ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
“ಒಂದು ಭವ್ಯ ಭವನದ ದೊಡ್ಡದೊಂದು ಕಲ್ಲು ಸಡಿಲಿದರೆ ಕೆಲವೊಮ್ಮೆ ಭವನಕ್ಕೆ ಭವನವೇ ಸಡಿಲವಾಗುವುದು. ಆದರೆ ಅಕ್ಕ-ಪಕ್ಕದ ಕಲ್ಲಂತೂ ಸಡಿಲಗೊಳ್ಳುವುದು ನಿಶ್ಚಿತ”. ಅದರಂತೆಯೇ ಕಿಷ್ಕಿಂಧೆಯಲ್ಲು ವಾಲಿಯ ಸಾವಿನಿಂದಾಗಿ ತಾರೆ, ಅಂಗದ ಮತ್ತು ಸುಗ್ರೀವನ ಸ್ಥಿತಿ. ಕಿಷ್ಕಿಂಧಾ ಸಾಮ್ರಾಜ್ಯದ ದೊಡ್ಡ ಆಧಾರ ಸ್ತಂಭವಾಗಿದ್ದ ವಾಲಿಯು ಗತಿಸಿ ಹೋದ. ತಾರೆಯ ಕಣ್ಣೀರ ಧಾರೆಯನು ನೋಡಿ; ಅವಳನು ಅವಲೋಕಿಸಿ; ಕ್ಷಣ ಮಾತ್ರದಲ್ಲಿ ಸುಗ್ರೀವನು ನಿರ್ವಿಣ್ಣನಾದ. ಆತನು ಬಲಶಾಲಿಯಾಗಿದ್ದರೂ ಮರುಗಿದ. ಅನಂತರ ತಾನು ನೋಯುತ್ತಾ, ತನ್ನ ಭೃತ್ಯರೊಡಗೂಡಿ ಮೆಲ್ಲ ಮೆಲ್ಲನೆ ರಾಮನ ಬಳಿ ತೆರಳಿದನು.

ಸುಗ್ರೀವನು ರಾಮನ ಬಳಿ ತೆರಳಿ- ಹೇ ಪ್ರಭು, ನೀನು ಮಾತಿಗೆ ನಡೆದುಕೊಂಡೆ; ಆದರೆ ನನಗೀಗ ಯಾವುದೂ ಬೇಡವಾಗಿದೆ, ಕಿಷ್ಕಿಂಧೆ ನನ್ನದಾಯಿತು ನಿಜ. ಆದರೆ ನನಗೆ ಬದುಕು ಬೇಡವಾಗಿದೆ. ಅದಕೆ ಕಾರಣ-
ನನ್ನಣ್ಣನಾದ ವಾಲಿಯ ಸಾವಿನಿಂದಾಗಿ ಆತನ ಪತ್ನಿಯಾದ ತಾರೆಯ ಕಣ್ಣೀರ ಧಾರೆಯನು ಸಹಿಸಲಾರೆ. ನಗರಕ್ಕೇ ನಗರವೇ ಶೋಕಿಸುತ್ತಿದೆ. ನಾನೇಕೆ ಅಣ್ಣನ ವಧೆಗೆ ಯೋಚಿಸಿದನೋ ಎಂದೆನಿಸುತ್ತಿದೆ. ಆವತ್ತು ಅಣ್ಣನ ಅಸಹನೆ, ಕ್ರೋಧವೇ ನೆನಪಾಯಿತು, ಅಂದು ತಿಳಿದೋ ತಿಳಿಯದೆಯೋ ಮಾಡಿದ ಪೀಡೆಗಳೇ ದೊಡ್ಡದಾಗಿ ಕಂಡವು. ಅದರಿಂದಾಗಿ ಅಣ್ಣನನ್ನು ಕೊಲ್ಲುವ ಕಾರ್ಯಕ್ಕೇ ಕೈ ಹಾಕಿದೆ. ಈಗ ಅಣ್ಣನು ಗತಿಸಿ ಹೋಗಿದುದರಿಂದ ನಾನು ದುಃಖಿಸುತ್ತಿರುವೆ. ಆದರೆ ಋಷ್ಯಮೂಕದ ಆ ಗುಹೆಯಲ್ಲಿ ಮಲಗುವುದು, ಕೆರೆ ನೀರನು ಕುಡಿದು; ಕಾಡಿನ ಹಣ್ಣು-ಹಂಪಲುಗಳನು ತಿಂದು ಬದುಕುವ ಆ ಬದುಕೇ ಸುಖವಾಗಿತ್ತು. ಇದಕ್ಕಿಂತ ಆ ಕಾಡು ಪಾಲಾದ ಬೆಟ್ಟದ ವಾಸವೇ ವಾಸಿ; ಅಣ್ಣನನು ಕೊಂದು ಈ ರಕ್ತ-ಸಿಕ್ತವಾದ ಸಿಂಹಾಸನ ಬೇಡ.

