“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು ಪ್ರಕಟಗೊಳ್ಳುತ್ತಿದ್ದು,  ಈ ಕಂತಿನೊಂದಿಗೆ ‘ಧರ್ಮಜ್ಯೋತಿ‘ ಲೇಖನಾಮೃತ ಮಾಲಿಕೆಯ ಎಲ್ಲಾ  ಕಂತುಗಳು ಪೂರ್ಣಗೊಳ್ಳುತ್ತಿವೆ.
ಈ ಲೇಖನಮಾಲೆ ಈ ರೂಪದಲ್ಲಿ ಪ್ರಕಟಗೊಳ್ಳಲು ಸಹಕರಿಸಿದ ಎಲ್ಲರಿಗೆ ಧನ್ಯವಾದಗಳು. ಸ್ಪಂದಿಸಿದ ಶ್ರೀಗುರುಗಳ ಶಿಷ್ಯಕೋಟಿಗೂ ವಂದನೆಗಳು.

ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 34: “ಸಗ್ಗದ ಹಾದಿಗೆ ಬೇಕು ಧರ್ಮದಜ್ಯೋತಿ”

ಶ್ರೀಮನ್ಮಹಾಭಾರತದ ಅಂತ್ಯದಲ್ಲಿ ಬರುವ ಕಥೆಯಿದು. ಶ್ರೀಕೃಷ್ಣನ ನಿರ್ಯಾಣದ ನಂತರ ಪಾಂಡವರು ಭೌತಿಕ ಬದುಕಿನ ಮೇಲೆ ವ್ಯಾಮೋಹವನ್ನು ಕಳೆದುಕೊಂಡು ಮಹಾಪ್ರಸ್ಥಾನಕ್ಕೆ ಅಣಿಯಾದರು. ಮಹಾಪ್ರಸ್ಥಾನವೆಂದರೆ ಯೋಗಮುಕ್ತರಾಗಿ, ನಿರಾಹಾರರಾಗಿ ಮೋಕ್ಷವನ್ನು ಲಕ್ಶ್ಯವಾಗಿರಿಸಿಕೊಂಡು ಹಿಂದಿರುಗಿ ಬಾರದ ಪ್ರಯಾಣ ಕೈಗೊಳ್ಳುವುದು. ಸರ್ವಸ್ವವನ್ನೂ ಪರಿತ್ಯಜಿಸಿ ಮಹಾಪ್ರಸ್ಥಾನಕ್ಕಾಗಿ ಹಿಮವತ್ಪರ್ವತದೆಡೆಗೆ ಹೊರಟ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು. ಮುಂದೆ ಧರ್ಮಜ, ಅವನ ಹಿಂದೆ ಅನುಕ್ರಮವಾಗಿ ಭೀಮ, ಅರ್ಜುನ, ನಕುಲ, ಸಹದೇವ, ದ್ರೌಪದಿ ಮತ್ತು ನಾಯಿ. ಹೀಗೆ ಹೋಗುತ್ತಿರುವಾಗ ಮೊದಲಿಗೆ ದ್ರೌಪದಿ ಯೋಗಭ್ರಷ್ಟಳಾಗಿ ಅಸುನೀಗಿ ಬಿದ್ದುಬಿಟ್ಟಳು. ಒಡನೆಯೇ ಭೀಮ ಧರ್ಮಜನನ್ನು ಪ್ರಶ್ನಿಸಿದ: “ಅಣ್ಣಾ, ಪತಿವ್ರತೆಯಾದ ದ್ರೌಪದಿ ಏಕೆ ಗುರಿ ತಲುಪದೇ ಮಧ್ಯದಲ್ಲಿಯೇ ಬಿದ್ದುಬಿಟ್ಟಳು?” ಧರ್ಮಜ ಉತ್ತರಿಸಿದ: “ಐವರು ಪತಿಗಳನ್ನು ಸಮಾನವಾಗಿ ಪ್ರೀತಿಸಬೇಕಾದ ದ್ರೌಪದಿಗೆ ಅರ್ಜುನನ ಮೇಲೆ ಪಕ್ಷಪಾತವಿತ್ತು. ಅದರಿಂದಾಗಿ ಆಕೆ ಗುರಿ ತಲುಪಲಿಲ್ಲ.” ಅನಂತರ ಕ್ರಮವಾಗಿ ಸಹದೇವ, ನಕುಲ, ಅರ್ಜುನರು ಬಿದ್ದುಬಿಟ್ಟರು. ಆ ಕುರಿತಾದ ಭೀಮನ ಜಿಜ್ಞಾಸೆಗೆ ಧರ್ಮರಾಜ, “ಸಹದೇವನಿಗೆ ತನ್ನ ಶಾಸ್ತ್ರಪಾಂಡಿತ್ಯದ ಮೇಲೆ, ನಕುಲನಿಗೆ ತನ್ನ ಸುಂದರ ರೂಪದ ಮೇಲೆ, ಅರ್ಜುನನಿಗೆ ತನ್ನ ಪರಾಕ್ರಮದ ಮೇಲೆ ಅಹಂಕಾರವಿತ್ತು. ಅದರಿಂದಾಗಿ ಹೀಗಾಯಿತು” ಎಂದು ಉತ್ತರಿಸಿದ. ಈಗ ಬೀಳುವ ಸರದಿ ಭೀಮನದಾಗಿತ್ತು. ಬಿದ್ದೊಡನೆಯೇ ಪ್ರಜ್ಞೆ ಕಳೆದುಕೊಳ್ಳದೇ, “ಅಣ್ಣಾ, ನನಗೇಕೆ ಹೀಗಾಯಿತು?” ಎಂದು ಪ್ರಶ್ನಿಸಿದ. “ನೀನು ಅತಿಯಾಗಿ ತಿನ್ನುತ್ತಿದ್ದೆ. ಪ್ರಾಣಧಾರಣೆಯ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಬೇರೆ ಯಾವುದೋ ಜೀವಿಗೆ ಸೇರಬೇಕಾದ್ದರಿಂದ ಅತ್ಯಾಹಾರ ಸೇವನೆ ಅಪರಾಧವಾಗುತ್ತದೆ. ಇದರೊಂದಿಗೆ ಬಲದ ಮೇಲಿನ ಹೆಮ್ಮೆ ನಿನ್ನನ್ನು ಇಲ್ಲಿಯೇ ಬೀಳಿಸಿತು” ಎಂದು ಉತ್ತರಿಸಿ ಹಿಂದಿರುಗಿ ನೋಡದೇ ಮುನ್ನಡೆದ. ನಾಯಿ ಮಾತ್ರ ಧರ್ಮಜನನ್ನು ಬೆಂಬಿಡದೇ ಹಿಂಬಾಲಿಸುತ್ತಿತ್ತು, ಧರ್ಮಜನನ್ನು ಸಶರೀರವಾಗಿ ಸ್ವರ್ಗಕ್ಕೊಯ್ಯಲು ದೇವರಾಜ ವಿಮಾನದೊಡನೆ ಆಗಮಿಸಿದ. ಸ್ವರ್ಗಾರೋಹಣಕ್ಕಾಗಿ ದೇವವಿಮಾನವನ್ನೇರೆಂದು ಆಮಂತ್ರಿಸಿದ. ಧರ್ಮಜ, ಜೀವನದ ಕೊನೆಯ ಕ್ಷಣದಲ್ಲಿಯೂ ತನ್ನನ್ನು ಬೆಂಬಿಡದ ನಾಯಿಯನ್ನು ಒಟ್ಟಿಗೆ ಕರೆತರಲು ಅನುಮತಿ ಯಾಚಿಸಿದ. ಇಂದ್ರ ಹೇಳಿದ, “ನಾಯಿಗಳಿಗೆ ಸ್ವರ್ಗದಲ್ಲಿ ಅವಕಾಶವಿಲ್ಲ. ನಾಯಿಯನ್ನು ಬಿಟ್ಟು ನೀನು ಸ್ವರ್ಗದ ವಿಮಾನವನ್ನೇರಬಹುದು.” ಧರ್ಮಜ ತನ್ನ ಎಡೆಬಿಡದ ಒಡನಾಡಿಯಾದ ನಾಯಿಯನ್ನು ಬಿಟ್ಟು ಸ್ವರ್ಗಕ್ಕೇರಲು ಸುತಾರಾಂ ಒಪ್ಪಲಿಲ್ಲ. ಇಂದ್ರ ಪುನಃ ಪುನಃ ಒತ್ತಾಯಿಸಿದ. ಕೊನೆಗೆ ಧರ್ಮಜ ಹೇಳಿದ, “ಈ ನಾಯಿಯನ್ನು ಬಿಟ್ಟೇ ಬರಬೇಕಾದರೆ ನಾನು ಇಲ್ಲಿಯೇ ಇರಲಿಚ್ಚಿಸುತ್ತೇನೆ, ಏಕೆಂದರೆ ಶರಣಾಗತಪರಿತ್ಯಾಗದೊಡನೆ ಸ್ವರ್ಗವಾಸಕ್ಕಿಂತ ಇಲ್ಲಿರುವುದೇ ಶ್ರೇಯಸ್ಕರವಾದುದು.” ಕೊನೆಯಲ್ಲಿ ಧರ್ಮಜನ ಧರ್ಮನಿಷ್ಠೆಗೆ ಇಂದ್ರನೂ ಮತ್ತು ನಾಯಿಯ ರೂಪದಲ್ಲಿದ್ದ ಯಮಧರ್ಮನೂ ಸುಪ್ರೀತರಾಗಿ ಧರ್ಮಜನನ್ನು ಅನುಗ್ರಹಿಸಿದರು.

