ದೀಪದ ಜ್ವಾಲೆ ಬೇಕು ನಿಜ ಅದರರ್ಥ ಎಣ್ಣೆ, ಬತ್ತಿ, ಪಾತ್ರ ಬೇಡ ಎಂಬುದಲ್ಲ;
ಮಸ್ತಿಷ್ಕವೇ ಪ್ರಧಾನ ಎಂಬುದು ನಿಜ, ಆದರೆ ಕಣ್ಣು, ಕೈಕಾಲುಗಳು, ಜಠರ, ಹೃದಯಗಳು ಇಲ್ಲದಿದ್ದರೆ ಮಸ್ತಿಷ್ಕವು ಇಲ್ಲ; ಅವುಗಳಿದ್ದರೆ ಮಾತ್ರ ಮಸ್ತಿಷ್ಕ ಇರುತ್ತದೆ..

ದೇವಸ್ಥಾನದಲ್ಲಿ ದೇವರು ಪ್ರಧಾನ, ಆದರೆ ಪೂಜಾರಿ,ದೀಪಗಳು ಇವೆಲ್ಲ ಅಂಗಗಳು!
ಕೇಂದ್ರ ಹೇಗೆ ಮುಖ್ಯವೋ, ಅಂಗಗಳೂ ಅಷ್ಟೇ ಮುಖ್ಯ, ಒಂದಕ್ಕೊಂದು ಪೂರಕ

ಪೀಠ ಬರಬೇಕು, ಪರಿವಾರ ಬರಬೇಕು, ಮತ್ತೆ ಗುರುಗಳು! ಗುರುಗಳು ಪೂಜ್ಯರು, ಆದರೆ ಪರಿವಾರ ತ್ಯಾಜ್ಯವಲ್ಲ!

ಭಗವಂತ ಶ್ರೀಮನ್ನಾರಾಯಣ ಧರೆಗವತರಿಸುತ್ತಾನೆ, ದಶರಥನ ಮಗನಾಗಿ, ಪೃಥ್ವಿಪಾಲಕನಾಗಿ ಹನ್ನೊಂದು ಸಾವಿರ ವರ್ಷಗಳ ಕಾಲ ಇಲ್ಲಿ ಇರ್ತಾನೆ, ಯಾಕಾಗಿ ಅಂದ್ರೆ ನಮ್ಮ ಸಹಾಯಕ್ಕಾಗಿ…

ನಾರಾಯಣನ ಸೇವಕರನ್ನು ಸೃಜಿಸಿ ಅಥವಾ ನೀವೇ ನಾರಾಯಣನ ಸೇವಕರಾಗಿ ಹೋಗಿ, ರಾವಣನ ಸಂಹಾರದ ಕಾರ್ಯದಲ್ಲಿ ನೆರವಾಗಿ..
ಹಾಗಾಗಿಯೇ ರಾಮನೇ ಕೇಂದ್ರವಾದರೂ, ಅದರ ಜೊತೆಗೆ ಅವನ ಅಂಗಗಳೂ ಮುಖ್ಯ.. ಸೀತೆ,ಲಕ್ಷ್ಮಣ, ಭರತ, ಶತ್ರುಘ್ನ, ಆಂಜನೇಯ‌..ನಲ,ನೀಲ,ಅಂಗದ, ಜಾಂಬವಂತ, ಸುಗ್ರೀವ..
ಅಂಗಗಳ ಪರಿವೇಶ, ಪರಿಸರ, ಪರಿಕರ ಇಲ್ಲದೆಯೇ ಕೇಂದ್ರವಾದುದು ಮುಂದುವರೆಯುವುದಿಲ್ಲ

*ಎಲ್ಲದೂ ದೇವರು ಮಾಡುವುದು ಹೌದಾದರೂ ಜೀವರುಗಳ ಕರ್ತವ್ಯ ಅಂತ ಇದೆ, ಅದನ್ನು ಮಾಡಲೇಬೇಕು – ಶ್ರೀಸೂಕ್ತಿ*

ಬಲಶಾಲಿಗಳು, ರೂಪಗಳನ್ನು ತಾಳುವಂತವರು, ಶೂರರು, ಮಾಯೆ ಗೊತ್ತಿರುವವರು, ವಾಯುವೇಗದವರು, ನೀತಿಜ್ಞ, ಬುದ್ಧಿತುಲ್ಯ, ವಿಷ್ಣುವಿನ ಪರಾಕ್ರಮಕ್ಕೆ ಹೊಂದುವಂಥವರು, ಕೊಲ್ಲಲು ಸುಲಭ ಇರದಂಥವರು, ಉಪಾಯ ಕುಶಲರು, ಸಿಂಹಶರೀರರು, ಸರ್ವಾಸ್ತ್ರ ಸಂಪನ್ನರೂ ಆಗಬೇಕು.
ಅಪ್ಸರೆ, ಗಂಧರ್ವೆಯರು, ಕಿನ್ನರಿಯರು, ವಿದ್ಯಾಧರಿಯರು ಇವರ ಮೂಲಕ ಸಂತಾನ ಆಗಬೇಕು. ದಿವ್ಯಸ್ತ್ರೀಯರು ವಾನರರಾಗಿ ಧರೆಗೆ ಬರಬೇಕು, ಸಂತಾನ ಹೊಂದಬೇಕು. ನಿಮ್ಮದೇ ಪರಾಕ್ರಮ ಅವರಲ್ಲಿರಬೇಕು, ಅಂಥವರನ್ನೇ ಸೃಜಿಸಿ ಎಂದರೆ ನೀವೇ ಸಂತಾನವಾಗಿ ಇಳಿದು ಹೋಗಿ ಎಂದು ಬ್ರಹ್ಮ ಹೇಳ್ತಾನೆ‌. ನನ್ನ ಕೆಲಸ ಮೊದಲೇ ಆಗಿದೆ, ಜಾಂಬವಂತನನ್ನು ನಾನು ಅದಾಗಲೇ ಸೃಜಿಸಿದ್ದೇನೆ..

*ಇಲ್ಲೊಂದು ತತ್ತ್ವವಿದೆ; ಉಪದೇಶಕ್ಕಿಂತ ಮೊದಲು ಅನುಷ್ಠಾನ, ಬೇರೆಯವರಿಗೆ ಹೇಳುವುದಕ್ಕಿಂತ ಮೊದಲು ನಾವು ಅದನ್ನು ಮಾಡಿರಬೇಕು – ಶ್ರೀಸೂಕ್ತಿ*

ಬ್ರಹ್ಮ ತಾನು ಮೊದಲು ಮಾಡಿ ದೇವತೆಗಳಿಗೆ ಹೇಳಿದ್ದಾನೆ. ಮಿಕ್ಕ ದೇವದೇವತೆಗಳೆಲ್ಲರೂ ಬ್ರಹ್ಮಾಜ್ಞೆಯಂತೆ ವಾನರ ಸಂತಾನಗಳನ್ನು ಸೃಜಿಸುತ್ತಾರೆ. ಜನ್ಮವಷ್ಟೇ ವಾನರಜನ್ಮ, ಆದರೆ ಯೋಗ್ಯತೆಗಳೆಲ್ಲವೂ ದೇವತೆಗಳದು!

ದೇವತೆಗಳ ದೊರೆ ಇಂದ್ರನು ವಾನರರ ದೊರೆ ಸುಗ್ರೀವನನ್ನು ಸೃಜಿಸಿದ; ಸೂರ್ಯ ವಾಲಿಯನ್ನು ಸೃಜಿಸಿದ – ವಾಲಿಯೇನೂ ಮಾಡದಿದ್ದರೂ ಆತ ಅಂಗದನನ್ನು ಸೃಜಿಸಿದ; ಬೃಹಸ್ಪತಿ ತಾರನನ್ನು ಸೃಜಿಸಿದ; ಕುಬೇರನು ಗಂಧಮಾಧನನ್ನು, ವಿಶ್ವಕರ್ಮ ನಲನನ್ನು, ಅಗ್ನಿಯು ನೀಲನನ್ನು, ಅಶ್ವಿನಿದೇವತೆಗಳು ಮೇಂದ-ದ್ವಿವಿದರನ್ನು
ವರುಣ ಸುಶೇಣನನ್ನು, ಪರ್ಜನ್ಯ- ಶರಭನನ್ನು ಸೃಜಿಸಿದರು.

