“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 10: “ತೆರೆ-ಮರೆ”

ದೇವಸ್ಥಾನಗಳಲ್ಲಿ ದೇವರ ಮುಂದೆ ತೆರೆಯೊಂದನ್ನು ಹಾಕುವ ಸಂಪ್ರದಾಯವಿದೆ. ಜನರು ದರ್ಶನಾರ್ಥಿಗಳಾಗಿ ಬಂದಾಗ ಅರ್ಚಕರು ತೆರೆ ತೆರೆದು ನೀರಾಜನ ಬೆಳಗಿ ಭಗವಂತನ ಮೂರ್ತಿಯ ದರ್ಶನ ಮಾಡಿಸುತ್ತಾರೆ. ಏನೀ ಸಂಪ್ರದಾಯದ ಅರ್ಥ?

ಮಾನವ ಹೃದಯವೇ ಭಗವಂತನ ಮೂರ್ತಿಯು ನೆಲೆಸಿರುವ ಗರ್ಭಗುಡಿ. ಮಾಯೆಯ ತೆರೆ ಹೃದಯವನ್ನು ಮುಸುಕಿರುವುದರಿಂದ ಭಗವಂತನ ಸಾಕ್ಷಾತ್ಕಾರ ನಮಗಾಗುತ್ತಿಲ್ಲ. ಸಾಕ್ಷಾತ್ಕಾರವಾಗಬೇಕಾದರೆ ಅರ್ಚಕನ ಸ್ಥಾನದಲ್ಲಿರುವ ಪರಮ ಕೃಪಾಕರನಾದ ಗುರುವೊಬ್ಬ ಲಭಿಸಬೇಕು. ಗುರು ನಮ್ಮ ಹೃದಯವನ್ನು ಮುಸುಕಿರುವ ಮಾಯೆಯ ತೆರೆ ತೆರೆದು ಜ್ಞಾನದ ದೀಪ ಹಚ್ಚಿದಾಗ ಭಗವಂತನ ದರ್ಶನ ನಮಗಾಗುವುದು.

ದೊಡ್ಡ ವಸ್ತು ಚಿಕ್ಕ ವಸ್ತುವನ್ನು ಮರೆಮಾಡುವುದು ಲೋಕದಲ್ಲಿ ಸಾಮಾನ್ಯವಾಗಿ ಕಾಣುವ ಸಂಗತಿಯಾದರೂ ಒಮ್ಮೊಮ್ಮೆ ಚಿಕ್ಕ ವಸ್ತುವು ದೊಡ್ಡ ವಸ್ತುವನ್ನು ಮರೆ ಮಾಡುವುದುಂಟು.
ಗಗನದಲ್ಲಿ ಬಹು ದೊಡ್ಡ ತೇಜೋರಾಶಿಯಾಗಿ ಬೆಳಗುವ ಸೂರ್ಯನನ್ನು ಚಿಕ್ಕ ಮೋಡವೊಂದು ಮರೆ ಮಾಡುವುದಿಲ್ಲವೇ? ಕಣ್ಣಿಗೆ ಅಡ್ಡವಾಗಿ ಇಟ್ಟ ಕಿರಿಬೆರಳು ದೊಡ್ಡ ಬೆಟ್ಟವನ್ನು ಮರೆ ಮಾಡುವುದಿಲ್ಲವೇ? ತೀರದ ಸನಿಹದಲ್ಲಿದ್ದ ಮೇಲೆದ್ದ ತೆರೆಯೊಂದು ತನ್ನ ಹಿಂದಿನ ವಿಶಾಲ ಕಡಲನ್ನು ಮರೆ ಮಾಡುವುದಿಲ್ಲವೇ? ಹಾಗೆಯೇ ಭಗವಂತನಿಗಿಂತ ಕಿರಿದಾದರೂ ಎಲ್ಲಕ್ಕಿಂತ ದೊಡ್ಡ ವಸ್ತು ಎನಿಸಿದ ಭಗವಂತನನ್ನೇ ಮರೆ ಮಾಡುವ ಶಕ್ತಿ ಮಾಯೆಗಿದೆ.
ಮಾಯೆಯ ತೆರೆಯನ್ನು ಕಡಲಿನ ತೆರೆಗೆ ಹೋಲಿಸಬಹುದು. ತೆರೆ, ಕಡಲಿನ ಒಂದಂಶವೇ ಆಗಿದ್ದುಗೊಂಡು; ಕಡಲಿನಲ್ಲಿಯೇ ಜನಿಸಿ; ಕಡಲಿನಲ್ಲಿಯೇ ನೆಲೆಸಿ; ಕಡಲಿನಲ್ಲಿಯೇ ತನ್ನ ವಿಲಾಸಗಳನ್ನು ತೋರಿಸಿ; ಕೊನೆಗೆ ಕಡಲಿನಲ್ಲಿಯೇ ಒಂದಾಗುವುದು. ಹಾಗೆ ಮಾಯೆ ಕೂಡಾ ಭಗವಂತನ ಒಂದಂಶವೇ ಆಗಿದ್ದುಗೊಂಡು; ಭಗವಂತನಿಂದಲೇ ಜನಿಸಿ; ಅವನಲ್ಲಿಯೇ ನೆಲೆಸಿ; ತನ್ನ ಲೀಲಾವಿಲಾಸಗಳನ್ನು ಅವನ ಆಸರೆಯಲ್ಲಿಯೇ ತೋರಿಸಿ ಕೊನೆಗೆ ಭಗವಂತನಲ್ಲಿಯೇ ಒಂದಾಗುವುದು.

