ಪರಮ  ಪೂಜ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅತ್ಯಮೂಲ್ಯ ಪ್ರವಚನದೊಂದಿಗೆ ವಿವಿಧ ದೃಶ್ಯ ಶ್ರಾವ್ಯ ಕಲಾ ಮಾಧ್ಯಮಗಳ ಮೂಲಕ ಶ್ರೀ ಮದ್ವಾಲ್ಮೀಕೀ ರಾಮಾಯಣದ ಪುನರವತರಣದ “ಶ್ರೀ ರಾಮಕಥಾ” ಮಾಲಿಕಾ ಸರಣಿ ಮಂಗಳೂರಿನ ಶ್ರೀ ಭಾರತೀ ಕಾಲೇಜು ಪ್ರಾಂಗಣದಲ್ಲಿ ಜನವರಿ 28 ರ ಸಾಯಂ ಸಂಧ್ಯೆ ಸರಿಯಾದ ಸಮಯಕ್ಕೇ ಆರಂಭಗೊಂಡಿತು.  ಶ್ರೀ ಸಂಸ್ಥಾನದೊಂದಿಗೆ ಶ್ರೀಮದ್ವಾಲ್ಮೀಕೀ ರಾಮಾಯಣದ ಮೂಲ ಗ್ರಂಥವನ್ನು ಹೊತ್ತು ಪರಿವಾರದ ಅಣ್ಣಂದಿರು ಚೆಂಡೆ ಮೇಳ ಮತ್ತು ಮಂಗಳಕಲಶವನ್ನೊಳಗೊಂಡ ಮೆರವಣಿಗೆ ಶ್ರೀ ರಾಮಕಥಾ ವೇದಿಕೆಯತ್ತ ಸಾಗಿ ಬಂತು. ಮೊದಲನೆಯ ದಿನದ ಪ್ರಾಯೋಜಕರು ಮತ್ತು ಸಮಿತಿಯ ಸದಸ್ಯರುಗಳು ಸೇರಿ ದ್ವಜಾರೋಹನ ಮಾಡಿದಾಗ ಕಾರ್ಯಕ್ರಮ ಆರಂಭಗೊಂಡಿತು. ಆದಿಗ್ರಂಥಕ್ಕೆ ಶ್ರೀ ಗುರುಗಳಿಂದ ಪೂಜೆ ಸಲ್ಲುತ್ತಿರುವಾಗ ಪ್ರೇಮಲತಾ ದಿವಾಕರ್ ಮತ್ತು ಶ್ರೀಪಾದ ಭಟ್ ರ ಮಧುರ ಕಂಠ ಗಳಿಂದ “ಶ್ರೀ ರಾಮ ಜಯರಾಮ ಜಯ ಜಯ ರಾಮ” ಹಾಡು ಗೋಪಾಲಕೃಷ್ಣ ಹೆಗಡೆಯವರ ತಬಲಾ ಸಾಥಿನೊಂದಿಗೆ ಬಂತು.  ವೇದಿಕೆಯಲ್ಲಿ ವಿರಾಜಮಾನರಾಗಿರುವ ವೈದೆಹೀ ಸಹಿತ ಶ್ರೀ ರಾಮನಿಗೂ ಶ್ರೀ ಗುರುಗಳು ನಮನವನ್ನು ಸಲ್ಲಿಸಿ, ರಾಮನಿದ್ದಲ್ಲಿರುವ ಹನುಮ ಸಾನ್ನಿಧ್ಯವನ್ನೂ ವಂದಿಸಿದರು. ವಿದ್ವಾನ್ ಶ್ರೀ ಜಗದೀಶ ಶರ್ಮರು ಶ್ರೀ ರಾಮಕಥೆಯ ಬಗ್ಗೆ ಸೂಕ್ಷ್ಮವಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ ಶ್ರೀ ಗುರುಗಳು ಗೋಕರ್ಣ ಗಣಪತಿ, ಶ್ರೀ ಮಹಾಬಲೇಶ್ವರ ದೇವನನ್ನು ಸ್ಮರಿಸುತ್ತಾ ಶ್ರೀ ರಾಮಕಥೆಗೆ ಪೀಠಿಕೆಯನ್ನು ಮಾಡಿದರು.