ಇವರೆಲ್ಲರ ಬಳಿಕ…

ವಯಸಿಲ್ಲಿ ಎಲ್ಲರಿಗಿಂತ ಕಿರಿಯ ಆದರೆ ಎಲ್ಲರಿಗಿಂತ ಹೆಚ್ಚು ಸಾಮರ್ಥ್ಯವುಳ್ಳವನು, ವೇಗದಲ್ಲಿ ಗರುಡ ಸಮಾನ, ವಜ್ರ ಶರೀರ, ಎಲ್ಲರಿಗಿಂತ ಹೆಚ್ಚು ಬುದ್ಧಿವಂತ, ಶೂರ.. ಅವನೇ ಪ್ರಾಣ, ಸಂಸಾರದ ಪ್ರಾಣ, ನಮ್ಮ ನಿಮ್ಮ ಉಸಿರಾಟ , ಮುಖ್ಯಪ್ರಾಣ ಎಂಬ ಹನುಮಂತನು ಜನಿಸಿದ – ವಾಯುಕುಮಾರ ಅವನು, ಹಾಗೆಯೇ ವ್ಯಾಪ್ತಿಯೂ ಅತಿ ದೊಡ್ಡದು!

ರಾಮಾಯಣದ ಆತ್ಮ – ರಾಮನಾದರೆ, ಪ್ರಾಣ – ಆಂಜನೇಯ! ಸಾರ್ವಭೌಮನ ಸೇವಕ – ಸೇವಕ ಸಾರ್ವಭೌಮ – ಆಂಜನೇಯ! ಗೋಕರ್ಣದ ಕೇಸರೀ ತೀರ್ಥದ ಪರಿಸರದಲ್ಲಿ, ವಿಶ್ವಕ್ಷೇಮಕ್ಕಾಗಿ, ರಾಮಸೇವೆಯನ್ನು ಮುಂದೆನಿಂತು ಮಾಡುವ ಸಲುವಾಗಿ ಎಲ್ಲಾ ವಾನರರ ಬಳಿಕ ಆಂಜನೇಯನು ಜನಿಸಿದ; ಆಂಜನೇಯನು ಅವತರಿಸಿ ಬಂದ – ರಾಮಸೇವೆಗಾಗಿ!

ಮುಂದಿರುವ ಪೀಠ ಖಾಲಿಯಿದೆಯೆಂದೆನಿಸುತ್ತಿದೆ ಅಷ್ಟೇ, ಅದು ತುಂಬಿದೆ.. ಅಲ್ಲಿ ಹನುಮಂತನಿದ್ದಾನೆ. ಎಲ್ಲೆಲ್ಲ ರಾಮಕಥೆ ನಡೆಯುತ್ತದೆಯೋ ಅಲ್ಲೆಲ್ಲ ಆಂಜನೇಯ ಇರುತ್ತಾನೆ, ಆನಂದಭಾಷ್ಪಗಳನ್ನು ಸುರಿಸುತ್ತಾ ಇರುತ್ತಾನೆ..
ಹನುಮಂತ ಬಂದಮೇಲೆ ಚಿಂತೆ ಇಲ್ಲ ಯಾಕೆ ಅಂದರೆ ಪ್ರಾಣ ಬಂದಾಯ್ತು.. #ಧಾರಾ_ರಾಮಾಯಣ ಕ್ಕೆ ಬಲ ಬಂತು..

ಹನುಮಂತ ರುದ್ರನೂ ಕೂಡ ಹೌದು; ವಾಯುಪುತ್ರನೂ ಹೌದು, ಪ್ರಾಣಸ್ವರೂಪಿ..

ಅವನ ಸಾಮರ್ಥ್ಯ – ಕಲ್ಪನಾತೀತ, ಇರುವ ಸಾಮರ್ಥ್ಯವೆಲ್ಲವನ್ನೂ – ರಾಮ ಸೇವೆಗೆ ಸಮರ್ಪಿಸಿದ.. ಅದು ನಮಗೆಲ್ಲರಿಗೂ ಅನುಕರಣೀಯ.

