ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ವೈದೇಹಿಯ ಕೇಯೂರ ನನಗೆ ಗೊತ್ತಿಲ್ಲ, ಕರ್ಣಕುಂಡಲಗಳ ಪರಿಚಯ ನನಗಿಲ್ಲ. ಆಕೆಯ ನೂಪುರಗಳನ್ನು ಮಾತ್ರ ಬಲ್ಲೆ. ಅದೂ ನಿತ್ಯ ಪಾದಾಭಿವಂದನ ಮಾಡುವುದರಿಂದ ಗೊತ್ತು. ಲಕ್ಷ್ಮಣನ ಮಾತಿದು. ಹನ್ನೆರಡು ವರ್ಷಗಳ ಕಾಲ ಅಯೋಧ್ಯೆಯಲ್ಲಿ ಯಾವ ರಾಮನು ಸೀತೆಯೊಡನೆ ಇದ್ದನೋ ಅವರೊಡನೆ ಲಕ್ಷ್ಮಣನೂ ಇದ್ದಾನೆ. ವನವಾಸದಲ್ಲಿ ಮತ್ತೆ ಹನ್ನೆರಡು ವರ್ಷಗಳು. ಇಪ್ಪತ್ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದರೂ ಸೀತೆಯ ಆಭರಣಗಳ ಪರಿಚಯವಿಲ್ಲ ಅಂದ್ರೆ ಹೇಗಿರಬೇಕು ಅವನು?

ಸೀತೆಯೆಷ್ಟು ಸುಂದರಿಯೋ, ಲಕ್ಷ್ಮಣನು ಅಷ್ಟೇ ಸಂಯಮಿ. ಮುಂದೆ ಹನುಮಂತನೊಡನೆ ಮಾತನಾಡುವಾಗ ಸೀತೆ ಹೇಳ್ತಾಳೆ. ಲಕ್ಷ್ಮಣನ ವರ್ತನೆಯ ಬಗ್ಗೆ. ಲಕ್ಷ್ಮಣನಿಗೆ ರಾಮನಲ್ಲಿ ತಂದೆಯಂತೆ ನನ್ನಲ್ಲಿ ತಾಯಿಯಂತೆ ಭಾವ. ಇನ್ನು ಕೆಲವೇ ಸಮಯದ ಬಳಿಕ ಲಕ್ಷ್ಮಣನ ಪರಿಚಯವನ್ನು ಆಕೆ ಮಾಡಿಕೊಳ್ಳಬೇಕಾಗಿ ಬರ್ತದೆ. ಆಗ ಆಕೆ ಹೇಳುವುದು, ಧರ್ಮಚಾರಿ, ನಿಯಮಗಳನ್ನು ತಪ್ಪುವವನಲ್ಲ ಲಕ್ಷ್ಮಣ. ಈಗ ತಾನೇನು ಹೇಳಿದ್ದೇನೆ ಲಕ್ಷ್ಮಣನಿಗೆ ಎಂಬುದರ ನೆನಪೂ ಇಲ್ಲ ಆಕೆಗೆ. ಏನೇನು ಹೇಳಬಾರದೋ ಅದನ್ನೆಲ್ಲ ಹೇಳಿಬಿಟ್ಟಿದಾಳೆ ಸೀತೆ ಲಕ್ಷ್ಮಣನಿಗೆ.

ಭಗವತ್ಪುರುಷರಿಗೆ ಆಡಿದ ಕೆಟ್ಟ ಮಾತುಗಳು ಕೂಡಲೇ ಫಲ ಕೊಡುತ್ತದೆ.

ಲಕ್ಷ್ಮಣನನ್ನು ಶಂಕಿಸಿದ ಪರಿಣಾಮ ಮುಂದೊಂದು ದಿನ ಸೀತೆಯ ಚಾರಿತ್ರ್ಯವನ್ನು ಲೋಕವೇ ಶಂಕಿಸ್ತದೆ. ಲಕ್ಷ್ಮಣನೂ ಸೀತೆಯನ್ನು ಕುರಿತು ಧಿಕ್ಕಾರ ನಿನಗೆ, ನಾಶವಾಗಿ ಹೋಗು ಈಗಲೇ ಎಂದು ಹೇಳಿದ್ದಾನೆ ಅದರ ಪರಿಣಾಮ ಮುಂದೊಂದು ದಿನ ಮೃತ್ಯುದಂಡವನ್ನು ರಾಮ ವಿಧಿಸುವ ಯೋಗ ಲಕ್ಷ್ಮಣನಿಗೆ. ಮಾತ್ರವಲ್ಲ, ನಿನ್ನನ್ನು ತ್ಯಜಿಸಿದೆ ಎನ್ನುವ ಯೋಗ ಲಕ್ಷ್ಮಣನಿಗೂ ಕೂಡ ಬರ್ತದೆ.

ಮಹಾಪುರುಷರಿಂದ ಪ್ರಮಾದ ನಡೆದಂತೆ ಕಂಡರೂ ಆಗುವುದು ಮಹತ್ಕಾರ್ಯವೇ.

ಲಕ್ಷ್ಮಣ ಹೊರಟ. ಸೀತೆ ಹಾಗೂ ಲಕ್ಷ್ಮಣರ ಮಧ್ಯೆ ಅಷ್ಟೆಲ್ಲ ಮಾತಾದರೂ ಲಕ್ಷ್ಮಣ ಶಿಷ್ಟಾಚಾರವನ್ನು ಬಿಡಲಿಲ್ಲ. ಹೊರಡುವಾಗ ಸೀತೆಗೆ ಅಭಿವಾದನ ಮಾಡ್ತಾನೆ. ಮುಂದೆ ಹೋಗುವಾಗ ಅವನ ದೃಷ್ಟಿ ಪೂರ್ತಿ ಹಿಂದೆ ಇತ್ತು. ಬಾರಿ ಬಾರಿ ಸೀತೆಯೆಡೆಗೆ ನೋಡ್ತಾನೆ. ಬಳಿಕ ಹೊರಟು ನಡೆದ ರಾಮನಿರುವಲ್ಲಿಗೆ. ರಾಮನ ಆಜ್ಞೆಯನ್ನು ಮೀರಿ, ಸೀತೆಯನ್ನು ಬಿಟ್ಟು ಹೋಗಲು ಮನಸ್ಸಿಲ್ಲ ಅವನಿಗೆ ಆದರೂ ಹೋಗ್ತಾನೆ. ಸೀತೆಯ ಮಾತುಗಳಿಂದ ನೊಂದ ಲಕ್ಷ್ಮಣನಿಗೆ ಈಗ ರಾಮನ ತಂಪು ಬೇಕು. ಹಾಗಾಗಿ ಹೊರಟ ಲಕ್ಷ್ಮಣ.

ಈ ಅಂತರವನ್ನು ಬಳಸಿಕೊಂಡು ಅಲ್ಲೇ ಮರದ ಮರೆಯಲ್ಲಿ ನಿಂತಿದ್ದ ರಾವಣನು ಪರಿವ್ರಾಜಕ ರೂಪಧಾರಿಯಾಗಿ ರಾಮಾಶ್ರಮವನ್ನು ಸಮೀಪಿಸ್ತಾನೆ. ಕಾಷಾಯವಸ್ತ್ರ ಧರಿಸಿ, ಶಿಖೆ ಹಾಕಿ, ಛತ್ರಿ ಹಿಡಿದು, ಪಾದುಕೆಗಳನ್ನು ತೊಟ್ಟು ಎಡಕಂಕುಳಲ್ಲಿ ದಂಡಕಮಂಡಲುಗಳನ್ನು ಅವುಚಿ ಹಿಡಿದುಕೊಂಡು ವೈದೇಹಿಯನ್ನು ಸಮೀಪಿಸ್ತಾನೆ.

ನಿಜರೂಪದಲ್ಲಿ ಹೋಗಬಹುದಿತ್ತಲ್ಲ ಎಂದರೆ ರಾವಣನಿಗೆ ಒಳಗೆ ಭಯವಿದೆ. ಹಾಗಾಗಿ ಈ ರೂಪ. ಈ ರೂಪವೇ ಏಕೆಂದರೆ ಆಕೆ ಮನೆಯ ಒಳಗೆ ಬರಮಾಡಿಕೊಳ್ಳಬೇಕು. ಹಾಗಾಗಿ ಇಂತಹ ಮಂಗಲ ರೂಪ. ಮಂಗಲದಲ್ಲಿ ಮಂಗಲರೂಪ ತೊಟ್ಟು ಅಮಂಗಲದಲ್ಲಿ ಅಮಂಗಲ ಕೆಲಸ ಮಾಡಲು ಹೊರಟಿದ್ದಾನೆ. ಮಹಾತ್ಮರಿಗೂ ದುರಾತ್ಮರಿಗೂ ಇರುವ ಅಂತರವಿದು

ಅಂತರಂಗ ಬಹಿರಂಗಗಳೆರಡರಲ್ಲೂ ಒಂದೇ ಭಾವವಾದರೆ ಅವನು ಮಹಾತ್ಮ. ಅಂತರಂಗ ಬಹಿರಂಗಗಳ ಭಾವ ಬೇರೆಯಾದರೆ ಅವನು ದುರಾತ್ಮ.

ರಾಮ ಲಕ್ಷ್ಮಣರಿಂದ ವಿರಹಿತಳಾದ ವೈದೇಹಿಯನ್ನು ರಾವಣ ಸಮೀಪಿಸಿದನು. ರಾವಣನು ಆಕೆಯನ್ನು ಕಂಡನು.

ದೋಷವನ್ನು ನಿಶ್ಶೇಷ ಮಾಡುವಲ್ಲಿ, ಶುಭವನ್ನು ವರ್ಧಿಸುವಲ್ಲಿ ಗುರುವಿಗಿರುವ ಶಕ್ತಿ ಬೇರೆ ಯಾರಿಗೂ ಇಲ್ಲ.

ಈ ಪಾಪಿ ರಾವಣ ನೋಡಿದ್ದರಿಂದ ರಾಮಾಶ್ರಮಕ್ಕೆ ದೃಷ್ಟಿಯಾಯಿತು. ಆ ಉಗ್ರತೇಜಸ್ವಿಯನ್ನು ಕಂಡಾಗ ಜನಸ್ಥಾನದ ವೃಕ್ಷಗಳು, ಬಳ್ಳಿಗಳು, ಪೊದೆಗಳು ಬೆಚ್ಚಿ ಸ್ತಬ್ಧವಾದವು. ವಾಯುದೇವ ಬೆದರಿದ. ಗಾಳಿಯೇ ಬೀಸುತ್ತಿಲ್ಲ. ಇದಿರಲಿ, ರಾಮಾಶ್ರಮದ ಅನತಿ ದೂರದಲ್ಲಿ ವೇಗವಾಗಿ ಹರಿವ ಗೋದಾವರಿಯನ್ನು ಕೆಂಡದ ಕಣ್ಣಿನಿಂದ ರಾವಣ ನೋಡಿದಾಗ ತನ್ನ ಅಸ್ತಿತ್ವ ಆದೆಯೋ ಇಲ್ಲವೋ ಎಂಬಂತೆ ನಿಧಾನವಾಗಿ ಹರಿದಳು ಆಕೆ. ರಾವಣನೆಂದರೆ ನಿತ್ಯ ಅಮಂಗಲ ಸ್ವರೂಪ.ಆದರೆ ಕಾಣಿಸುತ್ತಿರುವುದು ಮಂಗಲ ರೂಪದಲ್ಲಿ. ಸೀತೆಯ ಸ್ಥಿತಿಯೇ ಬೇರೆ. ತನ್ನ ಪತಿಗಾಗಿ ಆಕೆ ಶೋಕಿಸ್ತಾ ಇದಾಳೆ. ರಾವಣನ ಮನಸ್ಸಿನಲ್ಲಿರತಕ್ಕಂತಹ ದುರ್ಭಾವವೇ ಬೇರೆ.

