ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಪ್ರತಿಯೊಂದು ಜೀವಕ್ಕೂ ದೇವರು ಒಂದಲ್ಲಾ ಒಂದು ಘಟ್ಟದಲ್ಲಿ ಆ ಜೀವವು ಮಾಡಿದ ತಪ್ಪುಗಳನ್ನು ತೋರಿಸಿಕೊಡುತ್ತಾನೆ. ಮಾತಿನರೂಪದಲ್ಲಿ ಅಥವಾ ಕೃತಿಯ ರೂಪದಲ್ಲಿ. ದೇವರ ಭಾಷೆ ಕೆಲವೊಮ್ಮೆ ಕೃತಿಯಾಗಿರಬಹುದು. ಎಲ್ಲೋ ಕೆಲವೊಮ್ಮೆ ಮಾತುಗಳಾಗಿ ಕೂಡಾ ಇರಬಹುದು, ನೇರವಾಗಿ ದೇವರು ಹೇಳಲೂಬಹುದು. ಖರನ ಬದುಕಿನಲ್ಲಿ ಅಂತಹ ಸಂದರ್ಭ ಬಂದಂತಿದೆ. ಸನ್ನಿವೇಶ ಎಲ್ಲಿ ಬಂದು ನಿಂತಿದೆಯೆಂದರೆ, ಅವನು ಎಲ್ಲವನ್ನೂ ಕಳೆದುಕೊಂಡಿದ್ದಾನೆ. 14,000 ರಾಕ್ಷಸ ಸೈನಿಕರ ಪ್ರಭು, ಈಗ ಉಳಿದಿರುವುದು ತಾನೊಬ್ಬನೇ. ಮತ್ತೆಲ್ಲರೂ ಅವನ ಕಣ್ಣಮುಂದೆಯೇ ಹತರಾಗಿದ್ದಾರೆ. ಅವನಿಗೆ ಯಾರನ್ನು ಕೂಡಾ ರಕ್ಷಣೆ ಮಾಡಿಕೊಳ್ಳಲು ಆಗಲಿಲ್ಲ. ಅವನೆದುರೇ ಅವನ ಸೇನಾಪತಿಗಳು, ಇತರ ಸೈನಿಕರು ಎಲ್ಲರೂ ಮಡಿದಿದ್ದಾರೆ. ಕೊನೆಯಲ್ಲಿ ನಡೆದ ಮಹಾಯುದ್ಧದಲ್ಲಿ ಖರನೂ ಕೂಡ ವಿರಥನಾಗಿದ್ದಾನೆ. ರಥದ ಜೊತೆ ಧನುಸ್ಸನ್ನೂ, ಅಶ್ವಗಳನ್ನು, ಸಾರಥಿಯನ್ನೂ ಕಳೆದುಕೊಂಡಿದ್ದಾನೆ. ನೆಲದ ಮೇಲೆ ನಿಂತಿದ್ದಾನೆ. ಕೈಯಲ್ಲಿ ಒಂದು ಗದೆ ಮಾತ್ರಾ ಉಳಿದಿದೆ. ಸುಯೋಧನ ಕೊನೆಯಲ್ಲಿ ಎಲ್ಲರನ್ನು, ಎಲ್ಲವನ್ನೂ ಕಳೆದುಕೊಂಡಂತೆ, ಸಂತಾಪದಿಂದ ಆ ಘೋರ ದೃಶ್ಯವನ್ನು ನೋಡುವಂತಿದೆ ಖರನ ಸ್ಥಿತಿ.

ಇಂತಹ ಖರನಿಗೆ ರಾಮ ಒಂದು ಸಂದೇಶವನ್ನು ಕೊಡುತ್ತಾನೆ. ಹೇಳಿದ್ದು ಮೃದು ಮಾತುಗಳಲ್ಲಿ ಆದರದು ಕಠೋರ ಸತ್ಯವಾಗಿತ್ತು. ಏಕೆಂದರೆ ಮಾತನ್ನು ಮೃದುವಾಗಿ ಆಡಬಹುದು. ಯಾವಾಗ ಬದುಕು ಪಾಪಮಯವಾಗುತ್ತದೆಯೋ, ತಪ್ಪುಗಳಿಂದ ವ್ಯಾಪ್ತವಾಗುತ್ತದೆಯೋ ಅದನ್ನು ನಿರೂಪಿಸುವಂತಹ ಮಾತುಗಳು ಹೇಗೆ ತಾನೇ ಮೃದುವಾಗಿರಲು ಸಾಧ್ಯ? ಆದರೂ ರಾಮನ ಮಾತುಗಳು ಮೃದುವಾಗಿದ್ದವು. ಅದರ ಅರ್ಥವು ನಿಷ್ಠುರವಾಗಿತ್ತು. ಅಂತಹ ಮಾತುಗಳನ್ನು ರಾಮನು ಖರನಿಗೆ ಹೇಳಿದನು. ಎಷ್ಟು ದೊಡ್ಡ ಬಲ ನಿನ್ನ ಬಳಿಯಲ್ಲಿತ್ತು. ಆನೆಗಳು, ಕುದುರೆಗಳು, ರಥಗಳು, ಪದಾತಿಗಳಿಂದ ಕೂಡಿದ ದೊಡ್ಡ ಚತುರಂಗ ಸೈನ್ಯವು ನಿನ್ನಲ್ಲಿತ್ತು. ಇಂತಹ ಬಲವನ್ನಿಟ್ಟುಕೊಂಡು ನೀನು ಮಾಡಬಾರದ ಕಾರ್ಯಗಳನ್ನು ಮಾಡಿದೆ. ಬದುಕಿನುದ್ದಕ್ಕೂ ಯಾರಾದರೂ ಕೂಡಾ ಜಿಗುಪ್ಸೆಪಡುವಂತಹ, ಬೇಸರಪಡುವಂತಹ ಸುದಾರುಣ ಕಾರ್ಯಗಳನ್ನು ನೀನು ಮಾಡಿದೆ. ನಾವು ಲೋಕಕ್ಕೆ ಭಯಜನಕರಾಗಿ, ಭಯೋತ್ಪಾದಕರಾಗಿ ಇರಬಾರದು. ಕ್ರೂರಿಗಳಾಗಿದ್ದರೆ, ಪಾಪಕರ್ಮಗಳನ್ನು ಮಾಡುತ್ತಿದ್ದರೆ ಮೂರುಲೋಕಗಳ ದೊರೆ ಕೂಡ ಬಹುಕಾಲ ಉಳಿಯಲಾರ. ಅವನ ಪದವಿ, ಸ್ಥಾನ, ಅಧಿಕಾರ ಯಾವಾಗ ಅವನು ಲೋಕಕ್ಕೆ ಭಯಜನಕನಾಗುತ್ತಾನೋ ಆಗ ಉಳಿಯದು. ಹಾಗಾಯಿತು. ನಿನ್ನ ಬಳಿ ಈಗ ಏನಿದೆ, ನಿನ್ನ ರಾಕ್ಷಸರಾಜ್ಯವು ಏನಾಯಿತು? ಹೇ ರಾಕ್ಷಸ, ಲೋಕವಿರುದ್ಧವಾದ ಕಾರ್ಯಗಳನ್ನು ಮಾಡುತ್ತಿದ್ದವರನ್ನು ಲೋಕವೇ ನಾಶಮಾಡುತ್ತದೆ. ಮನೆಯೊಳಗೆ ಬಂದ ಕೆಟ್ಟ ಹಾವನ್ನು ಕೊಂದಹಾಗೆ. ನಾನೊಬ್ಬ ಪ್ರತಿನಿಧಿ ಮಾತ್ರ. ಲೋಭದಿಂದಲೋ, ಕಾಮದಿಂದಲೋ ಮನುಷ್ಯನು ಪಾಪವನ್ನು ಮಾಡುತ್ತಾನೆ. ಪಾಪಮಾಡುವಾಗ ಸಂತೋಷದಿಂದ ಮಾಡುತ್ತಾನೆ. ಇನ್ನೂ ನಮಗೆ ಸಿಗದಂತಹದ್ದನ್ನು ಬಯಸಿದರೆ ಅದು ಕಾಮ. ಸಿಕ್ಕಿರುವಂತದ್ದನ್ನು ಇನ್ನೂ ಹೆಚ್ಚು ಬಯಸಿದರೆ ಅದು ಲೋಭ. ಈ ಎರಡು ಕಾರಣಗಳಿಗೆ ಮನುಷ್ಯ ಪಾಪವನ್ನು ಮಾಡುತ್ತಾನೆ. ಆದರೆ ಫಲವು ಬಂದೇ ಬರುತ್ತದೆ, ಈಗ ನಿನಗೆ ಬಂದಹಾಗೆ.

