ಲೋಕದ ಎಲ್ಲ ಭಾಷೆಗಳ ತಾಯಿಬೇರು ಸಂಸ್ಕೃತ ಭಾಷೆಯಲ್ಲಿದೆ – ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್

ಮುಜುಂಗಾವು, ಕಾಸರಗೋಡು 19-01-2016:

ಪ್ರಪಂಚದ ಎಲ್ಲ ಭಾಷೆಗಳ ಮೂಲ ಸಂಸ್ಕೃತ ಭಾಷೆ. ಸಂಸ್ಕೃತ ಭಾಷೆಯಲ್ಲಿ “ಸಂ-ಸ್ಕೃತ” ಎಂಬ ಶಬ್ದದ ಅರ್ಥ ಸರಿಯಾಗಿ ಪರಿಷ್ಕರಿಸಲ್ಪಟ್ಟು ಎಂಬುದು. ವಿಶ್ವದ ಅತ್ಯಂತ ಪರಿಪೂರ್ಣವಾದ ಭಾಷೆ ಸಂಸ್ಕೃತ ಎಂಬುದನ್ನು ಪಾಶ್ಚಾತ್ಯ ರಾಷ್ಟ್ರಗಳು ಒಪ್ಪುತ್ತವೆ. ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳು ಸಂಸ್ಕೃತ ಭಾಷೆಯಲ್ಲಿದೆ, ಭಾರತೀಯ ಸಂಸ್ಕೃತಿ-ಪರಂಪರೆಗಳು ಬೆಳೆದು-ಉಳಿದು ಬಂದದ್ದು ಸಂಸ್ಕೃತದ ಮೂಲಕವೇ. ಆದರೆ ಇಂದಿನ ಪೀಳಿಗೆಗೆ ಸಂಸ್ಕೃತ ಭಾಷೆಯೂ ಮರೆಯುತ್ತಿದ್ದು, ಇದರಿಂದಾಗಿ ಸಂಸ್ಕೃತಿಯೂ ಮರೆಯುವಂತಾಗುತ್ತಿದೆ – ಎಂದು ಪುರೋಹಿತ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ಹೇಳಿದರು. ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ “ಸಂಸ್ಕೃತ ವಾಗ್ವರ್ಧನಾ ಕಾರ್ಯಾಗಾರ”ದ ಸಮಾರೋಪ ಸಭೆಯಲ್ಲಿ ಮಾತನಾಡುತ್ತಿದ್ದರು. ಶ್ರೀಭಾರತೀವಿದ್ಯಾಪೀಠದ ಕಾರ್ಯದರ್ಶಿ ಸತ್ಯಶಂಕರ ಭಟ್ ಹಿಳ್ಳೆಮನೆ, ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಡಾ. ವೈ.ವಿ. ಕೃಷ್ಣಮೂರ್ತಿ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಎಳ್ಯಡ್ಕ ಈಶ್ವರ ಭಟ್ ವೇದಿಕೆಯಲ್ಲಿದ್ದರು.

ಕಾರ್ಯಾಗಾರವನ್ನು ಪೂರ್ವಾಹ್ನ 10ಘಂಟೆಗೆ ವೇದಮೂರ್ತಿ ಪುರೋಹಿತ ಕೋಣಮ್ಮೆ ಮಹಾದೇವ ಭಟ್ಟರು ಉದ್ಘಾಟಿಸಿದರು. ಉದ್ಘಾಟನಾ ವೇದಿಕೆಯಲ್ಲಿ ಮುಳ್ಳೇರ್ಯ ಹವ್ಯಕಮಂಡಲ ವಿದ್ಯಾಪ್ರಧಾನರಾದ ವಿದ್ವಾನ್ ಬಾಲಕೃಷ್ಣ ಶರ್ಮಾ, ವಿದ್ಯಾಪೀಠದ ಮುಖ್ಯಗುರುಗಳಾದ ಶ್ಯಾಮ್ ಭಟ್ ದರ್ಭೆ ಮಾರ್ಗ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಕೃಷ್ಣ ಶರ್ಮಾ ಹಳೆಮನೆ ಇವರು ಉಪಸ್ಥಿತರಿದ್ದರು.
ಮುಂಬಯಿ IIT ಯ ಸಂಶೋಧನಾ ವಿಜ್ಞಾನಿಗಳಾದ ಡಾ. ಮಹೇಶ್ ಕೂಳಕ್ಕೂಡ್ಳು, ಪೆರ್ಲದ ನಿವೃತ್ತ ಸಂಸ್ಕೃತ ಅಧ್ಯಾಪಕರಾದ ಡಾ. ಸದಾಶಿವ ಭಟ್ ಹಾಗೂ ಬೆಂಗಳೂರಿನ ಧರ್ಮಭಾರತೀ ಪತ್ರಿಕೆಯ ಸಹ ಸಂಪಾದಕರಾದ ಶ್ರೀ ಲೋಹಿತ ಶರ್ಮಾ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರವನ್ನು ನಡೆಸಿಕೊಟ್ಟರು. ದೈನಂದಿನ ಸ್ತೋತ್ರ ಸುಭಾಷಿತಗಳಲ್ಲಿರುವ ಸಂಸ್ಕೃತ ವ್ಯಾಕರಣ ಪರಿಚಯ, ಧಾತು-ವಿಭಕ್ತಿ ಪ್ರತ್ಯಯಗಳ ಬಗ್ಗೆ ವಿವರ, ಪೂಜಾ ಕ್ರಮಗಳ ವೈಶಿಷ್ಠ್ಯಗಳನ್ನು ವಿವರವಾಗಿ ತಿಳಿಸಲಾಯಿತು. ಸಂಜೆ 5:00ಗಂಟೆಗೆ ಶಿಬಿರವು ಮುಕ್ತಾಯಗೊಂಡಿತು.

ಈ ಕಾರ್ಯಕ್ರಮವು ಮುಳ್ಳೇರ್ಯ ಹವ್ಯಕಮಂಡಲದ ಧರ್ಮಶಾಖೆ ಹಾಗೂ ಹವ್ಯಕ ಸಾಹಿತ್ಯ ವೇದಿಕೆಯಾದ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಸಂಯುಕ್ತ ಆಶ್ರಯದಲ್ಲಿ ಜರುಗಿತು. ಅನೇಕ ಶಿಬಿರಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು. ಆಸಕ್ತ ಶಿಬಿರಾರ್ಥಿಗಳಲ್ಲದೆ ಧರ್ಮಶಾಖೆಯ ಮಂಡಲ ಪ್ರಧಾನರಾದ ವೇದಮೂರ್ತಿ ಕೇಶವ ಪ್ರಸಾದ ಭಟ್ ಕೂಟೇಲು, ಪ್ರತಿಷ್ಠಾನದ ವೈದಿಕ ಸಮಿತಿ ಸಂಚಾಲಕರಾದ ಗಣೇಶ ಭಟ್ ಮಾಡಾವು, ಪ್ರತಿಷ್ಠಾನದ ಟ್ರಸ್ಟಿಗಳಾದ ಶ್ರೀದೇವಿ ವಿಶ್ವನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಾಗಾರ ಆರಂಭದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಂಸ್ಕೃತ “ವೀಡಿಯೋ ಆಶೀರ್ವಚನ”ವನ್ನು ಪ್ರದರ್ಶಿಲಾಯಿತು.

ವರದಿ: ಗೋವಿಂದ ಭಟ್ ಬಳ್ಳಮೂಲೆ, ಪ್ರಸಾರ ಪ್ರಧಾನರು – ಮುಳ್ಳೇರ್ಯ ಮಂಡಲ
ಚಿತ್ರಗಳು: ಹರೀಶ್ ಹಳೆಮನೆ

Facebook Comments