ಪರ್ಣಶಾಲೆಯಲ್ಲಿ ಸೀತೆ ಕುಳಿತಿದ್ದಾಳೆ. ರಾವಣನ ಬಾಯಲ್ಲಿ ವೇದಘೋಷ. ಮನಸ್ಸಿನಲ್ಲಿ ಸಂಪೂರ್ಣ ದುಷ್ಕಾಮ. ಕೈಯಲ್ಲಿ ಕಮಲವಿಲ್ಲ ಬಿಟ್ಟರೆ ಆಕೆ ಲಕ್ಷ್ಮಿಯೇ. ನಾರೀ ರತ್ನ ಸೀತೆ. ರಾವಣ ಪಾತಕಿ. ಸೀತೆಯನ್ನು ಸಮೀಪಿಸಿ ರಾವಣ ಹೇಳ್ತಾನೆ ಸ್ವರ್ಣವರ್ಣದವಳೇ, ಯಾರು ನೀನು? ಕಮಲಮಾಲಿನಿಯೇ, ಭೂಮಿದೇವಿಯಾ? ಲಕ್ಷ್ಮೀದೇವಿಯಾ? ಅಪ್ಸರೆಯಾ? ಯಾರು ನೀನು? ಸೊಗಸು ಮುಖದವಳೇ, ಸ್ವಚ್ಛಂದಗಾಮಿನಿಯಾದ ರತಿದೇವಿಯಾ? ಸಮವಾದ, ತುದಿ ಸ್ವಲ್ಪ ಮೊನಚಾದ, ಬಿಳಿಯಾದ ನಿನ್ನ ದಂತಪಂಕ್ತಿ, ವಿಶಾಲವಾದ ಕೆಂಪು ಕೊನೆಯ, ಮಧ್ಯ ಕಪ್ಪಾಗಿರುವ ನಿನ್ನ ಕಂಗಳು, ಎಂದು ಹೇಳಿ ಸೀತೆಯ ವರ್ಣನೆಯನ್ನು ಆರಂಭಿಸ್ತಾನೆ ರಾವಣ. ಅವನಾಡುವ ಮಾತುಗಳು ಕಾಷಾಯಧಾರಿಗಳಿಗಿರಲಿ, ಸಾಮಾನ್ಯರಿಗೂ ಉಚಿತವಲ್ಲ. ಸಭ್ಯತೆಯ ಎಲ್ಲೆ ಮೀರಿದ್ದದು. ಸೀತೆಗೆ ಇದ್ಯಾವುದೂ ಗೊತ್ತಾಗ್ತಾ ಇಲ್ಲ. ಇವನ ಹಲುಬುವಿಕೆಯನ್ನು ಕೇಳಿ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಆಕೆ ಇಲ್ಲ. ಆದರೆ ಇವನು ಮಾತ್ರ ತೊಟ್ಟ ಕಾಷಾಯಕ್ಕೆ ಯೋಗ್ಯನಲ್ಲ. ಆ ರೀತಿ ಸಭಾಯೋಗ್ಯವಲ್ಲದ ಹಾಗೆ ಅವನ ವರ್ಣನೆಗಳು ಹೋಗ್ತದೆ. ಹಾಗೆಲ್ಲ ಹೇಳಿ ಚಾರುಸ್ಮಿತೆಯೇ, ವಿಲಾಸಿನಿಯೇ ನನ್ನ ಮನಸ್ಸನ್ನ ಅಪಹಾರ ಮಾಡ್ತಾ ಇದೀಯೆ ನೀನು. ಇಂಥ ರೂಪದ ನಾರಿಯನ್ನು ನಾನು ಈ ಲೋಕದಲ್ಲಿ ನೋಡಿಲ್ಲ. ಶ್ರೇಷ್ಠವಾಗಿರತಕ್ಕಂತಹ ನಿನ್ನ ರೂಪ, ಆ ಸುಕುಮಾರ ಶರೀರ, ನಿನ್ನ ವಯಸ್ಸು, ಈ ಕಾಡಿನಲ್ಲಿ ನೀನು ಏಕಾಂಗಿಯಾಗಿರುವಂಥದ್ದು ಇವು ನನ್ನ ಚಿತ್ತಕ್ಕೆ ಹುಚ್ಚು ಹಿಡಿಸುತ್ತಿವೆ. ಸೀತೆಯ ಮನಸ್ಸು ತನ್ನ ಪತಿಯನ್ನ ಅರಸಿಕೊಂಡು ಹೋಗಿದೆ ಹಾಗಾಗಿ ಇವನ ಯಾವ ಮಾತುಗಳೂ ಆಕೆಗೆ ತಿಳಿತಾ ಇಲ್ಲ. “ಇಂಥಹ ಅದ್ಭುತ ರೂಪವತಿ ನೀನು, ನಿನಗೆ ಮಂಗಳವಾಗಲಿ. ಹೊರಡು ನೀನು. ಈ ಆಶ್ರಮದಲ್ಲಿರುವುದು ನಿನಗೆ ಉಚಿತವಲ್ಲ, ಹೊರಡು. ಇದು ರಾಕ್ಷಸರ ವಾಸ ಭೂಮಿ. ಇಲ್ಲಿ ನೀನಿರುವುದು ತರವಲ್ಲ. ರಮ್ಯವಾದ ಉದ್ಯಾನಗಳು, ಸಂಪನ್ನವಾದ ಅರಮನೆಯಲ್ಲಿರಲು ನೀನು ಯೋಗ್ಯಳು. ಉತ್ತಮೋತ್ತಮವಾದ ವಸ್ತ್ರಗಳನ್ನು ನೀನು ಧಾರಣೆ ಮಾಡಬೇಕು ಮತ್ತು ಶ್ರೇಷ್ಠನಾದ ಪತಿಯನ್ನು ಹೊಂದಬೇಕಾದವಳು. ಅದಿರಲಿ, ಯಾರು ನೀನು? ದೇವತೆಯಂತೆ ತೋರುತ್ತೀಯೆ ನನಗೆ, ಇಲ್ಲಿ ಯಾವ ದೇವತೆಗಳೂ, ಕಿನ್ನರರೂ, ಗಂಧರ್ವರೂ ಬರೋದಿಲ್ಲ ಯಾಕೆಂದರೆ ಇದು ರಾಕ್ಷಸರ ವಾಸಭೂಮಿ. ಭಯಪಡ್ತಾರೆ ಇಲ್ಲಿ ಬರೋದಕ್ಕೆ. ಈ ಕಾಡಿನಲ್ಲಿ ಕ್ರೂರ ಮೃಗಗಳೆಲ್ಲ ವಾಸ ಮಾಡ್ತವೆ. ನಿನಗೆ ಭಯವಾಗೋದಿಲ್ವ? ಯಾರು ನೀನು? ಯಾರವಳು ನೀನು? ಎಲ್ಲಿಂದ ಬಂದಿರುವೆ? ಯಾವ ಕಾರಣಕ್ಕೆ ದಂಡಕಾರಣ್ಯಕ್ಕೆ ಬಂದೆ?” ಹೀಗೆಲ್ಲಾ ದುರಾತ್ಮಕ ಪ್ರಶಂಸೆ ಮಾಡ್ತಾನೆ ರಾವಣ.