ರಾಮ ಅದಕ್ಕೊಂದು ಉದಾಹರಣೆಯನ್ನು ಕೊಟ್ಟ. ಆಲಿಕಲ್ಲುಗಳನ್ನು ತಿನ್ನುವ ಬ್ರಾಹ್ಮಣಿಯಂತೆ. ಬ್ರಾಹ್ಮಣಿಯೆಂದರೆ ಕೆಂಪುಬಾಲವುಳ್ಳ ಹಲ್ಲಿಯ ಜಾತಿಯ ಪ್ರಾಣಿ, ಜಿಗಣೆ. ರಕ್ತಹೀರುವುದು ಅದರ ಸ್ವಭಾವ. ರಕ್ತಹೀರಲು ಶುರುಮಾಡಿದರೆ ಎಲ್ಲಿ ನಿಲ್ಲಿಸಬೇಕೆಂದು ತಿಳಿಯದು ಅದು. ಲೋಭಿ ಕೂಡ ಹಾಗೆಯೇ, ಸಾಕುಯೆಂಬುದಿಲ್ಲ. ಕೊನೆಗೆ ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಜಿಗಣೆಗೆ ಆಲಿಕಲ್ಲು ಸಿಕ್ಕಿದರೆ ಅದನ್ನೂ ಹೀರುತ್ತದೆ. ಆದರೆ ಅದಕ್ಕೆ ಆಲಿಕಲ್ಲು ವಿಷ. ಅದನ್ನು ಹೀರಿ ತಾನೇ ಸತ್ತುಹೋಗುತ್ತದೆ. ಅದರ ಸಾವಿಗೆ ಅದೇ ಕಾರಣ. ತಾನೇ ತಿಂದ ಆಲಿಕಲ್ಲು ಅದಕ್ಕೆ ವಿಷವಾಯಿತು. ನಾವು ಮಾಡಿದ ಪಾಪಕರ್ಮಗಳು ಹೀಗೇ. ನಾವೇ ಮಾಡಿದ ಪಾಪದ ಫಲ ಮುಂದೊಂದು ದಿನ ಬಂದಾಗ ನಮಗದು ವಿಷ. ನಮಗೆ ಬೇಡವೆಂದರೂ ಅದು ಬಿಡುವುದಿಲ್ಲ. ಹೀಗೇ ಕರ್ಮಗಳೂ ಕೂಡಾ. ಖರನನ್ನು ರಾಮನು ಎಚ್ಚರಿಸುತ್ತಿದ್ದಾನೆ. ದಂಡಕಾರಣ್ಯದಲ್ಲಿ ನೀನು ಯಾವ ಸದುದ್ದೇಶದಿಂದಲೂ ವಾಸಮಾಡಲಿಲ್ಲ. ನಿನ್ನುದ್ದೇಶ ಋಷಿಗಳನ್ನು ಪೀಡಿಸುವುದು. ಲೋಕಕಲ್ಯಾಣಕಾಮಿಗಳಾದಂತಹ ಋಷಿಗಳನ್ನು ಪೀಡಿಸುವ ಸಲುವಾಗಿಯೇ ಲಂಕೆಯಿಂದ ದಂಡಕಾರಣ್ಯಕ್ಕೆ ಬಂದೆ ನೀನು. ನಿನ್ನ ಬಲ ಕೂಡ ಸಾತ್ವಿಕರನ್ನು ಪೀಡಿಸುವ ಒಂದೇ ಕಾರಣಕ್ಕೆ .ಆ ಮಹಾಭಾಗರನ್ನು ಕೊಂದ ನಿನಗೆ ಮುಂದೇನು ಫಲ ಸಿಕ್ಕೀತು ಹೇಳು. ಪಾಪಕರ್ಮಿಗಳು, ಕ್ರೂರರು, ಲೋಕಜಿಗುಪ್ಸಿತರು ಇವರಿಗೆ ಅಧಿಕಾರ ಬಂದರೂ ಕೂಡಾ ಅದು ಬಹಳ ಕಾಲವಲ್ಲ. ಮುಂದೊಂದು ದಿನ ಪತನ ನಿಶ್ಚಿತ. ವೃಕ್ಷವು ಎಷ್ಟು ದೊಡ್ಡದಾದರೇನಾಯಿತು, ಬೇರು ಗಟ್ಟಿಯಿರಬೇಕು. ಒಂದು ವೇಳೆ ಬೇರೇ ಮೋಸವಾದರೆ ಆ ವೃಕ್ಷವು ಪತನಗೊಳ್ಳುವುದು ನಿಶ್ಚಿತ. ಬದುಕಿಗೆ ಧರ್ಮವೇ ಬೇರು. ಧರ್ಮವನ್ನೇ ಹಾಳುಮಾಡಿಕೊಂಡವನು ಅಧಿಕಾರದಲ್ಲಿ ಬಹಳ ಕಾಲ ಇರಲಾರ. ಪಾಪಕರ್ಮಕ್ಕೆ ಫಲಬರುವುದು ನಿಶ್ಚಿತ. ಬರುವುದಕ್ಕೆ ಸಮಯವಿದೆ. ಇಂದಲ್ಲದಿದ್ದರೂ ಎಂದೋ ಒಂದು ದಿನ ಬಂದೀತು. ಕಾಲ ಬಂದಾಗ ತುಂಬಾ ಘೋರವಾಗಿದ್ದೀತು ಅದು. ಮರವು ಹೂಬಿಡಲು ಅದರ ಕಾಲ ಬರಬೇಕು. ಹಾಗೇ ಪಾಪದ ಫಲಬರುವುದು ಅದರ ಕಾಲಬಂದಾಗ. ಖರನ ಸ್ಥಿತಿ ಹೇಗಿದೆ ಈಗ ಎಂಬುದನ್ನು ನೆನಪಿಸುತ್ತಾನೆ.

ಕೆಲವೊಮ್ಮೆ ಮಾತ್ರ ಬೇಗ ಫಲ ಬರುತ್ತದೆ. ಹೂವು ಋತುವಿಗಾಗಿ ಕಾಯುತ್ತದೆ ಆದರೆ ವಿಷದ ಅನ್ನ ಊಟಮಾಡಿದರೆ ಅದರ ಫಲ ಕೂಡಲೇ ಬರುತ್ತದೆ. ಹಾಗೆಯೇ ಅತಿಯಾಗಿ ಪಾಪಗಳನ್ನು ಮಾಡಿದರೆ ತಡವಿಲ್ಲದೇ ಫಲ ಬಂದೀತು. ನಿನಗೆ ಬಂದಹಾಗೇ. ಎಂಬುದಾಗಿ ಹೇಳಿ ಯಾರು ಲೋಕದ ಕೇಡನ್ನು ಬಯಸುತ್ತಾರೋ, ಪಾಪ ಮಾಡುತ್ತಾರೋ ಅಂತಹವರನ್ನು ಶಿಕ್ಷಿಸಲು ನಾನು ಬಂದಿದ್ದೇನೆ. ಅಯೋಧ್ಯೆಯ ಚಕ್ರವರ್ತಿ ದಶರಥ ನನ್ನನ್ನು ಕಾಡಿಗೆ ಕಳುಹಿದ್ದು ವಿಫಲವಲ್ಲ. ಇನ್ನೀಗ ನಾನು ಪ್ರಯೋಗಿಸುವ ಸ್ವರ್ಣಭೂಷಿತವಾದ ಬಾಣಗಳು ನಿನ್ನನ್ನು ಬೇಧಿಸಿಯಾವು, ನಿನ್ನಸುವನ್ನು ಕಳೆದಾವು. ದಂಡಕಾರಣ್ಯದಲ್ಲಿರುವ ಋಷಿಗಳನ್ನೆಲ್ಲ ಭಕ್ಷಣೆ ಮಾಡಿರುವ ನೀನು ಸತ್ತು ಅವರನ್ನೆಲ್ಲ ಹಿಂಬಾಲಿಸುವೆಯಂತೆ. ಆ ದಾರಿ ಈಗ ನಿನಗೂ ಇದೆ. ನಿನ್ನ ಸೈನ್ಯ ಮೊದಲು, ನಂತರ ನೀನು. ಆದರೆ ವ್ಯತ್ಯಾಸವಿದೆ. ಯಾವ ಪರಮರ್ಷಿಗಳನ್ನು ನೀನು ಕೊಂದೆಯೋ ಅವರೀಗ ವಿಮಾನಗಳಲ್ಲಿ ಪುಣ್ಯಲೋಕಗಳಲ್ಲಿ ವಿಹರಿಸುತ್ತಿದ್ದಾರೆ. ನೀನು ನರಕಕ್ಕೆ ಬೀಳುವವನು. ನರಕದಲ್ಲಿ ಬೀಳುವ ನಿನ್ನನ್ನು ವಿಮಾನಗಳಿಂದ, ಪುಣ್ಯಲೋಕಗಳಿಂದ ಅವರು ವೀಕ್ಷಿಸುತ್ತಾರೆ. ಸಾಯುವ ವಿಷಯದಲ್ಲಿ ಸಮಾನ. ಅವರೆಲ್ಲಿ ಹೋಗುತ್ತಾರೆ, ನೀನೆಲ್ಲಿ ಹೋಗುತ್ತೀಯೆ ಎನ್ನುವ ವಿಚಾರದಲ್ಲಿ ಬಹಳ ವ್ಯತ್ಯಾಸವಿದೆ. ನೀನು ಹೋಗಬೇಕಾಗಿರುವುದು ನರಕಕ್ಕೆ, ಅವರು ಪುಣ್ಯಲೋಕಗಳಿಗೆ. ನಿನಗೇನು ಶಕ್ತಿಯಿದೆಯೋ ಅದನ್ನೆಲ್ಲಾ ಬಳಸಿ ಪ್ರಹರಿಸು. ಕೈಯಲ್ಲಿ ಉಳಿದಿರುವ ಗದೆಯನ್ನೆತ್ತಿ ಪ್ರಹರಿಸು.