ಅಪ್ರಮೇಯರೂ, ಮಹಾಬಲವುಳ್ಳವರೂ, ವೀರರೂ, ಶೂರರು, ಮಹಾಶರೀರ ಇವೇ ಮೊದಲಾದ ಲಕ್ಷಣಗಳ ವಾನನರು; ಲಕ್ಷಾಂತರ ಕಪಿಗಳು ಹುಟ್ಟಿಕೊಂಡರು..
ವಾನರರು, ಭಲ್ಲೂಕಗಳು, ಗೋಲಾಂಗೂಲರು ಎಂಬ ಮೂರು ಪ್ರಬೇಧಗಳಲ್ಲಿ ಇದ್ದರಂತೆ ಅವರು.

ಆಯಾ ದೇವತೆಗಳ ಗುಣಗಳೆಲ್ಲವೂ ಆಯಾ ವಾನರರಲ್ಲಿ ಬಂದಿವೆ. ರಾಕ್ಷಸ ಪಡೆಯನ್ನು ಬಗ್ಗುಬಡಿಯಲು ಸಾತ್ವಿಕ ಪಡೆ ಸಿದ್ಧವಾಗ್ತಾ ಇದೆ‌. ದೇವವೈಭವಗಳೆಲ್ಲವೂ, ದೇವವೈವಿಧ್ಯಗಳೆಲ್ಲವೂ ಭೂಮಿಗೆ ಬಂದಿದೆ. ಇದೊಂದು ದೇವವ್ಯೂಹ!

ವಿಶ್ವವಿದ್ಯಾಪೀಠದ ಲಕ್ಷ್ಯ ಏನೆಂದರೆ, ಧರ್ಮಯೋಧರ ನಿರ್ಮಾಣ; ತನ್ಮೂಲಕ ಧರ್ಮಸಾಮ್ರಾಜ್ಯದ ನಿರ್ಮಾಣ! ಶ್ರೇಷ್ಠ ಸಮಾಜ, ಶ್ರೇಷ್ಠ ದೇಶದ ನಿರ್ಮಾಣ!

ಬೇಕಾದಷ್ಟು ಶಕ್ತಿ, ಬೇಕಾದಂತಹ ರೂಪ, ಮನಬಂದಂತೆ ಸಂಚರಿಸುವ ಸಾಮರ್ಥ್ಯ, ಸಿಂಹ ಸಾಮರ್ಥ್ಯ, ದರ್ಪ, ದೊಡ್ಡ ದೊಡ್ಡ ಬಂಡೆಗಳೇ ಆಯುಧ, ಮಹಾವೃಕ್ಷಗಳನ್ನು, ಪರ್ವತ ಶಿಖರಗಳನ್ನೇ ಆಯುಧವಾಗಿ ಬಳಸುತ್ತಿದ್ದರು. ಇದಕ್ಕಿಂತ ವಿಶೇಷ ಆಯುಧ ಅಂದ್ರೆ ಅವರ ಉಗುರು-ಹಲ್ಲುಗಳು. ತಲೆ,ಮುಷ್ಟಿ,ಮೊಣಕಾಲು, ಮೊಣಕೈಗಳನ್ನೂ ಬಳಸುತ್ತಿದ್ದರು. ಸಮುದ್ರದಾಟಿ ಹಾರುವ ಶಕ್ತಿಯುಳ್ಳವರು, ಆಕಾಶಕ್ಕೆ ನೆಗೆದು ಮೋಡಗಳನ್ನು ಹಿಡಿದು ಆಟವಾಡುತ್ತಿದ್ದಂತಹವರು!

ಇಂತಹ ಲಕ್ಷಲಕ್ಷ ಯೂತಪಾಲಕರ ಜನನವಾಯಿತು, ಅವರಿಗೆಲ್ಲ ಸಂತಾನವಾಯಿತು‌.

ಕೈಲಾಸ, ವಿಂಧ್ಯ, ಮೇರು, ಸಹ್ಯ ಸೇರಿದಂತೆ ಅನೇಕ ಪರ್ವತಗಳು,ಕಾಡುಗಳಲ್ಲಿ ವಾಸ ಮಾಡುತ್ತಿದ್ದರು, ಅವರ ಕೇಂದ್ರ ಕಿಷ್ಕಿಂಧೆ..ನಮ್ಮ ಇಂದಿನ ಕರ್ನಾಟಕ ಅದು. ಸೂರ್ಯಪುತ್ರನಾದ ವಾಲಿ ಹಾಗೂ ಇಂದ್ರಪುತ್ರನಾದ ಸುಗ್ರೀವನನ್ನು ಉಳಿದ ವಾನರರೆಲ್ಲ ಆಶ್ರಯಿಸಿದ್ದರು.

