ಗೋಕರ್ಣ.19. ಲೋಕಪಾವನೆಯಾಗಿ ದೇವಲೋಕದಿಂದ ಇಳಿದುಬಂದ ಗಂಗೆ ಕೇವಲ ಜಲಸ್ವರೂಪಳಲ್ಲ. ನದಿಯಾಗಿ ನಾಡಿಗರಿಗೆ ಸಮೃದ್ಧವಾದ ಬದುಕನ್ನು ಕಟ್ಟಿಕೊಡುವ ಈ ನದಿ ನಾವು ಪಡೆಯುವ ಜ್ಞಾನಕ್ಕೆ ಸಂಕೇತವೂ ಆಗುತ್ತಾಳೆ ಎಂಬುದನ್ನು ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ತಮ್ಮ ಮಾತಿನಲ್ಲಿ ಉಲ್ಲೇಖಿಸುತ್ತಾರೆ. ಸೂರ್ಯವಂಶ ಸಂಜಾತರಾದ  ಸಗರಪುತ್ರರ ಸದ್ಗತಿಗಾಗಿ ರಾಜಾ ಭಗೀರಥನ ಪ್ರಯತ್ನದಿಂದ ಅವನನ್ನು ಅನುಸರಿಸಿದ ಗಂಗೆ ದಾರಿಯಲ್ಲಿ ಜಹ್ನು ಮಹರ್ಷಿಯ ಆಶ್ರಮವನ್ನು ತನ್ನ ಅಗಾಧವಾದ ಪ್ರವಾಹದಿಂದ ವಿನಾಶಗೊಳಿಸತೊಡಗಿದಾಗ ಕ್ರುದ್ಧನಾದ ಜಹ್ನು ಗಂಗೆಯನ್ನು ಏಕಾಪೋಶನವನ್ನಾಗಿಸಿದ. ನಂತರ ದೇವತೆಗಳ ಪ್ರಾರ್ಥನೆಯಂತೆ ಆಕೆಯನ್ನು  ತನ್ನ ಕಿವಿಗಳ ಮೂಲಕ ಹೊರಬಿಟ್ಟ. ಆದ್ದರಿಂದಲೇ ಗಂಗೆಗೆ ಜಾಹ್ನವೀ ಎಂದೂ ಹೆಸರಾಯಿತು. ಹೀಗೆ ಮುಂದೆ ಭೋರ್ಗರೆದು ಹರಿಯುತ್ತ ಸಾಗಿ ಪಾತಾಳವನ್ನು ಸೇರಿ ಸಗರಪುತ್ರರನ್ನು ಉದ್ಧರಿಸಿದಳು. ಇದು ಕೇವಲ ಸಗರಪುತ್ರರಿಗಷ್ಟೇ ಅಲ್ಲ. ನಮ್ಮೆಲ್ಲರ ಬದುಕಿನ ಔನ್ನತ್ಯಕ್ಕೂ ಸಹ ಸಂಕೇತವಾಗುತ್ತದೆ. ಗಂಗೆಯನ್ನು ಈ ರೂಪದಲ್ಲಿ ಕಲ್ಪಿಸಿಕೊಂಡಾಗ ಅದು ಕೇವಲ ನದಿಯಾಗದೆ ನಮ್ಮ ಜೀವನಕ್ಕೂ ಪ್ರತೀಕವಾಗುತ್ತದೆ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಇಂದು ಗೋಕರ್ಣದ ಸಾಗರತೀರದಲ್ಲಿ  ಮಹರ್ಷಿ ದೈವರಾತ ವೇದಿಕೆಯಲ್ಲಿ ಆಯೋಜಿತವಾಗಿದ್ದ “ರಾಮಕಥಾ”ದಲ್ಲಿ ಪ್ರವಚನದ ಅನುಗ್ರಹವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಹಿಮಾಲಯ ಪರ್ವತ ಹಾಗೂ ಗಂಗಾನದಿ ಎರಡೂ ಭಾರತೀಯರಾದ ನಮ್ಮ ಬದುಕಿನಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ. ಪರ್ವತ ಮೌನಿ,  ನದಿಯಲ್ಲಿ ಕಲಕಲವಿದೆ. ನದಿ ಇಳಿಯಲು ಪ್ರೇರಿಸುತ್ತದೆ. ಆದರೆ ಪರ್ವತ ತನ್ನನ್ನೇರಲು ಔನ್ನತ್ಯವನ್ನು ಪಡೆಯಲು ಪ್ರಚೋದಿಸುತ್ತದೆ.  ಈ  ಹಿಮಾಲಯ ಪರ್ವತ ಹಾಗೂ ಗಂಗಾನದಿಗಳೆರಡೂ ಹರಿದುಹೋಗುತ್ತಿರುವ ಕಾಲಕ್ಕೆ ಹಾಗೂ  ನಮ್ಮ ಜೀವನಕ್ಕೆ ಸಂಕೇತವಾಗಿ ನಿಂತಿರುವುದಲ್ಲದೆ  ಬಾಳಿನ ಸಾರ್ಥಕತೆಯನ್ನೂ ಪ್ರತಿಪಾದಿಸುತ್ತವೆ ಎಂದು ಹೇಳಿ ನಮ್ಮ ಎಲ್ಲ ಭಾರತೀಯ ಸಾಹಿತ್ಯ ಪ್ರಕಾರಗಳಲ್ಲಿಯೂ ಇವೆರಡೂ ಉಲ್ಲಿಖಿತವಾಗಿದ್ದು ಶ್ರೀಮದಾಚಾರ್ಯ ಶಂಕರಭಗವತ್ಪಾದರು ಮತ್ತು ಮಹರ್ಷಿ ವಾಲ್ಮೀಕಿಯೂ ಕೂಡಾ ಗಂಗೆಯನ್ನು ತಾಯಿಯನ್ನಾಗಿ ಕಂಡು ಸ್ತುತಿಸಿದ್ದಾರೆ. ಇಂತಹ ಪವಿತ್ರವಾದ ಹಿಮಾಲಯ ಪರ್ವತಗಳು ನಮ್ಮ  ಉನ್ನತಿಗೆ ಸಾಧನವಾಗಬೇಕು ಎಂದೂ ಹೇಳಿದರು.

ಶ್ರೀಪಾದ ಭಟ್ಟರು ಹಾಗೂ ಪ್ರೇಮಲತಾ ದಿವಾಕರ ತಮ್ಮ ಸುಶ್ರಾವ್ಯಗಾನದಿಂದ ಹಾಗೂ ಗೋಪಾಲಕೃಷ್ಣ ಹೆಗಡೆ ತಬಲಾ, ಗೌರೀಶ ಯಾಜಿ ಹಾರ್ಮೋನಿಯಮ್, ಪ್ರಕಾಶ ಕಲ್ಲಾರೆಮನೆ ಕೊಳಲು  ವಾದನಗಳಿಂದ ರಾಮಕಥೆಗೆ ಹೆಚ್ಚಿನ ಶೋಭೆಯನ್ನಿತ್ತರು. ನೀರ್ನಳ್ಳಿ ಗಣಪತಿ, ಹಾಗೂ ಮರಳುಶಿಲ್ಪದ ರಾಘವೇಂದ್ರ ಹೆಗಡೆ ತಮ್ಮ ಚಿತ್ರಗಳಿಂದ ಆಕರ್ಷಕವಾಗಿಸಿದರು.  ಪ್ರಸಿದ್ಧ ಕಲಾವಿದ ಡಾ.ಜಿ.ಎಲ್.ಹೆಗಡೆ ಹಾಗೂ ಸಹಕಲಾವಿದರಿಂದ “ಸಾಗರೋದ್ಧಾರ”ಎಂಬ ರೂಪಕವು ಪ್ರದರ್ಶಿತವಾಯಿತು. ಶ್ರೀ ಎಮ್.ಜಿ.ಉಪಾಧ್ಯ ದಂಪತಿಗಳಿಂದ ರಾಮಯಣ ಗ್ರಂಥಪೂಜೆ ಹಾಗೂ ಪುಷ್ಪಾರ್ಚನೆ ಸಂಪನ್ನವಾಯಿತು.

Facebook Comments