ಕುಲಾಧಮನೇ, ಯತ್ನ ಮಾಡು. ಶರಣಾಗೆಂದು ನಾನು ಹೇಳುವುದಿಲ್ಲ. ಆದರೆ ಇನ್ನೂ ನೀನು ಹೋರಾಡಿದರೆ ನಿನ್ನ ತಲೆ ನಿನ್ನ ಕೊರಳ ಮೇಲಿರುವುದಿಲ್ಲ, ಕೆಳಗೆ ಬಂದೀತು ಎಂಬುದಾಗಿ ರಾಮನು ಗಂಭೀರವಾಗಿ ಎಚ್ಚರಿಸಿದಾಗ ಖರನಿಗೆ ಸಿಟ್ಟು ಬಂತು. ಕಣ್ಣು ಕೆಂಪಾಯಿತು. ಕ್ರೋಧವು ಅವನನ್ನು ವ್ಯಾಪಿಸಿತು. ಏಕೆಂದರೆ ಎಲ್ಲವನ್ನೂ ಕಳೆದುಕೊಂಡದ್ದು ಹೌದಾದರೂ ಅಹಂ ಎನ್ನುವುದು ಇನ್ನೂ ಹೋಗಿಲ್ಲ. ನಾವು ನೋಡುವ ಹಾಗೆ. ಒಂದು ಕಾಲದಲ್ಲಿ ಮೆರೆದವರು, ಭಾರೀ ಪ್ರಭಾವವುಳ್ಳವರು. ಈಗ ಆ ಶಕ್ತಿ, ಪ್ರಭಾವವಿಲ್ಲ. ಅಹಂ ಮಾತ್ರ ಉಳಿದಿರುತ್ತದೆ. ಹಾಗಾಗಿ ಅವರಿಗೆ ಸ್ವಲ್ಪ ವ್ಯತ್ಯಾಸವಾದರೂ ಸಿಡಿದೇಳುತ್ತಾರೆ. ಅದು ಉಳಿದಿರುವ ಅಹಂ ಹೊರತು ಬೇರೇನೂ ಅಲ್ಲ. ವಿಧಿ ಅಹಂಕಾರವನ್ನು ಯಾರಲ್ಲಿಯೂ ಸಹಿಸುವುದಿಲ್ಲ. ದರ್ಪಭಂಗ ಮಾಡಿಯೇ ಮಾಡುತ್ತಾನೆ. ಅಟ್ಟಹಾಸದಿಂದ ನಕ್ಕನಂತೆ ಖರ. ಅಭ್ಯಾಸದಂತೆ ನಕ್ಕಿದ್ದು, ಸಂತೋಷದಿಂದಲ್ಲ. ರಾಮನಿಗೆ ಹೀಗೆಂದನು. ನೀನೇನು ಅಂತಹುದ್ದನ್ನು ಮಾಡಿದ್ದು. ಚಿಲ್ಲರೆ ರಾಕ್ಷಸರನ್ನು ಕೊಂದೆ ನೀನು. ಹಾಗಾದರೆ ಅವನಲ್ಲಿ ಚಿಲ್ಲರೆ ರಾಕ್ಷಸರಿದ್ದಂತಾಯಿತು. ಅವನೇ ಆರಿಸಿದ ಸೇನೆಯಲ್ಲವೇ ಅದು…!? ಆದರೆ ಸತ್ಯವನ್ನು ಒಪ್ಪಲು ಅಹಂ ಬಿಡುವುದಿಲ್ಲ. ನೀನು ಕೊಂದದ್ದು ದುರ್ಬಲ ರಾಕ್ಷಸರನ್ನು, ನಗಣ್ಯರನ್ನು ಕೊಂದಿದ್ದು ನೀನು. ನೀನೇನು ಪ್ರಶಂಸನಲ್ಲ. ರಾಮನ ಮಾತುಗಳಲ್ಲಿ ನಾನೇ ದೊಡ್ಡವನು ಎಂಬುವ ಶಬ್ಧವೇ ಇಲ್ಲ. ಆದರೆ ಖರ ರಾಮನಿಗೆ ಆತ್ಮಪ್ರಶಂಸೆ ಮಾಡಿಕೊಳ್ಳುತ್ತಿದ್ದೀಯೆ ಎಂದ. ನಿಜವಾಗಿ ಖರನ ವಾಕ್ಯದಲ್ಲೇ ಆತ್ಮಪ್ರಶಂಸೆಯಿದೆ. ವಿಕ್ರಮಿಗಳು, ಬಲಶಾಲಿಗಳು ಯಾರೂ ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವುದಿಲ್ಲ, ತಮ್ಮ ಸಾಮರ್ಥ್ಯದಿಂದ ಗರ್ವಿತರಾಗಿರುವುದಿಲ್ಲ. ಆದರೆ ದುರ್ಬಲರು, ನೀಚರಾದ ಕ್ಷತ್ರಿಯರು ಸುಮ್ಮನೆ ಅವರ ಬಗ್ಗೆ ಹೇಳಿಕೊಳ್ಳುತ್ತಾರೆ ನಿನ್ನ ಹಾಗೆ. ಒಳ್ಳೆ ಕುಲದವರು ಮೃತ್ಯು ಎದುರು ಬಂದಾಗ ಹಾಗೆ ಮಾಡುವುದಿಲ್ಲ ನೀನು ಲಘುಯೆಂಬುದನ್ನು ತೋರಿಸುತ್ತಿರುವೆ ಎಂದು ರಾಮನಿಗೆ ಹೇಳಿದ. ಹಿತ್ತಾಳೆಯನ್ನು ತೊಳೆದರೆ ಚಿನ್ನದಂತೆ ಕಂಡರೂ ಅದು ಹಿತ್ತಾಳೆಯೇ, ಚಿನ್ನ ಚಿನ್ನವೇ. ನೀನು ಬರಿಯ ಹಿತ್ತಾಳೆ. ಬೆಂಕಿ ಹಾಕಿದ ದರ್ಭೆ ಅದ್ಭುತವಾಗಿ ಉರಿದರೂ ಸ್ವಲ್ಪ ಹೊತ್ತು ಮಾತ್ರ. ಅದಕ್ಕೆ ಏನನ್ನೂ ಸುಡುವ ಶಕ್ತಿಯಿಲ್ಲ. ಹಾಗೇ ನೀನು.

ನೋಡು ನನ್ನನ್ನು, ಹೇಗೆ ನಿಂತಿದ್ದೇನೆಂದು. ಅಚಲವಾದ ಮಹಾಪರ್ವತದಂತೆ. ನಿನ್ನ ಸಂಹಾರಕ್ಕೆ ಈ ಗದೆಯೇ ಸಾಕು. ಇದಕ್ಕಿಂತ ಹೆಚ್ಚು ಬೇಡ. ನಿನ್ನನ್ನೇನು, ಮೂರುಲೋಕವನ್ನು ಸಂಹಾರಮಾಡಲು ಇದೇ ಗದೆ ಸಾಕು. ಹೇಳಲು ಬಹಳವಿದೆ. ಆದರೆ ಸೂರ್ಯಾಸ್ತವಾಗಿಬಿಟ್ಟರೆ ಯುದ್ಧಕ್ಕೆ ವಿಘ್ನವಾಗುತ್ತದೆ. ಸೂರ್ಯಾಸ್ತಕ್ಕೆ ಯುದ್ಧ ನಿಲ್ಲಿಸುವುದು ಧರ್ಮಯುದ್ಧದ ನಿಯಮ. ಮಹಾಭಾರತದಲ್ಲಿ ಇದನ್ನು ಕಾಣುತ್ತೇವೆ. ಸೂರ್ಯಾಸ್ತವಾಗಿಬಿಟ್ಟರೆ ಯುದ್ಧಕ್ಕೆ ವಿಘ್ನವಾದೀತು. ನಾನು ಯುದ್ಧವನ್ನು ಬಯಸಿದ್ದೇನೆ. ಹೆಚ್ಚು ಮಾತನಾಡುವುದಿಲ್ಲ. ಅಳಿದ 14,000 ರಾಕ್ಷಸರ ಆತ್ಮಕ್ಕೆ ಶಾಂತಿಯನ್ನು ಕೊಡಬೇಕು. ಅವರ ಕಣ್ಣೀರನ್ನು ಒರೆಸಬೇಕಾಗಿದೆ. ಅದಕ್ಕಿರುವ ದಾರಿಯೊಂದೇ, ನಿನ್ನ ಸಂಹಾರ. ನಿನ್ನ ಸಂಹಾರದ ಮೂಲಕ ಪ್ರತೀಕಾರ ತೆಗೆದುಕೊಳ್ಳುತ್ತೇನೆ ಎನ್ನುತ್ತಾ ಪರಮಕ್ರುದ್ಧನಾಗಿ ಗದೆಯನ್ನು ರಾಮನೆಡೆಗೆ ಬೀಸಿದ. ಖರನು ಜ್ವಲಿಸುವ ಸಿಡಿಲಿನಂತಿದ್ದ ಗದೆಯನ್ನು ರಾಮನ ಮೇಲೆ ಪ್ರಯೋಗಿಸಿದನು. ರಾಮನ ಕಡೆಗೆ ಬರುತ್ತಿದ್ದ ಆ ಗದೆ ಮಾರ್ಗಮಧ್ಯದಲ್ಲಿದ್ದ ಮರಗಳನ್ನು, ಪೊದೆಗಳನ್ನು ಸುಟ್ಟಿತು. ಅಷ್ಟು ದೊಡ್ಡ ಅಗ್ನಿಜ್ವಾಲೆ ಆ ಗದೆಯಿಂದ ಹೊರಹೊಮ್ಮುತ್ತಿತ್ತು. ಅದರಿಂದ ಕಾರ್ಯಸಿದ್ಧಿಯಾಗುತ್ತದೆ ಎಂಬುದು ಖರನ ಧೈರ್ಯ. ತನ್ನೆಡೆಗೆ ಬರುವ ಗದೆಯನ್ನು ರಾಮ ವೀಕ್ಷಿಸುತ್ತಾನೆ. ಅವನಲ್ಲಿ ಆ ಗದೆಗೆ ಉತ್ತರವಿದೆ. ಬಾಣಗಳನ್ನು ಪ್ರಯೋಗಿಸಿದ. ನೋಡಿದರೆ ಭಯವಾಗುವಂತಹ, ಹೊತ್ತಿ ಉರಿಯುವ, ತನ್ನೆಡೆಗೆ ಧಾವಿಸಿ ಬರುವಂತಹ ಗದೆಯನ್ನು ಅನೇಕ ಬಾಣಗಳ ಮೂಲಕ ಹಲವು ಚೂರನ್ನಾಗಿಸಿದ. ಅದು ಭೂಮಿಯಲ್ಲಿ ಬಿದ್ದಿತು. ಮಂತ್ರದಿಂದ, ಬಲಪ್ರಯೋಗದಿಂದ ಬಂಧನಕ್ಕೊಳಗಾಗಿ ಶಕ್ತಿಯನ್ನು ಕಳೆದುಕೊಂಡು ಬಿದ್ದ ಸರ್ಪಿಣಿಯಂತಿತ್ತು ಆ ಗದೆ. ಇನ್ನು ಆ ಗದೆಯ ಸಾಮರ್ಥ್ಯ ಇತಿಹಾಸವೇ. ಹೀಗೆ ಖರನ ಗದೆಯನ್ನು ಬಾಣಗಳಿಂದ ಖಂಡಿಸಿದ ಬಳಿಕ ಮಂದಸ್ಮಿತನಾಗಿ ಗಾಬರಿಗೊಂಡ ಖರನಿಗೆ ರಾಮ ಹೀಗೆಂದನು.