ಇವರೆಲ್ಲರೂ ರಾಮಸಹಾಯಕ್ಕಾಗಿ ಹುಟ್ಟಿದವರು.

ಈಕಡೆ ಅಶ್ವಮೇಧ ಹಾಗೂ ಪುತ್ರಕಾಮೇಷ್ಠಿ ಸಂಪನ್ನವಾಗಿದೆ. ದೇವತೆಗಳೆಲ್ಲರೂ ಹವಿರ್ಭಾವವನ್ನು ಸ್ವೀಕರಿಸಿ ತೃಪ್ತರಾಗಿ ಸ್ವರ್ಗಕ್ಕೆ ಹೋಗಿದ್ದಾರೆ.
ದೊರೆಯು ಪತ್ನಿಗಣದೊಂದಿಗೆ ಕೂಡಿಕೊಂಡು ಅಯೋಧ್ಯೆಯ ಕಡೆ ಪಯಣಿಸಿದ. ವಿವಿಧ ದೇಶಗಳ ರಾಜರು ಸಂತುಷ್ಟಿಯಿಂದ ವಿರಮಿಸಿದರು‌‌‌.
ಶಾಂತೆಯನ್ನು ಮುಂದಿಟ್ಟು ಋಷ್ಯಶೃಂಗರು, ಅವರ ಹಿಂದೆ ರಾಜ, ರಾಜನ ಹಿಂದೆ ಸಕಲರು ಅಯೋಧ್ಯೆಯನ್ನು ಪ್ರವೇಶಿಸಿದರು.

ನಾಲ್ಕು ಮಕ್ಕಳಾಗುತ್ತಾರೆ ಎಂಬ ವಿಶ್ವಾಸದಿಂದ ದಶರಥ ತುಂಬಿದ ಮನಸ್ಸುಳ್ಳವನಾಗಿ ಸಂತೋಷನಾಗಿದ್ದಾನೆ, ಕೌಸಲ್ಯೆಯ ಉದರದಲ್ಲಿ ಆನಂದವಿತ್ತು, ದೈವ ಗರ್ಭವನ್ನು ಹೊತ್ತಿದ್ದಳು, ಎಂತಹ ಧನ್ಯೆ ಕೌಸಲ್ಯೆಯು.

ದೈವಗರ್ಭವನೆ ಹೊತ್ತಿರುವೆ; ಪುರುಷೋತ್ತಮನನೆ ಕೆತ್ತಿರುವೆ
ಲೋಕದ ಪುಣ್ಯದ ಘನಪಾಕ; ನಿನ್ನೊಳು ತಳೆದಿದೆ ಶಿಶುರೂಪ!

ಬ್ರಹ್ಮಾಂಡವು ಯಾರ ಉದರದಲ್ಲಿದೆಯೋ ಅವನು ಕೌಸಲ್ಯೆಯ ಪುಣ್ಯಗರ್ಭದಲ್ಲಿದ್ದ.. ತತ್ತ್ವವೇನೆಂದರೆ – ಮಾತೃತ್ವವು ಬ್ರಹ್ಮಾಂಡಕ್ಕಿಂತ ದೊಡ್ಡದು! ಮಾತೃತ್ವಕ್ಕಿಂತ ಶ್ರೇಷ್ಠವಾದುದಿಲ್ಲ‌‌ ಎಂಬುದನ್ನು ಕೌಸಲ್ಯೆಯು ಸಾಬೀತುಪಡಿಸಿದಳು. ಕೌಸಲ್ಯೆಯ ಗರ್ಭದಲ್ಲಿ ದೇವರು ಸಂಪೂರ್ಣನಾಗಿ ಇದ್ದಾನೆ. ಅವನದ್ದೇ ಸಂಕಲ್ಪ ಅದು, ದಶರಥನ ಪುತ್ರನಾಗಿ ಹುಟ್ಟುತ್ತೇನೆ ಎಂಬ ಸಂಕಲ್ಪ. ಪುತ್ರಕಾಮೇಷ್ಠಿ ಆಗಿ ಆರು ಋತುಗಳಾಗಿದ್ದವು ಅಂದರೆ 12 ತಿಂಗಳುಗಳಾಗಿದ್ದವು. ಮತ್ತೆ ವಸಂತ ಬಂತು.

ಪ್ರತಿಯೊಂದು ಜೀವಕ್ಕೂ ಗರ್ಭದಲ್ಲಿ ದೇವನ ದರ್ಶನವಾದರೆ, ಕೌಸಲ್ಯೆಯ ಗರ್ಭದಲ್ಲಿ ದೇವನೇ ಜೀವನಾಗಿ ಬಂದಿದ್ದಾನೆ! ಎಂತಹಾ ಅದ್ಭುತವಿದು!

ಲೋಕನಿಯಮ – ಒಂಭತ್ತು ತಿಂಗಳಿನ ಆಸುಪಾಸಿನಲ್ಲಿ ಪ್ರಸವ. ಆದರೆ ಇದು ಹಾಗಲ್ಲ; ಹನ್ನೆರಡು ತಿಂಗಳಾಗಿತ್ತು! ಅದು ವಿಶಿಷ್ಟ, ಎಲ್ಲ ಋತುಗಳನ್ನು ಕಂಡ ಪರಿಪೂರ್ಣ ಗರ್ಭವದು! ಇನ್ನೂ ಪ್ರಸವವಾಗಲಿಲ್ಲವೆಂದರೆ,
ಕೌಸಲ್ಯೆಯ ಗರ್ಭವೇ ಅಷ್ಟು ಹಿತವಾಯಿತೇ ಪ್ರಭುವಿಗೆ..? ಗರ್ಭವಾಸವೇ ಸುಖವೆನಿಸಿತೇ..?
ಒಳಗೆ ಕುಳಿತು ‘ಒಳಿತು’ ಏನು ಮಾಡಿತು…?
ಶ್ರೀಮನ್ನಾರಾಯಣ ಒಳಗೆ ಕುಳಿತು ರಾಮನಾಗ್ತಾ ಇದ್ದಾನೆ.‌ ಸನ್ನಿವೇಶ ಬರಬೇಕು, ಅದಕ್ಕಾಗಿ ಕಾಯ್ತಾ ಇದ್ದಾನೆ. ಪ್ರವೇಶಕ್ಕೂ ಮುಹೂರ್ತ ಬೇಕು, ನಿಷ್ಕ್ರಮಣಕ್ಕೂ ಮುಹೂರ್ತ ಬೇಕು. ಮುಹೂರ್ತಕ್ಕಾಗಿ ಪ್ರಭು ಕಾಯುತ್ತಿದ್ದಾನೆ: ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ನವಮಿ, ಪುನರ್ವಸು ನಕ್ಷತ್ರ, ಕರ್ಕಾಟಕ ಲಗ್ನ, ಸೂರ್ಯ,ಮಂಗಲ, ಗುರು, ಶುಕ್ರ, ಶನಿ ಉಚ್ಛಕ್ಕೆ ಹೋಗಬೇಕು, ಚಂದ್ರ ಸ್ವಕ್ಷೇತ್ರಕ್ಕೆ ಹೋಗಬೇಕು, ಗುರು-ಚಂದ್ರ ಸಮಾಯೋಗ, ಆ ಸನ್ನಿವೇಶಕ್ಕೆ ಹೋಗಬೇಕು!

ಒಂದು ಗ್ರಹ ಉಚ್ಛವಾದಾಗ – ಸುಖ, ಎಲ್ಲ ಅರಿಷ್ಟ ಶಮನ
ಎರಡು ಗ್ರಹಗಳು ಉಚ್ಛವಾದಾಗ – ದೊಡ್ಡ ದೊಡ್ಡ ಕೆಲಸಗಳನ್ನು ಮಾಡುವನು
ಮೂರು ಗ್ರಹಗಳು ಉಚ್ಛವಾದಾಗ – ರಾಜನಂಥವನು, ಮಹೀಪತಿ
ನಾಲ್ಕು ಗ್ರಹಗಳು ಉಚ್ಛವಾದಾಗ – ದೊರೆಯೇ ಆಗುವನು
ನಾಲ್ಕಕ್ಕಿಂತ ಹೆಚ್ಚು ಗ್ರಹಗಳು ಉಚ್ಛವಾದಾಗ – ಅವರು ಮನುಷ್ಯ ಮಾತ್ರರಲ್ಲ, ದೈವೀಶಕ್ತಿಯೊಂದು ಜನಿಸಿದೆ ಆಂತಲೇ ಅರ್ಥ!

