LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಮ್ಮ ಹೃದಯವು ಅಯೋಧ್ಯೆಯಾಗಬೇಕು- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

Author: ; Published On: ಸೋಮವಾರ, ಆಗಸ್ತು 22nd, 2011;

Switch to language: ಕನ್ನಡ | English | हिंदी         Shortlink:

ಗೋಕರ್ಣ: ಅಯೋಧ್ಯೆ ಒಂದು ಕಾಲದಲ್ಲಿ ಸಮಸ್ತ ಭಾರತದ ಕೇಂದ್ರ ಭೂಮಿ. ಸೂರ್ಯವಂಶದ ರಾಜರ ರಾಜಧಾನಿ. ವಿಶಾಲವಾದ ರಾಜಮಾರ್ಗಗಳು, ಭವನಗಳು, ಅಲ್ಲಲ್ಲಿ ಸುಂದರ ಉದ್ಯಾನಗಳು, ಭದ್ರವಾದ ಕೋಟೆಗಳು, ವ್ಯವಸ್ಥಿತವಾದ ಪೇಟೆ, ಶಿಲ್ಪಿಗಳು, ಚಿತ್ರಕಾರರು, ಕಲಾವಿದರಿಂದ ತುಂಬಿದ ನಗರ. ಅತ್ಯಂತ ಬಿಗುವಾದ ರಕ್ಷಣಾ ವ್ಯವಸ್ಥೆ. ಶತ್ರುಗಳ ಧಾಳಿಯನ್ನು ತಡೆಯಲು ಎಲ್ಲ ಬಗೆಯ ಯಂತ್ರಗಳು. ಇಂತಹ ಪರಿಪೂರ್ಣವಾದ ನಗರ ರಘುಕುಲತಿಲಕನಾದ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ. ಅಯೋಧ್ಯೆಯೆಂದರೆ ಶತ್ರುಗಳಿಂದ ಗೆದೆಯಲಾಗದ ನಗರ. ಇದು ಅನ್ವರ್ಥವಾದ ಹೆಸರು. ಯಾಕೆಂದರೆ ನಮ್ಮ ಹೃದಯದಲ್ಲಿ ಶ್ರೀರಾಮನು ನೆಲೆಸಬೇಕೆಂದರೆ ಅದು ದುರ್ಗುಣಗಳಿಂದ ಗೆಲ್ಲಲಾಗದ ಅಯೋಧ್ಯೆಯಾಗಬೇಕು. ಹಾಗಿದ್ದರೆ ಮಾತ್ರ ಅಲ್ಲಿ ಪರಮಾತ್ಮನ ಆವಾಸ ಎಂಬುದನ್ನು ಮಹರ್ಷಿವಾಲ್ಮೀಕಿ ಸೂಚ್ಯವಾಗಿ ನಮ್ಮನ್ನು ಎಚ್ಚರಿಸಿದ್ದಾರೆ ಎಂದು ಪೂಜ್ಯಶ್ರೀಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ಶ್ರೀರಾಮಕಥೆಯ ಪ್ರವಚನವನ್ನು  ನೀಡುತ್ತಿದ್ದ ಶ್ರೀಗಳು, ವರಬಲದಿಂದ ಕೊಬ್ಬಿ ವಿನಾಕಾರಣವಾಗಿ ಎಲ್ಲರನ್ನೂ ಪೀಡಿಸುತ್ತಿದ್ದ ರಾವಣ ಒಮ್ಮೆ ಶ್ರೀರಾಮಚಂದ್ರನ ಪೂರ್ವಜ ರಾಜಾ ಅನರಣ್ಯನೊಂದಿಗೆ ಯುದ್ಧಮಾಡಿ ಅವನನ್ನು ಸೋಲಿಸಿದ. ಆದರೆ ಪ್ರಜೆಗಳನ್ನು ಮಕ್ಕಳಂತೆ ಪಾಲಿಸುತ್ತಿದ್ದ ಅನರಣ್ಯ ಮರಣೋನ್ಮುಖನಾದಾಗ ಸೂರ್ಯವಂಶವನ್ನು ಅಪಹಾಸ್ಯಮಾಡಿದ ರಾವಣನಿಗೆ ಮುಂದೆ ನನ್ನ ವಂಶದವನಾದ ದಶರಥನಿಗೆ ಮಗನಾಗಿ ಹುಟ್ಟುವ ಶ್ರೀರಾಮನಿಂದ ನಿನಗೆ ಮರಣ ಬರಲಿ ಎಂದು ಶಪಿಸಿದ. ಹೀಗೆ ತನ್ನದೇ ಅವಿವೇಕದಿಂದಾಗಿ ಮೊದಲು ನಂದೀಶ್ವರನ ಶಾಪದಿಂದ ತನ್ನ ವಧೆಗಾಗಿ ವಾನರರೂಪದ ಸಹಾಯಕರನ್ನು, ವೇದವತಿಯಿಂದ ಸೀತಾರೂಪಳಾಗಿ ಕಂಟಕಳಾಗುವ ಶಾಪವನ್ನು ಪಡೆದ  ರಾವಣ ಕೊನೆಗೆ ಅಯೋಧ್ಯೆಯ ಅನರಣ್ಯನಿಂದ ಅವನ ವಂಶದವರಿಂದಲೇ ವಧೆಯಾಗುವಂತೆ ಶಾಪಿತನಾದ. ಹೀಗೆ ಒಂದರ ನಂತರ ಮತ್ತೊಂದು ತಪ್ಪನ್ನು ಮಾಡುತ್ತಹೋದ ರಾವಣನೆಂದೂ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡಲಿಲ್ಲ. ನಮ್ಮ ಹೃದಯದಲ್ಲಿ ಭಗವಂತನ ಆವಿರ್ಭಾವವಾಗಬೇಕಾದರೆ ಅದು ರಘುವಂಶದ ರಾಜರಂತೆ ಪರಿಶುದ್ಧವಾಗಿರಬೇಕು ಎಂದು ಹೇಳಿದರು.

ಪ್ರೇಮಲತಾ ದಿವಾಕರ್, ವಸುಧಾ ಶರ್ಮಾ, ಶ್ರೀಪಾದ ಭಟ್ ಇವರ ಗಾಯನ, ಪ್ರಕಾಶರ ವೇಣುವಾದನ, ನರಸಿಂಹ ಮೂರ್ತಿಯವರ ಮೃದಂಗ, ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು, ಶ್ರೀ ರಾಘವೇಂದ್ರ ಹೆಗಡೆಯವರ ಮರಳುಚಿತ್ರ,  ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ತುಂಬಾ ಮನೋಹರವಾಗಿದ್ದವು. ಮಂಗಳೂರು ಮಂಡಲದ ಉರ್ವಾಲು, ಉಪ್ಪಿನಂಗಡಿ, ವೇಣೂರು, ಉಜಿರೆ ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆ, ಗಾಣಿಗಸಮಾಜದ ಶಿಷ್ಯರಿಂದ ಶ್ರೀಗುರುಪಾದುಕಾಪೂಜೆ ಸಮರ್ಪಿತಗೊಂಡವು. ಧರ್ಮಸಭೆಯಲ್ಲಿ ಪೂಜ್ಯಶ್ರೀಗಳು ಆಶೀರ್ವಚನ ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

3 Responses to ನಮ್ಮ ಹೃದಯವು ಅಯೋಧ್ಯೆಯಾಗಬೇಕು- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

 1. Raghavendra Narayana

  ಸತ್ಸಂಗದಿ೦ದ ನಮ್ಮ ದುರ್ಗುಣಗಳು ತೊರೆದುಹೋಗಲಿ,
  ಸದ್ವಿಚಾರದಿ೦ದ ನಮ್ಮಲ್ಲಿ ಸದ್ಗುಣಗಳು ನೆಲೆಮಾಡಲಿ.
  .
  ಗುರುವಿನ, ಪರಮಾತ್ಮನ ಪ್ರಿಯಸ೦ಗವನ್ನು ಆಶೀರ್ವಾದವನ್ನು ಕರುಣಾಕಟಾಕ್ಷವನ್ನು ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಬೇಡುವೆವು.
  .
  ಶ್ರೀ ಗುರುಭ್ಯೋ ನಮಃ

  [Reply]

 2. ನಂದ ಕಿಶೋರ ಬೀರಂತಡ್ಕ

  ಹರೇ ರಾಮ..

  [Reply]

 3. mamata hegde

  || Hare Raamaa………||

  [Reply]

Leave a Reply

Highslide for Wordpress Plugin