ಸೀತೆಗೆ ಗೊತ್ತಾಗಿದ್ದು ನೀನು ಯಾರು ಅಂತ ಕೇಳ್ತಾ ಇದಾನೆ ಅಷ್ಟೆ. ಆಕೆ ಮೊಟ್ಟಮೊದಲು ಅತಿಥಿಸತ್ಕಾರವನ್ನು ಮಾಡ್ತಾಳೆ. ಯಾವ ಯಾವ ಬಗೆಯ ಅತಿಥಿ ಸತ್ಕಾರವನ್ನು ಮಾಡಬೇಕು ಅದನ್ನೆಲ್ಲ ಮಾಡ್ತಾ ಇದಾಳೆ. ಆದರೆ ಅವನು ಅದ್ಯಾವುದಕ್ಕೂ ಯೋಗ್ಯನಲ್ಲ. ಬಂದು ಹೇಳಿದಳು, ಆತಿಥ್ಯ ಸಿದ್ಧವಾಗಿದೆ, ಸ್ವೀಕರಿಸಿ. ಬಂದವನು ಯಾರೆಂದು ಸಹ ನೋಡದೆ ಆತಿಥ್ಯವನ್ನು ಸಿದ್ಧಗೊಳಿಸ್ತಾಳೆ. ನೋಡುವುದಕ್ಕೆ ಮಾತ್ರ ಸೌಮ್ಯರೂಪ ಆತನದ್ದು. ಆಕೆ ರಾವಣನನ್ನು ನೋಡ್ತಾಳೆ. ಅವಳಿಗೂ ಪೂರ್ತಿ ಸಮಾಧಾನವಿಲ್ಲ. ಆದರೆ ಆ ಬ್ರಾಹ್ಮಣ ವೇಷಕ್ಕೆ ಗೌರವ ಕೊಡಬೇಕು. ಅವನನ್ನು ನೋಡಿ ಬೇರೆ ದಾರಿಯಿಲ್ಲದೇ, ಉಪೇಕ್ಷೆ ಮಾಡಲು ಸಾಧ್ಯವಾಗದೇ ಬ್ರಾಹ್ಮಣರಿಗೆ, ಸಂನ್ಯಾಸಿಗಳಿಗೆ ಹೇಗೆ ಉಚಿತವೋ ಹಾಗೆ ಆತಿಥ್ಯಕ್ಕೆ ನಿಮಂತ್ರಿಸಿದಳು. ನಿಶ್ಚಿಂತೆಯಿಂದ ಸಂಕೋಚವಿಲ್ಲದೇ ಈ ಕಂದ ಮೂಲ ಫಲಗಳನ್ನು ಸ್ವೀಕರಿಸು ಎಂದು ಅತಿಥಿಯೋಗ್ಯ ಮಾತುಗಳೆಲ್ಲವನ್ನೂ ಆ ರಾಮ ಪತ್ನಿಯು ಆಡುತ್ತಿದ್ದಾಳೆ. ಇವೆಲ್ಲವುಗಳನ್ನೂ ತಂದಿಟ್ಟ ಆಕೆಯನ್ನು ನೋಡಿದ ರಾವಣ ಬಲಪೂರ್ವಕವಾಗಿ ತನ್ನ ಮನಸ್ಸನ್ನು ಆಕೆಯ ಅಪಹರಣಕ್ಕಾಗಿ ಗಟ್ಟಿ ಮಾಡಿದ. ಯಾಕೆ ನಿಶ್ಚಯ ಮಾಡಿದ ಎಂದರೆ ತನ್ನ ವಧೆಗಾಗಿ, ನಾಶಕ್ಕಾಗಿ.