ಹೇ ರಾಕ್ಷಸಾಧಮ, ನಿನ್ನ ಬಲ ಸರ್ವಸ್ವವನ್ನು ಇದುವರೆಗೆ ತೋರಿದ್ದಾಯಿತು. ನಿನ್ನಲ್ಲಿ ಏನು ಬಲವಿದೆಯೋ, ಪರಾಕ್ರಮವಿದೆಯೋ, ಏನೆಲ್ಲಾ ಆಯುಧವಿದೆಯೋ ಎಲ್ಲವೂ ಮುಗಿಯಿತು. ಎಲ್ಲವನ್ನೂ ಕಳೆದುಕೊಂಡದ್ದಾಯಿತು. ನಿನ್ನವರನ್ನು, ನಿನ್ನ ಎಲ್ಲಾ ಉಪಕರಣಗಳನ್ನು ಕಳೆದುಕೊಂಡಾಯಿತು. ಇನ್ನು ಕೈ-ಕಾಲು ಮಾತ್ರ ಉಳಿದಿವೆ. ಆಗ ಮಾತನಾಡುತ್ತಿದ್ದವನು ಈಗ ಹೇಳು ಯಾರ ಬಲ ಹೆಚ್ಚೆಂದು. ಅದಕ್ಕೆ ನಿದರ್ಶನ ಬೇಕಾದರೆ ನಿನ್ನ ಗದೆಯನ್ನು ನೋಡು. ಅದಕ್ಕೆ ಜೀವವಿದ್ದರೆ ಕೇಳು ಯಾರ ಬಲ ಹೆಚ್ಚೆಂದು. ಭೂತಲವನ್ನು ಸೇರಿದ ನಿನ್ನ ಗದೆ ಮಾತಿನ ಶೂರನಾದ ನಿನ್ನ ವಿಶ್ವಾಸವನ್ನು ಮುಗಿಸಿತಲ್ಲವೇ, ನಿನ್ನ ಗರ್ವವನ್ನು ನಾಶಗೊಳಿಸಿತಲ್ಲವೇ. ಅಳಿದ 14,000 ರಾಕ್ಷಸರ ಕಣ್ಣೀರು ಒರೆಸಿ ಪ್ರತೀಕಾರ ಮಾಡುತ್ತೀಯ ಎಂಬ ಮಾತು ಸತ್ಯವಾಗಲಿಲ್ಲ. ನಿನ್ನ ಗದೆ ವಿಫಲವಾಯಿತು. ನೀಚ ನೀನು. ನಿನ್ನ ಶೀಲವು ಕ್ಷುದ್ರವಾದದ್ದು. ನಿನ್ನ ನಡತೆ ಮಿಥ್ಯೆ. ಇಂತಹ ನಿನ್ನ ಪ್ರಾಣಗಳನ್ನು ಈಗ ಅಪಹರಿಸುವೆ. ನನ್ನ ಬಾಣಗಳಿಂದ ನಿನ್ನ ಕಂಠವು ಖಿನ್ನವಾದಾಗ, ನೊರೆರಕ್ತವು ಹೊರಚಿಮ್ಮಿದಾಗ ಭೂಮಿಯ ಬಾಯರಿಕೆ ಇಂಗೀತು. ಪಂಚವಟಿಯ ನೆಲಕ್ಕೆ ಶಾಂತಿ ಲಭಿಸೀತು. ಮೈಯೆಲ್ಲ ಧೂಳಾಗಿ ಎರಡೂ ಕೈಗಳನ್ನು ಅತ್ತ ಇತ್ತ ಹರಡಿ ಯಾವ ಭೂಮಿಗೆ ಅನ್ಯಾಯವನ್ನೇ ಪರಂಪರೆಯಾಗಿ ಕೊಟ್ಟಿದ್ದೀಯೋ, ಅದೇ ಭೂಮಿಯನ್ನಪ್ಪಿ ಮಲಗುವೆ ನೀನು. ಹಾಗೆ ಚಿರನಿದ್ರೆಯಲ್ಲಿ ನೀನು ಮಲಗಿರಲು ದಂಡಕಾರಣ್ಯಕ್ಕೆ ದಿವ್ಯತೆ ಬರುತ್ತದೆ. ಈವರೆಗೆ ಇಲ್ಲಿ ಬಂದವರಿಗೆ ಈ ಜಾಗ ಮೃತ್ಯುಸ್ಥಾನವಾಗಿತ್ತು ಇನ್ನು ಮುಂದೆ ಈ ಅರಣ್ಯವು ಜೀವಕೋಟಿಗಳನ್ನು ಕೈಬೀಸಿ ಕರೆಯುತ್ತದೆ. ಇನ್ನು ಇದರ ಹೆಸರು ರಾಕ್ಷಸಹತಸ್ಥಾನೆವೆಂದು. ಮುಂದೆ ಮುನಿಗಳು ನಿಶ್ಚಿಂತೆಯಿಂದ ಇರುತ್ತಾರೆ. ಮತ್ತು ನಿನ್ನ, ನಿನ್ನವರ ಪತ್ನಿಯರು ರಾಮಭೀತಿಯಿಂದ ದಂಡಕೆಯನ್ನು ಬಿಟ್ಟು, ಕಣ್ಣೀರಿಡುತ್ತಾ ಪಲಾಯನ ಮಾಡುತ್ತಾರೆ. ಈವರೆಗೆ ಅವರು ಪ್ರಪಂಚಕ್ಕೆ ಭಯವನ್ನೇ ಕೊಟ್ಟಿದ್ದರು. ಅದೇ ಅವರಿಗೆ ಹಿಂತಿರುಗಿ ಬರುತ್ತದೆ. ಶೋಕವೇನೆಂದು ಗೊತ್ತಿರದವರಿಗೆ ಇಂದು ನೋವೆಂದರೇನೆಂದು ತಿಳಿಯುತ್ತದೆ. ನೀನು ಹೇಗೋ ಅವರೂ ಹಾಗೆಯೇ. ಹೆಣ್ಣು ಎಂಬುದು ಜಾತಿಯಲ್ಲಿ ಮಾತ್ರ. ಸ್ವಭಾವ ನಿನ್ನದೇ. ಅವರಿಗೆ ತಕ್ಕ ಗಂಡ ನೀನು. ನಿನಗೆ ತಕ್ಕ ಹೆಂಡತಿಯರು ಅವರು. ಕ್ರೂರನೇ, ನೀಚನೇ, ನಿತ್ಯಬ್ರಾಹ್ಮಣಕಂಟಕನೇ ನಿನ್ನ ನೆನಪು ಋಷಿಗಳಿಗೆ ಬಂದಾಗ ಅವರು ಆಹುತಿಯನ್ನು ಅಗ್ನಿಗೆ ಶಂಕೆಪಟ್ಟು, ನಡುಗುತ್ತಾ, ಎಲ್ಲಿ ಖರ ಬಂದನೋ ಎಂದು ನಡುಗುತ್ತಾ ಸಮರ್ಪಿಸುತ್ತಿದ್ದರು. ಅದಕ್ಕೆ ಕಾರಣ ನೀನು. ನಿನಗೆ ಕೊನೆ ಬಂತು ಎಂದು ರಾಮ ಹೇಳಿದಾಗ ಖರನಿಗೆ ಮತ್ತೂ ರೋಷವುಂಟಾಯಿತು. ಅದರಿಂದ ಸ್ವರ ಕೆಟ್ಟಿತು. ಎಷ್ಟು ಸೊಕ್ಕು ನಿನಗೆ ಎಂದು ರಾಮನನ್ನು ಮೂದಲಿಸಿದ. ಖರನಿಗೆ ಯಾರೂ ಹೀಗೆ ಹೇಳಿರಲಿಲ್ಲ. ಹಾಗಾಗಿ ಆ ಭಾವ ಬಂದಿದೆ ಅವನಿಗೆ.

ನಿಜವಾಗಿ ಭಯಪಡಬೇಕಾಗಿದ್ದರೂ ನಿರ್ಭಯನಾಗಿದ್ದೀಯೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀಯೆ. ಮೃತ್ಯುವು ನಿನ್ನನ್ನು ಕಾದಿರುವುದರಿಂದ ಖರನಿಗೆ ಹೀಗೆ ಹೇಳಬಾರದೆಂದು ತಿಳಿಯುತ್ತಿಲ್ಲ ನಿನಗೆ ಎಂದ. ಇಂತಹವರಿಗೆ ಸಾಯುವವರೆಗೂ ಗರ್ವವಿರುತ್ತದೆ. ಹೀಗೆಲ್ಲ ಹೇಳಿ ಹುಬ್ಬು ಗಂಟಿಕ್ಕಿ, ಅತ್ತ ಇತ್ತ ನೋಡಿದನು. ಆಯುಧಗಳಿರಲಿಲ್ಲ. ಸ್ವಲ್ಪ ದೂರದಲ್ಲಿ ಸಾಲವೃಕ್ಷವನ್ನು ಕಂಡ. ಅವನಿಗೆ ಇನ್ನು ಅದೇ ಆಯುಧವೆಂದೆನಿಸಿ, ಅದರ ಬುಡದಲ್ಲಿ ಮಂಡಿಯೂರಿ, ಮರವನ್ನು ಕಿತ್ತೆತ್ತುವ ಪ್ರಯತ್ನಮಾಡಿದ. ರಾಮನು ಧರ್ಮಯುದ್ಧವನ್ನು ಮಾಡಬೇಕೆಂದು, ಸುಮ್ಮನೆ ನೋಡುತ್ತಾ ನಿಂತಿದ್ದ. ತುಟಿಕಚ್ಚಿ, ಬಹಳ ಪ್ರಯತ್ನಪಟ್ಟು ಕಿತ್ತ ಆ ವೃಕ್ಷ ದೊಡ್ಡದಾಗಿತ್ತು. ಘರ್ಜನೆಮಾಡುತ್ತ ಆ ವೃಕ್ಷವನ್ನು ರಾಮನೆಡೆಗೆ ಎಸೆದ. ಈಗ ನೀನು ಹತನಾದೆ ಎಂದು ಕೂಗಿದ. ತನ್ನೆಡೆಗೆ ಬರುವ ಆ ಸಾಲವೃಕ್ಷವನ್ನು ತನ್ನ ಅನೇಕ ಬಾಣಗಳಿಂದ ಚೂರುಚೂರಾಗಿಸಿದ. ಇನ್ನು ಮಾತನಾಡಲು ಏನೂ ಇಲ್ಲ ರಾಮನಲ್ಲಿ. ಇನ್ನು ಇವನನ್ನು ಸಂಹಾರಮಾಡಬೇಕೆಂದು ನಿಶ್ಚಯಿಸಿದ. ರೋಷವನ್ನು ತಂದುಕೊಂಡ. ಕ್ರೋಧ ಅವನಿಗೆ ಸಹಜವಲ್ಲ. ರಾಮನು ಸಹಜವಾಗಿ ತಂಪು. ನೀರು ಸಹಜವಾಗಿ ತಂಪು. ನೀರಿನ ಸಹವಾಸದಲ್ಲಿ ಬಿಸಿಯಾಗುತ್ತದೆ. ಸ್ವಲ್ಪಹೊತ್ತಿನಲ್ಲಿ ಮತ್ತೆ ತಂಪಾಗುತ್ತದೆ. ಏಕೆಂದರೆ ಅದರ ಸಹಜ ಗುಣ ತಂಪು. ರಾಮನದ್ದೂ ಸಹ ಸಹಜ ಗುಣ ತಂಪು. ಅವನ ಕ್ರೋಧ ಅವನ ನಿಯಂತ್ರಣದಲ್ಲಿತ್ತು. ಹಾಗಾಗಿ ಖರ ಸಂಹಾರಕ್ಕೆ ಬೇಕಾದ ಕ್ರೋಧವನ್ನು ತಂದುಕೊಂಡ. ಕಣ್ಣು ಕೆಂಪಾಯಿತು. ಮೈ ಬೆವರಿತು. ಸಾವಿರ ಬಾಣಗಳಿಂದ ಖರನನ್ನು ಬೇಧಿಸಿದ ರಾಮ. ಕೆಲವನ್ನು ತಪ್ಪಿಸಿಕೊಂಡ ಖರ. ಕೆಲವನ್ನು ತಳ್ಳಿದ. ಕೆಲವು ಅವನನ್ನು ತಾಗಿದವು. ಮೈಯೆಲ್ಲ ರಕ್ತವಾಯಿತು. ಮಹಾಪರ್ವತದಿಂದ ನೀರು ಸುರಿದಂತಿತ್ತು ರಕ್ತಧಾರೆ. ಆ ರಕ್ತದ ಪರಿಮಳದಿಂದ ಖರನಿಗೆ ಅಮಲೇರಿತು. ಏಕೆಂದರೆ ಅವನಿಗೆ ರಕ್ತವು ನಿತ್ಯಪೇಯ. ಆ ಅಮಲಿನಲ್ಲಿ ಪರಿವೆಯೇ ಇಲ್ಲದೆ ರಾಮನೆಡೆಗೆ ಧಾವಿಸಿದ. ಬಾಣಪ್ರಯೋಗ ಮಾಡಲಾಗದಷ್ಟು ಹತ್ತಿರ ಬಂದ.