ಅಂದು ಆತ ನನ್ನನ್ನು ಕೊಲ್ಲದೇ ಬಿಟ್ಟ; ಅದು ಆತನಿಗೆ ಸರಿ. ಆದರೆ ಇಂದು ನಾನು ಆತನನ್ನು ಕೊಲ್ಲಿಸಿದೆ. ನನ್ನಂಥಾ ಪಾಪಿಗೆ ಅರ್ಹತೆಯಿಲ್ಲ, ಆತ ಪುಣ್ಯಾತ್ಮ, ಶ್ರೇಷ್ಠ. ನನಗೆ ಅಣ್ಣ ಸಾಯಬೇಕೆಂದು ಇರಲಿಲ್ಲ. ಆದರೆ ನನ್ನ ಬುದ್ಧಿಗೆ ಎಂತ ದುರಾತ್ಮ ಬಂದಿತೋ?? ನನ್ನ ಬುದ್ಧಿಗೆ ಏನಾಯಿತೋ? ಏಕೆ ಹೀಗಾಯಿತು?, ನನ್ನ ಮನಸದು ಅಣ್ಣನ ಪ್ರಾಣ ಹರಣ ಮಾಡುವಷ್ಟು ಬದಲಾಯಿತೇ? ನನ್ನಲ್ಲಿನ ಅಣ್ಣನ ಸಾವಿನ ಬಗೆಗಿರುವ ಕಪಿತ್ವ ಮತ್ತು ಆತನ ಸಾವಿನ ಅಪೇಕ್ಷೆಯನು ಮಾಡಬಾರದಿತ್ತು. ಯಾರೂ ಮಾಡಬಾರದ, ನೋಡಬಾರದ ಪಾಪವನ್ನು ನಾನು ಮಾಡಿದೆ. ನಾನು ಮಾಡಿದ ಈ ಪಾಪಕ್ಕೆ ಪರಿಹಾರವೆಲ್ಲಿ? ನಾನು ರಾಜ್ಯದ ಯಾವ ಪ್ರಜೆಗಳ ಗೌರವಕ್ಕೂ ಅರ್ಹನಲ್ಲ. ನನ್ನಿಂದಲಾಗಿ ಎಲ್ಲರೂ ಶೋಕಿಸುವಂತಾಯಿತು. ಆಗ ಅಂಗದನ ಸಂಕಟವನು ಕಂಡ ವಾನರ ನಾಯಕರ ಪ್ರಾಣ ಬಾಯಿಗೆ ಬರುವಂತಿತ್ತು. ಅಂಗದನೆಂದರೆ ಆತ ಸುವಷ್ಯ. ತಂದೆಯ ಮಾತನು ಪಾಲಿಸುವವ. ತಂದೆಯ ಸಾವಿನಿಂದಾಗಿ ಇಂತಹ ಮಗ ನಶಿಸಿ ಹೋಗುವುದಾದರೆ, ವಾನರ ಕುಲಕ್ಕೆ ನಾನೆಂಥ ನಷ್ಟವನು ಮಾಡಿದಂತಾಗುತ್ತದೆ, ಇನ್ನು ನನ್ನಣ್ಣ ಎಲ್ಲಿ ಸಿಕ್ಕಿಯಾನು? ಅದಿನ್ನು ದುರ್ಲಭ. ಅಂಗದನು ಬದುಕಿದರೆ ತಾಯಿ ತಾರೆಯು