ಆಕೆಯೋ, ಒಂದು ಕ್ಷಣ ಇಲ್ಲಿ ನೋಡಿದರೆ, ಹತ್ತು ಕ್ಷಣ ತನ್ನ ಪತಿಯ ಹಾಗೂ ಲಕ್ಷ್ಮಣನ ಪ್ರತೀಕ್ಷೆಯಲ್ಲಿ ಕಾಡಿನ ಕಡೆ ನೋಡ್ತಿದಾಳೆ. ಎಷ್ಟು ನೋಡಿದರೂ ರಾಮ ಲಕ್ಷ್ಮಣರ ಸುಳಿವಿಲ್ಲ.

ರಾವಣ ಕೇಳಿದ ಪ್ರಶ್ನೆಗಳಿಗೆ ಕೂಡಲೇ ಉತ್ತರಿಸಲಿಲ್ಲ ಆಕೆ. ಅವನ ಸಂನ್ಯಾಸಿಯ ವೇಷಕ್ಕಾಗಿ ಮಾತ್ರವೇ ಗೌರವ ಕೊಟ್ಟು ಸ್ವಲ್ಪ ಹೊತ್ತಿನ ಬಳಿಕ ಮರುತ್ತರ ಕೊಟ್ಟಳು. ಅವನ ಮೇಲೆ ಅಷ್ಟೆಲ್ಲ ಒಳ್ಳೆಯ ಭಾವ ಬರುತ್ತಿಲ್ಲ ಆಕೆಗೆ. ಆದರೆ ಕೊಂಚ ಹೊತ್ತು ಆಲೋಚಿಸಿ ಭಯದಿಂದ ಹೇಳಲು ಆರಂಭಿಸ್ತಾಳೆ. ನಾನು ಜನಕನ ಮಗಳು. ಸೀತೆ. ಲೋಕಾಭಿರಾಮನ ಪ್ರಿಯ ಪತ್ನಿ, ಪಟ್ಟದ ಮಹಿಷಿ. ಹನ್ನೆರಡು ವರ್ಷಗಳ ಕಾಲ ರಾಮನೊಡನೆ ಸುಖವಾಗಿ ಅಯೋಧ್ಯೆಯಲ್ಲಿದ್ದೆ. ನಾನು ಬಯಸಿದ್ದೆಲ್ಲವೂ ಸಿಕ್ಕಿದೆ ನನಗೆ ಆ ಸಮಯದಲ್ಲಿ. ಬಳಿಕ ಹದಿಮೂರನೇ ವರ್ಷದಲ್ಲಿ ದೊರೆಗೆ ರಾಮನಿಗೆ ಪಟ್ಟಾಭಿಷೇಕ ಮಾಡುವ ಮನಸ್ಸಾಯಿತು. ಸರ್ವರ ಸಂತೋಷದ ಮೇರೆಗೆ ಪಟ್ಟಾಭಿಷೇಕಕ್ಕೆ ಸಿದ್ಧತೆ ಮಾಡ್ತಾನೆ ದಶರಥ. ಸಿದ್ಧತೆ ನಡೆಯುವ ಹೊತ್ತಿನಲ್ಲಿ ಕೈಕೇಯಿ ಎಂಬ ದೊರೆಯ ಕಿರಿಯ ಮಡದಿ ದೊರೆಯನ್ನು ಧರ್ಮಪಾಶದಲ್ಲಿ ಬಂಧಿಸಿದ ಮೇಲೆ ಕೇಳಿದ ವರ ನನ್ನ ಪತಿಗೆ ವನವಾಸ, ತನ್ನ ಮಗನಿಗೆ ಪಟ್ಟಾಭಿಷೇಕ. ಇದು ಬೇಡ ಬೇರೆ ಏನನ್ನಾದರೂ ಕೊಡುವೆನೆಂದರೂ ಕೇಳಲಿಲ್ಲ ಆಕೆ. ಆಗ ನನ್ನ ಪತಿಗೆ ಇಪ್ಪತ್ತೈದು ವರ್ಷ ವಯಸ್ಸು, ನನಗೆ ಹದಿನೆಂಟು. ಆಗಲೇ ಪ್ರಪಂಚದಾದ್ಯಂತ ಪ್ರಸಿದ್ಧ ಆತ ಎಂದು ಹೇಳಿ ರಾಮನನ್ನು ವರ್ಣಿಸ್ತಾಳೆ. ದೊರೆ ಬೇರೆ ದಾರಿಯಿಲ್ಲದೇ ಕೈಕೇಯಿಯ ಇಷ್ಟವನ್ನ ನಡೆಸಿದ. ಕೈಕೇಯಿಯೇ ಹೇಳ್ತಾಳೆ ರಾಮನಿಗೆ. ನಿನ್ನ ತಂದೆ ವರ ಕೊಟ್ಟ ಪ್ರಕಾರ ಹೋಗು ಕಾಡಿಗೆ, ರಾಜ್ಯ ಭರತನಿಗೆ. ಇದನ್ನು ನೀನು ನಡೆಸದಿದ್ದರೆ ನಿನ್ನ ತಂದೆ ಕೊಟ್ಟ ಮಾತು ಸುಳ್ಳಾಗ್ತದೆ. ನನ್ನ ಪತಿ ಯಾವುದಕ್ಕೂ ಅಂಜುವನಲ್ಲ. ನಿಯಮಗಳನ್ನು ಬಿಡುವವನಲ್ಲ. ಹಾಗಾಗಿ ಆ ಮಾತನ್ನು ನಡಸಿಕೊಟ್ಟ. ಅವನ ಸೋದರನಾದ ವೀರ, ಸಮರದಲ್ಲಿ ಶತ್ರುಗಳನ್ನು ಸಂಹರಿಸಬಲ್ಲ, ಧರ್ಮಚಾರಿ ಅವನ ಸಹೋದರ ಲಕ್ಷ್ಮಣ ಅವನೂ ತಾಪಸ ರೂಪ ಧರಿಸಿ, ನನ್ನ ಹಾಗೂ ರಾಮನೊಡನೆ ಕಾಡಿಗೆ ಬಂದ ಎಂದು ಎಲ್ಲವನ್ನೂ ಹೇಳುತ್ತಾಳೆ. ನಂತರ ಗಂಭೀರವಾಗಿ ಎಲ್ಲವನ್ನೂ ಎದುರಿಸುವ ಸಾಮರ್ಥ್ಯವಿದೆ ನಮ್ಮಲ್ಲಿ ಎಂದು ಹೇಳಿ, ಬ್ರಾಹ್ಮಣನೇ ಸ್ವಲ್ಪ ಕಾಲ ವಿಶ್ರಮಿಸು, ನಾವು ಆತಿಥ್ಯಕ್ಕೆ ಹಿಂದಲ್ಲ. ಅದರಲ್ಲೂ, ಬ್ರಾಹ್ಮಣರು, ಯತಿಗಳ ವಿಷಯದಲ್ಲಿ ನಾವು ಎಂದಿಗೂ ಹಿಂದಲ್ಲ ಎಂದು ಹೇಳಿ ನನ್ನ ಪತಿ ರಾಮ ಬರುತ್ತಾನೆ ಬರುವಾಗ ನೀನು ತೃಪ್ತಿಯಿಂದ ಸೇವಿಸಬಹುದಾದ ಹಣ್ಣು ಹಂಪಲುಗಳನ್ನು ತರುತ್ತಾನೆ ಸ್ವೀಕರಿಸಬಹುದು ಎಂದು ಹೇಳಿ, ಯಾರು ನೀನು? ನಿನ್ನ ಕುಲ, ಗೋತ್ರ ಯಾವುದು? ಇದ್ದದ್ದು ಇದ್ದಹಾಗೆ ಹೇಳು. ನನಗೆ ಹೇಳಿದೆಯಲ್ಲ, ನೀನಾದರೂ ಏಕೆ ದಂಡಕಾರಣ್ಯದಲ್ಲಿ ಒಬ್ಬನೇ ಓಡಾಡುವುದು? ಎಂದಾಗ ಇದ್ದದ್ದು ಇದ್ದ ಹಾಗೇ ಹೇಳಿದನಂತೆ ರಾವಣ.