ಆಗ ರಾಮನು ಬಾಣಪ್ರಯೋಗಕ್ಕೆ ಬೇಕಾದಷ್ಟು ದೂರ ಪಕ್ಕಕ್ಕೆ ಸರಿದು, ಅಗ್ನಿಯನ್ನು ಹೋಲುವ ಘೋರವಾದ ಶರವೊಂದನ್ನು ತನ್ನ ಧನುಸ್ಸಿನಲ್ಲಿ ಹೂಡಿದ. ಅದು ಇನ್ನೊಂದು ಬ್ರಹ್ಮದಂಡದಂತೆಯಿತ್ತು. ವಿಷ್ಣುವಿನ ಚಕ್ರ, ಶಿವನ ಶೂಲದಂತೆ, ಬ್ರಹ್ಮದಂಡವು ತುಂಬಾ ಪರಿಣಾಮವಿರುವಂತಹದ್ದು. ವಿಶ್ವಾಮಿತ್ರರ ಜೊತೆಗಿನ ಯುದ್ಧದಲ್ಲಿ ವಸಿಷ್ಟರ ಬ್ರಹ್ಮದಂಡದೆದುರು ಬ್ರಹ್ಮಾಸ್ತ್ರವೇ ವಿಫಲವಾಯಿತು. ಅಂತಹ ಬಾಣವನ್ನು ರಾಮ ಕೈಗೆತ್ತಿಕೊಂಡ. ಅದು ದೇವರಾಜ ಇಂದ್ರ ರಾಕ್ಷಸರ ಸಂಹಾರಕ್ಕಾಗಿ ಕೊಟ್ಟದ್ದು. ಆ ಬಾಣವನ್ನು ಧನುಸ್ಸಿನಲ್ಲಿ ಹೂಡಿ, ಆಕರ್ಣಾಂತವಾಗಿ ಸೆಳೆದು ಖರನ ಮೇಲೆ ಪ್ರಯೋಗಿಸಿದ. ಆ ಬಾಣವು ಖರನ ಎದೆಯನ್ನು ಅಗ್ನಿಜ್ವಾಲೆಯಾಗಿ ಸೇರಿತು. ಅದು ಖರನನ್ನು ದಹಿಸಿತು. ಎರಡು ಚಂಡಮಾರುತಗಳು ಒಂದಕ್ಕೊಂದು ಅಪ್ಪಳಿಸುವಾಗ ಬರುವ ಶಬ್ಧವನ್ನು ಹೋಲುವ ಶಬ್ಧವನ್ನುಂಟುಮಾಡುವ ಬಾಣವು ಖರನ ಎದೆಯೊಳಗೆ ಬಿದ್ದಾಗ, ಕಾವೇರಿ ತೀರದ ಶ್ವೇತಾರಣ್ಯದಲ್ಲಿ ಮಾರ್ಕಂಡೇಯನ ರಕ್ಷಣೆಗಾಗಿ ಶಿವನು ಬಂದು, ಅವನನ್ನು ತಡೆದ ಯಮ ಶಿವನ ನೇತ್ರಾಗ್ನಿಯಿಂದ ದಹನಗೊಂಡು ನೆಲಕ್ಕೆ ಬಿದ್ದಂತೆ ಖರನು ಸತ್ತು ನೆಲಕ್ಕುರುಳಿದ. ಆಗ ಆಕಾಶದಲ್ಲಿ ವಿಮಾನಗಳನ್ನೇರಿ ಯುದ್ಧ ನೋಡುತ್ತಿದ್ದ ದೇವತೆಗಳು, ಗಂಧರ್ವರು, ಮಹರ್ಷಿಗಳು, ಯಕ್ಷರು, ಕಿನ್ನರು ಎಲ್ಲರೂ ರಾಮನನ್ನು ಗೌರವಿಸುತ್ತಾರೆ. ಅವನನ್ನು ಪೂಜಿಸುತ್ತಾರೆ. ಸ್ವರ್ಗ ಸೇರಿದ ರಾಜರ್ಷಿಗಳು ಕೂಡ ಅವನನ್ನು ಗೌರವಿಸಿ ಅವನಿಗೆ ಹೇಳಿದರು. ಶರಭಂಗನ ಬಳಿ ಇಂದ್ರ ಬಂದಿದ್ದು ಇದೇ ಕಾರಣಕ್ಕಾಗಿ. ಸುತೀಕ್ಷ್ಣಾಶ್ರಮದ ಮೂಲಕ ಅಗಸ್ತ್ಯಾಶ್ರಮಕ್ಕೆ ನಿನ್ನನ್ನು ಕಳುಹಿಸಿ, ಇಲ್ಲಿಗೆ ಕರೆದುಕೊಂಡು ಬರುವ ಸಲುವಾಗಿ. ಇದು ರಾಕ್ಷಸರ ಕೇಂದ್ರ. ನಿನ್ನನ್ನು ಇಲ್ಲಿ ಕರೆತರುವ ಸಲುವಾಗಿ ಇಂದ್ರ ಶರಭಂಗನ ಬಳಿ ಬಂದಿದ್ದ. ಮಹರ್ಷಿಗಳು ಉಪಾಯವಾಗಿ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು ರಾಕ್ಷಸಸಂಹಾರದ ಉದ್ದೇಶದಿಂದ. ಪಾಪಕರ್ಮಿಗಳ ವಧೆಯಾಯಿತು. ನಮ್ಮ ಕಾರ್ಯವಾಯಿತು. ಇನ್ನು ದಂಡಕಾರಣ್ಯದಲ್ಲಿ ಋಷಿಗಳು ನಿಶ್ಚಿಂತೆಯಿಂದ ತಪಸ್ಸು ಮಾಡಬಹುದು ಎನ್ನುತ್ತಾ ರಾಮನನ್ನು ಗೌರವಿಸಿದರು. ದೇವತೆಗಳು, ಚಾರಣರು ದೇವದುಂದುಭಿಗಳನ್ನು ನುಡಿಸಿದರು. ಪುಷ್ಪವರ್ಷವನ್ನು ಮಾಡಿದರು. ಆತ್ಮಜ್ಞಾನವುಳ್ಳ ರಾಮನಿಂದ 72 ನಿಮಿಷದಲ್ಲಿ 14,000 ರಾಕ್ಷಸರು ಹತರಾದರು. ಅಬ್ಬಾ ವೀರತನವೇ! ವಿಷ್ಣುವಿನಂತೆ ತೋರುತ್ತಿದೆ ಎಂದು ದೇವತೆಗಳು ಉದ್ಗರಿಸಿದರು. ಮತ್ತೆ ಎಲ್ಲರೂ ಮಾಯವಾದರು.

ಆಗ ಸೀತೆಯನ್ನು ಕರೆದುಕೊಂಡು ಗುಹೆಯಿಂದ ಹೊರಬಂದ ಲಕ್ಷ್ಮಣ. ಆಗ ಸೀತೆಯ ಮುಖದಲ್ಲಿ ಆನಂದದ ಛಾಯೆ. ಹತ್ತಿರದಲ್ಲಿ ಇದ್ದ ಋಷಿಗಳೆಲ್ಲಾ ಬಂದು ರಾಮನನ್ನು ಪೂಜಿಸುತ್ತಿದ್ದರು. ಲಕ್ಷ್ಮಣನೂ ರಾಮನನ್ನು ಬಹುವಾಗಿ ಗೌರವಿಸಿದ. ಸೀತೆ ರಾಮನನ್ನು ನೋಡಿದಳು. ಶತ್ರುದಮನ, ಮಹರ್ಷಿಗಳಿಗೆ ಸುಖವಿತ್ತವನು. ಅಂತಹ ರಾಮನನ್ನು ಕಂಡ ಸೀತೆಯು ಆನಂದಿತಳಾಗಿ ಅವನನ್ನು ಆಲಿಂಗಿಸಿದಳು. ರಾಕ್ಷಸರನ್ನು ನೋಡಿ ಗಾಬರಿಗೊಂಡಿದ್ದ ಅವಳಿಗೆ ಈಗ ಅಚಲನಾದ ರಾಮನನ್ನು ನೋಡಿದ ಸಂತೋಷಕ್ಕೆ ಪಾರವೇ ಇಲ್ಲ. ಅವನನ್ನು ಮತ್ತೊಮ್ಮೆ ಆಲಿಂಗಿಸಿ ನೆಮ್ಮದಿಯನ್ನು ಕಂಡಳು.

ಅಕಂಪನ ಎಂಬ ರಾವಣನ ಸೋದರ ಮಾವ ಇಲ್ಲೇ ಇದ್ದಂಥವನು. ಅವನು ಅಲ್ಲಿಂದ ಲಂಕೆಗೆ ಪಲಾಯನ ಮಾಡಿದ. ಅಲ್ಲಿ ರಾವಣನನ್ನು ಕುರಿತು ಇಂತೆಂದನು. ರಾಕ್ಷಸ ಚಕ್ರವರ್ತಿಯೇ, ಜನಸ್ಥಾನದಲ್ಲಿರುವಂತಹ ರಾಕ್ಷಸರೆಲ್ಲರೂ ಹತರಾಗಿಹೋದರು. ಖರ, ದೂಷಣ, ತ್ರಿಶಿರ ಮತ್ತೆಲ್ಲರೂ ಹತರಾದರು. ಹೇಗೋ ನಾನು ಬದುಕಿ, ಸುದ್ದಿಕೊಡುವ ಸಲುವಾಗಿ ಇಲ್ಲಿಗೆ ಬಂದೆ ಎಂದಾಗ ದಶಗ್ರೀವನ ಕಣ್ಣುಗಳು ಕೆಂಪಾದವು. ಸುಡುವ ಕೆಂಗಣ್ಣುಗಳಿಂದ ಅಕಂಪನನನ್ನು ನೋಡುತ್ತಾ ಯಾವನವನು ನನ್ನ ರಮಣೀಯವಾದ ಜನಸ್ಥಾನವನ್ನು ಪತನಗೊಳಿಸಿದವನು. ಅವನಿಗಿನ್ನು 14 ಲೋಕಗಳಲ್ಲೆಲ್ಲಿಯೂ ಆಶ್ರಯವಿಲ್ಲ. ಯಾರೂ ಅವನನ್ನು ಬದುಕಿಸಲು ಸಾಧ್ಯವಿಲ್ಲ. ನನಗೆ ಅಪ್ರಿಯವಾಗಿರುವಂತಹದ್ದನ್ನು ಮಾಡಿ ಇಂದ್ರನೂ, ಕುಬೇರನೂ, ಯಮನೂ ಸುಖವಾಗಿರಲು ಸಾಧ್ಯವಿಲ್ಲ. ಈ ಜಗತ್ತಿನ ಸ್ಥಿತಿಕರ್ತ ಮಹಾವಿಷ್ಣು ಕೂಡ ನನ್ನನ್ನು ಬೇಸರಗೊಳಿಸಿ ಸುಖವಾಗಿರಲು ಸಾಧ್ಯವಿಲ್ಲ. ನಾನು ಯಮನಿಗೆ ಯಮ, ಅಗ್ನಿಯನ್ನು ಸುಟ್ಟೇನು. ಅಗ್ನಿ, ಸೂರ್ಯರನ್ನು ಇಲ್ಲದಂತೆ ಮಾಡಿಯೇನು. ಚಂಡಮಾರುತದ ವೇಗವನ್ನು ಕಡಿಮೆಗೊಳಿಸಿಯೇನು ಎಂದಾಗ ಅಕಂಪನನು ನಡುಗಿದನು.

ರಾವಣನೆಂತವನೆಂಬುದು ಅವನಿಗೆ ಗೊತ್ತಿತ್ತು. ಒಮ್ಮೆ ಕುಬೇರ, ಇವನಣ್ಣನೇ ದೂತನ ಮೂಲಕವಾಗಿ ಬುದ್ಧಿ ಹೇಳಿ ಕಳುಹಿಸಿರುತ್ತಾನೆ. ನೀನು ಕೆಟ್ಟಕೆಲಸದ ಮೂಲಕ ಇಡೀ ಪ್ರಪಂಚದ ವೈರಕಟ್ಟಿಕೊಳ್ಳುತ್ತಿದ್ದೀಯೆ, ಮುಂದೆ ನಿನಗೆ ಕೆಟ್ಟದಾದೀತು, ಈಗಾಗಲೇ ನಿನ್ನ ಸಂಹಾರಕ್ಕೆ ದೇವತೆಗಳು ಯೋಜನೆಮಾಡುತ್ತಿದ್ದಾರೆ ಎಂದಾಗ ಆ ದೂತನನ್ನು ಸಭಾಮಧ್ಯದಲ್ಲಿಯೇ ಕೊಂದುತಿಂದನಂತೆ ರಾವಣ. ಹಾಗಾಗಿ ಯಾರಾದರೂ ಅವನನ್ನು ಕಂಡು ಹೆದರುವುದು ಸಹಜವೇ. ಅಕಂಪನ ಬದುಕಿದ್ದಾನೆ, ಸುದ್ದಿ ಕೊಟ್ಟಿಲ್ಲ ಎಂದರೆ ಹೋಗಿ ಕೊಂದಾನು ಅವನನ್ನು. ಸುದ್ದಿಕೊಟ್ಟರೆ ಏನಾಗುವುದೋ ಎಂಬ ಭಯ. ಹಾಗಾಗಿ ನಡುಗಿದನು ಅಕಂಪನ. ಕೈಮುಗಿದು, ಸಿಟ್ಟಾಗಿದ್ದ ರಾವಣನಲ್ಲಿ ಅಭಯವನ್ನು ಯಾಚಿಸಿದನು. ಆಗ ಅವನ ಮಾತು ತೊದಲಿತು. ರಾವಣನ ಸೋದರ ಮಾವನವನು. ಆದರೆ ರಾವಣನಿಗೆ ಅದೇನೂ ಅಲ್ಲ. ರಾವಣನಿಗೆ ಪೂರ್ತಿ ವಿಷಯಬೇಕು. ಅಕಂಪನನಿಗೆ ಏನಾದರೂ ಆದರೆ ವಿಷಯ ತಿಳಿಯುವುದಿಲ್ಲ. ಹಾಗಾಗಿ ಅವನಿಗೆ ಅಭಯವನ್ನು ಕೊಟ್ಟನಂತೆ. ಆಗ ವಿಶ್ವಾಸಗೊಂಡು, ಇರುವ ವಿಷಯವನ್ನು ಹೇಳಿದನು.

” ದಶರಥನ ಪುತ್ರ, ತರುಣ, ಸಿಂಹವಿಕ್ರಮಿ, ರಾಮ. ನಂದಿಯನ್ನು ಹೋಲುವ ಭುಜಗಳು. ಅವು ವೃತ್ತ ಮತ್ತು ಆಯತ. ವೀರನವನು. ಶೋಭಾಶಾಲಿಯವನು. ಅವನ ಬಲವನ್ನು ಇಷ್ಟೆಂದು ಎಣಿಸಲಸಾಧ್ಯ. ಇನ್ನೊಬ್ಬರಿಗೆ ಹೋಲಿಸುವುದೂ ಅಸಾಧ್ಯವೇ. ಎಲ್ಲರನ್ನೂ ಮೀರಿದ ಬಲ, ವಿಕ್ರಮವುಳ್ಳವನು. ಅವನಿಂದ ಜನಸ್ಥಾನವು ಹತವಾಗಿ ಹೋಯಿತು. ಖರ-ದೂಷಣರೂ ಕೂಡ ಅವನಿಂದಲೇ ಹತರಾದರು. ಅದನ್ನು ಕೇಳಿ ರಾಕ್ಷಸಾಧಿಪತಿಯು ಸರ್ಪರಾಜನಂತೆ ಬುಸುಗುಟ್ಟಿದನು. ರಾಮನು ಎಲ್ಲಾ ದೇವತೆಗಳೊಂದಿಗೆ, ಇಂದ್ರನೊಂದಿಗೆ ಬಂದು ಈ ಕೆಲಸ ಮಾಡಿದನಾ ಎಂದು ಕೇಳಿದಾಗ ಅಕಂಪನನು ರಾಮನಿಗೆ ಅದೇನೂ ಬೇಕಾಗುವುದಿಲ್ಲ. ಅವನ ಬಲ ಅಂತಹದ್ದು. ಮಹಾತೇಜಸ್ವಿ ಅವನು. ಧನುರ್ಧಾರಿಗಳಲ್ಲಿ ಸರ್ವಶ್ರೇಷ್ಠನವನು. ಅವನಲ್ಲಿ ಅನೇಕ ದಿವ್ಯಾಸ್ತ್ರಗಳಿದ್ದಾವೆ. ಯುದ್ಧದಲ್ಲಿ ಅವನು ಇಂದ್ರನಿಗೆ ಕಡಿಮೆಯಲ್ಲ. ಅವನ ತಮ್ಮನೂ ಅಂಥವನೇ. ಇವನ ಹಾಗೇ ಬಲಶಾಲಿ.ಕೊನೆಗೆಂಪು ಕಣ್ಣವನು, ದುಂದುಭಿಯ ಧ್ವನಿಯವನು. ಕಾಂತಿಯುತವಾದ ಮುಖ ಅವನದು. ಇಬ್ಬರೂ ಸೇರಿದರೆ ಗಾಳಿ, ಬೆಂಕಿಯಂತೆ. ಆ ರಾಜಶ್ರೇಷ್ಠನಿಂದ ಜನಸ್ಥಾನವು ಹತವಾಯಿತು. ಯಾವ ದೇವತೆಗಳೂ ಅಲ್ಲ. ಯಾವ ಗಂಧರ್ವರೂ ಅಲ್ಲ. ಅವರಿಂದಾಗುವುದಲ್ಲ ಇದು. ಖರನು ಅವರಿಗೂ ಬಿಟ್ಟುಕೊಡುವವನಲ್ಲ. ರಾಮನು ಬಿಟ್ಟ ಬಾಣಗಳು 5 ಹೆಡೆಯ ಸರ್ಪಗಳಂತೆ ರಾಕ್ಷಸರನ್ನು ನುಂಗುತ್ತಿದ್ದವು ಎಂದನು. 14,000 ರಾಕ್ಷಸರನ್ನು ರಾಮನೊಬ್ಬನೇ ಕೊಂದನೆಂಬುದನ್ನು ರಾವಣನಿಗೆ ನಂಬಲಾಗುತ್ತಿಲ್ಲ. ಹಾಗಾಗಿ ಅಕಂಪನ ರೂಪಕ ಮಾಡಿ ಹೇಳುತ್ತಾನೆ. ರಾಕ್ಷಸರು ಭಯದಿಂದ ಯಾವಯಾವ ದಿಕ್ಕಿನಲ್ಲಿ ಓಡುತ್ತಿದ್ದರೂ ರಾಮನನ್ನೇ ಕಾಣುತ್ತಿದ್ದರು. ಹೀಗೆ ರಾಮನಿಂದ ಜನಸ್ಥಾನವು ವಿನಾಶಿತವಾಯಿತು” ಎಂದಾಗ ರಾವಣನು ನಾನು ಈಗಲೇ ರಾಮಲಕ್ಷ್ಮಣರ ಸಂಹಾರದ ಸಲುವಾಗಿ ಅಲ್ಲಿಗೆ ಹೊರಟೆ ಎಂದಾಗ ಅಕಂಪನನು ಬೇಡ ಎಂದ.

