“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 20: ಸ್ಮರಣೆಯೊಂದೇ ಸಾಲದೇ
ಭಗವಂತನ ದಿವ್ಯಮಂಗಲ ವಿಗ್ರಹ ಒಮ್ಮೆ ನಮ್ಮ ಹೃದಯದಲ್ಲಿ ಹಾದು ಹೋದರೆ ಎಂತಹ ಪರಿವರ್ತನೆಯನ್ನು ನಮ್ಮಲ್ಲಿ ತರಬಲ್ಲುದೆಂಬುದಕ್ಕೆ ರಾಮಾಯಣದ ಒಂದು ಉದಾಹರಣೆ ಇಲ್ಲಿದೆ.
ರಾಮನಿಲ್ಲದ ಸಮಯ ಸಾಧಿಸಿ ರಾವಣ ಪಂಚವಟಿಯಿಂದ ಸೀತೆಯನ್ನು ಕದ್ದೊಯ್ದು ಲಂಕೆಯ ಅಶೋಕವನದಲ್ಲಿರಿಸಿದ. ರಾಮನನ್ನು ಕಳೆದುಕೊಂಡರೂ ರಾಮನ ಮೇಲಿನ ಪ್ರೇಮವನ್ನು ಕಳೆದುಕೊಳ್ಳದ ಸೀತೆಯನ್ನು ತನ್ನವಳಾಗಿಸಿಕೊಳ್ಳಬೇಕೆಂದು ಬಯಸಿದ ರಾವಣನ ಸೇವಕಿಯರು ಬಲಾತ್ಕಾರವಾಗಿ ಸೀತೆಯನ್ನು ಕರೆದೊಯ್ದು ರಾವಣನ ಕನಕಲಂಕೆಯ ವೈಭವವನ್ನೆಲ್ಲಾ ತೋರಿಸಿದರು. ಸೀತೆಯ ಮುಂದೆ ಮುತ್ತು-ರತ್ನಗಳ, ವಸ್ತ್ರ-ಒಡವೆಗಳ ರಾಶಿಯನ್ನೇ ಸುರಿಸಲಾಯಿತು. ಏಳುಸಾವಿರ ಸ್ತ್ರೀಯರಿಂದ ಕೂಡಿದ ರಾವಣನ ಅಂತಃಪುರಕ್ಕೆ ನಾಯಕಿಯಾಗುವ ಆಮಿಷವನ್ನೊಡ್ದಲಾಯಿತು. ರಾವಣ ತನ್ನ ವಶದಲ್ಲಿದ್ದ ಅದೆಷ್ಟೋ ರಾಜ್ಯಕೋಶಗಳ-ಲೋಕಗಳ ಒಡತಿಯಾಗಿಸುವ ಪ್ರಲೋಭನೆಯನ್ನೊಡ್ಡಿದ. ಕೊನೆಗೆ ಅವಳೊಲಿದರೆ ತಾನೇ ಅವಳ ಚರಣದಾಸನಾಗುವುದಾಗಿ ಬೇಡಿದ. ಸೀತೆ ರಾಮನಲ್ಲಿಯೇ ನೆಟ್ಟಿದ್ದ ತನ್ನ ಮನಸ್ಸನ್ನು ಕದಲಿಸಲಿಲ್ಲ. ರಾವಣನ ಪ್ರಲೋಭನೆಗಳಿಗೆ ಒಳಗಾಗಲಿಲ್ಲ. ಆಗ ರಾವಣನ ಪ್ರೇರಣೆಯಂತೆ ರಾಕ್ಷಸಿಯರು ಸೀತೆಯನ್ನು ಬಗೆ ಬಗೆಯಾಗಿ ಪೀಡಿಸಿದರು. ತಮ್ಮ ಕ್ರೂರವಾದ ನಡೆ-ನುಡಿಗಳಿಂದ ಸೀತೆಯ ಮನಸ್ಸನ್ನು ಘಾಸಿಗೊಳಿಸಿದರು. ಕೊನೆಗೆ ರಾವಣನ ಬೆಳಗಿನ ತಿಂಡಿಗಾಗಿ ಸೀತೆಯನ್ನು ಕೊಲ್ಲಲು ಗಡುವು ಸಹ ನಿಶ್ಚಿತವಾಯಿತು. ಸೀತೆ ಜಗ್ಗಲಿಲ್ಲ. ಆಗ ಆಪ್ತ ಸಚಿವನೊಬ್ಬ ರಾವಣನಿಗೆ ಸಲಹೆ ಕೊಟ್ಟನಂತೆ.
” ಪ್ರಭುವೇ!, ಸೀತೆಗೆ ರಾಮನ ಮೇಲೆ ಅಮಿತವಾದ ಪ್ರೇಮವಿದೆ. ನೀನೋ ಬೇಕಾದ ರೂಪಗಳನ್ನು ಧರಿಸುವ ಮಾಯಾವಿದ್ಯೆಗಳನ್ನು ಬಲ್ಲವ. ಯಾಕೆ ಒಮೆ ರಾಮನ ರೂಪಧರಿಸಿ ಸೀತೆಯ ಬಳಿ ಸುಳಿಯಬಾರದು?” ರಾವಣ ಉತ್ತರಿಸಿದ-
” ಈ ಯೋಚನೆ ಬಹಳ ಹಿಂದೆಯೇ ನನಗೆ ಬಂದಿತ್ತು. ಆ ದಿಸೆಯಲ್ಲಿ ಕಾರ್ಯೋನ್ಮುಖನಾದೆ ಕೂಡ. ಸೀತೆಯನ್ನು ಒಲಿಸಲೋಸುಗ ರಾಮನ ರೂಪವನ್ನು ಧರಿಸಬೇಕೆಂದು ಒಮ್ಮೆ ಅಡಿಯಿಂದ ಮುಡಿಯವರೆಗೆ ರಾಮನ ರೂಪವನ್ನು ಮನಸ್ಸಿನಲ್ಲಿಟ್ಟುಕೊಂಡೆ. ಮರು ನಿಮಿಶದಲ್ಲಿ ಸೀತೆಯನ್ನು ವಶಪಡಿಸಿಕೊಳ್ಳಬೇಕೆನ್ನುವ ಯೋಚನೆಯೇ ಮನಸ್ಸಿನಿಂದ ದೂರವಾಯಿತು. ಉದಾತ್ತವಾದ, ಧರ್ಮಪರವಾದ ಭಾವಗಳು ಮನಸ್ಸಿನಲ್ಲಿ ಆಡತೊಡಗಿದವು. ಹಾಗಾಗಿ ಆ ಉಪಾಯವನ್ನು ಕೈಬಿಡಬೇಕಾಯಿತು”.
ದುರ್ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡ ರಾವಣನಂಥಾ ರಾಕ್ಷಸ ಕಪಟ ಉದ್ದೇಶದಿಂದ ಒಂದು ಕ್ಷಣ ರಾಮನ ರೂಪವನ್ನು ಸ್ಮರಿಸಿದರೆ ಒಮ್ಮೆ ಅವನ ಮನಸ್ಸಿನ ಸ್ವಭಾವವೇ ಬದಲಾಯಿತು. ರಜೋಗುಣ-ತಮೋಗುಣಗಳಿಂದ ತುಂಬಿ ತುಳುಕುತ್ತಿದ್ದ ಅವನ ಅಂತರಂಗದಲ್ಲಿ ಸತ್ವಗುಣದ ತರಂಗಗಳೆದ್ದವು. ಹಾಗಿರುವಾಗ ಜೀವಿ ನಿರಂತರವಾಗಿ ರಾಮನ ದಿವ್ಯಮಂಗಲ ವಿಗ್ರಹವನ್ನು ಹೃದಯದಲ್ಲಿ ಧರಿಸಿದರೆ ವೈಕುಂಠವನ್ನೇ ಧರೆಗಿಳಿಸಬಹುದಲ್ಲವೇ?

ಕಲೌ ಕೃತಯುಗಂ ತಸ್ಯ ಕಲಿಸ್ತಸ್ಯ ಕೃತೇಯುಗೇ |
ಹೃದಯೇ ಯಸ್ಯ ಗೋವಿಂದಃ ಹೃದಯೇ ಯಸ್ಯ ನಾಚ್ಯುತಃ||

ಯಾರ ಹೃದಯದಲ್ಲಿ ಗೋವಿಂದನಿರುವನೋ ಅವನಿಗೆ ಕಲಿಯುಗವೂ ಕೃತಯುಗವೇ ಆಗುವುದು. ಯಾರ ಹೃದಯದಿಂದ ಅಚ್ಯುತನು ಚ್ಯುತನಾಗುವನೋ ಅವನ ಪಾಲಿಗೆ ಕೃತಯುಗವೂ ಕಲಿಯುಗವೇ ಆಗುವುದು.

~*~

Facebook Comments