ಯಾರಿಗೆ ಲೋಕ ಲೋಕಗಳು ಭಯಗೊಂಡು ನಡುಗುವವೋ, ದೇವಲೋಕ, ಅಸುರ ಲೋಕ, ಮಾನುಷ ಲೋಕಗಳ ಎಲ್ಲರೂ ಯಾರ ಹೆಸರು ಕೇಳಿದರೆ ಭಯಗೊಂಡು ನಡುಗುತಾರೋ ಆ ರಾವಣ ನಾನು. ರಾಕ್ಷಸ ಗಣಗಳ ಅಧಿಪತಿ. ಕಾಂಚನ ವರ್ಣದ, ಕೌಶೇಯವಾಸಿನಿಯಾದ ಪೀತಾಂಬರ ಧಾರಿಣಿಯಾದ ನಿನ್ನನ್ನು ಕಂಡು ನನಗೆ ನನ್ನ ಪತ್ನಿಯರು ಮರೆತರು. ಅವರಲ್ಲಿ ನನಗೆ ಇನ್ನಾವ ಪ್ರೀತಿಯೂ ಉಳಿದಿಲ್ಲ. ಹೇ ಅನಿಂದಿತೆಯೇ ನಿನ್ನನ್ನು ಕಂಡಮೇಲೆ ನನಗೆ ನನ್ನ ಪತ್ನಿಯರಾರೂ ಬೇಡ. ಅದಿರಲಿ, ಲೋಕಲೋಕಾಂತರಗಳಿಂದ ತಂದ ಸ್ತ್ರೀಯರಿಗೆಲ್ಲ ನೀನು ಅಗ್ರ ಮಹಿಷಿಯಾಗುವೆ. ಸಮುದ್ರ ಮಧ್ಯದಲ್ಲಿ, ಮಹಾಪರ್ವತದ ತುತ್ತತುದಿಯಲ್ಲಿ ಲಂಕೆ ಎಂಬ ಮಹಾನಗರಿ ನನ್ನದಿದೆ. ಅಲ್ಲಿ ನನ್ನೊಡನೆ ನೀನು ವನಗಳಲ್ಲಿ, ಉಪವನಗಳಲ್ಲಿ ವಿಹರಿಸುವಿಯಂತೆ. ಈ ವನವಾಸದ ನೆನಪೂ ಬಾರದಂತೆ, ನಿನ್ನ ಸೇವೆಗೆ ಸರ್ವಾಭರಣಭೂಷಿತರಾದ ಐದುಸಾವಿರ ದಾಸಿಯರನ್ನು ಕೊಡುತ್ತೇನೆ ನನ್ನ ಪತ್ನಿಯಾದರೆ ಎಂದು ಹೇಳಿದ. ಇಂತಹ ಅಸಂಬದ್ಧ ಪ್ರಲಾಪವನ್ನು ಕೇಳಿದಾಗ ರಾಮನ ಪ್ರಿಯ ಪತ್ನಿ ಸೀತೆ ಕೋಪದಿಂದ ಬೆಂಕಿಯಾಗಿ, ಅವನನ್ನು ಅನಾದರಿಸಿ, ತಿರಸ್ಕರಿಸಿ ಪ್ರತ್ಯುತ್ತರವನ್ನು ಹೀಗೆ ಕೊಟ್ಟಳು: ನನ್ನ ರಾಮ ಮಹಾಪರ್ವತದಂತೆ ಅಚಲ, ದೇವರಾಜನಂತವನು, ಮಹಾಗಿರಿಯಂತೆ, ಅವನನ್ನು ಕ್ಷೋಭೆಗೊಳಿಸಲಾಗದು. ಅಂತಹವನನ್ನು ಅನುಸರಿಸಿ ಜೀವಿಸುವ ವ್ರತವುಳ್ಳವಳು ನಾನು. ಸರ್ವಲಕ್ಷಣ ಸಂಪನ್ನನಾದ ರಾಮ ಆಶ್ರಯ ಬಯಸಿ ಬಂದ ಸತ್ಪುರುಷರಿಗೆ, ಸಾಧುಗಳಿಗೆ ನೆರಳಾದ, ಸತ್ಯಸಂಧನಾದ ರಾಮನನ್ನು ಅನುಸರಿಸಿ ಬದುಕುವ ವ್ರತ ನನ್ನದು. ಮಹಾಬಾಹು, ಮಹಾವಕ್ಷಸ್ಥಲ, ಸಿಂಹದಂಥಾ ನಡಿಗೆಯವನು, ಪೂರ್ಣಚಂದ್ರನಂಥವನು, ರಾಜಕುಮಾರ, ದೊಡ್ಡ ಕೀರ್ತಿಯುಳ್ಳವನು, ಅಂತಹ ರಾಮನಿಗೆ ಅನುವ್ರತೆ ನಾನು.

