ಗೋಕರ್ಣ. ಮಾ.೬. ಬದುಕಿನಲ್ಲಿ ಸೌಂದರ್ಯ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಕಾಣುವ ಕಣ್ಣು ಎರಡೂ ಅಗತ್ಯ. ರೂಪ, ಆಕಾರ, ಮೊದಲಾದವುಗಳಿಂದ ನಮ್ಮ ಬಾಹ್ಯಶರೀರದ ಚೆಲುವು ವೃದ್ಧಿಗೊಳ್ಳುತ್ತದೆ. ಶೀಲ, ಸದ್ಗುಣಗಳಿಂದ ಅಂತಃಸ್ಸೌಂದರ್ಯ ಹೆಚ್ಚುತ್ತದೆ.ಜೀವನದ ಸಾರ್ಥಕತೆಗೆ ಇವೆರಡೂ ಬೇಕು.ಕೇವಲಬಾಹ್ಯಸೌಂದರ್ಯದಲ್ಲಿ ಥಳಕು ಮಾತ್ರ ವ್ಯಕ್ತ. ಅಂತಸ್ಸೌಂದರ್ಯದಿಂದ ನಮ್ಮ ಅಂತರಂಗ ಅರಳುತ್ತದೆ. ಈ ಎರಡರ ಹಿತವಾದ ಸಂಯೋಜನೆಯೇ ಬದುಕಿನಲ್ಲಿ ಉನ್ನತವಾದ ಧ್ಯೇಯವಾಗಬೇಕು.ರಾಕ್ಷಸರೆಂದರೆ ಕ್ರೂರದಾಡೆಗಳು, ಕಪ್ಪಾದ ಘೋರ ಆಕಾರ, ಕೆಂಪಾದ ಕಣ್ಣುಗಳು ಇರಬೇಕಿಲ್ಲ.ಎಲ್ಲೋ ಕಾಡೊಳಗೆ ಅವಿತಿರುವವರಲ್ಲ. ಒಳಿತನ್ನು ದ್ವೇಷಿಸುವ ಪ್ರವೃತ್ತಿಯೇ ರಾಕ್ಷಸತ್ವ. ಇಂತಹ ಸ್ವಭಾವ ಮನೆಯೊಳಗೂ ಕೊನೆಗೆ ನಮ್ಮ ಮನದೊಳಗೂಪ್ರವೇಶಿಸಬಹುದು. ಅಂತಹ ಸ್ಥಿತಿಗೆ ಹೋಗದಂತೆ ತಡೆಯಲು ನಮ್ಮೊಳಗೆ ಇರುವ ಒಳ್ಳೆಯತನದ ಅಭಿವ್ಯಕ್ತಿ ಸದಾ ಅಗತ್ಯ ಎಂದು  ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
gk-rk-day2
ಶಿವರಾತ್ರಿ ಮಹೋತ್ಸವದ ಅಂಗವಾಗಿ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಸಂಪನ್ನಗೊಳ್ಳುತ್ತಿರುವ “ರಾಮಕಥಾ” ದಲ್ಲಿ ಇಂದು ಬುಧವಾರ ಸಂಜೆ ಎರಡನೆಯದಿನದ ಪ್ರವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು  ಅಂತರಂಗ-ಬಹಿರಂಗಗಳು ಒಂದಾದಾಗ ಮಾತ್ರ ಮೋಕ್ಷಲಾಭ. ರಾಕ್ಷಸಿಯಾದ ತಾಟಕಿಯ ಒಳ-ಹೊರಗುಗಳೆರಡೂ ಭಯಂಕರವಾದ ರಾಕ್ಷಸಪ್ರವೃತ್ತಿಯ ದಾಗಿದ್ದರಿಂದಾಗಿ ವಿಶ್ವಾಮಿತ್ರರ ಆದೇಶದಂತೆ ಶ್ರೀರಾಮ ಬಾಣಪ್ರಯೋಗವನ್ನು ಮಾಡುವ ಮೂಲಕ ಮುಕ್ತಿ ನೀಡಿದ. ಬದುಕಿನಲ್ಲಿ ಮೂರುವಿಧದ ಪಾಪಗಳು ನಮ್ಮಿಂದ ಘಟಿಸುತ್ತವೆ. ಶರೀರದಿಂದಾಗುವ ಕಾಯಿಕಪಾಪ, ಮಾತಿನಿಂದಾಗುವ ವಾಚಿಕಪಾಪ, ಹಾಗೂ ಮನಸ್ಸಿನಿಂದ ನಡೆಯುವ ಮಾನಸಿಕವಾದ ಪಾಪ. ಈ ಯಾವಪಾಪಗಳಿಗೂ ನಮ್ಮಲ್ಲಿ ಅವಕಾಶವಿರಬಾರದು. ರಾಜಾ ದಶರಥ ಯಾಗರಕ್ಷಣೆಗೆಂದು ಶ್ರೀರಾಮನನ್ನು ಕಳಿಸೆಂದು ಕೇಳಿದಾಗ ಹಿಂದೆ ತಾನು ಮಹರ್ಷಿಗೆ ಕೊಟ್ಟವಚನವನ್ನು ಮುರಿದು ರಾಮನನ್ನು ಕಳಿಸಲು ನಿರಾಕರಿಸಿದ. ಋಷಿಯ ಮಾತನ್ನು ಅಂಗೀಕರಿಸದೆ ಅವನಲ್ಲಿ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದರಿಂದಾಗಿ ಯಾವರಾಮನನ್ನು ಸದಾತನ್ನ ಬಳಿಯಲ್ಲಿಯೇ ಇರುವಂತೆ ಬಯಸಿದ್ದನೋ ಅಂತಹ ರಾಮನನ್ನು ಶಾಶ್ವತವಾಗಿ ಮುಂದೆ ಕಳೆದುಕೊಳ್ಳುವಂತಹ ಪರಿಸ್ಥಿತಿಯನ್ನು ತಾನಾಗಿ ತಂದುಕೊಂಡ.ಮಹಾತ್ಮರಲ್ಲಿ ವ್ಯವಹರಿಸುವಾಗ ಅಂತಶ್ಶುದ್ಧಿಯಿಲ್ಲದಿದ್ದರೆ ಆಗಬಹುದಾದ ಪರಿಣಾಮಕ್ಕೆ ದಶರಥನೇ ಸರ್ವಶ್ರೇಷ್ಠ ಉದಾಹರಣೆ ಎಂದೂ ನುಡಿದ ಪೂಜ್ಯಶ್ರೀಗಳು ಮುಂದೆ ವಿಶ್ವಾಮಿತ್ರರು ಶ್ರೀರಾಮಲಕ್ಷ್ಮಣರಿಗೆ ಇಕ್ಷ್ವಾಕುವಂಶದ ರಾಜರ ಮಹಾಕಾರ್ಯಗಳನ್ನು ಅವರ ಕೀರ್ತಿಯನ್ನು ಸಿದ್ಧಿಯನ್ನು ತಿಳಿಸಿ ಶ್ರೀರಾಮನನ್ನು ಮುಂದಿನ ರಾಕ್ಷಸ ಸಂಹಾರದಂತಹ ಲೋಕೋದ್ಧಾರದ ಕಾರ್ಯಗಳಿಗೆ ಪ್ರೇರಿಸಿದರಲ್ಲದೆ ದುಷ್ಟಶಿಕ್ಷೆ ಹಾಗೂ ಶಿಷ್ಟರಕ್ಷಣೆಗೆ ಲೋಕನಾಯಕನ ಅವತಾರವಾಗಿದೆಯೆಂಬುದನ್ನು ಸೂಚ್ಯವಾಗಿ ಲೋಕಕ್ಕೆ ಸಂದೇಶವನ್ನು ನೀಡಿದರು. ಸುಬಾಹು-ತಾಟಕಿಸಂಹಾರಗಳೇ ಇದಕ್ಕೆ ದೃಷ್ಟಾಂತ ಎಂದೂ ಹೇಳಿ ಸಾರ್ವಕಾಲಿಕ ಪ್ರಸ್ತುತವಾದ ರಾಮಾಯಣವು ನೀಡುವ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು  ಇಂದಿನ ಅಗತ್ಯವಾಗಿದೆ ಎಂದೂ ಹೇಳಿದರು.

