“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 33: “ಇಲಿ ಮೆಚ್ಚಿದ ವರ”
ಅದೊಂದು ರಮಣೀಯ ಪ್ರಾತಃಕಾಲ. ಮುನಿಯೊಬ್ಬ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಅರ್ಘ್ಯಪ್ರದಾನ ಮಾಡುತ್ತಿದ್ದ. ಆಗ ಪ್ರವಾಹದಲ್ಲಿ ಸಿಕ್ಕಿ ಮುಳುಗುತ್ತಿದ್ದ ಇಲಿಮರಿಯೊಂದು ಅವನ ಬೊಗಸೆಯನ್ನು ಪ್ರವೇಶಿಸಿತು. ತಬ್ಬಲಿ ಇಲಿಮರಿಯ ಕಷ್ಟವನ್ನು ನೋಡಿ ಕರಗಿದ ಮುನಿ ಆಶ್ರಮಕ್ಕೆ ಕೊಂಡೊಯ್ದು ಪೋಷಿಸಬೇಕೆಂದು ಯೋಚಿಸಿದ. ಇಲಿಮರಿಯನ್ನು ಸಂಸ್ಕಾರಶಾಲಿಯಾದ ವ್ಯಕ್ತಿಯನ್ನಾಗಿ ಬೆಳೆಸಬೇಕೆಂದು ಮುನಿ ತನ್ನ ತಪೋಬಲದಿಂದ ಅದನ್ನು ಮುದ್ದಾದ ಹೆಣ್ಣುಶಿಶುವನ್ನಾಗಿ ಪರಿವರ್ತಿಸಿದ. ಮುನಿಯ ಅಕ್ಕರೆಯ ಪೋಷಣೆಯಲ್ಲಿ ಆಶ್ರಮದ ಪವಿತ್ರ ಸಂಸ್ಕಾರದಲ್ಲಿ ಆ ಶಿಶು ಬೆಳೆಯತೊಡಗಿತು. ಕೆಲಕಾಲದ ನಂತರ ಮಗಳು ಪ್ರಾಯಪ್ರಬುದ್ಧೆಯಾಗಿರುವುದನ್ನು ಗಮನಿಸಿದ ಮುನಿ ಯೋಗ್ಯವರನ ಅನ್ವೇಷಣೆಗೆ ತೊಡಗಿದ. ತನ್ನ ಮಗಳು ಜಗತ್ತಿನ ಶ್ರೇಷ್ಠ ವ್ಯಕ್ತಿಯೋರ್ವನ ಕೈಹಿಡಿಯಬೇಕೆಂದು ಬಯಸಿದ ಮುನಿ ಮಗಳೊಡನೆ ಸೂರ್ಯನೆಡೆಗೆ ಸಾಗಿದ. ಆಗ ಕಾರ್ಮೋಡವೊಂದು ಸೂರ್ಯನನ್ನು ಮುಸುಕುತ್ತಿದ್ದುದನ್ನು ಗಮನಿಸಿದ ಆಕೆ, ಸೂರ್ಯನಿಗಿಂತ ಮೋಡವೇ ಮಿಗಿಲೆಂದು ಭಾವಿಸಿ ಮೋಡದೆಡೆಗೆ ಸಾಗಿದಳು. ಆದರೆ ಆಗಲೇ ಬಲವಾಗಿ ಬೀಸಿದ ಗಾಳಿ ಮೋಡಗಳ ಸಮೂಹವನ್ನೇ ಚದುರಿಸುತ್ತಿದ್ದುದು ಅವಳ ಕಣ್ಣಿಗೆ ಬಿತ್ತು. ಮೋಡಕ್ಕಿಂತಲೂ ಗಾಳಿಯ ಬಲವೇ ಅಧಿಕವೆಂಬುದನ್ನು ಅರಿತ ಆಕೆಯ ಮನಸ್ಸು ವಾಯುದೇವನ ಕಡೆಗೆ ಹರಿಯಿತು. ಆದರೆ ಮೋಡಗಳನ್ನು ಚದುರಿಸಿದ ಗಾಳಿಯ ಹೊಡೆತಗಳಿಗೆ ಜಗ್ಗದೇ ಸ್ಥಿರವಾಗಿ ನಿಂತಿದ್ದ ಪರ್ವತವೊಂದು ಅವಳ ಮನಸ್ಸನ್ನು ಕದಲಿಸಿತು. ಇನ್ನೇನು ಪರ್ವತವನ್ನೇ ವರಿಸಬೇಕೆಂದು ನಿಶ್ಚೈಸುವಷ್ಟರಲ್ಲಿ, ಚಂಡಮಾರುತಕ್ಕೂ ಸೋಲದ ಪರ್ವತವು ತನ್ನನ್ನು ಸುಲಭವಾಗಿ ಕೊರೆಯುತ್ತಿದ್ದ ಇಲಿಯ ಮುಂದೆ ಅಸಹಾಯಕವಾಗಿದ್ದುದು ಅವಳಿಗೆ ಅದ್ಭುತವಾಗಿ ಕಂಡಿತು. ಇಲಿಯನ್ನು ಕಂಡೊಡನೆಯೇ ಮಾರುಹೋದ ಮುನಿಕನ್ಯೆಗೆ ಜಗತ್ತಿನಲ್ಲಿ ಬೇರೇನೂ ಬೇಕೆನಿಸಲಿಲ್ಲ. ಕೂಡಲೇ ತಂದೆಗೆ ಹೇಳಿದಳು – “ಅಪ್ಪಾ, ಇನ್ನು ಯಾರನ್ನೂ ನೋಡುವ ಅಗತ್ಯವಿಲ್ಲ. ನಾನು ಈ ಇಲಿಯನ್ನೇ ವರಿಸುವೆ.” ಮಗಳ ಮಾತನ್ನು ಕೇಳಿ ವ್ಯಥಿಸಿದ ಮುನಿ “ರೂಪವನ್ನು ಬದಲಿಸಿದರೂ ಸ್ವರೂಪವನ್ನು ಬದಲಿಸಲಾಗದು” ಎಂಬ ಸತ್ಯವನ್ನು ಅರಿತು ಮಗಳಿಗೆ ಮೊದಲಿನ ರೂಪವನ್ನೇ ಕರುಣಿಸಿ ಪರ್ವತದ ಇಲಿಯೊಡನೆ ಬದುಕುಲನುವು ಮಾಡಿಕೊಟ್ಟ.

