#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
14-09-2018:

ಅದ್ವೈತ ಸಂಧಿ

ಜ್ಞಾನವು ಅದ್ವೈತಕ್ಕೆ ಕಾರಣ, ಶಂಕೆಯು ಜ್ಞಾನಕ್ಕೆ ತಡೆ, ಜ್ಞಾನವು ನಿಶ್ಶಂಕೆ, ಸರಿಯಾದ ಜ್ಞಾನ ಪ್ರಕಟವಾದ ಮೇಲೆ ಶಂಕೆಗೆ ಅವಕಾಶವೇ ಇಲ್ಲ, ಶಂಕೆ ಎಂದರೆ ಮಾಯೆ. ಈ ಮಾಯೆಯು ಯಾರ ಕೈಯಲ್ಲಿದೆಯೋ, ಅರಿವು ಯಾರ ಕೈಯಲ್ಲಿದೆಯೋ, ಆ ಕರುಣಕರನಾದ ಶ್ರೀಕೃಷ್ಣನನ್ನು ನಮಿಸಿ, ಪ್ರಾರ್ಥಿಸೋಣ, ಇದೊಂದನ್ನು ನಮಗೆ ತಿಳಿಸಿಕೊಡು, ಮಾಡೋ ಇದನು ಕರುಣಾಕರ ಅಂತ, ನನ್ನ ಶಂಕೆಯನ್ನು ಪರಿಹಾರ ಮಾಡಿಕೊಡು, ಅಮಲ ಜ್ಞಾನವನ್ನು ಕೊಡು ಎಂದು ಪ್ರಾರ್ಥಿಸೋಣ.

ತತ್ತ್ವಭಾಗವತಮ್

ನಾವು ಪರಿಶೀಲಿಸಿದ ಸಂಸ್ಕೃತ ವಾಙ್ಮಯಗಳ ಪೈಕಿ ನಳಚರಿತ್ರೆಗೆ ಸಾಟಿಯದುದಿಲ್ಲ. ನಳನು ಪುಣ್ಯಶ್ಲೋಕ. ಅವನ ಚರಿತ್ರೆಯನ್ನು ಕೇಳುತ್ತಾ ಕೇಳುತ್ತಾ ನಮ್ಮ ಪಾಪಗಳು ದೂರವಾಗಿ ನಾವು ಶುದ್ಧವಾಗುತ್ತಾ ಹೋಗುತ್ತೇವೆ. ಇಂತಹ ನಳಚರಿತ್ರೆಯ ಅದ್ವೈತ ಸಂಧಿ ಎಂಬ ಭಾಗವನ್ನು ಈಗ ಅವಲೋಕನ ಮಾಡೋಣ. ಅದ್ವೈತವೆಂದರೆ ಎರಡಲ್ಲ ಅಂತ, ಎರಡಲ್ಲದ್ದು ಒಂದಾಗುತ್ತೆ, ಒಂದಾಗಬೇಕಾದರೆ ಎರಡಾಗಿರಬೇಕು, ಅದು ಏನು? ಒಂದೋ, ಎರಡೋ ಎನ್ನುವುದನ್ನು ಈ ಭಾಗದಲ್ಲಿ ತಿಳಿಯೋಣ.

ದಮಯಂತಿ ಕೇಶಿನಿಯನ್ನು ತನ್ನ ತಾಯಿಯ ಬಳಿಗೆ ಕಳುಹಿಸುತ್ತಾಳೆ. ಅವಳಿಗೆ ಕೆಲಸ ತಪ್ಪಲಿಲ್ಲ, ಈವರೆಗೆ ಬಹಳ ಬಾರಿ ಬಾಹುಕನಲ್ಲಿಗೆ ಹೋಗಿ ಬಂದಳು, ಈಗ ರಾಣಿಯಲ್ಲಿಗೆ. ನಳನ ರೂಪದಿಂದಾಗಿ ಶಂಕೆ ಪರಿಹಾರ ಆಗುತ್ತಾ ಇಲ್ಲ. ಇದು ಕೊನೆಯ ಪರೀಕ್ಷೆ, ಇದನ್ನು ತಾನೇ ಮಾಡಬೇಕಾದುದು ಅನಿವಾರ್ಯ. ನಳನಿರಬಹುದೇ ಎಂಬ ಶಂಕೆಯಿಂದ ಬಾಹುಕನನ್ನು ವಿಧವಿಧದಿ ಪರೀಕ್ಷಿಸಲಾಯಿತು, ಎಲ್ಲವೂ ಪರಿಹಾರವಾಯಿತು. ಒಂದು ಉಳಿದಿದೆ ಅದು ರೂಪಮಾತ್ರಾ, ಅದನ್ನು ನಾನೇ ಪರಿಹಾರ ಮಾಡಿಕೊಳ್ಳಬೇಕು, ಅದಕ್ಕೆ ವೇದಿಕೆ ಸಿದ್ಧ ಆಗಬೇಕು, ಅದಕ್ಕೆ ನಾವು ಮುಖಾಮುಖಿ ಆಗಬೇಕು. ಒಂದೋ ಅವನು ಇಲ್ಲಿಗೆ ಬರಬೇಕು ಇಲ್ಲದಿದ್ದರೆ ನಾನು ಅಲ್ಲಿಗೆ ಹೋಗಬೇಕು. ಆಗಿನ ಕಾಲದಲ್ಲಿ ಅಂತಃಪುರದವರು ಹೊರಗಿನ ಜನರನ್ನು ಮಾತನಾಡಿಸುವುದು, ಭೇಟಿಮಾಡುವುದು ಅಷ್ಟು ಸುಲಭದ್ದಾಗಿರಲಿಲ್ಲ. ಅದರಲ್ಲಿಯೂ ದಮಯಂತಿ ಸಂಸ್ಕಾರವಂತೆ, ತನ್ನ ಈವರೆಗಿನ ಎಲ್ಲ ವಿಷಯಗಳನ್ನೂ ತಾಯಿಯ ಒಪ್ಪಿಗೆ ಪಡೆದೇ ಮಾಡಿದ್ದಾಳೆ. ಹಾಗಾಗಿ ಈಗಲೂ ಅವಳ ಅಪ್ಪಣೆ ಬೇಡುತ್ತಿದ್ದಾಳೆ. ಈ ವಿಚಾರವನ್ನು ನೀನು ಬೇಕಿದ್ದರೆ ತಂದೆಗೆ ತಿಳಿಸಿ ಅವನ ಒಪ್ಪಿಗೆಯನ್ನು ಪಡೆಯಬಹುದು ಎಂಬ ಒಂದು ಅವಕಾಶವನ್ನೂ ತಾಯಿಗೆ ನೀಡಿದಳು. ತಂದೆಗೆ ತಿಳಿಸಬೇಕೇ, ಬೇಡವೇ, ನೀನೇ ನಿಶ್ಚಯಿಸು. ಅಯೋಧ್ಯಾಧಿಪತಿಯನ್ನು ಕರೆಸುವಾಗ ತಂದೆಗೆ ಹೇಳಬಾರದೆಂದು ನಾನೇ ಒತ್ತಾಯಮಾಡಿದ್ದೆ, ಈಗ ನನ್ನ ಒತ್ತಾಯವೇನೂ ಇಲ್ಲ. ನಿನಗೆ ತೋಚಿದಂತೆ ಮಾಡು. ತಾಯಿಯೇ, ಅವನು ನಳನೇ ಎಂಬುದು ನನ್ನ ನಿಶ್ಚಯ. ಖಂಡಿತವಾಗಿಯೂ ಅವನು ಸೂತನಲ್ಲ, ಮಾರುವೇಷದಲ್ಲಿ ಬಂದಿರುವನಷ್ಟೇ, ರಾಜಾಧಿರಾಜನಾಗಿ ಮೆರೆಯಬೇಕಾಗಿದ್ದ ನಳನು ಈ ರೂಪದಲ್ಲಿ ಸಂಚರಿಸುತ್ತಿದ್ದಾನೆ ಅಷ್ಟೇ. ನಮಗೆ ಇದನ್ನು ನೋಡುವಾಗ ಯಕ್ಷಗಾನದ ಪ್ರಸಂಗ ನೆನಪಾಯಿತು. ಅದರಲ್ಲಿ ಸ್ತ್ರೀಯರುಗಳು ಸೇರಿದಾಗ ತಮ್ಮ ಪತಿಯಂದಿರ ಬಗ್ಗೆ ಅಭಿಮಾನಪೂರ್ವಕವಾಗಿ ಹೇಗೆ ಹೇಳಿಕೊಳ್ಳುತ್ತಾರೆ ಎಂಬುದನ್ನು ವಿನೋದವಾಗಿ ಹೇಳುತ್ತಾರೆ. ನನ್ನ ಗಂಡ ಹಾಗೆ, ನಿನ್ನ ಗಂಡ ಹೀಗೆ, ಅವಳ ಗಂಡ ಕಾಗೆ ಎನ್ನುತ್ತ. ಇದು ಸರಿ ಇದೆ. ಸತಿಪತಿಯರಲ್ಲಿ ಒಡನಾಟ ಪರಸ್ಪರ ಸರಿಯಾಗಿದ್ದರೆ ಅವಳಿಗೆ ಸಹಜವಾಗಿ ಹೀಗೇ ಅಭಿಮಾನ ಇರುತ್ತದೆ. ಅವಳು ತನ್ನ ಗಂಡನನ್ನು ಬೇರೆಯವರ ಎದುರು ಬಿಟ್ಟಕೊಡುವುದಿಲ್ಲ.

ರಾಣಿಯು, ಮಗಳು ಹೇಳಿದ ವಿಚಾರವನ್ನೆಲ್ಲಾ ಹಾಗೇ ಹೋಗಿ ತನ್ನ ಗಂಡ ಭೀಮರಾಜನಿಗೆ ಹೇಳುತ್ತಾಳೆ, ಮೊದಲು ತಾವು ಯೋಜನೆ ಮಾಡಿ ಋತುಪರ್ಣನನ್ನು ಕರೆಸಿರುವುದನ್ನು ಹೇಳದೇ ಈಗಿನ ವಿಚಾರವನ್ನು ಮಾತ್ರವೇ ಹೇಳುತ್ತಾಳೆ. ವಿಷಯ ಹೀಗಿದೆ, ಮಗಳು ಹೀಗೆ ಅಭಿಪ್ರಾಯ ಹೊಂದಿದ್ದಾಳೆ, ಹಾಗಾಗಿ ಅವರು ಪರಸ್ಪರ ಭೇಟಿಮಾಡಲು ಅವಕಾಶ ಮಾಡಿಕೊಡಿ ಎಂದು. ಭೀಮರಾಜ ಸಂತೋಷದಿಂದ ಹೇಳುತ್ತಾನೆ ಆಗಲಿ, ಹೀಗೇ ಆದರೆ ನನಗೆ ಇದಕ್ಕಿಂತ ಒಳ್ಳೆಯ ಸಂಗತಿ ಏನಿರಲು ಸಾಧ್ಯ? ಹೌದು ಅವನಿಗೆ ನಳನಂಥ ಶ್ರೇಷ್ಠ ಅಳಿಯನಿರುವುದು ಹೆಮ್ಮೆಯ ವಿಷಯವೇ ಆಗಿದೆ. ಸರಿ, ರಾಜನ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಯುತ್ತಲೇ ದಮಯಂತಿ ಇಮ್ಮಡಿ ಉತ್ಸಾಹದಿಂದ ಕೇಶಿನಿಯನ್ನು ಪುನಃ ಕರೆಯುತ್ತಾಳೆ ಹಾಗೂ ಹೇಳುತ್ತಾಳೆ, ನೀನು ಇನ್ನೊಮ್ಮೆ ಕಡೆಯಬಾರಿಗೆ ಅವನಲ್ಲಿಗೆ ಹೋಗಿ ಬರಬೇಕು ಎಂದು. ಕೇಶಿನಿಗೆ ಚಿಂತೆಯಾಯಿತು, ಹೇಗೆ ಹೋಗುತ್ತಾಳೆ? ಅವನು ಕಡೆಯ ಸಾರಿ ಇವಳು ಹೋಗಿದ್ದಾಗಲೇ ಇನ್ನು ಹೀಗೆ ಪದೇಪದೇ ಬರಬೇಡ ನನಗೆ ತೊಂದರೆಯಾಗುತ್ತದೆ ಅಂತ ಹೇಳಿಬಿಟ್ಟಿದ್ದಾನೆ. ಏನು ಮಾಡುವುದು ಅಂದಾಗ, ದಮಯಂತಿ ಪರಿಹಾರ ಸೂಚಿಸುತ್ತಾಳೆ. ನೀನು ನೇರ ಹೋಗಿ ಅವನು ಏನನ್ನಾದರೂ ಕೇಳುವ ಮುಂಚೆಯೇ ನಾನು ರಾಜಾಜ್ಞೆಯನ್ನು ಹೊತ್ತು ಬಂದಿದ್ದೇನೆ ಅಂತ ಹೇಳಿಬಿಡು. ಅವನು ವಿಷಯ ಕೇಳಿದಾಗ, ರಾಜಭವನಕ್ಕೆ ಬರಬೇಕಂತೆ ಅಂತ ಹೇಳು, ಆಗ ಅವನಿಂದ ತಪ್ಪಿಸಲಿಕ್ಕೆ ಆಗುವುದಿಲ್ಲ, ಬಂದೇ ಬರುತ್ತಾನೆ, ಬೇಗ ಹೋಗು, ಹೇಳು, ಅಂತ ಅವಳನ್ನು ಕಳಿಸಿದಳು. ಕೇಶಿನಿ ಮತ್ತೆ ಬಾಹುಕನ ಬಳಿಗೆ ಹೋದಳು, ಅವನು ಇವಳನ್ನು ನೋಡಿದ, ಮತ್ತೆ ಯಾಕೆ ಬಂದೆ? ಎನ್ನುವಂತೆ. ಪಾಪ ಅವನು ಇವಳ ಪರೀಕ್ಷೆಗಳಿಂದ ಆಯಾಸಬಡಿದು ಹೋಗಿದ್ದ. ಆಗ ಅವನು ಬಾಯಿಬಿಡುವುದರ ಒಳಗಾಗಿ ಅವಳೇ ನಾನು ರಾಜಾಜ್ಞೆಯಿಂದ ಇಲ್ಲಿಗೆ ಬಂದಿದ್ದೇನೆ, ನೀನು ರಾಜಭವನಕ್ಕೆ ಬರಬೇಕಂತೆ ಎಂದು ಹೇಳಿ ಹೊರಟುಹೋದಳು.