ಶ್ರೀ ಶ್ರೀಪಾದ ಭಟ್ತ, ಶ್ರೀ ಟಿ.ವಿ.ಗಿರಿ. ಕುಮಾರಿ ಪೂಜಾ, ಕುಮಾರಿ ದೀಕ್ಷಾ ಸಾಕೇತ ಶರ್ಮಾ ಇವರ ಮನೋಹರವಾದ ಗಾಯನ, ಪ್ರಸಿದ್ಧ ಕಲಾವಿದ ಶ್ರೀ ಗೋಪಾಲಕೃಷ್ಣ ಹೆಗಡೆ ಹಾಗೂ ಕುಮಾರಿ ವಿಜೇತಾ ಅವರ ತಬಲಾ, ಲೀಲಾಶುಕರ ಹಾರ್ಮೋನಿಯಂ ಉದಯ ಭಂಡಾರಿಯವರ ಕೀಬೋರ್ಡ್ ಮತ್ತು ಶ್ರೀಗಣೇಶರ ವೇಣುವಾದನ ಶ್ರೋತೃಗಳನ್ನು ರಂಜಿಸಿದವು. ಆಶುಚಿತ್ರಕಾರ ಶ್ರೀ ನೀರ್ನಳ್ಳಿ ಗಣಪತಿಯವರ ಸಾಂದರ್ಭಿಕಚಿತ್ರ ತುಂಬ ಸುಂದರವಾಗಿ ಮೂಡಿಬಂತು. ಕೊನೆಗೆ ಶ್ರೀ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ ಯವರ ನಿರ್ದೇಶನದಲ್ಲಿ “ತಟಾಕದಲ್ಲಿ ತಾಟಕಿವಧ” ಎಂಬ ರೂಪಕವನ್ನು ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀಪಾದ ಹೆಗಡೆ ಹಡಿನಬಾಳ, ಈಶ್ವರ ಭಟ್ಟ ಕಟ್ಟೆ, ಶ್ರೀ ವಿಷ್ಣುಭಟ್ಟ ಮೂರೂರು, ವಿಶ್ವೇಶ್ವರ ಹೆಗಡೆ ಕುಮಾರಿ ಪೂರ್ಣಿಮಾ ಹಾಗೂ ಶ್ರೀಶ ಹೆಗಡೆ ಇವರು ಪ್ರದರ್ಶಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಜಿಲ್ಲಾಪಂಚಾಯತ ಸದಸ್ಯ ಶ್ರೀ ಪ್ರದೀಪ ನಾಯಕ, ಮಾತೃವಿಭಾಗದ  ಶ್ರೀಮತಿ ಯಮುನಾ ಭಾಗ್ವತ, ವೇ.ಪರಮೇಶ್ವರ ಮಾರ್ಕಂಡೆ,ವೇ.ಶ್ರೀಧರ ಉಪಾಧ್ಯಾಯ, ವೇ.ಗಣೇಶ ಜೋಯಿಸ್, ಹಾಗೂ ವೇ.ರಮೇಶ ಪ್ರಸಾದ ರಾಮಾಯಣಗ್ರಂಥಕ್ಕೆ ಮಾಲಾರ್ಪಣೆ ಮಾಡಿದರು.ಶ್ರೀ ಮಹಾಬಲ ಉಪಾಧ್ಯ ದಂಪತಿಗಳಿಂದ ಪೂಜ್ಯಶ್ರೀಗಳಿಗೆ ಫಲಕಾಣಿಕೆಯು ಸಮರ್ಪಿತವಾಯಿತು.

Facebook Comments Box