ಗೋಕರ್ಣ: ಸ್ನೇಹ, ಪ್ರೀತಿಗಳು ಬದುಕಿನಲ್ಲಿ ಸಂತೋಷವನ್ನು ನೀಡುವ ಸಾಧನಗಳು. ವ್ಯಕ್ತಿತ್ವದ ಉತ್ತಮಿಕೆಗೆ ಅಭ್ಯುದಯಕ್ಕೆ ಕಾರಣವಾಗುವ ಉತ್ತಮ ಬಾಂಧವ್ಯವನ್ನು ಬೆಳೆಸುವ ಈ ಗುಣಗಳು ಜೀವನದಲ್ಲಿ ಅವಿನಾಭಾವಿಯಾಗಿದ್ದರೆ ನಮ್ಮ ಬಾಳು ಸಾರ್ಥಕವಷ್ಟೇ ಅಲ್ಲ, ಆದರ್ಶವೂ ಕೂಡ. ನಮಗಾಗಿ ಮಾತ್ರ ಬದುಕದೆ ಪರೋಪದ್ರವಿಯಾಗದೆ ಸುತ್ತೆಲ್ಲ ಸಂತಸವನ್ನು ಹಂಚುತ್ತ ಜೀವಿಸಿದರೆ ಅದಕ್ಕಿಂತ ಹೆಚ್ಚಿನದು ಬೇರೇನೂ ಇಲ್ಲ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಇಂದು ಅಶೋಕೆಯಲ್ಲಿ ಆಯೋಜಿತವಾಗಿದ್ದ ರಾಮಕಥಾದಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣವನ್ನಾಧರಿಸಿದ ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ರಾವಣ ಅಂತಸ್ತು ಅಧಿಕಾರ, ತೋಳ್ಬಲಗಳನ್ನು ನಂಬಿ ತನ್ನವರೆಲ್ಲರನ್ನೂ ಮರೆತ. ಹೆತ್ತ ತಂದೆಯಿಂದಲೇ ಶಾಪವನ್ನು ಪಡೆಯುವ ಮೂಲಕ ತನ್ನ ವಿನಾಶಕ್ಕೆ ನಾಂದಿಯನ್ನು ಹಾಡಿಕೊಂಡ ಅವನು ವಾತ್ಸಲ್ಯಮಯಿಯಾಗಿದ್ದ ಅಣ್ಣ ಕುಬೇರನ ರಾಜ್ಯವನ್ನು ಅಪಹರಿಸಿದ. ಕಾಲಕೇಯರ ಮೇಲೆ ಯುದ್ಧಕ್ಕೆ ಹೋಗಿ ಸ್ವಂತ ತಂಗಿಯಾದ ಶೂರ್ಪಣಖೆಯ ಗಂಡ ವಿದ್ಯುಜ್ಜಿಹ್ವನನ್ನು ಕೊಂದುಹಾಕಿದ. ಸಾವಿರಾರು ಪತಿವ್ರತಾ ಸ್ತ್ರೀಯರನ್ನು ಬಲಾತ್ಕಾರವಾಗಿ ಎಳೆದು ತಂದು ಅಂತಃಪುರದಲ್ಲಿರಿಸಿಕೊಂಡ. ಈ ಎಲ್ಲ ಅಕ್ರಮಗಳೂ ಅವನನ್ನು ಬೆನ್ನುಹತ್ತಿದವು. ಒಂದು ರೀತಿಯಲ್ಲಿ ಶೂರ್ಪಣಖಿಯನ್ನು ದಂಡಕಾರಣ್ಯಕ್ಕೆ ಕಳಿಸುವ ಮೂಲಕ ಲಂಕೆಗೆ ಪ್ರಭು ಶ್ರೀರಾಮಚಂದ್ರನು ಬರಲು ಅವನೇ ಅವಕಾಶ ಮಾಡಿಕೊಟ್ಟ ಎಂದು ಹೇಳಿದ ಪೂಜ್ಯ ಶ್ರೀಗಳು, ರಾವಣರಾಜ್ಯದಲ್ಲಿದ್ದುದು ಸಾವು ನೋವು ಎರಡೇ ಶಬ್ದಗಳು. ವೀರರಾದರೆ ಅವನಿಂದ ಸಾವು, ಸ್ತ್ರೀಯರಾದರೆ ರಾವಣನಿಂದ ನೋವು. ಸುಂದರಿಯರು ಅವನ ವಶರಾಗಬೇಕು ಇಲ್ಲವೇ ಶವವಾಗಬೇಕು ಇದು ರಾವಣ ರಾಜ್ಯದ ನಿತ್ಯನೀತಿಯಾಗಿತ್ತು. ಇಂತಹ ಪರಹಿಂಸಾ ಪ್ರಿಯನಾದ ವರದೃಪ್ತನಾದ ರಾವಣನನ್ನು ಸಂಹರಿಸಲು ಭಗವಂತನು ಭೂಮಿಗಿಳಿದು ಬರಬೇಕಾಯಿತು ಎಂದು ಹೇಳಿ ನಮ್ಮ ಬದುಕಿನ ಅನೇಕ ಪ್ರಶ್ನೆಗಳಿಗೆ ಉತ್ತರ ಇದೆಯಾದ್ದರಿಂದಲೇ ರಾಮಾಯಣದ ಉತ್ತರಕಾಂಡವು ಅನ್ವರ್ಥವಾಗಿದೆಯೆಂದೂ ಹೇಳಿ, ರಾಮಾಯಣದ ತಾತ್ವಿಕಾಂಶಗಳನ್ನು ವಿಸ್ತಾರವಾಗಿ ವಿಶ್ಲೇಷಿಸಿದರು.

ಶ್ರೀಪಾದ ಭಟ್, ಪ್ರೇಮಲತಾ ದಿವಾಕರ್, ಇವರ ಸುಮನೋಹರ ಗಾಯನಕ್ಕೆ, ಶ್ರೀ ಗೋಪಾಲಕೃಷ್ಣ ಹೆಗಡೆಯವರ ತಬಲಾ ಹಾಗೂ ಶೀಪ್ರಕಾಶರ ವೇಣುವಾದನಗಳು ವಿಶೇಷ ಮೆರುಗು ನೀಡಿದವು. ಶ್ರೀ ಜಿ.ಎಲ್ ಹೆಗಡೆ ಹಾಗೂ ಶ್ರೀ ಗಣಪತಿ ಹೆಗಡೆ ತೋಟಿಮನೆಯವರಿಂದ ಶೂರ್ಪಣಖಾ ಸಮಾಧಾನ ಎಂಬ ಸುಂದರವಾದ ಯಕ್ಷರೂಪಕವು ಪ್ರಸ್ತುತವಾಯಿತು.

ಚಾತುರ್ಮಾಸ್ಯದ ನಿಮಿತ್ತ ಮುಳ್ಳೇರಿಯಾ ಮಂಡಲದ ಕೊಡಗು, ಸುಳ್ಯ, ಗುತ್ತಿಗಾರು ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು. ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು.

Facebook Comments