ಪ್ರವಚನದಲ್ಲಿ ಮಾತನಾಡುತ್ತಾ, ನಮ್ಮ ಇಂದಿನ ಮಾನಸಿಕ ಸ್ಥಿತಿಯನ್ನು ಹೇಳಿದ ಶ್ರೀ ಗುರುಗಳು, ” ಪೂಜೆ ಆಚರಣೆಗಳು ಗುರುಗಳು ಮಾಡುತ್ತಾರೆ, ಮೂಲ ಮನೆಯಲ್ಲಿ ನಡೆಯುತ್ತದೆ, ನಾವು ಮಾಡಬೇಕಾದ್ದಿಲ್ಲ ಇತ್ಯಾದಿ ಚಿಂತನೆಗಳು ಬರುತ್ತಾ ಇವೆ. ಅದೇ ರೀತಿ ರಾಮಕಥೆಯೂ ಆಗುತ್ತಿದೆ. ಶ್ರೀ ರಾಮ ಯುದ್ಧ ಮಾಡುವ ಸಂದರ್ಭದಲ್ಲಿ ರಾವಣನ ಮೂಲ ಸೇನೆಯನ್ನು ನೋಡಿ ಕಪಿ ಸೈನ್ಯ ಓಡಿ ಹೋದಾಗ, ರಾಮ ಒಬ್ಬನೇ ಯುದ್ಧ ಮಾಡುತ್ತಿರುವಾಗ, ರಾಕ್ಷಸರಿಗೆ ಎಲ್ಲೆಲ್ಲಿ ನೋಡಿದರೂ ಎಲ್ಲಾ ಕಡೆಯೂ ರಾಮನನ್ನೇ ಕಂಡಿತ್ತು. ರಾಕ್ಷಸರಿಗೆ ಕಂಡ ರಾಮ ಮನುಷ್ಯರಿಗೆ ಏಕೆ ಕಾಣನು? ಸಂತ ಕಬೀರರಿಗೆ ಎಲ್ಲೆಲ್ಲಿ ನೋಡಿದರೂ ಶ್ರೀರಾಮ ಕಾಣುತ್ತಿದ್ದನಂತೆ! ಅದಕ್ಕೆ ಕಾರಣ ಗುರುಕೃಪಾಂಜನ. ಅಂಜನವೆಂದರೆ ಕಣ್ಣಿಗೆ ಹಾಕುವ ಮದ್ದಾಗಿದೆ.  ಊಟಕ್ಕೆ ಮೂಲ ಹಸಿವು. ವಿದ್ಯೆಗೆ ಮೂಲ ಅಜ್ಞಾನ. ಹಾಗಾಗಿ ಶಿಷ್ಯನ ಅಜ್ಞಾನ ಗುರುವಿನ ಬೋಧನೆಗೆ ಮೂಲ. ಆದುದರಿಂದ ಗುರು ಕೃಪೆಯೆನ್ನುವ ಅಂಜನವನ್ನು ಕಣ್ಣಿಗೆ ಹಾಕಿಕೊಂಡರೆ ರಾಮನನ್ನು ಕಾಣಬಹುದು” ಎಂದರು.