ಬದುಕಿಯಾಳು. ಆದ್ದರಿಂದ ನಾನು ಅಗ್ನಿಯನ್ನು ಪ್ರವೇಶ ಮಾಡುವೆ, ರಾಮ ನಿನ್ನ ಕಾರ್ಯಕ್ಕೆ ಭಂಗವಾಗದು, ಒಪ್ಪಿಕೊಂಡಿರುವ ಮಾತಿನಂತೆ ಸೀತಾನ್ವೇಷಣೆಯನು ವಾನರ ನಾಯಕರು ನಿನ್ನಾದೇಶದಂತೆ ನಡೆಯುವರು. ನಾನು ಬದುಕಲು ಅರ್ಹನಲ್ಲ, ಕುಲಘಾತುಕ, ಈ ಪಾಪಿಯನು ಕಳುಹಿಸಿ ಕೊಡು ಎಂದು ರಾಮನ ಮುಂದೆ ಸುಗ್ರೀವನು ಗೋಳಾಡಿದಾಗ; ರಾಮನ ಮನಸ್ಸು ಶೋಕಗೊಂಡಿತು, ಕಣ್ಣಿನಲೆ ನೀರು ತುಂಬಿತು ಮತ್ತು ರಾಮನು ಒಂದಷ್ಟು ಹೊತ್ತು ವಿಷಾದನಾದ.

ಆಗ ಎಲ್ಲರ ದೃಷ್ಟಿಯು ರಾಮನ ಮೇಲೆ ನೆಟ್ಟಿತ್ತು ; ಹೀಗಿರುವಾಗ ರಾಮನು ತಾರೆಯನ್ನು ತುಂಬ ಮರುಕದಿಂದ ನೋಡಿದನು. ಆಗ ವಾಲಿಯ ಮೃತ ಶರೀರದ ಸನಿಹವಿದ್ದ ತಾರೆಯನು ಎಬ್ಬಿಸಿ ರಾಮನ ಬಳಿ ಕರೆತಂದಾಗ ; ಕೋದಂಡವನೂರಿ ನಿಂತ ರಾಮನನ್ನು ನೋಡುವಳು. ಎಂದೂ ಕಾಣದ ದಿವ್ಯರೂಪವನು ರಾಮನಲಿ ಕಂಡಾಗ, ಅವಳ ಅರಿವಿಗೆ ಬಂದು, ರಾಮನಲಿ ಇನಿತು ನುಡಿವಳು. “ಪ್ರಭು ! ಈ ನಿನ್ನ ಧನುಸ್ಸು, ಬಾಣ, ಈ ನಿನ್ನ ಶರೀರ ನೋಡಿದಾಗ, ನೀನು ಮನುಷ್ಯನಲ್ಲ , ಈ ಪ್ರಭೆ ಮನುಷ್ಯ ಲಕ್ಷಣವಲ್ಲ, ನೀನು ದೇವರು, ಹಾಗಾಗಿ ‘ನನ್ನನ್ನು ವಾಲಿಯಲಿ ಒಂದಾಗಿಸು’ ಎಂದು ಪ್ರಾರ್ಥಿಸಿ” ವಿಲಪಿಸಿದಾಗ ರಾಮನು ಆಕೆಯನು ಸಂತೈಸಿದನು.

