“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 31: ಹಣವೇ ಹಮ್ಮಿನ ಮೂಲ

ಪಂಚತಂತ್ರದಲ್ಲಿ ಬರುವ ಕಥೆಯಿದು. ಒಂದು ಊರಿನಲ್ಲಿ ಒಬ್ಬ ಸನ್ಯಾಸಿಯಿದ್ದ. ಪ್ರತಿದಿನ ಭಿಕ್ಷೆ ಬೇಡಿ ಉಣ್ಣುತ್ತಿದ್ದ ಅವನ ನೆಮ್ಮದಿಯನ್ನು ಇಲಿಯೊಂದು ಕದಡಿತು. ಸನ್ಯಾಸಿ ಭಿಕ್ಷೆ ತಂದಿಡುತ್ತಿದ್ದಂತೆ ಅದು ಯಾವ ಮಾಯದಲ್ಲೋ ಬಂದು ತಿಂದು ಬಿಡುತ್ತಿತ್ತು. ಕೊನೆಗೆ ಸನ್ಯಾಸಿ ಭಿಕ್ಷೆ ಇಲಿಗೆ ಸಿಗದಂತೆ ಎತ್ತರದಲ್ಲಿ ತೂಗು ಹಾಕಲು ತೊಡಗಿದ. ಸಮಸ್ಯೆ ಪರಿಹಾರವಾಗಲಿಲ್ಲ. ಇಲಿ ಎತ್ತರಕ್ಕೇರಿ ಭಿಕ್ಷೆ ತಿನ್ನತೊಡಗಿತು. ಎಲ್ಲ ಪ್ರಯತ್ನಗಳೂ ವಿಫಲವಾಗಿ ಸನ್ಯಾಸಿ ಕೈಚೆಲ್ಲಿ ಕುಳಿತಿರುವಾಗ ಮಿತ್ರನೊಬ್ಬ ಕುಟೀರಕ್ಕೆ ಆಗಮಿಸಿದ.

ಚಿಂತೆಯಲ್ಲಿ ಮುಳುಗಿದ್ದ ಗೆಳೆಯನನ್ನು ನೋಡಿ ಅಚ್ಚರಿಗೊಂಡು ಚಿಂತೆಯ ಕಾರಣವನ್ನು ವಿಚಾರಿಸಿದ. ಸನ್ಯಾಸಿ ಇಲಿಯಿಂದ ತನಗಾಗುತ್ತಿರುವ ಕಿರಿಕಿರಿಯನ್ನು ಹೇಳಿಕೊಂಡ. ಸನ್ಯಾಸಿಯ ಮಿತ್ರ ಇಲಿಗಳನ್ನು ನೋಡಿದ್ದ. ಆದರೆ ಹಾರಬಲ್ಲ ಇಲಿಯನ್ನು ನೋಡಿರಲಿಲ್ಲ. ಇಲಿಯ ಹಾರುವ ಸಾಮರ್ಥ್ಯಕ್ಕೆ ಮೂಲವೇನಿರಬಹುದೆಂದು ಮನದಲ್ಲಿಯೇ ತರ್ಕಿಸಿ ಇಲಿಯ ಬಿಲವನ್ನು ಅಗೆಯತೊಡಗಿದ. ಕುತೂಹಲದಿಂದ ವೀಕ್ಷಿಸುತ್ತಿದ್ದ ಸನ್ಯಾಸಿಗೆ ಆಶ್ಚರ್ಯ ಕಾದಿತ್ತು. ಬಿಲದಲ್ಲಿ ಒಂದು ಹಣದ ಗಂಟಿತ್ತು. ಹಣದ ಗಂಟನ್ನು ತೆಗೆದಿರಿಸಿ ಮಿತ್ರ ಸನ್ಯಾಸಿಗೆ ಹೇಳಿದ – “ನೋಡು ಈ ಹಣದ ಗಂಟೇ ಇಲಿಯ ಹಾರುವ ಸಾಮರ್ಥ್ಯದ ಮೂಲ. ನೀನು ನಿಶ್ಚಿಂತೆಯಿಂದಿರು. ಆ ಇಲಿ ಇನ್ನೆಂದಿಗೂ ಹಾರದು.” ಅನಂತರ ಸನ್ಯಾಸಿ ಎಂದಿನಂತೆ ತಾನು ಬೇಡಿ ತಂದ ಭಿಕ್ಷೆಯನ್ನು ಎತ್ತರದಲ್ಲಿ ತೂಗು ಹಾಕಿದ. ಸ್ವಲ್ಪ ಹೊತ್ತಿನಲ್ಲಿಯೇ ಭಿಕ್ಷೆಯನ್ನು ತಿನ್ನಲು ಇಲಿ ಬಂದಿತು. ಆದರೆ ಅದು ಎಂದಿನ ವಿಶ್ವಾಸದಲ್ಲಿರಲಿಲ್ಲ. ಸನ್ಯಾಸಿ ಮತ್ತು ಮಿತ್ರ ನೋಡುತ್ತಿದ್ದಂತೆಯೇ ಭಿಕ್ಷೆಯನ್ನು ತಿನ್ನುವ ಸಲುವಾಗಿ ಹಾರಲೆತ್ನಿಸಿತು. ವಿಚಿತ್ರವೆಂದರೆ ಪ್ರತಿದಿನ ಲೀಲಾಜಾಲವಾಗಿ ಹಾರಿ ಭಿಕ್ಷೆಯನ್ನು ತಿನ್ನುತ್ತಿದ್ದ ಇಲಿಗೆ ಅಂದು ಮಾತ್ರ ಎಷ್ಟು ಪ್ರಯತ್ನಿಸಿದರೂ ಆ ಎತ್ತರಕ್ಕೆ ಹಾರಲು ಸಾಧ್ಯವಾಗಲಿಲ್ಲ. ಕೊನೆಗೆ ಸನ್ಯಾಸಿಯ ಮಿತ್ರನ ದೊಣ್ಣೆಯ ಪೆಟ್ಟು ತಿಂದು ಅಲ್ಲಿಂದ ಪಲಾಯನ ಮಾಡಿತು.

ಜಗತ್ತಿನ ಎಲ್ಲ ಮಾದಕ ವಸ್ತುಗಳಿಗಿಂತ ಹೆಚ್ಚು ಮತ್ತೇರಿಸುವ ವಸ್ತು ಹಣ. ಮಾದಕ ವಸ್ತುಗಳು ತಾತ್ಕಾಲಿಕವಾಗಿ ಮತ್ತೇರಿಸಿದರೆ ಹಣ ನಿರಂತರ ಮತ್ತೇರಿಸುತ್ತಲೇ ಇರುತ್ತದೆ. ಹಣದ ಥೈಲಿಯೊಂದು ಕೈಯ್ಯಲ್ಲಿದ್ದರೆ ಈ ಕಥೆಯಲ್ಲಿ ಬರುವ ಇಲಿಯಂತೆ ಮನುಷ್ಯ ಹಾರಾಡತೊಡಗುತ್ತಾನೆ. ಗುರು ಹಿರಿಯರನ್ನು – ದೇವರನ್ನು ಧಿಕ್ಕರಿಸುತ್ತಾನೆ. ತನ್ನ ಮುಂದೆ ಜಗತ್ತೆಲ್ಲ ತೃಣಸಮಾನ ಎಂದು ಭಾವಿಸುತ್ತಾನೆ. ಈ ಕಥೆಯಲ್ಲಿ ಬರುವ ಸನ್ಯಾಸಿಯ ಹಾಗಿರುವ ಬಡಪಾಯಿಗಳನ್ನು, ಸಾಧುಗಳನ್ನು ಹಿಂಸಿಸುತ್ತಾನೆ. ಈ ಎಲ್ಲ ಹಾರಾಟಕ್ಕೆ ಬೇಕಾದ ಮಾನಸಿಕ ಬಲ, ಗರ್ವಗಳನ್ನು ತಂದುಕೊಡುವುದು ಹಣದ ಗಂಟು. ಹಣವನ್ನು ಕಳೆದುಕೊಂಡರೆ ಮನುಷ್ಯ ಬಲ-ಗರ್ವಗಳನ್ನು ಕಳೆದುಕೊಳ್ಳುತ್ತಾನೆ. ನಯ, ವಿನಯಗಳು ಅವನಿಗೆ ತಾನಾಗಿಯೇ ಬರುತ್ತದೆ. ಗುರು ಹಿರಿಯರಲ್ಲಿ, ದೇವರಲ್ಲಿ ವಿಶ್ವಾಸ ಭಕ್ತಿಗಳು ಮೂಡುತ್ತವೆ.

ಐಶ್ವರ್ಯಮದಮತ್ತಸ್ಯ ದಾರಿದ್ರ್ಯಂ ಪರಮಾಂಜನಮ್ |
ಯಸ್ಯಾನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಮ್ ||

ಇದು ಭಗವಂತನ ವಾಣಿ. ಸಿರಿಯ ಮದದಿಂದ ಯಾರು ಮತ್ತನಾಗುವನೋ ಅವನಿಗೆ ಒಳ್ಳೆಯ ಚಿಕಿತ್ಸೆಯೆಂದರೆ ದಾರಿದ್ರ್ಯ. ಅಂತಹವನನ್ನು ಅನುಗ್ರಹಿಸಬೇಕಾದರೆ ನಾನು ಅವನ ಧನಸಂಪತ್ತನ್ನು ಸೆಳೆದು ಕೊಳ್ಳುತ್ತೇನೆ.
ವಿಶ್ವನಿಯಾಮಕ ಶಕ್ತಿ ನಮ್ಮ ಸಂಪತ್ತನ್ನು ಸೆಳೆದು ಪಾಠ ಕಲಿಸುವ ಮೊದಲು ಈ ಕಥೆಯಿಂದ ನಾವೇ ಪಾಠ ಕಲಿತುಕೊಳ್ಳೋಣ.

~*~

Facebook Comments