ಬಾಹುಕ ಹಾಗೇ ನಿಂತುಬಿಟ್ಟ, ಉತ್ತರವನ್ನೂ ಕೊಡಲಿಲ್ಲ, ಹೆಜ್ಜೆ ಕಿತ್ತಿಡಲಿಲ್ಲ, ಬರುವುದಿಲ್ಲ ಎಂತಲೂ ಹೇಳಲಿಲ್ಲ, ಅಲ್ಲಿ ಯಾರಿದ್ದಾರೆ ಅಂತ ಅವನಿಗೆ ಗೊತ್ತು, ನಾನು ಬರಬೇಕಾ? ಹೀಗೇ ಬರಬೇಕಾ ಅಂತ ಕೇಳಿದ. ಅದರರ್ಥ ಈ ಅವತಾರದಲ್ಲಿ ಅಲ್ಲಿಗೆ ಹೆಂಡತಿಯ ಎದುರು ಬರಬೇಕಾ ಅಂತ. ಅವನ ಮನದಲ್ಲಿಯೇ, ಅಲ್ಲಿ ಏನು ಎದುರಾಗಬಹುದು, ಯಾಕಾಗಿರಬಹುದು? ಹಾಗೂ ಏನಿರಬಹುದು ಅಂತ ಯೋಚಿಸಲು ಪ್ರಾರಂಭಿಸಿದ. ಅವನಿಗೆ ಎರಡು ಸಮಸ್ಯೆ ಇದೆ ಅಲ್ಲಿ, ಒಂದು ದಮಯಂತಿ ಮತ್ತೆ ಅದೇ ಪ್ರಶ್ನೆ ಕೇಳುತ್ತಾಳೆ. ಯಾಕೆ ಬಿಟ್ಟು ಹೋದೆ ನನ್ನನ್ನು ಅಂದು ಕಾಡಿನಲ್ಲಿ ಎಂದು. ಇನ್ನೊಂದು ಮುಖ್ಯ ವಿಚಾರ ಅವನಿಗೆ ದಮಯಂತಿ ಇನ್ನೂ ಹಳೆಯವಳೋ ಅಥವಾ ಬದಲಾಗಿದ್ದಾಳೋ ತಿಳಿಯುತ್ತಿಲ್ಲ. ಏಕೆಂದರೆ ಅವಳು ಈಗ ಎರಡನೇ ಸ್ವಯಂವರಕ್ಕೆ ಸಿದ್ಧಳಾಗಿದ್ದಾಳೆ. ಅವಳ ಬಳಿ ಏನನ್ನು ಮಾತನಾಡಬೇಕೋ ತಿಳಿಯುತ್ತಿಲ್ಲ ಅವನಿಗೆ. ಹಾಗಾಗಿ ಸುಮ್ಮನೇ ನಿಂತುಬಿಟ್ಟ. ಬಹಳ ಬಲವಂತದಿಂದ ಕೇಶಿನಿಯು ಅವನನ್ನು ಹೊರಡಿಸಿದಳು. ಅವನು ಹೊರಟ.

ತಂದೆತಾಯಿಯರ ಅಪ್ಪಣೆ ಮೇರೆಗೆ ದಮಯಂತಿ ನಿರ್ದೇಶಿಸಿದ್ದಂತೆ ಅವನು ಏಳು ಪ್ರಾಕಾರಗಳ ಅಂತಃಪುರವನ್ನು ದಾಟಿ ಅವಳ ಕೋಣೆಯನ್ನು ಪ್ರವೇಶಿಸಿದ. ನಳ ತುಂಬಾ ಸಿದ್ಧತೆ ಮಾಡಿಕೊಂಡು ಬಂದಿದ್ದ ಹೇಗೆಲ್ಲಾ ನಡೆದುಕೊಳ್ಳಬೇಕು ಅವಳ ಮುಂದೆ ಅಂತ. ಆದರೆ ಅವಳನ್ನು ನೋಡುತ್ತಿದ್ದಂತೆಯೇ ವಿಚಲಿತನಾಗಿಬಿಟ್ಟ. ಅದು ಶೋಕವೋ, ದುಃಖವೋ ಅಥವಾ ಶೋಕವಾದ ನಂತರ ದುಃಖ, ದುಃಖದ ನಂತರ ಶೋಕ, ಹೀಗೆ ಅವನನ್ನು ಬಹುಕಾಲ ಪೀಡಿಸಿದವು.
ರಾಮನಲ್ಲಿಯೂ ಹೀಗೇ. ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳೂ ನಡೆದಿದ್ದಾಗ ಕೈಕೇಯಿ ರಾಮನನ್ನು ಕರೆದು ಹೇಳುತ್ತಾಳೆ, ನಿನಗೆ ೧೪ ವರ್ಷಗಳ ವನವಾಸ ಹಾಗೂ ನಿನ್ನ ತಮ್ಮ ಭರತನಿಗೆ ರಾಜ್ಯಾಭಿಷೇಕ, ನೀನು ತಕ್ಷಣ ವನವಾಸಕ್ಕೆ ಹೋಗಬೇಕು ಸಿದ್ಧನಾಗು ಎಂದು. ಆಗ ರಾಮನಲ್ಲಿ ಏನೂ ಬದಲಾಗಲಿಲ್ಲ, ಅವನು ವಿಚಲಿತನಾಗಲಿಲ್ಲ, ಪಟ್ಟಾಭಿಷೇಕಕ್ಕೆ ಸಂಗ್ರಹಿಸಿದ ಭಾಂಡಕ್ಕೆ ಒಂದು ಪ್ರದಕ್ಷಿಣೆ ಬಂದು ಮರುಮಾತನಾಡದೇ ಹೊರಟುಬಿಟ್ಟ. ಅಲ್ಲಿಂದ ಕೌಸಲ್ಯೆಯ ಬಳಿಗೆ ಬರುತ್ತಾನೆ, ಅಲ್ಲಿ ವಿಷಯ ಹೇಳಿದಾಗ ಅವಳು ಪ್ರಜ್ಞೆ ತಪ್ಪಿ ಬೀಳುತ್ತಾಳೆ, ಇನ್ನಿಲ್ಲದಂತೆ ರೋದಿಸುತ್ತಾಳೆ. ಅವಳು ಮೊದಲಿಗೆ ಹೇಳಿದ ವಿಷಯವೇನೆಂದರೆ, ನೀನು ಯಾಕಾದರೂ ಹುಟ್ಟಿದೆಯೋ ಎಂದು, ನೀನು ಹುಟ್ಟಿರದಿದ್ದರೆ ಅದೊಂದೇ ಕೊರಗಿತ್ತು. ಈಗ, ನೀನು ವನವಾಸಕ್ಕೆ ಹೊರಟು ಇನ್ನಷ್ಟು ಕೊರಗನ್ನು ಹೆಚ್ಚಿಸಿದೆ ಎಂದು. ಆಗಲೂ ಅವನು ಸ್ಥಿತಪ್ರಜ್ಞನಂತೆ ಅವಳನ್ನು ಸಮಾಧಾನಿಸಿ ಬರುತ್ತಾನೆ. ಆದರೆ ನಂತರ ಅವನು ಯಾವಾಗ ಸೀತೆಯ ಮನೆಯನ್ನು ಪ್ರವೇಶಿಸುತ್ತಾನೋ ಆಗ ಅಲ್ಲಿಯವರೆಗೆ ಇದ್ದ ಗಾಂಭೀರ್ಯವೆಲ್ಲಾ ಹೋಗಿ, ಮುಖ ಬಾಡಿ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಯಾಕೋ ಅವಳನ್ನು ಕಾಡಿಗೆ ಕರೆದುಕೊಂಡು ಹೋಗಲು ಮನಸ್ಸಿಲ್ಲ ಅವನಿಗೆ. ಮುಂದೆ ಆಗಬಹುದಾದ ಕೇಡು ಅವನಲ್ಲಿ ಆಗಲೇ ಧ್ವನಿಸುತ್ತಿದ್ದಿರಬೇಕು, ಅವನ ಮನಸ್ಸಿನಲ್ಲಿ ಏನೋ ಶಂಕೆ, ಕರೆದುಕೊಂಡು ಹೋದರೂ ಕಷ್ಟ, ಇಲ್ಲೇ ಉಳಿದರೂ ಕಷ್ಟ. ಹೀಗೆ ಅವಳ ಮುಂದೆ ದುಃಖಗೊಳ್ಳುವುದನ್ನು ತಪ್ಪಿಸಲಿಕ್ಕಾಗಲಿಲ್ಲ ಅವನಿಗೂ.

ಹೆಂಡತಿ ಎಂದರೇ ಎರಡನೇ ಅಮ್ಮ, ಅದು ಅದ್ವೈತ ಹಾಗಾಗಿ ಅಲ್ಲಿ ಮುಚ್ಚುಮರೆ ಸಾಧ್ಯವಿಲ್ಲ. ಹೀಗೆ ನಳನಿಗೆ ಎಷ್ಟು ಪ್ರಯತ್ನಪಟ್ಟರೂ ಪತಿವ್ರತೆಯ ಮುಂದೆ ಅವನ ದುಃಖ ಶೋಕಗಳು ಆವೇಶಗೊಂಡವು, ಕಣ್ಣೀರು ಧಾರೆಧಾರೆಯಾಗಿ ಹರಿಯಿತು. ಇವನಿಗೇ ಹೀಗೆ ಇನ್ನು ದಮಯಂತಿಯ ಕಥೆ ಏನಾಗಿರಬೇಡ? ಅವನನ್ನು ಗುರುತಿಸಲೂ ಸರಿಯಾಗಿ ಆಗುತ್ತಿಲ್ಲ ಅವಳಿಗೆ, ಅವಳು ಬೇರೆಲ್ಲಾ ಮರೆತಳು, ಆದರೆ ಈ ರೂಪ. ಈಗ ಹತ್ತಿರದಿಂದ ನೋಡಿದಾಗ, ಅವನು ನಳನೇ ಹೌದಾದರೂ ಹೇಗೆ ಸಹಿಸುವುದು ಆ ವಿಕಾರವನ್ನು? ಸತಿಯು ಎಷ್ಟೇ ಪ್ರೀತಿಯ ಪತಿಯನ್ನಾದರೂ ಈ ರೂಪದಲ್ಲಿ ಸಹಿಸಲು ಸಾಧ್ಯವಿಲ್ಲ. ಅವನು ಅತ್ಯಂತ ವಿಕಾರ ರೂಪಿ. ಬೇರೆಯವರ ವಿಚಾರ ಬಿಡಿ, ಅವನಿಗೇ ತನ್ನ ರೂಪವನ್ನು ನೋಡಿಕೊಳ್ಳುವುದು ಅಸಹ್ಯಕರವಾಗಿದೆ. ಕಾರ್ಕೋಟಕ ನಳನನ್ನು ಕಚ್ಚಿದ ತಕ್ಷಣ ಮೊದಲಿನ ಆರೂಪ, ಬಣ್ಣವೆಲ್ಲ ಮರೆಯಾಗಿ ಈ ವಿಕಾರರೂಪ ಬಂದಿದೆ. ಪ್ರತಿಯಾಗಿ ಕರ್ಕೋಟಕನಿಗೆ ದಿವ್ಯವಾದ ರೂಪವು ಬಂದಿದೆ. ಆಗ ತನ್ನನ್ನು ನೋಡಿಕೊಂಡ ಅವನಿಗೆ ಆದದ್ದು ಆಶ್ಚರ್ಯ. ಅವನಿಗೇ ನಂಬಲಿಕ್ಕಾಗದಂತಹ ರೂಪ ಬಂದಿದೆ, ಈಗ ದಮಯಂತಿ ಇದೇ ಮೊದಲ ಬಾರಿಗೆ ಹತ್ತಿರದಿಂದ ನೋಡುತ್ತಿದ್ದಾಳೆ. ಯಾವ ರೂಪದ ಜೊತೆಗೆ ೧೨ ವರ್ಷಗಳ ಕಾಲ ದಾಂಪತ್ಯ ಮಾಡಿದ್ದಳೋ ಆ ರೂಪ ಇಲ್ಲಿ ಕಾಣುತ್ತಿಲ್ಲ ನಳನಲ್ಲಿ, ಇನ್ನು ದಮಯಂತಿ ಹಾಗೆಯೇ ಇದ್ದಾಳೆಯೇ ಎಂದರೆ ಅದೂ ಇಲ್ಲ, ಅವಳು ಸೌಭಾಗ್ಯವನ್ನು ತ್ಯಾಗಮಾಡುವ ಸೂಚನೆಯನ್ನು ಕೊಡುವ ಕಾವಿಬಟ್ಟೆಯನ್ನು ಧರಿಸಿದ್ದಾಳೆ, ಅವಳನ್ನು ನೋಡಿದರೆ ನಳನಿಗೆ ಹೇಗಾಗಬೇಡ? ಅರಮನೆಯಲ್ಲಿ ಕಾಡುಪಾಲಾಗುವ ಹಿಂದಿನ ದಿನ ತಲೆಯನ್ನು ಸಿಂಗರಿಸಿದ್ದಿರಬೇಕು ಆ ನಂತರ ಅದು ಯಾವುದೇ ಸಂಸ್ಕಾರವನ್ನೂ ಕಾಣದೆ ಜಡ್ಡುಗಟ್ಟಿದೆ. ಶರೀರ ಆರೈಕೆ ಇಲ್ಲದೇ ಮಲಿನವಾಗಿದೆ. ಅದರ ಬಗ್ಗೆ ಪ್ರಾಥಮಿಕ ಪ್ರಜ್ಞೆಕೂಡಾ ಇಲ್ಲ, ಪಾಚಿಕಟ್ಟಿದ ಕೊಳದ ಹಾಗೆ ಇವಳು ಛಾಯಾ ದಮಯಂತಿಯ ರೂಪದಲ್ಲಿ ಆಗಿಬಿಟ್ಟಿದ್ದಾಳೆ.

ಮೊದಲು ದಮಯಂತಿಯೇ ಮಾತನಾಡಿದಳು, ನಳನೇ ಅಂತ ಸಂಬೋಧಿಸಲಿಲ್ಲ, ಸುತ್ತುಸುತ್ತಾಗಿ ಕೇಳಿದಳು. ನನ್ನ ನಳ ಧರ್ಮಜ್ಞ, ಅವನನ್ನು ಕಂಡೆಯಾ ಬಾಹುಕಾ, ಎಲ್ಲಿಯಾದರೂ? ಯಾವುದೇ ಪುರುಷ ತನ್ನನ್ನು ಆಶ್ರಯಿಸಿದ ಹೆಂಡತಿಯನ್ನು ಕಾಡಿನಲ್ಲಿ ಮಲಗಿರುವಾಗ ಬಿಟ್ಟು ಹೊರಡುತ್ತಾನೆಂದರೆ ಅವನ ಧರ್ಮದ ಗತಿಯೇನು? ಭರ್ತಾ ಎಂಬುದರ ಅರ್ಥವೇ ಭರಿಸಬೇಕಾಗಿರುವವನು ಎಂದು, ಹಾಗೂ ಭಾರ್ಯೆ ಎಂದರೆ ಭರಿಸಲ್ಪಟ್ಟಿರುವವಳು ಎಂದು. ಹೀಗಿರುವಾಗ ಪ್ರಿಯ ಪತ್ನಿಯನ್ನು ಹೀಗೆ ಯಾರಾದರೂ ಬಿಟ್ಟು ಹೋಗುತ್ತಾರೆಯೇ? ನನ್ನ ದೃಷ್ಟಿಯಲ್ಲಿ ನಳನನ್ನು ಬಿಡಿ, ಬೇರೆಯವರೂ ಯಾರೂ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಏನು ಅಪರಾಧ ಮಾಡಿದ್ದೆ ನಾನು? ಏನು ಕಂಡು ಆ ಸ್ಥಿತಿ ಕೊಟ್ಟ ನನಗೆ? ಹಿಂದೆ ಸ್ವಯಂವರದಲ್ಲಿ ದೇವತೆಗಳನ್ನು ಬಿಟ್ಟು ಅವನನ್ನು ವರಿಸಿದ್ದೆ ನಾನು, ಅದು ಅವನಿಗೆ ನೆನಪಾಗಲಿಲ್ಲವಾ? ನಾನು ಅವನಿಗೆ ಅನುವ್ರತೆ ಆಗಿದ್ದೆ, ನಳನಲ್ಲಿ ಪರಮಪ್ರೀತಿಯನ್ನು ಇಟ್ಟಿದ್ದೆ. ಅವನ ಎರಡು ಮಕ್ಕಳ ತಾಯಿಯಾದ ನನ್ನನ್ನು ಬಿಟ್ಟುಹೋಗಿಬಿಟ್ಟರೆ ಹೇಗೆ? ಅಗ್ನಿಸಾಕ್ಷಿಯಾಗಿ ಅವರು ನನ್ನ ಕೈಹಿಡಿದಿದ್ದಲ್ಲವಾ? ಹಂಸಗಳ ಮಾತಿನ ಪ್ರಕಾರವೇ ತಾನೆ ಒಂದಾಗಿದ್ದು? ಹಾಗನ್ನುವಾಗ ನಾಲ್ಕೂ ಕಣ್ಣುಗಳಲ್ಲಿ ಧಾರಾಕಾರವಾಗಿ ಅಶ್ರುಪ್ರವಾಹ ಹರಿಯುತ್ತಿದೆ. ಇಬ್ಬರ ಕಣ್ಣುಗಳಿಂದಲೂ, ತುಂಬಾ ಕಪ್ಪು, ತುಂಬಾ ಕೆಂಪಾದ ಕಣ್ಣುಗಳಿಂದ ಕಣ್ಣೀರಿನ ಹೊಳೆಯನ್ನೇ ಹರಿಸಿದ ನಳ ಬಾಯಿಬಿಟ್ಟನಂತೆ.

ದಮಯಂತಿ ಇಷ್ಟೆಲ್ಲಾ ಮಾತನಾಡಿದರೂ ತನ್ನ ಪಾತಿವ್ರತ್ಯದ ಚೌಕಟ್ಟಿನಲ್ಲಿಯೇ ಇದ್ದಾಳೆ, ಅವನನ್ನು ಪರಪುರುಷನೆಂಬಂತೆಯೇ ಸಂಬೋಧಿಸುತ್ತಿದ್ದಾಳೆ. ಆದರೆ ನಳ ಹಾಗಲ್ಲ ಅವನು ಸೀದಾಸಾದಾ, ಅವನಿಗೆ ಏನು ಹೇಳಲೂ ತೋರದೇ ನೇರವಾಗಿಯೇ ಹೇಳಿದ. ನೀನು ಯಾವ ನಳನನ್ನು ಬಿಟ್ಟು ಒಂದುಕ್ಷಣವೂ ಇರಲಾರೆಯೋ ಹಾಗೂ ಯಾವ ನಳನು ನಿನ್ನನ್ನು ದಟ್ಟಡವಿಯ ಮಧ್ಯೆ ಬಿಟ್ಟು ಹೋದನೋ, ಅವನು ಬೇರಾರೂ ಅಲ್ಲ, ನಾನೇ! ಯಾಕೆ ಹೀಗಾಯಿತು ಅಂದರೆ ಅಂತ ವಿವರಿಸತೊಡಗಿದ, ಏನೆಂದರೆ ಈಗಾಗಲೇ ಈ ಪ್ರಶ್ನೆ ಹಿಂದೆ ಎರಡು ಬಾರಿ ಅವನ ಮುಂದೆ ಬಂದಿದೆ, ಎರಡೂ ಬಾರಿಯೂ ಅವನು ಉತ್ತರ ಕೊಟ್ಟಿದ್ದ. ಈಗ ನಿಜವಾದ ಉತ್ತರವನ್ನು ಕೊಡುತ್ತಿದ್ದಾನೆ. ದ್ಯೂತ ಆಡಿ ರಾಜ್ಯ ಕಳೆದುಕೊಂಡವ ನಾನಲ್ಲ, ನಿನ್ನನ್ನು ಬಿಟ್ಟು ಹೋದವನೂ ನಾನಲ್ಲ, ಕಲಿಯ ಆವೇಶ ಮಾಡಿರುವಂಥದ್ದು ಅದು, ನನ್ನೊಳಗೆ ಪ್ರವೇಶಮಾಡಿದ್ದ ಕಲಿಯ ಕಾರ್ಯ ಅದು, ನಳನ ಕಾರ್ಯವಲ್ಲ. ಈಗಲೂ ನಿನ್ನಿಂದಾಗಿಯೇ ನಿನ್ನನ್ನು ನೋಡುವ ಸುಯೋಗ ಒದಗಿ ಬಂತು. (ಕಲಿಗೆ ದಮಯಂತಿಯ ಮೇಲೆ ಒಲವಿತ್ತು ಅವಳನ್ನು ಹೇಗಾದರೂ ಪಡೆದುಕೊಳ್ಳಬೇಕೆಂದು, ಅದು ಸಾಧ್ಯವಾಗದಿದ್ದಾಗ ಆಟ ಹೂಡಿ ನಳನ ದೇಹವನ್ನು ಹೊಕ್ಕು ಮಾಡಬಾರದ ಕೆಲಸ ಮಾಡಿಸಿದ,) ಆಗ ಅದಕ್ಕೆ ನೀನು ಕಾರಣಳಾಗಿರಲಿಲ್ಲ‌. ಇದ್ದರೂ ಗೌಣಕಾರಣಳಿದ್ದೆ. ಆದರೆ ಈಗ ಕಲಿ ನನ್ನನ್ನು ಬಿಟ್ಟು ಹೋಗಲು ನೀನೇ ಕಾರಣ. ನಿನ್ನ ಶಾಪವೇ ಕಾರಣ. ನೀನೇನು ಶಪಿಸಿದೆಯೋ ಅದು ನೇರ ಕಲಿಗೇ ತಟ್ಟಿತು. ನಿನ್ನ ಶಾಪಕ್ಕೊಳಗಾಗಿ ಬೆಂಕಿಯಲ್ಲಿ ಬಿದ್ದಂತಾಗಿ, ಅದರಿಂದ ಸುಟ್ಟು ಸುಟ್ಟು ತಡೆಯಲಾರದೇ ನನ್ನ ದೇಹದಿಂದ ಹೊರಬಿದ್ದು ತೊಲಗಿ ಹೋದ ಅವನು. ಒಂದು ಕಡೆಯಿಂದ ನಿನ್ನ ಶಾಪ, ಇನ್ನೊಂದು ಕಡೆಯಿಂದ ನನ್ನ ಧರ್ಮ ಅವನನ್ನು ಸುಟ್ಟಿತು. ಎಂದು ಹೀಗೆ ಹೇಳುವಾಗ ಎಲೈ ಧರ್ಮವಂತರಲ್ಲಿ ಶ್ರೇಷ್ಠಳೇ ಎಂದು ಸಂಬೋಧಿಸುತ್ತಾನೆ. ಈಗ ನಮ್ಮಿಬ್ಬರ ದುಃಖದ ಅಂತ ಸನ್ನಿಹಿತವಾಗಿರಬೇಕು, ಅಂತಹ ಕಲಿ ಸೇರಿದ ನಳ ನಿನ್ನನ್ನು ತೊರೆದಿದ್ದರಿಂದಲೇ ನಿನಗೆ ಸ್ವಲ್ಪ ಒಳಿತಾಯಿತು. ನೀನು ಅನುಕೂಲ ಪರಿಸರವನ್ನು ಸೇರಿದೆ. ನಿನ್ನ ತವರು ಮನೆಯ ದಾರಿ ಸಿಕ್ಕಿತು. ಆದರೆ ನಾನು? ನನ್ನ ಗತಿ ಹಾಗಲ್ಲ, ಕರ್ಕೋಟಕನ ವಿಷ ಕಾಯುತ್ತಿತ್ತು ನನ್ನನ್ನು, ಯಾರದ್ದೋ ಮನೆಯ ಊಳಿಗ ನನ್ನನ್ನು ಕಾಯುತ್ತಿತ್ತು. ಆದರೆ ಈಗ ಎಲ್ಲದರಿಂದ ಹೊರಬಂದೆ ಅಂದ.

ನೂರು ಯೋಜನ ದೂರದಿಂದ ಆ ರಥವನ್ನು ನಾನೇ ನಡೆಸಿಕೊಂಡು ಬಂದೆ. ಅದು ನನಗೂ ಹೊಸದು, ಆದರೆ ಬಂದದ್ದು ರಾಜನಿಗಾಗಿ ಅಲ್ಲ ಕೇವಲ ನಿನಗಾಗಿ, ಎಂದು ಹೇಳಿ ತಿರುಗಿ ಪ್ರಶ್ನೆ ಮಾಡುತ್ತಾನೆ. ಇಂದು ಪ್ರಪಂಚದ ಎಲ್ಲ ರಾಜರುಗಳ ಅರಮನೆಯಲ್ಲಿ ವಿದರ್ಭದ ದೂತರಿದ್ದಾರೆ, ನಳನ ಪತ್ನಿ ದಮಯಂತಿಯ ಎರಡನೇ ಸ್ವಯಂವರ ಎಂಬ ಮಾತನ್ನು ಹೇಳುತ್ತಾ, ನೀವೇ ಕಲ್ಪಿಸಿಕೊಳ್ಳಿ, ಹೀಗೆ ಈ ವಿಚಾರ ಋತುಪರ್ಣ ನಳನಿಗೆ ಹೇಳಿದಾಗ ಅವನಿಗೆ ಹೇಗಾಗಿರಬೇಡ ಅಂತ. ಮದುವೆ ಸಮಯದಲ್ಲಿ ನಳನೂ ದಮಯಂತಿಗೆ ಮಾತುಕೊಟ್ಟಿದ್ದನಲ್ಲ, ತಾನು ಹಾಗೆಯೇ ಉಳಿದಿದ್ದ. ಈಗ ಪ್ರಶ್ನೆ ಕೇಳುತ್ತಿದ್ದಾನೆ ದಮಯಂತಿಯನ್ನು. ಎಲ್ಲ ರಾಜರಿಗೆ ನಿನ್ನ ಪುನಃಸ್ವಯಂವರದ ಕುರಿತು ವಾರ್ತೆಯನ್ನು ಕಳುಹಿಸಿದ್ದೆಯಲ್ಲ ಅದರ ವಿಚಾರವೇನು? ಎಂದು. ಒಬ್ಬ ಪುರುಷಸಿಂಹನಿಗೆ, ಚಕ್ರವರ್ತಿಗೆ, ಹೀಗೆ ತನ್ನ ಹೆಂಡತಿಗೆ ಎರಡನೇ ಸ್ವಯಂವರದ ತಯಾರಿ ನಡೆದಿದೆ ಅಂತ ತಿಳಿದರೆ ಅವನ ಪರಿಸ್ಥಿತಿ ಹೇಗಿರಬೇಕು? ಆದರೂ ಅವನು ತಾಳ್ಮೆಯಿಂದೆ ವರ್ತಿಸಿದ. ಆಕ್ರೋಶ ವ್ಯಕ್ತಮಾಡಲಿಲ್ಲ. ಪುನಃ ಹೇಳಿದ ಜಾರಿಣಿಯರು ಹೀಗೆ ಮಾಡಿದರೆ ಅದು ಸರಿ, ಅದರೆ ನೀನು? ನಿನ್ನಂಥವರಲ್ಲ, ನಿನ್ನ ಮಾತು ಕೇಳಿಯೇ ಋತುಪರ್ಣ ಇಲ್ಲಿಗೆ ಧಾವಿಸಿದ. ಅವನನ್ನು ಕರೆತರುವ ದೌರ್ಭಾಗ್ಯ ನನ್ನ ಪಾಲಿನದಾಯಿತು. ಸುವ್ರತೆಯಾದ ಯಾವ ನಾರಿ ತಾನೇ ಅನುರಕ್ತನಾದ ತನ್ನ ಪತಿಯನ್ನು ಬಿಟ್ಟು, ಕಾಯಾ ವಾಚಾ ಮನಸಾ ಅತಿಕ್ರಮಿಸಿ ಬೇರೆ ಸ್ವಯಂವರದ ವಿಚಾರಮಾಡುತ್ತಾಳೆ? ಈಗಾಗಲೇ ಅದು ಪ್ರಪಂಚದ ಎಲ್ಲ ರಾಜರುಗಳ ಮನೆಯಲ್ಲಿ ತಲುಪಿದೆಯಲ್ಲವೇ, ಇದರಿಂದ ಚಕ್ರವರ್ತಿ ನಳನ ಮರ್ಯಾದೆಗೆ ಕುಂದಲ್ಲವೇ? ಬೇರೆ ರಾಜರುಗಳಿಗೆ ಸುದ್ದಿಹೋಗಿಲ್ಲ. ಹೋದದ್ದು ಅಯೋಧ್ಯೆಗೆ ಮಾತ್ರಾ ಹಾಗೂ ನಳನ ಹುಡುಕುವುದಕ್ಕಾಗಿಯೇ ಎಂಬ ವಿಷಯ ನಳನಿಗೆ ಗೊತ್ತಿಲ್ಲ. ಋತುಪರ್ಣ ಅವನಲ್ಲಿ ಹೇಳಿದ್ದು ಇಷ್ಟೇ, ವಿದರ್ಭದಿಂದ ಸುದ್ಧಿ ಬಂದಿದೆ ದಮಯಂತಿಯ ಸ್ವಯಂವರವಂತೆ. ದೇಶವಿದೇಶಗಳ ಮಹಾರಾಜರಿಗೆ ವಿಷಯ ತಲುಪಿದೆಯಂತೆ, ಹಾಗೂ ಒಂದೇ ದಿನದ ಸಮಯ ಇದೆ ಎಂಬುದಾಗಿ. ಅಷ್ಟನ್ನೇ ನಂಬಿದ ಬಾಹುಕ ಹೀಗೆ ಯೋಚಿಸುತ್ತಿದ್ದಾನೆ. ವಿವಾಹದ ಸಮಯದಲ್ಲಿ ನಾವು ಪರಸ್ಪರ ಕಾಯಾ ವಾಕ್ ಮಾನಸ ಗಳಿಂದ ಪರಸ್ಪರರಿಗೆ ಅನುವ್ರತಿಗಳು ಎಂದು ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಮಾಡಿರಲಿಲ್ಲವೇ, ಹಾಗೆಯೇ ನಡೆದುಕೊಂಡಿರಲಿಲ್ಲವೇ? ಈಗ ಬೇರೆ ಮದುವೆ ಅಂತ ತಿಳಿದರೆ ಪತಿಯಾದವನ ಮನಸ್ಥಿತಿ ಏನಾಗಬಹುದು, ಅದರಲ್ಲಿಯೂ ಅವನು ಚಕ್ರವರ್ತಿ. ದಮಯಂತಿ ಈ ಪರಿಣಾಮವನ್ನು ಗಮನಿಸಿರಲಿಲ್ಲ, ಒಂದು ಸಾರಿ ಪ್ರೀತಿ ಬಾಂಧವ್ಯದಲ್ಲಿ ಶಂಕೆಯೊಂದು ಉತ್ಪನ್ನವಾದರೆ ಅದು ಕ್ಯಾನ್ಸರ್ ಇದ್ದಂತೆ, ಎಷ್ಟು ಸರಿಮಾಡಿದರೂ ಸಮಾಧಾನ ಆಗಲ್ಲ. ನಿಜವಾದ ಪ್ರೀತಿ ಇದ್ದಲ್ಲಿ ಇಲ್ಲದ ಶಂಕೆಯೂ ಬರುತ್ತದೆ. ಇನ್ನು ಈ ರೀತಿಯ ವ್ಯವಸ್ಥೆ ಇದ್ದಾಗ ಹೇಗೆ ಆಗಬಹುದು? ಇವತ್ತಿಗೂ ಈ ಸಮಸ್ಯೆ ಇದೆ, ಇನ್ನು ಆ ಕಾಲದಲ್ಲಿ ಯೋಚಿಸಿ. ಎಲ್ಲವೂ ಸರಿ ಅದರೆ ಈ ಪರಿಸ್ಥಿತಿಯನ್ನು ದಾಟುವುದು ಸುಲಭವಲ್ಲ, ತೇಪೆಹಾಕಬಹುದು, ಆದರೆ ಪೂರ್ಣನಿವಾರಣೆ ಆಗಲ್ಲ.

ಯಾವಾಗ ಈ ಕಲ್ಪನೆ ದಮಯಂತಿಗೆ ಬಂತೋ, ಆಕೆ ತನ್ನ ಜೀವಮಾನದಲ್ಲಿ ಕಾಣದ ಭಯವೊಂದು ಅವಳನ್ನು ಆವರಿಸಿಕೊಂಡಿತು, ಇಷ್ಟೆಲ್ಲ ಮಾಡಿಯೂ ನಾನು ನನ್ನ ಜೀವಮಾನದ ಪ್ರೀತಿಯನ್ನು ಕಳೆದುಕೊಂಡೆನಾ ಎಂದು, ಕರಜೋಡಿಸಿ ಕಣ್ಣೀರಿಟ್ಟಳು. ನಳ ಇಷ್ಟಾದರೂ, ಕೆಟ್ಟದಾಗಿ ಸಿಟ್ಟು, ದೌಷ್ಟ್ಯ ಮಾಡಲಿಲ್ಲ, ಆದರೆ ನಳನ ಈ ಭಾವ ಅವಳ ಮೇಲೆ ಇನ್ನಿಲ್ಲದ ಪರಿಣಾಮವನ್ನು ಉಂಟುಮಾಡಿದೆ. ಸಿಟ್ಟಿಗಿಂತ ಈ ಭಾವವೇ ಸಾಕು ನೋವು ತರಲು, ಅವನ ಇಡೀ ವ್ಯಕ್ತಿತ್ವವೇ ಮಂಗಲಮಯ, ಹೇ ನಳನೇ, ನನ್ನನ್ನು ಶಂಕಿಸಬೇಡ, ನಾನು ಕೆಟ್ಟ ಯೋಚನೆ ಮಾಡಲು ಸಾಧ್ಯವಿಲ್ಲ, ಲೋಕಪಾಲಕರನ್ನು ಬಿಟ್ಟು ನಿನ್ನನ್ನು ಆರಿಸಿದಾಗಲೇ ಅದು ಸಿದ್ಧವಾಗಿದೆ. ಸ್ವಯಂವರದ ನಾಟಕ ರಚಿಸಿದ್ದು ನಾನು. ಆದರೆ ಅದು ನಿನ್ನನ್ನು ಹುಡುಕಲು, ಭೂಮಂಡಲದಾದ್ಯಂತ ಹೋದ ಬ್ರಾಹ್ಮಣರ ಪೈಕಿ ಅಯೋಧ್ಯೆಗೆ ಹೋದ ಪರ್ಣಾದನಿಂದ ಮಾತ್ರಾ ಪ್ರತಿವಾಕ್ಯ ಬಂದಾಗ ಸ್ವಯಂವರದ ಸುದ್ದಿಯನ್ನು ಅಲ್ಲಿಗೆ ಮಾತ್ರವೇ ತಿಳಿಸಿದ್ದು, ಅದೂ ಅಷ್ಟುದೂರದ ಪ್ರಯಾಣವನ್ನು ಒಂದೇ ದಿನದಲ್ಲಿ ತಲುಪಬೇಕಾಗುವ ಅನಿವಾರ್ಯತೆಯನ್ನು ಸೃಷ್ಟಿಸಿ, ಆಗ ಮಾತ್ರವೇ ನೀನು ಬರಬಲ್ಲೆ ಹಾಗೂ ಬರಲು ಸಾಧ್ಯವಿರುವುದು ನಿನಗೆ ಮಾತ್ರಾ ಎನ್ನುವ ಚಿಂತನೆಯಲ್ಲಿ. ನೀನೇ ಹೇಳು ಈ ಕಾರ್ಯ ಪ್ರಪಂಚದಲ್ಲಿ ನಿನ್ನನ್ನು ಬಿಟ್ಟು ಬೇರಾರಿಗೆ ಸಾಧ್ಯ? ಆದರೆ ಈ ವಿಚಾರ ಅವಳಿಗೇ ಸಮಾಧಾನ ತರಲಿಲ್ಲ, ಹಾಗಾಗಿ ಅಂದಿನ ಕಾಲದ ಶಪಥ ಪ್ರಯೋಗ ಮಾಡಿದಳು. ಸೀತೆಯೂ ಹೀಗೆಯೇ ಅಗ್ನಿಪ್ರವೇಶ ಮಾಡಿದಳು, ಭೂಪ್ರವೇಶ ಮಾಡಿದಳು. ಇವಳೂ ಕೂಡಾ ಹಾಗೆಯೇ, ಮೊಟ್ಟಮೊದಲು ಅವಳು ಹೇಳಿದ್ದು ನಿನ್ನ ಚರಣಗಳ ಸಾಕ್ಷಿಯಾಗಿ ನಾನು ಯಾವ ತಪ್ಪನ್ನೂ ಮಾಡಿಲ್ಲ, ಮನಸ್ಸಿನಿಂದಲೂ ಮಾಡಿಲ್ಲ. ಮೂವರು ದೇವತೆಗಳು ಪ್ರಾರಂಭದಿಂದಲೂ ದಮಯಂತಿಯ ಜೊತೆಗೇ ಇದ್ದರು, ಎಂತಹ ಸ್ಥಿತಿಯಲ್ಲಿಯೂ ಅವರು ಬಿಟ್ಟು ಹೋಗಿರಲಿಲ್ಲ. ಅವಳನ್ನು ನಳನಿಲ್ಲದಿದ್ದಾಗಲೂ, ಕಾಡಿನಲ್ಲಿಯೂ, ಕಷ್ಟದಲ್ಲಿಯೂ, ಸಾಕ್ಷಿಗಳಾಗಿ ಜೊತೆಯಲ್ಲಿದ್ದರು. ಅವರೇ ಸೂರ್ಯ, ಚಂದ್ರ, ವಾಯುಗಳು. ಅವರು ಯಾವಾಗಲೂ ಜೊತೆಗಿದ್ದರು. ಇದರ ಅರ್ಥವೆಂದರೆ ಉಸಿರು ಹಾಗೂ ಬೆಳಕು. ಅವಳು ಹೇಳುತ್ತಾಳೆ, ಈ ವಾಯುದೇವನು ಎಡಬಿಡದೇ ಭೂಮಿಯಲ್ಲಿ ಸಂಚರಿಸುತ್ತಾನೆ, ಎಲ್ಲ ಭೂವಿಚಾರಗಳಿಗೆ ಅವನು ಸಾಕ್ಷಿ, ಒಂದು ವೇಳೆ ಇಂತಹ ತಪ್ಪು ನನ್ನ ಕಡೆಯಿಂದ ಆಗಿದ್ದರೆ ಅವನು ಈಗಲೇ ನನ್ನ ಪ್ರಾಣವನ್ನು ತೆಗೆದುಕೊಂಡು ಹೋಗಲಿ, ಹಾಗೆಯೇ ಸೂರ್ಯ, ಅವನು ಲೋಕಸಾಕ್ಷಿ. ಪ್ರಪಂಚದ ಕಣ್ಣು, ಯಾರಕಣ್ಣು ಮುಚ್ಚಿದರೂ ಅವನ ಕಣ್ಣು ಮುಚ್ಚುವುದಿಲ್ಲ. ಚಂದ್ರ ಎಲ್ಲ ಕರ್ಮಗಳಿಗೆ ಸಾಕ್ಷಿಯಾಗಿ ಇದ್ದಾನೆ. ನಾನು ತಪ್ಪಾಗಿ ನಡೆದಿದ್ದರೆ ಅವರು ನನ್ನನ್ನು ನಾಶಮಾಡಲಿ, ಅವನು ಮನಸ್ಸಿನ ಅಧಿಕಾರಿ, ಅವನಿಗೆ ನಾ ಮಾಡಿದ್ದು ತಿಳಿಯದಿರುವುದೇ, (ಹಾಗೆಯೇ ಮನವರಿಯದ ಪಾಪ ತಾನಿರದು ಎಂದು ಹೇಳಿದ್ದಾರೆ) ನನಗೆ ಮತ್ತೆ ಜೀವನ ಬೇಡ, ಮೂರೂ ಲೋಕವನ್ನು ಧಾರಣೆ ಮಾಡಿರುವ ಈ ಮಹಾಶಕ್ತಿಗಳು ಒಂದೋ ನನ್ನನ್ನು ತ್ಯಜಿಸಲಿ ಇಲ್ಲವೇ ಸತ್ಯ ಏನು ಎಂಬುದನ್ನು ಸಾರಿಹೇಳಲಿ, ಎಂದು ಹೇಳಿ ಶಪಥಗೈದು ದಮಯಂತಿಯು ಕಣ್ಣನ್ನು ಮುಚ್ಚಿದಳು.

ಪರಿಹಾರ ಇಲ್ಲದ ಸಮಸ್ಯೆ ಈ ಜಗದಲ್ಲಿ ಯವುದೂ ಇಲ್ಲ, ಆದರೆ ಎಲ್ಲದಕ್ಕೂ ಒಂದು ಅಡ್ಡಪರಿಣಾಮ ಇದ್ದೇ ಇರುತ್ತದೆ. ಔಷಧ ಜ್ವರವನ್ನು ವಾಸಿಮಾಡಬಹುದು ಆದರೆ ಅದು ಬೇರೇನೋ ಲಕ್ಷಣವನ್ನು ಉಂಟುಮಾಡಬಹುದು. ಆಗ ಅದಕ್ಕೆ ಬೇರೆ ಪರಿಹಾರವನ್ನು ಮಾಡಬೇಕು. ಹಾಗಾಗಿ ಅವಳ ಮುಂದೆ ಇದ್ದ ಸವಾಲು: ನಳನನ್ನು ಕರೆಸಿಕೊಳ್ಳುವುದು. ಅದನ್ನು ಮಾಡಿದ್ದಾಳೆ, ಇನ್ನು ಅಡ್ಡಪರಿಣಾಮ ಈ ಭಾವ, ಇದನ್ನು ಪರಿಹರಿಸಿಕೊಳ್ಳಬೇಕು, ಇಲ್ಲದಿದ್ದರೆ ಇದು ದೊಡ್ಡ ಪರಿಣಾಮವನ್ನು ಮಾಡಲು ಸಾಧ್ಯವಿಲ್ಲ, ಹಾಗಾಗಿ ಇದನ್ನು ಸರಿಮಾಡಿಕೊಳ್ಳುವುದೂ ಅಗತ್ಯ. ಆದ್ದರಿಂದಲೇ ಈ ಸಂಕಲ್ಪಮಾಡಿ ಪ್ರಾಣವನ್ನು ಪಣಕ್ಕಿಟ್ಟಳು. ಉತ್ಕಟವಾದ ಸನ್ನಿವೇಶಗಳು ಬಂದಾಗ ವ್ಯಕ್ತಿಗಳಲ್ಲಿರುವ ವಿಶೇಷಗಳು ಹೊರಗೆ ಬರುತ್ತದೆ, ದಮಯಂತಿಗೂ ಮೂರು ಜನ ಜೊತೆಗಾರರು ಇದ್ದರು ಅಂತ ಯಾರಿಗೆ ಗೊತ್ತಿತ್ತು? ಪ್ರಾಣವೇ ಬೇಡ ನನಗೆ, ಸತ್ಯದಲ್ಲಿ, ಧರ್ಮದಲ್ಲಿ ಇದ್ದೇನೆ ಎನ್ನುವುದು ನಿಜವಾದರೆ ಪ್ರಾಣದಿಂದ ಇರುತ್ತೇನೆ, ಇಲ್ಲದಿದ್ದರೆ ಇಲ್ಲ ಅಂತ. ದೇವತೆಗಳಿಗೇ ಸವಾಲು, ಬಂದು ಹೇಳಿ ನನ್ನ ಜೀವನ ಉಳಿಸಿ ಇಲ್ಲದಿದ್ದರೆ ನನ್ನನ್ನು ಜೊತೆಗೆ ಕರೆದುಕೊಂಡು ಹೋಗಿ ಅಂತ.

ದಿವಿಯ ಉತ್ತರಕ್ಕಾಗಿ ನಾಳೆ ಕಾಯೋಣ.

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box