ಶ್ರೀ ರಾಮ ಕಥೆಯ ಮೂರನೇ ದಿನ ಶ್ರೀ ಗುರುಗಳು, ಪರಿವಾರದ ಅಣ್ಣಂದಿರು ಶ್ರೀ ರಾಮಾಯಣ ಗ್ರಂಥದೊಡನೆ ವೈಭವದಿಂದ ವೇದಿಕೆಗೆ ಆಗಮಿಸಿದರು. ಪರಿವಾರ ಸಹಿತನಾದ ಶ್ರೀ ರಾಮನಿಗೆ, ಹನುಮನಿಗೆ, ಆದಿ ಗ್ರಂಥಕ್ಕೆ ಪುಷ್ಪಾರ್ಚನೆ ಆದ ನಂತರ ಮೂರನೇ ದಿನದ ರಾಮಕಥೆಯನ್ನು ಪ್ರಾರಂಭಿಸಿದರು. ಎರಡನೇ ದಿನದ ಜಯ ವಿಜಯರ ಕಥೆಯನ್ನು ಮುಂದುವರೆಸಿ ಜಯವಿಜಯರ ಮನಸ್ಸಿನ ವರ್ಣನೆಯನ್ನು ಮಾಡುತ್ತಾ ಎರಡು ತಲೆಯ ಗಂಡ ಭೇರುಂಡದ  ಕಥೆಯನ್ನು ಪ್ರಾರಂಭಿಸಿದರು” ಗಂಡಭೇರುಂಡ ಪಕ್ಷಿಯ ಒಂದು ತಲೆಗೆ ಒಳ್ಳೆ ಹಣ್ಣು ಸಿಕ್ಕಿದಾಗ ಅದು ಇನ್ನೊಂದು ಹಕ್ಕಿಗೆ ಕೊಡಲಿಲ್ಲ. ಆ ದ್ವೇಷ ಸಾಧನೆಗಾಗಿ ಇನ್ನೊಂದು ತಲೆ ವಿಷದ ಹಣ್ಣು ಸಿಕ್ಕಿದಾಗ ಅದನ್ನು ತಿನ್ನುತ್ತೇನೆ ಎಂದು ಬೆದರಿಸಿ, ವಿಷದ ಹಣ್ಣು ತಿಂದು ಇಡೀ ದೇಹ ನಾಶ ಆಯಿತು. ಇದರ ಹಾಗೆಯೇ ಎರಡು ದೇಹ ಒಂದೇ ಮನಸ್ಸಾಗಿದ್ದ ಜಯವಿಜಯರ ಸ್ಥಿತಿಯೂ ಆಯಿತು. ಯಾಗದಲ್ಲಿ ಪ್ರಮುಖ ವ್ಯಕ್ತಿಗಳು ಹೋತಾ, ಅಧ್ವರ್ಯು, ಉದ್ಘಾತ, ಬ್ರಹ್ಮ. ಇದರಲ್ಲಿ ಜಯವಿಜಯರಿಗೆ ಅಧ್ವರ್ಯುವೂ, ಬ್ರಹ್ಮ ಸ್ಥಾನವೂ ಲಭಿಸಿತ್ತು. ಅದಕ್ಕೆ ತಕ್ಕದಾಗಿ ಅವರಿಗೆ ಸಿಕ್ಕಿದ ದಕ್ಷಿಣೆಗಾಗಿ ಜಗಳವಾಡಿ ಅತ್ತಿತ್ತ ಶಾಪ ಕೊಟ್ಟುಕೊಂಡರು.  