ಗೋಕರ್ಣ.ಮಾ5. ನಮ್ಮ ಶರೀರಕ್ಕೆ ರೋಗಾಣುಗಳ ಪ್ರವೇಶವಾದರೆ ಅದರಿಂದ ರೋಗದ ಉತ್ಪತ್ತಿ. ಅದರ ಪರಿಹಾರಕ್ಕಾಗಿ ನಾವು ವೈದ್ಯರ ಮೊರೆ ಹೋಗುತ್ತೇವೆ. ಚಿಕಿತ್ಸೆಯನ್ನು ಪಡೆದುಸ್ವಸ್ಥರಾಗುತ್ತೇವೆ. ಹಾಗೆಯೇ ಈ ಭೂಮಿತಾಯಿಯ ದೇಹಕ್ಕೆ ಅತ್ಯಂತ ಭಯಂಕರವಾದ ರಾವಣನೆಂಬ ರೋಗಾಣುವಿನ ಪ್ರವೇಶವಾಗಿ ವ್ಯಾಧಿಯು ಜಾಸ್ತಿಯಾಗಿ ಲೋಕದ ಸ್ವಾಸ್ಥ್ಯವು ಹದಗೆಟ್ಟಾಗ ಜನರು ಆಕ್ರಂದನ ಮಾಡತೊಡಗಿದಾಗ ಆಗಿದ್ದು ರಾಮಾವತಾರ. ಲೋಕಕ್ಕೆ ತೊಂದರೆ ಬಂದಾಗ ಗತಿ… “ವೈದ್ಯೋ ನಾರಾಯಣೋ ಹರಿಃ”.ರೋಗಕ್ಕೆ ತಕ್ಕ ಮದ್ದು.ಅಲ್ಪಪ್ರಮಾಣದ ರೋಗಕ್ಕೆ ಆಸವ, ರಸಾಯನಾದಿಗಳು.ರೋಗವು ಬಲಿತು ಅಸಾಧ್ಯವಾದಾಗ ಶಸ್ತ್ರಚಿಕಿತ್ಸೆ ಅನಿವಾರ್ಯ. ರಾವಣನಂತಹ ರಾಕ್ಷಸರೋಗಕ್ಕೆ ಔಷಧಾದಿಗಳು ಸಾಕಾಗದೇ ಹೋಗಿದ್ದರಿಂದ ಅನಿವಾರ್ಯವಾಗಿ ಶ್ರೀಹರಿಯೇ ದಿವಿಯಿಂದ ಇಳಿದುಬಂದ. ಅಯೋನಿಜೆಯಾದ ಸೀತಾಮಾತೆ ಭೂಮಾತೆಯ ಪುತ್ರಿಯಾಗಿ ಆವಿರ್ಭವಿಸಿ ಶ್ರೀರಾಮನ ಕೈಹಿಡಿದು ಆಸುರೀಶಕ್ತಿಯ ಪ್ರತೀಕವಾದ ರಾಕ್ಷಸ ಸಮೂಹದ ಸಂಹಾರಕ್ಕೆ ನಿಮಿತ್ತಳಾದಳು. ವಾಸ್ತವವಾಗಿ ಆದಿಕಾವ್ಯವಾದ ರಾಮಾಯಣ ಕೇವಲ ಕಾವ್ಯದ ನೆಲೆಯಲ್ಲಿಯೇ ಉಳಿಯದೆ ನಮ್ಮೆಲ್ಲರ ಬದುಕಿನ ಧ್ಯೇಯಧೋರಣೆಗಳಿಗೆ ಆದರ್ಶವೂ ಆಗಿ ನಿಲ್ಲುವುದರಿಂದಾಗಿ ಅದು ಇಂದಿಗೂ ಪ್ರಸ್ತುತವಾಗುತ್ತದೆ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.
