ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 24:ಆಸೆಗೆ ಮುಪ್ಪಿಲ್ಲ
ಆಕೆ ಹಣ್ಣು ಹಣ್ಣು ಮುದುಕಿ. ತನ್ನವರೆಂಬುವವರು ಯಾರೂ ಇಲ್ಲದ ಅನಾಥೆ. ಹೊಟ್ಟೆಪಾಡಿಗಾಗಿ ಕಾಡಿಗೆ ಹೋಗಿ ಕಟ್ಟಿಗೆ ಸಂಗ್ರಹಿಸಿ ಮಾರಿ ಜೀವಿಕೆ ನಡೆಸುತ್ತಿದ್ದಳು.
ಒಂದು ದಿನ ನಡು ಮದ್ಯಾಹ್ನದ ಸಮಯ. ಮುಪ್ಪಿನಿಂದಲೂ, ದೇಹಶ್ರಮದಿಂದಲೂ ಬಸವಳಿದಿದ್ದ ಮುದುಕಿಗೆ ಬಿಸಿಲಿನ ಬೇಗೆಯನ್ನು ತಾಳಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಗ್ರಹಿಸಿದ ಕಟ್ಟಿಗೆ ಹೊರೆಯನ್ನು ತಲೆಯ ಮೇಲಿಟ್ಟುಕೊಳ್ಳುವ ಪ್ರಯತ್ನದಲ್ಲಿ ವಿಫಲಳಾಗಿ ಮುದುಕಿ ಕೆಳಗುರುಳಿ ಬಿದ್ದುಬಿಟ್ಟಳು. ಜೀವನದಲ್ಲಿ ಸಾಕಷ್ಟು ಆಘಾತಗಳನ್ನು ಕಂಡಿದ್ದ ಮುದುಕಿಗೆ ಆಗ ಎಲ್ಲಿಲ್ಲದ ಬೇಸರ ಉಂಟಾಯಿತು. ಜೀವನದ ಮೇಲೆಯೇ ಜಿಗುಪ್ಸೆಗೊಂಡ ಮುದುಕಿಗೆ ಹೀಗೆ ಕ್ಷಣ-ಕ್ಷಣಕ್ಕೂ ಸಾಯುತ್ತಾ ಬದುಕುವುದರ ಬದಲು ಒಮ್ಮೆಲೇ ಸಾವು ಬರಬಾರದೇ? ಎನಿಸಿತು. ಮುದುಕಿ ಜೋರಾಗಿ ಉದ್ಘರಿಸಿದಳು.” ಎಲೈ ಮೃತ್ಯುದೇವತೆಯೇ! ಇಲ್ಲಿಗೆ ಬಂದು ನನ್ನನ್ನು ತೆಗೆದುಕೊಂಡು ಹೋಗಬಾರದೇ? ” ಸರಿಯಾಗಿ ಅದೇ ಸಮಯದಲ್ಲಿ ಆಕಾಶಮಾರ್ಗದಲ್ಲಿ ಕಾಡಿನ ಮೇಲ್ಭಾಗವನ್ನು ಹಾದು ಹೋಗುತ್ತಿದ್ದ ಮೃತ್ಯುದೇವತೆಗೆ ಮುದುಕಿಯ ಉದ್ಘಾರ ಕೇಳಿಸಿತು. ” ಹೀಗೆ ಮೃತ್ಯುವನ್ನು ಆಹ್ವಾನಿಸುವವರೂ ಉಂಟೇ!” ಎಂದು ಅಚ್ಚರಿಗೊಂಡ ಮೃತ್ಯುದೇವ ಕೂಡಲೇ ಕೆಳಗಿಳಿದು ಬಂದ. ಮುದುಕಿಯನ್ನು ಸಮೀಪಿಸಿ ಕೇಳಿದ. “ಅಜ್ಜಿ, ನನ್ನನ್ನು ಕರೆದೆಯಾ?” ಅಷ್ಟು ಹೊತ್ತಿಗಾಗಲೇ ಸ್ವಲ್ಪ ಸಾವರಿಸಿಕೊಂಡಿದ್ದ ಮುದುಕಿ ಹೇಳಿದಳು “ಈ ಕಟ್ಟಿಗೆ ಹೊರೆಯನ್ನು ಎತ್ತಿ ಸ್ವಲ್ಪ ನನ್ನ ತಲೆಯ ಮೇಲಿಡಬೇಕಿತ್ತು.”

ಜೀರ್ಯಂತಿ ಜೀರ್ಯತಃ ಕೇಶಾಃ ದಂತಾ ಜೀರ್ಯಂತಿ ಜೀರ್ಯತಃ |
ಧನಾಶಾ ಜೀವಿತಾಶಾ ಚ ಜೀರ್ಯತೋಪಿ ನ ಜೀರ್ಯತಿ ||

ಮುಪ್ಪು ಕೂದಲಿಗೆ ಬರುತ್ತದೆ. ಹಲ್ಲುಗಳಿಗೆ ಬರುತ್ತದೆ. ಇಂದ್ರಿಯಗಳಿಗೆ ಮುಪ್ಪು ಬರುತ್ತದೆ. ಆದರೆ ಆಸೆಗೆ ಮಾತ್ರ ಎಂದೂ ಮುಪ್ಪು ಬರುವುದಿಲ್ಲ. ಸಾವಿನ ಬಾಯಲ್ಲಿರುವ ಕಪ್ಪೆಯೂ ಬಳಿಯಲ್ಲಿ ಹಾರಾಡುವ ಕೀಟದೆಡೆಗೆ ಆಸೆಯಿಂದ ನಾಲಿಗೆ ಚಾಚುತ್ತದೆ. ಮುಪ್ಪು ಬಂದಿದ್ದು ಮುದುಕಿಯ ದೇಹಕ್ಕೇ ಹೊರತು ಅವಳ ಬದುಕು ಆಸೆಗಾಗಿರಲಿಲ್ಲ. ಆಸೆಯನ್ನು ಜ್ಞಾನಿಗಳು ದುಃಖದ ಮೂಲವೆಂದರು. ಮನುಷ್ಯನಿಗೆ ಬಯಸುವ ಅವಕಾಶ ಮಾತ್ರ ಇದೆ. ಬಯಸಿದ್ದನ್ನೆಲ್ಲಾ ಪಡೆಯುವ ಅವಕಾಶವಿಲ್ಲ. ಬಯಕೆ ಮತ್ತು ಪೂರೈಕೆಗಳ ಮಧ್ಯೆ ಯಾವಾಗ ಅಂತರವಿರುತ್ತದೆಯೋ ಆಗ ಮನುಷ್ಯ ದುಃಖಿಯಾಗುತ್ತಾನೆ. ಹಲವು ಬಾರಿ ತನ್ನ ಬಯಕೆ ಈಡೇರಿಕೆ ಇನ್ನೊಬ್ಬರ ದುಃಖಕ್ಕೆ ಕಾರಣವಾಗಬಹುದು. ಜಗತ್ತಿನಲ್ಲಿ ನಡೆಯುವ ಎಲ್ಲಾ ದುಷ್ಕೃತ್ಯಗಳ ಹಿಂದೆ ಯಾವುದೋ ಸಲ್ಲದ ಬಯಕೆ ಇರುತ್ತದೆ. ಆಸೆ ಮನುಷ್ಯನನ್ನು ಬಂಧನಕ್ಕೀಡು ಮಾಡುವ ಸರಪಳಿ. ಎಲ್ಲಾ ಸರಪಳಿಯಂತಲ್ಲ ಈ ಆಸೆಯ ಸರಪಳಿ. ಲೋಕದಲ್ಲಿ ನಾವು ನೋಡುವ ಸರಪಳಿಯಿಂದ ಬಂಧಿಸಲ್ಪಟ್ಟವನು ನಿಷ್ಕ್ರಿಯನಾಗುತ್ತಾನೆ. ಸರಪಳಿಯಿಂದ ಬಿಡುಗಡೆಯಾದವನು ಓಡತೊಡಗುತ್ತಾನೆ. ಆದರೆ ಆಸೆಯ ಸರಪಳಿ ಯಾರನ್ನು ಬಂಧಿಸುತ್ತದೆಯೋ ಅವನು ಆಸೆಯ ಪೂರೈಕೆಗಾಗಿ ವಿಷಯಗಳ ಹಿಂದೆ ಓಡತೊಡಗುತ್ತಾನೆ. ಆದರೆ ಆಸೆಯ ಸರಪಳಿಯನ್ನು ಹರಿದೊಗೆದ ಧೀರ ಎಲ್ಲಿಯೂ ಓಡುವುದಿಲ್ಲ. ಆನಂದ ತನ್ನಲ್ಲೇ ತುಂಬಿರುವಾಗ ಎಲ್ಲಿಗೆ ತಾನೇ ಓಡಬೇಕು? ಯಾಕೆ ತಾನೇ ಓದಬೇಕು? ತನ್ನೊಳಗೆ ತಾನೇ ಆನಂದವನ್ನನುಭವಿಸುತ್ತಾ ಶಾಂತನಾಗುತ್ತಾನೆ. ಅಚಲನಾಗುತ್ತಾನೆ.
ಆಸೆಯ ಸರಪಳಿಯನ್ನು ಹರಿದೊಗೆದು ಸ್ಥಿಮಿತಗಂಭೀರವಾದ ಅಂತರಂಗವನ್ನು ಹೊಂದೋಣವೇ?

~*~

Facebook Comments Box