ಯಾರೂ ಕಾಣದ್ದ ಜಾಗದಲ್ಲಿ ನಿಂತು ಕನ್ನಡಿಯಲ್ಲಿ ನೋಡಿಕೊಂಡು ನಮ್ಮನ್ನು ನಾವು ತಿದ್ದಿಕೊಳ್ಳುವ ಹಾಗೆ ರಾಮಾಯಣವೂ ಕೂಡಾ. ನಾವು ಮಾಡುವ ಸಾಧ್ಯತೆ ಇರುವ ಇಲ್ಲವೇ ಮಾಡುವ ತಪ್ಪನ್ನು ನಾವು ತಿಳಿದು ಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ಅಣ್ಣ ತಮ್ಮಂದಿರನ್ನು  ಅಥವಾ ಸಂಬಂಧಿಕರನ್ನು  ನೋಡಿದರೂ ಕೂಡಾ ಅವರವರ ಮನಸ್ಸಿನಲ್ಲಿ ಬರುವ ಯೋಚನೆ” ನಿನ್ನ ಮೇಲೆ ಪ್ರೀತಿ ಅಸ್ತಿ. ಆದರೆ ಆಸ್ತಿಯ ಮೇಲೆ ಸ್ವಲ್ಪ ಜಾಸ್ತಿ”

ಹಣವಿರುವುದು ಮನುಷ್ಯರಿಗೆ ಆದರೆ ಹಣಕ್ಕಾಗಿ ಇರುವ ಮನುಷ್ಯರಾಗಬಾರದು ಹೇಳಿ ಹೇಳಿದವು. ನಾವು ಶ್ರೀಪತಿಯನ್ನು  ಒಲಿಸಿಕೊಂಡರೆ ಶ್ರೀಪತಿಯೊಂದಿಗೆ ಶ್ರೀಯೂ ಬರುವಳು ಎಂದರೆ ಐಶ್ವರ್ಯವೂ ಬರುತ್ತದೆ. ಆದರೆ ಹೆಂಡತಿಯೊಟ್ಟಿಗೆ ಬೇರೆಯವರು  ಹೋಗುವಾಗ  ಹೇಗೆ ಸಿಟ್ಟು ಬರುತ್ತದೆಯೋ  ಹಾಗೇ ಯಾರಾದರೂ  ಐಶ್ವರ್ಯದ, ಶ್ರೀಯ ಹಿಂದೆ ಬಿದ್ದರೆ ಶ್ರೀಪತಿಗೆ ಕೋಪ ಬರುತ್ತದೆ. ಅದು ಲೋಭಿಯ ನಾಶಕ್ಕೆ ದಾರಿ ಮಾಡಿಕೊಡುತ್ತದೆ. ಇದು ಸ್ವಯಂ ಸೀತೆಗೂ ಅನುಭವ ಆಗಿದೆ.  ಕನಕಮೃಗದ ಆಸೆಗೆ ಬಿದ್ದದಕ್ಕೆ ಅತ್ತ ರಾಮನೂ ಇಲ್ಲ, ಇತ್ತ ಸ್ವರ್ಣಜಿಂಕೆಯೂ ಇಲ್ಲದಂತಾಯಿತು. ಹೃದಯದಲ್ಲಿ ಶ್ರೀಪತಿಯು, ಪೆಟ್ಟಿಗೆಯಲ್ಲಿ  ಶ್ರೀಯು ಇರುವವರಲ್ಲಿ ಯಾರ ಭಾಗ್ಯ ದೊಡ್ಡದು ಹೇಳಿ ತುಲನೆ ಮಾಡಿದರೆ! ಯಾರ ಭಾಗ್ಯ ದೊಡ್ಡದು? ಶ್ರೀಪತಿ ಒಲುದರೆ ಶ್ರೀಯೂ ಒಲಿಯುವ ಹಾಗೆ ಆಗುತ್ತದೆ.

ಜಯವಿಜಯರು ಅತ್ತಿತ್ತ ಶಾಪ ಕೊಟ್ಟುಕೊಂಡು ಅದು ಅವರಿಗೆ  ಅವರ ಒಳ ಮನಸ್ಸಿಗೆ ಅರ್ಥ ಆಗುವಾಗ  ಹರಿಯ ಧ್ಯಾನ ಮಾಡಲು ಪ್ರಾರಂಭಿಸುತ್ತಾರೆ. ನಮ್ಮ ಪ್ರಾರ್ಥನೆ, ವಾಹನದಲ್ಲಿ ನಾವು ಉಪಯೋಗಿಸುವ  ಸ್ಪೇರ್ ವೀಲ್  ಆಗಬಾರದು. ನಮ್ಮ ದಾರಿಯುದ್ದಕ್ಕೂ ಉಪಯೋಗಕ್ಕೆ ಬರುವ ಸ್ಟಿಯರಿಂಗ್ ವ್ಹೀಲ್ ಆಗಬೇಕು. ದೇವರು ತನಗೆ  ತೊಂದರೆ ಆದರೆ ಸಹಿಸಿಗೊಳ್ಳುತ್ತಾನೆ, ಆದರೆ ತನ್ನ ಭಕ್ತರಿಗೆ  ತೊಂದರೆ ಆದರೆ ಸಹಿಸುವುದಿಲ್ಲ.  ಉದಾಹರಣೆಗೆ, ಮಹಾಭಾರತದ ಸಂದರ್ಭಲ್ಲಿ ಕೃಷ್ಣ ಯಾವುದೇ ಕಾರಣಕ್ಕೂ ಆಯುಧ ಪ್ರಯೋಗ ಮಾಡುವುದಿಲ್ಲ ಎಂದು ಹೇಳಿ ಶಪಥ ಮಾಡಿರುತ್ತಾನೆ.  ಹಾಗೆ ಭೀಷ್ಮ ಕೃಷ್ಣನ ಕೈಯ್ಯಲ್ಲಿ  ಸುದರ್ಶನ ಚಕ್ರ ಹಿಡಿಸದೆ ಬಿಡುವುದಿಲ್ಲ ಎಂದು ಹೇಳಿ ಪ್ರತಿಜ್ಞೆ ಮಾಡಿರುತ್ತಾನೆ.  ಕೊನೆಗೆ  ಕೃಷ್ಣನೇ ಸುದರ್ಶನ ಚಕ್ರವನ್ನು  ಹಿಡಿದು ರಥದಿಂದ ಇಳಿದು ಬಂದ. ಕಾರಣ  ಭೀಷ್ಮ ಅವನ ಭಕ್ತ ಆಗಿದ್ದನು. ಅವನಿಗೆ ಮುಕ್ತಿ ಮಾರ್ಗವನ್ನು  ತೋರಿಸಿದ.

ಜಯವಿಜಯರು ಅತ್ತಿತ್ತ ಕೊಟ್ಟ ಶಾಪದ ಫಲವಾಗಿ ವಿಜಯ ಗಂಡಕೀ ನದಿಯಲ್ಲಿ  ಮಕರ ಆಗಿ ಹುಟ್ಟಿ, ಜಯ ಅದೇ ಪರಿಸರದಲ್ಲಿ ಆನೆ ಆಗಿ ಹುಟ್ಟಿದ.  ಇಬ್ಬರೂ ಮೊದಲು ಹೇಗೆ ಪರಸ್ಪರ ವಿರುದ್ದ ಸ್ವಭಾವದವರಾಗಿದ್ದರೋ  ಹಾಗೆ ಈಗಲೂ  ವಿರುದ್ದ ಸ್ವಭಾವದವರಾಗಿದ್ದರು. ಆನೆ -ಅಣ್ಣ ಶುದ್ದ ಸಸ್ಯಾಹಾರಿಯಾದರೆ, ಮಕರ- ತಮ್ಮ ಮಾಂಸಾಹಾರಿ ಆಗಿದ್ದ. ಅವರಿಬ್ಬರನ್ನೂ  ದೂರ ದೂರ ಆಗಲು ವಿಧಿ ಬಿಡಲಿಲ್ಲ. ವಿಧಿಗೆ ಯಾರನ್ನಾದರೂ  ಒಬ್ಬರನ್ನೊಬ್ಬರನ್ನು  ಸೇರಿಸಬೇಕು ಎಂದು ಕಂಡರೆ ಹೇಗಾದರೂ  ಮಾಡಿ ಸೇರಿಸುತ್ತದೆ. ಇಲ್ಲಿ ಮೊಸಳೆ ಆಗಿದ್ದ ತಮ್ಮ ಆನೆ ಆಗಿದ್ದ ಅಣ್ಣ ಇರುವಲ್ಲಿ,  ತಮ್ಮ ಅಣ್ಣನ ಕಾಲು ಹಿಡಿದರೆ ಸರಿ. ಆದರೆ ಈತರಹ ಕಚ್ಚಿ ಹಿಡಿದವರು ಹೊಸ ಪರಿ ಅಲ್ಲವೇ? ವಿಜಯ ಕಾಲಿಗೆ ಕಚ್ಚಿ ಹಿಡಿದಾಗ  ಜಯ ಬಿಡಿಸಿಕೊಳ್ಳಲಾಗದೆ ಕೊನೆಗೆ ಹರಿ ಧ್ಯಾನ ಮಾಡಲು ತೊಡಗಿದ. ನಾವು ನಮ್ಮ ಹೇಳುವುದರಲ್ಲಿ  ಭಗವದ್ಭಾವನೆ ಇದೆ. ನಾನು ಎನ್ನುವುದರಲ್ಲಿ ಒಂಟಿತನ ತೋರುವುದು. ಕೊನೆಕಾಲದಲ್ಲಿ ಶರಣಾಗತಿಯ ಭಾವ ಬಂದರೆ ಜನ್ಮ ಸಾರ್ಥಕವಾಗುವುದು. ಕಪ್ಪೆ, ಹಾವು  ಹಿಡಿಯುವಾಗ ವಟ ವಟ ಎನ್ನುವುದು ಅದರ ರಾಮಧ್ಯಾನ!!  ಆದರೆ ರಾಮನೇ ಏನನ್ನಾದರೂ  ತಾಗಿಸಿದರೆ ಯಾರಲ್ಲಿ ಹೇಳಲಿ ಎಂದು ಕಪ್ಪೆ ಸುಮ್ಮನಿತ್ತು.  ಇದೇ ರಾಮನ ಮುಂದೆ ಶರಣಾಗತಿಯ ಭಾವ!! ಭಕ್ತಿ ಭಾವದಲಿದ್ದ ಆನೆ ಮಕರರಿಗೆ ಹರಿ ಪ್ರತ್ಯಕ್ಷ ಆಗಿ ಮುಕ್ತಿ ಕೊಟ್ಟ ಭಗವಂತ.

ಹೀಗೆಲ್ಲಾ ನಡೆದ ಕಾರಣ ಗಂಡಕೀ ನದಿಯನ್ನು ಹರಿಕ್ಷೇತ್ರ ಎನ್ನುವುದು.  ಆ ಹರಿಯ ಸುದರ್ಶನ ಚಕ್ರ ಸುತ್ತುವಾಗ ಗಂಡಕೀ ನದಿಯ ಕಲ್ಲುಗಳಿಗೆ ತಾಗಿ, ಆ ಕಲ್ಲುಗಳಲ್ಲಿ ಚಕ್ರ ಚಿನ್ಹೆ ಮೂಡಿತ್ತು.  ಆ ಕಲ್ಲುಗಳು ಸಾಲಿಗ್ರಾಮ ಆದವು.  ಆ ಸಾಲಿಗ್ರಾಮದ ಹಿಂದೆ ಈ ಜಯ ವಿಜಯರಿರುತ್ತಾರೆ.  ಈ ಕಥೆ ಇದೆ, ರಾಮಾಯಣದ ಕಥೆ ಇದೆ. ಜಯ ವಿಜಯರ ಪತನ ಆದರೂ ಅವರಿಗೆ ಮುಕ್ತಿ ಸಿಕ್ಕಿತು. ಅದು ಅಂತಿಂಥಾ ಮುಕ್ತಿಯಲ್ಲ, ಸಾರೂಪ್ಯ ಮುಕ್ತಿ. ಭಗವಂತನ ರೂಪವೇ ಸಿಕ್ಕಿತು. ಚತುರ್ಭುಜರಾದರು. ವೈಕುಂಠಕ್ಕೇ ದ್ವಾರಪಾಲಕರಾಗಿರುವ ಅವಕಾಶ ಸಿಕ್ಕಿತು.” ಎಂದು ಹೇಳಿದರು.

ಆಯಾ ಸಂದರ್ಭಕ್ಕೆ ತಕ್ಕಂತೆ ಹಾಡನ್ನು ಪ್ರೇಮಲತಾ ದಿವಾಕರ್ ಬಳಗದವರು ಹಾಡಿದರು. ನೀರ್ನಳ್ಳಿ ಗಣಪತಿ ಭಟ್ ಚಿತ್ರದ ಮೂಲಕ ಎಲ್ಲವನ್ನೂ ಬಿಂಬಿಸಿದರು. ಇದರೊಂದಿಗೆ ಮೂರನೇ ದಿನದ ರಾಮಕಥೆ ಮಂಗಲವಾಯಿತು. “ಜೈ ಜೈ ರಾಮಕಥಾ” ಭಜನೆಗೆ ಎಲ್ಲೋರೂ ಕುಣಿದಾಡಿದರು. ರಾಮಾಯಣ ಗ್ರಂಥಕ್ಕೆ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಮಾಪನವಾಯಿತು.

Facebook Comments