“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 12: “ತೆಂಗಿನ’ಕಾಯಿ’ ಕಾಯುವುದು ಹೇಗೆ?”

ಸನ್ಯಾಸಿಗಳನ್ನು ಭೇಟಿ ಮಾಡುವಾಗ ತೆಂಗಿನಕಾಯಿಯನ್ನು ಅರ್ಪಿಸುವ ವಾಡಿಕೆಯಿದೆ. ಅರ್ಪಿಸಿದವರಿಗೆ ಅವರು ಪ್ರಸಾದದ ರೂಪದಲ್ಲಿ ಅದನ್ನೇ ಕೊಡುತ್ತಾರೆ. ಇದಕ್ಕೆ ವಿಶಿಷ್ಟವಾದ ಕಾರಣವಿದೆ. ತೆಂಗಿನಕಾಯಿಗೂ ಸನ್ಯಾಸಜೀವನಕ್ಕೂ ಹಲವು ರೀತಿಯ ಸಾಮ್ಯಗಳಿವೆ.

ತೆಂಗಿನಕಾಯಿಗೆ ಮೂರು ಕಣ್ಣುಗಳಿವೆ. ತ್ರಿಲೋಚನನೆನಿಸಿದ ಶಿವನಿಗೂ ಹಣೆಯ ಮೇಲೆ ಮೂರನೆಯ ಕಣ್ಣಿದೆ. ಸನ್ಯಾಸವೂ ಅರ್ಥಪೂರ್ಣವೆನಿಸಬೇಕಾದರೆ ಮೂರನೆಯ ಕಣ್ಣು ತೆರೆದಿರಬೇಕು. ಶಿವನಿಗೆ ಮೂರನೆಯ ಕಣ್ಣು ಇರುವ ಜಾಗವನ್ನು ಗಮನಿಸಿ. ಅದು ಹುಬ್ಬುಗಳಿಗಿಂತ ಮೇಲಿದೆ. ಮನುಷ್ಯನಿಗೆ ಕಣ್ಣು-ಕಿವಿ ಮೊದಲಾದ ಎಲ್ಲ ಜ್ಞಾನೇಂದ್ರಿಯಗಳು, ಕೈಕಾಲು ಮೊದಲಾದ ಎಲ್ಲ ಕರ್ಮೇಂದ್ರಿಯಗಳು, ದೇಹದ ಇತರ ಎಲ್ಲ ಅವಯವಗಳೂ ಇರುವುದು ಹುಬ್ಬಿನ ಕೆಳಭಾಗದಲ್ಲಿ, ಹುಬ್ಬಿಗಿಂತ ಮೇಲಕ್ಕೆ ಇರುವುದು ಸಮಗ್ರ ದೇಹಕ್ಕೆ ನಿಯಾಮಕವೆನಿಸಿದ, ನಮ್ಮೆಲ್ಲ ಅರಿವಿನ ಮೂಲ ಕೇಂದ್ರವೆನಿಸಿದ ಮೆದುಳು ಮಾತ್ರ. ಹಾಗೆಯೇ ಮನುಷ್ಯನ ಎಲ್ಲ ಐಚ್ಛಿಕ ಕ್ರಿಯೆಗಳಿರುವುದು ಹುಬ್ಬಿಗಿಂತ ಕೆಳಭಾಗದಲ್ಲಿ. ಹುಬ್ಬುಗಳಿಗಿಂತ ಮೇಲೆ ಐಚ್ಛಿಕ ಕ್ರಿಯೆಗಳಿಲ್ಲ. ಇರುವುದು ಕೇವಲ ಜ್ಞಾನ ಮಾತ್ರ. ಈ ಹಿನ್ನೆಲೆಯಲ್ಲಿ ಮನುಷ್ಯನ ದೇಹವನ್ನು ಎರಡಾಗಿ ವಿಭಾಗಿಸುವುದಾದರೆ, ಹುಬ್ಬಿನ ಕೆಳ ಭಾಗವನ್ನು ಕರ್ಮರಾಜ್ಯವೆನ್ನಬಹುದು ಅಥವಾ ಇಂದ್ರಿಯ ರಾಜ್ಯವೆನ್ನಬಹುದು; ಹುಬ್ಬಿನ ಮೇಲ್ಭಾಗವನ್ನು ಜ್ಞಾನರಾಜ್ಯವೆನ್ನಬಹುದು. ಹುಬ್ಬಿನ ಕೆಳಗೆ ಎಲ್ಲರಿಗೂ ಇರುವ ದೃಷ್ಟಿ ಇಂದ್ರಿಯ ದೃಷ್ಟಿ. ಹುಬ್ಬುಗಳ ಮೇಲಕ್ಕೆ ಮೆದುಳಿನ ನೇರಕ್ಕೆ ಜ್ಞಾನಿಗಳಿಗೆ ಮಾತ್ರವೇ ಇರುವ ದೃಷ್ಟಿಯೇ ಜ್ಞಾನ ದೃಷ್ಟಿ. ತಲೆಯನ್ನೊಮ್ಮೆ ನೇರವಾಗಿಟ್ಟುಕೊಂಡು ನಮ್ಮ ದೃಷ್ಟಿ ಸಹಜವಾಗಿ ಎತ್ತ ಹರಿಯುವುದೆಂಬುದನ್ನು ಗಮನಿಸಿ. ಅದು ಹುಬ್ಬಿನ ನೇರದಿಂದ ಕೆಳಗಿರುವ ಭುವಿಯ ವಸ್ತುಗಳನ್ನು ಮಾತ್ರ ನೋಡುವುದು. ಮೂರನೆಯ ಕಣ್ಣು ಹಾಗಲ್ಲ. ಅದು ಕೇವಲ ದಿವಿಯ ದೇವನತ್ತಲೇ ನೆಟ್ಟಿರುವ ದಿವಿಯ ದೃಷ್ಟಿ ಅಥವಾ ದಿವ್ಯ ದೃಷ್ಟಿ.
ಜ್ಞಾನಿಯ ಮೂರನೆಯ ಜ್ಞಾನದ ಕಣ್ಣು ಅವನ ಸಂಸಾರವನ್ನೆಲ್ಲ ಕಳೆದರೆ ಉಳಿಯುವುದು “ನಾನೆಂಬುದೊಂದು” ಮಾತ್ರ.