ಯಾರು ನೀನು? ನರಿ. ನರಿಗೆ ಸಿಂಹಿಣಿಯನ್ನು ವರಿಸುವ ಬಯಕೆಯೆ? ಈಡೇರದ ಮಾತು. ನಿನ್ನಿಂದ ನನ್ನನ್ನು ಮುಟ್ಟಲೂ ಸಾಧ್ಯವಿಲ್ಲ, ನನ್ನನ್ನು ಹಾನಿಗೈಯಲು ಸಾಧ್ಯವಿಲ್ಲ. ಸೂರ್ಯಪ್ರಭೆಯಂತೆ ನಾನು. ಸೂರ್ಯಪ್ರಭೆಯನ್ನು ಯಾರಾದರೂ ಮುಟ್ಟಿ ಹಾಳುಗೈಯಲಾಗುವುದುಂಟ? ಬಹುಷಃ ನಿನಗೆ ಬಂಗಾರದ ಮರಗಳು ಕಾಣುತಿವೆಯಾ? ‘ಸಾಯುವಾಗ ಮನುಷ್ಯನಿಗೆ ಮರಗಳು ಬಂಗಾರವಾಗಿ ಕಾಣುತ್ತವೆ ಎಂಬುದು ಪುರಾಣ ಪ್ರಸಿದ್ಧ ಮಾತು.’ ಸಾಯ್ತೀಯೆ ನೀನೀಗ. ಮಂದಭಾಗ್ಯನೇ, ರಾಮನ ಪ್ರಿಯ ಪತ್ನಿಯನ್ನು ಬಯಸ್ತೀಯಾ ನೀನು? ಹಸಿದ ಸಿಂಹದ ಬಾಯಿಯಿಂದ ಹಲ್ಲನ್ನು ಮುರಿದು ತೆಗೆಯಲು ಹೊರಟಿದ್ದೀಯೆ ನೀನು. ಕಾಲಕೂಟದ ವಿಷವನ್ನು ಕುಡಿದೂ ಆರಾಮವಾಗಿ ಇರ್ತೀಯೆ ಎನ್ನುವ ನಿರ್ಧಾರವ ನಿನ್ನದು? ನಿನ್ನ ಕಣ್ಣಿಗೆ ನೀನೇ ಸೂಜಿಯನ್ನ ಚುಚ್ಚಿಕೊಳ್ತಾ ಇದ್ದೀಯೆ. ನಾಲಿಗೆಯಿಂದ ಹರಿತವಾದ ಕತ್ತಿಯನ್ನು ನೆಕ್ತಾ ಇದ್ದೀಯೆ ನೀನು. ರಾಮನ ಪ್ರಿಯ ಪತ್ನಿಯನ್ನು ಪಡೆಯಹೊರಟರೆ ಇದೇ ಕಥೆ ನಿನ್ನದು. ಕೊರಳಿಗೆ ಕಲ್ಲು ಕಟ್ಟಿಕೊಂಡು ಸಮುದ್ರ ದಾಟಲು ಹೊರಟಿದೀಯಾ? ಎರಡು ಕೈ ಚಾಚಿ ಸೂರ್ಯಚಂದ್ರರನ್ನು ತೆಗೆದುಕೊಂಡು ಬಿಡ್ತೀಯಾ? ರಾಮನ ಮಡದಿ ಸೀತೆ ಎಂದರೆ ಹಾಗೆಯೇ. ಎತ್ತರ ಅದು. ಸೂರ್ಯನನ್ನು ಬೊಗಸೆಯಲ್ಲಿ ತೆಗೆದುಕೊಳ್ಳಲು ಸಾಧ್ಯವ? ಪ್ರಜ್ವಲಿಸುವ ವಹ್ನಿಯನ್ನು ಸೆರಗಿನಲ್ಲಿ ಕಟ್ಟಿಕೊಂಡು ಹೋಗ್ತೀಯಾ? ನನ್ನನ್ನು ಅಪಹರಿಸಿದರೆ ಇದೇ ಆಗುವಂಥದ್ದು. ರಾಮನ ಪತ್ನಿ ಪರಮ ಮಂಗಲ ಚಾರಿತ್ರ್ಯಳನ್ನು ನೀನು ಅಪಹರಿಸ್ತೀಯೆ ಅಂತಾದರೆ ಅದು ಕಬ್ಬಿಣದ ಶೂಲಗಳ ಮೇಲೆ ಓಡಾಡಿದ ಹಾಗೆ ಆದೀತು ನಿನ್ನ ಕಥೆ.