ಭೀಮನಲ್ಲಿ ಲೋಕೋತ್ತರವಾದ ಬಲ; ಅರ್ಜುನನಲ್ಲಿ ಅದ್ಭುತ ವಿಕ್ರಮ; ನಕುಲ, ದ್ರೌಪದಿಯರಲ್ಲಿ ಅತಿಶಯವಾದ ರೂಪ; ಸಹದೇವನಲ್ಲಿ ವಿಸ್ತಾರವಾದ ಶಾಸ್ತ್ರಜ್ಞಾನಗಳು ವಿಪುಲವಾಗಿದ್ದವು. ಈ ಯಾವ ಗುಣಗಳೂ ವಿಶೇಷವಾಗಿಲ್ಲದಿದ್ದರೂ ಧರ್ಮಜನಲ್ಲಿ ಧರ್ಮವೊಂದೇ ಅಚಲವಾಗಿ ನೆಲೆಸಿತ್ತು. ವಿದ್ಯೆ, ವಿಕ್ರಮ ಮೊದಲಾದ ಗುಣಗಳು ಅವನ ತಮ್ಮಂದಿರು ಮತ್ತು ಪತ್ನಿಯನ್ನು ಭುವಿಯಲ್ಲಿಯೇ ಉಳಿಸಿದವು. ಆದರೆ ಅವನು ನಂಬಿದ್ದ ಧರ್ಮ ಧರ್ಮಜನನ್ನು ದಿವಿಗೇರಿಸಿತು. ಯಾರು ಧರ್ಮವನ್ನು ಎಡೆಬಿಡದೇ ಸೇವಿಸುತ್ತಾನೆಯೋ, ಧರ್ಮ ಅವನನ್ನು ಬೆಂಬಿಡದೇ ಕಾಯುತ್ತದೆ. ಧರ್ಮನಿಷ್ಠರಾದ ಧರ್ಮಜನನ್ನು ಧರ್ಮವೇ ನಾಯಿಯ ರೂಪದಲ್ಲಿ ಅವಸಾನ ಕಾಲದಲ್ಲಿಯೂ ಹಿಂಬಾಲಿಸಿತು.

ರಾಜ್ಯ, ಕೋಶ, ಸೇನೆ, ಪ್ರಜೆಗಳು ಒಟ್ಟಿಗೇ ಬಾರದಾದಾಗ ತಮ್ಮಂದಿರು, ಪತ್ನಿ ಹಿಂದಕ್ಕುಳಿದಾಗ, ಬಲ, ವಿಕ್ರಮ, ಪಾಂಡಿತ್ಯ, ರೂಪಗಳು ಏನೂ ಮಾಡದಾದಾಗ ಧರ್ಮಜನ ನೆರವಿಗೆ ಬಂದದ್ದು ಧರ್ಮ ಮಾತ್ರವಲ್ಲವೇ?

“ಧರ್ಮಃ ಸಖಾ ಪರಮಹೋ ಪರಲೋಕಯಾನೇ”
ಪರಲೋಕ ಪ್ರಯಾಣಕ್ಕೆ ಧರ್ಮವೇ ಪರಮಮಿತ್ರನಾಗಿದೆ.

~*~

Facebook Comments