#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
18-09-2018:

ಕೂರ್ಮಾವತಾರ

ನಮಗೆಲ್ಲ ಭೂಮಿ ಆಧಾರ, ಭುವಿಗೆ ಸೂರ್ಯನ ಆಕರ್ಷಣೆ ಆಧಾರ, ಸೂರ್ಯನಿಗೆ? ಹೀಗೆ ಪ್ರಶ್ನೆ ಮಾಡುತ್ತಾ ಹೋದರೆ, ಕಟ್ಟಕಡೆಯ ಅಧಾರವಾಗಿ ಅಥವಾ ಮೊತ್ತಮೊದಲ ಆಧಾರವಾಗಿ, ಮೂಲಾಧಾರವಾಗಿ ಯಾರು ನಿಲ್ಲುತ್ತಾನೋ ಅಂತಹ ಶ್ರೀಕೃಷ್ಣರೂಪಿ ಭಗವಂತನಿಗೆ ಪ್ರಣಾಮ ಸಲ್ಲಿಸುತ್ತಾ ಕೂರ್ಮಾವತಾರದ ಸಂಕ್ಷೇಪ ಚಿತ್ರಣವನ್ನು ಪ್ರಾರಂಭ ಮಾಡುತ್ತೇವೆ.

ಜಗತ್ತಿನಲ್ಲಿ ಕೆಡುಕೂ, ಇದೆ ಒಳಿತೂ ಇದೆ; ಅದೆರಡೂ ಸೇರಿದರೇ ಅದಕ್ಕೆ ಜಗತ್ತು ಅಂತ ಹೇಳುವುದು. ಒಳಿತು ಒಂದೇ ಉಳಿದರೆ ಅದು ಮುಕ್ತಿ. ಇವೆರಡರ ನಡುವೆ ಎಂದಿಗೂ ಸಂಘರ್ಷ ಇರುತ್ತದೆ. ಯಾವುದೇ ಎರಡು ವ್ಯಕ್ತಿ ಅಥವಾ ಗುಂಪುಗಳು ಒಟ್ಟಾಗಿದ್ದರೆ, ಅವರುಗಳ ಉದ್ದೇಶ ಬೇರೆ, ಸ್ವಭಾವವೂ ಬೇರೆ; ಅಂತಿದ್ದರೆ ಈ ಸಂಘರ್ಷ ಇದ್ದದ್ದೇ. ಕತ್ತಲು ಹಾಗೂ ಬೆಳಕು ಇದ್ದಂತೆ ಎರಡೂ ಒಟ್ಟಿಗೆ ಇರಲು ಸಾಧ್ಯವೇ? ಹಾಗೆಯೇ ಒಳಿತು ಹಾಗೂ ಕೆಡಕುಗಳು. ಒಳಿತು ಎಂದರೆ ದೇವತೆಗಳು ಹಾಗೂ ಕೆಡುಕು ಎಂದರೆ ರಾಕ್ಷಸರು, ದೇವತೆಗಳು ಜಗತ್ತನ್ನು ಉಳಿಸುವವರು. ವರುಣ ದೇವತೆ ನೀರಿನ ಅಧಿಪತಿ, ಅವನು ಎಲ್ಲಡೆ ನೀರಿನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾನೆ, ಹಾಗೆಯೇ ಅಗ್ನಿದೇವತೆ ಅವನು ಎಲ್ಲ ಕಡೆ ಬೆಂಕಿಯು ಇರುವಂತೆ ನೋಡಿಕೊಳ್ಳುತ್ತಾನೆ. ಇವರುಗಳು ಜೀವಜಗತ್ತಿಗೆ ಪೂರಕವಾಗಿರುತ್ತಾರೆ. ವ್ಯವಸ್ಥೆಯ ಒಂದು ಭಾಗದ ಜವಾಬ್ದಾರಿಯನ್ನು ಸ್ವೀಕರಿಸಿ ಅದನ್ನು ಕೆಡದಂತೆ ಕಾಪಾಡುತ್ತಾರೆ. ಬದುಕಿನ ಭಾಗವನ್ನು ನೋಡಿಕೊಂಡು ಜೀವಿಗಳನ್ನು ಬದುಕಿಸುತ್ತಾರೆ. ರಾಕ್ಷಸರು ಈಗ ಇರುವ ವ್ಯವಸ್ಥೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಾರೆ. ಅವರು ಹೇಳುವುದು ಏನೆಂದರೆ ನಾನೇ ಈಶ್ವರ, ನಾನು ಚೆನ್ನಾಗಿ ಇದ್ದರೆ ಆಯಿತು ಅಂತ. ಉಳಿದವರು ಏನಾದರೂ ಅವರಿಗೆ ಚಿಂತೆಯಿಲ್ಲ. ಹಾಗಾಗಿ ಇವರಿಬ್ಬರ ನಡುವೆ ನಿರಂತರ ಸಂಘರ್ಷ.

ತತ್ತ್ವಭಾಗವತಮ್

ಪುರಾಣದಲ್ಲಿ ಎಲ್ಲ ಕಡೆಗಳಲ್ಲಿ ಈ ಕದನ ಇದೆ, ಸೃಷ್ಟಿ ಇರುವವರೆಗೂ ಇದು ಸಹಜ. ಈ ಕದನದಲ್ಲಿ ಹೆಚ್ಚಿನ ಬಾರಿ ದೇವತೆಗಳು ಗೆದ್ದಿದ್ದಾರೆ, ಕೆಲವು ಬಾರಿ ರಾಕ್ಷಸರು ಗೆದ್ದಿದ್ದಾರೆ. ಯಾಕೆ ಅಂದರೆ ಈ ಗೆಲುವು ಅನ್ನುವುದೇ ಚಂಚಲ, ಯಾರಿಗೆ ಒಲಿಯುತ್ತದೆ ಹೇಳಲಾಗದು. ಕೆಲವು ಬಾರಿ ಕೆಡುಕಿಗೇ ಗೆಲುವಾಗಬಹುದು; ಚಕ್ರ ತಿರುಗುವಾಗ ಮೇಲೆ ಕೆಳಗಾಗುವಂತೆ, ಕೆಳಗು ಮೇಲಾಗುವಂತೆ. ಹಾಗೆ ನಡೆದಾಗ ಒಂದು ಸಾರಿ ದೇವತೆಗಳು ಸೋತರು, ಸಾಲುಸಾಲಾಗಿ ಸುರ ಸೈನಿಕರ ಪ್ರಾಣಾರ್ಪಣೆಯೂ ಆಯಿತು. ದೇವತೆಗಳ ದೇಹಗಳ ಪರ್ವತವೇ ಬಿದ್ದಂತೆ ಬಿದ್ದಿತ್ತು. ಇಂದ್ರ ತನ್ನ ತೇಜಸ್ಸನ್ನು ಕಳೆದುಕೊಂಡ; ಈಗ ಅಂತ ಅಲ್ಲ ಮೊದಲೇ ಕಳೆದುಕೊಂಡಿದ್ದ. ಅವನಿಗೆ ದೂರ್ವಾಸರ ಶಾಪ ಬಂದಿತ್ತು. ಅಧಿಕಾರದಲ್ಲಿನ ಪಕ್ಕದ ಸಂಗತಿಯೇ ಮದ, ಅಧಿಕಾರ ಅಂದರೇ ಒಂದು ತರಹ ಅಮಲು, ಕಣ್ಣುಕಾಣಲ್ಲ, ಗುರುಹಿರಿಯರು, ಸಾಧು ಸಜ್ಜನರು ಕಾಣುವುದಿಲ್ಲ. ಒಂದು ಸಾರಿ ಹೀಗಾಯಿತು, ದೂರ್ವಾಸರು ವೈಕುಂಠಕ್ಕೆ ಹೋಗಿ ಹರಿಯ ದರ್ಶನ ಮಾಡಿ ಅಲ್ಲಿಂದ ಹಿಂತಿರುಗಿ ಬರುತ್ತಿದ್ದರು, ಉತ್ಸವದಲ್ಲಿದ್ದ ಇಂದ್ರಾದಿ ದೇವತೆಗಳು ದಾರಿಯಲ್ಲಿ ಸಿಕ್ಕರು, ದೂರ್ವಾಸರು ದೇವರಾಜನೆಂಬ ಅಭಿಮಾನದಿಂದ ತಮ್ಮಲ್ಲಿದ್ದ ಪ್ರಸಾದದ ಮಾಲೆಯನ್ನು ಇಂದ್ರನಿಗೆ ಕೊಟ್ಟರು, ಉತ್ಸವದ ಮಾನಸಿಕತೆಯಲ್ಲಿದ್ದ ಇಂದ್ರ ಅದನ್ನು ತೆಗೆದುಕೊಂಡು ಐರಾವತದ ಕುಂಭಸ್ಥಳದಲ್ಲಿ ಅದನ್ನಿರಿಸಿದ, ಐರಾವತ ಮೊದಲೇ ಮದವುಳ್ಳ ಆನೆ; ಅದಕ್ಕೇನಾಯಿತೋ ತಿಳಿಯದು. ಆ ಹೂವನ್ನು ಅಲ್ಲಿಂದ ತೆಗೆದು ಕಾಲುಗಳ ಕೆಳಗೆ ಹಾಕಿ ಅದನ್ನು ತುಳಿದುಬಿಟ್ಟಿತು, ಮೊದಲೇ ಅವರು ದೂರ್ವಾಸರು, ಮೇಲಾಗಿ ಕೊಟ್ಟದ್ದು ವೈಕುಂಠದ ಪ್ರಸಾರ ಬೇರೆ ಆಗಿದ್ದಿತು. ಅವರು ಸಿಟ್ಟಿನಿಂದ ಇಂದ್ರನಿಗೆ ಶಪಿಸಿಬಿಟ್ಟರು, ನಿನಗೆ ಅಧಿಕಾರದ ಮದವೇರಿದೆ, ಅದು ಕಳೆದುಕೋ ಸರಿಯಾಗುತ್ತೆ ಎಂದು. ಆಗ ಇಂದ್ರನ ಕಾಂತಿ ಹೋಯಿತು, ಉಳಿದ ಲೋಕಪಾಲಕರ ಸತ್ವವೂ ಹೋಯಿತು. ದೇವಲೋಕದಲ್ಲಿ ರಾಕ್ಷಸರ ಅಧಿಪತ್ಯ ಪ್ರಾರಂಭವಾಯಿತು, ಭೂಲೋಕದಲ್ಲಿ ಯಜ್ಞಯಾಗಾದಿಗಳು ನಿಂತುಹೋದವು, ಅದರಿಂದಾಗಿ ದೇವತೆಗಳು ಮತ್ತಷ್ಟು ಕ್ಷೀಣಬಲರಾದರು. ಆಗ ಎಲ್ಲರೂ ಸೇರಿ ಭಗವಾನ್ ವಿಷ್ಣುವಿನ ಪ್ರಾರ್ಥನೆ ಮಾಡುತ್ತಾರೆ. ಬ್ರಹ್ಮ, ಅಂದರೆ ವಿಧಿಯು ತಾನೇ ಸ್ವತಃ ದೇವತೆಗಳ ತೊಂದರೆಯನ್ನು ವಿಷ್ಣುವಿನಲ್ಲಿ ನಿವೇದಿಸಿಕೊಳ್ಳುತ್ತಾನೆ.

ವಿಷ್ಣು ಭಗವಾನ್ ಹೇಳುತ್ತಾರೆ, ಈ ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಇಲ್ಲ, ಬ್ರಹ್ಮರ್ಷಿಗಳ ಶಾಪ ನಿಮ್ಮನ್ನು ಕಾಡುತ್ತಿದೆ, ಅಲ್ಲದೇ ಅದಕ್ಕೆ ಕಾಲ ಕೂಡಿ ಬರಬೇಕು ಅಂತ. ಮಹಾತ್ಮರು ಶಾಪವನ್ನೋ ಅನುಗ್ರಹವನ್ನೋ ಮಾಡಿದರೆ ಭಗವಂತನು ಅದಕ್ಕೆ ಅಡ್ಡಿಬರಲಾರ, ಹಾಗಾಗಿ ಯೋಗ್ಯಕಾಲ ಬರದೆ ಏನೂ ಬದಲಾಗಲಾರದು. ಈಗ ನೀವುಗಳು ಹೋಗಿ ರಾಕ್ಷಸರ ಜೊತೆಗೆ ರಾಜಿ ಮಾಡಿಕೊಳ್ಳಿ, ಅವರು ಈಗ ಗೆದ್ದಿರುವುದರಿಂದ ನಿಮ್ಮ ಜೊತೆಗೆ ಸಂಧಿಗೆ ಬರಲಾರರು. ನೀವು ಅವರಿಗೆ ಅಮೃತದ ಆಸೆ ತೋರಿಸಿದರೆ ಅವರು ಬರುತ್ತಾರೆ ಎಂದರು. ಆಗಿನ್ನೂ ಅಮೃತ ಇರಲಿಲ್ಲ, ಅದನ್ನು ಹೇಗೆ ಪಡೆಯುವುದು ಎಂದರೆ? ಪೃಥ್ವಿಯಲ್ಲಿ ದೊರೆಯುವ ಸಮಸ್ತ ಔಷಧಿ-ವನಸ್ಪತಿಗಳನ್ನು ಕ್ಷೀರಸಾಗರದಲ್ಲಿ ಹಾಕಿ ಅದನ್ನು ಕಡೆಯುವುದು, ಆಗ ಅಮೃತ ಪ್ರಾಪ್ತಿಯಾಗುತ್ತದೆ ಎಂದ ಭಗವಂತ. ಅದಕ್ಕಾಗಿ ಮಂದರ ಪರ್ವತವನ್ನು ಕಡೆಗೋಲನ್ನಾಗಿ ಮಾಡಿಕೊಳ್ಳಬೇಕು, ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಳ್ಳಬೇಕು. ನೀವಿಬ್ಬರೂ ಸೇರಿಸಿ ಕಡೆಯಬೇಕು, ಕಡೆಯುವಾಗ ಮೊದಲಲ್ಲಿ ಏನೆಲ್ಲಾ ಬರಬಹುದು; ಕಾಲಕೂಟ ವಿಷ, ಅಪ್ಸರೆಯರು, ಉಚ್ಛೈಶ್ರವಸ್ಸು ಇತ್ಯಾದಿಗಳು ಬರುತ್ತದೆ. ಕಾಲಕೂಟ ವಿಷ ಬಂದಾಗ ಹೆದರದಿರಿ, ಅಪ್ಸರೆಯರು ಬಂದಾಗ ಆಸೆಪಡಬೇಡಿ; ಕೊನೆಯಲ್ಲಿ ಅಮೃತ ಬರುತ್ತದೆ, ಅದನ್ನು ಸೇವಿಸಿ ನೀವು ಅಮೃತರಾಗಬಹುದು ಅಂತ. ಮನುಷ್ಯನಿಗೆ ಇದು ಪಾಠ, ಅವನು ಜೀವನದಲ್ಲಿ ಮೇಲೇರಬೇಕೆಂದರೆ ಭಯ ಮತ್ತು ಆಸೆ ಇವೆರಡನ್ನೂ ಬಿಡಬೇಕು ಎಂಬುದಾಗಿ ಪರೋಕ್ಷವಾಗಿ ಭಗವಂತ ಹೀಗೆ ಸೂಚಿಸುತ್ತಿದ್ದಾನೆ.

ಸರಿ ದೇವದಾನವರ ನಡುವೆ ಸಂಧಾನ ಪ್ರಾರಂಭವಾಯಿತು, ಅಮೃತದ ಆಸೆಯಿಂದ ರಾಕ್ಷಸರು ಸಮುದ್ರಮಥನಕ್ಕೆ ತಯಾರಾದರು. ಎಂತಹ ವಿಚಿತ್ರ ಸಂಧಾನ ನೋಡಿ! ಕತ್ತಲು ಬೆಳಕುಗಳ ನಡುವೆ ಎಂದಾದರೂ ಸಂಧಾನ ಸಾಧ್ಯವೇ? ಅದು ಸಂಧ್ಯೆಯಲ್ಲಿ ಮಾತ್ರವೇ ಒಂದಾಗುವುದು. ಏನಾದರೂ ಏಕೀಯಸೂತ್ರವಿದ್ದರೆ ಅಂದರೆ ಸಮಾನ ಆಸೆಗಳು, ನಂಬಿಕೆಗಳು ಇದ್ದರೆ ಯಾರು ಬೇಕಾದರೂ ಒಂದಾಗುತ್ತಾರೆ, ಅಧಿಕಾರದ ಉದ್ದೇಶ ಇದ್ದರೆ ಹಾವು ಇಲಿಗಳೂ ಒಂದಾಗುತ್ತವಂತೆ. ಅಹಿಮೂಷಿಕನ್ಯಾಯ ಅಂತ ಒಂದು ವಿಷಯ ಇದೆ, ಅದರಲ್ಲಿ ಒಂದು ಹಾವು ಅಕಸ್ಮಾತ್ ಹಾವಾಡಿಗನಿಗೆ ಸಿಕ್ಕಿಹಾಕಿಕೊಂಡುಬಿಟ್ಟಿರುತ್ತದೆ, ಅದರ ಬುಟ್ಟಿಯೊಳಗೆ ತಪ್ಪಿ ಒಂದು ಇಲಿಯೂ ಬರುತ್ತದೆ. ಆಗ ಅವರುಗಳ ನಡುವೆ ಸಂಧಾನವಾಯಿತು. ಶುದ್ಧವೈರಿಗಳು ಅವುಗಳ ನಡುವೆ ಸಂಧಾನವೆಂಥದ್ದು ಅಂದರೆ, ಹಾವಿಗೆ ಈಗ ಇಲಿಯ ಅವಶ್ಯಕತೆ ಇದೆ, ಹೊರಹೋಗಲಿಕ್ಕಾಗಿ. ಹಾಗಾಗಿ ಹಾವು ಇಲಿಗೆ ಹೇಳುತ್ತದೆ, ನೋಡು ನಾವಿಬ್ಬರೂ ಸ್ನೇಹಿತರು. ನೀನು ಈ ಬುಟ್ಟಿಯನ್ನು ಕೊರೆದು ರಂಧ್ರ ಮಾಡು ನಾವಿಬ್ಬರೂ ಹೊರಹೋಗೋಣ, ಪ್ರತಿಯಾಗಿ ನಾನು ನಿನಗೆ ಏನು ಉಪಕಾರ ಮಾಡುವೆನೆಂದರೆ ನಿನ್ನನ್ನು ತಿನ್ನುವುದಿಲ್ಲ, ಹಾಗೆಯೇ ಬಿಟ್ಟುಬಿಡುತ್ತೇನೆ ಅಂತ. ಪಾಪ ಇಲಿ ರಾತ್ರಿಯಿಡೀ ಕಷ್ಟಪಟ್ಟು ರಂಧ್ರ ಮಾಡಿದರೆ ಹಾವು ಮೊದಲಾಗಿ ಹೊರಗೆ ಹೋಗಿ ಅಲ್ಲಿ ಕಾದುಕುಳಿತಿತ್ತು. ಇಲಿ ಹೊರಗೆ ಬಂದ ತಕ್ಷಣ ಅದನ್ನು ತಿಂದು ಹಾಕಿತು. ಹೀಗೆ ಅನುಕೂಲಸಿಂಧು ಸ್ನೇಹ ಬಲಿಷ್ಟರ ಲಾಭಕ್ಕಾಗಿಯೇ ಆಗಿರುತ್ತದೆ. ಇಲ್ಲಿ ಇವರಲ್ಲೂ ಒಳ್ಳೆಯ ಉದ್ದೇಶ ಇರಲಿಲ್ಲ, ಒಂದು ವೇಳೆ ದೇವತೆಗಳಲ್ಲಿ ಕೆಟ್ಟ ಉದ್ದೇಶ ಇರದಿರಬಹುದು, ಅದರೆ ರಾಕ್ಷಸರಲ್ಲಿ ಕೆಟ್ಟ ಉದ್ದೇಶವು ಖಂಡಿತವಾಗಿಯೂ ಇದ್ದಿತು. ಇದು ಕೇವಲ ಸಮುದ್ರಮಥನಕ್ಕಾಗಿಯೇ ಆದಂತಹ ಸಂಧಾನ.

ಸರಿ ಎರಡೂ ಗುಂಪು ಹೊರಟಿತು. ಆದರೆ ಮಂದರ ಪರ್ವತವನ್ನು ಅಲ್ಲಾಡಿಸಲೂ ಆಗಲಿಲ್ಲ, ಭಗವಂತನ ಕಾರುಣ್ಯದಿಂದ ಅಲ್ಲಾಡಿತು. ಹೇಗೋ ಕಷ್ಟಪಟ್ಟು ಹೊತ್ತು ತಂದರು. ದಾರಿಯಲ್ಲಿ ಬರುವಾಗ ಹೊರಲಾರದೇ ನೆಲದ ಮೇಲೆ ಬಿದ್ದು ಹೋಯಿತು. ಅದರಡಿಯಲ್ಲಿ ಬಿದ್ದು ಹಲವಾರು ಜನ ಪ್ರಾಣಬಿಟ್ಟರು. ಮತ್ತೆ ಶೀಮನ್ನಾರಾಯಣನೇ ಬರಬೇಕಾಯಿತು, ಆತ ಬಂದವನೇ ತನ್ನ ಒಂದು ಕೈಯಿಂದ ಪರ್ವತವನ್ನು ಎತ್ತಿ ಗರುಡನ ಮೇಲಿಟ್ಟುಕೊಂಡು ಬಂದು ಅದನ್ನು ಸಮುದ್ರದಲ್ಲಿ ಹೊತ್ತುಹಾಕಿ ಮರಳಿದನು. ಅವನಶಕ್ತಿ ಅಷ್ಟು; ನಮ್ಮಲ್ಲಿ ಇರುವ ಶಕ್ತಿ ಎಷ್ಟು? ಹಾಗಾಗಿ ಅವನಿಗೆ ಶರಣಾದರೆ ಸಾಕು ಏನೂ ಆಗಬಹುದು. ದೇವರು ಕೈಬಿಟ್ಟರೆ ಪರ್ವತವೂ ಕೈತಪ್ಪುವುದು. ತನ್ನ ಕೇವಲ ಕರುಣಾಪೂರ್ಣ ದೃಷ್ಟಿಯಿಂದಲೇ ಪರ್ವತದ ಕೆಳಗೆ ಬಿದ್ದು ಸತ್ತವರನ್ನು ಬದುಕಿಸಿದ ಭಗವಂತ. ವಾಸುಕಿಗೆ ಅಮೃತದ ಆಸೆ ತೋರಿಸಿದಾಗ ಅವನೂ ಹಗ್ಗವಾಗಲು ಒಪ್ಪುತ್ತಾನೆ, ದೇವತೆಗಳ ಮಧ್ಯೆ ಉಪೇಂದ್ರನಿದ್ದಾನೆ, ಅವನು ಸಾಕ್ಷಾತ್ ವಿಷ್ಣವೇ. ಇಂದ್ರನ ತಮ್ಮನಾಗಿ ಬಂದವನು ಅವನು ನೇರವಾಗಿ ಹೋಗಿ ವಾಸುಕಿಯ ಮುಖದ ಬಳಿ ಹಿಡಿಯಲು ಹೋದ, ಆಗ ರಾಕ್ಷಸರು ಪ್ರತಿರೋಧ ಮಾಡಿದರು, ಹಾವಿನ ಬಾಲವನ್ನು ನಾವು ಹಿಡಿಯುವುದೇ ಖಂಡಿತಾ ಸಾಧ್ಯವಿಲ್ಲ ಅದು ತೀರಾ ಕನಿಷ್ಟವಾದದ್ದು, ನಾವು ಜ್ಯೇಷ್ಟರು, ಶ್ರೇಷ್ಠರು; ನಮಗೆ ಅದು ವರ್ಜ್ಯ ಎಂದುಬಿಟ್ಟರು. ವಿಷ್ಣುವಿಗೆ ಅದೇ ಬೇಕಾಗಿತ್ತು. ನೇರ ದೇವತೆಗಳು ವಾಸುಕಿಯ ಬಾಲದ ಭಾಗ ಹಿಡಿದರು. ಇದನ್ನೇ ಮೂರ್ಖತೆ ಎನ್ನುವುದು. ಕೇವಲ ವ್ಯಕ್ತಿ ವಿರೋಧಕ್ಕೆ ಹೊಟರೆ ಹೀಗೇ, ಬುದ್ಧಿಯೂ ಕೈಕೊಡುತ್ತದೆ. ಮೊದಲೇ ವಾಸುಕಿ ಭಯಂಕರ ವಿಷಕಾರಿ, ಉಸಿರಲ್ಲೂ ವಿಷ ತುಂಬಿರುತ್ತೆ, ಇನ್ನು ಆ ರೀತಿ ಮಥನಮಾಡುವಾಗ ಮುಖದಿಂದ ಉರಿಯೇ ಹೊರಬರಲಿದೆ. ಹಾಗಾಗಿಯೇ ರಾಕ್ಷಸರ ಅಹಂ ಕೆಣಕಿದ. ಹೀಗೇ ಅಹಂಕಾರ ಹೆಡೆ ಎತ್ತಿದರೆ ನಾವು ಹೋಗುವುದು ಹೆಡೆಯ ಕಡೆಗೇ.

ಸರಿ ಮಥನ ಪ್ರಾರಂಭವಾಯಿತು. ಸ್ವಲ್ಪ ಸಮಯದಲ್ಲಿಯೇ ಮಂದರ ಸಮುದ್ರದಲ್ಲಿ ಮುಳುಗಿಹೋಯಿತು. ಎಲ್ಲರ ಮುಖದಲ್ಲೂ ನಿರಾಶೆ ಮೂಡಿತು. ದೈವದ ಮುಂದೆ ಪುರುಷಭಾವ ಸೋತಿದೆ. ಮತ್ತೆ ಭಗವಂತನಲ್ಲಿ ಎಲ್ಲರೂ ಸೇರಿ ಪ್ರಾರ್ಥಿಸಿದರು. ಅದು ಗಣಪತಿಯ ಕೆಲಸ ಅಷ್ಟೇ, ಇಷ್ಟೊಂದು ದೊಡ್ಡ ಕಾರ್ಯ ಪ್ರಾರಂಭವಾಗುವಾಗ ಕನಿಷ್ಠ ತನ್ನನ್ನು ನೆನಪು ಮಾಡಿಕೊಳ್ಳಲೂ ಇಲ್ಲವಲ್ಲ, ತನಗೆ ಗೌರವ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ವಿಘ್ನ ಮಾಡಿದನಾತ. ಆದರೆ ಅದನ್ನು ಯಾರೂ ಕಾಣಲಿಲ್ಲ, ಶ್ರೀಮನ್ನಾರಾಯಣ ಕಂಡ. ಅನಂತಬಲವಂತನಾದ ಭಗವಂತ, ಕೂರ್ಮದ ಶರೀರ ಧಾರಣೆಮಾಡಿ ಪರ್ವತವನ್ನು ಮೇಲೆ ಎತ್ತಿದ, ಮೇಲೆ ಬಂದ ನಂತರ ಎಲ್ಲರಿಗೂ ಅದರ ಅರಿವಾಯಿತು, ಆನಂದಪಟ್ಟರು. ಮಥನ ಮುಂದುವರೆಯಿತು. ಆ ಮಹಾನ್ ಕೂರ್ಮದ ಬೆನ್ನು ಲಕ್ಷ ಯೋಜನ ವಿಸ್ತಾರವಿತ್ತು, ಆ ಮಹಾನ್ ಪರ್ವತವನ್ನು ಹೊರಬೇಕಾದರೆ ಅಷ್ಟು ಬೇಕು ಸಹಜವಾಗಿ. ಹೀಗೆ ಆಧಾರವಿಲ್ಲದಾಗ ಆಧಾರವಾಗುವವನು ಯಾರು? ನಿರಾಧಾರಿಗೆ ಸದಾಧಾರವಾಗುವವನು ಯಾರು? ಅವನೇ ಭಗವಂತ. ಅದನ್ನೇ ಪ್ರವಚನದ ಪ್ರಾರಂಭದಲ್ಲಿಯೂ ಹೇಳಿದ್ದು, ಆಧಾರದ ಹಿಂದೆ ಹೊರಟರೆ ಎಲ್ಲೋ ಒಂದುಕಡೆ ಆಧಾರವೇ ಕಾಣಿಸುವುದಿಲ್ಲ, ಭೂಮಿ ಆಕಾಶಗಳು ನಿಂತಿರುವುದೇ ಆಶ್ಚರ್ಯ ಅನಿಸುತ್ತದೆ. ಎಲ್ಲಕ್ಕೂ ಕೊನೆಗೆ ಅವನೇ ಅಧಾರ.

ಹಾಲನ್ನು ಕಡೆಯುವ ಕಾರ್ಯ ಅಂದರೆ ಹಾಲಿನ ಕಡಲನ್ನು ಕಡೆಯುವುದು, ಅದರಲ್ಲಿ ಭೂಮಿಯ ಮೇಲಿನ ಎಲ್ಲ ಔಷಧಗಳನ್ನೂ ಹಾಕಿದ್ದರು, ಕಡೆಯುವವರು ಎಲ್ಲರೂ ಶಕ್ತಿವಂತರು, ವಾಸುಕಿಯೂ ಬಲವಂತ, ತೀವ್ರವೇಗದಲ್ಲಿ ಚಲಿಸಿತು ಮಂದರ. ಹೀಗೆ ಮಾಡಿದಾಗ ಕೂರ್ಮರೂಪಿಗೆ ನೋವಾಗಲಿಲ್ಲವೇ? ಎಂದರೆ, ಇಲ್ಲವಂತೆ. ಅವನಿಗೆ ಕೇವಲ ತುರಿಸಿಕೊಟ್ಟಂತೆ ಸುಖವಾಯಿತಂತೆ. ಮೊದಲೇ ಆಮೆಯ ಬೆನ್ನಿನ ಕವಚ ಅದು ಬಹಳ ಗಟ್ಟಿಯಾದದ್ದು. ಇನ್ನು ಆ ದಿವ್ಯಕೂರ್ಮದ್ದು ಹೇಗಿರಬೇಕು? ಆದರೆ ಕಡೆಯುವವರ ಶಕ್ತಿ ಕುಂದುತ್ತಾ ಬಂತು, ಆಗ ಭಗವಂತನೇ ಅವರ ಶಕ್ತಿಯನ್ನು ಉದ್ದೀಪನಗೊಳಿಸುವ ಕೆಲಸ ಮಾಡಿದನಂತೆ. ಸುರರ ಮಧ್ಯೆ ಸುರನಾಗಿ, ಅಸುರರ ಮಧ್ಯೆ ಅಸುರನಾಗಿ ಸೇರಿ ಅವರುಗಳನ್ನು ಯಥಾಪ್ರಕಾರವಾಗಿ ಹುರಿದುಂಬಿಸುತ್ತಾ, ಒಳಗಿನಿಂದಲೂ ಚೈತನ್ಯವನ್ನು ನೀಡುತ್ತಾ ಕಾರ್ಯವನ್ನು ಮುಂದುವರೆಯುವಂತೆ ಮಾಡಿದ. ಅಷ್ಟರಲ್ಲಿಯೇ ವಾಸುಕಿಗೆ ಆಯಾಸವಾಯಿತಂತೆ. ಪಾಪ, ಎರಡೂ ಕಡೆಯಿಂದ ಅವನನ್ನು ಎಳೆದು ಕಡೆಯುತ್ತಿದ್ದರೆ ಅವನ ಗತಿ ಏನಾಗಿರಬಹುದು, ಆ ಕ್ಷಣದಲ್ಲಿ ಭಗವಂತ ನಿದ್ರಾರೂಪನಾಗಿ ಅವನ ಮೈಯೊಳಗೆ ಹೊಕ್ಕು ಅವನು ಮೈಮರೆಯುವಂತೆ ಮಾಡಿದನಂತೆ. ಕೆಲವು ಸಾರಿ ಬೋಧವೂ ಒಳ್ಳೆಯದು, ಕೆಲವು ಬಾರಿ ಅಬೋಧವೂ ಒಳ್ಳೆಯದು; ಕೆಲವು ಬಾರಿ ಎಚ್ಚರವು ಸುಖವಾದರೆ, ಕೆಲವು ಬರಿ ನಿದ್ದೆಯು ಸುಖಕರ. ಸದ್ಯಕ್ಕೆ ವಾಸುಕಿಗೆ ಎಚ್ಚರವಿಲ್ಲದ್ದೇ ವರ. ಆದರೂ ಅಮೃತ ಬರುವಷ್ಟು ಕಡೆಯಲು ಸಾಧ್ಯವಾಗದಿದ್ದಾಗ, ತಾನೇ ಸಹಸ್ರಬಾಹುವಾಗಿ ಎರಡೂ ಕಡೆಯಿಂದ ತಾನೇ ಕಡೆದನಂತೆ. ಆಗ ಒಂದೊಂದಾಗಿ ಪದಾರ್ಥಗಳು ಹೊರಬಂತು, ಕೊನೆಯಲ್ಲಿ ಅಮೃತ. ಅದನ್ನು ತಂದವರು ಯಾರೆಂದರೆ ಅದೂ ಅವನೇ! ಧನ್ವಂತರಿಯ ರೂಪದಲ್ಲಿ ಅಮೃತವನ್ನು ಹೊತ್ತುತಂದನಂತೆ.

ಹೀಗೆ, ಅಮೃತ ಸಂಭವಕ್ಕೆ ಯಾರು ಕಾರಣವೆಂದರೆ ಎಲ್ಲರೂ ತಾವು ತಾವೆಂದು ಹೇಳಬಹುದು ಆದರೆ ನಿಜವಾದ ಕಾರಣ ಆ ಆದಿಕೂರ್ಮನೇ. ಆದರೂ ಅವನು ಎಲ್ಲಿಯೂ ಕಾಣಲಿಲ್ಲವಾದ್ದರಿಂದ ಸುರಾಸುರರು ಅಮೃತಮಥನ ಮಾಡಿದರು ಎಂದಾಯಿತು. ಹೇಗೆ ಭವನವನ್ನು ಕಟ್ಟಲು ಮುಖ್ಯವಾದದ್ದು ಆಧಾರಶಿಲೆಯಾದರೂ ಅದು ಹೊರಗೆ ಕಾಣುವುದಿಲ್ಲವೋ, ಹಾಗೆ ನಮ್ಮ ಬದುಕನ್ನೂ ಆಧರಿಸಿರುವವನು ಅವನೇ, ನಮಗೆ ತಿಳಿದಿಲ್ಲ ಅಷ್ಟೇ. ಆ ಅಮೃತವನ್ನೇ ಯಾರ ಕಾರಣದಿಂದ ನೀನು ಬಂದಿದ್ದು ಅಂತ ಕೇಳಿದರೆ ಹೇಳುತ್ತದೆ, ಅವನೇ ಅಂತ. ಇದರಿಂದ ಅರ್ಥವಾಗುವುದು, ತಿಳಿಯಬೇಕಾದುದು ಏನು? ಅಂದರೆ; ನಾನು ಸೊನ್ನೆ, ನೀನು ಪೂರ್ಣ ಅಂತ. ಇದೇ ಸಮುದ್ರಮಥನ ಕಥೆಯ ತಾತ್ಪರ್ಯ ಕೂಡಾ.

ಇನ್ನು ಮುಂದೆ ಕೂರ್ಮಾವತಾರದ ರಹಸ್ಯವನ್ನು, ಕೂರ್ಮದ ಚಿಪ್ಪಿನೊಳಗೇನಿದೆ ಎಂಬುದನ್ನು ತಿಳಿಯೋಣ.
ಕೂರ್ಮಾವತಾರದ ಸಾರವೇನೆಂದರೆ; ಭಾರ ನಿನ್ನದು ಎನ್ನುವ ಭಾವ. ಮಂದರ ಪರ್ವತವನ್ನು ಕೀಳಲು ಅಸಾಧ್ಯವಾದಾಗ ದೇವಾಸುರರರು ಹರಿಯ ಕಡೆಗೆ ನೋಡಿದರಲ್ಲ, ಆಗ ಭಾವ ಏನಿತ್ತು? ಭಾರ ನಿನ್ನದು ಎಂದು; ಅದಕ್ಕೇ ಎತ್ತಿಕೊಟ್ಟ ಅವನು. ಮತ್ತೆ ಹೊತ್ತು ತರುವಾಗ ಬಿದ್ದುಹೋದಾಗಲೂ ಅದೇ ಭಾವ ಇದ್ದದ್ದು, ಭಾರ ನಿನ್ನದು ಎಂದು; ಅದಕ್ಕೇ ಅದೇ ಭಾವಕ್ಕೇ ಅಲ್ಲವೇ ಭಗವಂತ ಬಂದದ್ದು, ಮಂದರವನ್ನು ಹೊತ್ತು ತಂದು ಸಾಗರದಲ್ಲಿ ಹಾಕಿದ್ದು! ಪರ್ವತ ಸಮುದ್ರದಲ್ಲಿ ಮುಳುಗಿದಾಗಲೂ ಮತ್ತೆ ಅದೇ ದೈನ್ಯ ಭಾವ, ಭಾರ ನಿನ್ನದು ಎಂದು. ಕಡೆಯಲು ಕೈಸೋತಾಗಲೂ ಅದೇ ಭಾವ. ಮತ್ತೆ ನಮಗೆ ಶಕ್ತಿ ಬರಬೇಕಾದರೆ ನಿನ್ನಿಂದ ಮಾತ್ರವೇ ಸಾಧ್ಯ. ನಮಗೂ, ನಮ್ಮ ಶತ್ರುಗಳಿಗೂ ಶಕ್ತಿ ಕೊಡೆನ್ನುವ ಆ ವಿಚಿತ್ರ ಬೇಡಿಕೆಯ ಭಾವ; ಇದು ಬಹುಶಃ ಇಲ್ಲಿ ಮಾತ್ರವೇ, ಈ ಒಂದುಬಾರಿ ಮಾತ್ರವೇ ಬಂದಿದ್ದೇನೋ! ಇಷ್ಟೆಲ್ಲಾ ಆದ ಮೇಲೂ ಅಮೃತ ಬರದಿದ್ದಾಗ ಮತ್ತೆ ಎಲ್ಲರೂ ಅವನನ್ನು ಪ್ರಾರ್ಥಿಸಿದರಲ್ಲ, ಆ ಭಾವ ಏನು ಎಂದರೆ ಅದೂ ಭಾರ ನಿನ್ನದು ಎಂದು. ನಿಜವಾಗಿಯಾದರೂ ಯಾರದ್ದು ಹೇಳಿ? ಅದು ಸತ್ಯವೇ; ಈಗಾದರೂ ಯಾರು ಹೊತ್ತಿರುವುದು ಹೇಳಿ, ಅವನೇ!

ಸಮುದ್ರಮಥನದ ಪ್ರೇರಣೆ ಹರಿಯಿಂದ, ಮಥನದ ವಿಧಾನ ಹರಿಯದ್ದೇ ಪ್ರೇರಣೆ, ಮಂದರ ಪರ್ವತ ಎತ್ತಿದ್ದವನು ಅವನೇ, ಆಧಾರವಾಗಿ ನಿಂತವನೂ ಅವನೇ, ಕೊನೆಗೆ ಕಡೆಯಲು ಸಾಧ್ಯವಾಗದಿದ್ದಾಗ ತಾನೇ ಕಡೆದು ಕೊಟ್ಟವನೂ ಅವನೇ. ಕಡೆಗೆ ಅಮೃತ ಹೊತ್ತು ತಂದವನೂ ಅವನೇ, ಅಮೃತವು ಅಮೃತದಿಂದಲೇ ಬಂದದ್ದು. ಧನ್ವಂತರಿರೂಪದಲ್ಲಿ ಅಮೃತವನ್ನು ಹೊತ್ತುತಂದವನೂ ಅವನೇ. ಎಲ್ಲವೂ ಅವನೇ ಹಾಗಾದರೆ ದೇವತೆಗಳದ್ದೇನು? ನಮ್ಮದೇನು? ನಾನು ನಿನ್ನವನೆಂಬ ಭಾವ ಮಾತ್ರ ನಮ್ಮದು, ಇಡೀ ಪ್ರಕರಣದಲ್ಲಿ ಭಾರ ನಿನ್ನದು ಎಂಬ ಭಾವ ಮಾತ್ರ ದೇವತೆಗಳದ್ದು. ಹಾಗಾಗಿ ಮಂದರ ಪರ್ವತದ ಭಾರ ಮಾತ್ರಾ ಅಲ್ಲ, ಇಡೀ ಸಮುದ್ರಮಥನದ ಭಾರ ಹೊತ್ತವನು ಅವನು, ಊಹ್ಞೂಂ, ಅವನೇ. ಅವನು ಮಾತ್ರವೇ, ಅವನ ತತ್ತ್ವವಿದ್ದರೆ ಮಾತ್ರವೇ ಅಮೃತ ಅಮೃತವಾಗಲು ಸಾಧ್ಯ. ಅಮೃತ ಅಮೃತದಿಂದಲೇ ಬರಬೇಕು. ಎಲ್ಲಿ ಇಲ್ಲ ಅವನು ಇಡೀ ಪ್ರಕರಣದಲ್ಲಿ? ಅಮೃತವೂ ಅವನೇ, ಅಷ್ಟು ಶುದ್ಧವಾಗಿರತಕ್ಕಂಥ, ಪರಮೋತ್ಕೃಷ್ಟ ರುಚಿಯನ್ನು ಹೊಂದಿರತಕ್ಕಂಥ, ಅವಿನಾಶಿತ್ವಕ್ಕೆ ಕಾರಣವಾಗುವಂತಹ ದ್ರವ ಬೇರೆ ಯಾವುದೂ ಆಗಿರಲಿಕ್ಕೆ ಸಾಧ್ಯವಿಲ್ಲ.

ಈ ಕೂರ್ಮಾವತಾರದ ಕಥೆಯಿಂದ ಭಾರ ನಿನ್ನದು ಎನ್ನುವ ಭಾವ ತೆಗೆದುಕೊಳ್ಳಿ, ಗೋವರ್ಧನ ಗಿರಿಯನ್ನು ಹೊತ್ತ ಕೃಷ್ಣನಲ್ಲಿ ಅದರ ಕೆಳಗಿದ್ದ ಗೋಪರ ಭಾವವೇನು? ಅದೂ ಭಾರ ನಿನ್ನದು ಎಂಬುದೇ. ನಿಜವೂ ಅದುವೇ; ನಮ್ಮ ಇಡೀ ಬದುಕಿನ ಭಾರ ಅವನದ್ದೇ! ಅದು ನಮಗೆ ತಿಳಿದರೆ ಅವನು ಬಂದು ನಮ್ಮ ಜೀವನದ ಭಾರವನ್ನು ಎತ್ತಿ ಹಿಡಿಯುತ್ತಾನೆ.

ಚಿತ್ರ:ಅಂತರ್ಜಾಲದಿಂದ

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box