#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
17-09-2018:

ಮತ್ಸ್ಯಾವತಾರ

ಜೀವಿಗಳು ನಾವು ಕರ್ಮವಶರಾಗಿ ಸಂಸಾರಕ್ಕೆ ಬಂದಿರುವೆವು; ಆದರೆ ದೇವರು ಹಾಗಲ್ಲ, ನಮ್ಮನ್ನು ಉದ್ಧರಿಸಲಿಕ್ಕಾಗಿ ಈ ಭೂಮಿಗೆ ಬರುತ್ತಾನೆ. ಬರುತ್ತಾ ಇರುತ್ತಾನೆ. ಅಜಾಯಮಾನೋ ಬಹುಧಾ ವಿಜಾಯತೇ| ಅಂದರೆ ಯಾವನಿಗೆ ಜನ್ಮವೇ ಇರುವುದಿಲ್ಲವೋ ಅವನು ಬಗೆಬಗೆಯ ರೂಪದಲ್ಲಿ ಹುಟ್ಟಿದಂತೆ ತೋರಿಕೊಳ್ಳುತ್ತಾನೆ, ಹುಟ್ಟಿದಂತೆ ಕಂಡರೂ ಅದು ಜನ್ಮವಲ್ಲ. ಉದಾ: ಸೂರ್ಯ ಹುಟ್ಟಿದ ಅಂತ ಹೇಳುತ್ತೇವೆ, ಅವನು ಯಾವುದೋ ಕಾಲದಿಂದ ಇದ್ದಾನೆ ಇನ್ನೂ ಬಹುಕಾಲ ಇರುತ್ತಾನೆ. ಸೂರ್ಯ ಮುಳುಗಿದ ಅಂತ ಹೇಳುತ್ತೇವೆ, ಸಮುದ್ರ ಸಾಕೇ ಸೂರ್ಯ ಮುಳುಗಲು?! ಈ ಸಮುದ್ರ ಸಹಿತವಾದ ಇಡೀ ಭೂಮಿಯು ಸೂರ್ಯನ ಗಾತ್ರಕ್ಕೆ ಹೋಲಿಸಿದರೆ ಒಂದು ತುಣುಕು ಅಷ್ಟೆ. ಹೀಗೆ ಅವತಾರ ಮಾಡಿದಂತೆ, ಅವತಾರ ಮುಗಿಸಿದಂತೆ ತೋರುತ್ತಾನೆ. ಹೀಗೆ ಲೀಲಾ ವೈಭವವನ್ನು ತೋರಿಸುವ ಶ್ರೀಕೃಷ್ಣನನ್ನು ಹೃದಯದಿಂದ ಧ್ಯಾನಿಸೋಣ.

ಇಂದು ಮತ್ಸ್ಯಾವತಾರದ ಕಥೆ. ಅವಕಾಶಕ್ಕೆ ತಕ್ಕಂತೆ ಅವನು ಸ್ಥಳಚರನೂ ಆಗುತ್ತಾನೆ, ಜಲಚರನೂ ಆಗುತ್ತಾನೆ, ಸ್ತ್ರೀಯೂ ಅಗುತ್ತಾನೆ, ಪುರುಷನೂ ಆಗುತ್ತಾನೆ, ಮಗುವೂ ಆಗುತ್ತಾನೆ; ನಮಗಾಗಿ ನಾನಾರೂಪಗಳನ್ನು ಧಾರಣೆ ಮಾಡುತ್ತಾನೆ. ಅವನಿಗೆ ರೂಪವೂ ಇಲ್ಲ ಆಕಾರವೂ ಇಲ್ಲ. ಆದರೂ ಭಕ್ತರಿಗಾಗಿ ಬಗೆಬಗೆಯ ಆಕಾರವನ್ನು ಧಾರಣೆ ಮಾಡುತ್ತಾನೆ.
ಬ್ರಹ್ಮದೇವರಿಗೆ ನಿದ್ದೆ ಬರುತ್ತಾ ಇದೆ; ಅಲ್ಲಿಂದ ಕಥೆ ಪ್ರಾರಂಭ. ರಾತ್ರಿಯಾಗಿದೆ, ದಿನವಿಡೀ ಸೃಷ್ಟಿ ಮಾಡಿ ಮಾಡಿ ತುಂಬಾ ಬಳಲಿಕೆಯಾಗಿದೆ ಮತ್ತು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು ಬ್ರಹ್ಮದೇವರ ಅಭ್ಯಾಸ, ಯಾಕೆಂದರೆ ಬ್ರಹ್ಮದೇವರ ನಿದ್ರೆಯೆಂದರೆ ಅದು ಪ್ರಳಯ ಹಾಗೂ ಎಚ್ಚರವೆಂದರೆ ಅದು ಸೃಷ್ಟಿ. ವಿಶ್ರಾಂತಿ ಬೇಕಲ್ಲವೇ ಬ್ರಹ್ಮನಿಗೂ, ಸೃಷ್ಟಿಗೂ ವಿಶ್ರಾಂತಿ ಬೇಕಲ್ಲವೇ, ನಿರಂತರವಾಗಿ ನಡೆಯುತ್ತಿದ್ದರೆ ಯಂತ್ರವೂ ಹಾಳಾಗುತ್ತದೆ, ಅದಕ್ಕೂ ವಿಶ್ರಾಂತಿ ಬೇಕಲ್ಲವೇ? ಹಾಗೇ ಸೃಷ್ಟಿಯಂತ್ರವೂ ಕೂಡಾ! ಅದಕ್ಕೂ ವಿಶ್ರಾಂತಿ ಬೇಕಾಗಿದೆ. ಹೀಗೆ ನಿದ್ದೆಯ ಸಮಯ ಬಂದಾಗ ಬ್ರಹ್ಮದೇವರಿಗೆ ಆಕಳಿಕೆ ಬಂದಿತಂತೆ, ಇದನ್ನು ಕೇಳಿ ನಮಗೆ ಖುಷಿಯಾಗಬಹುದು, ಬ್ರಹ್ಮದೇವರಿಗೂ ಆಕಳಿಕೆ ಬರುತ್ತದೆ ಅಂತ; ಇಂತಹವರು ನಿದ್ದೆಮಾಡಿದರೂ, ಆಕಳಿಸಿದರೂ ಎಲ್ಲದಕ್ಕೂ ಒಂದು ಪ್ರಾಮುಖ್ಯವಿರುತ್ತದೆ.

ತತ್ತ್ವಭಾಗವತಮ್

ಅದೆಂತಹ ಆಕಳಿಕೆಯೆಂದರೆ ಹಿಂದೊಮ್ಮೆ ಅಂತಹ ಸಂದರ್ಭದಲ್ಲಿಯೇ ಜಾಂಬವಂತ ಹುಟ್ಟಿದ್ದ. ಈಗ ಹೀಗೆ ಆಕಳಿಸಿದಾಗ ಬ್ರಹ್ಮನ ಮುಖದಿಂದ ವೇದಗಳು ಹೊರಗೆ ಬಂದವು. ಬ್ರಹ್ಮದೇವನಿಗೆ ನಾಲ್ಕು ಮುಖಗಳು; ನಾಲ್ಕು ಮುಖಗಳಿಂದ ನಾಲ್ಕುವೇದಗಳು ಹೊರಗೆ ಬಂದವು. ಅದನ್ನೇ ಕಾಯುತ್ತಿದ್ದ ಹಯಗ್ರೀವನೆಂಬ ಒಬ್ಬ ಅಸುರ ಅವುಗಳನ್ನು ಅಪಹರಿಸಿದ, ಅದರಿಂದಾಗಿ ಜಗತ್ತಿಗೆ ವೇದವೇ ಇಲ್ಲದಂತಾಯಿತು. ಇದೊಂದು ದೊಡ್ಡಘಟನೆ ಸೃಷ್ಟಿಯಲ್ಲಿ ಉಂಟಾಯಿತು, ಇದರಿಂದ ಏನಾಯಿತು ಅಂದರೆ; ವೇದವಿಲ್ಲದಿದ್ದರೆ ವೇದನೆ ನಿಶ್ಚಿತ, ಹಾಗೇ ಆಯಿತು. ವೇದಗಳೆಂದರೆ ಬೆಳಕು, ಬೆಳಕಿಲ್ಲದೆ ಬದುಕು ಹೇಗೆ? ಬೆಳಕು ಎಷ್ಟು ಮುಖ್ಯವಾದದ್ದು ಅದರ ಮಹತ್ವವೇನು ಎಂಬುದು ಕತ್ತಲಾವರಿಸಿದಾಗಲೇ ತಿಳಿಯುತ್ತದೆ. ಸೂರ್ಯನೇ ಹುಟ್ಟದಿದ್ದರೆ ಏನಾಗಬಹುದು ಹೇಳಿ? ಜೀವಿಗಳಲ್ಲಿ ಚೈತನ್ಯದ ಸಂಚಾರವಾಗುವುದು ಆ ಬೆಳಕಿನಿಂದಲೇ.

ಸರಿಯಾಗಿ ಅದೇ ಸಮಯದಲ್ಲಿ ಭೂಮಿಯಲ್ಲಿ ಸತ್ಯವ್ರತನೆಂಬ ರಾಜರ್ಷಿಯೊಬ್ಬ ಕೃತಮೂಲ ಎಂಬ ನದೀತೀರದಲ್ಲಿ ಕುಳಿತು ತರ್ಪಣಕೊಡಲು ನೀರನ್ನು ಕೈಗೆ ತೆಗೆದುಕೊಂಡಾಗ ಒಂದು ಹೆಣ್ಣು ಮೀನಿನ ಮರಿ ಅವನ ಕೈಯೊಳಗೆ ಬಂತು. ಇದು ಒಂದು ಚಿಕ್ಕ ಘಟನೆ. ಇದನ್ಯಾಕೆ ಹೇಳಿದೆವೆಂದರೆ, ಅಷ್ಟು ದೊಡ್ಡ ಘಟನೆಗೆ ಇಷ್ಟು ಚಿಕ್ಕ ಘಟನೆ ಪರಿಹಾರವಾಗಬಲ್ಲುದು ಅಂತ. ಸತ್ಯವ್ರತ ಅದನ್ನು ಹಾಗೇ ನೀರಿನಲ್ಲಿ ಬಿಡಲು ಹೋದಾಗ ಆ ಮೀನಿನ ಮರಿ ಮಾತಾಡುತ್ತದೆ. ರಾಜನೇ ನನ್ನನ್ನು ನೀರಿಗೆ ಬಿಡಬೇಡ, ನಾನಿನ್ನೂ ಚಿಕ್ಕದ್ದಾದ್ದರಿಂದ ನನಗೆ ನನ್ನ ಜ್ಞಾತಿಗಳಿಂದಲೇ ಭಯವಿದೆ, ಹಾಗಾಗಿ ನನ್ನನ್ನು ರಕ್ಷಿಸು ಎಂದು. ಸರಿ ಒಪ್ಪಿದ ಸತ್ಯವ್ರತ. ಅದನ್ನು ತೆಗೆದುಕೊಂಡು ಹೋಗಿ ತನ್ನ ಕಮಂಡಲುವಿನಲ್ಲಿ ಹಾಕಿದ ಮಾರನೆಯ ಬೆಳಗಿನ ಒಳಗೆ ಅದು ಕಮಂಡಲುವಿನಷ್ಟು ಬೆಳೆದಿತ್ತು, ನಂತರ ಅದನ್ನು ತೆಗೆದು ಒಂದು ಚಿಕ್ಕ ಕುಡಿಕೆಯಲ್ಲಿ ಹಾಕಿದ, ಒಂದೇ ದಿನಕ್ಕೆ ಅದನ್ನೂ ತುಂಬಿ ಬೆಳೆಯಿತು. ನಂತರ ಅದನ್ನು ಮಡಕೆಯೊಳಗೆ ಇಟ್ಟ; ಅದೂ ಸಾಲದಾದಾಗ ದೊಡ್ಡ ಕಡಾಯಿಯೊಳಗೆ ಬಿಟ್ಟ. ನಂತರ ಅದನ್ನು ಸರೋವರದಲ್ಲಿ ಬಿಟ್ಟ, ಅದೂ ಸಾಲದಾದಾಗ ನದಿಗೆ ಬಿಟ್ಟ. ಅದೂ ಸಾಲದಾದಾಗ ಕುತೂಹಲ ತಾಳಲಾರದೆ ಕೇಳಿದ ಯಾರು ನೀನು? ನೋಡಲು ಬರಿಯ ಮೀನು, ನಿಜವಾಗಿ ನೀನು ಏನು?

ಆಗ ಅದು ಹೇಳುತ್ತದೆ, ನಾನು ಬರಿಯ ಮೀನಲ್ಲ; ನಾನು ಮಹಾವಿಷ್ಣುವೇ. ನಿನಗಾಗಿಯೇ ಬಂದಿದ್ದೇನೆ, ಲೋಕವನ್ನು ಉಳಿಸಲಿಕ್ಕಾಗಿ ಬಂದಿದ್ದೇನೆ. ಭಗವಂತ ಬರಿಯ ಪುರುಷಪಕ್ಷಪಾತಿ ಎಂದು ಹುಯಿಲೆಬ್ಬಿಸುವವರಿಗೆ ಇದನ್ನು ಅವಶ್ಯ ತಿಳಿಸಬೇಕು; ಏನೆಂದರೆ, ವಿಷ್ಣುವಿನ ದಶಾವತಾರಗಳ ಪೈಕಿ ಮೊದಲ ಅವತಾರ ಸ್ತ್ರೀರೂಪ. ಹೆಣ್ಣು ಮೀನಿನ ರೂಪ; ಅದಕ್ಕೆ ಶಫರೀ ಅಂತ ಕರೆಯುತ್ತಾರೆ. ಮೀನು ಮತ್ತೆ ಹೇಳುತ್ತಿದೆ, ಸತ್ಯವ್ರತನೇ ಇನ್ನು ಸರಿಯಾಗಿ ೭ ದಿನಗಳಿಗೆ ಜಗತ್ಪ್ರಳಯ ಆಗುತ್ತದೆ, ಆಗ ಇದೆಲ್ಲವೂ ಜಲಮಯವಾಗುತ್ತದೆ, ಜಗತ್ತು ಮತ್ತೆ ಸೃಷ್ಟಿಯಾಗಲು ಬೀಜಗಳು ಉಳಿಯಬೇಕು. ಅದಕ್ಕಾಗಿ ಈ ಸೃಷ್ಟಿಯ ಬೀಜಗಳನ್ನು ನೀನು ರಕ್ಷಿಸಬೇಕು. ಬೀಜರೂಪವೆಂದರೆ ಎಲ್ಲವುಗಳ ಸೂಕ್ಷ್ಮಶರೀರ, ಅದು ಬರಿಗಣ್ಣಿಗೆ ಗೋಚರವಾಗದಂಥದ್ದು, (ಪಂಚಭೂತಗಳ ಸೂಕ್ಷ್ಮಾವಸ್ಥೆಗೆ ತನ್ಮಾತ್ರಗಳೆಂದು ಕರೆಯುತ್ತಾರೆ). ಇವುಗಳು ಹಾಗೂ ಅಪರೂಪದ ಔಷಧ ವಿಶೇಷಗಳನ್ನೂ ಜೋಡಿಸಿಕೋ, ಪ್ರಳಯದ ದಿನ ನಿನ್ನ ಬಳಿಗೆ ಒಂದು ನೌಕೆ ಬರುತ್ತದೆ, ಅದರಲ್ಲಿ ಸಪ್ತರ್ಷಿಗಳು ಇರುತ್ತಾರೆ. ಹೊರಗೆಲ್ಲ ಅಂಧಕಾರಮಯವಾದ್ದರಿಂದ ಅವರ ತೇಜಸ್ಸಿನಿಂದಲೇ ಅಲ್ಲಿ ಬೆಳಕಿರುತ್ತದೆ. ನಿನ್ನ ಸಂಗ್ರಹಗಳೆಲ್ಲದರ ಜೊತೆಗೆ ನೀನು ಅದನ್ನೇರಬೇಕು ಹಾಗೂ ಅದೇ ಬೆಳಕಿನಲ್ಲಿ ಸಂಚರಿಸುತ್ತಾ ಇರು. ಒಂದು ದಿನ ದೊಡ್ಡ ಬಿರುಗಾಳಿ ಬರುತ್ತದೆ. ಆ ಆಪತ್ತಿನ ಸಮಯದಲ್ಲಿ ನಾನು ನಿನ್ನ ಬಳಿ ಬರುತ್ತೇನೆ, ನನ್ನ ಕೊಂಬಿಗೆ ನೀನು ನೌಕೆಯನ್ನು ಕಟ್ಟಬೇಕು ನಂತರ ನಾನು ಆ ನೌಕೆಯನ್ನು ಸುರಕ್ಷಿತವಾಗಿ ಕರೆದೊಯ್ಯುತ್ತೇನೆ, ಆ ನಂತರದ ಬೆಳಗಾಗುವವರೆಗೂ ನೀನು ಸುರಕ್ಷಿತ. ಬೆಳಗೆಂದರೆ ಬ್ರಹ್ಮನ ಬೆಳಗಾಗಬೇಕು ಅಂದರೆ ಪ್ರಳಯ ಮುಗಿಯಬೇಕು ಅದೆಷ್ಟು ಕಾಲವೋ! ಅಲ್ಲಿಯವರೆಗೂ ನಿನ್ನ ನೌಕೆಯನ್ನು ಸುರಕ್ಷಿತವಾಗಿ ಸಾಗಿಸುತ್ತೇನೆ. ಆ ಸಮಯದಲ್ಲಿ ನಿನಗೆ ಬೇಸರಬರದಂತೆ ನೀನು ಪ್ರಶ್ನೆಗಳನ್ನು ಕೇಳುತ್ತಿರು, ನಾನು ಉತ್ತರಿಸುತ್ತಿರುತ್ತೇನೆ ಎಂದು.

ಮುಂದೆ ದೇವರು ಹೇಳಿದಂತೆಯೇ ಆಯಿತು. ಎಲ್ಲೆಲ್ಲಿಯೂ ನೀರು, ಅವನು ಹೇಳಿದಂತೆಯೇ ನೌಕೆ ಹತ್ತಿದ್ದಾಯಿತು, ಕಾಲ ಕಳೆಯಿತು. ಸತ್ಯವ್ರತ ಉತ್ಸುಕನಾಗಿ ಕಾಯುತ್ತಿದ್ದ ಏಕೆಂದರೆ ಭಗವಂತ ಬರುತ್ತಾನೆ ತನ್ನಲ್ಲಿಗೆ ಎಂದು. ಕುಂತಿಯೂ ಹೀಗೇ ಹೇಳುತ್ತಾಳೆ, ನಮಗೆ ಆಪತ್ತೇ ಸ್ಥಿರವಾಗಿರಲಿ ಏಕೆಂದರೆ ನಾವು ಆಗಲೇ ಭಗವಂತನನ್ನು ಸ್ಮರಿಸುತ್ತಿರುತ್ತೇವೆ ಎಂದು. ಕಡೆಗೊಂದು ದಿನ ಬಿರುಗಾಳಿ ಬೀಸಿತು ಅಥವಾ ಆ ಮೀನು ಬಂದಿದ್ದೇ ಬಿರುಗಾಳಿಯಾಯಿತೋ ಏನೋ? ಅಷ್ಟು ದೊಡ್ಡದಾಗಿತ್ತು ಅದು, ಎಷ್ಟು ದೊಡ್ಡದು ಅಂದರೆ ನೂರು ಯೋಜನದಷ್ಟು ಉದ್ದ ಇತ್ತು. ಮುಖದ ಮೇಲೆ ಕೊಂಬೊಂದು ಇತ್ತು, ಅವನು ಹೇಳಿದಂತೆಯೇ ಅದನ್ನು ಕಟ್ಟಿಕೊಂಡ ನಂತರ ಬಿಡುವಾಯಿತು ಸತ್ಯವ್ರತನಿಗೆ, ಮಾತುಕಥೆ ಪ್ರಾರಂಭವಾಯಿತು; ದೇವಶ್ರೇಷ್ಠನಿಗೂ ಹಾಗೂ ಜೀವಶ್ರೇಷ್ಠನಿಗೂ ಮಧ್ಯೆ, ಬೆಳಗಾಗುವವರೆಗೂ ಮಾತನಾಡಿದರು, ಏನು ಮಾತನಾಡಿದರೋ! ಜ್ಞಾನ, ಭಕ್ತಿ, ಬ್ರಹ್ಮ ಹಾಗೂ ಆತ್ಮತತ್ವಗಳ ಉಪದೇಶವಾಯಿತು. ಈ ಮಧ್ಯೆಯೇ ಹಯಗ್ರೀವ ರಾಕ್ಷಸನನ್ನು ಹುಡುಕಿ ಸಂಹಾರ ಮಾಡಿದ್ದೂ ಆಯಿತು ಮತ್ಸ್ಯಾವತಾರಿ ಭಗವಂತನಿಂದ, ಆ ವೇದಾಪಹಾರಿಯನ್ನು ಸಂಹಾರಮಾಡಿ ವೇದಗಳನ್ನು ಮರಳಿಪಡೆದು ಅದನ್ನು ಬ್ರಹ್ಮದೇವನಿಗೆ ಹಿಂತಿರುಗಿಸಿದ ನಂತರ ಸೃಷ್ಟಿಯು ಪ್ರಾರಂಭವಾಯಿತು. ಜೀವಜಗತ್ತಿನ ಸೃಷ್ಟಿಗೆ ವೇದಗಳೇ ಮೂಲ, ವೇದವೆಂದರೇ ಅರಿವು ಅಂದರ್ಥ, ಅರಿವಿಲ್ಲದೇ ಸೃಷ್ಟಿ ಹೇಗೆ? ಹಾಗಾಗಿ ವೇದಗಳಿಂದಲೇ ಸೃಷ್ಟಿ. ಹಾಗಾಗಿಯೇ ಆ ವೇದಗಳನ್ನು ಬ್ರಹ್ಮನ ಮುಖಗಳಲ್ಲಿ ಪುನಃಪ್ರತಿಷ್ಠಪಿಸಲಾಯಿತು ಇನ್ನು ಸೃಷ್ಟಿಕಾರ್ಯ ಸುಸೂತ್ರವಾಗಿ ಪ್ರಾರಂಭ.

ಆ ರಾಜರ್ಷಿಯೇ ವೈವಸ್ವತ ಮನು; ನಮ್ಮ ಈಗಿನ ಮನ್ವಂತರದ ಅಧಿಪತಿ ಅವನೇ. ಮನುವೆಂದರೆ ಒಂದು ಪದವಿ; ಬರಿಯ ಹೆಸರಲ್ಲ. ರಾಜನೆಂಬ ಹೆಸರು ಇಟ್ಟುಕೊಳ್ಳಬಹುದು, ಆದರೆ ಅದು ಒಂದು ಪದವಿ; ಗುರುವೆಂಬ ಹೆಸರನ್ನು ಇಟ್ಟುಕೊಳ್ಳಬಹುದು, ಆದರೆ ಅದೂ ಒಂದು ಪದವಿ. ಬ್ರಹ್ಮನ ಒಂದು ಹಗಲಿನಲ್ಲಿ ೧೪ ಜನ ಮನುಗಳು ಬಂದು ಹೋಗುತ್ತಾರೆ. ಈಗಿನದ್ದು ೭ ನೆಯ ಮನುವಿನ ಕಾಲ, ಒಬ್ಬ ಮನುವಿನ ಕಾಲ ೭೧ ಮಹಾಯುಗಗಳು, ಒಂದು ಮಹಾಯುಗವೆಂದರೆ ಕೃತ ತ್ರೇತಾ ದ್ವಾಪರ ಕಲಿಗಳೆಂಬ ನಾಲ್ಕುಯುಗಗಳು ಸೇರಿದ ಕಾಲಮಾನ. ಹೀಗೆ ಬ್ರಹ್ಮನ ಕಾಲವನ್ನು ಊಹೆಮಾಡಲೂ ಸಾಧ್ಯವಿಲ್ಲ. ಪ್ರಕೃತ ಮನುವಿನ ಪ್ರಾದುರ್ಭಾವ ಹೀಗೆ. ನಮ್ಮಗಳ ದೃಷ್ಟಿಗೆ ಮನುವೆಂದರೆ ತೀರಾ ದೊಡ್ಡವನು.

ವೇದಶಬ್ದ ಕಿವಿಗೆ ಬಿದ್ದರೇ ಪುಣ್ಯವಂತೆ, ತುಂಬಾ ದೊಡ್ಡದು ವೇದವೆಂದರೆ. ಒಂದೆರಡು ನಿಮಿಷಗಳಲ್ಲಿ ತಿಳಿದುಕೊಳ್ಳುವಂತಹುದಲ್ಲ. ಹಾಗೆ ತಿಳಿಯಲು ಸಾಧ್ಯವೂ ಇಲ್ಲ, ವೇದಗಳನ್ನು ಸರಿಯಾಗಿ ತಿಳಿಯಲು ಜನ್ಮ ಜನ್ಮಗಳೇ ಸಾಕಾಗಲಾರದು. ಪ್ರಳಯಸಾಗರದಲ್ಲಿ ವೇದವನ್ನು ಧರಿಸಿದವನು ನೀನು ಕೇವಲ ಮೀನಲ್ಲ ಆ ನಾವೆ ಕೂಡಾ ನೀನೇ, ಪ್ರಳಯ ಕಾಲದಲ್ಲಿ ಲೀಲಾಜಾಲವಾಗಿ ಸಂಚಾರಮಾಡಿದೆ ನೀನು ಅಂತ. ಜಯದೇವನ ಸ್ತುತಿ ಇದೆ.

ಯಾವುದಿದು ವೇದ? ವೇದ ಅಂದರೆ ಏನು? ಯಾರಿಗೂ ತಿಳಿದಿಲ್ಲ ಆದರೂ ಬಳಸುತ್ತಿದ್ದೇವೆ. ಸೆಕೆಂಡ್ ಹ್ಯಾಂಡ್ ತಿಳುವಳಿಕೆ ವೇದ ಅಲ್ಲ. ವೇದವೆಂದರೆ ಅರಿವು, ಅಂದರೆ ತಿಳಿಯುವುದು ಅಂತ. ಬರಿಯ ಅರಿವಲ್ಲ, ಅನುಭವ ರೂಪವಾದ ಅರಿವು ವೇದ, ಆಂಗ್ಲ ಭಾಷೆಯ ಫೀಲ್ ಎನ್ನುವ ಪದ ಇದಕ್ಕೆ ತೀರಾ ಹತ್ತಿರವಾದ ಶಬ್ದ. ಫೀಲಿಂಗ್ ಇಲ್ಲದಿದ್ದರೆ ಜೀವ ಇಲ್ಲ ಅಂತ ಅರ್ಥ, ದೇಹದ ಯಾವುದೋ ಒಂದು ಅಂಗ ಅದರಲ್ಲಿ ಫೀಲ್ ಇಲ್ಲ ಅಂದರೆ ಅದರಿಂದ ಏನು ಉಪಯೋಗ ಜೀವನಕ್ಕೆ. ಯಾವುದೇ ವಸ್ತುವನ್ನು ಫೀಲ್ ಮಾಡಬೇಕಾದರೆ ಒಂದೊಂದು ಇಂದ್ರಿಯ, ಒಂದೊಂದು ಬಗೆಯಲ್ಲಿ ಅದನ್ನು ಅರ್ಥಮಾಡಿಸಿಕೊಡುತ್ತದೆ. ಅಂದರೆ ನಾಲಿಗೆ ವಸ್ತುವಿನ ರುಚಿಯನ್ನು ತಿಳಿಸಿಕೊಟ್ಟರೆ, ಕಣ್ಣು ಅದರ ರೂಪವನ್ನು, ಮೂಗು ಅದರ ಗಂಧವನ್ನು ಹೀಗೆ ಬಗೆಬಗೆಯಲ್ಲಿ ಇಂದ್ರಿಯಗಳು ಅದರ ಪರಿಚಯ ಮಾಡಿಕೊಡದಿದ್ದರೆ ನಮಗೆ ಆ ವಸ್ತು ಅರ್ಥವಾಗೋದೇ ಇಲ್ಲ. ಯಾವುದು ಹೀಗೆ ತಿಳಿಸಿಕೊಡುತ್ತದೋ ಅದು ವೇದ. ಯಾವ ಒಂದು ಇಂದ್ರಿಯ ಇಲ್ಲದಿದ್ದರೂ ಜೀವನದಲ್ಲಿ ಅದು ಒಂದು ದೊಡ್ಡ ಕೊರತೆಯಾಗಿ ಬಿಡುತ್ತದೆ, ಜೀವನವೇ ಸಪ್ಪೆಯೆನಿಸಿಬಿಡುತ್ತದೆ, ಇನ್ನು ಐದಕ್ಕೆ ಐದೂ ಕೆಲಸ ಮಾಡದಿದ್ದರೆ ಅದರ ಪ್ರಭಾವ ಹೇಗಿರಬಹುದು? ಇಡೀಶರೀರಕ್ಕೇ ಸ್ಪರ್ಶಜ್ಞಾನವಿಲ್ಲದೇ ಹೋದರೆ ಅದು ಏನು ಉಪಯೋಗ? ಜೀವನ ಇದರಿಂದ ಅಪೂರ್ಣವಾಗುವುದಿಲ್ಲವೇ? ಅದೊಂದು ದೊಡ್ಡ ಕೊರತೆ ಆಗಿಬಿಡುತ್ತದೆ, ಬದುಕಿಯೂ ಏನು ಪ್ರಯೋಜನ ಅಂತಹ ಸ್ಥಿತಿಯಲ್ಲಿ? ಆಗ ಬದುಕು ಮುಗಿದಂತೆಯೇ. ಈ ಸ್ವಾನುಭೂತಿ, ಯಾವುದನ್ನೇ ಆಗಲಿ ಅನುಭೂತಿ ಮಾಡಿಕೊಳ್ಳುವುದೇ ವೇದ. ಈಗ ನಾವು ಹೇಳಿದ್ದು ಜೀವದ ಕಥೆ, ದೇವರು ಸೃಷ್ಟಿಯನ್ನೇ ಫೀಲ್ ಮಾಡುತ್ತಾನೆ. ಸೃಷ್ಟಿಕರ್ತ, ಸೃಷ್ಟೀಶ್ವರ ಸೃಷ್ಟಿಯನ್ನೇ ಫೀಲ್ ಮಾಡುತ್ತಾನಲ್ಲ, ಅದು ಅಕ್ಷರರೂಪಕ್ಕೆ ಬಂದರೆ ಅದಕ್ಕೆ ವೇದ ಅಂತ ಹೆಸರು. ಹಾಗಾಗಿ ಅಷ್ಟು ದೊಡ್ಡದು ಅದು. ಆ ಶಬ್ದಗಳು ಮಾಧ್ಯಮ; ನಮ್ಮನ್ನು ಆ ಶಬ್ಧಗಳು ಆ ಅನುಭೂತಿಗೆ ಕರೆದುಕೊಂಡು ಹೋಗಬೇಕು, ಆ ಅನುಭೂತಿಗೆ ಅವುಗಳು ಮಾಧ್ಯಮವಾಗುತ್ತದೆ. ಯಸ್ಯನಿಶ್ವಸಿತಂ ವೇದಾಃ | ಅಂದರೆ ವೇದಗಳು ಭಗವಂತನ ಉಸಿರು ಅಂತ ಹೇಳಿದೆ. ಅಂದರೆ ಉಸಿರಷ್ಟೇ ಮುಖ್ಯ. ದುಃಖದ ನಿವೃತ್ತಿ ಹಾಗೂ ಸುಖ ಪ್ರಾಪ್ತಿಗೆ ಇದು ಮೂಲ, ಆ ದಾರಿಯನ್ನು ತೋರಿಸಿಕೊಡುತ್ತದೆ, ಆ ಜ್ಞಾನವನ್ನು ಕೊಡುತ್ತದೆ. ಅಂತ ಯಾವುದನ್ನೇ ಆಗಲಿ ಬೇಕಾದ್ದನ್ನು ಪಡೆಯಲು, ಬೇಡವಾದದ್ದನ್ನು ತೆಗೆಯಲು ಇದು ಪ್ರಮುಖವಾದುದು. ಬದುಕು ಅಂದರೇ ಹಾಗೆ, ಬೇಕಾದದ್ದು ಬರಬೇಕು; ಬೇಡವಾದದ್ದು ದೂರ ಹೋಗಬೇಕು. ಇದು ಬಿಟ್ಟು ಬೇರೇನಾದರೂ ಅಪೇಕ್ಷೆ ಇದೆಯೇ? ಇಷ್ಟೇ ಜೀವನ ಅಂದರೆ, ಅದಕ್ಕಿರುವ ಗ್ರಂಥ ಅದು. ಅರಿವಿನಿಂದಲೇ ಭಗವಂತ ಪ್ರಪಂಚವನ್ನು ನಿರ್ಮಾಣ ಮಾಡಿದ. ಯಾವುದನ್ನೇ ಆಗಲಿ ನಿರ್ಮಾಣ ಮಾಡಬೇಕಾದರೆ ಅದರ ಬಗ್ಗೆ ಜ್ಞಾನವಿದ್ದರೆ ಮಾತ್ರವೇ ನಿರ್ಮಾಣ ಮಾಡಲು ಸಾಧ್ಯ. ಮರೆವಿನಿಂದ ಹೇಗೆ ಮಾಡಲು ಸಾಧ್ಯ. ಮಾಡಿದ್ದರೆ ಅದು ಅವನ ಸೃಷ್ಟಿ ಅಲ್ಲ, ಏನೋ ಮಾಡಲು ಹೋಗಿ ಏನೋ ಮಾಡಿರಬೇಕು ಅಷ್ಟೇ. ಅರಿವಿಲ್ಲದಿದ್ದರೆ ಹೇಗೆ ನಿರ್ಮಾಣ ಮಾಡುತ್ತಾನೆ. ಹಾಗಾಗಿ ಇದು ಜೀವನ ನಿರ್ಮಾಣಕ್ಕೆ ಮೂಲ ಹಾಗೂ ಜೀವನ ನಿರ್ವಹಣೆಗೆ ಮೂಲ.

ಯಾವದೇ ಬೆಳಕಿಲ್ಲದಿದ್ದರೆ ಸ್ವಲ್ಪ ದೂರ ಬುದ್ಧಿಯ ಬೆಳಕಿನಿಂದ ನಡೆಯಬಹುದು, ಅದರ ನಂತರ ಅದೂ ಇಲ್ಲ. ಬೆಳಕಿರದೇ ಜೀವನವಿಲ್ಲ, ಬಳ್ಳಿಯನ್ನು ನೋಡಿ ಬೆಳಕಿನ ಕಡೆಗೇ ಹಬ್ಬುತ್ತದೆ. ಹುಳು ನೋಡಿ ಹಾರಿ ಬಂದು ಸುಟ್ಟುಹೋದರೂ ಸರಿ ಬೆಳಕಿಗೆ ಬಂದು ಬೀಳುತ್ತೆ. ಬೆಳಕಿನ ಬಯಕೆ ಅದು, ಬೆಳಕಿನ ಸೆಳೆತ, ನಾವು ಹುಳುವುಗಿಂತ ಕಡಿಮೆಯಾದರೆ ನಮಗೆ ಬೆಳಕು ಬೇಡ ಅಷ್ಟೇ, ವೇದದಲ್ಲಿ ಜೀವನಕ್ಕೆ ಬೇಕಾದ ಬೆಳಕೇ ಅಡಗಿದೆ. ಇದು ಯಾರದ್ದೂ ರಚನೆ ಅಲ್ಲ, ಯಾರೂ ಇದನ್ನು ಬರೆದಿದ್ದಲ್ಲ, ಆವಿಷ್ಕಾರ ಅದು. ಉದಾ: ಭಾರತವನ್ನು ಕಂಡುಹಿಡಿದರು ಅಂತ ಹೇಳುತ್ತಾರೆ, ಅಂದರೆ ಅದು ಮೊದಲೇ ಇತ್ತು, ಅದನ್ನು ಕಂಡುಕೊಂಡರು ಅಂತ. ಹಾಗೆಯೇ ವೇದವೂ, ಅಂತಹ ಸ್ಥಿತಿಯಲ್ಲಿ ಅದನ್ನು ಅನುಭವಿಸಿದ ವ್ಯಕ್ತಿ ತಾನು ಕಂಡದ್ದನ್ನು ಅನುಭವಿಸಿದ್ದನ್ನು ಹಾಗೆಯೇ ಹೇಳಿದ; ಅದನ್ನು ಕೇಳಿದವರು ಅದನ್ನು ಗ್ರಹಿಸಿಕೊಂಡರು, ಬರೆದುಕೊಂಡರು ಅಷ್ಟೇ. ಈ ಕಲಿಯುಗದ ಅವಸ್ಥೆ ಅಂದರೆ ವೇದಗಳು ಮರೆಯಾಗುತ್ತಾ ಬರುತ್ತದೆ. ಸಾವಿರ ಸಾಮವೇದದ ಶಾಖೆಗಳ ಪೈಕಿ ಈಗ ಕೇವಲ ಮೂರೇ ಉಳಿದಿದೆ, ಅದೂ ಸರಿಯಾದ ಸ್ಥಿತಿಯಲ್ಲಿಲ್ಲ. ತುಂಡುತುಂಡಾಗಿದೆ. ಉಳಿದ ವೇದಗಳ ಸ್ಥಿತಿ ಕೂಡಾ ಭಿನ್ನವಾಗಿಲ್ಲ, ಅಥರ್ವಣವೇದದ ಶಾಖೆಯವರನ್ನು ನಾವೇ ಇದುವರೆಗೆ ಕಂಡಿಲ್ಲ, ಆ ಪರಂಪರೆಗಳು ಹೋದವು.

ಇದೆಲ್ಲ ಯಾಕೆ ಅಂದರೆ ಅದು ಕಲಿಪ್ರಭಾವ. ಕಲಿ ಕೆಲಸವೇ ಅದು; ಜಗತ್ತನ್ನು ಹಾಳು ಮಾಡುವುದು, ವೇದಗಳಿದ್ದರೆ ಜಗತ್ತನ್ನು ಹಾಳುಮಾಡಲು ಸಾಧ್ಯವಾಗದು. ಮನುಷ್ಯರನ್ನು ಕೆಡಿಸಲು ಸಾಧ್ಯವಿಲ್ಲ. ಮನಸ್ಸನ್ನು ಕೆಡಿಸಲು ಸಾಧ್ಯವಿಲ್ಲ. ವೇದಗಳು ಊರ್ಜಿತಾವಸ್ಥೆಗೆ ಬಂದರೆ ಇವೆಲ್ಲವೂ ಉಳಿದುಕೊಳ್ಳಲು ಸಾಧ್ಯ. ಧರ್ಮ, ಸುಖ, ನೆಮ್ಮದಿ, ಜೀವನ ಇದೆಲ್ಲವೂ ವೇದಮೂಲವೇ ಆಗಿದೆ. ಅದು ತಿಳಿಸಿಕೊಟ್ಟುಬಿಡುತ್ತದೆ ಏನು ಮಾಡಬೇಕು? ಏನು ಬೇಡ? ಅಂತ. ಇದರಿಂದ ಜೀವನ ಸುಲಭ. ಇದು ತಿಳಿಸಿ ಮಾಡುವಂಥಾದ್ದು, ಇನ್ನು ಅಪರೋಕ್ಷವಾಗಿ ಮಾಡುವಂಥಾದ್ದೂ ಇದೆ. ಈಗ ಅಶ್ವಮೇಧಯಾಗ ಮಾಡಲು ಸಾಧ್ಯವಿಲ್ಲ, ಆ ಖಂಡವನ್ನು ಅಧ್ಯಯನ ಮಾಡಿದರೆ ಅದು ಫಲ ಕೊಡುತ್ತದೆ, ಮಂತ್ರಗಳನ್ನು ಪಠಿಸುತ್ತಿದ್ದರೆ ಅನೇಕಫಲಗಳನ್ನು ಉಂಟುಮಾಡುತ್ತದೆ. ಅದು ನಮ್ಮ ಎಣಿಕೆಗೆ ಬಾರದೆಯೂ ಆಗುತ್ತದೆ, ವೇದ ಹೇಳುತ್ತಿದ್ದರೆ ಕೇಳುತ್ತಿದ್ದರೆ ಆ ವಾತಾವರಣ ಶುದ್ಧಿಯಾಗುತ್ತದೆ. ಮತ್ತು ಅರಿವಿನ ಮೂಲಕ ಕೊಡುವಂಥದ್ದು ತುಂಬಾ ಇದೆ, ಇಲ್ಲಿನಿಂದ ಆರಂಭಿಸಿ ಮುಕ್ತಿಯವರೆಗೆ ಎಲ್ಲವನ್ನೂ ನೀಡಬಲ್ಲದು ಅದು. ಇಂದು ಅದರ ಅಪಹರಣವಾಗುತ್ತಾ ಇದೆ, ಆಗ ಹಯಗ್ರೀವ ಮಾಡಿದಂತೆ ಈಗ ಕಲಿ ಅವುಗಳನ್ನು ಅಪಹರಣ ಮಾಡುತ್ತಿದ್ದಾನೆ. ನಾವು ಅದನ್ನು ಉಳಿಸಿಕೊಳ್ಳಬೇಕು. ಈಗ ನೀವು ಯಜುರ್ವೇದದ ಘನ ಪಾರಾಯಣವನ್ನು ಕೇಳುತ್ತಿದ್ದೀರಿ, ಅದು ತುಂಬಾ ಪ್ರಮುಖವಾದದ್ದು ಹಾಗೂ ಕಷ್ಟಕರವಾದದ್ದು. ಅದನ್ನು ಯಾರೋ ಮಾಡಲು ಸಾಧ್ಯವಿಲ್ಲ. ಆದರೆ ನಮಗೆ ಯಾರಿಗೂ ಅದರ ಅರಿವಿಲ್ಲ. ವೇದಗಳ ಪ್ರಪಂಚವೇ ಬೇರೆ ಪ್ರಪಂಚ. ಎಲ್ಲಿಗೆ ತಲುಪಿದೆ ಅಂದರೆ ಓದುವುದು ತಿಳಿದುಕೊಳ್ಳುವುದು ಬಿಡಿ, ಅದು ಏನೂ ಅಂತಲೂ ಗೊತ್ತಿಲ್ಲ, ಮರೆತುಹೋಗಿದೆ. ಅದೇ ಕಲಿ; ಹಾಗೆ ಮತ್ತೆ ಕಲಿ ನಿಗ್ರಹ ಆಗಬೇಕಾದರೆ ವೇದಗಳು ಮತ್ತೆ ವಿಜೃಂಭಿಸಬೇಕು. ರಾವಣನಿಗೆ ಅರಿವಿದ್ದಿದ್ದರೆ ಸೀತೆ ಯಾರು ಅಂತ, ಸೀತೆ ಲಕ್ಷ್ಮೀ ಅಂತ, ನಾನು ಅವಳು ಮಗು ಅಂತ, ಅವನು ಅವಳನ್ನು ಅಪಹರಣವೇ ಮಾಡುತ್ತಿರಲಿಲ್ಲ; ದಶರಥನೂ ಅರಿವಿದ್ದಿದ್ದರೆ ಕೈಕೇಯಿಗೆ ವರವನ್ನು ಕೊಡುತ್ತಿರಲಿಲ್ಲ; ನಿಮ್ಮ ಜೀವನದಲ್ಲಿ ಹಿಂತಿರುಗಿ ನೋಡಿ, ನಿಮ್ಮನ್ನೇ ತೆಗೆದುಕೊಳ್ಳಿ. ಗೊತ್ತಿದ್ದರೆ ನೀವು ಆ ತಪ್ಪನ್ನು ಮಾಡುತ್ತಿರಲಿಲ್ಲ ಅಂತ, ಅರಿವಿದ್ದರೆ ತಪ್ಪಾಗಲು ಸಾಧ್ಯವೇ ಇಲ್ಲ, ಎಲ್ಲ ತಪ್ಪೂ ಅಜ್ಞಾನದಿಂದಲೇ ಆಗುವುದು. ಅದರ ಪರಿಣಾಮದ ಅರಿವಿರಲಿಲ್ಲ, ಅರಿವಿದ್ದಿದ್ದರೆ ಮಾಡುತ್ತಿರಲಿಲ್ಲ. ಹೆಚ್ಚಿನ ತಪ್ಪುಗಳಿಗೆ ಅಜ್ಞಾನವೇ ಮೂಲ, ಜ್ಞಾನ ಬಂತು ಅಂದರೆ ತಪ್ಪುಗಳೇ ಇಲ್ಲ; ಅದೇ ವೇದ. ಅಂದರೆ ಅಂತಹ ವೇದವನ್ನು ಪೂರ್ಣಾರ್ಥದಲ್ಲಿ ಉಳಿಸಿಕೊಳ್ಳುವ ಬೆಳೆಸಿಕೊಳ್ಳುವ ಪ್ರಯತ್ನ ಮಾಡೋಣ.

ವೇದಪುರುಷನ, ಮತ್ಸ್ಯಾವತಾರನ ಕರುಣೆಯನ್ನು ಸಂಪಾದಿಸೋಣ.

ಚಿತ್ರ:ಅಂತರ್ಜಾಲದಿಂದ

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box