LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಧರ್ಮಜ್ಯೋತಿ 25: “ಮುಪ್ಪಲ್ಲ; ಸಾವಿನ ಸೂಚನೆ”

Author: ; Published On: ರವಿವಾರ, ಮಾರ್ಚ 24th, 2013;

Switch to language: ಕನ್ನಡ | English | हिंदी         Shortlink:

ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 25: ಮುಪ್ಪಲ್ಲ; ಸಾವಿನ ಸೂಚನೆ

ದೇವದತ್ತನಿಗೆ ಆಕಸ್ಮಿಕವಾಗಿ ಒಮ್ಮೆ ಯಮಕಿಂಕರನೊಬ್ಬನ ಪರಿಚಯವಾಯಿತು. ಉಭಯ ಕುಶಲೋಪರಿಯ ನಂತರ ಇಬ್ಬರ ನಡುವೆ ಸಾಕಷ್ಟು ಸಮಯ ಸಂಭಾಷಣೆ ನಡೆಯಿತು. ಪರಿಚಯ ಮೈತ್ರಿಗೆ ತಿರುಗಿತು. ಕೊನೆಗೆ, ಬೀಳ್ಕೊಡುವ ಮುನ್ನ ಯಮಕಿಂಕರ ದೇವದತ್ತನಿಗೆ ಹೇಳಿದ ” ಗೆಳೆಯ, ನಾನಿನ್ನು ಹೊರಡುವ ಸಮಯ ಬಂತು. ಹೊರಡುವ ಮುನ್ನ ನಿನ್ನ ಯಾವುದಾದರೂ ಮನದಿಷ್ಟವನ್ನು ಈದೇರಿಸಬಯಸಿದ್ದೇನೆ. ನನ್ನಿಂದ ಏನಾಗಬೇಕೆಂದು ಹೇಳುವೆಯಾ?” ದೇವದತ್ತ ಸ್ವಲ್ಪ ಹೊತ್ತು ಚಿಂತಿಸಿ ಅನಂತರ ತನ್ನ ಕೇಳಿಕೆಯನ್ನು ಯಮಲೋಕದ ಗೆಳೆಯನ ಮುಂದಿಟ್ಟ- ” ಮಿತ್ರ, ನೀನು ಯಮಲೋಕದವನಾಗಿದ್ದರಿಂದ ಜೀವಿಗಳ ಸಾವಿನ ಸಮಯವನ್ನು ಸಾಕಷ್ಟು ಮೊದಲೇ ಅರಿಯಬಲ್ಲೆ. ನನ್ನ ಸಾವಿನ ಸಮಯವನ್ನು ಮೊದಲೇ ನೀನರಿತು ಸೂಚಿಸಿದರೆ ಬಹು ದೊಡ್ಡ ಉಪಕಾರವಾದೀತು. ಉಳಿದಿರುವ ಜೀವನದ ಕರ್ತವ್ಯಗಳನ್ನು ನಾವು ಬೇಗನೆ ಮುಗಿಸಿಕೊಂಡೇನು.” ಯಮಕಿಂಕರ ಅಂಗೀಕಾರ ಸೂಚಿಸಿದ ಅನಂತರ ಇಬ್ಬರೂ ಪರಸ್ಪರ ಬೀಳ್ಕೊಂಡರು.

ಇದಾದ ಅನಂತರ ಪರಸ್ಪರರ ಭೇಟಿಯಿಲ್ಲದೇ ಸಾಕಷ್ಟು ಸಮಯ ಕಳಿಯಿತು. ಯಮಕಿಂಕರನಿಂದ ಯಾವ ಸೂಚನೆಯೂ ಬರದೆಯೇ ದೇವದತ್ತ ವೃದ್ಧನಾದ. ಇಹಲೋಕವನ್ನು ಬೀಳ್ಕೊಡುವ ದಿನವೂ ಸನ್ನಿಹಿತವಾಯಿತು. ದೇವದತ್ತನನ್ನು ಯಮಲೋಕಕ್ಕೆ ಕೊಂಡೊಯ್ಯಲು ಅವನ ಮಿತ್ರನಾಗಿದ್ದ ಯಮಕಿಂಕರನೇ ಆಗಮಿಸಿದ. ದೇವದತ್ತನಿಗೆ ಆಶ್ಚರ್ಯಾಘಾತಗಳು ಒಮ್ಮೆಲೇ ಉಂಟಾದವು. ನೋವು-ಭಯಗಳಿಂದ ಕಂಪಿಸುವ ಸ್ವರದಲ್ಲಿ ಯಮಕಿಂಕರನನ್ನು ಪ್ರಶ್ನಿಸಿದ-” ಗೆಳೆಯ, ಇದೆಂತಹ ವಿಶ್ವಾಸಘಾತ! ಸಾವಿಗೆ ಪೂರ್ವಭಾವಿಯಾಗಿ ನೀನು ಸೂಚನೆಗಳನ್ನು ಕೊಡುವೆಯೆಂದು ನಂಬಿ ನಾನು ನಿಶ್ಚಿಂತನಾಗಿದ್ದೆ. ಆದರೆ ಯಾವ ಸೂಚನೆಯನ್ನೂ ನೀಡದೆ ನೀನು ಹೀಗೆ ಮಿತ್ರದ್ರೋಹವೆಸಗಬಹುದೇ?” ಯಮಕಿಂಕರ ಶಾಂತಸ್ವರದಲ್ಲೇ ಉತ್ತರಿಸಿದ-
” ಮಿತ್ರ, ನನ್ನಿಂದ ವಚನಭಂಗವಾಗಲಿಲ್ಲ. ಸಾವು ಹತ್ತಿರವಾಯಿತೆಂಬುದನ್ನು ನಿನಗೆ ತಿಳಿಯಪಡಿಸುವ ಸಲುವಾಗಿ ಮೊದಲು ನಾನು ನಿನ್ನ ಕೂದಲನ್ನು ಹಣ್ಣಾಗಿಸಿದೆ. ಅದನ್ನು ಅರ್ಥಮಾಡಿಕೊಳ್ಳದೆ ನೀನು ಕೂದಲಿಗೆ ಬಣ್ಣ ಹಚ್ಚಿಕೊಂಡೆ. ಅನಂತರ ನಾನು ನಿನ್ನ ಕಣ್ಣುಗಳನ್ನು ಮಂಜಾಗಿಸಿದೆ. ಆದರೆ ನೀನು ಕನ್ನಡಕ ಧರಿಸಿದೆ. ಆಮೇಲೆ ನಾನು ನಿನ್ನ ಹಲ್ಲುಗಳನ್ನು ಬೀಳಿಸುವ ಮೂಲಕ ಪುನಃ ಸಾವಿನ ಸೂಚನೆ ನೀಡಿದೆ. ಆದರೆ ನೀನು ಕೃತಕ ಹಲ್ಲುಗಳನ್ನು ಧರಿಸಿದೆಯೇ ಹೊರತು ನನ್ನ ಸಂದೇಶವನ್ನು ಅರಿಯಲಿಲ್ಲ. ಹೀಗೆ ನಾನು ನಿನಗೆ ಹಲವು ರೀತಿಯಲ್ಲಿ ನಿರಂತರವಾಗಿ ಸೂಚನೆ ನೀಡುತ್ತಿದ್ದರೂ ನೀನದನ್ನು ಲಕ್ಷಿಸಲಿಲ್ಲ. ಮುಪ್ಪಿಗೆ ಯೌವನದ ವೇಷ ತೊಡಿಸಿ, ಮರಣವನ್ನು ಮರೆಯುವ ಪ್ರಯತ್ನ ಮಾಡಿದೆ. ಇನ್ನೇನು ತಾನೇ ಮಾಡಲು ಸಾಧ್ಯ ಹೇಳು?” ದೇವದತ್ತನಿಗೆ ಜ್ಞಾನೋದಯವಾಗಿತ್ತು. ಆದರೆ ಕಾಲ ಮಿಂಚಿತ್ತು.

ಜೀವಿತಾವಧಿ ಮುಗಿಯುತ್ತಿರುವಂತೆಯೇ, “ಗುರಿ ಸಾಧಿಸಲು ತ್ವರೆ ಮಾಡು” ಎಂದು ಜೀವಿಗೆ ದೇವರು ನೀಡುವ ಸಂದೇಶವೇ ಮುಪ್ಪು. ಇಂದ್ರಿಯ ಲಂಪಟನಾಗಿ ವಿಷಯಸುಖದಲ್ಲಿ ಮುಳುಗಿದ ಜೀವಿಯನ್ನು ಪ್ರಕೃತಿ ಮುಪ್ಪಿನ ಎಚ್ಚರಿಕೆಯ ಗಂಟೆಯ ಮೂಲಕ ಬಡಿದೆಬ್ಬಿಸಲೆತ್ನಿಸುತ್ತದೆ. ಪ್ರಕೃತಿ ಮುಪ್ಪಿನ ಮೂಲಕ ಬಾಹ್ಯೇಂದ್ರಿಯಗಳ ಮೂಲಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಇಷ್ಟು ದಿನವಂತೂ ಇಂದ್ರಿಯಸುಖದ ಬಾಳನ್ನು ಬಾಳಿದ್ದಾಯಿತು. ಇನ್ನಾದರೂ ಜೀವಿ ಎಚ್ಚರಗೊಳ್ಳಲಿ. ಅಂತರಂಗದಲ್ಲಿ ಇರುವ ಇಂದ್ರಿಯಾತೀತ ಸುಖವನ್ನು ಕಾಣಲೆತ್ನಿಸಲಿ ಎಂಬ ಮಾತೃಸಹಜವಾದ ವಾತ್ಸಲ್ಯ ಪ್ರಕೃತಿಯದ್ದು.

ಒಡೆದ ಗಡಿಗೆಯಿಂದ ಸುರಿದು ಹೋಗುವ ನೀರಿನಂತೆ ಆಯಸ್ಸು ನೋಡುನೋಡುತ್ತಿದ್ದಂತೆ ಕಳೆದು ಹೋಗುತ್ತಿರುವಾಗ ಉಳಿದ ಜೀವಿತಾವಧಿಯನ್ನಾದರೂ ನಿಜವಾದ ಗುರಿಸಾಧನೆಗೆ ವಿನಿಯೋಗಿಸಿ ಸಾರ್ಥಕಪಡಿಸಿಕೊಳ್ಳೋಣವೇ?

~*~

2 Responses to ಧರ್ಮಜ್ಯೋತಿ 25: “ಮುಪ್ಪಲ್ಲ; ಸಾವಿನ ಸೂಚನೆ”

 1. ಬಿ ಯಂ ಸುಬ್ಬಣ್ಣ ಭಟ್ಟ

  ಆಸೆಯೇ ದುಃಖಕ್ಕೆ ಮೂಲವೆಂಬುದು ಬುದ್ಧನ ಅಂಬೋಣ.ಸುಖವನ್ನು ಇನ್ನಷ್ಟು ಅನುಭವಿಸಬೇಕೆಂಬ ದುರಾಸೆಯೇ ಮುಪ್ಪನ್ನೂ ಮರೆಸುತ್ತದೆ. ಮುಂಚಿತವಾಗಿ ಜ್ಞಾನೋದಯವಾದರೇನೇ ನಿಜದ ಕಡೆಗೆ ನಡೆಯಬಹುದೆನಿಸುತ್ತದೆ.

  [Reply]

 2. dentistmava

  harerama.
  manava janmada naija uddesha atmodhara.edannu sadhisalu uthama gurugalannu namma balige kaluhisiddane prabhu shrirama.gurugala margadarshanadante nadedare namma baduku sarthakavaguvudu.
  harerama.

  [Reply]

Leave a Reply

Highslide for Wordpress Plugin