ಗೋಕರ್ಣ. ಸೂರ್ಯನಿಂದ ಪ್ರಾರಂಭಗೊಂಡ ಇಕ್ಷ್ವಾಕು ವಂಶದ ರಾಜರೆಲ್ಲ ಗರ್ಭದಿಂದಲೇ ಪರಿಶುದ್ಧರು. ಸೂರ್ಯನಂತೆಯೇ ಪ್ರಖರತೇಜಸ್ವಿಗಳು. ಫಲಸಿದ್ಧಿಯವರೆಗೂ ನಿರಂತರವಾಗಿ ಪರಿಶ್ರಮ ಪಟ್ಟವರು. ಚತುಸ್ಸಮುದ್ರ ಪರ್ಯಂತವಾದ ವಿಶಾಲವಾದ ಭೂಖಂಡಕ್ಕೆ ಒಡೆಯರಾದವರು, ಸಮಯ ಬಂದಾಗ ಸ್ವರ್ಗಕ್ಕೆ ಹೋಗಿ ದೇವತೆಗಳಿಗೂ ಕೂಡಾ ಸಹಾಯ ಮಾಡುತ್ತಿದ್ದ ಪರಾಕ್ರಮಿಗಳು. ಚಂದ್ರನಲ್ಲಿ ಕಳಂಕವಿದೆ. ಆದರೆ ಸೂರ್ಯನಲ್ಲಿ ಅದಿಲ್ಲ. ಅದರಂತೆಯೇ ಈ ವಂಶದವರಲ್ಲಿಯೂ ಎಲ್ಲಿಯೂ ದೋಷದ ಲೇಶವೂ ಇಲ್ಲ. ಕೆಡುಕಿನ ಕಣವೂ ಇಲ್ಲ. ಇಂತಹ ವಂಶದವರ ಅವಿರತಪ್ರಯತ್ನದಿಂದಾಗಿ ಪರಮಪಾವನೆಯಾದ ದೇವಗಂಗೆಯು ಭೂಮಿಗಿಳಿಯುವಂತಾಯಿತು. ಇಂದು ನಾವು ಕಾಣುತ್ತಿರುವ ಮಿಂದು ಮಡಿಯಾಗುವ ಗಂಗಾ ನದಿ ಈ ಸೂರ್ಯವಂಶದವರ ಕೊಡುಗೆ. ಈ ಸ್ಮರಣೆ ನಮ್ಮಲ್ಲಿ ಸದಾ ಇರಬೇಕು ಎಂದು ರಾಮಚಂದ್ರಾಪುರ ಮಠದ ಪೂಜ್ಯಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಇಂದು ಗೋಕರ್ಣದ ಸಾಗರತೀರದಲ್ಲಿ ನಿರ್ಮಿತವಾದ  ವಿಶಾಲವಾದ ವೇದಿಕೆಯಲ್ಲಿ ಸಂಪನ್ನಗೊಂಡ “ರಾಮಕಥಾ”ದ ಎರಡನೆಯದಿನದ  “ಗಂಗಾವತರಣ” ವಿಷಯದ ಮೇಲೆ ಪ್ರವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ದೇವಗಂಗೆಯು ಭೂಮಿಗೆ ಬರಲು ಕಾರಣವಾದ ಪರಿಸ್ಥಿತಿಯನ್ನು ವಿವರಿಸುತ್ತ ಅಸೂಯೆಯಿಂದ ವಿಷಪ್ರಾಶನವಾದರೂ ಸಹ ಮಹರ್ಷಿಚ್ಯವನರ ಅನುಗ್ರಹಬಲದಿಂದ ಆ ವಿಷವನ್ನೂ ಜೀರ್ಣಿಸಿಕೊಂಡು ವಿಷದ ಜೊತೆಗೇ ಹುಟ್ಟಿಬಂದ ಸಗರಚಕ್ರವರ್ತಿ ಮಕ್ಕಳಿಲ್ಲದೆ  ರಾಜ್ಯವು ಅನಾಯಕವಾಗುವ ಸ್ಥಿತಿಬಂದಾಗ ಹಿಮವತ್ಪರ್ವತದ ತಪ್ಪಲಿನಲ್ಲಿ ಮಹರ್ಷಿಭೃಗುವನ್ನು ಕುರಿತು ತಪಸ್ಸು ಮಾಡಿ ಅವರ ಆಶೀರ್ವಾದಬಲದಿಂದ ಮೊದಲರಾಣಿಯಲ್ಲಿ ಒಬ್ಬಮಗನನ್ನೂ ಮತ್ತೋರ್ವಳಲ್ಲಿ ಅರವತ್ತುಸಾವಿರ ಮಕ್ಕಳನ್ನೂ ಪಡೆದ. ಮೊದಲಿನವನಾದ ಅಸಮಂಜ ತನ್ನ ಹೆಸರಿಗೆ ತಕ್ಕಂತೆ ಅಸಮಂಜಸವಾದ ವ್ಯಕ್ತಿತ್ವವುಳ್ಳವನಾದಾಗ  ಅವನನ್ನು ಗಡಿಪಾರು ಮಾಡಿದ. ಈ ಅಸಮಂಜನ ಮಗನೇ ವಿಖ್ಯಾತ ಅಂಶುಮಂತ. ಮಹಾತ್ಮರಿಗೆ ಕಷ್ಟಬರುವುದು ಲೋಕೋದ್ಧಾರಕ್ಕಾಗಿ. ರಾಮನ ವನವಾಸವಿಲ್ಲದಿದ್ದರೆ ರಾವಣನ ನಾಶವಾಗುತ್ತಿರಲಿಲ್ಲ. ಅಂತೆಯೆ ಗಂಗಾವತರಣದಂತಹ ಅನ್ಯರಿಂದ ಅಸಾಧ್ಯವಾದ ಕಾರ್ಯವು ನಡೆಯಬೇಕಿದ್ದುದರಿಂದ  ಅದಕ್ಕೆ ಭೂಮಿಕೆಯಾಗಿ ಸಗರನು ಕೈಗೊಂಡ ಅಶ್ವಮೇಧದ ಅಶ್ವವು ಕಾಣೆಯಾಯಿತು. ಅದನ್ನು ಹುಡುಕಲುಹೋದ ಸಗರನ ಅರವತ್ತುಸಾವಿರ ಮಕ್ಕಳು ಕಪಿಲಮಹರ್ಷಿಯ ಕೋಪಾಗ್ನಿಗೆ ಬಲಿಯಾದರು. ಅವರ ಸದ್ಗತಿಯು ದೇವಗಂಗೆಯಿಂದ ಮಾತ್ರ ಸಾಧ್ಯ ಎಂದು ತಿಳಿದಾಗ ಸಗರಪುತ್ರ ಅಂಶುಮಂತ, ಅವನ ಮಗ ದಿಲೀಪ ದೇವಲೋಕದ ಗಂಗೆಯನ್ನು ಭುವಿಗಿಳಿಸಲು ತಪಸ್ಸು ಮಾಡಿದರೂ ಅವರ ಪ್ರಯತ್ನಕ್ಕೆ ಫಲ ದೊರಕಲಿಲ್ಲ. ಕೊನೆಗೆ ಭಗೀರಥನ ಪ್ರಯತ್ನದಿಂದಾಗಿ ಸುರನದಿಯು ಭುವಿಗಿಳಿದಳು. ಭಾರತದಲ್ಲಿ ಹರಿದಳು. ಅಧ್ಯಾತ್ಮದ ಬೆಳಕನ್ನು ನೀಡಿದಳು. ಸ್ವರ್ಣದ ಹೂವರಳಿಸಿದಳು. ಮೃತರಾದ ಸಗರಪುತ್ರರ ಭಸ್ಮರಾಶಿಯ ಮೇಲೆ ಪ್ರವಹಿಸಿ ಅವರಿಗೆ ಸದ್ಗತಿಯನ್ನು ನೀಡಿದಳು. ಇಂದೂ ಕೂಡಾ ಭಾರತದ ಪವಿತ್ರನದಿಯಾಗಿ ಸಮಸ್ತಭಾರತೀಯರ ಹೃದಯವು ಬಯಸುವ ಮಾತೆಯಾಗಿ ವಿರಾಜಿಸುತ್ತಿದ್ದಾಳೆ. ಈ ಅಘಭಂಗೆಯಾದ ಗಂಗೆ  ಲೋಕಕ್ಕೆ ಸೂರ್ಯವಂಶೀಯರ ಕೊಡುಗೆ.ಎಂದು ವಿಸ್ತಾರವಾಗಿ ಗಂಗಾವತರಣದ ಭೂಮಿಕೆಯನ್ನು ವಿವರಿಸಿದರು.

ರಾಮಕಥೆಯಲ್ಲಿ ಗಾಯಕರಾಗಿ ಶ್ರೀಪಾದ ಭಟ್ಟ, ಪ್ರೇಮಲತಾ ದಿವಾಕರ, ಹಾರ್ಮೋನಿಯಂ ವಾದಕರಾಗಿ ಗೌರೀಶ ಯಾಜಿ, ತಬಲಾ ವಾದಕರಾಗಿ ಗೋಪಾಲಕೃಷ್ಣ ಹೆಗಡೆ, ಕೊಳಲಿನ ವಾದಕರಾಗಿ ಪ್ರಕಾಶ ಕಲ್ಲರೆಮನೆ, ಆಶುಚಿತ್ರದಲ್ಲಿ ಗಣಪತಿ ನೀರ್ನಳ್ಳಿ, ಮರಳು ಚಿತ್ರದಲ್ಲಿ ರಾಘವೇಂದ್ರ ಹೆಗಡೆ ಪಾಲ್ಗೊಂಡಿದ್ದರು. ಡಾ.ಜಿ.ಎಲ್.ಹೆಗಡೆ ಹಾಗೂ ಸಹಕಲಾವಿದರಿಂದ “ಸಗರಾಶ್ವಮೇಧ” ಎಂಬ ರೂಪಕವು ಕೂಡಾ ಇದೇ ಸಂದರ್ಭದಲ್ಲಿ ಪ್ರಸ್ತುತಗೊಂಡಿತು.

Facebook Comments