DSC_0134
ಶ್ರೀಕ್ಷೇತ್ರಗೋಕರ್ಣದ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಇದೇ 5ಮಂಗಳವಾರದಿಂದ 9ಶನಿವಾರದವರೆಗೆ ಐದುದಿನಗಳಕಾಲ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಆಯೋಜಿತವಾಗಿರುವ “ರಾಮಕಥಾ” ದಲ್ಲಿ ಮೊದಲದಿನದ ಪ್ರವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ರಾಮಾಯಣವನ್ನು ರಚಿಸಿದ ಮಹರ್ಷಿವಾಲ್ಮೀಕಿ ಎಲ್ಲಿಯೂ ತಮ್ಮ ಕಲ್ಪನೆಗೆ ಆಶ್ರಯವನ್ನು ಕೊಡದೆ ಸ್ವತಹ ತಾವೇ ಅನುಭವಿಸಿದ ರಾಮರಾಜ್ಯ ವೈಭವವನ್ನು ಯಥಾವತ್ತಾಗಿ ದಾಖಲಿಸಿದ್ದಾರೆ. ಯಾವುದೇ ಕಾರ್ಯಸಾಧನೆಗೆ ಪ್ರೇರಣೆ, ಸಾಧನ, ನಿಮಿತ್ತ ಎಂಬ ಮೂರುವಿಷಯಗಳು ಅಗತ್ಯ.ರಾಕ್ಷಸಸಂಹಾರಕ್ಕೆ ನಿಮಿತ್ತವಾದವಳು ಸೀತೆ. ಪ್ರೇರಣೆ ಮಹರ್ಷಿವಿಶ್ವಾಮಿತ್ರರು ಹೇಳಿದ ತನ್ನ ವಂಶಜರಾದ ಪೂರ್ವಜರ ಸಾಹಸದ ಕಥೆಗಳು. ಅಸ್ತ್ರಶಸ್ತ್ರ ಸಂಗ್ರಹಗಳು ಸಾಧನವಾದವು. ಈ ಮೂರೂ ಬಾಲಕಾಂಡದಲ್ಲಿ ತುಂಬ ಹೃದಯಂಗಮವಾಗಿ ನಿರೂಪಿತವಾಗಿವೆ ಎಂದೂ ಹೇಳಿ ಇಂದು ನಮ್ಮ ಪರಿಸರದ ಹಲವಾರು ಸಮಸ್ಯೆಗಳಿಗೆ ರಾಮಾಯಣದಲ್ಲಿ ಪರಿಹಾರವನ್ನು ಕಾಣಬಹುದು ಸಾರ್ವಕಾಲಿಕವಾದ ಪ್ರಸ್ತುತತೆಯನ್ನು ಹೊಂದಿದ ರಾಮಾಯಣ ಹೇಗೆ ರಾಮನ ನಡೆ-ನುಡಿಯನ್ನು ಉಲ್ಲೇಖಿಸುತ್ತದೆಯೋ ಹಾಗೆಯೇ ಲೋಕಮಾತೆಯಾದ ಸೀತಾಮಾತೆಯ ಚರಿತ್ರೆಯನ್ನೂ ನಮ್ಮೆದುರು ತೆರೆದಿಡುತ್ತದೆ. ಆದ್ದರಿಂದಲೇ ರಾಮಾಯಣವನ್ನು ವಾಲ್ಮೀಕಿ  ಸೀತಾಚರಿತ್ರೆ ಎಂದೂ ಕರೆದಿದ್ದಾರೆ. ಒಟ್ಟಿನಲ್ಲಿ ನಮ್ಮ ಬದುಕನ್ನು ಶೋಧಿಸಿ ಉತ್ತಮವಾದದ್ದನ್ನು ಉಳಿಸಿಕೊಂಡು ಅನಗತ್ಯವಾದದ್ದನ್ನು ಹೊರಹಾಕಲು ರಾಮಾಯಣವು ಪ್ರೇರಕವಾಗುತ್ತದೆ ಎಂದೂ ಪೂಜ್ಯಶ್ರೀಗಳು ನುಡಿದರು.
DSC_0122
ಶ್ರೀ ಶ್ರೀಪಾದ ಭಟ್ತ,ಶ್ರೀ ಟಿ.ವಿ.ಗಿರಿ. ಕುಮಾರಿ ಪೂಜಾ, ಕುಮಾರಿ ದೀಕ್ಷಾ ಸಾಕೇತ ಶರ್ಮಾ ಇವರ ಮನೋಹರವಾದ ಗಾಯನ, ಪ್ರಸಿದ್ಧ ಕಲಾವಿದ ಶ್ರೀ ಗೋಪಾಲಕೃಷ್ಣ ಹೆಗಡೆ ಹಾಗೂ ಕುಮಾರಿ ವಿಜೇತಾ ಅವರ ತಬಲಾ, ಲೀಲಾಶುಕರ ಹಾರ್ಮೋನಿಯಂ ಉದಯಭಂಡಾರಿಯವರ ಕೀಬೋರ್ಡ್ ಮತ್ತು ಶ್ರೀಗಣೇಶರ ವೇಣುವಾದನ ಶ್ರೋತೃಗಳನ್ನು ರಂಜಿಸಿದವು. ಆಶುಚಿತ್ರಕಾರ ಶ್ರೀ ನೀರ್ನಳ್ಳಿ ಗಣಪತಿಯವರ ಸಾಂದರ್ಭಿಕ ಚಿತ್ರ ತುಂಬ ಸುಂದರವಾಗಿ ಮೂಡಿಬಂತು. ಕೊನೆಗೆ ಶ್ರೀ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ ಯವರ ನಿರ್ದೇಶನದಲ್ಲಿ “ವಿಶ್ವಾಮಿತ್ರ-ದಶರಥ” ಎಂಬ ರೂಪಕವನ್ನು ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀಪಾದ ಹೆಗಡೆ ಹಡಿನಬಾಳ, ಈಶ್ವರ ಭಟ್ಟ ಕಟ್ಟೆ, ಶ್ರೀ ವಿಷ್ಣುಭಟ್ಟ ಮೂರೂರು, ವಿಶ್ವೇಶ್ವರ ಹೆಗಡೆ ಕುಮಾರಿ ಪೂರ್ಣಿಮಾ ಹಾಗೂ ಶ್ರೀಶ ಹೆಗಡೆ ಇವರು ಪ್ರದರ್ಶಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಮಹಾಬಲ ಉಪಾಧ್ಯ ದಂಪತಿಗಳು ಪೂಜ್ಯಶ್ರೀಗಳಿಗೆ ಫಲಸಮರ್ಪಿಸಿ ಮಾಲಾರ್ಪಣೆ ಮಾಡಿದರು.ಉಪಾಧಿವಂತ ಮಂಡಲದ ಅಧ್ಯಕ್ಷ ವೇ. ಗಣೇಶ ನಾರಾಯಣ ಹಿರೇಗಂಗೆ, ಗೋಕರ್ಣ ಗ್ರಾಮಪಂಚಾಯತ ಅಧ್ಯಕ್ಷ ಶ್ರೀ ಮಂಜುನಾಥ ಜನ್ನು, ಶಿವರಾತ್ರಿ ಉತ್ಸವಸಮಿತಿಯ ಅಧ್ಯಕ್ಷ ಡಾ.ವಿ.ಆರ.ಮಲ್ಲನ್, ಪ್ರೊ.ಶಂಭುಭಟ್ಟ ಕಡತೋಕಾ ಶ್ರೀ ಬೀರಣ್ಣ ನಾಯಕ ಹಾಗೂ ಶ್ರೀ ಜಿ.ಕೆ ಹೆಗಡೆ ಗೋಳಗೋಡು, ಶ್ರೀ ಮಂಜುನಾಥ ಸುವರ್ಣಗದ್ದೆ ರಾಮಾಯಣಗ್ರಂಥಕ್ಕೆ ಮಾಲಾರ್ಪಣೆ ಮಾಡಿದರು.

Facebook Comments Box