ಏಕೆಂದರೆ ನನಗೆ ರಾಮ ತಕ್ಕವನು, ರಾಮನಿಗೆ ನಾನು ತಕ್ಕವಳು. ನಾವಿಬ್ಬರೂ ಒಬ್ಬರಿಗೊಬ್ಬರು ಅನುರೂಪರು. ನಮ್ಮನ್ನು ಬೇರ್ಪಡಿಸ ಹೊರಟರೆ ನೀನು ಶೂಲದ ಮೇಲೆ ಕೂರಬೇಕಾದೀತು.

ರಾಮನೇನು? ರಾವಣನೇನು ಎನ್ನುವುದನ್ನು ಕೆಲವು ಮಾತುಗಳಲ್ಲಿ ನಿರೂಪಿಸಿ ಬಿಡ್ತಾಳೆ ಸೀತೆ. ಕಾಡಿನಲ್ಲಿ ಸಿಂಹಕ್ಕೂ ನರಿಗೂ ಯಾವ ಅಂತರವಿದೆಯೋ, ಅದೇ ಅಂತರ ನಿನಗೂ ರಾಮನಿಗೂ ಇರುವಂಥದ್ದು. ಕೊಳೆ ಹಳ್ಳ ನೀನು, ರಾಮನು ಸಮುದ್ರ. ಎಲ್ಲಿಯ ಹೋಲಿಕೆ? ನಿನಗೂ ರಾಮನಿಗೂ. ಚಿನ್ನಕ್ಕೂ ಸೀಸಕ್ಕೂ ಹೋಲಿಕೆಯೇ? ರಾಮನು ಚಂದನವಾದರೆ, ನೀನು ಕೆಸರು. ಮದಗಜಕ್ಕೂ ಬೆಕ್ಕಿಗೂ ಹೋಲಿಕೆ ಇದೆಯೇ? ರಾಮನು ಮದಗಜವಾದರೆ, ಬೆಕ್ಕು ನೀನು. ರಾಮನು ಗರುಡನಾದರೆ, ಕಾಗೆ ನೀನು. ರಾಮನು ನವಿಲಾದರೆ, ನೀನು ನೀರುಕಾಗೆ. ರಾಮನು ಸಾರಸವಾದರೆ, ಹದ್ದು ನೀನು. ದೇವರಾಜನ ಸಮ ಪ್ರಭೆಯುಳ್ಳ ರಾಮನು ಧನುರ್ಬಾಣಪಾಣಿಯಾಗಿ ನಿಂತಿರಲು, ನೀನು ನನ್ನನ್ನು ಏನೂ ಮಾಡಲಾರೆ. ಒಂದು ವೇಳೆ ಅಪಹರಿಸಿದರೂ ಕೂಡ ನೀನು ನನ್ನನ್ನು ಜೀರ್ಣಿಸಿಕೊಳ್ಳಲಾರೆ. ನನ್ನನ್ನು ಅಪಹರಿಸುವ ಉದ್ದೇಶವೇನಿದೆಯೋ ಅದು ನಡೆಯದು. ನಾನು ನಿನಗೆ ಸಲ್ಲಲು ಸಾಧ್ಯವಿಲ್ಲ. ಸಲ್ಲಲಾರೆ. ಒಂದು ಉದಾಹರಣೆ ಕೊಡ್ತಾಳೆ ಸೀತೆ – ವಜ್ರದ ಮಣಿಯನ್ನು ನುಂಗಿದ ನೊಣವಾದೀಯೆ ನೀನು. ವಜ್ರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾ ನೊಣಕ್ಕೆ? ಬದಲಿಗೆ ವಜ್ರವೇ ನೊಣವನ್ನು ಜೀರ್ಣಿಸೀತು. ಅವಳ ಭಾವ ಒಂದಿಷ್ಟೂ ಕೆಡಲಿಲ್ಲ. ರಾವಣ ಅಷ್ಟೆಲ್ಲ ಹೇಳಿದರೂ ಕೂಡ ಅವಳ ಶುದ್ಧ ಭಾವ ಒಂದಿಷ್ಟೂ ವ್ಯತ್ಯಾಸವಾಗಲಿಲ್ಲ.

ರಾಮನಿಗೆ ಶೌರ್ಯದಿಂದ, ಪರಾಕ್ರಮದಿಂದ ಯುಕ್ತವಾಗಿರತಕ್ಕಂತ ಮಾತುಗಳನ್ನು ಸೀತೆ ರಾವಣನಿಗೆ ಅಡಿದಳು. ಆದರೆ ಆ ಹೊತ್ತಿಗೆ ಇದ್ದಕಿದ್ದಂತೆ ಅವಳ ಮೈ ನಡುಗಿತು. ಅವಳ ಇಚ್ಛೆಯನ್ನು, ಅಂಕೆಯನ್ನ ಮೀರಿ ಅವಳ ಮೈ ನಡುಗಿತು. ಅದನ್ನು ಮೃತ್ಯುಸಮವಾಗಿರುವಂತಹ ರಾವಣ ಗಮನಿಸ್ತಾನೆ. ಮತ್ತಷ್ಟು ಭಯಪಡಲಿ ಎನ್ನುವ ಸಲುವಾಗಿ ರಾವಣನು ತನ್ನ ಕುಲ, ಬಲ, ಹೆಸರು, ತಾನು ಮಾಡಿದ ಘನಕಾರ್ಯಗಳ ಕುರಿತು ಬಿತ್ತರಿಸಿದನು. ಏಕೆಂದರೆ ಸೀತೆಯನ್ನು ಭಯಪಡಿಸುವ ಸಲುವಾಗಿ. ಮುಂದಿನಾಯಿತು..? ಎನ್ನುವುದನ್ನು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments