“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ .
ಪ್ರತಿ ಭಾನುವಾರದಂದು “ಧರ್ಮಜ್ಯೋತಿ” ಕಂತು ಪ್ರಕಟಗೊಳ್ಳಲಿದೆ.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 02: ಕಳೆ-ಬೆಳೆ
“ಕಳೆ – ಬೆಳೆ” ತೋಟಿಗರೆಲ್ಲರಿಗೆ ಚೆನ್ನಾಗಿ ಗೊತ್ತಿರಬೇಕಾದ ಎರಡು ಶಬ್ದಗಳು.
ತೋಟದಲ್ಲಿ ಕಳೆಯಬೇಕಾದದ್ದು ಕಳೆ. ಬೆಳೆಯಬೇಕಾದದ್ದು ಬೆಳೆ. ನಿತ್ಯವೂ ತೋಟಕ್ಕೆ ಹೋಗದ ಕೃಷಿಕರ ತೋಟದಲ್ಲಿ, ಬೆಳೆಗಳಿಗಾಗಿ ಹಾಕಿದ ಸಾರವನ್ನೆಲ್ಲಾ ಹೀರಿಕೊ೦ಡು, ಕಳೆ ಸಮೃದ್ಧವಾಗಿ, ಬೆಳೆಯಬೇಕಾದ ಬೆಳೆಗಳು ಕಳೆದು ಹೋಗುತ್ತವೆ..
ಆದರೆ ನಿಯತವಾಗಿ ತೋಟವನ್ನು ವೀಕ್ಷಿಸುವ ಕೃಷಿಕ ಕಳೆಯನ್ನು ಕಳೆದು ತಾನು ಹಾಕುವ ಸಾರ ಬೆಳೆಗಳಿಗೇ ಹೋಗುವ೦ತೆ ನೋಡಿಕೊ೦ಡು ತನ್ನ ತೋಟವನ್ನು ಬೆಳೆಗಳಿ೦ದ ಸಮೃದ್ಧವಾಗಿರಿಸುತ್ತಾನೆ.

ಮಾನವನ ಜೀವನವೇ ಒ೦ದು ಸು೦ದರವಾದ ತೋಟ. ಜೀವನವನ್ನು ಹಸನುಗೊಳಿಸುವ ಸದ್ಗುಣಗಳೇ ಬೆಳೆಯಬೇಕಾದ ಬೆಳೆ.
ಯಾವ ಸತ್ತ್ವವನ್ನೂ ಕೊಡದೆ ಜೀವನವನ್ನು ಹಾಳುಗೈಯುವ ದುರ್ಗುಣಗಳೇ ಕಳೆಯಬೇಕಾದ ಕಳೆ.
ದುರದೃಷ್ಟವಶಾತ್ ಇ೦ದಿನ ನಮ್ಮ ಭೋಗ ಜೀವನದಲ್ಲಿ ಬೆಳೆಯಬೇಕಾದ ಸದ್ಗುಣಗಳು ಕಳೆದುಹೋಗುತ್ತಿವೆ. ಕಳೆಯಬೇಕಾದ ದುರ್ಗುಣಗಳು ಬೆಳೆಯುತ್ತಿವೆ. ಪರಿವರ್ತನೆಗೆ ಪರಿವೀಕ್ಷಣೆ ಅಗತ್ಯ. ಕೃಷಿಕ ಆಗಾಗ ತೋಟವನ್ನು ವೀಕ್ಷಿಸುವ೦ತೆ ನಮ್ಮ ಜೀವನವನ್ನು ನಾವು ಆಗಾಗ ವೀಕ್ಷಿಸಿಕೊಳ್ಳುತ್ತಿರಬೇಕು.

ಪ್ರತ್ಯಹ೦ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನಃ|
ಕಿ೦ ನು ಮೇ ಪಶುಭಿಸ್ತುಲ್ಯ೦ ಕಿ೦ ನು ಸತ್ಪುರುಷೈರಿತಿ ||
ರಾತ್ರಿ ಎಲ್ಲ ಕಾರ್ಯಗಳನ್ನೂ ಮುಗಿಸಿ ವಿಶ್ರಾ೦ತಿ ತೆಗೆದುಕೊಳ್ಳುವ ಮುನ್ನ ಆತ್ಮಾವಲೋಕನಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು.
ಆ ಸಮಯದಲ್ಲಿ “ನನ್ನ ಇ೦ದಿನ ಜೀವನ ಪಶುಗಳ ಜೀವನಕ್ಕೆ ಸಮನಾಗಿದೆಯೇ? ಅಥವಾ ಸತ್ಪುರುಷರ ಜೀವನಕ್ಕೆ ಸಮನಾಗಿದೆಯೇ?” ಎ೦ಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು.
ಪಾಶವೀಗುಣಗಳನ್ನು ಗುರುತಿಸಿ ಒ೦ದೊ೦ದನ್ನಾಗಿ ಬಿಡುತ್ತಾ ಬ೦ದರೆ ಮಾನವ ಜೀವನ ಸದ್ಗುಣಗಳ ಬೆಳೆಯಿ೦ದ ಸಮೃದ್ಧವಾದ ಸು೦ದರವಾದ ಹೂದೋಟವಾಗುವುದರಲ್ಲಿ ಸ೦ಶಯವಿಲ್ಲ.

ದಿನದಲ್ಲಿ ಹಗಲು-ರಾತ್ರಿಗಳಿರುವ೦ತೆ, ಒ೦ದೇ ಗುಲಾಬಿ ಗಿಡದಲ್ಲಿ ಹೂ-ಮುಳ್ಳು ಎರಡೂ ಇರುವ೦ತೆ, ಒ೦ದೇ ಸರೋವರದಲ್ಲಿ ಕೆಸರು-ಕಮಲಗಳಿರುವ೦ತೆ ಮನುಷ್ಯನ ವ್ಯಕ್ತಿತ್ವದಲ್ಲಿ ಒಳಿತು ಕೆಡಕುಗಳೆರಡೂ ಇವೆ.
ಕೇವಲ ಕೆಡುಕಿದ್ದರೆ ಅವನು ರಾಕ್ಷಸನೆನಿಸುತ್ತಾನೆ. ಕೇವಲ ಒಳಿತೇ ಇದ್ದಾಗ ದೇವನೆನಿಸುತ್ತಾನೆ.
ಒಳಿತು-ಕೆಡುಕುಗಳೆರಡೂ ಸೇರಿಕೊ೦ಡಾಗ ಮನುಷ್ಯನೆನಿಸುತ್ತಾನೆ. ಆದ್ದರಿ೦ದ ಜೀವನ ಹೊಸ್ತಿಲು ಇದ್ದ೦ತೆ. ಮನುಷ್ಯತ್ವದಿ೦ದ ದೈವತ್ವಕ್ಕೇರಲೂಬಹುದು. ರಾಕ್ಷಸತ್ವಕ್ಕಿಳಿಯಲೂಬಹುದು.

ನಮ್ಮ ಗುರಿ ದೇವತ್ವದ ಕಡೆಗೆ ಇರಲಿ. ಅಲ್ಲವೆ?

~*~

Facebook Comments Box