ತೆಂಗಿನ ಕಾಯಿಗೂ ಸನ್ಯಾಸಕ್ಕೂ ಇರುವ ಸಾಮ್ಯವನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಸಿಪ್ಪೆ-ಚಿಪ್ಪುಗಳಿಂದ ಕೂಡಿದ ತೆಂಗಿನಕಾಯಿಯ ಹೊರಪದರ ರಸಹೀನ ಮತ್ತು ಕಠಿಣ. ಅದರಲ್ಲಿ ಯಾವ ಸವಿಯೂ ಇಲ್ಲ. ಅದರ ಚಿಪ್ಪನ್ನು ಭೇದಿಸಿ ಒಳಹೋದರೆ ಅಲ್ಲಿ ಮಧುರವಾದ ತಿರುಳಿದೆ. ದಾಹವನ್ನಿಂಗಿಸುವ ಸವಿಯಾದ ರಸವಿದೆ. ಪ್ರಾಪಂಚಿಕ ಸುಖಗಳಿಂದ ದೂರವಿರುವ ಸಂನ್ಯಾಸಿಗಳ ಬಾಹ್ಯಜೀವನ ರಸಹೀನ, ಕಠಿಣ.
ಭೋಗಿಗಳ ದೃಷ್ಟಿಯಿಂದ ಅದು ನಿಸ್ಸಾರ. ಆದರೆ ಧ್ಯಾನಮಗ್ನರಾಗಿ ಅಂತರಂಗದಲ್ಲಿ ಆನಂದ ಸಮುದ್ರವನ್ನೇ ಕಾಣುವ ಅವರ ಅಂತರ್ಜೀವನ ಅತ್ಯಂತ ಮೃದು-ಮಧುರ-ರಸಪೂರ್ಣ. ತೆಂಗಿನಕಾಯಿ ಪೂರ್ತಿ ಪಕ್ವವಾದಾಗ ಕೊಬ್ಬರಿಯೆನಿಸುತ್ತದೆ. ಆಗ ಅದು ಚಿಪ್ಪಿನೊಳಗೇ ಇದ್ದರೂ ಚಿಪ್ಪಿಗೆ ಅಂಟಿಕೊಳ್ಳದೇ ಅಲಿಪ್ತವಾಗಿರುತ್ತದೆ. ಸನ್ಯಾಸಿ ತನ್ನ ಪರಿಪೂರ್ಣಾವಸ್ಥೆಯಲ್ಲಿ ಸಂಸಾರದೊಡನೆ ಅಂಟನ್ನು ಕಳೆದುಕೊಳ್ಳುತ್ತಾನೆ. ನೀರಿನಲ್ಲಿ ಮುಳುಗಿದ್ದರೂ ಒದ್ದೆಯಾಗದ ತಾವರೆಯಂತೆ, ಸಂಸಾರದಲ್ಲಿದ್ದರೂ ಇಲ್ಲದವನಂತೆ, ಪ್ರಾಪಂಚಿಕ ವಸ್ತುಗಳಿಂದ ಅಲಿಪ್ತನಾಗಿರುತ್ತಾನೆ. ಸನ್ಯಾಸಿಯಾಗಲು ಜಗತ್ತನ್ನೇ ತ್ಯಜಿಸಬೇಕಾಗಿಲ್ಲ. ಚಿಪ್ಪಿನೊಳಗಿನ ಕೊಬ್ಬರಿಯಂತೆ ಜಗತ್ತಿನ ಸಂಗವನ್ನು ಮಾತ್ರ ತ್ಯಜಿಸಿದರೆ ಸಾಕು.

ಈ ಭಾವದೊಡನೆ-

ಸಂನ್ಯಾಸಿಗಳಿಗೆ ಅರ್ಪಿಸಿ ಪಡೆದ ತೆಂಗಿನ “ಕಾಯಿ” ನಮ್ಮನ್ನು ಕಾಯುವುದರಲ್ಲಿ ಸಂಶಯವಿಲ್ಲ.

~*~

Facebook Comments