ವಿಜಯ ಚಾತುರ್ಮಾಸ್ಯಕ್ಕಾಗಿ ಶ್ರೀಗುರುಗಳ ಪುರಪ್ರವೇಶ

ಪೆರಾಜೆ, ಮಾಣಿ ಮಠ: 20 ಜುಲೈ, 2013
“ಹನುಮನೊಡನೆ ರಾಮನೆಡೆಗೆ” ಎಂಬ ಕರೆಯನ್ನು ಹೊತ್ತ ವಿಜಯ ಸಂವತ್ಸರದ ಚಾತುರ್ಮಾಸ್ಯ ವ್ರತದ ಪ್ರಾರಂಭದ ಹಂತವಾಗಿ ಶ್ರೀಗುರುಗಳ ಪುರಪ್ರವೇಶವು ಅದ್ದೂರಿಯಿಂದ ನಡೆಯಿತು. ಮಾಣಿ ವಲಯದ ಭಾಗವಾಗಿರುವ ಕಲ್ಲಡ್ಕ ಉಮಾಶಿವ ಕ್ಷೇತ್ರದಿಂದ ಶ್ರೀಗುರುಗಳನ್ನು ಮಠದ ಸರ್ವ ಪದಾಧಿಕಾರಿಗಳು ಎದುರುಗೊಂಡು ಭವ್ಯ ಮೆರವಣಿಗೆಯ ಮೂಲಕ ಪೆರಾಜೆಯ ಶ್ರೀರಾಮಚಂದ್ರಾಪುರ ಮಾಣಿ ಮಠಕ್ಕೆ ಶಿಷ್ಯರೆಲ್ಲರೂ ಸೇರಿ ಬರಮಾಡಿಕೊಂಡರು. ಹೂವಿನಿಂದಾಲಂಕೃತವಾದ ರಥದಲ್ಲಿ ಶ್ರೀಗಳು ವಿರಾಜಮಾನರಾಗಿದ್ದುಕೊಂಡು, ಅವರ ಮುಂಭಾಗದಿಂದ ಮಂಗಳವಾದ್ಯಗಳು, ಸಾವಿರದಲ್ಲಿ ಸೇರಿದ ವಾಹನದ ಸಾಲು, ಗುರಿಕ್ಕಾರರ ಸಾಲು, ವೈದಿಕ ವೇದಘೋಷ, ಶ್ರೀಮಠದ ಮಂಗಳೂರು ಹೋಬಳಿಯ ಸಾವಿರದ ಸಂಖ್ಯೆಯ ಶಿಷ್ಯರೆಲ್ಲರೂ ಸೇರಿ ಸಾಗಿ ಬಂದ ಮೆರವಣಿಗೆ ಶ್ರೀಮಠದ ಪರಿಸರದಲ್ಲಿ ಸೇರಿದವರಿಗೆ ರೋಮಾಂಚನ ಉಂಟು ಮಾಡಿತು. ಹಗಲಿಡೀ ಸುರಿಯುತ್ತಿದ್ದ ವರುಣದೇವ ಶ್ರೀಗಳ ಪುರಪ್ರವೇಶದ ಸಮಯ ಸ್ವಲ್ಪ ವಿರಾಮ ಕೊಟ್ಟು ಆಕಾಶದಿಂದಲೇ ಶಿಷ್ಯರ ಸಂಭ್ರಮವನ್ನು ಕಣ್ತುಂಬ ನೋಡಿದಂತೆ ಭಾಸವಾಯಿತು.

ಧೂಳೀ ಪೂಜೆಯನ್ನು ಹಾರಕರೆ ನಾರಾಯಣ ಭಟ್ ದಂಪತಿಗಳು ನೆರವೇರಿಸಿದರು. ನಂತರ ಶ್ರೀಗುರುಗಳು ನೆರೆದ ಶಿಷ್ಯರನ್ನುದ್ದೇಶಿಸಿ ಮಾತನಾಡುತ್ತಾ-

“ಮಾಣಿ ಮಠದಲ್ಲಿ ಇದು ಮೊಟ್ಟ ಮೊದಲ ಬಾರಿಗೆ ಚಾತುರ್ಮಾಸ್ಯ ನಡೆಯುತ್ತಾ ಇದೆ. ಹೋಬಳಿಗೆ ಹೋಬಳಿಯೇ ಪುಳಕಿತವಾಗಿದೆ. ಅರುವತ್ತು ಸಂವತ್ಸರಗಳಿಗೂ ಚಾತುರ್ಮಾಸ್ಯವಿದೆ. ಮಂಗಳೂರು ಹೋಬಳಿಗೆ ಸಿಕ್ಕಿದ ಚಾತುರ್ಮಾಸ್ಯ -ವಿಜಯ ಚಾತುರ್ಮಾಸ್ಯ. ವಿಜಯ ಚಾತುರ್ಮಾಸ್ಯ ವಿಜಯ ತರುವಂಥಾ ಚಾತುರ್ಮಾಸ್ಯ. ರಾಮದೇವರ ಇಚ್ಛೆ ಇದು.
ಚಾತುರ್ಮಾಸ್ಯ ಎಂದರೆ ವರ್ಷದ ಸಂಚಾರದ ಮುಕ್ತಾಯ. ಅರುವತ್ತು ದಿನಗಳ ಏಕತ್ರ ವಸತಿ. ಈಗಾಗಲೇ ಈ ವರ್ಷದ ದೊಡ್ಡ ಯಾತ್ರೆ ಮುಗಿಸಿ ಬಂದಿದ್ದೇವೆ. ಯಾತ್ರೆ ಹೋದದ್ದು ಹಿಮಾಲಯದ ಹೃದಯದವರೆಗೆ, ಗಂಗೆಯ ಮಡಿಲಿನವರೆಗೆ ಬೃಹತ್ ಯಾತ್ರೆ. ಪರದೇಶ, ಪರರಾಜ್ಯವನ್ನು ದಾಟಿ ಬಂದು ಈಗ ಸಂಚಾರದ ನಿಲುಗಡೆಯನ್ನು ಸಂಚಾರದ ಭೂಮಿಯಲ್ಲಿ ಮಾಡ್ಬೇಕು. ಆಂಜನೇಯನ ಸಂಚಾರದ ಭೂಮಿಯಾದ ಮಾಣಿಮಠದಲ್ಲಿ ಮಾಡ್ಬೇಕಾಗಿದೆ. ಈ ಚಾತುರ್ಮಾಸ್ಯ ಮಾರುತಿಗೆ ಸಮರ್ಪಣೆ. ಈ ಚಾತುರ್ಮಾಸ್ಯದ ಆತ್ಮ ಆಂಜನೇಯ.

ಚಾತುರ್ಮಾಸ್ಯ ಎಂದರೆ ಗುರುಗಳಿಗೆ ವ್ರತ, ಶಿಷ್ಯರಿಗೆ ಹಬ್ಬ. ಅರುವತ್ತು ದಿನದ ಸಂಭ್ರಮ. ಅನ್ನ, ಆನಂದ, ಜ್ಞಾನಗಳ ಮಹಾಸತ್ರ. ಸೂರ್ಯೋದಯ ವ್ಯಾಸ ಪೂರ್ಣಿಮೆಯ ದಿನವಾದರೆ ಅರುಣೊದಯ ಇಂದೇ ಆಗಿದೆ. ಚಾತುರ್ಮಾಸ್ಯ ದ ಪೀಠಿಕೆ ಈಗಾಗಲೇ ನೆರವೇರಿದೆ.
ಈ ಚಾತುರ್ಮಾಸ್ಯ ಹೋಬಳಿಯಲ್ಲಿ ಪರಿವರ್ತನೆ ತರಲಿ.. ವ್ಯಕ್ತಿ ವ್ಯಕ್ತಿಗೆ ಬಲ ಕೊಡಲಿ .. ಆಂಜನೇಯನ ಸಂಚಾರದಲ್ಲಿ ಸಮಾಜದಲ್ಲಿ ಹೊಸ ಗಾಳಿ ಬೀಸಲಿ.. ಎಲ್ಲರಿಗೂ ಒಳ್ಳೆಯದಾಗಲಿ..” ಎಂದರು.

ಶ್ರೀ ಮಠದ ಸರ್ವ ಪದಾಧಿಕಾರಿಗಳು, ಹೋಬಳಿಯ ಶಿಷ್ಯರೆಲ್ಲರ ಪಾಲ್ಗೊಳ್ಳುವಿಕೆಯಲ್ಲಿ ಶ್ರೀಗಳ ಪುರಪ್ರವೇಶದ ಕಾರ್ಯಕ್ರಮ ಮಾಣಿ ಮಠದಲ್ಲಿ ನಡೆಯುವ ಚಾತುರ್ಮಾಸ್ಯದ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರಾರಂಭವನ್ನು ಕೊಟ್ಟಿತು.
~*~

ಛಾಯಾಚಿತ್ರಗಳು

Facebook Comments