ಬೇವಿನ ಗಿಡವೊಂದಕ್ಕೆ ಬೆಲ್ಲದ ಕಟ್ಟೆಯನ್ನು ಕಟ್ಟಿ ಅನವರತವಾಗಿ ಜೇನೆರದರೂ ಅದು ತನ್ನ ಕಹಿ ಸ್ವಭಾವವನ್ನು ಬಿಡದು. ರಾಮಾಯಣದಲ್ಲಿ ರಾವಣನಿಗೆ ಮೌಲ್ಯವಂತನು ರಾಮನಲ್ಲಿ ಶರಣಾಗತಿಯ ಉಪದೇಶವನ್ನು ನೀಡಿದಾಗ ರಾವಣನು ಹೇಳಿದನಂತೆ – “ಶಿಲಾಸ್ಥಂಭದಂತೆ ಎರಡಾಗಿ ಮುರಿದೇನು! ಆದರೆ ಎಂದಿಗೂ ಬಾಗಲಾರೆ. ಇದು ನನ್ನ ಸಹಜಸ್ವಭಾವ. ಸ್ವಭಾವವನ್ನು ಮಾರ್ಪಡಿಸಲು ಯಾರಿಗೂ ಸಾಧ್ಯವಿಲ್ಲ.” ಋಷ್ಯಾಶ್ರಮದ ದೈವೀಪರಿಸರದಲ್ಲಿ ಬೆಳೆದರೂ ಲೋಕಕಂಟಕನಾದ ಮಹಾರಾಕ್ಷಸನಾಗಿ ಬಾಳಿದ ರಾವಣನಿಗೆ ನಿಜಕ್ಕೂ ಸರಿ ಹೊಂದುವ ಮಾತಿದು. ಜೀವರಹಿತವಾದ ಬೀಜಕ್ಕೆ ಹೊರಗಿನಿಂದ ಮಾಡುವ ಯಾವುದೇ ಕೃಷಿ ಫಲಿಸದು. ಹಾಗೆಯೇ ಯಾರ ಮೂಲಸ್ವರೂಪದಲ್ಲಿ ದೈವೀಗುಣಗಳಿಲ್ಲವೋ ಅಂಥವನನ್ನು ಎಷ್ಟೇ ಒಳ್ಳೆಯ ಪರಿಸರ ಸಹವಾಸಗಳು ಕೂಡಾ ಪರಿವರ್ತನೆ ಮಾಡಲಾರವು. ಮೇಲ್ನೋಟಕ್ಕೆ ಒಮ್ಮೊಮ್ಮೆ ಪರಿವರ್ತನೆಯಾದಂತೆ ಕಂಡರೂ ಆ ಪರಿವರ್ತನೆ ನಿಜವಲ್ಲ. ಇಲಿಮರಿಯನ್ನು ಹೆಣ್ಣುಶಿಶುವನ್ನಾಗಿ ಪರಿವರ್ತಿಸಿದ ಮುನಿ, ಆ ಪರಿವರ್ತನೆ ನಿಜವೆಂದೇ ಭಾವಿಸಿದ್ದ. ಆದರೆ ಮುನಿ ತಪೋಬಲದಿಂದ ಇಲಿಗೆ ಸ್ತ್ರೀದೇಹವನ್ನು ಕೊಟ್ಟಿದ್ದರೂ ಅದರ ಅಂತಃಕರಣ ಮಾತ್ರ ಇಲಿಯದಾಗಿಯೇ ಇತ್ತು. ಅದರಿಂದಾಗಿಯೇ ಸೂರ್ಯನಂತಹ ಶ್ರೇಷ್ಠವ್ಯಕ್ತಿಯನ್ನು ಮೆಚ್ಚದ ಅವಳ ಅಂತಃಕರಣ ಕೊನೆಗೂ ಇಲಿಗೇ ಮಾರುಹೋಯಿತು.

ಬಾಹ್ಯಪರಿವರ್ತನೆ ಪರಿವರ್ತನೆಯಲ್ಲ. ಅಂತಃಕರಣದ ಪರಿವರ್ತನೆಯೇ ನಿಜವಾದ ಪರಿವರ್ತನೆ.

~*~

Facebook Comments