ನಾಟಕಗಳಲ್ಲಿ ತೆರೆಗೆ ಪ್ರಾಮುಖ್ಯವಿರುವಂತೆ ಜೀವನ ನಾಟಕದಲ್ಲಿಯೂ ಮಾಯೆಯ ತೆರೆಗೆ ಪ್ರಧಾನ ಸ್ಥಾನವಿದೆ. ನಾಟಕಗಳು ತೆರೆ ಸರಿದಾಗ ಆರಂಭವಾಗುತ್ತವೆ, ತೆರೆ ಬಿದ್ದಾಗ ಮುಕ್ತಾಯವಾಗುತ್ತದೆ. ಆದರೆ ಜೀವನ ನಾಟಕವು ಮಾಯೆಯ ತೆರೆ ಭಗವಂತನನ್ನು ಮರೆ ಮಾಡಿದೊಡನೆ ಆರಂಭಗೊಂಡು, ಆ ತೆರೆ ಸರಿದು ಭಗವಂತನ ದರ್ಶನವಾದೊಡನೆ ಮುಕ್ತಾಯಗೊಳ್ಳುವುದು.

ಜೀವನದ ನಾಟಕದ ಮುಕ್ತಾಯವೇ ಮುಕ್ತಿ. ಮುಕ್ತಿ ಲಭಿಸಲು ಮಾಯೆಯ ತೆರೆಯನ್ನು ಸರಿಸಬಲ್ಲ ಗುರುವೊಬ್ಬ ಲಭಿಸಬೇಕು. ಆ ಗುರು ಮಾಯೆಯನ್ನು ಗೆದ್ದವನಾಗಿರಬೇಕು. ಗುರುವಿಗೂ ಸಾಮಾನ್ಯನಿಗೂ ಇರುವ ಅಂತರವೆಂದರೆ-

ಸಾಮಾನ್ಯರನ್ನು ತನ್ನ ಅಧೀನದಲ್ಲಿಟ್ಟುಕೊಂಡು ಆಡಿಸುವ ಮಾಯೆ, ಗುರುವಿನ ಮುಂದೆ ತನ್ನ ಯಾವ ಆಟವನ್ನೂ ತೋರಿಸದೇ ಗುರುವಿಗೆ ಅಧೀನಳಾಗಿರುತ್ತಾಳೆ, ಅಂಥ ಗುರುವಿಗಾಗಿ ಅಂತರಂಗದ ಕಣ್ಣನ್ನು ತೆರೆದು ಕಾಯೋಣವೇ?

~*~

Facebook Comments