದನ್ನು ಗಮನಿಸ್ತಾನೆ ದೂಷಣ. ರಥದಿಂದ ಕೆಳಗೆ ಧುಮುಕಿದ ದೂಷಣ. ಪರ್ವತ ಶೃಂಗವನ್ನು ಹೋಲುವ ಪರಿಘಾಯುಧವನ್ನು ಹಿಡಿದುಕೊಂಡು ಕೆಳಗಿಳಿದನು. ಆ ಆಯುಧಕ್ಕೆ ದೇವಾನುದೇವತೆಗಳ ವಿರುದ್ಧ ನಡೆದ ಅನೇಕ ಯುದ್ಧದಲ್ಲಿ ಜಯಸಾಧಿಸಿದ ಇತಿಹಾಸವಿತ್ತು. ಶತ್ರುಗಳ ಮೇಧಸ್ಸಿನ ಕಲೆಯಿತ್ತು ಆ ಆಯುಧದಲ್ಲಿ. ಮಹಾಯುದ್ಧವದು…! ಅದನ್ನು ಹಿಡಿದು ರಾಮನೆಡೆಗೆ ಧಾವಿಸಿದನು ದೂಷಣ. ರಾಮನು ಎರಡು ಬಾಣಗಳಿಂದ ದೂಷಣನ ಎರಡೂ ಕೈಗಳನ್ನು ಕತ್ತರಿಸಿದನು. ಅಸುನೀಗಿದನು ದೂಷಣ. ಆಗ ರಾಮನನ್ನು “ಸಾಧು ಸಾಧು” ಎಂದು ಸೇರಿರುವವರು ಅಭಿನಂದಿಸಿದರು.

ಆಗ ಸೇನೆಯ ಮುಂದಿರುವ ಸೇನಾನಾಯಕರು ರಾಮನನ್ನ ಬಂದು ಆಕ್ರಮಿಸ್ತಾರೆ. ಮೃತ್ಯುಪಾಶ ಅವರನ್ನು ಸುತ್ತಿತ್ತು. ಮಹಾಕಪಾಲ, ಸ್ಥೂಲಾಕ್ಷ, ಪ್ರಮಾಥಿ ಈ ಮೂವರು. ಮೂವರನ್ನೂ ರಾಮನು ಅತಿಥಿಗಳಂತೆ ಸ್ವೀಕರಿಸಿದನು. ರಾಮನ ಬಾಣಗಳೇ ಸ್ವಾಗತ. ಅಲ್ಲಿಗೆ ಮೂರೂ ರಾಕ್ಷಸರೂ ಇಲ್ಲವಾದರು. ಇನ್ನೂ ಐದುಸಾವಿರ ಸೈನಿಕರಿದ್ದಾರೆ. ಐದುಸಾವಿರ ಬಾಣ ಪ್ರಯೋಗದಿಂದ ರಾಮನು ಅವರನ್ನೆಲ್ಲರನ್ನೂ ಸಂಹರಿಸಿದ. ರಾಮನ ಬಾಣಗಳನ್ನು ತುಂಬ ವೇಗವಾಗಿ ಪ್ರಯೋಗಿಸುತಿದ್ದ. ಖರ ನೋಡಿದನು. ದೊಡ್ಡ ಆಘಾತ…! 12 ಸೇನಾಧ್ಯಕ್ಷರನ್ನು ಕರೆದನು ಖರ. ಅಪ್ಪಣೆ ಮಾಡಿದನು, ದೂಷಣನು, ಅವನ ಸೈನಿಕರು ಹಾಗೂ ದೊಡ್ಡ ಸೇನೆಯು ಯುದ್ಧದಲ್ಲಿ ಮಡಿದುಹೋಯಿತು ರಾಮನ ಜೊತೆ ಯುದ್ಧಮಾಡಿ. ಹೋಗಿ ರಾಮನನ್ನು ಸಂಹರಿಸಿ ಎಂದು ತಾನೂ ಅವರೊಡನೆ ಹೋದನು. ರಾಮನೆಡೆಗೆ ಧಾವಿಸಿದರೆಲ್ಲರು. ರಾಮನು ಅವರನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ. ಸೇನಾಧ್ಯಕ್ಷರು ಹಾಗೂ ಸೇನೆಯನ್ನು ರಾಮನು ಧ್ವಂಸಮಾಡಿದನು. ಬೆಂಕಿಯನ್ನು ಹೋಲುವ ಬಾಣಗಳ ಮೂಲಕ ರಾಕ್ಷಸರ ಸಂಹಾರ ಮಾಡಿದನು ರಾಮ. ರಕ್ತಸಿಕ್ತರಾಗಿ ಬಿದ್ದರು ರಾಕ್ಷಸರು. ದರ್ಭೆ ಹಾಸಿದಂತೆ ಕಾಣುತ್ತಿತ್ತು ರಣರಂಗ, ಕೆಲವೇ ಹೊತ್ತಿನಲ್ಲಿ ಆ ವನವು ನರಕವನ್ನು ಹೋಲುವಂತಾಯಿತು. ಎತ್ತನೋಡಿದರತ್ತ ರಕ್ತಮಾಂಸಗಳು ನರಕವನ್ನು ಹೋಲಿಸುವಂತಿತ್ತು.

ಮಹಾಘೋರವಾಯಿತು ಆ ಕಾಡು. ಹದಿನಾಲ್ಕು ಸಾವಿರ ರಾಕ್ಷಸರಲ್ಲಿ ಹೆಚ್ಚಿನವರು ಸತ್ತುಹೋಗಿದ್ದಾರೆ. ಒಬ್ಬ ರಾಮನಿಂದ ಎಲ್ಲರೂ ಹತರು. ಯುದ್ಧದಲ್ಲಿ ಪಾಲ್ಗೊಂಡವರಲ್ಲಿ ಉಳಿದವರು ಮೂವರು ಒಬ್ಬ ಖರ, ಇನ್ನೊಬ್ಬ ತ್ರಿಶಿರ ಹಾಗೂ ರಾಮ. ಯುದ್ಧ ಮಾಡಲೇಬೇಕೆಂದು ಖರನು ರಥವನ್ನೇರಿ ರಾಮನೆಡೆಗೆ ಧಾವಿಸಿದನು. ಆತನನ್ನು ಕುರಿತು ತ್ರಿಶಿರ, ” ಹೇ ಘನ ವಿಕ್ರಮಿಯೇ ನನ್ನನ್ನು ಕಳುಹಿಸು. ನೋಡುತಿರುವಂತೆಯೇ ರಾಮನನ್ನು ಸಂಹರಿಸುವೆ. ನನ್ನ ಆಯುಧಗಳ ಮೇಲಾಣೆ. ಪ್ರತಿಜ್ಞೆ ನನ್ನದು. ರಾಮನನ್ನು ವಧಿಸುತ್ತೇನೆ ಎಂದನು. ಮುಂದೆ, ಒಂದೋ ನಾನು ಅವನಿಗೆ ಮೃತ್ಯು ಅಥವಾ ಅವನು ನನಗೆ ಮೃತ್ಯು. ನೀನು ಮಧ್ಯಸ್ಥನಾಗಿ ವೀಕ್ಷಿಸು ನನ್ನ ಹಾಗೂ ರಾಮನ ಯುದ್ಧವನ್ನು. ಒಂದೋ ನಾನು ರಾಮನನ್ನು ಸಂಹರಿಸಿರಲಾಗಿ ಸಂತುಷ್ಠನಾಗಿ ಜನಸ್ಥಾನಕ್ಕೆ ಹಿಂದಿರುಗು ಅಥವಾ ನಾನು ಅಳಿದ ಮೇಲೆ ಯುದ್ಧಕ್ಕೆ ಮುಂದಾಗು” ಎಂದನು ಮೂರು ತಲೆಯ ಶಿರ.

ಮೃತ್ಯುಲೋಭದಿಂದ ತ್ರಿಶಿರ ರಾಮನೆಡೆಗೆ ಹೋದನು. ಆಳದಲ್ಲಿ ಜೀವಕ್ಕೊಂದು ಆಸೆ ಇರುತ್ತದೆ ರಾಮನ ಕೈಯಲ್ಲಿ ಸಾಯಲು. ನಮಗಿಂತ ಶ್ರೇಷ್ಠರು ಅವರು. ರಾಮನನ್ನು ನೋಡಿದಾರೆ ಅವರು. ಆತನಿಂದ ಮೋಕ್ಷವನ್ನು ಪಡೆದಿದ್ದಾರೆ. ಕೊನೆಪಕ್ಷ ರಾಮನನ್ನು ನೋಡಿದ್ದಾರೆ, ಯೋಗವಂತರು ಅವರು. ಹಾಗಾಗಿ ವಾಲ್ಮೀಕಿಗಳು ತ್ರಿಶಿರನಿಗೆ ಮೃತ್ಯುಲೋಭ ಎಂದು ಹೇಳಿದ್ದಾರೆ. ಖರನ ಅಪ್ಪಣೆಯಾಯಿತು. ಮೂರು ಶಿಖರದ ಪರ್ವತವು ರಾಮನೆಡೆಗೆ ಸಾಗುವಂತೆ ಗೋಚರಿಸಿತು. ಬಾಣಗಳ ಧಾರೆ ತ್ರಿಶಿರನಿಂದ. ದುಂದುಭಿಯಂತೆ ಬೊಬ್ಬಿರಿದನು ತ್ರಿಶಿರ, ಆದರೆ ಸ್ವರ ಬಿದ್ದು ಹೋಯಿತು ತ್ರಿಶಿರನದು. ಇದು ಅಪಶಕುನ..! ಯಥಾಪ್ರಕಾರ ಬಾಣಗಳ ಮೂಲಕ ರಾಮನು ಸ್ವಾಗತಿಸಿದನು. ಯುದ್ಧಾತಿಥ್ಯ..! ದೊಡ್ಡ ಯುದ್ಧ ನಡೆಯಿತು ಇವರೀರ್ವರಲ್ಲಿ. ಸಿಂಹ ಮತ್ತು ಆನೆಯ ಯುದ್ಧದಂತೆ. ಮೂರು ಬಾಣಗಳಿಂದ ರಾಮನ ಹಣೆಯನ್ನು ಪ್ರಹರಿಸಿದನು ತ್ರಿಶಿರ. ಕೋಪಬಂತು ರಾಮನಿಗೆ. ಸಹಿಸಲಾರದ ರಾಮನು ಕುಪಿತಗೊಂಡು, ” ಅಹೋ! ವಿಕ್ರಮಶೂರ ನೀನು. ಪರಾಕ್ರಮಿ ನೀನು. ಮೂರು ಹೂವುಗಳು ಬಂದು ಹಣೆಗೆ ತಾಕಿದಂತಾಗಿದೆ ನನಗೆ.” ಎಂದನು. ನನಗೆ ಇಟ್ಟುಕೊಂಡು ಗೊತ್ತಿಲ್ಲ. ಕೊಡುತ್ತೇನೆ ತಿರುಗಿ ಎಂದು, 14 ಬಾಣಗಳನ್ನು ಪ್ರಯೋಗಿಸಿದನು ರಾಮ. ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನು ಹೊಡೆದುರುಳಿಸಿದನು ರಾಮ. ರಥಸಂಚಾರ ನಿಂತಿತು. ಎಂಟು ಬಾಣಗಳಿಂದ ತ್ರಿಶಿರನ ಸಾರಥಿಯ ಸಾವು. ಒಂದು ಬಾಣದಿಂದ ಧ್ವಜಧ್ವಂಸ. ಅನೇಕಾನೇಕ ಬಾಣಗಳಿಂದ ತ್ರಿಶಿರನನ್ನು ಜಡಗೊಳಿಸಿದನು ರಾಮ. ಅಪ್ರಜ್ಞೆ ಆವರಿಸಿತು ತ್ರಿಶಿರನನ್ನು. ಮೂರು ಬಾಣಗಳಿಂದ ತ್ರಿಶಿರನ ಮೂರು ಶಿರಗಳನ್ನು ಹತಗೊಳಿಸಿದನು ರಾಮ. ಯಾರ್ಯಾರು ಅರ್ಧ ಜೀವಿಗಳಿದ್ದರೋ ಅವರೆಲ್ಲರೂ ಹೆದರಿ ದಿಕ್ಕಾಪಾಲಾಗಿ ಓಡಲಾರಂಭಿಸಿದರು.

ಕೊಟ್ಟ ಕೊನೆಯದಾಗಿ ಖರನು, ಓಡುವವರನ್ನು ನಿಲ್ಲಿಸಿ, ಅರ್ಧ ಜೀವ ಆದಂತವರನ್ನು ಕರೆದುಕೊಂಡು ರಾಮನೆಡೆ ಧಾವಿಸಿದನು. ಚಂದ್ರನೆಡೆಗೆ ಧಾವಿಸುವ ರಾಹುವಿನಂತೆ. ದೂಷಣನ ವಧೆಯಾಗಿದೆ ಖರ ನೋಡಿದಾನೆ, ತ್ರಿಶಿರನ ವಧೆಯಾಗಿದೆ ಖರ ನೋಡಿದಾನೆ, ಸೈನ್ಯದವರ ವಧೆಯಾಗಿದೆ ಖರ ನೋಡಿದಾನೆ. ಮೊದಲ ಬಾರಿಗೆ ಭಯವುಂಟಾಯಿತು ಖರನಿಗೆ. ಒಬ್ಬ ವೀರನಿಂದ, ರಥ ಕೂಡ ಇಲ್ಲ. ಅಂಥವನಿಂದ ಸೈನ್ಯ ನಾಶವಾಗಿದೆ….!! ಯಾರಿಲ್ಲ..! ತನ್ನ ಧನುಸ್ಸನ್ನು ಬಹಳವಾಗಿ ಸೆಳೆದು ಬಾಣವನ್ನು ಪ್ರಯೋಗಿಸಿದನು ಖರ. ದಿಕ್ಕುದಿಕ್ಕುಗಳನ್ನು ಬಾಣಗಳಿಂದ ತುಂಬುತ್ತಾ ರಾಮನೆಡೆಗೆ ಧಾವಿಸಿದನು ಖರ. ರಾಮನೂ ಬಾಣಪ್ರಯೋಗವನಾರಂಭಿಸಿದನು ಪರ್ಜನ್ಯಬಾಣಗಳು. ಅಸಂಖ್ಯಾತ ಬಾಣಗಳಿಂದ ಜಾಗವೇ ಇಲ್ಲ ಅಲ್ಲಿ… ಸೂರ್ಯನ ಬೆಳಕಿಲ್ಲದಂತೆ! ನಾರಾಚ(ಲೋಹಮಯ ಆಯುಧ), ನಾಲೀಕ( ಘೋರ ಶಬ್ದ ಮಾಡುವ ಬಾಣ) ಇವುಗಳಿಂದ ರಾಮನನ್ನ ತಿವಿದನು ಖರ. ಅಂತಕನಂತೆ ಕಂಡನು ಖರ. ಸರ್ವಸೈನ್ಯವನ್ನು ಹೊಡೆದು ಬಡಿದುರುಳಿಸಿದ ರಾಮನು ಪೌರುಷದಿಂದ ನಿಂತಿದಾನೆ ರಾಮ. ರಾಮನ ಕಣ್ಣಿನಲ್ಲಿ ಖರನು ಕ್ಷುಧ್ರ ಮೃಗನಂತೆ ಕಂಡನು. ನರಿಯನ್ನು ಕಂಡ ಸಿಂಹಕ್ಕೆ ಭಯವಾಗುವುದುಂಟೇ…? ರಾಮನು ಭಯಪಡಲಿಲ್ಲ. ಪತಂಗವು ಬೆಂಕಿಗೆ ಬೀಳುವಂತೆ ಖರ ಧಾವಿಸಿದನು. ರಾಮನ ಧನುಸ್ಸನ್ನು ಇಲ್ಲವಾಗಿಸಿದನು ಖರ. ತನ್ನ ವಿಕ್ರಮವನ್ನು ಪ್ರಕಟಪಡಿಸ್ತಾ, ಮೊದಲು ಕಂಡ ರಾಕ್ಷಸರಿಗೂ ನನಗೂ ವ್ಯತ್ಯಾಸವಿದೆ ಎಂದು ತೋರಿಸಿದನು ರಾಮ. ಏಳು ಬಾಣಗಳನ್ನು ರಾಮನಲ್ಲಿ ನೆಟ್ಟನು ಖರ. ರಾಮನಿಗೆ ಏನಾಗಲಿಲ್ಲ ಅಂತಲ್ಲ. ರಾಮನ ಕವಚವು ಕಳಚಿಬಿದ್ದಿತು. ರಾಮನ ನಿಜತೇಜಸ್ಸು ಪ್ರಕಟ.ಸಾವಿರಾರು ಬಾಣಗಳಿಂದ ರಾಮನನ್ನು ಮುಚ್ಚಿದನು ಖರ. ಬಳಿಕ ಸಿಂಹನಾದವನ್ನು ಮಾಡುತ್ತಾನೆ ಖರ. ನೋಡು ನನ್ನ ಪರಾಕ್ರಮವನ್ನು ರಾಮಾ ಎಂದನು. ಬಹಳವಾಗಿ ರಾಮನನ್ನ ತಿವಿದಿದೆ ಖರನ ಬಾಣಗಳು. ಖರನು ಮತ್ತೊಂದು ಬಾಣ ಪ್ರಯೋಗಮಾಡಿ ತನ್ನೆಡೆ ಬರುವ ಮುನ್ನ ರಾಮ ಇನ್ನೊಂದು ಧನಸ್ಸನ್ನು ಹೆದೆಯೇರಿಸಿದನು. ಚುರುಕು ನೋಡಿ ರಾಮನದ್ದು..! ಅಗಸ್ತ್ಯರು ಕೊಟ್ಟಿದ್ದ ವೈಷ್ಣವ ಧನುಸ್ಸನ್ನ ಹೆದೆಯೇರಿಸಿದನು ರಾಮ. ತಾನೇ ಧಾವಿಸಿದನು ರಾಮ. ಬಾಣಪ್ರಯೋಗ ಮಾಡುತ್ತಾನೆ ರಾಮ. ಮೊದಲು ರಥಧ್ವಜವನ್ನ ಧ್ವಂಸಗೊಳಿಸಿದನು ರಾಮ. ನಾಲ್ಕು ಬಾಣಗಳಿಂದ ರಾಮನನ್ನು ಬೇಧಿಸ್ತಾನೆ ಖರ. ಆರು ಬಾಣ ಪ್ರಯೋಗ ಮಾಡ್ತಾನೆ ರಾಮ, ಒಂದು ಬಾಣ ಖರನ ಶಿರಸ್ಸಿಗೆ, 2 ಬಾಣ ಎರಡು ಬಾಹುಗಳಿಗೆ, 3 ಆತನ ವಕ್ಷಸ್ಥಳಕ್ಕೆ ಪ್ರಯೋಗಿಸಿದನು ರಾಮ. ನಂತರ 13ಬಾಣಗಳನ್ನು ಪ್ರಯೋಗಿಸಿದನು ರಾಮ. ರಥವನ್ನೂ ಮುರಿದನು. 2 ಬಾಣಗಳಿಂದ ಅಚ್ಚನ್ನು ಮುರಿದನು ರಾಮ. 12ನೇ ಬಾಣದಿಂದ ಖರನ ಧನುಸ್ಸನ್ನು ತುಂಡು ಮಾಡಿದನು. 13ನೇ ಬಾಣದಿಂದ ಖರನನ್ನು ಬೇಧಿಸಿದನು ರಾಮ,

ಆಗ ಖರನು ರಥವಿಲ್ಲದೆ, ಸಾರಥಿಯಿಲ್ಲದೇ, ಗಧಾಪಾಣಿಯಾಗಿ ನಿಂತನು. ರಾಮನನ್ನು ಪೂಜಿಸಿದರು ದೇವತೆಗಳು…! ಇನ್ನು ಇಬ್ಬರೇ ಇದ್ದಾರೆ. ಖರ, ರಾಮ. ಒಂದು ಗಧೆಯಿದೆ ಖರನಲ್ಲಿ. ಮುಗಿದಿಲ್ಲ ಇದು. ಇನ್ನೂ ಇದೆ. ರಾಮಖರಯುದ್ಧ. ಖರರಾಮಸಂಪ್ರಹಾರಃ. ಒಂದು ಯುದ್ಧ ಮುಂದಿದೆ. ಉಪಕರಣವಲ್ಲ, ಅಂತಃಕರಣ ಮುಖ್ಯ. ಮಹಾತ್ಮರ ಅಂತಃಸತ್ವದಲ್ಲಿ ಉಪಕರಣಗಳ ಹಂಗಿಲ್ಲ. ಹದಿನಾಲ್ಕು ಸಾವಿರ ರಾಕ್ಷಸರ ಸಂಹರಿಸಿದ ಮಹಾವೀರ ರಾಮ. ಖರ ರಾಮರ ಮುಂದಿನ ಯುದ್ದವನ್ನು ಪ್ರವಚನದ ಮುಂದಿನ ಭಾಗದಲ್ಲಿ ನೋಡೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments