ಶ್ರೀ ರಘೂತ್ತಮ ಮಠ ಕೆಕ್ಕಾರು : 05.08.2014, ಮಂಗಳವಾರ

ವಿದ್ವಾನ್ ಅನಂತ ಶರ್ಮಾ ಭುವನಗಿರಿ ಅವರು ಬರೆದ ಶ್ರೀ ಶಂಕರಾಚಾರ್ಯ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ವಿ. ಜಿ. ಹೆಗಡೆ ಮುಡಾರೆ ಕೃತಿ ಬಿಡುಗಡೆ ಪ್ರಾಯೋಜಕತ್ವ ವಹಿಸಿದ್ದರು. ’ರಾಮರಕ್ಷಾ ಸ್ತೋತ್ರ’ ಕಿರು ಹೊತ್ತಗೆಯನ್ನು ನಾಗರಾಜ ದೀಕ್ಷಿತ ಬಿಡುಗಡೆಗೊಳಿಸಿದರು. ದಿನೇಶ ಪೈ ಪೆರ್ಲ ಶ್ರೀಗಳ ಅನುಗ್ರಹ ಪಡೆದರು. ಎಲ್. ಆರ್. ಭಟ್ಟ ಶಿರಸಿ ಸ್ವರಚಿತ ರಾಮಾಯಣ ಕಥಾಸಾಗರ ಗ್ರಂಥವನ್ನು ಶ್ರೀಗಳವರಿಗೆ ಸಮರ್ಪಣೆ ಮಾಡಿದರು. ಜಯಚಾತುರ್ಮಾಸ್ಯ ಸಮಿತಿಯ ಸಂಪರ್ಕ ಕಾರ್ಯದರ್ಶಿ ರವೀಂದ್ರ ಭಟ್ಟ ಸೂರಿ ಕೃತಿ ಮತ್ತು ಲೇಖಕರನ್ನು ಪರಿಚಯಿಸಿ ನಿರೂಪಿಸಿದರು.

~
ಶ್ರೀ ಶ್ರೀಗಳ ಪ್ರವಚನ:

ದೇವ ಜೀವ ದೇಹ ದೇಶ ಒಂದೇ ರೇಖೆಯಲ್ಲಿದ್ದಾಗ ಅದು ರಾಮ ರಾಜ್ಯ ಎನ್ನಿಸಿಕೊಳ್ಳುತ್ತದೆ. ನೇರ ವ್ಯಕ್ತಿತ್ವ – ನೇರ ಅಭಿವ್ಯಕ್ತಿ ಇರುವವರು ಉತ್ತಮ ವ್ಯಕ್ತಿ ಎನ್ನಿಸಿಕೊಳ್ಳುತ್ತಾರೆ. ಜೀವನದಲ್ಲಿ ಬಾಲ್ಯಾವಸ್ಥೆಯಲ್ಲಿ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಲಿಲ್ಲ. ಭಜಗೋವಿಂದಂ ಪ್ರವಚನದಲ್ಲಾದರೂ ಬಾಲ್ಯವನ್ನು ಹೆಚ್ಚು ಕಾಲ ಕಳೆಯೋಣ ಎಂದು ರಾಘವೇಶ್ವರ ಶ್ರೀಗಳು ನುಡಿದರು. ಜಯಚಾತುರ್ಮಾಸ್ಯದ ನಿಮಿತ್ತ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ವಿದ್ಯೆ ಇದ್ದು ಗರ್ವವಿಲ್ಲದಿದ್ದರೆ ಅದು ಶ್ರೇಷ್ಠ. ನಿಜವಾದ ವಿದ್ಯೆ ಇದ್ದರೆ ವಿನಯ ತನ್ನಿಂದ ತಾನೇ ಬರುತ್ತದೆ. ಪಂಡಿತ ವಿದ್ಯಾ ಮಂಡಿತನಾಗಬೇಕು, ಗಮಂಡಿತನಾಗಬಾರದು ಎಂದು ಅವರು ನುಡಿದರು. ಬೀಜವು ವೃಕ್ಷವಾಗುವಾಗ ನಡೆಯುವ ಪ್ರಕ್ರಿಯೆಯಂತೆ ನಾವು ವಾತಾವರಣದಿಂದ ಹೀರಿಕೊಂಡು ಬೆಳೆದಿದ್ದೇವೆ. ಒಳ್ಳೆಯದನ್ನು ಹೀರಿಕೊಂಡರೆ ಪರಿಶುದ್ಧ ವಾತಾವರಣದಲ್ಲಿ ಬೆಳೆದರೆ ಉತ್ತಮ ವ್ಯಕ್ತಿಯಾಗಲು ಸಾದ್ಯ. ಮಕ್ಕಳಿಗೆ ಬಯ್ಯುವಾಗಲೂ ಕಾರಣ ನೀಡಿ ಬಯ್ಯಬೇಕು. ಸರಿ ತಪ್ಪು ತಿಳಿಸಿ ಬಯ್ದಾಗ ಬೈಗುಳದಿಂದಲೂ ಬೆಳೆಯಲು ಸಾಧ್ಯ. ನಾವು ಒಳಗಿರುವುದನ್ನು ಹೊರಹಾಕಿದರೆ ಹೊರಗಿನ ಸಂಬಂಧ ಹಾಳಾಗುತ್ತದೆ. ಒಳಗಿರುವುದನ್ನು ಹೊರಹಾಕದಿದ್ದರೆ ನಮ್ಮ ಒಳಗೇ ಹಾಳಾಗುತ್ತದೆ. ಹಾಗಾಗಿ ಸತ್ಯವನ್ನು ಸಿಹಿಯಾಗಿ ಹೇಳಲು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ. ನಮ್ಮ ಮಕ್ಕಳು ಒಳ್ಳೆಯವರಾಗಿ ಬೆಳೆಯಬೇಕೆಂದರೆ ಮಗು ಬೆಳೆಯುವ ವಾತಾವರಣದ ಕೆಡಕುಗಳನ್ನು ತೆಗೆಯಬೇಕು. ನಾವು ಮಕ್ಕಳೆದುರು ತಪ್ಪು ಮಾಡಿದರೆ ಮುಗ್ಧ ಮಗು ಅದನ್ನೇ ಸಹಜವೆಂದು ಭಾವಿಸಿ ತಪ್ಪು ಮಾಡುತ್ತದೆ. ಹಾಗಾಗಿ ಬೆಳೆಯುವ ಮಗುವಿನ ಬಗ್ಗೆ ಜಾಗ್ರತೆ ಇರಲಿ, ಎಂದೂ ವ್ಯಸನಿಗಳಾಗಬೇಡಿ, ಮಗುವಿನ ಭವಿಷ್ಯಕ್ಕಾಗಿ ವ್ಯಸನ ತ್ಯಜಿಸಿ ಎಂದು ಅವರು ಕರೆ ನೀಡಿದರು. ಮಕ್ಕಳ ಬದುಕಿಗೆ ಸೋಪಾನವಾಗಿ ಬಾಲಕರ ಬಾಲ್ಯ ವ್ಯರ್ಥವಾಗದಂತೆ ಪ್ರೇರಣೆ ನೀಡಿ ಎಂಬ ಸಂದೇಶವನ್ನು ನೀಡಿದರು.

Facebook Comments