ಗೋಕರ್ಣ: ರಾಜಾ ಭಗೀರಥ. ಪ್ರಹ್ಲಾದ ಮೊದಲಾದ ರಾಜರ್ಷಿಗಳ, ವ್ಯಾಸ ವಸಿಷ್ಠ ಮೊದಲಾದ ಮಹರ್ಷಿಗಳ ತಪೋಭೂಮಿಯಾಗಿದ್ದ ಸಿದ್ಧಿಕ್ಷೇತ್ರವಾದ ಗೋಕರ್ಣವು ಲೋಕಶಂಕರನಾದ ಶಿವನಿಗೂ ತಪಃಸ್ಥಳವಾಗಿತ್ತು. ಯುಗ, ಯುಗಗಳ ಪೂರ್ವದಲ್ಲಿ ಪರಶಿವನೂ ಸೃಷ್ಟಿಕಾರ್ಯವನ್ನುಕೈಗೊಳ್ಳಲು ತಪಸ್ಸನ್ನಾಚರಿಸಿದ ಪುಣ್ಯಭೂಮಿಯಾದ ಈ ಕ್ಷೇತ್ರ ಶ್ರೀರಾಮನ, ಆಂಜನೇಯನ ಜನನಕ್ಕೆ ಕಾರಣವಾದ ಪ್ರದೇಶವೂ ಹೌದು. ಇಂದು ಸಾರ್ವಭೌಮ ಮಹಾಬಲೇಶ್ವರನ ಆತ್ಮಲಿಂಗದಿಂದ ಭೂಷಿತವಾಗಿದ್ದರೂ ಅದಕ್ಕಿಂತ ಮೊದಲು ಇಲ್ಲಿ ಆರಾಧ್ಯನಾಗಿದ್ದವ ಆದಿಗೋಕರ್ಣ ಎಂಬ ಹೆಸರಿನಿಂದ ವಿಖ್ಯಾತನಾದ ಈಶ್ವರನೇ. ಹೀಗಾಗಿ ರಾವಣ, ಕುಂಭಕರ್ಣ ವಿಭೀಷಣರ ತಪಸ್ಸಿನ ನೆಲೆಯಾದ ಈ ಗೋಕರ್ಣದಲ್ಲಿ  ರಾಮಾಯಣದ ಮಾರೀಚನ ಆಶ್ರಮವೂ ಇತ್ತು ಎಂದು ಇತಿಹಾಸವು ದಾಖಲಿಸಿದೆ ಎಂದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದರು.

ಇಂದು ಅಶೋಕೆಯಲ್ಲಿ ಆಯೋಜಿತವಾಗಿದ್ದ ರಾಮಕಥಾ ದ್ವಿತೀಯ ಪರ್ವದ ಸಮಾಪ್ತಿಯಂದು ಪ್ರವಚನವನ್ನು ಅನುಗ್ರಹಿಸುತ್ತಿದ್ದ ಶ್ರೀಗಳು ಕ್ಷಣಕಾಲ ಮನದಲ್ಲಿ ಮೂಡಿ ಮಾಯವಾದ ಒಂದು ಭಾವವು ಸೃಷ್ಟಿಸಿದ ರಾಕ್ಷಸಭಾವ ಯುಗ, ಯುಗಗಳವರೆಗೂ ಲೋಕವನ್ನು ಪೀಡೆಗೊಳಪಡಿಸಿತು. ಪುಷ್ಪಕಾರೂಢನಾಗಿದ್ದ ಕುಬೇರನನ್ನು ಕಂಡ ಕೈಕಸಿ ಅಸೂಯಾಪರಳಾಗಿ ತನ್ನಮಕ್ಕಳಾದ ರಾವಣಾದಿಗಳು ಕುಬೇರನನ್ನು ಮೀರಿ ಬೆಳೆಯುವಂತೆ ಬಯಸಿದ ಫಲವಾಗಿ ಅವರು ತಪಸ್ಸನ್ನು ಆಚರಿಸಿ ಬ್ರಹ್ಮನನ್ನು ಮೆಚ್ಚಿಸಿ ವರಗಳನ್ನು ಪಡೆದರು. ಮೂವರು ವ್ಯಕ್ತಿಗಳು ಒಂದೇರೀತಿಯಾಗಿ ತಪಸ್ಸನ್ನಾಚರಿಸಿದರೂ ಸಿಕ್ಕ ಫಲಮಾತ್ರ ಬೇರೆ ಬೇರೆ. ರಾಜಸಸ್ವಭಾವದಿಂದ ತಪಸ್ಸಿನಲ್ಲಿ ಪ್ರವೃತ್ತನಾದ ರಾವಣನಿಗೆ ಅದೊಂದು ವ್ಯಾಪಾರವಾಯಿತು. ಆದರೆ ಅವನು ಬಯಸಿದ ಅಮರತ್ವ ಅವನನ್ನು ಸೇರಲಿಲ್ಲ. ತಪಸ್ಸಿನ ಫಲದ ಬಗ್ಗೆ ಯೋಚನೆಯೇ ಇಲ್ಲದೆ ತಾಮಸತಪದಲ್ಲಿದ್ದ ಕುಂಭಕರ್ಣ ಯಾವ ಪ್ರಯೋಜನಕ್ಕೂ ಬಾರದ ನಿದ್ದೆಯನ್ನು ಫಲವನ್ನಾಗಿ ಪಡೆದ. ಆದರೆ ಪರಮವೈಷ್ಣವ ಶಿರೋಮಣಿಯಾದ ವಿಭೀಷಣ ಮಾತ್ರ ಎಂತಹ ಆಪತ್ಕಾಲದಲ್ಲಿಯೂ ತನ್ನ ಬುದ್ಧಿ ಧರ್ಮದಲ್ಲಿಯೇ ನೆಲೆಸುವಂತೆ ಕೇಳಿಕೊಂಡಿದ್ದರಿಂದಾಗಿ ಅವನಿಗೆ ಬಯಸದೆಯೂ ಅಮರತ್ವವು ದೊರಕಿತು. ಅಷ್ಟೇ ಅಲ್ಲ, ಮುಂದೆ ಶ್ರೀರಾಮನಸೇವಾ ಭಾಗ್ಯವನ್ನೂ ಆತ ಪಡೆಯುವಂತಾಯಿತು. ಎಂದು ಹೇಳಿ ಧರ್ಮಾಚರಣೆಯು ಎಲ್ಲ ಸುಖಸಂಪತ್ತುಗಳಿಗೆ ಮೂಲಕಾರಣವಾಗಿದ್ದು ನಮ್ಮ ಬದುಕಿನಲ್ಲಿ ಅದಕ್ಕೆ ಮಹತ್ವದ ಸ್ಥಾನವು ಲಭಿಸುವಂತಾಗಲಿ ಎಂದೂ ಆಶಿಸಿದರು. ಶ್ರೀಪಾದ ಭಟ್ಟ, ವಿಶ್ವೇಶ್ವರ ಭಟ್ಟ, ಸಂಧ್ಯಾ ಭಟ್ಟ, ಪ್ರೇಮಲತಾ ದಿವಾಕರ, ಇವರ ಮೋಹಕ ಸಂಗೀತ, ಗೋಪಾಲಕೃಷ್ಣ ಹೆಗಡೆ, ಜಿ.ಕೆ.ಹೆಗಡೆ ಯವರ ತಬಲಾವಾದನ, ಶಿರಸಿಯ ಪ್ರೊ.ಆರ್.ವಿ.ಹೆಗಡೆ ಇವರ ಸಿತಾರ್ ವಾದನ. ನೀರ್ನಳ್ಳಿ ಗಣಪತಿಯವರ ಆಶುಚಿತ್ರರಚನೆಗಳು ಕಾರ್ಯಕ್ರಮಕ್ಕೆ ವಿಶೇಷ ಸೊಗಸನ್ನು ನೀಡಿದವು. ಪ್ರೊ.ಕುಮಾರಿ ಸುಭದ್ರಾ ನಿರ್ದೇಶನದಲ್ಲಿ ನಡೆದ ರಾವಣತಪಸ್ಸು ರೂಪಕವು ಆಕರ್ಷಕವಾಗಿತ್ತು.

ಇಂದು ಉತ್ತರಕರ್ನಾಟಕ ವಲಯಗಳಾ ಹುಬ್ಬಳ್ಳಿ, ಧಾರವಾಡ, ಹಾವೇರಿ ಮೊದಲಾದ ಪ್ರದೇಶಗಳ ಶಿಷ್ಯರಿಂದ ಶ್ರೀಗುರುದೇವತಾ ಸೇವೆ ಮತ್ತು ನಾಡವಸಮಾಜದ ಶಿಷ್ಯರಿಂದ ಗುರುಪಾದುಕಾಪೂಜಾ ಸೇವೆಯು ಸಂಪನ್ನಗೊಂಡವು. ಜಿಲ್ಲಾಪಂಚಾಯತ್ ಸದಸ್ಯ ಶ್ರೀ ಪ್ರದೀಪ ನಾಯಕ್, ದಕ್ಷಿಣ ವಲಯದ  ಐ ಜಿ. ಶ್ರೀ ಆಲೋಕ ಕುಮಾರ ಸಿಂಗ್ ಧರ್ಮಸಭೆಯಲ್ಲಿ ಉಪಸ್ಥಿತರಿದ್ದರು.  ಪೂಜ್ಯಶ್ರೀಗಳು ಆಶೀರ್ವಚನ ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು.

Facebook Comments