ಶ್ರೀ  ರಾಮಕಥೆಯ ಬಗ್ಗೆ ಹೇಳುತ್ತಾ, “ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮೂರು ಅಂಶಗಳು, ಶ್ರೋತ, ವಕ್ತ, ಗ್ರಂಥ ಎಂದರೆ- ಹೇಳಿದುದನ್ನು ಕೇಳುವವರು, ಹೇಳುವವರು ಮತ್ತು ಜೊತೆಗೆ ರಾಮಾಯಣದ ಗ್ರಂಥ.ಎಲ್ಲರಲ್ಲಿಯೂ ರಾಮ ಕಂಡರೆ ರಾಮನಿಗೆ ರಾಮ ಹೇಳುವ ರಾಮನ ಕಥೆಯೇ ರಾಮಕಥೆ. ಇಲ್ಲಿ ನಾವೇ ರಾಮನಾಗಿರಬಹುದು. ಇಲ್ಲಿ ನಾವೇ ರಾಮನೆಂಬುದಕ್ಕೆ ದೀರ್ಘ ತೆಗೆದರೆ ಒಂದು ಅರ್ಥ, ದೀರ್ಘ ಸೇರಿಸಿದರೆ ಇನ್ನೊಂದು ಅರ್ಥ ದೊರಕುತ್ತದೆ. ಎರಡಾದರೂ ನಾವೇ! ನಾವೇ ನಾವೆಯ ಹುಟ್ಟು ಹಾಕಿ ದೂರ ತೀರ ಮುಟ್ಟಿಸಬೇಕು. ಮಧ್ಯೆ ಬರುವ ಅಲೆಗೆ ಸಿಲುಕಿ ಓಲಾಡದೇ ನಮ್ಮ ಬಾಳಿನ ಗುರಿ ಮುಟ್ಟಬೇಕು. ದೂರ ತೀರ ಮುಟ್ಟಲು ರಾಮಕಥೆ ಸಹಕರಿಸುತ್ತದೆ. ರಾಮಾಯಣ ಸಹಕರಿಸುತ್ತದೆ. ಆದರೆ ನಮ್ಮ ಇಂದಿನ ಜೀವನ ಕ್ರಮದಲ್ಲಿ ಇಂತಹ ವಿಷಯಗಳಿಗೆ ಕೊಡುವ ಪ್ರಾಮುಖ್ಯತೆ ಕಡಿಮೆ ಆಗುತ್ತಿದೆ. ವಾಲ್ಮೀಕೀ ರಾಮಾಯಣ ವಿಶ್ವದ ಮೊದಲ ಗ್ರಂಥ. ಅದರಲ್ಲಿ ಏಳು ಕಾಂಡಗಳು – ಬಾಲ, ಅಯೋಧ್ಯಾ, ಅರಣ್ಯ, ಯುದ್ಧ, ಸುಂದರ, ಉತ್ತರಾ. ಇದರಲ್ಲಿ ಐನೂರು ಅಧ್ಯಾಯ, ೨೪೦೦೦ ಶ್ಲೋಕಗಳು ಇವೆ. ನಾವು ಹೊರಗಡೆ ಅಂದರೆ ಯಕ್ಷಗಾನದಲ್ಲಿಯೋ, ಪುಸ್ತಕಗಳಲ್ಲಿಯೋ ಓದುತ್ತಿರುವುದು ನಿಜವಾದ ರಾಮಾಯಣವಲ್ಲ.  ಅದರಲ್ಲಿ ಎಷ್ಟೋ ವ್ಯತ್ಯಾಸಗಳಾಗಿವೆ ಆದರೆ ವಾಲ್ಮೀಕೀ ಬರೆದ ರಾಮಾಯಣ, ರಾಮನ ಮಕ್ಕಳಾದ ಲವಕುಶರು ಹಾಡಿ ಸಾಕ್ಷಾತ್ ಶ್ರೀ ರಾಮನನ್ನೇ ಮೆಚ್ಚಿಸಿದರು. ಈಗಿನ ರಾಮಾಯಣ ಹೇಗಿದೆಯೆಂದರೆ ಒಂದು ಕಡೆ ಗುರುಗಳು ಶಿಷ್ಯರ ಹತ್ತಿರ ಒಂದು ‘ಸ್ವಾದೇಶ’ ಅಳತೆಯ ಸಮಿತ್ತು ತರಲು ಹೇಳಿದಾಗ ಅವನು ತುಂಡು ಮಾಡಿ ತಂದ ಸಮಿತ್ತು, ಒಂದು ಸಾವಿರ ಆಗುವ ಹೊತ್ತಿಗೆ ಮಾರುದ್ದ ಅಳತೆಗೆ ಬಂದಿತ್ತು! ಹಾಗೆಯೇ ಈಗಿನ ಹಲವು ರಾಮಾಯಣದ ಕಥೆಗಳೂ ಕೂಡಾ.  ಈ ರಾಮಾಯಣದ ಕಥೆಯನ್ನು ಐದು ದಿನ ಮೂರು ಮೂರು ಗಂಟೆ ಹೇಳಿದರೂ ಕೂಡಾ ಅದು ಸಾಗರವನ್ನು ಹರಿಗೋಲಿನ ಸಹಾಯದಿಂದ ದಾಟಿದ ಹಾಗೆ, ಇಡೀ ಬ್ರಹ್ಮಾಂಡವನ್ನು ಬರಿಗೈಯ್ಯಲ್ಲಿ ಅಳೆದ ಹಾಗೆ ಆಗಬಹುದಷ್ಟೆ! ಆದರೆ ಅಮೃತದ ಬಿಂದು ಒಂದೇ ಹನಿ ಸಿಕ್ಕಿದರೂ ಸಾಕಲ್ಲವೇ. ಈ ಐದು ದಿನಲ್ಲಿ ರಾಮಾಯಣದ ಮೂಲಕಥೆ ಎಂದರೆ  ರಾವಣನ ಕಥೆಯನ್ನು  ಹೇಳ ಬಯಸುತ್ತೇವೆ.  ಏಕೆಂದರೆ ರಾವಣ ಹೇಳುವ  ಧೂರ್ತ, ಧರ್ಮಾಂಧ ಇಲ್ಲದ್ದೇ ಇರುತ್ತಿದ್ದರೆ ರಾಮಾಯಣ ಆಗುತ್ತಿರಲಿಲ್ಲ.  ಹಾಗಾಗಿ ರಾವಣ ಹೇಳಿರೆ ರಾಕ್ಷಸ, ಬ್ರಹ್ಮ ರಾಕ್ಷಸ. ಅಪ್ಪ ಅಮ್ಮ ಬೇರೆ ಬೇರೆ ಕುಲದವರು. ಈಗಿನ ಭಾಷೆಯಲ್ಲಿ  ಹೇಳುವುದಾದರೆ  ‘crossbreed’ ನಮ್ಮ ಜೆರ್ಸಿ ದನದ ಹಾಗೆ. ಆದರೆ ಹೀಗಿದ್ದ ರಾವಣ, ಇದ್ದಲ್ಲಿಗೆ ರಾಮ ಏಕೆ ಹೋದ ಅಲ್ಲದ್ದರೆ ರಾಮನ ಹುಡುಕಿಕೊಂಡು ರಾವಣ ಏಕೆ ಬಂದ ಎಂದು ನೋಡಿದರೆ  ರಾವಣನ ಮನಸ್ಸಿನಲ್ಲಿ ಜಯ ವಿಜಯರ ಒಳ್ಳೆ ಮನಸ್ಸು ಇದ್ದುದೇ ಕಾರಣ. ಜಯ ವಿಜಯರು ದ್ವಾರಪಾಲಕರಾಗಿದ್ದರು. ಹರಿಯನ್ನು  ಪೂಜಿಸಿಕೊಂಡಿದ್ದರು. ಹಾಗಾದ ಕಾರಣ ರಾವಣನು ಕೂಡಾ ರಾಮನನ್ನು  ಹುಡುಕಿಕೊಂಡು ಬಂದುದು” ಎಂದು ಪ್ರವಚನದಲ್ಲಿ ಹೇಳಿದರು.

ಆಯಾ ಸಂದರ್ಭಕ್ಕೆ ತಕ್ಕಂತೆ ಹಾಡನ್ನು ಪ್ರೇಮಲತಾ ದಿವಾಕರ್ ಬಳಗದವರು ಹಾಡಿದರು. ಭರತನಾಟ್ಯ ಅವತರಣಿಕೆ ವಿಶ್ವೇಶ್ವರ ಕುಮಟಾ ನೀಡಿದರೆ, ನೀರ್ನಳ್ಳಿ ಗಣಪತಿ ಭಟ್ ಚಿತ್ರದ ಮೂಲಕ ಎಲ್ಲವನ್ನೂ ಬಿಂಬಿಸಿದರು. ಹರಿಯನ್ನು ಅರಿಯೆನ್ನು ವ ರೂಪಕವನ್ನು ಶ್ರೀಧರ್ ಹೊಳ್ಳ ನಡೆಸಿ ಕೊಟ್ಟರು.

ಇದರೊಂದಿಗೆ ಮೊದಲ ದಿನದ ರಾಮಕಥೆ ಮಂಗಲವಾಯಿತು. “ಜೈ ಜೈ ರಾಮಕಥಾ” ಭಜನೆಗೆ ಎಲ್ಲೋರೂ ಕುಣಿದಾಡಿದರು. ರಾಮಾಯಣ ಗ್ರಂಥಕ್ಕೆ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಮಾಪನವಾಯಿತು.

Facebook Comments