ಹೇ ವೀರನ ಪತ್ನಿಯೇ, ಪ್ರಪಂಚ ಇರುವುದು ಹೀಗೆಯೇ… ವ್ಯಥಿಸ ಬೇಡ, ನಿನ್ನ ಮಗ ಯುವರಾಜನಾಗುತ್ತಾನೆ. ಶೂರ ಪತ್ನಿಯರು ವಿಲಪಿಸಬಾರದು, ಶೋಕಿಸದಿರು ಎಂದಾಗ ಅಳುವನ್ನು ನಿಲ್ಲಿಸಿ, ಸಮಧಾನ ಹೊಂದುವಳು. ಅನಂತರ ರಾಮನು ಎಲ್ಲರನ್ನು ಕರ್ತವ್ಯಕ್ಕೆ ಎಬ್ಬಿಸಿದನು.

ಈಗ ವಾಲಿಯು ಸಹಜತೆಯನು ಹೊಂದಿ; ಸ್ವರ್ಗವನು ಗೆದ್ದ, ಮುಕ್ತಿಯನು ಪಡೆದನೆಂದು ಹೇಳಿದಾಗ ಲಕ್ಷ್ಮಣ ಎಚ್ಚರಗೊಂಡು ಸುಗ್ರೀವನನು ಮುಂದಿನ ಅಂತ್ಯಸಂಸ್ಕಾರದ ವಿಧಿ ವಿಧಾನಗಳಿಗಾಗಿ ಎಬ್ಬಿಸಿದ ಮತ್ತು ಅಂಗದನಿಗೆ ಬುದ್ದಿಯನು ಹೇಳಿ, ನೀನು ನಾಯಕತ್ವವನ್ನು ವಹಿಸು ಹಾಗೂ ಮಾರ್ಗದರ್ಶನವನ್ನು ಮಾಡು ಎಂದು ಹೇಳಿದ. ಅನಂತರ ಸುಗ್ರೀವನ ಜೊತೆಗಿರುವ ತಾರ ಎಂಬುವವನನು ಕರೆದು ಗುಹೆಯ ಒಳಗಿರುವ ಪಲ್ಲಕ್ಕಿಯನ್ನು ತರಲು ಹೇಳಿ, ಮುಂದಿನ ಕಾರ್ಯಕ್ಕೆ ಅಣಿಯಾಗುವಂತೆ ಸೂಚಿಸಿ ಅಣ್ಣನ ಬಳಿ ಹೋಗಿ ನಿಂತನು.

ಇತ್ತ ಪಲ್ಲಕ್ಕಿಯನ್ನು ವಾಲಿಯ ಮೃತ ಶರೀರವನು ಕೊಂಡೊಯ್ಯುವುದಕ್ಕಾಗಿ ಸಿದ್ಧತೆಯನು ಮಾಡಲಾಯಿತು. ನೋಡಲು ರಥದಂತೆ ಇದ್ದ ಪಲ್ಲಕ್ಕಿಯಲ್ಲಿ ಭದ್ರಾಸನವಿತ್ತು, ಕುಸುರಿ ಕೆತ್ತನೆಗಳಿಂದ ಕೂಡಿತ್ತು ಮತ್ತು ಸಿಂಹಾಸನದಂತಿತ್ತು. ವಿಶಾಲವಾಗಿತ್ತಲ್ಲದೇ ಕ್ರೀಡಾ ಪರ್ವತವನ್ನು ಹೊಂದಿತ್ತಲ್ಲದೇ ಮನೋಹರವಾಗಿ ಜೋಡಿಸಲಾಗಿತ್ತು. ಹಾರಗಳು, ಪುಷ್ಪಗಳಿಂದ ಕೂಡಿದ್ದ ಆ ಪಲ್ಲಕ್ಕಿಯು ಕಿಷ್ಕಿಂಧೆಯ ಗುಹೆಯಲ್ಲಿ ಗೌಪ್ಯವಾಗಿ ಇಡಲ್ಪಟ್ಟಿತ್ತು. ರಕ್ತ ಚಂದನದಿಂದ ಲೇಪಿಸಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅಂತಹ ಪಲ್ಲಕ್ಕಿಯನು ಕಂಡ ರಾಮನು ಲಕ್ಷ್ಮಣನಲ್ಲಿ ವಾಲಿಯನ್ನು ಆ ಸ್ಥಳಕ್ಕೆ ಕೊಂಡೊಯ್ಯಲ್ಲಿ; ಪ್ರೇತ ಕಾರ್ಯವು ಮುಂದುವರೆಯಲಿ ಎಂದು ಹೇಳಿದುದನು ಕೇಳಿಸಿಕೊಂಡ ಸುಗ್ರೀವನು ವಾಲಿಯನು ಪಲ್ಲಕ್ಕಿಯಲಿ ಕೂರಿಸಿದಾಗ ಗೋಳೋ ಎಂದು ಅತ್ತನು.