ಲೋಕನಾಯಕನ ಆವಿರ್ಭಾವವಾಗಬೇಕಾದರೆ ಪಂಚಗ್ರಹಗಳು ಉಚ್ಛಸ್ಥಿತಿಲ್ಲಿರಬೇಕು; ಆಗ ಜನಿಸಬೇಕು!
ಅಂತಹಾ ಸನ್ನಿವೇಶಕ್ಕಾಗಿ ಕಾಯ್ವಿಕೆ ಇತ್ತು, ಲೋಕ ನಾಯಕನ ಜನನವಾಗಬೇಕಿತ್ತು!

ಇದು ಬೆಳಕಿನಾಟ-
ಇಡೀ ವರ್ಷದಲ್ಲಿ ಬಿಸಿಲು ಬೆಳಕು ಹೆಚ್ಚಿರುವ ಕಾಲಘಟ್ಟ – ವಸಂತ, ಶುಕ್ಲಪಕ್ಷ, ನವಮಿ, ಮೇಷಮಾಸ(ಸೂರ್ಯ ಪ್ರಬಲ), ಕರ್ಕಾಟಕ ರಾಶಿ,ಲಗ್ನ(ಚಂದ್ರ ಪ್ರಬಲ). ಸೂರ್ಯನಿಗೆ ಉಚ್ಛ ಕ್ಷೇತ್ರ, ಚಂದ್ರನಿಗೆ ಸುಕ್ಷೇತ್ರ‌‌. ನಡು ಮಧ್ಯಾಹ್ನ ಹುಟ್ಟಿದ್ದು, ಬೆಳಕು ಪೂರ್ಣವಾಗಿ ಬೆಳೆದಿರುವ ಹೊತ್ತು. ಹಿಂದೂ, ಮುಂದೂ ಕತ್ತಲು ಬಹುದೂರ ಇರುವ ಹೊತ್ತು. ಬಂದಿದ್ದು ಬೆಳಕು ಎನ್ನಲು ಬೇರೆ ಏನು ಹೇಳಬೇಕು?

ಬೆಳಕು ಅತ್ಯಧಿಕವಾದ ಕಾಲದಲ್ಲಿ, ಕತ್ತಲೆಯ ಸಾಮ್ರಾಜ್ಯವನ್ನು ಕೊನೆಗಾಣಿಸಲೆಂದು, ಜಗದೆಲ್ಲ ಬೆಳಕುಗಳ ಬೆಳಕಾದ ಆ ಪರಂಜೋತಿಯು, ಸರ್ವಲೋಕನಮಸ್ಕೃತನಾದ ಜಗನ್ನಾಥನು, ಜಗದೊಡೆಯನು, ಸರ್ವಲಕ್ಷಣಸಂಯುತನಾಗಿ ಮಾತೃತ್ವದ ಮಹಾಜಲಧಿಯಾದ ಕೌಸಲ್ಯಾದೇವಿಯ ಪುಣ್ಯೋದರದಿಂದ ಅಯೋಧ್ಯೆಯ ಪುಣ್ಯ ಧರೆಗೆ ಅವತರಿಸಿದನು..ಅವತರಿಸಿದನು..ಅವತರಿಸಿದನು..

ರಾಮಾವತಾರವಾಯಿತು.. ರಾಮಜನ್ಮವಾಯಿತು..

ಪ್ರಭು ಶ್ರೀರಾಮಚಂದ್ರ ಕೀ.. ಜೈ..

ಭೂಮಿಯ ಪಾಪ, ದುಃಖ ಇನ್ನುಳಿಯುವುದುಂಟೇ? ಆನಂದಸಿಂಧುವು ಬಿಂದುವಾಗಿ ಭೂಮಿಗೆ ಬಂದ ಪುಣ್ಯಕಾಲ..

ರಾಮಾವತಾರವಾಗುತ್ತಿದ್ದಂತೆಯೇ, ಆತನ ಸಹೋದರರು.. ಹೀಗೆ ನಾಲ್ವರ ಉದಯ ಅಯೋಧ್ಯೆಯಲ್ಲಾಯಿತು..

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments