ಗೋಕರ್ಣ: ದೇಹಭಾವವಿರುವ ನಮ್ಮೊಳಗೆ ದೇವಭಾವವೂ ಇದೆ. ಆದರೆ ದೇಹಾಭಿಮಾನದ ಕೈಮೇಲಾದಾಗ  ಆ ದೇವಭಾವ ಮರೆಯಾಗುತ್ತದೆ. ನಮ್ಮೊಳಗಿನ ಅಂತರಾತ್ಮ ಸದಾ ನಮಗೆ ಎಚ್ಚರವನ್ನು ನೀಡುತ್ತಲೇ ಇರುತ್ತಾನೆ. ಆದರೆ ಅದು ಹೆಚ್ಚಾಗಿ ನಮಗೆ ಕೇಳುವುದೇ ಇಲ್ಲ. ಎಲ್ಲೋ ಅಪರೂಪಕ್ಕೊಮ್ಮೆ ಕೇಳಿದರೂ ಅದನ್ನು ಪಾಲಿಸುವ ಸ್ವಭಾವ ನಮ್ಮದಾಗಿರುವುದಿಲ್ಲ. ರಾಮಾಯಣ ನಮ್ಮ ಬದುಕಿಂದ ಬೇರೆಯಾದದ್ದಲ್ಲ. ಅದು ಸದಾ ಪ್ರಸ್ತುತವೇ. ಕೆಡುಕು ಸದಾ ಇರುವುದಿಲ್ಲ. ಕೆಲಕಾಲ ಅದು ತಾನೇ ತಾನಾಗಿ ವಿಜೃಂಭಿಸುವಂತೆ ಕಂಡರೂ ಅದಕ್ಕೆ ಕೊನೆಯಿದೆ. ಅಂತಿಮವಾಗಿ ಸತ್ಯ, ಧರ್ಮಗಳಿಗೇ ಜಯವೆನ್ನುವುದಕ್ಕೆ ಯಾವ ಸಂಶಯವೂ ಬೇಡ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿರುವ ರಾಮಕಥಾದಲ್ಲಿ ಪ್ರವಚನವನ್ನು ನೀಡುತ್ತಿದ್ದ ಶ್ರೀಗಳು ರಾವಣ-ವೈಶ್ರವಣರ ವಿಚಾರವನ್ನು ವಿಸ್ತಾರವಾಗಿ ಪ್ರಸ್ತಾಪಿಸಿ ತನ್ನ ಲೋಕಪೀಡೆಯ ಕಾರ್ಯವನ್ನು ರಾವಣ ಪ್ರಾರಂಭಿಸಿದ್ದೇ ಮನೆಯಲ್ಲಿ. ಹೆತ್ತ ತಂದೆಗೆ ಮೊದಲ ನೋವು. ಮುಂದೆ ಅಣ್ಣನಿಗೆ. ಹೀಗೆ ಅವನ ಕ್ರೌರ್ಯದ ನಡೆನುಡಿಗಳು ಹೆಚ್ಚುತ್ತಲೇ ಹೋಯಿತು. ನಮ್ಮ ಜೀವನದಲ್ಲಿ ಮದಮೋಹ ರೂಪಗಳ ಅರಿಷಡ್ವರ್ಗವಿರುವಂತೆ ಅವನಿಗೂ ಧೂಮ್ರಾಕ್ಷ, ಮಾರೀಚ ಮೊದಲಾದ ಆರು ಮಂದಿ ದುಷ್ಟಸಚಿವರು. ಇವರ ಪ್ರಲೋಭನೆಗೊಳಗಾದ ದಶಕಂಠ, ಅಣ್ಣ ಕುಬೇರನಮೇಲೂ ಧಾಳಿಮಾಡಿ ಅವನ ನಗರವನ್ನು ಧ್ವಂಸಮಾಡಿದ.  ಆಸುರೀ ಶಕ್ತಿಗೆ ಕುಲದ ಮಹತ್ವವಾಗಲೀ, ಹಿಂದೆ ಅಣ್ಣ ತೋರಿದ್ದ ವಾತ್ಸಲ್ಯವಾಗಲೀ ಸ್ಮರಣೆಗೆ ಬರಲಿಲ್ಲ. ನಮ್ಮ ಬದುಕಿನಲ್ಲಿಯೂ ಕೂಡಾ ಹೀಗೆಯೇ. ಕೋಪ, ಮೋಹಗಳ ಆವೇಶವಾದಾಗ ನಮಗೆ ಧರ್ಮಮಾರ್ಗದ ದರ್ಶನವಾಗುವುದಿಲ್ಲ ಎಂದು ಹೇಳಿ, ರಾಮಾಯಣವು ಕೇವಲಗ್ರಂಥವಲ್ಲ. ಅದು ನಮ್ಮೆಲ್ಲರ ಜೀವನದ ದಾರಿದೀಪ. ಅದನ್ನು ಅನುಸರಿಸಿದರೆ ಸಾರ್ಥಕತೆ ಸಾಧ್ಯ ಎಂದೂ ನುಡಿದರು.

ಪ್ರೇಮಲತಾ ದಿವಾಕರ್, ವಸುಧಾ ಶರ್ಮಾ, ಶ್ರೀಪಾದ ಭಟ್ ಇವರ ಗಾಯನ, ಪ್ರಕಾಶರ ವೇಣುವಾದನ, ನರಸಿಂಹ ಮೂರ್ತಿಯವರ ಮೃದಂಗ, ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು ಗಾನಲೋಕದ ಅದ್ಭುತವನ್ನು ಸೃಷ್ಟಿಸಿದರೆ, ಶ್ರೀ ರಾಘವೇಂದ್ರ ಹೆಗಡೆಯವರ ಮರಳುಚಿತ್ರ, ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ಜನರನ್ನು ವಿಸ್ಮಯಗೊಳಿಸಿದವು. ಮಂಗಳೂರು ಮಂಡಲದ ಮಂಗಳೂರು, ಮುಡಿಪು, ಕೋಳ್ಯೂರು ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು. ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.

 

Facebook Comments