ಹೊರಡುವ ಮೊದಲು ರಾಮನ ಪೌರುಷವನ್ನು ಕೇಳು. ಕೋಪಬಂದರೆ ಅವನನ್ನು ಒಂದೇ ಪದದಿಂದ ವರ್ಣಿಸಬಹುದು, ಅಸಾಧ್ಯ ಎಂದು. ತನ್ನ ವಿಕ್ರಮದಿಂದಲೇ ಅವನು ಮಹಾನದಿಯ ಪ್ರವಾಹವನ್ನು ಬಾಣಗಳಿಂದ ತಡೆದು ನಿಲ್ಲಿಸಿಯಾನು. ಅವನು ತ್ರಿವಿಕ್ರಮನಂತೆ. ತ್ರಿವಿಕ್ರಮನ ಅವತಾರದ ನೆನಪನ್ನು ತರುತ್ತಾನೆ ಅಕಂಪನ. ತಾರೆ, ಗ್ರಹ, ನಕ್ಷತ್ರದಿಂದ ಕೂಡಿದ ಅಂತರಿಕ್ಷವನ್ನು ತಲೆಕೆಳಗು ಮಾಡಿಯಾನು. ಮುಳುಗುವ ಭೂಮಿಯನ್ನು ಮೇಲೆತ್ತಿಯಾನು. ಅದು ವರಾಹ ಅವತಾರದ ನೆನಪು. ಸಮುದ್ರದ ದಂಡೆಯನ್ನು ಬಾಣಗಳಿಂದ ಭೇದಿಸಿ ಲೋಕಗಳನ್ನು ಮುಳುಗಿಸಿಯಾನು. ಚಂಡಮಾರುತವನ್ನು ಕೂಡಾ ಸ್ತಬ್ಧಗೊಳಿಸಿಯಾನು. ಸಮಸ್ತಲೋಕಗಳನ್ನೂ ಸಂಹರಿಸಿಯಾನು, ಮತ್ತೆ ಸೃಷ್ಟಿಸಿಯಾನು. ಅವನನ್ನು ನೋಡಿದರೆ ವಿಶ್ವಸಂಹಾರವನ್ನು, ವಿಶ್ವಸೃಷ್ಟಿಯನ್ನು ತಾನೇ ಮಾಡಿಯಾನು ಎಂದು ನನಗನ್ನಿಸುತ್ತದೆ. ನಿನ್ನಿಂದ ರಾಮನನ್ನು ಗೆಲ್ಲಲಾಗದು. ನೀನಲ್ಲ, ಪ್ರಪಂಚದ ಎಲ್ಲಾ ರಾಕ್ಷಸರೂ ಒಗ್ಗೂಡಿ ಹೋದರೂ ಅದು ಸಾಧ್ಯವಾಗದು ಎಂದು ರಾಕ್ಷಸನೇ ಹೇಳುತ್ತಾನೆ. ದೇವಾಸುರರು ಸೇರಿ ಹೋದರೂ ಕೂಡ ಅವನನ್ನು ಎದುರಿಸಲು ಸಾಧ್ಯವಿಲ್ಲ. ಬೇರೆ ಉಪಾಯ ನನ್ನಲ್ಲಿದೆ. ಅದನ್ನು ನಾನು ನಿನಗೆ ಹೇಳುತ್ತೇನೆ. ಅವನ ಪತ್ನಿಯಿದ್ದಾಳೆ. ಈ ಲೋಕದ ನಾರಿಯರಲ್ಲಿ ಅವಳಿಗಿಂತ ಶ್ರೇಷ್ಠರಾರೂ ಇಲ್ಲ. ಯೌವ್ವನ ಮಧ್ಯಸ್ಥಳಾದ ಅವಳು ಸೀತೆ. ಅವಳು ನಾರೀರತ್ನ. ರತ್ನದ ಅಲಂಕಾರವನ್ನು ತೊಟ್ಟುಕೊಂಡಿದ್ದಾಳೆ. ವನವಾಸದಲ್ಲಿ ಸೀತೆ ಸರ್ವಾಲಂಕಾರಭೂಷಿತೆಯಾಗಿಯೇ ಇದ್ದಳು. ಕಾಷಾಯವಸ್ತ್ರ ಧರಿಸಿರಲಿಲ್ಲ ಎಂಬುದು ನಮಗೆ ನೆನಪಿರಬೇಕು. ಅವಳಿಂದ ಆ ರತ್ನಗಳಿಗೆ ಶೋಭೆಯೆಂದು ಅಕಂಪನ ಹೇಳಿದ. ಯಾವ ದೇವಿಯೂ, ಗಂಧರ್ವಿಯೂ, ಅಪ್ಸರೆಯೂ, ದಾನವಿಯೂ ಸೀತೆಗೆ ಸಮಳಲ್ಲ. ನೀನು ಅವನ ಪತ್ನಿಯನ್ನು ಅಪಹರಣ ಮಾಡು. ಅವಳು ನಿನ್ನನ್ನು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ನೀನು ವಂಚನೆಯಿಂದಲೇ, ಬಲಾತ್ಕಾರದಿಂದಲೇ ಮಾಡಬೇಕು. ಸೀತೆಯ ಮೇಲೆ ರಾಮನಿಗೆ ಎಷ್ಟು ಪ್ರೀತೆಯಿದೆಯೆಂದರೆ, ಅವಳ ವಿರಹದಲ್ಲಿ ಕೊರಗಿ ಕೊರಗಿ ಪ್ರಾಣತ್ಯಾಗ ಮಾಡಿಯಾನು ಎಂಬ ಕಪಟೋಪಾಯವನ್ನು ಅಕಂಪನನು ರಾವಣನಿಗೆ ಹೇಳಿಕೊಟ್ಟ.

ರಾವಣ ಸತ್ತರೆ ಸಾಯಲಿ ಎಂದಿತ್ತು ಅವನಿಗೆ. ರಾಮನ ದೈವತ್ವದ ಸೂಚನೆಯಿದೆ ಅವನಿಗೆ. ಹಾಗಾಗಿ ಮುಂದಾಗುವ ಘಟನೆಗಳಿಗೆ ಪೀಠಿಕೆ ಬರೆದನು. ಮುಂದೆ ಮಾರೀಚ ರಾವಣನಿಗೆ ಯಾರು ಈ ಉಪಾಯಕೊಟ್ಟರೋ ಅವರು ನಿನ್ನ ಹಿತೈಷಿಯಲ್ಲ ಎನ್ನುತ್ತಾನೆ. ಹಾಗಾಗಿ ಅಕಂಪನ ಈ ಕೆಲಸವನ್ನು ಬೇಕೆಂದು ಮಾಡಿರಬಹುದು ಎಂಬ ಸಂದೇಹವುಂಟಾಗುತ್ತದೆ. ಕೂಡಲೇ ರಾವಣನಿಗೆ ಈ ಮಾತು ಇಷ್ಟವಾಯಿತು. ಅವನ ವ್ಯಕ್ತಿತ್ವ ಏನಿರಬಹುದು. ದೊರೆಯಾದವನು ಅವರವರ ಸ್ವತ್ತನ್ನು ಅವರವರಿಗೆ ಉಳಿಸಿಕೊಡಬೇಕು. ಇವನು ಮಾಡುತ್ತಿರುವ ಕೆಲಸ ಎಂತಹುದು. ಪರಸತಿಯನ್ನಪಹರಿಸುವುದು ಧರ್ಮವಲ್ಲ. ಪಾಪವದು. ಇವನ ವೀರತ್ವವೆಲ್ಲಿಹೋಯಿತು. ವೀರರಾದವರಿಗೆ, ರಾವಣನಂಥವರಿಗೆ ದಾರಿ ಯಾವುದು. ರಾವಣನು ಇಲ್ಲಿಯೇ ಸೋತ. ರಾಮಶಬ್ಧ ಮೊದಲ ಬಾರಿ ಕಿವಿಗೆ ಬಿದ್ದಾಗಲೇ ಸೋತನವನು. ಅಲ್ಲದಿದ್ದರೆ ಸೀತೆಯನ್ನು ಕದ್ದೊಯ್ಯುವ ಉಪಾಯವೇಕೆ..? ಯುದ್ಧವಿಲ್ಲದೇ, ಅವಳ ವಿರಹದಲ್ಲಿ ರಾಮನಿಗೆ ತೊಂದರೆಯಾಗಲಿ ಎಂಬ ಭಾವವೇಕೆ…? ರಾವಣನೆಂಬ ವೀರ ಅಲ್ಲೇ ಸತ್ತ. ಎದ್ದು ಹೊರಟನವನು. ನಂತರ ಒಮ್ಮೆ ಆಲೋಚಿಸಿದ. ಏನು ಮಾಡಬೇಕೆಂಬುದನ್ನು.

ರಾವಣ ಅಕಂಪನನಿಗೆ ಹೇಳಿದ. ಸೇನೆಯೇನೂ ಬೇಡ. ಒಬ್ಬನೇ ಹೊರಟೆ. ಒಂದು ರಥ, ಸಾರಥಿಯೊಡನೆ. ಸೀತೆಯನ್ನು ಲಂಕೆಗೆ ಅಪಹರಿಸಿ ತರುತ್ತೇನೆ, ಸಂತುಷ್ಟನಾಗಿ. ರಾಮನನ್ನು ಹೇಗಾದರೂ ಮಾಡಿ ಸಂಹಾರ ಮಾಡುವುದಕ್ಕೆ ಇದು ದಾರಿಯೆಂಬುದೊಂದೇ ಅಲ್ಲ. ಇಲ್ಲಿ ಬೇರೆ ಉದ್ದೇಶವಿದೆ. ಇದು ದುರ್ಬಲ ಮನಸ್ಸು, ಸ್ತ್ರೀವ್ಯಸನ ಹೊರತು ಬೇರೆಯಲ್ಲ. ಗಗನಸಂಚಾರಿಯಾದ ಸೂರ್ಯಪ್ರಭೆಯ ರಥವನ್ನೇರಿ ಆ ರಾಕ್ಷಸೇಂದ್ರನು, ದಿಕ್ಕುಗಳನ್ನು ಬೆಳಗುತ್ತಾ ಹೊರಟೇಬಿಟ್ಟನು. ಆ ರಥಗಳಿಗೆ ಪಿಶಾಚಮುಖದ ಕತ್ತೆಗಳನ್ನು ಕಟ್ಟಲಾಗಿತ್ತು. ಮೋಡಗಳು ಓಡುವಾಗ ಚಂದ್ರನು ಹೇಗೆ ಕಾಣುತ್ತಾನೋ ಹಾಗೆ ಕಂಡಿತು ರಥ. ಮೋಸವನ್ನು ಯಾರ ಮೂಲಕ ಮಾಡುವುದು ಎಂಬ ಚಿಂತನೆಯಲ್ಲಿದ್ದ .