ಅಣ್ಣನಿಗೆ ಉತ್ತೋರೋತ್ತರ ಶ್ರೇಯಸ್ಸಾಗಬೇಕು. ಆದ್ದರಿಂದ ಮುತ್ತು-ರತ್ನಗಳನ್ನು ಹಂಚಿ. ನಂತರ ಅಂಗದನನು ಹಿಡಿದುಕೊಂಡು ಪಲ್ಲಕ್ಕಿಯ ಜೊತೆಯಲಿ ಕರೆದುಕೊಂಡು ಹೋಗುವರು. ಆಗ ವಾನರಿಯರು ವೀರ ..ವೀರ ಎಂಬುದಾಗಿ ಮತ್ತೆ ಮತ್ತೆ ಕೂಗಿವರು. ತಾರೆ ಮೊದಲಾದವರ ಶೋಕವು ಮುಂದುವರೆದಿತ್ತು, ಆ ಕೂಗಿಗೆ ಬೆಟ್ಟ-ಗುಡ್ಡಗಳೇ ಪ್ರತಿಧ್ವನಿಸಿತು. ಒಂದು ಪುಣ್ಯ ನದಿಯ ಬಳಿ ಪಲ್ಲಕ್ಕಿಯನ್ನಿಳಿಸಿ, ಅಳುತ್ತಾ ನಿಂತರು. ಆಗ ತಾರೆಯು ವಾಲಿಯ ತಲೆಯನು ತೊಡೆಯ ಮೇಲಿರಿಸಿ, ಮುಖವನು ಕಂಡಾಗ ಬದುಕಿದ್ದಾಗ ಇರುವಂತೆ ವಿಲಪಿಸುವಳು. ನೋಡು ನಿನ್ನ ಮಂತ್ರಿಗಳು, ಜನರು ಮತ್ತು ತಮ್ಮನಾದ ಸುಗ್ರೀವನ ಬಂದಿರುವ ನೋಡು ಅವರನ್ನೆಲ್ಲಾ. ಅವರೆಲ್ಲರನು ಅಪ್ಪಣೆಯನು ಕೊಟ್ಟು ಕಳುಹಿಸು, ನಾವಿಬ್ಬರು ಈ ಮಕರಂದದ ಕಾಡಿನಲಿ ವಿಹರಿಸುವ ಎಂದೆಲ್ಲಾ ಹೇಳಿದಳು. ನಂತರ ಸುಗ್ರೀವ, ಅಂಗದರು ಅಳುತ್ತಲೇ ಅಂತ್ಯ-ಸಂಸ್ಕಾರವನು ನೆರವೇರಿಸಿದರು. ನಂತರ ನದಿಯ ಬಳಿ ತೆರಳಿ ತರ್ಪಣವನು ನೀಡಿದರು. ಹೀಗೆ ರಾಮನು ಸುಗ್ರೀವನ ಜೊತೆಗೆ ತಾನೂ ಶೋಕನಾಗಿ ಪ್ರತಿಯೊಂದು ಕಾರ್ಯದಲ್ಲೂ ಮುಂದೆ ನಿಂತು ವಾಲಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ.

ಅನಂತರದಲ್ಲಿ ವಾಲಿ-ಸುಗ್ರೀವರ ಅಮಾತ್ಯರು ಸುಗ್ರೀವನನು ಸುತ್ತುವರೆದರು ಮತ್ತು ಸುಗ್ರೀವನು ರಾಮನನು ಸೇರಿ ಅವನ ಬಳಿ ಬಂದು, ಎಲ್ಲರೂ ಕೈ ಮುಗಿದು ನಿಂತರು. ಎಲ್ಲರೂ ಸುಮ್ಮನೇ ನಿಂತಾಗ ಹನುಮಂತನು ಮಾತಾಡಿದ. ಹನುಮಂತನು ಬಂಗಾರದ ಬೆಟ್ಟದಂತೆ, ಸೂರ್ಯನಂತ ಕೆಂಬಣ್ಣದ ಮುಖವನು ಹೊಂದಿದ್ದ. ಆತ ಕೈ ಮುಗಿದು ನಿಂತು, ಹೇ ಪ್ರಭೋ.., ನಿನ್ನ ಕರುಣೆಯಿಂದ ಸುಗ್ರೀವನಿಗೆ ಈ ವಾನರ ರಾಜ್ಯವು ಪ್ರಾಪ್ತವಾಯಿತು, ನೀನು ಅಪ್ಪಣೆಯಿತ್ತರೆ; ಕಿಷ್ಕಿಂಧೆಯನು ಸುಗ್ರೀವನು ಪ್ರವೇಶ ಮಾಡಿ ರಾಜ್ಯಭಾರವನ್ನು ಮಾಡಲಿ, ಪಟ್ಟಾಭಿಷಿಕ್ತನಾಗಿ ನಿನ್ನನ್ನು ರತ್ನಗಳಿಂದ ವಿಶೇಷವಾಗಿ ಪೂಜೆ ಮಾಡಬೇಕು. ಹಾಗಾಗಿ ಕಿಷ್ಕಿಂಧೆಗೆ ಆಗಮಿಸು, ನಮ್ಮೆಲ್ಲರೊಡನೆ ಸ್ವಾಮಿ ಸಂಬಂಧವನ್ನು ಮಾಡು; ಅದು ನಮಗೆ ಹರ್ಷ.

ಆಗ ರಾಮನು ನೀನು ಹೇಳಿದ್ದರಲ್ಲಿ ಎಲ್ಲವೂ ಒಪ್ಪಿಗೆ. ಆದರೆ ಒಂದಂಶ ಪೂರೈಸಲು ನನಗೆ ತಂದೆಯ ೧೪ ವರ್ಷ ವನವಾಸದ ಅಪ್ಪಣೆಯಿದೆ. ಅದು ಪೂರ್ಣಗೊಳ್ಳುವವರೆಗೆ ಯಾವ ನಗರವನ್ನೂ ನಾನು ಪ್ರವೇಶಿಸುವಂತಿಲ್ಲ. ಆದರೆ ಸುಗ್ರೀವ ನೀನು ಅಂಗದನನು ಯುವರಾಜನನ್ನಾಗಿ ಮಾಡಬೇಕು. ಆತ ಜ್ಯೇಷ್ಠನ ಪುತ್ರ ಮತ್ತು ಒಳ್ಳೆಯವ, ಬುದ್ಧಿವಂತ, ಪರಾಕ್ರಮಿ ಅವನ್ನು ಯುವರಾಜನ್ನಾಗಿ ಮಾಡುವುದು ಅದು ನಿನ್ನ ಕರ್ತವ್ಯ. ರಾಮನು ಮುಂದುವರೆದು, ಮಳೆಗಾಲದ ಆರಂಭವು ಇದು; ಉದ್ಯೋಗದ ಸಮಯವಲ್ಲ, ಕಿಷ್ಕಿಂಧೆಯನು ಪ್ರವೇಶಿಸು. ನಾನು ಲಕ್ಷ್ಮಣನ ಜೊತೆಗೆ ಈ ಬೆಟ್ಟದಲ್ಲಿ ಒಳ್ಳೆಯ ಗುಹೆಯಿದೆ; ಅಲ್ಲಿರುವೆನು. ಕಾರ್ತಿಕ ಮಾಸವು ಬರುತ್ತಿದ್ದಂತೆ ನೀನು ಕರ್ತವ್ಯಕ್ಕೆ ಇಳಿಯಬೇಕು, ಇದು ನನಗೂ ನಿನಗೂ ಒಪ್ಪಂದ ಎಂದು ಹೇಳಿದ. ಸುಗ್ರೀವನು ನಂತರ ಮುಂದುವರೆದು ಕಿಷ್ಕಿಂಧೆಯನು ಪ್ರವೇಶಿದ. ಅರಮನೆಯನು ಪ್ರವೇಶಸಿ, ನಂತರ ಹೊರಬಂದು ಅರಮನೆಯ ಸ್ತ್ರೀಯರನು ಸಂತೈಸಿದ.

ಅದಾದ ಬಳಿಕ ವಾನರವೀರರು ಸುಗ್ರೀವನಿಗೆ ಪಟ್ಟಾಭಿಷೇಕವನು ನೆರವೇರಿಸಿದರು. ಪಟ್ಟಾಭಿಷೇಕದಲ್ಲಿ ಸ್ವರ್ಣದಂಡದ ಶ್ವೇತ ಛತ್ರ, ಧಾನ್ಯಗಳು, ಚಿಗುರಿರುವ ಕೊಂಬೆಗಳು, ಸುಗಂಧ ಭರಿತ ಪುಷ್ಪಗಳು, ಹೂಗಳು, ಗಂಧ, ನವಣೆ, ಜೇನು, ತುಪ್ಪ, ವ್ಯಾಘ್ರ ಚರ್ಮ ಮುಂತಾದವುಗಳಿಂದ ಪಟ್ಟಾಭಿಷೇಕವಾಯಿತು. ಅರಮನೆಯ ಉಪ್ಪರಿಗೆಯಲ್ಲಿ ಸಿಂಹಾಸನವನ್ನಿಟ್ಟು, ಸುಗ್ರೀವನನು ಕುಳ್ಳಿರಿಸಿ ಕಾಂಚನ ಕಂಭಗಳಿಂದ ವಾನರ ಶ್ರೇಷ್ಠರು ವಸುಗಳು ವಾಸವನಿಗೆ ಅಭಿಷೇಕವನ್ನು ಮಾಡುವಂತೆ ಪಟ್ಟಾಭಿಷೇಕವನು ಮಾಡಿ, ಹರ್ಷೋದ್ಗಾರವನು ಮಾಡಿದರು. ಆದರೆ ಸುಗ್ರೀವನಿಗೆ ರಾಮ ಹೇಳಿದ್ದನ್ನು ನೆನಪಿನಲ್ಲಿರಿಸಿಕೊಂಡು; ಅಂಗದನನು ತಬ್ಬಿ ತಂದು ಯುವರಾಜನ್ನಾಗಿ ಮಾಡಿದರು. ಆಗ ವಾನರ ವೀರರ ಹರ್ಷೋದ್ಗಾರವು ಮುಗಿಲು ಮುಟ್ಟಿತು.

ಹರುಷದಿಂದ ಸುಗ್ರೀವನನು ವಾನರರು ಗೌರವಿಸಿದರು, ರಾಮ-ಲಕ್ಷ್ಮಣರನು ನೆನಪಿಸಿ ಪ್ರಶಂಸಿಸಿ; ಸ್ತುತಿಸಿದರು. ಹೀಗೆ ಕಿಷ್ಕಿಂಧೆಯು ಹೃಷ್ಠ-ಪುಷ್ಠ ವಾನರರಿಂದ ತುಂಬಿ ಹೋಯಿತು. ಈ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತಿದ್ದಂತೆ ಸುಗ್ರೀವನು ರುಮೆಯೊಡಗೂಡಿ ರಾಮನ ಬಳಿ ತೆರಳಿ ವಿಷಯವೆಲ್ಲವನು ತಿಳಿಸಿ, ಎಲ್ಲವನ್ನೂ ರಾಮನ ಚರಣಕ್ಕೆ ಅರ್ಪಿಸಿದನು.
ಮುಂದಿನ ಕಥಾ ಭಾಗವನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments