ಗೋಕರ್ಣ: ನಮ್ಮ ಬದುಕಿನ ಮಾರ್ಗದರ್ಶನಕ್ಕೆ ಗುರು ಬೇಕು. ಗುರು ಎಂದರೆ ಕೇವಲ ವ್ಯಕ್ತಿಯಲ್ಲ. ಅದೊಂದು ತತ್ವ. ಶಿಷ್ಯಸಮುದಾಯವು ಪರಂಪರೆಯಿಂದ ಗುರುವನ್ನು ಆರಾಧಿಸುತ್ತ ಜೀವನದ ಸಾರ್ಥಕತೆಗೆ ಗುರುವನ್ನು ಅವಲಂಬಿಸಿದಂತೆ ಸ್ವತಃ ಗುರುವೂ ತನ್ನ ಗುರುಪರಂಪರೆಯನ್ನು ಅರ್ಚಿಸುತ್ತಾನೆ. ಆದಿಗುರುವಿನಲ್ಲಿ  ಈ ಪಂಕ್ತಿ ಕೊನೆಗೊಳ್ಳುತ್ತದೆ. ಕೋಣೆಯಲ್ಲಿ ಎಷ್ಟೋ ವಸ್ತುಗಳು ತುಂಬಿರುತ್ತವೆ. ಅದರಲ್ಲಿ ಅತ್ಯಮೂಲ್ಯವಾದ ಪದಾರ್ಥಗಳೂ ಇರಬಹುದು. ಆದರೆ ಅದರ ಸಮ್ಯಗ್ದರ್ಶನಕ್ಕೆ ಬೆಳಕು ಬೇಕು. ಬೆಳಕಿಲ್ಲದೆ ಯಾವ ವಸ್ತವೂ ಕಾಣದು. ಅದರಂತೆಯೇ ನಮ್ಮ ಬದುಕಿನ ಕೋಣೆಯಲ್ಲಿಯೂ ಸಹ ಗುರುವಿನ ಅನುಗ್ರಹರೂಪವಾದ ಪ್ರಕಾಶವು ಬಿದ್ದರೆ ಮಾತ್ರ ಅದರ ಮಹತ್ವದ ಅರಿವಾಗಲು ಸಾಧ್ಯ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತವಾಗಿ ನಿಟ್ಟೂರು, ಸಂಪೇಕಟ್ಟೆ, ತುಮರಿ ವಲಯಗಳ ಶ್ರೀಗುರು ದೇವತಾಸೇವೆಯನ್ನು ಸ್ವೀಕರಿಸಿ ಧರ್ಮಸಭೆಯಲ್ಲಿ ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಚಾತುರ್ಮಾಸ್ಯವು ಗುರುವು ತನ್ನ ಗುರುಪರಂಪರೆಯನ್ನು ಆರಾಧಿಸುವ ಹಾಗೂ ಶಿಷ್ಯಸಮುದಾಯವು ಶ್ರೀಗುರುಪೀಠದ ಅನುಗ್ರಹವನ್ನು ಪಡೆಯುವ ವಿಶೇಷಕಾಲ. ಯತಿಗಳು ಅಂತರ್ಮುಖಿಗಳಾಗಿ ತಮ್ಮ ಮೂಲಸ್ಥಾನವನ್ನು ಸಂದರ್ಶಿಸುವ ಸಂದರ್ಭ. ಈ ಸಮಯದಲ್ಲಿ ಶ್ರೀಗುರುಪೀಠಕ್ಕೆ ಸಲ್ಲಿಸುವ ಸೇವೆಗೆ ಹೆಚ್ಚು ಮಹತ್ವವಿದೆ ಎಂದು ಹೇಳಿ ಎಲ್ಲ ಶಿಷ್ಯಸಮುದಾಯಕ್ಕೂ ಸಮಸ್ತ ಮಂಗಳವನ್ನು ಆಶಿಸಿದರು.

ಮಾಜಿ ಅರಣ್ಯ ಸಚಿವ ಶ್ರೀ ವಿಜಯಶಂಕರ್ ಶ್ರೀಗಳನ್ನು ಭೇಟಿಮಾಡಿ ಆಶೀರ್ವಾದ ಪಡೆದರು. ವಿದ್ವಾನ್ ಜಗದೀಶ ಶರ್ಮಾ ಅವರು ಮಹಾನಂದಿವರ್ಷದ ಕುರಿತಾಗಿ ವಿವರಗಳನ್ನು ನೀಡಿದರು. ಆಂಜನೇಯ ಜನ್ಮಸ್ಥಳದಲ್ಲಿ ನಡೆಯುತ್ತಿರುವ  ಸಾಪ್ತಾಹಿಕ ಭಜನೆಯ ಅಂಗವಾಗಿ  ನಡೆಯುವ ಆಂಜನೇಯೋತ್ಸವದ ನಿಮಿತ್ತವಾಗಿ ರಚಿತವಾಗಿರುವ ನೂತನ ಪಾಲಕ್ಕಿಯನ್ನು ಶ್ರೀ ರಾಜಾರಾಮ ಭಟ್ಟ, ಶ್ರೀ ಗಣಪತಿಜಟ್ಟಿಮನೆ, ಶ್ರೀ ಲಕ್ಷ್ಮೀನಾರಾಯಣ ಸಳ್ಳೆಮನೆ ಇವರು ಶ್ರೀಗಳಿಗೆ ಸಮರ್ಪಿಸಿದರು. ಎಂದಿನಂತೆ ಪ್ರತಿಭಾಪುರಸ್ಕಾರ, ಶ್ರೀಮಠದ ಯೋಜನೆಗಳಿಗೆ ವಾಗ್ದಾನ, ಸಮರ್ಪಣೆಗಳು ಸಂಪನ್ನವಾದವು.

ಇಂದು ಮಧ್ಯಾಹ್ನ ಪೂಜ್ಯಶ್ರೀಗಳು ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ, ಕುಂಭಾಸಿಯ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ವಾರ್ಷಿಕವಾಗಿ ನೀಡುವ ದಿ||ಕೊಂಡದಕುಳಿ ರಾಮಹೆಗಡೆ ಯಕ್ಷಗಾನ ಕಲಾವಿದ ಪ್ರಶಸ್ತಿಯನ್ನು ಯುವ ಕಲಾವಿದ ಶ್ರೀ ನಾಗೇಂದ್ರ ಮೂರೂರು ಇವರಿಗೆ ನೀಡಿ ಸಮ್ಮಾನಿಸಿದರು. ಪ್ರತಿಷ್ಠಾನದ ವತಿಯಿಂದ ಲಂಕಾದಹನ ಯಕ್ಷಗಾನ ಪ್ರದರ್ಶನವು ಆಯೋಜಿತವಾಗಿತ್ತು.

Facebook Comments