ರಾವಣ ನೇರವಾಗಿ ಮಾರೀಚಾಶ್ರಮಕ್ಕೆ ಹೋದ. ಒಂದು ಕಾಲದಲ್ಲಿ ಮಾರೀಚ ಮತ್ತು ಆಶ್ರಮ ಪರಸ್ಪರ ವಿರುದ್ಧ. ಅವನು ಆಶ್ರಮಗಳನ್ನು ಧ್ವಂಸಮಾಡುವವನು, ಋಷಿಗಳ ರಕ್ತಪಾನವನ್ನು ಮಾಡುವವನು. ಆದರೆ 2 ಬಾರಿ ರಾಮನ ಕೈಯಲ್ಲಿ ಪೆಟ್ಟು ತಿಂದಮೇಲೆ ಅವನು ಆಶ್ರಮ ಕಟ್ಟಿಕೊಂಡಿದ್ದ. ರಾಮಬಾಣದ ಫಲವಾಗಿ ಅವನ ಮನಸ್ಸು ಪರಿವರ್ತನೆಯಾಗಿತ್ತು. ತಾಟಕಿಯ ಮಗನಾದ ಮಾರೀಚನನ್ನು ಬದುಕಲು ಬಿಟ್ಟಿದ್ದ ರಾಮ. ಅವನ ಆಶ್ರಮಕ್ಕೆ ರಾವಣ ಹೋದ. ರಾಕ್ಷಸರಾಜನಿಗೆ ಮಾರೀಚನು ಆತಿಥ್ಯವನ್ನು ಮಾಡಿದನು. ಭಕ್ಷ್ಯ-ಭೋಜ್ಯಗಳನ್ನು ಅವನಿಗೆ ನೀಡಿದನು. ಅದರಲ್ಲಿ ಮನುಷ್ಯಮಾಂಸವಿರಲಿಲ್ಲ. ಅದರಿಂದ ದೂರ ಉಳಿದಿದ್ದ ಮಾರೀಚ. ಇದಕ್ಕೆ ರಾಮನೇ ಕಾರಣ. ಅರ್ಥಪೂರ್ಣವಾದ ಮಾತಿನಿಂದ ರಾವಣನನ್ನು ಮಾರೀಚ ಪ್ರಶ್ನೆ ಮಾಡಿದ. ರಾಕ್ಷಸೇಂದ್ರ ಎಲ್ಲಾ ಕ್ಷೇಮ ತಾನೇ. ಅದು ಮಾಮೂಲಿ ಕುಶಲ ಪ್ರಶ್ನೆಯಲ್ಲ ಅದು. ಸಂದೇಹವಾಗುತ್ತಿದೆ ನನಗೆ, ಆದರದೇನೆಂದು ಗೊತ್ತಾಗುತ್ತಿಲ್ಲ. ಏನು ತೊರೆಯಲ್ಲಿ ಬಂದೆ ಎಂದಾಗ ರಾವಣನು ಹೀಗೆಂದನಂತೆ. ನನ್ನ ಸೀಮಾಂತ ಪಡೆಯು ರಾಮನಿಂದ ಹತವಾಗಿ ಹೋಗಿದೆ. ಕ್ಲಿಷ್ಟವು ಕ್ಲಿಷ್ಟವೇ ಅಲ್ಲ ರಾಮನಿಗೆ. ಅಲ್ಲದಿದ್ದರೆ 14,000 ರಾಕ್ಷಸರನ್ನು ಹೊಡೆದುರುಳಿಸಿದನವನು? ನನ್ನ ಅವಧ್ಯವಾದ ಜನಸ್ಥಾನವು ಅವನಿಂದ ಪತನಗೊಂಡಿತು. ಹಾಗಾಗಿ ನಾನೊಂದು ಘನಕಾರ್ಯ ಮಾಡಲು ಹೊರಟಿದ್ದೇನೆ. ಅದಕ್ಕೆ ಸಹಾಯ ಮಾಡು. ಅವನ ಪತ್ನಿಯನ್ನು ನಾನು ಅಪಹರಣ ಮಾಡಲು ಹೊರಟಿದ್ದೇನೆ ಎಂದ. ರಾಕ್ಷಸರು ಎಷ್ಟು ನೀಚಮಟ್ಟದಲ್ಲಿದ್ದರು ಎಂದರೆ ಇನ್ನೊಬ್ಬರ ಪತ್ನಿಯನ್ನಪಹರಿಸುವುದು ಅವರ ಸ್ವಾಭಾವಿಕ ಮಾತುಕಥೆ.

ಆಗ ಮಾರೀಚ ದೊಡ್ಡ ಸ್ವರದಲ್ಲಿ ಹೇಳಿದನು. ಯಾರವನು, ಸೀತೆಯ ಬಗ್ಗೆ ನಿನಗೆ ಹೇಳಿ, ಈ ಸಲಹೆ ಕೊಟ್ವವನು. ಅವನು ಮಿತ್ರರೂಪದ ಶತ್ರು. ಅವನಿಗೆ ನೀನು ಬದುಕಿರುವುದು ಇಷ್ಟವಿಲ್ಲ. ಅವನು ನಿನ್ನ ಶ್ರೇಯಸ್ಸನ್ನು ಬಯಸುವವನಲ್ಲ. ಇವನು ಯಾರೆಂದು ಹೇಳು. ಅವನು ರಾಕ್ಷಸಲೋಕದ ಶೃಂಗವನ್ನು ಕತ್ತರಿಸ ಹೊರಟಿದ್ದಾನೆ. ಮೆಲ್ಲನೆ ಮಹಾಸರ್ಪದ ಬಾಯಿಗೆ ಕೈಹಾಕಿ ಹಲ್ಲನ್ನು ಹಿಡಿಯುವ ಸಲಹೆಯನ್ನು ಕೊಟ್ಟಿದ್ದಾನೆ. ಅವನು ನಿನ್ನ ದಾರಿಯನ್ನು ತಪ್ಪಿಸುತ್ತಿದ್ದಾನೆ. ಮಾರೀಚ ಹೇಳಿದ್ದು ಸತ್ಯವಾದ ಮಾತು. ಮಲಗಿರುವ ನಿನ್ನ ಮೇಲೆ ಕಲ್ಲನ್ನು ಹಾಕುತ್ತಿದ್ದಾನೆ, ನಿನ್ನ ಕೊಲೆಗಡುಕ ಅವನು ಎಂದು ರಾವಣನಿಗೆ ಹೇಳಿದ. ಅದಕ್ಕೆ 3 ಉದಾಹರಣೆಗಳನ್ನು ಕೊಟ್ಟ. ರಾಘವನು ಗಂಧಹಸ್ತಿ. ಗಂಧಹಸ್ತಿಯೆಂದರೆ ಪರಿಮಳದ ಆನೆ. ಅದರ ಪರಿಮಳದಿಂದ ಬೇರೆ ಆನೆಗಳು ದೂರ ಓಡುತ್ತಾವೆ. ಕುಲವೇ ಅವನ ಸೊಂಡಿಲು. ಪ್ರತಾಪವೇ ಸುರಿಯುವ ಮದೋದಕ. ನೀಳವಾದ ತೋಳುಗಳು ದಂತಗಳು. ಅವನನ್ನು ನೀನು ಕಣ್ಣೆತ್ತಿ ನೋಡುವುದೂ ಸರಿಯಲ್ಲ. ಅವನನ್ನು ನೋಡಿದರೂ ಆಪತ್ತಿದೆ ನಿನಗೆ. ನೋಡಿದ ಮಾತ್ರಕ್ಕೆ ಸಾಯುವೆ ನೀನು. ಬೇಡ. ರಾಮನು ಮನುಷ್ಯನಂತೆ ಕಾಣುವ ಮಹಾಸಿಂಹ. ಸಿಂಹವು ಬೇಟೆಗೆ ಹೊರಟಾಗ ಬಾಲವನ್ನು ನಡುಭಾಗಕ್ಕೆ ಹಾಕಿಕೊಳ್ಳುವಂತಹ ಸಿಂಹ. ರಾಮ ಯುದ್ಧಕ್ಕೆ ನಿಂತರೆ ಆ ಸಿಂಹದಂತೆ. ಅವನ ತಂಟೆಗೆ ಹೋಗಬೇಡ. ಅವನನ್ನು ಮುಟ್ಟಿ ಎಬ್ಬಿಸಬೇಡ. ಬಿಟ್ಟುಬಿಡು. ರಾಮನೆಂಬುದು ಮಹಾಸಾಗರ, ಮಹಾಸಾಗರದ ಪಾತಾಳಮುಖ. ಅಲ್ಲಿ ಬಿದ್ದರೆ ನೀನು ಮತ್ತೆ ಬರುವುದಿಲ್ಲ. ರಾಮನ ಬಿಲ್ಲೇ ಸಾಗರದ ಮೊಸಳೆ. ಭುಜಗಳೇ ಸಾಗರದ ಆಳಕ್ಕೆ ಮುಳುಗಿಸುವಂತಹ ಕೆಸರು. ಅವನ ಶರಗಳೇ ತರಂಗಗಳು. ಅದರಲ್ಲಿ ಬಿದ್ದು ಸಾಯಬೇಡ. ಹಿಂದಿರುಗು ಎಂದು ಗದರಿದ ಮಾರೀಚ ಕೊನೆಗೆ ಸಮಾಧಾನದಲ್ಲಿ ಹೇಳಿದ. ಲಂಕೇಶ್ವರನೇ ಪ್ರಸನ್ನನಾಗು. ತಿಳಿಯಾದ ಮನಸ್ಸುಳ್ಳವನಾಗಿ ಲಂಕೆಗೆ ಮರಳು. ನಿನಗೇನು ಪತ್ನಿಯರಿಗೆ ಕಡಿಮೆಯಿಲ್ಲ. 7,000 ಇದ್ದಾರೆ ಅವರು. ಮಂಡೋದರಿ ಇದ್ದಾಳೆ. ನಿನ್ನ ಪತ್ನಿಯರಲ್ಲಿ ರಮಿಸು ನೀನು. ರಾಮನು ತನ್ನ ಪತ್ನಿಯೊಂದಿಗೆ ವಿಹರಿಸಲಿ. ನಿನ್ನ ಪತ್ನಿಯರೊಂದಿಗೆ ಲಂಕೆಯಲ್ಲಿ ನೀನು ವಿಹರಿಸಿದರೆ ಧರ್ಮ ನಿನಗೆ. ರಾವಣನಿಗೆ ಇದು ಹೌದೆನ್ನಿಸಿತು. ಮಾರೀಚನ ಮಾತನ್ನು ಒಪ್ಪಿಕೊಂಡ ರಾವಣನು ಲಂಕೆಗೆ ಮರಳಿದನು. ಮುಂದೇನಾಯಿತು ಎಂದು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments